Article by Du Gu Lakshman, Chief Editor VIKRAMA Weekly, Bangalore.
ತಮಿಳುನಾಡಿನಲ್ಲಿ ಹಿಂದೂ ಸಂಘಟನೆಗಳ ಬೆಳವಣಿಗೆಯನ್ನು ಸಹಿಸದ ಮೂಲಭೂತವಾದಿ, ಮತಾಂಧ ಶಕ್ತಿಗಳು ಅದನ್ನು ಹೊಸಗಿ ಹಾಕಲು ‘ಹತ್ಯೆ ತಂತ್ರ’ವನ್ನು ಅನುಸರಿಸಿವೆ. ಒಂದಷ್ಟು ಕಾರ್ಯಕರ್ತರನ್ನು ಕೊಲ್ಲುವುದರಿಂದ ಹಿಂದೂ ಸಂಘಟನೆಗಳ ಬುಡವನ್ನೇ ಕತ್ತರಿಸಿ ಹಾಕಬಹುದು ಎಂದು ನಂಬಿದಂತಿದೆ. ಅವುಗಳ ನಂಬಿಕೆ ನಿಜವಾಗಿದ್ದಿದ್ದರೆ ಡಾ.ಶಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯರಂತಹ ಮೇರು ವ್ಯಕ್ತಿತ್ವದ ಮುಖಂಡರ ಕೊಲೆಯಾದಾಗಲೇ ಹಿಂದು ಸಂಘಟನೆಗಳು ನಾಮಾವಶೇಷವಾಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ವ್ಯಕ್ತಿಗಳನ್ನು ಕೊಲ್ಲಬಹುದು. ಆದರೆ ತತ್ತ್ವ, ಸಿದ್ಧಾಂತಗಳನ್ನಲ್ಲ. ಏಕೆಂದರೆ ಅವುಗಳಿಗೆ ಸಾವಿಲ್ಲ.
ದೇವರ ನಾಡೆಂಬ ಹೆಗ್ಗಳಿಕೆ ಹೊತ್ತಿರುವ ಕೇರಳದಲ್ಲಿ ಹಿಂದು ಸಂಘಟನೆಗಳ ಪ್ರಮುಖ ನಾಯಕರನ್ನು, ಕಾರ್ಯಕರ್ತರನ್ನು ಕಮ್ಯುನಿಸ್ಟರು, ಮುಸ್ಲಿಂ ಮತಾಂಧರು ಬರ್ಬರವಾಗಿ ಕೊಚ್ಚಿ ಹಾಕುವ ವಿದ್ಯಮಾನ ಈಗ ಹೊಸತಲ್ಲ. ಮೊನ್ನೆ ಮೊನ್ನೆಯವರೆಗೂ ಕೇರಳದಲ್ಲಿ ಅಂತಹ ಕೃತ್ಯಗಳ ಮುಂದುವರಿಕೆ ನಡೆದೇ ಇತ್ತು. ಮುಂದೆಯೂ ನಡೆಯಬಹುದು. ಇದೀಗ ನೆರೆಯ ತಮಿಳುನಾಡಿನಲ್ಲೂ ಇಂತಹದೇ ಬರ್ಬರ ಕೃತ್ಯಗಳು ಘಟಿಸುತ್ತಿರುವುದು ಮಾತ್ರ ಅತ್ಯಂತ ಆತಂಕಕಾರಿ.
ತಮಿಳುನಾಡಿನ ಸೇಲಂನಲ್ಲಿ ಕಳೆದ ಜು. ೧೯ರ ರಾತ್ರಿ ರಮೇಶ್ ಎಂಬ ಬಿಜೆಪಿ ರಾಜ್ಯ ಕಾರ್ಯದರ್ಶಿಯನ್ನು ಬರ್ಬರವಾಗಿ ಜಿಹಾದಿಗಳು ಕೊಂದು ಹಾಕಿದ್ದಾರೆ. ಜನಪ್ರಿಯ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರಮೇಶ್ ‘ಆಡಿಟರ್ ರಮೇಶ್’ ಎಂದೇ ಪ್ರಖ್ಯಾತರಾಗಿದ್ದರು. ೧೯೮೭ ಹಾಗೂ ೧೯೯೨ರಲ್ಲಿ ಅವರು ಆರೆಸ್ಸೆಸ್ನ ಜಿಲ್ಲಾ ಕಾರ್ಯವಾಹರಾಗಿಯೂ ಸೇವೆಸಲ್ಲಿಸಿದ್ದರು. ೨೦೧೧ ಸೆಪ್ಟಂಬರ್ನಲ್ಲಿ ನಡೆದ ಸೇಲಂ ಸಿಟಿ ಮುನ್ಸಿಪಲ್ ಕಾರ್ಪೊರೇಶನ್ ಮೇಯರ್ ಹುದ್ದೆಗೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ೫೨ರ ಹರೆಯದ ರಮೇಶ್ ಅವರನ್ನು ಹರಿತವಾದ ಆಯುಧಗಳಿಂದ ಬರ್ಬರವಾಗಿ ಕೊಚ್ಚಿ ಹಾಕಲಾಗಿದೆ. ಅವರು ಸ್ಥಳದಲ್ಲೇ ಕೊನೆಯುಸಿರೆಳೆಯುವಷ್ಟು ಭೀಕರವಾಗಿತ್ತು ಆ ಹತ್ಯೆ. ಕಳೆದ ತಿಂಗಳಷ್ಟೇ ಹಿಂದು ಮುನ್ನಣಿಯ ತಮಿಳುನಾಡು ಪ್ರಾಂತ ಕಾರ್ಯದರ್ಶಿ ವೆಳ್ಳಿಯಪ್ಪನ್ ಅವರನ್ನು ವೆಲ್ಲೂರಿನಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳು ಇದೇ ರೀತಿ ಬರ್ಬರವಾಗಿ ಕೊಲೆ ಮಾಡಿದ್ದರು. ೨೦೧೨ರ ಅಕ್ಟೋಬರ್ನಲ್ಲಿ ದುಷ್ಕರ್ಮಿಗಳ ಒಂದು ಗ್ಯಾಂಗ್ ವೆಲ್ಲೂರಿನ ಪ್ರಖ್ಯಾತ ವೈದ್ಯ ಹಾಗೂ ಬಿಜೆಪಿಯ ಪ್ರಾಂತ ವೈದ್ಯಕೀಯ ಘಟಕದ ಕಾರ್ಯದರ್ಶಿ ಡಾ.ವಿ.ಅರವಿಂದ್ ಅವರನ್ನು ಅವರ ಕ್ಲಿನಿಕ್ ಮುಂಭಾಗದಲ್ಲೇ ಹತ್ಯೆ ಮಾಡಿದ್ದರು. ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರಾದ ಅರವಿಂದ್ ರೆಡ್ಡಿ, ಪುಗಳೇಂದಿ, ಕಲೈಯಾರ್ ಕೊಯಿಲ್ ಪದೈ ವೆಂಟ್ರಾನ್, ಅಂಬಾಲಂ ಮೊದಲಾದವರನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು. ಹಿಂದು ಮುನ್ನಣಿ ಕಾರ್ಯಕರ್ತ ಮೆಟ್ಟುಪಾಳ್ಯಂನ ಆನಂದ್, ನಾಗರಕೊಯಿಲ್ನ ಬಿಜೆಪಿ ಕಾರ್ಯಕರ್ತ ಎಂ.ಆರ್. ಗಾಂಧಿ, ಕೋನೂರಿನ ಹರಿ ಹಾಗೂ ಇನ್ನಿತರ ಪರಿವಾರದ ಅನೇಕ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ಗಂಭೀರವಾಗಿ ಗಾಯಗೊಳಿಸಲಾಗಿದೆ. ಆದರೆ ಇದುವರೆಗೂ ಈ ಸಂಬಂಧವಾಗಿ ಬಂಧಿಸಿಲ್ಲ ಅಥವಾ ಯಾವ ಕ್ರಮವನ್ನೂ ಕೈಗೊಂಡಿಲ್ಲ. ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆ ಅದೆಷ್ಟು ಕುರುಡಾಗಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ಕಳೆದ ೧೮ ತಿಂಗಳ ಅವಧಿಯಲ್ಲಿ ತಮಿಳುನಾಡು ರಾಜ್ಯವೊಂದರಲ್ಲೇ ೧೬ ಹಿಂದೂ ರಾಜಕೀಯ ನಾಯಕರ ಬರ್ಬರ ಹತ್ಯೆ ನಡೆದಿದೆ. ಇನ್ನು ಇಡೀ ದೇಶದಲ್ಲಿ ಇದೇ ಅವಧಿಯಲ್ಲಿ ಇನ್ನೆಷ್ಟು ಬರ್ಬರ ಹತ್ಯೆಗಳು ನಡೆದಿರಬಹುದು! ನೀವೇ ಊಹಿಸಿ.
೧೯೯೮ರ ಫೆ.೧೪ರಂದು ಕೊಯಮತ್ತೂರಿನಲ್ಲಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರ ಕೊಲೆಗೆ ಮುಹೂರ್ತವಿಟ್ಟ ಉಗ್ರಗಾಮಿಗಳು ೬೦ ಮಂದಿ ಮುಗ್ಧರನ್ನು ಬಾಂಬ್ ಸ್ಫೋಟಿಸಿ ಹತ್ಯೆಗೈದಿದ್ದರು. ಆಡ್ವಾಣಿ ಸಭೆಗೆ ತಡವಾಗಿ ಬಂದಿದ್ದರಿಂದ ಬಚಾವ್ ಆದರು. ಅಲ್ಲಿಂದ ಆರಂಭಗೊಂಡ ಈ ರಾಜಕೀಯ ಹತ್ಯೆಗಳು ನಿರಂತರವಾಗಿ ತಮಿಳುನಾಡಿನಲ್ಲಿ ನಡೆಯುತ್ತಲೇ ಇವೆ. ೨೦೧೨ರ ನ.೬ರಂದು ತಿರುಪುರ್ ಜಿಲ್ಲೆಯ ಬಿಜೆಪಿ ಕಾರ್ಯದರ್ಶಿ ಎಸ್.ಆನಂದ್ ಅವರ ಮೇಲೆ ಮುಸ್ಲಿಂ ಉಗ್ರರು ಭೀಕರವಾಗಿ ಹಲ್ಲೆ ನಡೆಸಿದರು. ಆನಂದ್ ಈಗಲೂ ಸಹಜ ಸ್ಥಿತಿಗೆ ಬಂದಿಲ್ಲ. ಆದರೆ ಆರೋಪಿಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ದೇವರನ್ನು ಪೂಜಿಸುವಂತಿಲ್ಲ
ಮುಸ್ಲಿಂ ಬಾಹುಳ್ಯವೇ ಹೆಚ್ಚಾಗಿರುವ ಕೊಯಮತ್ತೂರಿನ ಕೆಲವು ಪ್ರದೇಶಗಳಲ್ಲಿ ಹಿಂದುಗಳು ತಮ್ಮ ದೇವರನ್ನು ಬಹಿರಂಗವಾಗಿ ಪೂಜಿಸುವಂತಿಲ್ಲ. ಪಾಕಿಸ್ಥಾನದಲ್ಲೋ ಅಥವಾ ಬಂಗ್ಲಾದೇಶದಲ್ಲೋ ಹೀಗೆ ನಡೆದಿದ್ದರೆ ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬಹುದಿತ್ತು. ಆದರೆ ಭಾರತದಲ್ಲಿ , ಹಿಂದುಗಳೇ ಬಹುಸಂಖ್ಯಾತರಾಗಿರುವ ಈ ದೇಶದಲ್ಲಿ ಹಿಂದುಗಳು ತಮ್ಮ ದೇವರನ್ನು ಪೂಜಿಸುವಂತಿಲ್ಲ ಎಂದಾದರೆ ಅದಕ್ಕೇನರ್ಥ? ಕೊಟ್ಟೈಮೇಡು, ಉಕ್ಕಡಂ, ಅಲ್-ಅಮೀನ್ ಕಾಲೋನಿ, ಸೆಲ್ವಪುರಂ, ಕುನಿಯ ಮುತ್ತೂರ್, ಅಟ್ಟುಪಾಳಂ ಪ್ರದೇಶಗಳಲ್ಲಿ ನಿರಂತರವಾಗಿ ಹಿಂದುಗಳ ಮೇಲೆ ಮುಸ್ಲಿಮರು ಹಲ್ಲೆ ನಡೆಸುತ್ತಲೇ ಇರುತ್ತಾರೆ. ಈ ಹಲ್ಲೆಗಳ ವಿರುದ್ಧ ದೂರು ಕೊಟ್ಟರೆ ಪೊಲೀಸರು ಸ್ವೀಕರಿಸುವುದೇ ಇಲ್ಲ. ಸರ್ಕಾರಿ ಅಧಿಕಾರಿಗಳು ಈ ದೌರ್ಜನ್ಯದ ವಿರುದ್ಧ ಯಾವ ಕಾನೂನು ಕ್ರಮವನ್ನೂ ಕೈಗೊಂಡಿಲ್ಲ. ೨೦೧೦ರ ಗಣೇಶೋತ್ಸವ ಸಂದರ್ಭದಲ್ಲಿ ಉಕ್ಕಡಂ, ಕುನಿಯಮುತ್ತೂರ್, ಮಧುಕರೈ, ಮೆಟ್ಟುಪಾಳಯಂ, ಸೆಲ್ವಪುರಂನಲ್ಲಿ ಮುಸ್ಲಿಂ ಮತಾಂಧರಿಂದ ಹಿಂದುಗಳ ಮೇಲೆ ಸಾಕಷ್ಟು ಹಲ್ಲೆಗಳು ನಡೆದವು. ಹಿಂದೂ ಮುನ್ನಣಿಯ ಒಬ್ಬ ಕಾರ್ಯಕರ್ತನನ್ನು ಆ ಸಂದರ್ಭದಲ್ಲಿ ಭೀಕರವಾಗಿ ಹತ್ಯೆ ಮಾಡಲಾಯಿತು. ಇದರ ವಿರುದ್ಧವೂ ಅಲ್ಲಿನ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಈ ಹತ್ಯೆಗಳ ಸಾಲಿಗೆ ಮೊನ್ನೆ ಶುಕ್ರವಾರ ಬರ್ಬರವಾಗಿ ಕೊಲೆಗೀಡಾದ ಆಡಿಟರ್ ರಮೇಶ್ ನೂತನ ಸೇರ್ಪಡೆ!
ಹಿಂದುಗಳ ಪ್ರಾಣ ಬಲು ಅಗ್ಗ!
ಏಕೆ ಈ ಬರ್ಬರ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ? ಉತ್ತರ ಹೇಳುವವರಾರು? ಹಿಂದೂ ಸಂಘಟನೆಗಳನ್ನು ಹೊರತುಪಡಿಸಿ ಇದರ ವಿರುದ್ಧ ಪ್ರತಿಭಟಿಸುವವರಾದರೂ ಯಾರು? ಒಬ್ಬ ಯಃಕಶ್ಚಿತ್ ಮುಸ್ಲಿಂ ಅಥವಾ ಕ್ರಿಶ್ಚಿಯನ್ ವ್ಯಕ್ತಿಯ ಮೇಲೆ ಅಕಸ್ಮಾತ್ ಹಲ್ಲೆ ನಡೆದರೆ ಆ ಸಮುದಾಯಕ್ಕೆ ಸೇರಿದ ಜನರು ಭಾರೀ ಸಂಖ್ಯೆಯಲ್ಲಿ ಒಗ್ಗೂಡಿ ಪ್ರತಿಭಟಿಸುತ್ತಾರೆ. ರಸ್ತೆ ಬಂದ್ ಮಾಡುತ್ತಾರೆ. ಆರೋಪಿಯನ್ನು ತಕ್ಷಣ ಬಂಧಿಸುವಂತೆ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹೇರಲಾಗುತ್ತದೆ. ಮಾಧ್ಯಮಗಳೂ ಕೂಡ ಇದಕ್ಕೆ ಸಾಥ್ ನೀಡಿ, ಘಟನೆಯನ್ನು ವೈಭವೀಕರಿಸುತ್ತವೆ. ಟಿ.ವಿ. ಚಾನೆಲ್ಗಳು ೨೪ ಗಂಟೆಗಳ ಕಾಲ ಆ ಹಲ್ಲೆಯ ಘಟನೆಯನ್ನು ಪದೇಪದೇ ತೋರಿಸಿ ಭಾರೀ ಅನಾಹುತವೇ ಜರುಗಿ ಹೋಗಿದೆ ಎಂಬಂತಹ ವಾತಾವರಣ ಸೃಷ್ಟಿಸುತ್ತವೆ. ಆದರೆ ಹಿಂದೂ ಸಂಘಟನೆ, ಪಕ್ಷಕ್ಕೆ ಸೇರಿದ ಪ್ರಮುಖ ಕಾರ್ಯಕರ್ತನೊಬ್ಬ ಬರ್ಬರ ಹತ್ಯೆಗೀಡಾದರೆ ಪ್ರತಿಭಟಿಸಲು ಸೀಮಿತ ಸಂಖ್ಯೆಯ ಕಾರ್ಯಕರ್ತರನ್ನು ಹೊರತುಪಡಿಸಿ ಬೇರೆ ಯಾರೂ ಮುಂದೆ ಬರುವುದಿಲ್ಲ. ಹಂತಕರನ್ನು ಬಂಧಿಸುವಂತೆ ಸರ್ಕಾರದ ಮೇಲೆ ಯಾರೂ ರಾಜಕೀಯ ಒತ್ತಡ ಹೇರುವುದಿಲ್ಲ. ಇನ್ನು ಮಾಧ್ಯಮಗಳಂತೂ ಅದೊಂದು ಸುದ್ದಿಯಾಗಬಲ್ಲ ಘಟನೆಯೇ ಅಲ್ಲವೆಂದು ಮೌನಕ್ಕೆ ಶರಣಾಗುತ್ತವೆ. ಪತ್ರಿಕೆಗಳ ಮೂಲೆಯಲ್ಲೆಲ್ಲೋ ಆ ಸುದ್ದಿ ಚಿಕ್ಕದಾಗಿ ಪ್ರಕಟವಾದರೆ ಅದೇ ಪುಣ್ಯ. ಟಿವಿ ಚಾನೆಲ್ಗಳಲ್ಲಿ ಆ ಬರ್ಬರ ಹತ್ಯೆಯ ಸುದ್ದಿ ಪ್ರಸಾರಕ್ಕೆ ಅವಕಾಶವೇ ಇರುವುದಿಲ್ಲ. ಬಹುಸಂಖ್ಯಾತ ಹಿಂದುಗಳಿಗೆ ಮಾಡಿದ ಘೋರ ಅವಮಾನ ಇದೆಂದು ನಿಮಗೆ ಅನಿಸುವುದಿಲ್ಲವೆ? ಕಳೆದ ಶುಕ್ರವಾರ ಸೇಲಂನಲ್ಲಿ ಬರ್ಬರ ಹತ್ಯೆಗೀಡಾದ ಆಡಿಟರ್ ರಮೇಶ್ ಪ್ರಕರಣವನ್ನು ಪತ್ರಿಕೆಗಳಲ್ಲಿ ಅಥವಾ ಟಿವಿ ಚಾನೆಲ್ಗಳಲ್ಲಿ ನೀವು ಖಂಡಿತ ಗಮನಿಸಿರಲಾರಿರಿ. ಹಿಂದು ಸಂಘಟನೆಗಳ ಕಾರ್ಯಕರ್ತರ ಪ್ರಾಣವೆಂದರೆ ಅಷ್ಟೊಂದು ಅಗ್ಗವಾಗಿ ಹೋಯಿತೆ?
ಈ ಮನೋಪ್ರವೃತ್ತಿ ಈಗಷ್ಟೇ ಅಲ್ಲ, ಹಿಂದಿನಿಂದಲೂ ಇದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾದ ಡಾ.ಶಾಮಪ್ರಸಾದ ಮುಖರ್ಜಿ, ಪಂ.ದೀನದಯಾಳ ಉಪಾಧ್ಯಾಯ ಅವರಿಂದ ತೊಡಗಿ ಮೊನ್ನೆ ಮೊನ್ನೆ ಬರ್ಬರ ಹತ್ಯೆಗೊಳಗಾದ ಆಡಿಟರ್ ರಮೇಶ್ ಪ್ರಕರಣದವರೆಗೂ ಇಲ್ಲಿ ನ ಸರ್ಕಾರ ಹಾಗೂ ಪೊಲೀಸರು ನಡೆದುಕೊಂಡಿರುವುದು ಇದೇ ರೀತಿಯಲ್ಲಿ. ಇನ್ನು ಸಿಪಿಐ, ಸಿಪಿಎಂ, ಮುಸ್ಲಿಂ ಲೀಗ್, ಕಾಂಗ್ರೆಸ್, ಸಮಾಜವಾದಿ ಪಕ್ಷದಂತಹ ರಾಜಕೀಯ ಪಕ್ಷಗಳು, ರೊಮಿಲ್ಲಾ ಥಾಪರ್, ಬಿಪಿನ್ಚಂದ್ರ, ಸತೀಶ್ಚಂದ್ರ, ನುರುಲ್ ಹಸನ್ನಂತಹ ಅಕಾಡೆಮಿ ವ್ಯಕ್ತಿಗಳು; ಕರಂಜಿಯಾ, ಕೆ.ಎ.ಅಬ್ಬಾಸ್, ಎನ್.ರಾಮ್, ಮಾಲಿನಿ ಪಾರ್ಥಸಾರಥಿ, ಕರಣ್ ಥಾಪರ್ರಂತಹ ಪತ್ರಕರ್ತರು; ಪಿ.ಎನ್.ಹಸ್ಕರ್, ಎಸ್.ಎಸ್.ಗಿಲ್ರಂತಹ ಸರ್ಕಾರಿ ಅಧಿಕಾರಿಗಳು; ಜೊತೆಗೆ ಅರುಂಧತಿ ರಾಯ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ತೀಸ್ತಾ ಸೆಟಲ್ವಾಡ್ರಂತಹ ಗೋಮುಖ ವ್ಯಾಘ್ರದ ಬುದ್ಧಿಜೀವಿಗಳು ಹಿಂದೂ ಮುಖಂಡರ ಹತ್ಯೆಗಳು ನಡೆದಾಗ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ರಹಸ್ಯವಾಗುಳಿದಿಲ್ಲ. ಸಿಪಿಐನ ಹಿರಿಯ ಮುಖಂಡ ಸಿ.ರಾಜೇಶ್ವರರಾವ್ ಬರೆದ ‘ಆರೆಸ್ಸೆಸ್ ನಿಜಸ್ವರೂಪಂ’ (ತೆಲುಗು) ಎಂಬ ಕೃತಿಯಲ್ಲಿ ‘ಆರೆಸ್ಸೆಸ್ ಹಾಗೂ ಬಿಜೆಪಿ ಸಂಘಟನೆಗಳ ವಿರುದ್ಧ ಸೈದ್ಧಾಂತಿಕ ಸಮರ ಸಾರಲು ಸಾಧ್ಯವಿಲ್ಲ. ಅವುಗಳನ್ನು ಶಾರೀರಿಕವಾಗಿಯೇ ದಮನ ಮಾಡಬೇಕು’ ಎಂದು ಬಹಿರಂಗವಾಗಿ ಸಾರಿದ್ದರು. ‘ಆರೆಸ್ಸೆಸ್ ಒಂದು ರಿಯಾಕ್ಷನರಿ ಸಂಘಟನೆಯಾಗಿರುವುದರಿಂದ ಸ್ವಯಂಸೇವಕರ ಪ್ರಾಣ ಅಮೂಲ್ಯವೇನಲ್ಲ’ ಎಂಬುದು ಎಡಪಂಥೀಯರು ತಳೆದಿರುವ ಒಂದು ಧೋರಣೆ.
ಸೂಕ್ತ ತನಿಖೆಯೇ ಇಲ್ಲ
ಸ್ವಾತಂತ್ರ್ಯ ಬಂದಾಗಿನಿಂದ ವಿವಿಧ ಬಗೆಯ ಷಡ್ಯಂತ್ರಗಳಿಗೆ ಸಿಲುಕಿ ಹುತಾತ್ಮರಾದ ಹಿಂದೂ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರ ಕೊಲೆ ಪ್ರಕರಣದ ಬಗ್ಗೆ ತನಿಖಾ ಸಂಸ್ಥೆಗಳು ಗಂಭೀರವಾಗಿ ತಲೆಕೆಸಿಕೊಂಡಿz ಇಲ್ಲ. ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರು ಕಾಶ್ಮೀರದ ಜೈಲಿನಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾದಾಗ ಆ ಕುರಿತು ಸೂಕ್ತ ತನಿಖೆಯೇ ನಡೆಯಲಿಲ್ಲ. ಸ್ವತಃ ಡಾ.ಮುಖರ್ಜಿಯವರ ತಾಯಿ ಶ್ರೀಮತಿ ಜೋಗಮಾಯಾದೇವಿ ಆಗಿನ ಪ್ರಧಾನಿ ನೆಹರು ಅವರಿಗೆ ಪತ್ರ ಬರೆದು ಈ ದುರಂತ ಮರಣದ ಕುರಿತು ತನಿಖೆ ನಡೆಸಬೇಕೆಂದು ಗೋಗರೆದಿದ್ದರು. ಅದಕ್ಕೆ ಪ್ರತ್ಯುತ್ತರ ಬರೆದ ನೆಹರು, ‘ಈ ಮರಣದ ಹಿಂದೆ ಯಾವುದೇ ಒಳಸಂಚಿಲ್ಲ. ಹಾಗಾಗಿ ಈ ಬಗ್ಗೆ ತನಿಖೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ತಿಳಿಸಿದ್ದರು. ಅದಾದ ಮೇಲೆ ಜನಸಂಘದ ಇನ್ನೊಬ್ಬ ಹಿರಿಯ ಮುಖಂಡ ದೀನದಯಾಳ ಉಪಾಧ್ಯಾಯರು ೧೯೬೮ರ ಫೆ.೧೧ರಂದು ಉತ್ತರಪ್ರದೇಶದ ಮೊಘಲ್ಸರಾಯ್ ರೈಲ್ವೇ ನಿಲ್ದಾಣದಲ್ಲಿ ಭೀಕರವಾಗಿ ಕೊಲೆಗೀಡಾಗಿದ್ದರು. ಆ ಬಗ್ಗೆಯೂ ತನಿಖೆ ನಡೆಯಲಿಲ್ಲ. ಕೊನೆಗೂ ವಿವಿಧ ಪಕ್ಷಗಳಿಗೆ ಸೇರಿದ ೭೦ ಮಂದಿ ಸಂಸತ್ಸದಸ್ಯರು ನ್ಯಾಯಾಂಗ ತನಿಖೆಗೆ ಆಗ್ರಹಿಸಿದಾಗ ಸರ್ಕಾರ ಮಣಿದು ನ್ಯಾ. ವಿ.ವಿ.ಚಂದ್ರಚೂಡ್ ಆಯೋಗ ರಚಿಸಿತ್ತು. ತನಿಖೆಯ ಬಳಿಕ ಈ ಆಯೋಗ ನೀಡಿದ ವರದಿಯೇನೆಂದರೆ: ‘ಉಪಾಧ್ಯಾಯರ ಕೊಲೆ ಸಂಚಿನಲ್ಲಿ ಯಾವುದೇ ರಾಜಕೀಯ ಕೈವಾಡ ಇದೆಯೆಂದು ಹೇಳಲು ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಹೀಗಾಗಿ ಇದೊಂದು ಕೆಲವು ದರೋಡೆಕೋರರು ನಡೆಸಿರುವ ಕೃತ್ಯವಾಗಿದೆ’. ಆದರೆ ಅಂತಹ ದರೋಡೆಕೋರರು ಯಾರೆಂದು ಪತ್ತೆ ಮಾಡಲೂ ಇಲ್ಲ. ಶಿಕ್ಷೆಯೂ ಆಗಲಿಲ್ಲ. ದೀನದಯಾಳ್ಜೀ ಅವರನ್ನು ಕಗ್ಗೊಲೆ ಮಾಡಿದ ದುಷ್ಕರ್ಮಿಗಳಂತೂ ಈ ವರದಿ ಓದಿ ಕೇಕೆ ಹಾಕಿ ನಕ್ಕಿದ್ದಿರಬಹುದು!
ತನಿಖಾ ಸಂಸ್ಥೆಗಳು, ವಿಚಾರಣಾ ಆಯೋಗಗಳೇ ಇಂತಹ ತಲೆಬುಡವಿಲ್ಲದ, ಸತ್ಯಕ್ಕೆ ದೂರವಾದ ವರದಿಗಳನ್ನು ನೀಡಿದರೆ ಅದರಿಂದ ರಾಷ್ಟ್ರ ವಿರೋಧಿಗಳಿಗೆ, ಸಮಾಜಘಾತುಕರಿಗೆ ರವಾನೆಯಾಗುವ ಸಂದೇಶವಾದರೂ ಏನು? ಆರೆಸ್ಸೆಸ್ ಪರಿವಾರಕ್ಕೆ ಸಂಬಂಧಿಸಿದ ಯಾರನ್ನೇ ಆಗಲಿ ಕೊಲೆ ಮಾಡಿದರೆ ಆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸುವುದಿಲ್ಲ ಎಂದಲ್ಲವೆ? ಇದುವರೆಗೆ ಕೊಲೆಯಾದ ನೂರಾರು ಕಾರ್ಯಕರ್ತರ ಪ್ರಕರಣ ಒಂದು ತಾರ್ಕಿಕ ಅಂತ್ಯಕ್ಕೆ ತಲುಪದಿರಲು ಈ ಮನೋಸ್ಥಿತಿಯೇ ಕಾರಣ ಎಂಬುದು ಹಗಲಿನಷ್ಟು ನಿಚ್ಚಳ.
ಒಂದು ಸಿದ್ಧಾಂತಕ್ಕಾಗಿ, ಒಂದು ಧ್ಯೇಯಕ್ಕಾಗಿ ಈ ದೇಶದಲ್ಲಿ ಬದುಕುವುದು ಅಪರಾಧವೆ? ಸಂಘಟನೆಯ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನವೇ ದಯಪಾಲಿಸಿದೆ. ಸಂಘಟನೆಗಳನ್ನು ಕಟ್ಟುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಅಷ್ಟಕ್ಕೂ ಸಂಘ ಪರಿವಾರದ ಸಂಘಟನೆಗಳು ದೇಶಹಿತಕ್ಕೆ ಪೂರಕವಾದ ಚಟುವಟಿಕೆಗಳನ್ನು ನಡೆಸುತ್ತಿವೆಯೇ ಹೊರತು ದೇಶ ವಿರೋಧಿ ಕೃತ್ಯಗಳಲ್ಲಿ ಎಂದೂ ಪಾಲ್ಗೊಂಡ ನಿದರ್ಶನಗಳಿಲ್ಲ. ಅದೇ ಸಿಮಿ, ನಕ್ಸಲೈಟ್, ವಾಮಪಂಥೀಯ ಸಂಘಟನೆಗಳು, ಮುಸ್ಲಿಂ ಮತಾಂಧ ಸಂಘಟನೆಗಳು ಸಂವಿಧಾನ ನೀಡಿದ ಸಂಘಟನಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ದೇಶವಿರೋಧಿ ಕೃತ್ಯಗಳಲ್ಲಿ ನಿರತವಾಗಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ. ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿ ಕಸಬ್ನನ್ನು ಶಿಕ್ಷಿಸಿ ಗಲ್ಲಿಗೇರಿಸಲು ಸರ್ಕಾರ ಅದೆಷ್ಟು ವಿಳಂಬವಹಿಸಿತು ಎನ್ನುವುದು ಇಡೀ ದೇಶಕ್ಕೇ ಗೊತ್ತು. ಪಾರ್ಲಿಮೆಂಟ್ ಮೇಲೆ ಬಾಂಬ್ ಸ್ಫೋಟ ಸಂಚಿನ ಆರೋಪಿ ಅಫ್ಜಲ್ ಗುರು ಅಪರಾಧವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದರೂ, ಆತನನ್ನು ನೇಣಿಗೇರಿಸಲು ಕೇಂದ್ರ ಕಾಂಗ್ರೆಸ್ ಸರ್ಕಾರ ಮೀನಾಮೇಷ ಎಣಿಸಿದ್ದು ಯಾರಿಗೆ ಗೊತ್ತಿಲ್ಲ? ಆದರೆ ದೇಶಹಿತಕ್ಕೆ ಪೂರಕವಾಗಿ, ಯಾವುದೇ ಪ್ರಸಿದ್ಧಿ ಪ್ರಚಾರ ಬಯಸದೆ ಕಾರ್ಯನಿರ್ವಹಿಸಿ ರಾಷ್ಟ್ರದ್ರೋಹಿ ಶಕ್ತಿಗಳಿಗೆ ಬಲಿಯಾಗುವ ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಹತ್ಯೆ ಪ್ರಕರಣದ ವಿಚಾರಣೆಯೇ ನಡೆಯದಿರುವುದು, ಅಕಸ್ಮಾತ್ ವಿಚಾರಣೆ ನಡೆದು ಅಪರಾಧ ಸಾಬೀತಾದರೂ ಅಂಥವರಿಗೆ ಯಾವುದೇ ಶಿಕ್ಷೆ ಆಗದಿರುವುದು ಎಂತಹ ವಿಪರ್ಯಾಸ!
ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಕೇರಳದ ಜಯಕೃಷ್ಣನ್ ಮಾಸ್ಟರ್ ಅವರನ್ನು ಮಕ್ಕಳೆದುರೇ ಬರ್ಬರವಾಗಿ ಕಮ್ಯೂನಿಸ್ಟ್ ಗೂಂಡಾಗಳು ಕೊಂದು ಹಾಕಿದರು. ಆದರೆ ಆಗಿzನು? ಮೊಕದ್ದಮೆ ಸುಪ್ರೀಂಕೋರ್ಟ್ ಮೆಟ್ಟಲು ಹತ್ತಿ, ಅಲ್ಲಿ ಬಂದ ತೀರ್ಪಾದರೂ ಏನು? ಅಪರಾಧಿಗಳಿಗೆ ಶಿಕ್ಷೆಯಾಗಲೇ ಇಲ್ಲ. ಏಕೆಂದರೆ ಆ ಕಗ್ಗೊಲೆಗೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದ ಮಕ್ಕಳೆಲ್ಲ ಕಾನೂನು ದೃಷ್ಟಿಯಿಂದ ಮೈನರ್! ಮೈನರ್ ಹೇಳಿದ ಸಾಕ್ಷಿ ಕೋರ್ಟಿನಲ್ಲಿ ಸಾಬೀತಾಗುವುದಿಲ್ಲ. ನಮ್ಮ ನ್ಯಾಯವ್ಯವಸ್ಥೆ ಇಂತಹುದು! ೧೯೮೦ರಲ್ಲಿ ಸಿಪಿಎಂ ಸರ್ಕಾರ ಕೇರಳದಲ್ಲಿ ಅಧಿಕಾರದಲ್ಲಿದ್ದಾಗ ಕಣ್ಣೂರು ಜಿಲ್ಲೆಯ ಎಸ್ಪಿ ಒಂದು ಆಕ್ಷೇಪಾರ್ಹ, ಸಂವಿಧಾನ ವಿರೋಧಿ ಸರ್ಕ್ಯುಲರ್ ಹೊರಡಿಸಿದ್ದ. ‘ಓoಣ oಟಿಟಥಿ ಖSS ತಿoಡಿಞeಡಿs shouಟಜ be ಚಿಡಿಡಿesಣeಜ, ಚಿಟಿಥಿboಜಥಿ oಜಿಜಿeಡಿiಟಿg suಡಿeಣಥಿ ಜಿoಡಿ ಣhem shouಟಜ ಚಿಟso be ಜeಣಚಿiಟಿeಜ u/s ೧೦೭ ಚಿಟಿಜ ೧೫೧ ಅಡಿ. ಠಿಛಿ (ಓo.೩೯೬೨/೮ಃ೮೦, Seಠಿಣembeಡಿ ೨೯, ೧೯೮೦)’. ಇಂತಹ ಕಾನೂನು ವಿರೋಧಿ, ಅನ್ಯಾಯದ ಆದೇಶದ ವಿರುದ್ಧ ಆರೆಸ್ಸೆಸ್ ತಿರುವನಂತಪುರಂನ ಸೆಕ್ರೆಟರಿಯೇಟ್ ಎದುರು ಭಾರೀ ಧರಣಿ ನಡೆಸಿ ಪ್ರತಿಭಟಿಸಿತ್ತು.
೧೯೮೦ರಲ್ಲಿ ಇ.ಕೆ.ನಾಯನಾರ್ ಸರ್ಕಾರದಲ್ಲಿ ಗೃಹಮಂತ್ರಿಯಾಗಿದ್ದ ಟಿ.ಕೆ. ರಾಮಕೃಷ್ಣನ್ ‘ಕೇರಳದಿಂದ ಆರೆಸ್ಸೆಸ್ ಸಮೂಲ ನಾಶವಾಗುವಂತೆ ಮಾರ್ಕ್ಸಿಸ್ಟರು ಪ್ರಯತ್ನಿಸಬೇಕು’ ಎಂಬ ವಿವಾದಾತ್ಮಕ ಹೇಳಿಕೆಯನ್ನೇ ಕೊಟ್ಟಿದ್ದರು. ಅದೇ ವೇಳೆ ಇನ್ನೊಬ್ಬ ಸಚಿವ ಎಂ.ಕೆ.ಕೃಷ್ಣನ್ ಕೊಡಂಗಲ್ಲಾರ್ನಲ್ಲಿ ಮಾಡಿದ ಸಾರ್ವಜನಿಕ ಭಾಷಣದಲ್ಲಿ ‘ಹುಚ್ಚು ನಾಯಿಗಳನ್ನು ಓಡಿಸುವಂತೆ ಆರೆಸ್ಸೆಸ್ ಕಾರ್ಯಕರ್ತರನ್ನು ಹೊಡೆದಟ್ಟಿ’ ಎಂದು ಕರೆಕೊಟ್ಟಿದ್ದರು. ಮತ್ತೊಬ್ಬ ಶಾಸಕ ಆರೆಸ್ಸೆಸ್ನವರ ಕೈಕಾಲುಗಳನ್ನು ಕತ್ತರಿಸಿ ಹಾಕುವುದಾಗಿ ಪ್ರತಿಜ್ಞೆ ಮಾಡಿದ್ದ. ಆರೆಸ್ಸೆಸ್ ಕಾರ್ಯಕರ್ತರನ್ನು ಬಗ್ಗುಬಡಿಯಲು ‘ಕಾರ್ಯನಿರತ ಪಡೆ’ಗಳನ್ನೇ ಮಾರ್ಕ್ಸಿಸ್ಟ್ ಸರ್ಕಾರ ರಚಿಸಿತ್ತು. ಸರ್ಕಾರವೇ ಹೀಗೆ ಬೆಂಬಲಕ್ಕಿರುವಾಗ ಮಾರ್ಕ್ಸಿಸ್ಟ್ ಗೂಂಡಾಗಳಿಗೆ ಇನ್ನಾರ ಭಯ!
ಆದರೆ ಮಾರ್ಕ್ಸಿಸ್ಟ್ ಗೂಂಡಾಗಳು ಅಂದುಕೊಂಡಂತೆ ಆಗಲೇ ಇಲ್ಲ. ಗೂಂಡಾಗಿರಿಗೆ ಹೆದರಿ ಆರೆಸ್ಸೆಸ್ ಕಾರ್ಯಕರ್ತರು ಸುಮ್ಮನೆ ಕೈಕಟ್ಟಿ ಕೂರಲಿಲ್ಲ. ಆತ್ಮರಕ್ಷಣೆಗೆ ಯಾರನ್ನೂ ಆಶ್ರಯಿಸದೆ, ಗೂಂಡಾಗಿರಿಗೆ ತಕ್ಕ ಉತ್ತರ ನೀಡಲು ಸಜ್ಜಾದರು. ಖಿiಣ ಜಿoಡಿ ಖಿಚಿಣ ನೀತಿ ಅನುಸರಿಸಿದರು. ತಮ್ಮ ಕಡೆಯವರೂ ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ಬಂದೊದಗಿದಾಗ ಮಾತ್ರ ಹೆದರಿ ಕಂಗಾಲಾಗಬೇಕಾದ ಸರದಿ ಮಾರ್ಕ್ಸಿಸ್ಟರದ್ದಾಗಿತ್ತು.
ಈಗಲೂ ಅಷ್ಟೆ. ತಮಿಳುನಾಡಿನಲ್ಲಿ ಹಿಂದೂ ಸಂಘಟನೆಗಳ ಬೆಳವಣಿಗೆಯನ್ನು ಸಹಿಸದ ಮೂಲಭೂತವಾದಿ, ಮತಾಂಧ ಶಕ್ತಿಗಳು ಅದನ್ನು ಹೊಸಗಿ ಹಾಕಲು ‘ಹತ್ಯೆ ತಂತ್ರ’ವನ್ನು ಅನುಸರಿಸಿವೆ. ಒಂದಷ್ಟು ಕಾರ್ಯಕರ್ತರನ್ನು ಕೊಲ್ಲುವುದರಿಂದ ಹಿಂದೂ ಸಂಘಟನೆಗಳ ಬುಡವನ್ನೇ ಕತ್ತರಿಸಿ ಹಾಕಬಹುದು ಎಂದು ನಂಬಿದಂತಿದೆ. ಅವುಗಳ ನಂಬಿಕೆ ನಿಜವಾಗಿದ್ದಿದ್ದರೆ ಡಾ.ಶಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯರಂತಹ ಮೇರು ವ್ಯಕ್ತಿತ್ವದ ಮುಖಂಡರ ಕೊಲೆಯಾದಾಗಲೇ ಹಿಂದು ಸಂಘಟನೆಗಳು ನಾಮಾವಶೇಷವಾಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ವ್ಯಕ್ತಿಗಳನ್ನು ಕೊಲ್ಲಬಹುದು. ಆದರೆ ತತ್ತ್ವ, ಸಿದ್ಧಾಂತಗಳನ್ನು ಕೊಲ್ಲಲು ಸಾಧ್ಯವಿಲ್ಲ. ಏಕೆಂದರೆ ಅವುಗಳಿಗೆ ಸಾವಿಲ್ಲ.
ಆದರೆ ಈ ಮೂಲಭೂತ ಸತ್ಯ ಮತಾಂಧ, ಅವಿವೇಕಿ ಕೊಲೆಗಡುಕರಿಗೆ ಅರ್ಥವಾಗಬೇಕಲ್ಲ!
ಫೋಟೋ ಕ್ಯಾಪ್ಶನ್: ಹುತಾತ್ಮ ಆಡಿಟರ್ ರಮೇಶ್