FIRST ISSUE OF VIKRAMA -1948 ವಿಕ್ರಮದ ಮೊದಲ ಸಂಚಿಕೆ ೨೨.೦೭.೧೯೪೮

Article by Du Gu Lakshman, Chief Editor of VIKRAMA weekly.

ಶೀರ್ಷಿಕೆ ನೋಡಿದಾಗ ಯಾರಿಗಾದರೂ ಅಚ್ಚರಿಯಾಗುವುದು ಸಹಜ. ಒಂದು ಪತ್ರಿಕೆಗೆ ಒಂದೇ ಧ್ಯೇಯವಿರಲು ಸಾಧ್ಯವೆ? ಒಂದೇ ಧ್ಯೇಯವಿದ್ದರೂ ಅದು ಸಮಾಜಮುಖಿಯಾಗಿರಲು ಸಾಧ್ಯವೆ?  ಇನ್ನು ಒಂದೇ ಪತ್ರಿಕೆ, ಒಂದೇ ಧ್ಯೇಯವಿಟ್ಟುಕೊಂಡು ಆ ಪತ್ರಿಕೆಗೆ ಒಬ್ಬನೇ ಸಂಪಾದಕ ನೇತೃತ್ವ ವಹಿಸುವುದು ಹೇಗೆ ಸಾಧ್ಯ ? ದಿನಕ್ಕೊಂದು ಪತ್ರಿಕೆ ಅಥವಾ ವಾಹಿನಿಗಳನ್ನರಸಿ ವೇತನದ ಆಕರ್ಷಣೆಗೆ ತಲೆಬಾಗಿ, ಧ್ಯೇಯ, ತತ್ಪಾದರ್ಶಗಳಿಗೆ ತಿಲಾಂಜಲಿ ನೀಡುವ, ಹಣ ಗಳಿಸುವುದೊಂದೇ ಪತ್ರಿಕೋದ್ಯಮ ವೃತ್ತಿಯ ಮುಖ್ಯ ಗುರಿಯಾಗಿರುವ ಇಂದಿನ ದಿನಮಾನಗಳಲ್ಲಿ ಇಂತಹ ಪ್ರಶ್ನೆಗಳು ಕಾಡುವುದು ಸ್ವಾಭಾವಿಕ.

FIRST ISSUE OF VIKRAMA -1948 ವಿಕ್ರಮದ ಮೊದಲ ಸಂಚಿಕೆ ೨೨.೦೭.೧೯೪೮
FIRST ISSUE OF VIKRAMA -1948 ವಿಕ್ರಮದ ಮೊದಲ ಸಂಚಿಕೆ ೨೨.೦೭.೧೯೪೮

ಆದರೆ ಅದು ಅಂದಿನ ದಿನಮಾನಗಳು. ದೇಶಕ್ಕೆ ಸ್ವಾತಂತ್ರ್ಯ ಬಂದಿತ್ತಷ್ಟೆ. ಆದರೆ ರಾಷ್ಟ್ರೀಯ ವಿಚಾರಗಳಿಗೆ, ದೇಶಾಭಿಮಾನದ, ಸಮಾಜಮುಖಿ ಚಿಂತನೆಗಳಿಗೆ, ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಪತ್ರಿಕೆಗಳು ಬೆನ್ನು ತಿರುಗಿಸಿದ್ದ ಕಾಲವದು. ಸತ್ಯ ಅಹಿಂಸೆಗಳ ಹೆಸರಿನಲ್ಲಿ ಅಸತ್ಯ, ಹಿಂಸಾಚಾರ, ಅನ್ಯಾಯ ದಬ್ಬಾಳಿಕೆಗಳು ಮೆರೆಯತೊಡಗಿದ್ದ ಕಾಲವದು. ಗಾಂಧಿ ಹತ್ಯೆಯ ನೆಪದಲ್ಲಿ, ಹಿಂದುಗಳಲ್ಲಿ ಸ್ವಾಭಿಮಾನ, ಪರಾಕ್ರಮ, ಸ್ವಂತಿಕೆಯನ್ನು ಮೂಡಿಸಲು ತನ್ನದೇ ವಿಶಿಷ್ಟ ಹಾದಿಯಲ್ಲಿ ಸಾಗಿದ್ದ ರಾಷ್ಟ್ರೀಯ  ಸ್ವಯಂಸೇವಕ ಸಂಘದ ಮೇಲೆ ನೆಹರೂ ಸರ್ಕಾರ ನಿಷೇಧ ಹೇರಿದ್ದ ಸಮಯ. ಸಂಘದ ಮೇಲಿನ ನಿರ್ಬಂಧ ಸಾಧಾರಣ ಸಂಗತಿಯಾಗಿರಲಿಲ್ಲ. ಜನರ ಸಂಘಟನಾ ಸ್ವಾತಂತ್ರ್ಯದ ಮೇಲಿನ ಆಘಾತ ಅದಾಗಿತ್ತು. ಸ್ವಾತಂತ್ರ್ಯ ಬಂದ ತರುಣದಲ್ಲೆ ಆಡಳಿತಗಾರರು ಅಧಿಕಾರ ಬಲದಿಂದ ಅನುಸರಿಸುತ್ತಿದ್ದ ತಾನಾಶಾಹಿ ದೇಶಕ್ಕೆ ಗಂಡಾಂತರಕಾರಿಯಾಗಿತ್ತು. ಆಗಿದ್ದ ಹಿಡಿಯಷ್ಟು ಪತ್ರಿಕೆಗಳು ಇದನ್ನೆಲ್ಲ ಪ್ರತಿಭಟಿಸುವ, ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಧೈರ‍್ಯವನ್ನೇ ತೋರದೆ ಆಳುವವರ ತಾಳಕ್ಕೆ ತಕ್ಕಂತೆ ಬಾಲವಾಡಿಸುವ ಬುದ್ಧಿಯನ್ನೇ ಪ್ರದರ್ಶಿಸತೊಡಗಿದಾಗ, ರಾಜಧಾನಿ ಬೆಂಗಳೂರಿನಿಂದ ಅಸತ್ಯ, ಅನ್ಯಾಯ, ದಬ್ಬಾಳಿಕೆಯನ್ನು ಖಂಡಿಸುವ ಒಂಟಿ ಧ್ವನಿಯೊಂದು ಹೊರಹೊಮ್ಮಿತು. ಮೊದಮೊದಲು ಆ ಧ್ವನಿ ಕ್ಷೀಣವೆನಿಸಿದರೂ ಬರಬರುತ್ತಾ ಅದೊಂದು ಅಪ್ರತಿಹತ ಧ್ವನಿಯಾಗಿ ಸಿಂಹಗರ್ಜನೆ ಆಯಿತು. ಆ ಪತ್ರಿಕೆಯ ಧ್ಯೇಯವಾಕ್ಯವೇ ‘ಸ್ವಯಮೇವ ಮೃಗೇಂದ್ರತಾ’ ಎಂದು. ಆ ಪತ್ರಿಕೆಯೇ ‘ವಿಕ್ರಮ’.

ಪ್ರತಿ ಗುರುವಾರ ಪ್ರಕಟಣೆ. ಬೆಲೆ ಎರಡಾಣೆ (ಹನ್ನೆರಡು ಪೈಸೆ). ಪುಟಗಳ ಸಂಖ್ಯೆ ಎಂಟು. ಆ ಪತ್ರಿಕೆಯ ಹಿಂದೆ ಬಂಡವಾಳಶಾಹಿಗಳಿರಲಿಲ್ಲ. ಅಬ್ಕಾರಿ ದೊರೆಗಳಿರಲಿಲ್ಲ. ಭೂಗತ ಪಾತಕಿಗಳಂತೂ ಇರಲೇ ಇಲ್ಲ. ಇದ್ದವರೆಲ್ಲ ಹಿಡಿಯಷ್ಟು ಮಂದಿ. ಹೃದಯದ ತುಂಬ ದೇಶಭಕ್ತಿಯ ಕಿಚ್ಚು, ಮನಸ್ಸಿನ ತುಂಬ ಸತ್ಯ, ನ್ಯಾಯಗಳನ್ನು ಎತ್ತಿ ಹಿಡಿಯುವ ಹುಮ್ಮಸ್ಸು, ಮಿದುಳಿನ ತುಂಬ ಧ್ಯೇಯಾದರ್ಶಗಳ ವಿಚಾರ ತುಂಬಿಕೊಂಡವರು. ಅವರೆಲ್ಲರ ಕಿಸೆ ಮಾತ್ರ ಬರಿದೋ ಬರಿದು. ಒಮ್ಮೊಮ್ಮೆಯಂತೂ ಮುದ್ರಣ ಮುಗಿದು ಕಳುಹಿಸಲು ಪತ್ರಿಕೆಯ ಬಂಡಲ್‌ಗಳು ಸಿದ್ಧವಾದರೂ ಅದಕ್ಕೆ ಹಚ್ಚಬೇಕಾದ ಅಂಚೆಚೀಟಿ ಮಾತ್ರ ಅಂಚೆ ಕಚೇರಿಯಲ್ಲೇ ! ಅಂಥ ಅದ್ಭುತ ಆರ್ಥಿಕ ಸ್ಥಿತಿ !

BSN Mallya
BSN Mallya

ಆದರೆ ಅಂತಹ ಕೆಟ್ಟ ಸ್ಥಿತಿಯಲ್ಲಿದ್ದ ಪತ್ರಿಕೆಯನ್ನೂ ಅಂದಿನ ಸರ್ಕಾರ ನಿಷೇಧಿಸಿತ್ತೆಂದರೆ ನಿಮಗೆ ಅಚ್ಚರಿಯಾಗಬಹುದು. ೧೯೪೮ ಜುಲೈ ೨೨ರಂದು ಆರಂಭವಾದ ಪತ್ರಿಕೆಯನ್ನು ಅದೇ ವರ್ಷ ಡಿಸೆಂಬರ್ ೨ನೇ ವಾರ ಸರ್ಕಾರ ನಿಷೇಧಿಸಿತು. ಸಂಘದ ಮೇಲಿನ ನಿಷೇಧ ಸರಿಯಲ್ಲವೆಂದು ಸಾರಿz ‘ವಿಕ್ರಮ’ ಪತ್ರಿಕೆ ಎಸಗಿದ ಘೋರ ಅಪರಾಧ ! ಆಳುವವರೇ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಕೋಲೆ ತೊಡಿಸಿದರು. ನ್ಯಾಯದ ಬಾಯಿ ಹೊಲಿದು ಹಾಕಿದರು. ಸರ್ವಾಧಿಕಾರಿ ಕಾಂಗ್ರೆಸ್ ಶಾಸಕರಿಗಂತೂ ಸಂತೃಪ್ತಿ. ಆದರೆ ನ್ಯಾಯ, ಸತ್ಯವನ್ನು ನಿರ್ಭಯವಾಗಿ ಸಾರುವ ತಮ್ಮ ನೆಚ್ಚಿನ ಪತ್ರಿಕೆ ನಿಂತು ಹೋಗಿದ್ದಕ್ಕೆ ಪರಿತಪಿಸಿದ ಮನಸ್ಸುಗಳು ಹಲವು. ಹೇಗಾದರೂ ಮತ್ತೆ ಆ ಪತ್ರಿಕೆ ಆರಂಭವಾಗಬೇಕೆಂಬ ತುಡಿತ. ಅವರೆಲ್ಲ ಕಾಸಿಗೆ ಕಾಸು ಕೂಡಿಸಿದರು. ವಿಶ್ವಾಸದಿಂದ ‘ವಿಕ್ರಮ’ಕ್ಕೆ ಹಣ ನೀಡಿದರು. ‘ಕೇಸರಿ ಪ್ರೆಸ್’ ಎಂಬ ಚಿಕ್ಕದೊಂದು ಮುದ್ರಣಾಲಯ ಕೂಡ ಆರಂಭವಾಯ್ತು. ಆದೇ ವೇಳೆಗೆ ೧೯೪೯ರ ಜುಲೈ ೧೨ರಂದು ಆರೆಸ್ಸೆಸ್ ಮೇಲಿನ ನಿರ್ಬಂಧವನ್ನೂ ಸರ್ಕಾರ ಷರತ್ತಿಲ್ಲದೆ ಹಿಂತೆಗೆದುಕೊಂಡಿತ್ತು. ‘ವಿಕ್ರಮ’ ಕೂಡ ಮತ್ತೆ ‘ಪುನಶ್ಚ ಹರಿಃ ಓಂ’ ಎಂಬಂತೆ ೧೯೪೯ರ ಸೆಪ್ಟೆಂಬರ್‌ನಲ್ಲಿ  ಗ್ರಹಣ ಕಳೆದು ಪ್ರಕಟಣೆ ಆರಂಭಿಸಿತು. ೯ ತಿಂಗಳು ನಿಷೇಧವಿದ್ದರೂ ಪತ್ರಿಕೆ ಮತ್ತೆ ಪ್ರಕಟಣೆ ಆರಂಭಿಸಬೇಕಾದರೆ ಅದರ ಹಿಂದೆ ಒಂದು ದೃಢವಾದ ಧ್ಯೇಯವಿರಲೇಬೇಕು. ಹೌದು, ಅದು ರಾಷ್ಟ್ರ ಜಾಗೃತಿಯ ಧ್ಯೇಯ. ವಿಕ್ರಮ ತನ್ನ ಹೆಸರಿನ ಜೊತೆಗೆ ಉಜ್ವಲ ರಾಷ್ಟ್ರೀಯ ವಾರಪತ್ರಿಕೆ ಎಂಬ ವಾಕ್ಯವನ್ನು ಹೊತ್ತಿರುವುದು ಇದೇ ಕಾರಣಕ್ಕೆ. ಬರಿದೇ ತೆವಲಿಗೆ ಸೇರಿಸಿಕೊಂಡಿದ್ದಲ್ಲ, ಅದೊಂದು ಅರ್ಥಪೂರ್ಣವಾಕ್ಯ.

ದೇಶದ ಸ್ವಾತಂತ್ರ್ಯಕ್ಕಾಗಿ ೧೯೪೭ಕ್ಕೆ ಮೊದಲು ಉಗ್ರ ರಾಷ್ಟ್ರೀಯ ವಾರಪತ್ರಿಕೆಗಳು ನಿರ್ವಹಿಸಿದ ಪಾತ್ರವನ್ನೇ ‘ವಿಕ್ರಮ’ ಸ್ವಾತಂತ್ರ್ಯೋತ್ತರ ಕಾಲದಲ್ಲಿ  ಅದೇ ಸ್ವಾತಂತ್ರ್ಯದ ರPಣೆಗೆ ಮುಂದಾಯಿತು. ತಿಲಕರ ‘ಕೇಸರಿ’ ಪತ್ರಿಕೆ ಜನಮನದಲ್ಲಿ  ಅರಳಿಸಿದ್ದ ದೇಶಭಕ್ತಿಯ ಜಾಗೃತಿಯನ್ನು ‘ವಿಕ್ರಮ’ವೂ ಮಾಡಿತೆಂಬುದು ಅತಿಶಯೋಕ್ತಿಯ ಮಾತಲ್ಲ. ಸ್ವಾತಂತ್ರ್ಯ ಬಂದ ಬಳಿಕ ಕಾಶ್ಮೀರ ನಾಯಕರ ಪ್ರತ್ಯೇಕತಾವಾದಿ ಮನೋಭಾವದ ವಿರುದ್ಧ ‘ವಿಕ್ರಮ’ ಖಂಡಿಸಿತ್ತು. ನೆಹರೂ ನೀತಿಯ ಫಲವಾಗಿ ಕಾಶ್ಮೀರಕ್ಕೇ ಒಬ್ಬ ಪ್ರತ್ಯೇಕ ಪ್ರಧಾನಿ, ಪ್ರತ್ಯೇಕ ರಾಷ್ಟ್ರಧ್ವಜ, ಪ್ರತ್ಯೇಕ ರಾಜ್ಯಾಂಗ ಕಾಯ್ದೆಯನ್ನು  ಬಲವಾಗಿ ಪ್ರತಿಭಟಿಸಿತ್ತು. ಶೇಖ್ ಅಬ್ದುಲ್ಲಾನನ್ನು  ‘ಕಾಶ್ಮೀರದ ಸಿಂಹ’ ಎಂದು ಉಳಿದೆಲ್ಲ ಪತ್ರಿಕೆಗಳು ನಡುಬಗ್ಗಿಸಿ ಪರಾಕು ಹೇಳುತ್ತಿದ್ದಾಗ, ‘ವಿಕ್ರಮ’ ಮಾತ್ರ ಶೇಖ್ ಸಾಹೇಬ ‘ಸಿಂಹದ ತೊಗಲಿನ ನರಿ’  ಎಂದು ದಿಟ್ಟವಾಗಿ ಬರೆಯಿತು. ನೆಹರು ಅವರ ‘ಪಂಚಶೀಲ’ ನೀತಿ ದೇಶಕ್ಕೆ ‘ಪಂಚಶೂಲ’ವಾಗಿ ಪರಿಣಮಿಸಿದೆ ಎಂದು ಸಂಪಾದಕೀಯ ಬರೆಯಿತು. ಚೀನಾದೆದುರು ಭಾರತ ಸೋತಾಗ, ಅಪಮಾನಕ್ಕೆ  ಮುಖ್ಯ ಕಾರಣರಾದ ಆಗಿನ ರPಣಾ ಮಂತ್ರಿ ಕೃಷ್ಣ ಮೆನನ್ ರಾಜೀನಾಮೆಗೆ ಆಗ್ರಹಿಸಿ ‘ವಿಕ್ರಮ’ ಜನಾಭಿಪ್ರಾಯ ರೂಪಿಸಿತ್ತು. ಕೇರಳದ ಮಲ್ಲಪುರಂ ಜಿಲ್ಲೆಯ ರಚನೆಗೆ ಮೊದಲು ವಿರೋಧಿಸಿದ ಪತ್ರಿಕೆ ‘ವಿಕ್ರಮ’. ಪಾಕಿಸ್ಥಾನಿ ಶಕ್ತಿಗಳು ಊರೂರಿನಲ್ಲಿ ಪಾಕ್ ಧ್ವಜ ಹಾರಿಸಿ ಗಲಭೆ ಎಬ್ಬಿಸಲು ಮುಂದಾದಾಗ ಅದನ್ನು  ನಿರ್ಭಿತವಾಗಿ ಖಂಡಿಸಿದ ಹೆಗ್ಗಳಿಕೆಯೂ ‘ವಿಕ್ರಮ’z. ಲಾಲ್‌ಬಹಾದೂರ್ ಶಾಸ್ತ್ರಿ ಪಾಕಿಸ್ಥಾನದ ಮಾತಿಗೆ ಮನಸೋತು ಟಾಷ್ಕೆಂಟ್‌ಗೆಗೆ ಹೋಗಬಾರದೆಂದೂ ‘ವಿಕ್ರಮ’ ಎಚ್ಚರಿಕೆ ನೀಡಿತ್ತು. ಟಾಷ್ಕೆಂಟ್ ಒಪ್ಪಂದದ ಏರ್ಪಾಡು ಕೇವಲ ರಷ್ಯದ ಕುತಂತ್ರ. ಶಾಸ್ತ್ರಿಯವರು ಅಲ್ಲಿಗೆ ಹೋಗದಿರುವುದೇ ಕ್ಷೇಮ ಎಂಬ ಮುನ್ನೆಚ್ಚರಿಕೆಯನ್ನು  ಪತ್ರಿಕೆ ನೀಡಿತ್ತು. ‘ವಿಕ್ರಮ’ದ ಮುನ್ನೆಚ್ಚರಿಕೆ ಸುಳ್ಳಾಗಲಿಲ್ಲ. ಟಾಷ್ಕೆಂಟ್‌ನಿಂದ ಶಾಸ್ತ್ರಿಯವರು ಜೀವಂತವಾಗಿ ಭಾರತಕ್ಕೆ  ಬರಲೇ ಇಲ್ಲ. ಅವರೇನಾದರೂ ಮರಳಿ ಬಂದಿದ್ದರೆ, ಇನ್ನಷ್ಟು  ವರ್ಷ ಪ್ರಧಾನಿ ಆಗಿದ್ದಿದ್ದರೆ ಭಾರತದ ಭವಿಷ್ಯವೇ ಬೇರೆಯಾಗುತ್ತಿತ್ತು. ಆದರೆ ಆ ಮಾತು ಬೇರೆ. ಹೀಗೆ ‘ವಿಕ್ರಮ’ ದೇಶ ಹಿತಕ್ಕೆ ಪೂರಕವಾದ ಹಲವಾರು ಸಂಗತಿಗಳನ್ನು  ದಿಟ್ಟವಾಗಿ ಪ್ರಕಟಿಸಿದೆ. ಭ್ರಷ್ಟಾಚಾರ, ಲಂಚಗುಳಿತನ, ದುಂದುವೆಚ್ಚ, ಕಳ್ಳಸಾಗಾಣಿಕೆ, ಅಸ್ಪೃಶ್ಯತೆ, ಮೂಢನಂಬಿಕೆಗಳನ್ನು  ಪರಿಣಾಮಕಾರಿಯಾಗಿ ಬಯಲಿಗೆಳೆದಿದೆ. ಪತ್ರಿಕಾ ಸ್ವಾತಂತ್ರ್ಯಕ್ಕೆ  ಚ್ಯುತಿ ಬಂದಾಗಲೆಲ್ಲ ‘ವಿಕ್ರಮ’ ಮೇಲೆದ್ದು ಗರ್ಜಿಸಿದೆ. ೧೯೫೩ರಲ್ಲಿ  ದಿಲ್ಲಿಯ ಉರ್ದು ಪತ್ರಿಕೆ ‘ದೈನಿಕ ಪ್ರತಾಪ್’ ಪ್ರಕಟಣೆಗೆ ಸರ್ಕಾರ ಅಡ್ಡಿಪಡಿಸಿದಾಗ ‘ವಿಕ್ರಮ’ ಅದನ್ನು ಬಲವಾಗಿ ವಿರೋಧಿಸಿತ್ತು. ೧೯೭೫-೭೭ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ  ಪತ್ರಿಕಾ ಸ್ವಾತಂತ್ರ್ಯ ಸಂಘಟನಾ ಸ್ವಾತಂತ್ರ್ಯ, ಬರವಣಿಗೆಯ ಸ್ವಾತಂತ್ರ್ಯ ಹನನವಾದಾಗ ಅದನ್ನು ಖಂಡತುಂಡವಾಗಿ ಪ್ರತಿಭಟಿಸಿದ ಪತ್ರಿಕೆ ‘ವಿಕ್ರಮ’ ಮಾತ್ರ. ಅದರ ಸಂಪಾದಕ ಬೆ.ಸು.ನಾ.ಮಲ್ಯರಿಗೆ ೨೧ ತಿಂಗಳ ಕಾರಾಗೃಹವಾಸ. ಆದರೂ ವಿಕ್ರಮ ಜಗ್ಗಲಿಲ್ಲ. ಕುಗ್ಗಲಿಲ್ಲ. ಸರ್ಕಾರದ ಮುಂದೆ ದೀನನಾಗಿ ಮಂಡಿ ಊರಲಿಲ್ಲ. ತುರ್ತು ಪರಿಸ್ಥಿತಿ ತೊಲಗಿದ ಬಳಿಕ ಮತ್ತೆ ಪ್ರಕಟಣೆ ಆರಂಭಿಸಿತ್ತು. ಬೇರಾವುದೇ ಪತ್ರಿಕೆಯಾಗಿದ್ದಲ್ಲಿ ಈ ಘೋರ ಆಘಾತದಿಂದ ತಲೆಯೆತ್ತಲೂ ಸಾಧ್ಯವಾಗುತ್ತಿರಲಿಲ್ಲ. ಜನತೆಯ ಅಭಿಮಾನ, ಅಭಿಮಾನಿಗಳ ಬೆಂಬಲ ಬಗಲಿಗಿದ್ದುದರಿಂದಲೇ ಇದು ಸಾಧ್ಯವಾಗಿದೆ.

ಇನ್ನು ‘ವಿಕ್ರಮ’ ಪತ್ರಿಕೆಯನ್ನು  ಕಟ್ಟಿ ಬೆಳೆಸಿದ ಮಹಾನ್ ಚೈತನ್ಯವೊಂದರ ಸ್ಮರಣೆ ಮಾಡದಿದ್ದರೆ ‘ವಿಕ್ರಮ’ದ ಕುರಿತ ಈ ಲೇಖನ ಅರ್ಥಪೂರ್ಣವಾಗದೆ ಅಪೂರ್ಣವೆಂದೇ ನನ್ನ ಅಭಿಮತ. ‘ವಿಕ್ರಮ’ವನ್ನು  ನೆಟ್ಟಗೆ ನಡೆಸಲು ಸರಿಯಾದ ಒಬ್ಬ ವ್ಯಕ್ತಿಯೇ ಇಲ್ಲದಿದ್ದಾಗ, ಇನ್ನೇನು ಪತ್ರಿಕೆಯ ಪ್ರಕಟಣೆಯನ್ನು  ನಿಲ್ಲಿಸುವುದೇ ಸೂಕ್ತ ಎಂದು ಸಂಘದ ಹಲವು ಪ್ರಮುಖ ಬೈಠಕ್‌ಗಳಲ್ಲಿ  ಎಲ್ಲರೂ ನಿರ್ಧಾರಕ್ಕೆ ಬಂದಿದ್ದಾಗ ಕರ್ನಾಟಕದಲ್ಲಿ ಸಂಘವನ್ನು ಕಟ್ಟಿ  ಬೆಳೆಸಿದ ಯಾದವರಾವ್ ಜೋಶಿಯವರ ಗಮನಕ್ಕೆ ಬಿದ್ದಿದ್ದು ಗದಗದಲ್ಲಿ  ಬ್ಯಾಂಕ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಬೆ.ಸು.ನಾ.ಮಲ್ಯ ಎಂಬ ತರುಣ. ‘ನೀನು ಈ ಪತ್ರಿಕೆಯನ್ನು  ಎತ್ತಿ ನಿಲ್ಲಿಸಬೇಕು. ಸಂಬಳ ಸಾರಿಗೆ ಏನೂ ಪ್ರತಿಫಲವಿಲ್ಲ. ಅದೇನು ಮಾಡುತ್ತೀಯೋ ನೋಡು’-ಇದಿಷ್ಟೇ ಯಾದವರಾವ್‌ಜೀ ಹೇಳಿದ್ದು. ಮಲ್ಯರಿಗೆ ಆ ಬ್ಯಾಂಕ್‌ನಲ್ಲೇ ಮುಂದುವರಿದಿದ್ದರೆ ಉನ್ನತ ಹುದ್ದೆಗಳು, ಆಕರ್ಷಕ ವೇತನ, ಸುಖೀ ಜೀವನ ಕಾದಿದ್ದವು.

ಆದರೆ ಆ ಎಲ್ಲ ಆಕರ್ಷಣೆಗಳನ್ನು ಬದಿಗೆ ಸರಿಸಿ , ಮರೆತು, ‘ವಿಕ್ರಮ’ ಎಂಬ ಬಡಪಾಯಿ ಪತ್ರಿಕೆಯ ಸಾರಥ್ಯವಹಿಸಲು ಬಂದರು ಮಲ್ಯರು. ಹಾಗೆ ಬಂದವರು ಎದುರಿಸಿದ ಕಷ್ಟಕೋಟಲೆಗಳಿಗೆ ಕೊನೆಯೇ ಇಲ್ಲ. ಬ್ಯಾಂಕಿನ ಉದ್ಯೋಗದಲ್ಲಿ ಕೂಡಿಟ್ಟಿದ್ದ ಸಂಬಳದ ಹಣನ್ನೆಲ್ಲ ಪತ್ರಿಕೆಗೆ ಸುರಿದರು. ಕಚೇರಿಯ ಕಸ ಗುಡಿಸಿದರು. ಒಬ್ಬರೇ ಕುಳಿತು ಬರೆದರು. ಅಚ್ಚುಮೊಳೆ ಜೋಡಿಸಿದರು. ಮುದ್ರಣ ಕಾಗದದ ರೀಮನ್ನು ಸೈಕಲ್ ಮೇಲಿಟ್ಟು ತಂದರು. ಮುದ್ರಣವಾದ ಪ್ರತಿಗಳ ಕಟ್ಟನ್ನು ಅಂಚೆಗೆ, ರೈಲಿಗೆ ತಾವೇ ಕೊಂಡೊಯ್ದರು. ಇಷ್ಟೆಲ್ಲ ಕಷ್ಟ ಕೋಟಲೆಗಳ ನಡುವೆಯೂ ಕಚೇರಿಗೆ ಬಂದ ಅಭಿಮಾನಿಗಳಿಗೆ ಬೈಟೂ ಕಾಫಿ ನೀಡಿ ಅವರೊಡನೆ ಹರಟುತ್ತ , ಸಾಮಾನ್ಯರಿಂದ ಹಿಡಿದು ಪತ್ರಿಕಾ ಮಿತ್ರರು , ರಾಜಕಾರಣಿಗಳು, ಸಚಿವರು, ಮುಖ್ಯಮಂತ್ರಿಗಳವರೆಗೆ ಎಲ್ಲ ಸ್ತರದವರೊಡನೆ ಸ್ನೇಹದ , ಬಾಂಧವ್ಯದ ಭದ್ರ ಬೆಸುಗೆ ಹೊಸೆದರು. ಬರೆಯಬಲ್ಲ ಆಸಕ್ತಿ ಇರುವ ಯುವಕರನ್ನು ಹುರಿದುಂಬಿಸಿ ಅವರಿಗೆ ಸುದ್ದಿ, ವರದಿ, ಲೇಖನಗಳನ್ನು ಹೇಗೆ ಬರೆಯಬೇಕೆಂಬ ಕಸಬುದಾರಿಕೆ ಕಲಿಸಿಕೊಟ್ಟರು. ಮಲ್ಯರಿಂದ ಪತ್ರಿಕಾ ಬರವಣಿಗೆ ಕಲಿತ ನೂರಾರು ಮಂದಿ ಇಂದು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ , ವಾಹಿನಿಗಳಲ್ಲಿ ಉತ್ತಮ ಹುದ್ದೆಗಳಲ್ಲಿದ್ದಾರೆ ಮಲ್ಯರು ವಿಕ್ರಮವನ್ನು ಕಟ್ಟಿ ಬೆಳೆಸಿದ್ದಲ್ಲದೆ ಹಲವರನ್ನೂ ಬೆಳೆಸಿದರು.

ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್, ಗುಂಡೂರಾವ್, ರಾಮಕೃಷ್ಣ ಹೆಗಡೆ, ದೇವರಾಜ ಅರಸು ಹಾಗೂ ಇತರ ಸಚಿವರ ಜತೆ ಮಲ್ಯರದು ಘನಿಷ್ಠ ಸಂಬಂಧ. ಜೊತೆಗೆ ಪತ್ರಿಕಾ ಅಕಾಡೆಮಿ ಸದಸ್ಯರು. ಪತ್ರಿಕಾ ಮಾನ್ಯತಾ ಸಮಿತಿ ಸದಸ್ಯರೂ ಆಗಿದ್ದರು. ಅಲ್ಲದೆ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯPರೂ ಆಗಿದ್ದ ಮಲ್ಯರು ಆಗಿನ ಕಾಲದಲ್ಲಿ ಅತ್ಯಂತ ಪ್ರಭಾವೀ ಪತ್ರಕರ್ತರೇ ಆಗಿದ್ದರು.  ಮಲ್ಯರು ಮನಸ್ಸು ಮಾಡಿದ್ದರೆ ಸ್ವಂತಕ್ಕೆ ಸರ್ಕಾರದಿಂದ ಒಂದರೆಡು ಜಿ ಕೆಟಗರಿ ಸೈಟುಗಳು ಹಾಗೂ ಇನ್ನಿತರ ಸವಲತ್ತುಗಳನ್ನು ಪಡೆಯುವುದು ಏನೇನೂ ಕಷ್ಟವಿರಲಿಲ್ಲ. ಈಗ ಒಬ್ಬ ಸಾಮಾನ್ಯ ವರದಿಗಾರನಾಗಿದ್ದರೆ ಸಾಕು, ಆತ ಏನೇನೆಲ್ಲ ಅಪಸವ್ಯ , ಬಾನಗಡಿ ನಡೆಸುತ್ತಾನೆಂಬುದು ಚಿದಂಬರ ರಹಸ್ಯವಾಗಿಲ್ಲ. ಮಲ್ಯರು ಮಾತ್ರ ತಮಗಿರುವ ಈ ಬಗೆಯ ಪ್ರಭಾವವನ್ನು ಸ್ವಂತಕ್ಕೆ ಬಳಸಿಕೊಳ್ಳಲಿಲ್ಲ. ಹೆಚ್ಚೆಂದರೆ ‘ವಿಕ್ರಮ’ ಪತ್ರಿಕೆಯ ಬೆಳವಣಿಗೆಗೆ ಅವೆಲ್ಲವನ್ನು ಬಳಸಿಕೊಂಡರು. ಚಾಮರಾಜಪೇಟೆಯ ಅವರ ಕೋಣೆಯಲ್ಲಿದ್ದದ್ದು ಒಂದೆರಡು ಚಾಪೆ, ಜಮಖಾನ, ಬೆಡ್‌ಶೀಟ್, ಒಂದೆರಡು ಜೊತೆ ಧೋತಿ , ಜುಬ್ಬಾ ಒಂದಷ್ಟು ಪುಸ್ತಕಗಳ ರಾಶಿ. ಅವು ಕೂಡ ನೆಲದ ಮೇಲೇಯೇ ಇರುತ್ತಿತ್ತು. ವಿಕ್ರಮದಿಂದ ನಿವೃತ್ತಿ ಪಡೆದ ಬಳಿಕ ಅವರು ಸೀದಾ ನಡೆದದ್ದು ಕಾರ್ಕಳದಲ್ಲಿರುವ ಅವರ ತಮ್ಮನ  ಮನೆಗೆ. ಸ್ವಾಭಿಮಾನವೆಂದರೆ ಅದು. ‘ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ’ ಇದೇ ಮಲ್ಯರ ಬದುಕಿನ ಮೂಲಮಂತ್ರ. ಯಾರ ಮುಂದೆಯೂ ಕೈಚಾಚಲಿಲ್ಲ. ಕೊನೆಯವರೆಗೂ ಬದುಕಿದ್ದು ಧ್ಯೇಯವಾದಿಯಾಗಿ, ಸ್ವಾಭಿಮಾನಿಯಾಗಿ. ಇಂತಹ ಒಬ್ಬ ಸಂಪಾದಕ ಈಗ ದುರ್ಬೀನು ಹಾಕಿ ಹುಡುಕಿದರೂ ಸಿಗಲಾರರು.

ಇಂತಹ ಒಬ್ಬ ಕನ್ನಡ ಪತ್ರಿಕಾ ರಂಗದ ಭೀಷ್ಮನಿಗೆ ಪ್ರತಿಷ್ಠಿತ ಟಿಎಸ್‌ಆರ್ ಪ್ರಶಸ್ತಿ ಖಂಡಿತ ದೊರೆತಿರಬಹುದು ಎಂದು ನೀವು ಭಾವಿಸಿದ್ದರೆ ತಪ್ಪು. ಎಂತೆಂತಹ ತಗಡು ಪತ್ರಕರ್ತರಿಗೆಲ್ಲ ಟಿಎಸ್‌ಆರ್ ಪ್ರಶಸ್ತಿ ಪ್ರಾಪ್ತವಾದರೂ ಮಲ್ಯರಿಗೆ ಮಾತ್ರ ಅದು ಒಲಿಯಲಿಲ್ಲ. ಪತ್ರಿಕಾ ಸ್ವಾತಂತ್ರ್ಯ ಎತ್ತಿ ಹಿಡಿದ , ಪ್ರಜಾತಂತ್ರದ ಉಳಿವಿಗಾಗಿ ೨೧ ತಿಂಗಳು ಸೆರೆವಾಸ ಅನುಭವಿಸಿದ ಮಲ್ಯರು ಸರ್ಕಾರದ ಹಾಗೂ ವಾಮಪಂಥೀಯ ಚಿಂತನೆಯ ಪತ್ರರ್ತರ ದೃಷ್ಟಿಯಲ್ಲಿ ಒಬ್ಬ ‘ಕೋಮುವಾದಿ’ ಎನಿಸಿದ್ದರೆಂದು ಕಾಣುತ್ತದೆ. ಟಿಎಸ್‌ಆರ್  ಪ್ರಶಸ್ತಿ ದೊರೆಯದಿದ್ದರೂ ಸೆರೆವಾಸದ ಪ್ರಶಸ್ತಿಯನ್ನಂತೂ ಸರ್ಕಾರ ಧಾರಾಳವಾಗಿ ಕರುಣಿಸಿತ್ತು.

ಆ ಭಾಗ್ಯ ಎಷ್ಟು ಜನ ಪತ್ರಕರ್ತರಿಗೆ ದೊರಕೀತು! ಮೊನ್ನೆ ಜುಲೈ ೭ರಂದು ‘ವಿಕ್ರಮ’ ನೂತನ ಕಟ್ಟಡಕ್ಕೆ ಪದಾರ್ಪಣೆ ಮಾಡಿದ ಸುಂದರ ಸಮಾರಂಭದ ಒಂದPರ ವರದಿಯೂ -ಹೊಸದಿಗಂತ ಹೊರತುಪಡಿಸಿ- ಯಾವ ಪತ್ರಿಕೆಯಲ್ಲೂ ಪ್ರಕಟವಾಗಲಿಲ್ಲ. ಮಾಧ್ಯಮ ಮಂದಿಯ ದೃಷ್ಟಿಯಲ್ಲಿ ವಿಕ್ರಮ ಈಗಲೂ ‘ಕೋಮುವಾದಿ’ ಇರಬಹುದೇನೋ!

 ಅದೇನಾದರೂ ಇರಲಿ, ‘ವಿಕ್ರಮ’ ತನಗಾಗಿ ಎಂದೂ ಪ್ರಚಾರ ಬಯಸಿದ್ದಿಲ್ಲ. ಪ್ರಚಾರ ಪಡೆಯುವ ಇರಾದೆಯೂ ಅದಕ್ಕಿಲ್ಲ. ರಾಷ್ಟ್ರೀಯ ಜಾಗೃತಿಯ ಕಾರ‍್ಯವನ್ನು  ಮಾತ್ರ ನಿರಂತರ ಅದು ಮುಂದುವರಿಸಲಿದೆ. ಅಸತ್ಯ, ಅನ್ಯಾಯಗಳ ವಿರುದ್ಧ ಅನವರತ ಗರ್ಜಿಸಲಿದೆ. ಆ ಗರ್ಜನೆಯನ್ನು ಯಾರೂ ನಿಲ್ಲಿಸಲಾರರು.

Leave a Reply

Your email address will not be published.

This site uses Akismet to reduce spam. Learn how your comment data is processed.