ನೇರ ನೋಟ: ದು.ಗು.ಲಕ್ಷ್ಮಣ
ವಿಶ್ವದ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ಪರಮೋಚ್ಚ ಧರ್ಮ ಗುರು ಸ್ಥಾನಕ್ಕೆ ನೂತನ ಪೋಪ್ ಆಗಿ ಅರ್ಜೆಂಟೀನಾದ ಜಾರ್ಜ್ ಮಾರಿಯೋ ಬರ್ಗೋಲಿಯೊ (ಈಗ ಅವರು ಪೋಪ್ ಫ್ರಾನ್ಸಿಸ್) ಅವರ ಆಯ್ಕೆ ಕ್ರೈಸ್ತ ಸಮುದಾಯದಲ್ಲಿ ಅಚ್ಚರಿಗೆ ಕಾರಣವಾಗಿರುವುದು ಸ್ವಾಭಾವಿಕ. ಇದುವರೆಗೆ ಕಳೆದ ಒಂದು ಶತಮಾನದಲ್ಲಿ ಯುರೋಪಿನ ಹೊರಗಿನವರೊಬ್ಬರನ್ನು ಪೋಪ್ ಆಗಿ ಆಯ್ಕೆ ಮಾಡಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಯುರೋಪಿನ ಹೊರಗಿನವರೊಬ್ಬರು ಪರಮೋಚ್ಚ ಧರ್ಮಗುರು ಸ್ಥಾನಕ್ಕೆ ಆಯ್ಕೆಯಾಗಿದಾ್ದರೆ. ಲ್ಯಾಟಿನ್ ಅಮೆರಿಕಾ ಪ್ರದೇಶದಿಂದ ಆಯ್ಕೆಯಾದ ಮೊದಲ ಪೋಪ್ ಎಂಬ ಹೆಗ್ಗಳಿಕೆಗೂ ಫ್ರಾನ್ಸಿಸ್ ಪಾತ್ರರಾಗಿದ್ದಾರೆ. ಕಳೆದ ಬಾರಿ ಪೋಪ್ ಸ್ಥಾನಕ್ಕೆ ಆಯ್ಕೆ ನಡೆದ ಸಂದರ್ಭದಲ್ಲಿ ಫ್ರಾನ್ಸಿಸ್ ಅವರ ಹೆಸರು ಕೇಳಿಬಂದಿತ್ತು. ಆದರೆ ಈ ಬಾರಿ ಅವರ ಹೆಸರೇನೂ ಉಲ್ಲೇಖವಾಗಿರಲಿಲ್ಲ. ಅವರಿಗೆ ಈಗಾಗಲೇ 76 ವರ್ಷ ವಯಸ್ಸಾಗಿರುವುದರಿಂದ ಅವರ ಹೆಸರನ್ನು ಆ ಸ್ಥಾನಕ್ಕೆ ಕಾರ್ಡಿನಲ್ಗಳ ಸಭೆ ಪರಿಗಣಿಸುವುದಿಲ್ಲ ಎಂದು ಭಾವಿಸಲಾಗಿತ್ತು. ಹೀಗಿದ್ದರೂ ಫ್ರಾನ್ಸಿಸ್ ಅವರ ಆಯ್ಕೆ ಆಗಿದೆ. ಬಹುಶಃ ಚರ್ಚ್ನ ಬಗ್ಗೆ ಆಕರ್ಷಣೆ ಕಡಿಮೆಯಾಗುತ್ತಿರುವ ಯುರೋಪಿನ ಬದಲಾಗಿ ಧಾರ್ಮಿಕ ಬದ್ಧತೆ ಹೆಚ್ಚು ಇರುವ ಲ್ಯಾಟಿನ್ ಅಮೆರಿಕ ದೇಶವೊಂದರಿಂದ ಹೊಸ ಪೋಪ್ ಆಯ್ಕೆ ಮಾಡುವುದರಿಂದ ಒಂದು ರೀತಿಯಲ್ಲಿ ಧರ್ಮದ ಪ್ರಭಾವವನ್ನು ಜನರಲ್ಲಿ ಪುನರ್ ಸ್ಥಾಪಿಸಬಹುದೆಂಬ ತಂತ್ರಗಾರಿಕೆ ಈ ಆಯ್ಕೆಯ ಹಿಂದಿರಬಹುದು.
ಪೋಪ್ ಒಂದು ಧರ್ಮದ ಗುರುವಾದರೂ ಆ ಧರ್ಮದ ಜನರು ಆಡಳಿತ ನಡೆಸುವ ದೇಶಗಳ ಆಡಳಿತಗಾರರ ಮೇಲೆ ಇರುವ ಅವರ ಪ್ರಭಾವ ಮತ್ತು ಸರ್ಕಾರಗಳು ಅನುಸರಿಸುವ ನೀತಿಯ ಮೇಲೆ ಇರುವ ಪ್ರಬಲ ಹಿಡಿತದಿಂದಾಗಿ ಪೋಪ್ ಸ್ಥಾನಕ್ಕೆ ನಡೆಯುವ ಆಯ್ಕೆ ಬಹು ಮುಖ್ಯವಾದುದೆಂದೇ ಪರಿಗಣಿತವಾಗಿದೆ. ಪಾಶ್ಚಿಮಾತ್ಯ ಮತ್ತು ಯುರೋಪಿನ ಅಭಿವೃದ್ಧಿ ಹೊಂದಿದ ದೇಶಗಳು ಕ್ರೈಸ್ತ ಸಮುದಾಯದ ಆಡಳಿತದಲ್ಲಿರುವುದರಿಂದ ಮತ್ತು ಅಲ್ಲಿನ ಆಡಳಿತಗಾರರು ತೆಗೆದುಕೊಳ್ಳುವ ನಿರ್ಧಾರಗಳು ವಿಶ್ವದ ಇತರ ಬಡ ಹಾಗೂ ಅಭಿವೃದ್ಧಿಶೀಲ ದೇಶಗಳ ಮೇಲೆ ಪರಿಣಾಮ ಬೀರುವುದರಿಂದ ಇಂತಹ ಬದಲಾವಣೆ ಎಲ್ಲರ ಗಮನ ಸೆಳೆಯುವುದು ಸ್ವಾಭಾವಿಕ.
ಇತರ ಪೋಪ್ಗಿಂತ ಭಿನ್ನರೆ?
ನೂತನ ಪೋಪ್ ಫ್ರಾನ್ಸಿಸ್ ಹಿಂದಿನ ಪೋಪ್ಗಳಂತಲ್ಲ. ಸರಳ ಜೀವನದಲ್ಲಿ ನಂಬಿಕೆ ಮತ್ತು ಬಡವರ ಬಗ್ಗೆ ಕಳಕಳಿ ಅವರಿಗಿದೆ. ಪೋಪ್ ಸ್ಥಾನಕ್ಕೆ ಆಯ್ಕೆಯಾಗುತ್ತಲೇ ಅವರು ವಿಲಾಸೀ ಕಾರಿನಲ್ಲಿ ಬರದೆ ಬಸ್ಸಿನಲ್ಲೇ ಬಂದು ಹೋಗಿದ್ದು ಇದಕ್ಕೊಂದು ನಿದರ್ಶನ. ನಾಳೆ (ಮಾ.19) ನಡೆಯಲಿರುವ ತಮ್ಮ ಪದಗ್ರಹಣ ಕಾರ್ಯಕ್ರಮಕ್ಕೆ ರೋಮ್ಗೆ ಬಂದು ಅನಗತ್ಯ ವೆಚ್ಚ ಮಾಡುವ ಬದಲು ಅದೇ ಹಣವನ್ನು ಧಾರ್ಮಿಕ ಮತ್ತು ಇತರ ಕಲ್ಯಾಣ ಕಾರ್ಯಗಳಿಗೆ ದಾನವಾಗಿ ನೀಡುವಂತೆ ಫ್ರಾನ್ಸಿಸ್ ತಮ್ಮ ತವರು ರಾಷ್ಟ್ರ ಅರ್ಜೆಂಟೀನಾದ ಅನುಯಾಯಿಗಳಿಗೆ ಸಲಹೆ ನೀಡಿರುವುದು ಇನ್ನೊಂದು ನಿದರ್ಶನ. ಧರ್ಮಗುರುಗಳು ಆಲೋಚಿಸಬೇಕಾದುದೇ ಹೀಗೆ. ಅವರ ಜೀವನಶೈಲಿ ಇರಬೇಕಾದುದೂ ಇದೇ ರೀತಿ. ಏಕೆಂದರೆ ಧರ್ಮಗುರುಗಳೆಂದರೆ ಆ ಧರ್ಮವನ್ನು ನಂಬಿದ ಅನುಯಾಯಿಗಳಿಗೆ ಎಲ್ಲ ಸಂದರ್ಭಗಳಲ್ಲೂ ಎಲ್ಲ ರೀತಿಯಲ್ಲೂ ಸೂಕ್ತ ಮಾರ್ಗದರ್ಶನ ಮಾಡುವವರೆಂದೇ ಎಲ್ಲರ ನಿರೀಕ್ಷೆ. ಮಾರ್ಗದರ್ಶನ ಮಾಡುವವರು ಮೊದಲು ಎಲ್ಲ ವಿಷಯಗಳಲ್ಲೂ ಮೇಲ್ಪಂಕ್ತಿಯಾಗಿರಬೇಕು. ಆಗ ಮಾತ್ರ ಅವರ ಮಾತಿಗೆ ಕಿಮ್ಮತ್ತು. ತಾವೇ ವಿಲಾಸಿ, ಸ್ವೇಚ್ಛಾಚಾರದ ಸ್ವಚ್ಛಂದ ಬದುಕು ನಡೆಸುತ್ತಾ ಅನುಯಾಯಿಗಳಿಗೆ ಸರಳ ಬದುಕು ನಡೆಸಬೇಕು, ಸತ್ಯವಂತರಾಗಿರಬೇಕು, ಇತರರ ಬಗ್ಗೆ ದಯೆ, ಕಾರುಣ್ಯ ಉಳ್ಳವರಾಗಿರಬೇಕು… ಎಂದೆಲ್ಲ ಬೋಧಿಸಿದರೆ ಅದು ಕೇವಲ ವೇದಿಕೆಯ ಮೇಲಿನ ಘೋಷಣೆಯಾದೀತೇ ವಿನಃ ಅದು ಯಾರ ಹೃದಯವನ್ನೂ ತಟ್ಟಲಾರದು. ನೂತನ ಪೋಪ್ ಉಳಿದೆಲ್ಲ ಕ್ರೈಸ್ತ ಧರ್ಮಗುರುಗಳಿಗಿಂತ ಭಿನ್ನವೆಂದು ಹೇಳಲಾಗುತ್ತಿದೆ. ಪೋಪ್ ಹುದ್ದೆಗೇರಿದ ಬಳಿಕ ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಅವರು ಇತರರಿಗಿಂತ ಅದೆಷ್ಟು ಭಿನ್ನವಾಗಿದ್ದಾರೆ, ತಮ್ಮ ಮಾತಿಗೂ ಕೃತಿಗೂ ನಡುವೆ ಅಂತರ ಇಟ್ಟಿದ್ದಾರೋ ಇಲ್ಲವೋ ಎಂಬುದು ಗೊತ್ತಾಗಬಹುದು.
ಪೋಪ್ ಮುಂದಿರುವ ಸವಾಲು
ಪೋಪ್ ಆಗಿ ಘೋಷಣೆಯಾದ ಮೂರನೇ ದಿನ ವಿವಿಧ ದೇಶಗಳ ಕಾರ್ಡಿನಲ್ಗಳು ಭಾಗವಹಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಧರ್ಮದಲ್ಲಿ ನಂಬುಗೆ ಕಳೆದುಕೊಳ್ಳುತ್ತಿರುವ ಜನರಲ್ಲಿ ಪುನಃ ನಂಬುಗೆ ತುಂಬುವ ಪರ್ಯಾಯ ಮಾರ್ಗಗಳನ್ನು ಶೋಧಿಸಿ’ ಎಂದು ನೀಡಿದ ಸಲಹೆ ಚರ್ಚಾರ್ಹ. ಕ್ರೈಸ್ತ ಧರ್ಮದಲ್ಲಿ ಅದರ ಬಹುತೇಕ ಅನುಯಾಯಿಗಳು ನಂಬುಗೆ ಕಳೆದುಕೊಂಡಿರುವ ಸಂಗತಿ ಹೊಸದೇನಲ್ಲ. ಯುರೋಪ್ ರಾಷ್ಟ್ರಗಳಲ್ಲೇ ಚರ್ಚ್ಗೆ ಪ್ರತೀ ಭಾನುವಾರ ತಪ್ಪದೇ ಹೋಗುವವರ ಸಂಖ್ಯೆ ತುಂಬಾ ಕ್ಷೀಣಿಸಿದೆ. ಯುವ ಪೀಳಿಗೆಯಲ್ಲಿ ಚರ್ಚ್ ಚಟುವಟಿಕೆಗಳ ಬಗ್ಗೆ ಆಸಕ್ತಿಯೇ ಕಡಿಮೆಯಾಗುತ್ತಿದೆ ಎಂಬ ಸಂಗತಿ ಯುರೋಪ್ ರಾಷ್ಟ್ರಗಳ ಮಾಧ್ಯಮಗಳಲ್ಲಿ ಆಗಾಗ ವ್ಯಕ್ತವಾಗುತ್ತಲೇ ಇದೆ. ಇಂಗ್ಲೆಂಡ್ನಲ್ಲಿರುವ ಕೆಲವು ಹಳೆಯ ಚರ್ಚ್ಗಳಿಗೆ ಕ್ರೈಸ್ತ ಭಕ್ತರು ಬರದೆ ಅವು ಪಾಳುಬಿದ್ದಿವೆ. ಇಂತಹ ಪಾಳುಬಿದ್ದ ಕೆಲವು ಚರ್ಚ್ಗಳನ್ನು ಮಾರಾಟಕ್ಕಿಡಲಾಗಿದೆ. ಇಂಗ್ಲೆಂಡ್ನ ಒಂದೆರಡು ಕಡೆ ವಿಶ್ವ ಹಿಂದು ಪರಿಷದ್ ಮತ್ತಿತರ ಹಿಂದೂ ಸಂಘಟನೆಗಳು ಇಂತಹ ಪಾಳು ಬಿದ್ದ ಚರ್ಚ್ಗಳನ್ನೇ ಖರೀದಿಸಿ ಅಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ ಮುಂತಾದ ಚಟುವಟಿಕೆಗಳನ್ನು ಆರಂಭಿಸಿರುವುದು ಹೊಸ ಸುದ್ದಿ ಅಲ್ಲ. ಇದೀಗ ಪೋಪ್ ಫ್ರಾನ್ಸಿಸ್ ಅವರೇ ಕ್ರೈಸ್ತ ಧರ್ಮದಲ್ಲಿ ನಂಬುಗೆಯನ್ನು ಅನುಯಾಯಿಗಳು ಕಳೆದುಕೊಳ್ಳುತ್ತಿದ್ದಾರೆಂದು ಹೇಳಿರುವಾಗ ಕ್ರೈಸ್ತ ಧರ್ಮ ಐರೋಪ್ಯ ರಾಷ್ಟ್ರಗಳಲ್ಲಿ ಯಾವ ಸ್ಥಿತಿ ತಲುಪಿದೆ ಎಂಬುದು ಯಾರಿಗಾದರೂ ಅರ್ಥವಾಗಬಲ್ಲ ಸಂಗತಿ.
ನೂತನ ಪೋಪ್ ಕ್ರೈಸ್ತ ಧರ್ಮ ಗುರುಗಳಿಗೆ ಇನ್ನೂ ಒಂದು ಮುತ್ತಿನಂತಹ ಕಿವಿ ಮಾತು ಹೇಳಿದ್ದಾರೆ – ‘ಒಳಜಗಳ ಮತ್ತು ಹಗರಣಗಳಿಂದ ಮುಕ್ತವಾದ ಸ್ವಚ್ಛಂದ ಆಡಳಿತ ನೀಡಬೇಕು’. ಕ್ರೈಸ್ತ ಧರ್ಮ ಗುರುಗಳ ನಡುವೆ ಅಥವಾ ಚರ್ಚ್ ಆಡಳಿತದಲ್ಲಿ ಒಳಜಗಳ, ಅವ್ಯವಹಾರ ಇತ್ಯಾದಿ ಅಪಸವ್ಯಗಳಿವೆ ಎಂಬುದನ್ನು ನೂತನ ಪೋಪ್ ಅವರೇ ಒಪ್ಪಿಕೊಂಡಂತಾಗಿದೆ. ಅದು ಸತ್ಯವೂ ಹೌದು. ಅದರಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಚರ್ಚ್ಗಳು ಇತ್ತಿತ್ತಲಾಗಿ ಭ್ರಷ್ಟಾಚಾರ, ಸೆಕ್ಸ್ ಹಗರಣಗಳಿಂದಾಗಿ ಕ್ರೈಸ್ತ ಜನರ ನಂಬಿಕೆಗೆ ಗಾಸಿಯುಂಟು ಮಾಡಿವೆ. ಭಾರತವೂ ಸೇರಿದಂತೆ ವಿಶ್ವದ ಅನೇಕ ಚರ್ಚ್ಗಳ ಪಾದ್ರಿಗಳು, ಬಿಷಪ್ಗಳು ಇನ್ನಿತರ ಧರ್ಮ ಗುರುಗಳು ಇಂತಹ ಭ್ರಷ್ಟಾಚಾರ, ಸೆಕ್ಸ ಹಗರಣಗಳಲ್ಲಿ ಶಾಮೀಲಾಗಿರುವ ಸಂಗತಿ ಮಾಧ್ಯಮಗಳಲ್ಲಿ ಆಗಾಗ ಪ್ರಕಟವಾಗಿದೆ. ಪಾದ್ರಿಗಳ ಇಂತಹ ಸೆಕ್ಸ್ ಹಗರಣಗಳ ಬಗ್ಗೆ ನೊಂದು ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವ ಕ್ರೈಸ್ತ ಸಂನ್ಯಾಸಿನಿಯರು ಕೇರಳದಲ್ಲಿ ಚರ್ಚ್ ಪ್ರಮುಖರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೊರಗೆ ಸೇವೆ, ಬಡವರ ಬಗ್ಗೆ ಕಾಳಜಿ ತೋರಿಸುವ ಪಾದ್ರಿಗಳು ಚರ್ಚ್ನೊಳಗೆ ಏನೆಲ್ಲ ರಾದ್ಧಾಂತಗಳನ್ನು ನಡೆಸುತ್ತಾರೆಂಬುದೂ ರಹಸ್ಯವಾಗಿ ಉಳಿದಿಲ್ಲ. ಆದರೆ ಎಲ್ಲ ಪಾದ್ರಿಗಳೂ, ಎಲ್ಲ ಬಿಷಪ್ಗಳೂ ಇಂಥವರು ಎಂದು ಈ ಮಾತಿನ ಅರ್ಥವಲ್ಲ. ನೀತಿವಂತರಾಗಿ, ಪ್ರಾಮಾಣಿಕರಾಗಿ ಜನಸೇವೆಯಲ್ಲಿ ನಿರತರಾಗಿರುವ ಪಾದ್ರಿಗಳು, ಬಿಷಪ್ಗಳು ಕೆಲವರಿದ್ದಾರೆ. ಆದರೆ ಅವರ ಪ್ರಭಾವ ಅಷ್ಟಕ್ಕಷ್ಟೆ. ಏನಿದ್ದರೂ ಬಾನಗಡಿಗಳಲ್ಲಿ ನಿರತರಾಗಿರುವ ಧರ್ಮ ಗುರುಗಳದ್ದೇ ಎಲ್ಲೆಡೆ ಪಾರುಪತ್ಯ. ಅವರದ್ದೇ ಹಣಕಾಸು ವ್ಯವಹಾರದ ಮೇಲೆ ಪ್ರಬಲ ಹಿಡಿತ. ಹೀಗಾಗಿ ನೂತನ ಪೋಪ್ ಫ್ರಾನ್ಸಿಸ್ ಅವರಿಂದ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದು ಸಹಜ. ಭ್ರಷ್ಟಾಚಾರ, ಸೆಕ್ಸ ಹಗರಣಗಳಿಂದ ಕಳಂಕಿತವಾಗಿರುವ ಚರ್ಚ್ ವ್ಯವಸ್ಥೆಯನ್ನು ಪರಿಶುದ್ಧಗೊಳಿಸಬೇಕಾಗಿರುವುದು ಅವರ ಮೊದಲ ಕರ್ತವ್ಯ. ಇದಕ್ಕಾಗಿ ಅವರು ಚರ್ಚ್ಗಳ ಆಡಳಿತ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಸಲಿಂಗಿಗಳ ನಡುವೆ ವಿವಾಹ, ಸಂತಾನ ನಿಯಂತ್ರಣ, ಭ್ರೂಣ ಹತ್ಯೆ, ಧರ್ಮಗುರು ಸ್ಥಾನಕ್ಕೆ ಮಹಿಳೆಯರ ನೇಮಕ ಮುಂತಾದ ವಿಚಾರಗಳಲ್ಲಿ ಕ್ರೈಸ್ತ ಸಮುದಾಯದಲ್ಲಿ ಈಗಲೂ ಒಮ್ಮತವಿಲ್ಲ. ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ನೂತನ ಪೋಪ್ ಅವರಿಗೆ ಇವೆಲ್ಲ ದೊಡ್ಡ ಸವಾಲುಗಳು. ಪೋಪ್ ಫ್ರಾನ್ಸಿಸ್ ಈಗಾಗಲೇ 76ರ ಇಳಿವಯಸ್ಸಿನಲ್ಲಿದ್ದಾರೆ. ಹಿಂದಿನ ಪೋಪ್ ಬೆನೆಡಿಕ್ಟ್ ವಯಸ್ಸಿನ ಕಾರಣದಿಂದಲೇ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಈಗಿನ ಪೋಪ್ಗೆ ಇನ್ನೈದು ವರ್ಷ ಕಳೆದರೆ 81 ತುಂಬುತ್ತದೆ. 70ರ ನಂತರ ಎಷ್ಟೇ ಆರೋಗ್ಯಶಾಲಿಯಾಗಿದ್ದರೂ ಹರೆಯದಲ್ಲಿ ಮಾಡಿದಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಪೋಪ್ ಆಗಿ ಘೋಷಣೆಯಾದ ಮೂರನೆಯ ದಿನವೇ ಕಾರ್ಡಿನಲ್ಗಳ ಸಭೆಗೆ ನಡೆದುಕೊಂಡು ಬರುತ್ತಿದ್ದಾಗ ಫ್ರಾನ್ಸಿಸ್ ಎಡವಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಘಾತವಾಗಿಲ್ಲ. ಶರೀರ ಅವರು ಹೇಳಿದಂತೆ ಕೇಳುತ್ತಿಲ್ಲವೆನ್ನುವುದರ ಸೂಚನೆ ಇದು. ಇಂಥವರು ಪರಮೋಚ್ಚ ಧರ್ಮಗುರುವಿನ ಸಾ್ಥನವನ್ನು ಅದೆಷ್ಟು ಸಮರ್ಥವಾಗಿ ನಿರ್ವಹಿಸಬಲ್ಲರು?
ಸಂಪ್ರದಾಯವಾದಿ ಎಂಬ ಟೀಕೆ
‘ಹಳೆಯದಾದಂತೆ ವೈನ್ ರುಚಿ ಹೆಚ್ಚಾಗುವಂತೆಯೇ ವಯಸ್ಸಿಗೆ ಅನುಗುಣವಾಗಿ ಜ್ಞಾನ ಮಾಗುತ್ತಾ ಹೋಗುತ್ತದೆ. ಹೀಗೆ ಬಳುವಳಿಯಾಗಿ ಬಂದ ಜ್ಞಾನ ಮತ್ತು ಅನುಭವವನ್ನು ಯುವ ಜನಾಂಗಕ್ಕೆ ದಾರಿ ದೀಪವಾಗಿ ಧಾರೆಯೆರೆಯಲು ತಾವೂ ಸೇರಿದಂತೆ ಹಿರಿಯರು ಸಿದ್ಧ’ ಎಂದು ಪೋಪ್ ಮಾರ್ಮಿಕವಾಗಿ ನುಡಿದಿದ್ದಾರೆ. ವೈನ್ ಹಳೆಯದಾದಂತೆ ಅದರ ರುಚಿ ಹೆಚ್ಚಾಗುತ್ತದೆಂಬುದು ಅವರ ಅನುಭವದ ಮಾತು ಆಗಿರಬಹುದು. ಆದರೆ ವಯಸ್ಸಿಗನುಗುಣವಾಗಿ ಜ್ಞಾನ ಮಾಗುತ್ತಾ ಹೋಗುತ್ತದೆ ಎಂಬುದು ಎಲ್ಲ ವ್ಯಕ್ತಿಗಳ ವಿಷಯದಲ್ಲಿ ನಿಜವಲ್ಲ.ವಯಸ್ಸಾದಂತೆ ಜ್ಞಾನ ಮಾಗುವ ಬದಲು ಮರೆವು, ಅಜ್ಞಾನ, ವ್ಯಾಮೋಹ ಮುಂತಾದ ದೋಷಗಳು ತಲೆ ಹಾಕುವ ಸಂಭವ ಇದ್ದೇ ಇದೆ. ಇಂತಹ ವಿದ್ಯಮಾನ ಧರ್ಮಗುರುಗಳನ್ನೂ ಬಿಟ್ಟಿಲ್ಲ. ಹಿಂದಿನ ಪೋಪ್ ಬೆನೆಡಿಕ್ಟ್ ತಮ್ಮ ಸ್ಮರಣಶಕ್ತಿ, ದೈಹಿಕ ಶಕ್ತಿ ಕುಸಿಯುತ್ತಿರುವುದರ ಅರಿವಾಗಿದ್ದರಿಂದಲೇ ಪೋಪ್ ಪದವಿಯನ್ನು ತ್ಯಾಗ ಮಾಡಿದರೆಂಬುದನ್ನು ಕ್ರೈಸ್ತ ಸಮುದಾಯದವರೆಲ್ಲರೂ ಮರೆಯಕೂಡದು.
ನೂತನ ಪೋಪ್ ಆಗಿರುವ ಫ್ರಾನ್ಸಿಸ್ ಸಂಪ್ರದಾಯವಾದಿಗಳೆಂಬ ಆರೋಪ ಕೇಳಿಬಂದಿದೆ. ಅವರು ಲ್ಯಾಟಿನ್ ಅಮೆರಿಕದಲ್ಲಿನ ಕ್ರಾಂತಿಕಾರಿ ವಾತಾವರಣದಲ್ಲಿ ಬೆಳೆದಿದ್ದರೂ ವ್ಯವಸ್ಥೆಯ ವಿರುದ್ಧವಾಗಿ ಎಂದೂ ಸೆಟೆದು ನಿಂತವರಲ್ಲ. ಅರ್ಜೆಂಟೀನಾದಲ್ಲಿ 70ರ ದಶಕದಲ್ಲಿ ಮಿಲಿಟರಿ ಸರ್ವಾಧಿಕಾರಿ
ಆಡಳಿತದ ವಿರುದ್ಧ ಕ್ರಾಂತಿಕಾರಿಗಳು ಮತ್ತು ಚರ್ಚ್ಗಳ ಕೆಲವು ಧರ್ಮಗುರುಗಳು ಹೋರಾಟದ ಹಾದಿ ತುಳಿದಾಗ ಅವರ ಜೊತೆ ಫ್ರಾನ್ಸಿಸ್ ಕೈಜೋಡಿಸಲಿಲ್ಲ ಎಂಬ ಆರೋಪವಿದೆ. ಅರ್ಜೆಂಟೀನಾ ಸೇನಾಡಳಿತ ಅಪಹರಿಸಿದ ಪಾದ್ರಿಗಳಿಬ್ಬರನ್ನು ರಕ್ಷಿಸಲು ಪೋಪ್ ಫ್ರಾನ್ಸಿಸ್ ಮನಸ್ಸು ಮಾಡಿರಲಿಲ್ಲವೆಂಬುದು ಎಡಪಂಥೀಯ ಟೀಕಾಕಾರರ ಆರೋಪ. ಅಂದರೆ ಅವರು ವ್ಯವಸ್ಥೆಯ ಪರ ಇರುವವರು ಎಂಬರ್ಥ ಇದರಿಂದ ಸ್ಫುರಿಸುತ್ತದೆ. ಇಂಥವರು ಅದು ಹೇಗೆ ಚರ್ಚ್ಗಳ ದುರಾಡಳಿತ ಹಾಗೂ ಪಾದ್ರಿಗಳ ಸೆಕ್ಸ್ ಹಗರಣಕ್ಕೆ ಒಂದು ತಾರ್ಕಿಕ ಅಂತ್ಯ ತಂದು ಕೊಡಲು ಸಾಧ್ಯ? ಚರ್ಚ್ ಆಡಳಿತದ ಮೇಲೆ ಪ್ರಬಲ ಹಿಡಿತ ಸಾಧಿಸಿರುವ ಪಟ್ಟಭದ್ರ ಹಿತಾಸಕ್ತಿಗಳ ಮೇಲೆ ಅವರು ಕಡಿವಾಣ ಹಾಕಲು ಸಾಧ್ಯವೆ? ಇಂತಹ ಸಂಶಯಗಳು ಕ್ರೈಸ್ತ ಸಮುದಾಯದ ಚಿಂತನಶೀಲರನ್ನು ಕಾಡದೇ ಇರದು.
ಮದರ್ ತೆರೇಸಾ : ಇನ್ನೊಂದು ಮುಖ
ಸಂತಳಾಗಿ, ಸಮಾಜ ಸೇವಕಿಯಾಗಿ, ದೀನ ದಲಿತರ ಕಣ್ಣೀರೊರೆಸಿದ ಮಮತಾಮೂರ್ತಿಯಾಗಿ, ಅನಾರೋಗ್ಯ ಪೀಡಿತರಿಗೆ ಆರೋಗ್ಯಭಾಗ್ಯ ನೀಡಿದ ಕರುಣಾಮಯಿಯಾಗಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಮದರ್ ತೆರೇಸಾ ಅವರ ಬಗ್ಗೆಯೂ ಟೀಕೆ ಟಿಪ್ಪಣಿಗಳು ಒಂದೊಂದಾಗಿ ಹೊರಬೀಳುತ್ತಿವೆ. ತೆರೇಸಾ ಎಂದರೆ ಜೀವಂತ ನಡೆದಾಡುವ ದೇವರೆಂದೇ ಭಾವಿಸಿದ್ದ ಅವರ ಅನೇಕ ಅನುಯಾಯಿಗಳಿಗೆ ಗಾಬರಿಯಾಗುವಂತಹ ಬೇರೆಯದೇ ಚಿತ್ರಣ ಪ್ರಕಟವಾಗಿದೆ. ಸರ್ಜ್ ಲ್ಯಾರಿವಿ, ಜೆನಿವೈವ್ ಚೆನಾರ್ಡ್ ಮತ್ತು ಕರೋಲ್ ಸೆನೆಚಲ್ ಎಂಬ ಕೆನಡಾದ ಮೂವರು ಪ್ರಾಧ್ಯಾಪಕರು ಆಳವಾದ ಅಧ್ಯಯನ ನಡೆಸಿ ಇತ್ತೀಚೆಗೆ ಬರೆದಿರುವ “The Dark Side of Mother Teresa’ ಎಂಬ ಕೃತಿಯಲ್ಲಿ ನಾವು ಇದುವರೆಗೆ ತೆರೇಸಾ ಬಗ್ಗೆ ತಿಳಿಯದೇ ಇರುವ ಅನೇಕ ಕುತೂಹಲಕಾರಿ ಸಂಗತಿಗಳು ಅನಾವರಣಗೊಂಡಿವೆ. ತೆರೇಸಾ ಎಂದರೆ ಪರೋಪಕಾರ ಬುದ್ಧಿ, ಸ್ವಾರ್ಥರಹಿತ ಸ್ವಭಾವ, ಸಮಾಜಮುಖಿ ಬದುಕು ನಡೆಸಿದ ನಿಗರ್ವಿ, ದೀನದಲಿತರ ಆಶಾಕಿರಣ ಎಂದೇ ಇದುವರೆಗೆ ಆಕೆಯ ಬಗ್ಗೆ ಇದ್ದ ಪ್ರತಿಮೆಗಳು. ತೆರೇಸಾ ಅವರು ಮಾಡಿದ ಅನುಪಮ ಸಮಾಜಸೇವೆಗೆ ನೊಬೆಲ್ ಶಾಂತಿ ಪುರಸ್ಕಾರವೇ ದೊರೆತಿತ್ತು. ಆಕೆ ನೊಬೆಲ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ‘ಗರ್ಭಪಾತವೆಂಬುದು ಶಾಂತಿಗೆ ವಿರುದ್ಧವಾಗಿರುವ ಕೆಟ್ಟ ಸಂಗತಿ’ ಎಂದಿದ್ದನ್ನು ಉಲ್ಲೇಖಿಸಿರುವ ಲೇಖಕರು, ಅತ್ಯಾಚಾರಕ್ಕೊಳಗಾಗಿ ಗರ್ಭಧರಿಸಿದಾಕೆ ಗರ್ಭಪಾತಕ್ಕೆ ಮುಂದಾದರೆ ಅದು ಶಾಂತಿ ವಿರೋಧಿ ಹೇಗಾಗುತ್ತದೆ ಎಂಬುದು ತಮಗರ್ಥವಾಗುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ವಿವಾಹ ವಿಚ್ಛೇದನವನ್ನು ತೆರೇಸಾ ವಿರೋಧಿಸಿದ್ದರು. ಆದರೆ ಲೇಡಿ ಡಯಾನಾ ವಿಷಯದಲ್ಲೇಕೆ ಅವರು ವಿಚ್ಛೇದನಕ್ಕೆ ಸಮ್ಮತಿಸಿದರು? ಇದು ವಿರೋದಾಭಾಸವಲ್ಲವೆ ಎಂದು ಲೇಖಕರು ಪ್ರಶ್ನಿಸುತ್ತಾರೆ.
ತೆರೇಸಾ ರೋಗಿಗಳಿಗೆ ಮಮತಾಮಯಿಯಾಗಿದ್ದರು ಎಂಬ ಪ್ರಚಾರ ಎಷ್ಟು ಸತ್ಯ ಎಂಬ ಬಗ್ಗೆಯೂ ಈ ಲೇಖಕರು ಸಂಶಯ ವ್ಯಕ್ತಪಡಿಸಿದ್ದಾರೆ. ತೆರೇಸಾ ಅವರ ಆಶ್ರಮದಲ್ಲಿ ರೋಗಿಗಳ, ಮರಣಶಯ್ಯೆಯಲ್ಲಿರುವವರ ನಿಗಾವಣಾ ವಿಧಾನ ಸಂಶಯಾಸ್ಪದವಾಗಿತ್ತು. ರೋಗಿಗಳ, ದುರ್ಬಲರ ಏಳಿಗೆಗಾಗಿ ನಾನಾ ದೇಶಗಳಿಂದ ಅಗಾಧ ಪ್ರಮಾಣದ ಹಣ ಸಂಗ್ರಹಿಸಿದ್ದರೂ ಅದರಲ್ಲಿ ಆ ಉದ್ದೇಶಕ್ಕಾಗಿ ವಿನಿಯೋಗವಾಗಿದ್ದು ಅಲ್ಪ ಪ್ರಮಾಣದ ಮೊತ್ತ. ಅವರ ಆಶ್ರಮದಲ್ಲಿ ಔಷಧಿಗಳಾಗಲಿ, ನಿಗಾವಣಾ ಸಾಧನಗಳಾಗಲಿ, ಆಹಾರ ಪದಾರ್ಥಗಳಾಗಲಿ, ಅಷ್ಟೇ ಏಕೆ ನೋವು ನಿವಾರಕ ಮಾತ್ರೆಗಳಾಗಲಿ ಸಮರ್ಪಕವಾಗಿರುತ್ತಿರಲಿಲ್ಲವೆಂದು ಈ ಲೇಖಕರು ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ.
ತೆರೇಸಾ ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಲಕ್ಷಗಟ್ಟಲೆ ಡಾಲರ್ ಹಣ ಬಂದು ಬೀಳುತ್ತಿದ್ದರೂ ಅದರಲ್ಲಿ ರೋಗಿಗಳ ಬಳಕೆಗೆ ಪುಡಿಗಾಸಿನಷ್ಟು ಮಾತ್ರ ಖರ್ಚಾಗಿ ಉಳಿದದ್ದು ಗುಪ್ತ ಖಾತೆಗಳಲ್ಲಿ ಜಮಾವಣೆಯಾಗುತ್ತಿತ್ತು. ಅವರ ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯಲ್ಲಿ ಮರಣಶಯ್ಯೆಯಲ್ಲಿದ್ದ ರೋಗಿಗಳಿಗೆ ಆಂಬ್ಯುಲೆನ್ಸ್ ಸೌಕರ್ಯವೇ ಇರಲಿಲ್ಲ. ಭೋಪಾಲ್ ಅನಿಲ ದುರಂತವಾದಾಗ ಅಲ್ಲಿಗೆ ತೆರಳಿದ ತೆರೇಸಾ ನಿಜವಾದ ಅರ್ಥದಲ್ಲಿ ಸಂತ್ರಸ್ಥರ ಸೇವೆ ಮಾಡುವ ಬದಲು ಅವರಿಗೆಲ್ಲ ಏಸುವಿನ ತಾಯಿಯ ಚಿತ್ರವಿರುವ ಪದಕಗಳನ್ನು ಹಂಚತೊಡಗಿದರು. ಅದೇ ರೀತಿ ಉತ್ತರಭಾರತದಲ್ಲಿನ ಅಗ್ನಿ ದುರಂತವೊಂದರಲ್ಲಿ ನೂರಾರು ಜನ ಸತ್ತಾಗ ಅವರ ಮಿಷನರಿಗಳೆಲ್ಲ ಪ್ರಾರ್ಥಿಸಿದ್ದು ಬಿಟ್ಟರೆ ಮತ್ತೇನೂ ಮಾಡಲಿಲ್ಲ. ಅವರ ಆಶ್ರಮದಲ್ಲಿ ಕ್ಷಯರೋಗ ಪೀಡಿತರನ್ನು ಪ್ರತ್ಯೇಕಿಸಿ ಇಡದ ಕಾರಣ ರೋಗ ಇನ್ನಷ್ಟು ಹಬ್ಬಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಕಳವಳ ವ್ಯಕ್ತಪಡಿಸಿತ್ತು… ತೆರೇಸಾ ಹೈಟಿಯ ಮಾಜಿ ಸರ್ವಾಧಿಕಾರಿ ಜೀನ್ ಕ್ಲಾಡ್ ಡುವೇಲಿಯರ್ ನಿಂದ ಹಣ ಪಡೆದು ವಿಶ್ವಾಸಾರ್ಹತೆಗೆ ಧಕ್ಕೆ ತಂದುಕೊಂಡರು. ತನ್ನ ಉದ್ಯೋಗಿಗಳ ಪಿಂಚಣಿ ನಿಧಿಯಿಂದ 450 ದಶಲಕ್ಷ ಪೌಂಡ್ನಷ್ಟು ಹಣ ದುರುಪಯೋಗಪಡಿಸಿಕೊಂಡಿದ್ದ ರಾಬರ್ಟ್ ಮ್ಯಾಕ್ಸವೆಲ್ ಎಂಬ ಬ್ರಿಟಿಷ್ ಪ್ರಕಾಶಕನಿಂದಲೂ ತೆರೇಸಾ ಹಣ ಪಡೆದು ಕಳಂಕ ಅಂಟಿಸಿಕೊಂಡರು. ‘ಸ್ಟರ್ನ್’ ಎಂಬ ಜರ್ಮನ್ ನಿಯತಕಾಲಿಕ ವರದಿ ಮಾಡಿದಂತೆ, ತೆರೇಸಾ ಮಿಷನರಿಗಳು ಸ್ವೀಕರಿಸಿದ ದೇಣಿಗೆಗಳ ಪೈಕಿ ಶೇ.7ರಷ್ಟು ಮಾತ್ರ ಧರ್ಮಾರ್ಥ ಕಾರ್ಯಕ್ಕೆ ಬಳಸಲ್ಪಟ್ಟಿವೆ. ವಿವಾದಾತ್ಮಕ ರಾಜಕೀಯ ಸಂಬಂಧವನ್ನಿಟ್ಟುಕೊಳ್ಳುವ ಮೂಲಕ ತೆರೇಸಾ ತಮ್ಮ ನೈತಿಕ ವರ್ಚಸ್ಸು ಕೆಡಿಸಿಕೊಂಡಿದ್ದಾರೆ… ಹೀಗೆ ಮದರ್ ತೆರೇಸಾ ಅವರ ಕುರಿತು ಹಲವಾರು ಟೀಕೆಗಳು ಈ ಕೃತಿಯಲ್ಲಿ ವ್ಯಕ್ತವಾಗಿದೆ. ಅವರ ಬದುಕಿನ ಇನ್ನೊಂದು ಮಗ್ಗುಲು ಅನಾವರಣಗೊಂಡಿದೆ.
ಪ್ರಚಾರದ ಪ್ರಭಾವಳಿ, ಮಾಧ್ಯಮಗಳ ಅತಿರಂಜಿತ ಪ್ರಚಾರಗಳಿಂದಾಗಿ ತೆರೇಸಾ ಅಗತ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬಿಂಬಿಸಲ್ಪಟ್ಟರೆ? ಯೋಗ್ಯತೆಗಿಂತ ಹೆಚ್ಚಿನ ರೀತಿಯಲ್ಲಿ ಅವರು ಗೌರವ ಪಡೆದರೆ? ಅವರ ಹಣಕಾಸು ವ್ಯವಹಾರ ಸಾಚಾತನದಿಂದ ಕೂಡಿತ್ತೆ? ಜನರ ಸೇವೆಯ ಸೋಗಿನಲ್ಲಿ ಅವರು ಕ್ರೈಸ್ತ ಮತಾಂತರ ಕಾರ್ಯಕ್ಕೆ ರಹಸ್ಯ ಉತ್ತೇಜನ ನೀಡುತ್ತಿದ್ದರೆ? ಇಂತಹ ಅನೇಕ ಸಂಶಯಗಳು ಅವರು ನಿಧನರಾಗಿ 15 ವರ್ಷಗಳ ಬಳಿಕ (ಮರಣ : 1997 ಸೆ.5) ‘ದಿ ಡಾರ್ಕ್ ಸೈಡ್ ಆಫ್ ಮದರ್ ತೆರೇಸಾ’ ಕೃತಿಯಿಂದ ಉದ್ಭವಿಸಿದೆ. ತೆರೇಸಾ ಬದುಕಿದ್ದಾಗಲೇ ಅವರ ಬದುಕು, ರೀತಿನೀತಿ ಬಗ್ಗೆ ಒಂದಷ್ಟು ಅನುಮಾನಗಳ ಹೊಗೆ ಎದ್ದಿತ್ತು. ಈಗ ಅದಕ್ಕೆ ಇನ್ನಷ್ಟು ಗಾಳಿ ಬೀಸಿದಂತಾಗಿದೆ. ಬೆಂಕಿ ಇಲ್ಲದೆ ಹೊಗೆ ಏಳಲು ಸಾಧ್ಯವೆ? ಬೆಂಕಿ ಉರಿಯದಂತೆ ಅದಕ್ಕೆ ತಣ್ಣೀರು ಸುರಿದು ಆರಿಸುವ ಪ್ರಯತ್ನಗಳು ಈಗ ನಡೆದರೆ ಆಶ್ಚರ್ಯವಿಲ್ಲ.
ವಿಶ್ವದ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ನೂತನ ಪೋಪ್ ಆಗಿ ಆಯ್ಕೆಯಾಗಿರುವ ಅರ್ಜೆಂಟೀನಾದ ಫ್ರಾನ್ಸಿಸ್ ಅವರ ಮುಂದೆ ಹಲವಾರು ಸವಾಲುಗಳಿವೆ. ಚರ್ಚ್ಗಳ ಆಡಳಿತದಲ್ಲಿ ಒಳಜಗಳ, ಧರ್ಮ ಗುರುಗಳ ಸೆಕ್ಸ್ ಹಗರಣ, ಭ್ರಷಾ್ಟಚಾರ ಮುಂತಾದ ಅಪಸವ್ಯಗಳಿಂದ ಪಾರು ಮಾಡುವ ಬಗೆಯನ್ನು ಅವರು ಹೇಗೆ ಕಂಡುಕೊಳ್ಳುತ್ತಾರೋ ಗೊತ್ತಿಲ್ಲ. 76ರ ಇಳಿವಯಸ್ಸಿನಲ್ಲಿರುವ ಅವರಿಂದ ಕ್ರೈಸ್ತ ಸಮುದಾಯ ಭಾರೀ ನಿರೀಕ್ಷೆಯನ್ನಿಟ್ಟುಕೊಳ್ಳುವುದು ಸಾಧ್ಯವೆ?