ನೇರ ನೋಟ: ದು.ಗು.ಕ್ಷ್ಮಣ

ನಾನು ಹೇಗಿರುವೆ? ಜಗತ್ತಿಗಾಗಿ ನಾನೋ ಅಥವಾ ನನಗಾಗಿ ಜಗತ್ತೀ! ಜಗತ್ತಿಗಾಗಿ ನಾನು ಎಂಬ ನಿರ್ಧಾರ ಹೊಮ್ಮಿದರೆ ಕಮಿಷನ್‌ನಿಂದ ಬದುಕುವುದಿಲ್ಲ ಎಂಬ ಅಧಿಕಾರಿಗಳು, ಕಿಕ್‌ಬ್ಯಾಂಕ್‌ನಿಂದ ರಾಜಕಾರಣ ಮಾಡುವುದಿಲ್ಲ ಎಂಬ ರಾಜಕಾರಣಿಗಳು, ಅಪರಾಧಿಗಳನ್ನು, ಭ್ರಷ್ಟರನ್ನು, ಅನೀತಿವಂತರನ್ನು ಆಶೀರ್ವದಿಸುವುದಿಲ್ಲ , ಸರ್ಕಾರದ ಕೃಪಾಕಟಾಕ್ಷಕ್ಕೆ ಕೈಚಾಚುವುದಿಲ್ಲ ಎನ್ನುವ ಮಠಾಧೀಶರು, ಲಂಚ ಕೊಡದೆ ತನ್ನ ಸರದಿಗಾಗಿ ಕಾದು ಅನಂತರವೇ ತನ್ನ ಕೆಲಸ ಪೂರೈಸಿಕೊಳ್ಳುವ ಜನಸಾಮಾನ್ಯರು ಹೆಚ್ಚಾಗಬಹುದು.

ಬಾರಿಯೂ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಮಠಮಂದಿರಗಳಿಗೆ ಧಾರಾಳವಾಗಿ ಕೋಟಿ ಕೋಟಿ ಅನುದಾನವನ್ನು ಮಂಜೂರು ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗಳು, ಚರ್ಚೆಗಳು ನಡೆದಿವೆ. ಯಡಿಯೂರಪ್ಪನವರ ಮಠಾಧಿಪತಿಗಳನ್ನು ಓಲೈಸುವ ತಂತ್ರವನ್ನು ಶೆಟ್ಟರ್‌ ಅವರು ಪಾಲಿಸಿದ್ದಾರೆ ಎಂಬ ಟೀಕೆಯೂ ವ್ಯಕ್ತವಾಗಿದೆ. ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಮಠಗಳಿಗೆ ನೀಡಿರುವ ಅನುದಾನ ಒಟ್ಟು 155 ಕೋಟಿ ರೂಪಾಯಿ ಕಡಿಮೆ ಮೊತ್ತದ್ದೇನಲ್ಲ. ಬೆಂಗಳೂರಿನ ಕೆಂಗೇರಿಯಲ್ಲಿ ಬಸವ ಸಮಿತಿಯ ಆಧ್ಯಾತ್ಮ ಸಂಸತ್‌ಭವನ ನಿರ್ಮಾಣಕ್ಕೆ 5 ಕೋಟಿ, ತುಮಕೂರಿನ ಸಿದ್ಧಗಂಗಾ ಮಠಕ್ಕೆ 5 ಕೋಟಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಯಾತ್ರಿ ನಿವಾಸಕ್ಕೆ 2 ಕೋಟಿ, ಬಾಳೆಹೊನ್ನೂರು ಮಠದ ಸುವರ್ಣಭವನಕ್ಕೆ 2 ಕೋಟಿ, ಗುಲ್ಬರ್ಗದ ಸಿದ್ಧಾರ್ಥ ವಿಹಾರ ಅಭಿವೃದ್ಧಿಗೆ 5 ಕೋಟಿ… ಹೀಗೆ ವಿವಿಧ ಮಠ ಮತ್ತು ಧಾರ್ಮಿಕ ಸಂಸ್ಥೆಗಳು, ಚರ್ಚ್‌ಗಳಿಗೆ ಅನುದಾನವನ್ನು ಮೀಸಲಾಗಿಡಲಾಗಿದೆ.

ಮಠಮಂದಿರಗಳಿಗೆ ಬಜೆಟ್‌ನಲ್ಲಿ ಘೋಷಿಸಲಾಗಿರುವ ಅನುದಾನ ವಿವರಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಸಮುದಾಯಕ್ಕೆ ಸೇರಿದ ಮಠಗಳಿಗೇ ಹೆಚ್ಚಿನ ಅನುದಾನ ನೀಡಲು ಆದ್ಯತೆ ಕೊಡಲಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಒಂದೇ ಸಮುದಾಯಕ್ಕೆ ಸರ್ಕಾರ ಅನುದಾನ ನೀಡಿದೆ ಎಂಬ ಆರೋಪ ಬರದಿರಲಿ ಎಂಬ ಕಾರಣಕ್ಕೆ ಅಲ್ಲೊಂದು ಇಲ್ಲೊಂದು ಇತರೆ ಸಮುದಾಯಕ್ಕೆ ಸೇರಿದ ಮಠಗಳನ್ನೂ ಸೇರ್ಪಡೆಗೊಳಿಸಲಾಗಿದೆ. ಕೇವಲ ಹಿಂದೂ ಮಠಮಂದಿರಗಳಲ್ಲದೆ ಮೈಸೂರಿನ ಸೈಂಟ್‌ ಫಿಲೋಮಿನಾ ಚರ್ಚ್‌ ಜೀರ್ಣೋದ್ಧಾರಕ್ಕೆ 2 ಕೋಟಿ, ಹುಬ್ಬಳ್ಳಿಯ ಕ್ರಿಶ್ಚಿಯನ್‌ ಫೆಲೋಶಿಪ್‌ ಚರ್ಚ್‌ ಅಭಿವೃದ್ಧಿಗೆ 2 ಕೋಟಿ ಹಣವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.ಒಂದೆರಡು ಬ್ರಾಹ್ಮಣ ಮಠಗಳಿಗೂ ಅನುದಾನ ಘೋಷಿಸುವ ‘ಸೌಜನ್ಯ’ವನ್ನು ಸರ್ಕಾರ ತೋರಿದೆ. ಹಿಂದುಳಿದ ಸಮುದಾಯಗಳಿಗೆ ಸೇರಿದ ವಿವಿಧ ಮಠಗಳು, ಸಂಸ್ಥೆಗಳು ನಡೆಸುವ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಒಟ್ಟು 50 ಕೋಟಿ ಘೋಷಿಸಲಾಗಿದೆ. ಒಟ್ಟಾರೆ ಎಲ್ಲಾ ಸಮುದಾಯಗಳಿಗೆ ಸೇರಿದ ಧಾರ್ಮಿಕ ಸಂಸ್ಥೆಗಳನ್ನು ಓಲೈಸುವ ತಂತ್ರ ಇದೆಂಬುದು ಮೇಲ್ನೀಟಕ್ಕೆ ಯಾರಿಗಾದರೂ ಸ್ಪಷ್ಟವಾಗುವ ಸಂಗತಿ.

ಸರ್ಕಾರದ ‘ಭಿಕ್ಷೆ’ ಬೇಕೆ?

ಮಠಮಂದಿರಗಳಿಗೆ ಬಜೆಟ್‌ನಲ್ಲಿ ಅನುದಾನ ಘೋಷಣೆಯಾದಾಗ ವ್ಯಕ್ತವಾದ ಟೀಕೆಗಳಿಗೆ ಉತ್ತರಿಸುತ್ತಾ ಮುಖ್ಯಮಂತ್ರಿ ಶೆಟ್ಟರ್‌ ‘ಸರ್ಕಾರ ಮಾಡುವ ಕೆಲಸಗಳನ್ನು ಮಠಗಳು ಮಾಡುತ್ತಿವೆ. ಆದ್ದರಿಂದ ಮಠಗಳಿಗೆ ಅನುದಾನ ಕೊಡುವುದು ತಪ್ಪೇನೂ ಅಲ್ಲ. ಈ ಸಂಬಂಧದ ಯಾವ ಟೀಕೆಗೂ ಸೊಪ್ಪು ಹಾಕುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ಅವರ ಈ ಪ್ರತಿಕ್ರಿಯೆಯಲ್ಲಿ ಸತ್ಯಾಂಶಗಳೇನೋ ಇವೆ. ಸರ್ಕಾರವೊಂದು ಮಾಡಬೇಕಿದ್ದ ಶಿಕ್ಷಣ ವ್ಯವಸ್ಥೆ , ದಾಸೋಹದ ಕೆಲಸವನ್ನು ಹಲವು ಮಠಗಳು ಮಾಡುತ್ತಿವೆ. ಶಿಕ್ಷಣ, ಸಾಮಾಜಿಕ ಕಲ್ಯಾಣ, ಸಮಾನತೆ, ಜನಾಭಿವೃದ್ಧಿಯ ಜವಾಬ್ದಾರಿಗಳನ್ನು ಮಠಗಳೇ ಅಚ್ಚುಕಟ್ಟಾಗಿ ನಿರ್ವಹಿಸಿರುವ ನಿದರ್ಶನಗಳು ನಮ್ಮ ಮುಂದಿವೆ. ತುಮಕೂರಿನ ಸಿದ್ಧಗಂಗಾ, ಮೈಸೂರಿನ ಸುತ್ತೂರು ಮಠ, ಮಂಡ್ಯದ ಆದಿಚುಂಚನಗಿರಿ ಮಠ ಮೊದಲಾದ ಮಠಗಳು ಅನ್ನ ದಾಸೋಹ, ಅಕ್ಷರ ದಾಸೋಹ ಕೈಂಕರ್ಯವನ್ನು ಸಾವಿರಾರು ವಿದ್ಯಾರ್ಥಿಗಳು, ಜನರಿಗೆ ನಿರಂತರವಾಗಿ ಒದಗಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಿದ್ಧಗಂಗಾ ಕ್ಷೇತ್ರದಲ್ಲಿ ಉಚಿತವಾಗಿ ಮುದ್ದೆ ತಿಂದು, ಶಿಕ್ಷಣ ಪಡೆದು ಅನಂತರ ಡಿಸಿ, ಎಸ್‌ಪಿ, ಐಎಎಸ್‌ನಂತಹ ಉನ್ನತ ಅಧಿಕಾರದ ಹುದ್ದೆಗಳಿಗೇರಿದವರ ಸಂಖ್ಯೆ ಸಾಕಷ್ಟಿದೆ. ಉನ್ನತ ಅಧಿಕಾರಕ್ಕೇರಿದ ಬಳಿಕವೂ ಅಂಥವರು ಸಿದ್ಧಗಂಗಾ ಮಠದ ಋಣವನ್ನು ಸ್ಮರಿಸಿದ ನಿದರ್ಶನಗಳೂ ಇವೆ. ಆದರೆ ಇಲ್ಲಿ ಉದ್ಭವಿಸುವ ಪ್ರಶ್ನೆಯೇ ಬೇರೆ. ಸರ್ಕಾರವೊಂದು ಮಾಡಬೇಕಿದ್ದ ಶಿಕ್ಷಣ, ದಾಸೋಹದ ಕೆಲಸವನ್ನು ಮಠಗಳು ಮಾಡುತ್ತಿವೆ ಎಂದಾದಲ್ಲಿ ಆ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲವೆಂದರ್ಥವೆ? ಇಷ್ಟಕ್ಕೂ ಮಠಮಂದಿರಗಳು ಸರ್ಕಾರದ ‘ಭಿಕ್ಷೆ’ಯನ್ನವಲಂಬಿಸಿ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವುದು ಎಷ್ಟರಮಟ್ಟಿಗೆ ಸಮಂಜಸ? ಒಮ್ಮೆ ಸರ್ಕಾರ ನೀಡುವ ಅನುದಾನದ ಮುಲಾಜಿಗೆ ಒಳಗಾದರೆ ಅನಂತರ ಸರ್ಕಾರ ಹೇಳುವುದೆಲ್ಲದಕ್ಕೂ ಅನುದಾನ ಪಡೆದ ಮಠ ತಲೆಬಾಗಲೇಬೇಕಾಗುತ್ತದಲ್ಲವೆ? ಆಗ ಅಂತಹ ಮಠಗಳ ಸ್ವಾಭಿಮಾನ, ನೈತಿಕತೆಯ ಗತಿ ಏನಾಗಬೇಕು? ಈ ಪ್ರಶ್ನೆಯನ್ನು ಬಹುಶಃ ಸರ್ಕಾರಿ ಅನುದಾನ ಪಡೆಯುವ ಮಠಗಳು ಅಷ್ಟಾಗಿ ಗಂಭೀರ ರೀತಿಯಲ್ಲಿ ಆಲೋಚಿಸಿಲ್ಲವೆಂದೇ ಹೇಳಬೇಕಾಗುತ್ತದೆ.

ಸಾ್ವಭಿಮಾನಿ ಮಠಗಳು

ಮಠಗಳಿಗೆ ಅನುದಾನ ನೀಡಿಕೆಯ ಪ್ರಸಂಗದಲ್ಲಿ ಭಾಗಿಯಾಗಿರುವ ಮಠಗಳ ಜೊತೆಗೆ ಗುರುತಿಸಿಕೊಳ್ಳಲು ಇಚ್ಛಿಸದ ಕೆಲವು ಮಠಗಳಾದರೂ ರಾಜ್ಯದಲ್ಲಿವೆ ಎಂಬುದೇ ಸಮಾಧಾನದ ಸಂಗತಿ. ಮಠಗಳಿಗೆ ನೀಡುವ ಅನುದಾನವೆಂದರೆ ಅದು ಸಾರ್ವಜನಿಕರ ತೆರಿಗೆ ಹಣದ ದುರುಪಯೋಗ. ಹಾಗಾಗಿ ಅಂತಹ ಅನುದಾನ ತಮ್ಮ ಮಠಕ್ಕೆ ಬೇಕಿಲ್ಲವೆಂದು ಅವು ತಿರಸ್ಕರಿಸಿರುವುದು ಆ ಮಠಗಳ ಮೇಲೆ ಜನರಲ್ಲಿ ಇನ್ನಷ್ಟು ಗೌರವ, ಅಭಿಮಾನಗಳನ್ನು ಹುಟ್ಟಿಸಿರುವುದು ಸುಳ್ಳಲ್ಲ.

ವಾಸ್ತವವಾಗಿ ಮಠಗಳಿಗೆ ಅನುದಾನ ನೀಡುವುದರಿಂದ ಹಿಂದೂ ಸಮಾಜದ ಉದ್ಧಾರ ಸಾಧ್ಯವಾಗುವುದಿಲ್ಲ. ಅನುದಾನದಿಂದ ಯಾವ ಸಮಾಜದ ಉದ್ಧಾರವೂ ಅಸಾಧ್ಯ. ಆದರೆ ಮಠಗಳಿಗೆ ಅನುದಾನ ನೀಡಲೇಬಾರದು ಎನ್ನುವಂತಿಲ್ಲ. ಯಾವುದಾದರೊಂದು ಮಠ ತುಂಬ ದುಃಸ್ಥಿತಿಯಲ್ಲಿದ್ದರೂ ಉಪಯುಕ್ತ ಸಮಾಜ ಸುಧಾರಣೆಯಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರೆ ಅದಕ್ಕೆ ನೀಡುವ ಅನುದಾನ ಸರ್ಕಾರದ ‘ಭಿಕ್ಷೆ’ಯೆನಿಸಿಕೊಳ್ಳುವುದಿಲ್ಲ. ಆದರೆ ಆರ್ಥಿಕವಾಗಿ ದುಃಸ್ಥಿತಿಯಲ್ಲಿದ್ದೂ ಉತ್ತಮ ಕಾರ್ಯನಿರ್ವಹಿಸುವ ಮಠಗಳು ಯಾವುದೇ ಸರ್ಕಾರಿ ಅನುದಾನಕ್ಕೆ ಅಂಗಲಾಚುವುದಿಲ್ಲ. ಪ್ರಚಾರವನ್ನೇ ಬಯಸದ, ತಮ್ಮ ಪಾಡಿಗೆ ಜನರಿಗೆ ಆಧ್ಯಾತ್ಮಿಕ ಬೋಧನೆ, ಮಾರ್ಗದರ್ಶನ ಮಾಡುತ್ತಾ ಇರುವ ಮಠಗಳೂ ರಾಜ್ಯದಲ್ಲಿವೆ. ಸರ್ಕಾರ ಮಠಗಳಿಗೆ ನೀಡುವ ಅನುದಾನಕ್ಕೆ ಮಾನದಂಡವಾದರೂ ಏನು ಎಂಬುದು ಸಾರ್ವಜನಿಕರಿಗೆ ತಿಳಿದಿರಬೇಕು. ಏಕೆಂದರೆ ಸರ್ಕಾರ ನೀಡುತ್ತಿರುವ ಅನುದಾನ ಸಾರ್ವಜನಿಕರ ಹಣ ಆಗಿರುವುದರಿಂದ ಅದರ ಉಪಯೋಗ ಯಾವ ರೀತಿಯಲ್ಲಾಗಿದೆ ಎಂದು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗಿದೆ. ಆಯವ್ಯಯ ಮಂಡನೆಯಲ್ಲಿ ಮಠಗಳಿಗೆ ಅನುದಾನ ನೀಡಿಕೆ ಸೇರಿಸುವ ಮುನ್ನ ಆಯಾ ಮಠಮಂದಿರಗಳು ಕೈಗೊಳ್ಳುವ ಸಾರ್ವಜನಿಕ ಕಾಮಗಾರಿಗಳ ಪ್ರಾಜೆಕ್ಟ್ ರಿಪೋರ್ಟ್‌ಅನ್ನು ಸಲ್ಲಿಸಿರಬೇಕು. ಇದಕ್ಕಾಗಿ ನೇಮಿಸಿದ ಸದನ ಸಮಿತಿ ಅನುಮೋದಿಸಿದ ನಂತರವಷ್ಟೇ ಬಜೆಟ್‌ನಲ್ಲಿ ಅಂತಹ ಮಠಗಳ ಹೆಸರನ್ನು ಸೇರಿಸಬೇಕು.

ಪಾರದರ್ಶಕತೆಯ ಕೊರತೆ

ಆದರೆ ಇಂತಹದೊಂದು ಪಾರದರ್ಶಕತೆ ಕಂಡುಬರುತ್ತಿಲ್ಲವೆಂಬುದು ವಿಷಾದದ ಸಂಗತಿ. ದೊಡ್ಡ ದೊಡ್ಡ ಬಲಾಢ್ಯ ಮಠಗಳು ತಮಗೆ ಮಂಜೂರಾದ ಹಣವನ್ನು ಬೇಗನೆ ಪಡೆದುಕೊಳ್ಳುತ್ತವೆ. ಏಕೆಂದರೆ ಅಂತಹ ಮಠಗಳಿಗೆ ಕಾಮಗಾರಿಗಳನ್ನು ಶೀಘ್ರವೇ ನಿರ್ವಹಿಸಲು ಅಲ್ಲಿನ ಜಿಲಾ್ಲಧಿಕಾರಿ, ಪೊಲೀಸ್‌ ಅಧಿಕಾರಿಗಳು ತಾವಾಗಿಯೇ ಬರುತ್ತಾರೆ ಅಥವಾ ಮಠದ ವ್ಯವಸ್ಥಾಪಕರು ತಮ್ಮ ಪ್ರಭಾವ ಬೀರಿ ಕಾಮಗಾರಿಗಳಿಗೆ ಬೇಗನೆ ಹಣವನ್ನು ಮಂಜೂರು ಮಾಡಿಸಿಕೊಳ್ಳುತ್ತಾರೆ. ಚಿಕ್ಕಪುಟ್ಟ ಮಠಗಳಿಗೆ ಇಂತಹ ಸಾಧ್ಯತೆಗಳಿರುವುದಿಲ್ಲ. ಸರ್ಕಾರದಿಂದ ಅನುದಾನವನ್ನು ಹೇಗೆ ಬಿಡುಗಡೆ ಮಾಡಿಸಿಕೊಳ್ಳಬೇಕು, ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು, ಅನುದಾನದ ಹಣವನ್ನು ಎಂತಹ ಸಾರ್ವಜನಿಕ ಕಾರ್ಯಕ್ಕೆ ಬಳಸಬೇಕು ಮುಂತಾದ ವಿವರಗಳೇ ಚಿಕ್ಕಪುಟ್ಟ ಮಠಗಳ ಮಠಾಧಿಪತಿಗಳಿಗೆ ಗೊತ್ತಿರುವುದಿಲ್ಲ. ಹೀಗಾಗಿ ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬ ಗಾದೆಯಂತೆ ಸರ್ಕಾರದಿಂದ ಅನುದಾನ ದೊರೆತಿದ್ದರೂ ಅದನ್ನು ಸಂಬಂಧಿಸಿದ ಅಧಿಕಾರಿಗಳು ಬಿಡುಗಡೆ ಮಾಡದೆ ಸತಾಯಿಸಿ, ಕೊನೆಗೆ ಆ ಅನುದಾನದ ಹಣ ಮಠಮಂದಿರಕ್ಕೆ ತಲುಪುವುದೇ ಇಲ್ಲ. ಮಠಕ್ಕೆ ಸಂಬಂಧಿಸಿ ಎಂತಹ ಉಪಯುಕ್ತ ಸಾರ್ವಜನಿಕ ಕಾರ್ಯ ಮಾಡಬಹುದೆಂದು ಸೂಕ್ತ ಸಲಹೆ ನೀಡುವವರು ಇಂತಹ ಚಿಕ್ಕಪುಟ್ಟ ಮಠಗಳಿಗೆ ಇರುವುದಿಲ್ಲವೆನ್ನುವುದೂ ಸುಳ್ಳಲ್ಲ.

ರಾಜ್ಯದಲ್ಲಿ ಕಳೆದ 5 ವರ್ಷಗಳ ಬಿಜೆಪಿ ಆಡಳಿತದಲ್ಲಿ ಒಟ್ಟು 855 ಕೋಟಿ ರೂ. ಅನುದಾನ ಮಠಮಂದಿರಗಳಿಗೆ ನೀಡಲಾಗಿದೆ. ಆದರೆ ಅನುದಾನ ಪಡೆದ ಮಠಗಳು ಈ ಹಣವನ್ನು ಯಾವುದಕ್ಕೆ ಬಳಸಿಕೊಂಡಿವೆ, ಅದರಿಂದ ಸಾರ್ವಜನಿಕರಿಗೆ ಯಾವ ಪ್ರಯೋಜನವಾಗಿದೆ ಅಥವಾ ಧಾರ್ಮಿಕವಾಗಿ ಅದು ಉಪಯುಕ್ತವಾಗಿದೆಯೇ ಎಂಬ ವಿವರಗಳಂತೂ ಸಾರ್ವಜನಿಕರಿಗೆ ಗೊತ್ತಾಗಿಲ್ಲ. ಹೀಗಾಗಿ ಮಠಗಳಿಗೆ ಅನುದಾನದ ವಿಷಯದಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂಬ ಟೀಕೆ ಇನ್ನಷ್ಟು ಹೆಚ್ಚು ಗಟ್ಟಿ ನೆಲೆಯನ್ನು ಪಡೆದುಕೊಳ್ಳುವಂತಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನಗಳ ಪೈಕಿ ಬೆಳಗಾವಿಯಲ್ಲಿ ವೀರಶೈವ ಸಭಾಭವನ ನಿರ್ಮಾಣಕ್ಕೆ 1 ಕೋಟಿ ಅನುದಾನವೂ ಒಂದು. ನಮಗೆಲ್ಲರಿಗೂ ಗೊತ್ತಿರುವಂತೆ ರಾಜ್ಯದಲ್ಲಿ ವೀರಶೈವ ಸಮುದಾಯವೆನ್ನುವುದು ಒಂದು ಬಲಾಢ್ಯ ಕೋಮು. ಆ ಸಮುದಾಯದ ಗಣ್ಯರು ಮನಸ್ಸು ಮಾಡಿದರೆ ಬೆಳಗಾವಿಯಲ್ಲಿ ಒಂದು ಸುಸಜ್ಜಿತ ಸಭಾಭವನ ನಿರ್ಮಿಸುವುದು ಕಷ್ಟದ ಕೆಲಸವೇನಲ್ಲ. ಬೆಳಗಾವಿಯಲ್ಲಿರುವ ಪ್ರಭಾವೀ ಸಚಿವ ಕತ್ತಿಯವರೊಬ್ಬರೇ ಅಂತಹ ಸುಸಜ್ಜಿತ ವೀರಶೈವ ಸಭಾಭವನವನ್ನು ಸ್ವಂತದ ವೆಚ್ಚದಲ್ಲಿ ನಿರ್ಮಿಸಿಕೊಡಬಹುದು ಅಥವಾ ಪರಿಚಿತ ಗಣ್ಯರಿಂದ ಹಣ ಸಂಗ್ರಹಿಸಿಯೂ ಅಂತಹ ಸಭಾಭವನವನ್ನು ನಿರ್ಮಿಸಿಕೊಡುವ ಶಕ್ತಿ ಅವರಿಗಿದೆ. ಹೀಗಿರುವಾಗ ಅಲ್ಲಿ ವೀರಶೈವ ಸಭಾಭವನ ನಿರ್ಮಾಣಕ್ಕೆ 1 ಕೋಟಿ ಹಣವನ್ನು ಸರ್ಕಾರವೇಕೆ ವೆಚ್ಚ ಮಾಡಬೇಕು? ವೀರಶೈವರ ಸ್ವಾಭಿಮಾನಕ್ಕೆ ಮುಜುಗರವಾಗುವ ಸಂಗತಿ ಇದು ಎಂದು ಪ್ರಜ್ಞಾವಂತ ವೀರಶೈವರಿಗೆ ಅನಿಸುವುದಿಲ್ಲವೆ? ಹರಿಹರಪುರ

ಮಠದ ಜೀರ್ಣೋದ್ಧಾರಕ್ಕೆ 1 ಕೋಟಿ ಘೋಷಿಸಲಾಗಿದೆ. ಆ ಮಠದ ಜೀರ್ಣೋದ್ಧಾರವನ್ನು ಭಕ್ತರೇ ಒಗ್ಗೂಡಿ ಮಾಡಲು ಸಾಧ್ಯವಿಲ್ಲವೆ? ಭಕ್ತರೇ ಒಗ್ಗೂಡಿ ಈ ಕಾರ್ಯ ನಿರ್ವಹಿಸಿದರೆ ಅದು ಕಳೆಗಟ್ಟುವುದಿಲ್ಲವೆ? ತಾವೇ ಮಾಡಿದ್ದೆಂಬ ಹೆಗ್ಗಳಿಕೆ ಶಾಶ್ವತವಾಗಿರುತ್ತದಲ್ಲವೆ? ಸರ್ಕಾರದ ಹಣದಿಂದ ಜೀರ್ಣೋದ್ಧಾರ ಮಾಡಿಸಿದರೆ ಅದು ಭಕ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವುದಿಲ್ಲವೆ? ಸರ್ಕಾರದ ಕೃಪಾ ಭಿಕ್ಷೆಗೆ ಕೈವೊಡ್ಡಿದ ಮಠ ಎಂದು ಯಾರಾದರೂ ಆಡಿಕೊಳ್ಳದಿರಲಾರರೆ?

ಸರ್ಕಾರದ ಹಂಗೇಕೆ?

ಮಠ, ಮಂದಿರ, ಧಾರ್ಮಿಕ ಕೇಂದ್ರಗಳು ಯಾರ ಹಂಗಿಗೂ ಒಳಗಾಗದೆ ಸ್ವತಂತ್ರವಾಗಿ ಇದ್ದರೇನೇ ಅವುಗಳಿಗೊಂದು ಕಿಮ್ಮತ್ತು. ಆಗ ಅವುಗಳ ಮಾತಿಗೂ ಒಂದು ಬೆಲೆ. ಯಾರದೋ ಹಂಗಿಗೆ ಒಳಗಾದರೆ ಅವುಗಳ ಮಾತಿಗೆ ಬೆಲೆ ಬರುವುದಾದರೂ ಹೇಗೆ? ಭಕ್ತರೇ ಸಂಗ್ರಹಿಸಿ ಮಠದ ಅಭಿವೃದ್ಧಿಗೆ ಹಣ ಕೊಟ್ಟರೆ ಈ ಮಾತು ಅನ್ವಯಿಸದು. ತುಂಬಾ ಹಿಂದೆ ರಾಜರ ಕಾಲದಲ್ಲಿದ್ದ ಸಂತರು, ಸಾಧು-ಸಂನ್ಯಾಸಿಗಳು ತಮ್ಮ ಸ್ವಂತಕ್ಕಾಗಿ ಅಥವಾ ಮಠಮಂದಿರಗಳಿಗಾಗಿ ರಾಜರ ಬಳಿ ಎಂದೂ ಕೈಚಾಚುತ್ತಿರಲಿಲ್ಲ. ರಾಜರು ಕೊಡುತ್ತೇನೆಂದರೂ ಅದನ್ನು ನಿರಾಕರಿಸಿದ ನಿದರ್ಶನಗಳು ಇತಿಹಾಸದಲ್ಲಿ ಹೇರಳವಾಗಿವೆ. ಆದ್ದರಿಂದಲೇ ಅಂತಹ ಸಾಧು-ಸಂತರ ಮಾತುಗಳಿಗೆ ಮಹತ್ವ ಇರುತ್ತಿತ್ತು. ರಾಜ ಕೂಡ ಅಂತಹ ಸರ್ವಸಂಗ ಪರಿತ್ಯಾಗಿ, ನಿಸ್ವಾರ್ಥಿ ಸಾಧು-ಸಂತರ ಆಶೀರ್ವಾದಕ್ಕಾಗಿ ಹಾತೊರೆಯುತ್ತಿದ್ದ. ಈಗಲೂ ಮುಖ್ಯಮಂತ್ರಿ, ಮಂತ್ರಿ, ಅಧಿಕಾರಿಗಳು ಮಠಾಧೀಶರ ಆಶೀರ್ವಾದಕ್ಕಾಗಿ ಮಠಗಳಿಗೆ ಧಾವಿಸುವ ದೃಶ್ಯಗಳಿಗೇನೂ ಕೊರತೆಯಿಲ್ಲ. ಆದರೆ ಈಗಿನ ಮಂತ್ರಿಗಳು, ಅಧಿಕಾರಿಗಳು ಮಠಾಧೀಶರ ಆಶೀರ್ವಾದವನ್ನು ಬಯಸುವ ಹಿಂದಿನ ಉದ್ದೇಶವೇ ಬೇರೆ. ಅದರಲ್ಲಿ ರಾಜಕಾರಣವೇ ಸೇರಿಕೊಂಡಿರುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಈಗಂತೂ ಮಠಾಧೀಶರೇ ಮುಖ್ಯಮಂತ್ರಿಗಳ ಬಳಿಗೆ ಹೋಗಿ ಆಶೀರ್ವಾದ ಮಾಡುತ್ತಾರೆ. ಈ ಬಾರಿಯ ಬಜೆಟ್‌ ಮಂಡನೆಗೆ ಮೊದಲು ಹಲವು ಮಠಾಧೀಶರು ಮುಖ್ಯಮಂತ್ರಿಗಳ ಬಳಿಗೆ ಹೋಗಿ ಆಶೀರ್ವಾದ ಮಾಡಿದ್ದರು. ಉತ್ತಮ ಬಜೆಟ್‌ ಮಂಡಿಸುವಂತೆ ಸಲಹೆಯನ್ನೂ ನೀಡಿದ್ದರು! ಮುಖ್ಯಮಂತ್ರಿಗಳು ಮಠಾಧೀಶರ ಬಳಿ ಹೋಗಬೇಕೇ ಹೊರತು ಮಠಾಧೀಶರೇ ಮುಖ್ಯಮಂತ್ರಿಗಳ ಬಳಿ ಧಾವಿಸುವುದು ಭಾರತೀಯ ಪರಂಪರೆಗೆ ವ್ಯತಿರಿಕ್ತವಾದ ವಿದ್ಯಮಾನ.

ಮಠಗಳಿಗೇಕೆ ರಾಜಕಾರಣ?

ಮಠಗಳಿಗೂ ರಾಜಕಾರಣಿಗಳಿಗೂ ಗಳಸ್ಯಕಂಠಸ್ಯ ಸಂಬಂಧಗಳಿರುವುದು ಈಗೇನಲ್ಲ. ಹಿಂದಿನಿಂದಲೂ ರಾಜ್ಯದಲ್ಲಿ ಅದು ನಡೆದುಕೊಂಡು ಬಂದಿದೆ. ಈಗ ಈ ವಿದ್ಯಮಾನ ಇನ್ನೊಂದಿಷ್ಟು ಹೆಚ್ಚಾಗಿರಬಹುದು ಅಷ್ಟೆ. ಚುನಾವಣಾ ಸಂದರ್ಭದಲ್ಲಿ ಯಾವ ಅಭ್ಯರ್ಥಿ ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂಬ ವಿಷಯ ನಿರ್ಧಾರವಾಗಬೇಕಾದುದು ಆಯಾ ಪಕ್ಷಗಳ ಸಭೆಯಲ್ಲಿ. ಆದರೆ ನಮ್ಮ ರಾಜ್ಯದಲ್ಲಿ ಈ ವಿಷಯ ಕೆಲವು ಮಠಗಳಲ್ಲೇ ನಿರ್ಧಾರವಾಗುತ್ತದೆಂಬುದು ಗುಟ್ಟಲ್ಲ. ಅಭ್ಯರ್ಥಿಗಳ ಆಯ್ಕೆಯನ್ನು ಕೆಲವು ಮಠಾಧೀಶರೇ ನಿರ್ಧರಿಸಿಬಿಡುತ್ತಾರೆ. ಮಠಾಧೀಶರು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೇ ಮತ ಹಾಕಬೇಕೆಂದು ತಾಕೀತು ಮಾಡಲಾಗುತ್ತದೆ. ಮಠಾಧೀಶರ ಕೃಪಾಕಟಾಕ್ಷವಿದ್ದ ಅಭ್ಯರ್ಥಿಗಳೇ ಆಯ್ಕೆಯಾಗುವುದುಂಟು. ಮಠಾಧೀಶರು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಆಶೀರ್ವದಿಸಲಿ, ಅದರಲ್ಲಿ ತಪ್ಪೇನಿಲ್ಲ. ಆದರೆ ಅಭ್ಯರ್ಥಿಗಳನ್ನು ಅವರೇ ಆಯ್ಕೆ ಮಾಡುವ ಪರಿ ಪ್ರಜಾತಂತ್ರ ವ್ಯವಸ್ಥೆಗೇ ಮಾರಕ. ಆಧ್ಯಾತ್ಮಿಕತೆ, ಧಾರ್ಮಿಕತೆಯ ಮಾರ್ಗದರ್ಶನ ಮಾಡಬೇಕಾದ ಮಠಗಳೇ ರಾಜಕಾರಣದಲ್ಲಿ ಆಸಕ್ತಿ ತೋರಿಸಿದರೆ ಸಾರ್ವಜನಿಕರಿಗೆ ಮಾರ್ಗದರ್ಶನದ ಬೆಳಕು ನೀಡುವವರಾರು?

ವ್ಯಕ್ತಿಗಳಿಗಿರುವಂತೆ ರಾಜ್ಯಕ್ಕೂ ಆಸ್ತಿಯಿರುತ್ತದೆ. ಮಠಮಂದಿರಗಳಿಗೂ ಆಸ್ತಿಯಿರುತ್ತದೆ. ಆಸ್ತಿಗಳಲ್ಲಿ ಚರ, ಸ್ಥಿರ ಎಂಬ ಎರಡು ರೀತಿ. ರಾಜ್ಯದ ಆಸ್ತಿಗೆ ರಾಜಸ್ವ, ಮಠಮಂದಿರಗಳ ಆಸ್ತಿಗೆ ಧರ್ಮಸ್ವ ಎಂದು ಹೆಸರು. ಈ ಆಸ್ತಿಗಳು ಹಾಗೇ ಉಳಿದಿರಬೇಕು. ಅವು ಹೆಚ್ಚಾಗಬೇಕೇ ಹೊರತು ಕಡಿಮೆ ಆಗಬಾರದು. ಅವುಗಳು ಆಯಾ ಉದ್ದೇಶಕ್ಕೆ ಬಳಕೆಯಾಗಬೇಕು. ಉದಾಹರಣೆಗೆ : ಕಾಡು, ಗೋಮಾಳ, ಸಂತೆಮಾಳ, ಮೇವು, ಗೊಬ್ಬರಗಳಿಗಾಗಿ ಗಾ್ರಮದ ಪಕ್ಕದಲ್ಲಿರುವ ಕಾನು ಇತ್ಯಾದಿಗಳು. ಇಲ್ಲಿಂದ ಉತ್ಪನ್ನವಾಗುವ ಎಲ್ಲಾ ರೀತಿಯ ವಸ್ತುಗಳು ರಾಜಸ್ವಗಳು. ಅದೇ ರೀತಿ ಜಾತ್ರೆ ಮೈದಾನ, ರಥ ಬೀದಿಯ ಪಕ್ಕದ ಜಾಗ, ದೇವಸ್ಥಾನದ ಉಪಯೋಗಕ್ಕಾಗಿ ಹೂದೋಟ ಇತ್ಯಾದಿಗಳು ಧರ್ಮಸ್ವಗಳು. ಅವುಗಳನ್ನು ಸ್ವಂತಕ್ಕೆ ಬಳಸುವುದು ಪಾಪ ಎಂಬ ನಂಬಿಕೆ ಹಿಂದೆ ಇತ್ತು. ಧರ್ಮಕ್ಕೆ ಸಂಬಂಧಿಸಿದ ಆಸ್ತಿಯನ್ನು ರಕ್ಷಿಸುವ ಕಾನೂನು ಇದ್ದರೂ ಆ ಕಾನೂನಿನ ‘ಅಡಿಯಲ್ಲೇ’ ಭೂಮಿಯನ್ನು ನುಂಗುವ ಭೂಗಳ್ಳರ ಸಂಖ್ಯೆಯೂ ಹೆಚ್ಚುತ್ತಿದೆ.

ಮಠಗಳು ನಿಜವಾಗಿ ಮಾಡಬೇಕಾದುದು ಸಮಾಜಕ್ಕೆ ಎಲ್ಲ ಬಗೆಯ ಮಾರ್ಗದರ್ಶನ. ಅದರಲ್ಲೂ ನೈತಿಕತೆ, ಸಚ್ಚಾರಿತ್ರ್ಯ, ಪ್ರಾಮಾಣಿಕತೆ, ಪರೋಪಕಾರ ಮೊದಲಾದ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡುವುದು ಮಠಗಳ ಕರ್ತವ್ಯ. ಆದರೆ ಈ ಕರ್ತವ್ಯವನ್ನು ಅದೆಷ್ಟು ಮಠಗಳು ಪ್ರಾಮಾಣಿಕವಾಗಿ ನಿರ್ವಹಿಸುತ್ತಿವೆ ಎಂಬ ಪ್ರಶ್ನೆಯನ್ನು ಕೇಳಿಕೊಂಡಾಗ ಸಿಗುವ ಉತ್ತರ ಮಾತ್ರ ಅತ್ಯಂತ ನಿರಾಶಾದಾಯಕ. ಈಚೆಗೆ ಕಾರ್ಯಕ್ರಮವೊಂದರಲ್ಲಿ ಖ್ಯಾತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಮಾತನಾಡುತ್ತಾ, ‘ಮಠಗಳು ಇಂದು ಬರೀ ಭ್ರಮೆಗಳನ್ನು ಬಿತ್ತುತ್ತಿವೆ. ಯಾವುದೇ ಮೌಲ್ಯಗಳನ್ನಾಗಲೀ ಆದರ್ಶಗಳನ್ನಾಗಲೀ ಬಿತ್ತುತ್ತಿಲ್ಲ’ ಎಂದು ಖಾರವಾಗಿಯೇ ಹೇಳಿದ್ದರು. ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆಯಿರಲಿಲ್ಲ. ಭಕ್ತರು ಸಲ್ಲಿಸುವ ಪ್ರತಿಯೊಂದು ಸೇವೆಯ ದರವನ್ನು ನಿಗದಿಪಡಿಸುವ, ಆಗಾಗ ಅದರಲ್ಲಿ ಏರಿಕೆ ಮಾಡುವ, ಎಲೆಗಿಷ್ಟು ಎಂದು ಊಟದ ಲೆಕ್ಕ ಹಾಕುವ ಮಠಮಂದಿರಗಳು ಸಂಪೂರ್ಣ ವಾಣಿಜ್ಯೀಕರಣಗೊಂಡಿರುವುದು ಅತ್ಯಂತ ವಿಷಾದದ ಸಂಗತಿ. ಶ್ರೀಮಂತಿಕೆ, ಹಣ, ಢಾಂಬಿಕತೆ, ದೊಡ್ಡಸ್ತಿಕೆಯ ಆವುಟಗಳಿಗೇ ಅಲ್ಲಿ ಆದ್ಯತೆ. ಪ್ರಾಮಾಣಿಕತೆ, ಸಜ್ಜನಿಕೆ, ಸಚ್ಚಾರಿತ್ರ್ಯವಂತಿಕೆ ಕ್ರಮೇಣ ಇಲ್ಲೆಲ್ಲ ಮೂಲೆ ಪಾಲಾಗುತ್ತಿರುವುದು ಪ್ರಜ್ಞಾವಂತರ ಗಮನಕ್ಕೆ ಬಂದಿರಲೇಬೇಕು.

***

Homeless Home Minister ಲಾಲ್‌ ಬಹಾದ್ದೂರ್‌ ಶಾಸ್ತ್ರಿ ದೇಶದ ಗೃಹಮಂತ್ರಿ ಆಗಿದ್ದಾಗ ಒಂದು ರೈಲ್ವೇ ಅಪಘಾತ ನಡೆದು ಹಲವರು ಸಾವಿಗೀಡಾದರು. ಶಾಸ್ತ್ರಿಯವರ ಮನಃಸಾಕ್ಷಿಗೆ ಧಕ್ಕೆಯಾಯಿತು. ಅವರು ತಕ್ಷಣವೇ ನೈತಿಕ ಜವಾಬ್ದಾರಿ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟರು. ಸರ್ಕಾರ ಕೊಟ್ಟಿದ್ದ ಮನೆ ಬಿಟ್ಟರು. ಆದರೆ ಎಲ್ಲಿಗೆ ಹೋಗುವುದು? ದೆಹಲಿಯಲ್ಲಿ ಅವರಿಗೆ ಮನೆ ಇರಲಿಲ್ಲ. ಎಂದು ಆಗ ಪತ್ರಿಕೆಗಳು ಮುಖಪುಟದಲ್ಲಿ ಬರೆದಿದ್ದವು. ಅವರನ್ನು ಬರಮಾಡಿಕೊಳ್ಳಲು ಅನೇಕ ಹೋಂಗಳಿದ್ದರೂ ಅವರಿಗೆ ಸ್ವಂತದ್ದಾದ ಹೌಸ್‌ ಇರಲಿಲ್ಲ! ಆದರೆ ಇಂತಹ ನಿದರ್ಶನಗಳು ಅದೆಷ್ಟಿವೆ? ನಾನು ಹೇಗಿರುವೆ? ಜಗತ್ತಿಗಾಗಿ ನಾನೋ ಅಥವಾ ನನಗಾಗಿ ಜಗತ್ತೋ! ಜಗತ್ತಿಗಾಗಿ ನಾನು ಎಂಬ ನಿರ್ಧಾರ ಹೊಮ್ಮಿದರೆ ಕಮಿಷನ್‌ನಿಂದ ಬದುಕುವುದಿಲ್ಲ ಎಂಬ ಅಧಿಕಾರಿಗಳು, ಕಿಕ್‌ಬ್ಯಾಂಕ್‌ನಿಂದ ರಾಜಕಾರಣ ಮಾಡುವುದಿಲ್ಲ ಎಂಬ ರಾಜಕಾರಣಿಗಳು, ಅಪರಾಧಿಗಳನ್ನು, ಭ್ರಷ್ಟರನ್ನು, ಅನೀತಿವಂತರನ್ನು ಆಶೀರ್ವದಿಸುವುದಿಲ್ಲ , ಸರ್ಕಾರದ ಕೃಪಾಕಟಾಕ್ಷಕ್ಕೆ ಕೈಚಾಚುವುದಿಲ್ಲ ಎನ್ನುವ ಮಠಾಧೀಶರು, ಲಂಚ ಕೊಡದೆ ತನ್ನ ಸರದಿಗಾಗಿ ಕಾದು ಅನಂತರವೇ ತನ್ನ ಕೆಲಸ ಪೂರೈಸಿಕೊಳ್ಳುವ ಜನಸಾಮಾನ್ಯರು ಹೆಚ್ಚಾಗಬಹುದು.

ಅಂತಹದೊಂದು ಸುವರ್ಣ ಗಳಿಗೆ ಎಂದಾದರೂ ಬಂದೀತೆ?

 

Leave a Reply

Your email address will not be published.

This site uses Akismet to reduce spam. Learn how your comment data is processed.