article by Du Gu Lakshman

ನೆನಪಿದೆಯಾ ನಿಮಗೆ?

ಐದು ವರ್ಷಗಳ ಹಿಂದೆ, ಇಡೀ ದೇಶ ಕೃಷ್ಣಾಷ್ಟಮಿಯ ಸಡಗರ, ಸಂಭ್ರಮದಲ್ಲಿದ್ದಾಗ ಒಡಿಶ್ಶಾದ ಕಂದಮಾಲ್‌ನಲ್ಲಿ ಇಡೀ ಜೀವನವನ್ನೇ ವನವಾಸಿ ಜನರ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದ ಒಬ್ಬ ಸಂತ ಬರ್ಬರ ಹತ್ಯೆಗೀಡಾಗಿದ್ದರು. ಎಲ್ಲರೂ ಕೃಷ್ಣಾಷ್ಟಮಿ ಆಚರಿಸಿ ಚಕ್ಕುಲಿ, ತಂಬಿಟ್ಟು, ಸಿಹಿ ಮೆಲ್ಲುತ್ತಿರುವಾಗ ಕಂದಮಾಲ್‌ನಲ್ಲಿ ಮಾತ್ರ ರಕ್ತದೋಕುಳಿ ಹರಿದಿತ್ತು.

ಅದು ೨೦೦೮ರ ಆಗಸ್ಟ್ ೨೩. ಕಂದಮಾಲ್‌ನ ತನ್ನ ಆಶ್ರಮದಲ್ಲಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮಕ್ಕಳೊಂದಿಗೆ ಬೆರೆತು ಭಜನೆ ಮಾಡುತ್ತಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಅವರನ್ನು ಕೊಂದು ಹಾಕಿದ್ದರು. ಇದಾಗಿ ೫ ವರ್ಷಗಳಾದರೂ ಕೃಷ್ಣಾಷ್ಟಮಿ ಬಂದಾಗಲೆಲ್ಲ ಇಲ್ಲಿನ ಜನರಿಗೆ ಆತಂಕ ಶುರುವಾಗುತ್ತದೆ, ದುಃಖ ಮಡುಗಟ್ಟುತ್ತದೆ. ಬೇಡ ಬೇಡವೆಂದರೂ ಬರ್ಬರವಾಗಿ ಹತ್ಯೆಗೀಡಾದ ಹಿಂದೂ ಸಂತ ವೇದಾಂತ ಕೇಸರಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ನೆನಪಾಗುತ್ತಾರೆ. ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನವೀನ್ ಪಾಟ್ನಾಯಕ್ ಆದಷ್ಟು ಬೇಗನೆ ಈ ಹತ್ಯೆಯ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡುವುದಾಗಿ ಘೋಷಿಸಿದ್ದರು. ಆದರೆ ಘಟನೆ ನಡೆದು ೫ ವರ್ಷಗಳಾಗಿದ್ದರೂ ಇದುವರೆಗೆ ಯಾರೊಬ್ಬರನ್ನೂ ಬಂಧಿಸಿಲ್ಲ. ಸ್ವಾಮೀಜಿಯನ್ನು ಹತ್ಯೆ ಮಾಡಿದ ಪಾತಕಿಗಳು ಯಾರು ಎಂಬುದು ಕೂಡ ತಿಳಿದುಬಂದಿಲ್ಲ. ಅಸಾರಾಂ ಬಾಪು ಲೈಂಗಿಕ ಹಗರಣವೊಂದರಲ್ಲಿ ಆರೋಪಿ ಎಂಬ ದೂರು ಬಂದ ಕೂಡಲೇ ಪೊಲೀಸರು ಅವರನ್ನು ಎರಡೇ ದಿನಗಳಲ್ಲಿ ಬಂಧಿಸಿ ಜೈಲಿಗಟ್ಟುತ್ತಾರೆ. ಮಾಲೆಗಾಂವ್ ಸ್ಫೋಟದಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಆರೋಪಿಯೆಂದು ಸಂಶಯ ಬಂದ ಕೂಡಲೇ ಆಕೆಯನ್ನು ಬಂಧಿಸಿ ಜೈಲಿನಲ್ಲಿಟ್ಟು, ಯಾವುದೇ ಸಾಕ್ಷ್ಯಗಳಿಲ್ಲದಿದ್ದರೂ ಬಿಡುಗಡೆ ಮಾಡದೇ ಕಳೆದ ೯ ವರ್ಷಗಳಿಂದ  ಜೈಲಿನಲ್ಲೇ ಆಕೆ ಖಾಲೆಯಿಂದ ನರಳಿ ನರಳಿ ಸಾಯುವಂತೆ ಮಾಡಲಾಗಿದೆ. ಆದರೆ ಲಕ್ಷಾಂತರ ಮಂದಿ ವನವಾಸಿಗಳ ಆರಾಧ್ಯ ದೈವವೇ ಆಗಿದ್ದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರ ಬರ್ಬರ ಹತ್ಯೆ ನಡೆದು ೫ ವರ್ಷಗಳೇ ಸಂದಿದ್ದರೂ ಯಾರೊಬ್ಬರನ್ನೂ ಇನ್ನೂ ಬಂಧಿಸಿಲ್ಲ, ಕನಿಷ್ಠ ಯಾರ ಮೇಲೂ ಗುಮಾನಿ ವ್ಯಕ್ತಪಡಿಸಿಲ್ಲವೆಂದರೆ ಅದೆಂತಹ ವಿಪರ್ಯಾಸ!

ಸ್ವಾಮೀಜಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ನೋಡಿದವರಿದ್ದಾರೆ. ಹತ್ಯೆಗೆ ಸಾಕಷ್ಟು ಮೊದಲೇ ಅವರ ಮೇಲೆ ೧೧ಕ್ಕೂ ಹೆಚ್ಚು ಬಾರಿ ಗಂಭೀರ ದಾಳಿ ನಡೆದಿತ್ತು. ಅದೂ ಅಲ್ಲದೆ ೨೦೦೮ರ ಆಗಸ್ಟ್ ೧೩ರಂದು ಕಂದಮಾಲ್ ಜಿಲ್ಲಾಡಳಿತಕ್ಕೆ ಸ್ವಾಮೀಜಿಯವರಿಗೆ ಪ್ರಾಣ ಬೆದರಿಕೆ ಹಾಕಿದ ಪತ್ರ ಕೂಡ ತಲುಪಿತ್ತು. ಈ ಪತ್ರದ ನಕಲು ಪ್ರತಿ ಸ್ವಾಮೀಜಿಯವರಿಗೂ ಸಿಕ್ಕಿತ್ತು. ಆ ಪತ್ರವನ್ನು ಹಿಡಿದುಕೊಂಡು ಹೋಗಿ ಪೊಲೀಸರಿಗೆ ತೋರಿಸಿ, ತನಗೆ ವೈಯಕ್ತಿಕ ಭದ್ರತೆ ಬೇಕೆಂದು ಅವರು ಕೇಳಿದ್ದರು. ಆದರೆ ಪೊಲೀಸರು ಮಾತ್ರ ಅವರಿದ್ದ ಆಶ್ರಮಕ್ಕೆ ಯಾವುದೇ ಭದ್ರತೆ ನೀಡಿರಲಿಲ್ಲ. ಪರಿಣಾಮವಾಗಿ ಕೃಷ್ಣಾಷ್ಟಮಿಯಂದೇ ಸ್ವಾಮೀಜಿ ಸೇರಿದಂತೆ ಅವರ ನಾಲ್ವರು ಶಿಷ್ಯರ ಹತ್ಯೆಯಾಯಿತು. ಹತ್ಯೆ ಮಾಡಿದವರು ಮಾವೋವಾದಿಗಳು ಎಂದು ಹೇಳಲಾಗುತ್ತಿದೆಯಾದರೂ ಸತ್ಯವೇನೆಂದು ಮಾತ್ರ ಇದುವರೆಗೂ ಹೊರಗೆ ಬಂದಿಲ್ಲ.

ಸ್ವಾಮೀಜಿ ಹತ್ಯೆಯ ಆರೋಪಿಗಳನ್ನು ೫ ವರ್ಷಗಳ ಬಳಿಕವೂ ಬಂಧಿಸದಿರುವುದನ್ನು ಪ್ರತಿಭಟಿಸಿ ಕಳೆದ ಆಗಸ್ಟ್ ೨೩ರಂದು ಸ್ಥಳೀಯ ಬಿಜೆಪಿ ಹಿರಿಯ ನಾಯಕ ಹಾಗೂ ಕಂದಮಾಲ್ ಲೋಕಸಭೆಗೆ ೨೦೦೯ರಲ್ಲಿ ಸ್ಪರ್ಧಿಸಿದ್ದ ಅಶೋಕ್ ಸಾಹು ನಿರಶನ ವ್ರತ ಕೈಗೊಂಡರು. ದುರದೃಷ್ಟಕ್ಕೆ ಅವರಿಗೆ ಆರೋಗ್ಯ ಕೈಕೊಟ್ಟಿತು. ತಕ್ಷಣವೇ ಅವರನ್ನು ಕಟಕ್‌ನ ಎಸ್‌ಸಿಬಿ ಮೆಡಿಕಲ್ ಕಾಲೇಜಿನ ತೀವ್ರ ನಿಗಾ ಘಟಕಕ್ಕೆ ಭರ್ತಿ ಮಾಡಲಾಯಿತು.ಆಗಸ್ಟ್ ೨೮ರಂದು ತಮ್ಮ ನಿರಶನ ನಿಲ್ಲಿಸಿದ ಸಾಹು ಅವರು ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರನ್ನು ಭೇಟಿಯಾಗಿ ಸ್ವಾಮೀಜಿಯವರ ಹಂತಕರನ್ನು ತಕ್ಷಣ ಬಂಧಿಸಬೇಕೆಂದು ಮತ್ತೊಮ್ಮೆ ಆಗ್ರಹಿಸಿದರು. ಸ್ವಾಮೀಜಿಯವರ ವಾರ್ಷಿಕ ಶ್ರಾದ್ಧದ ದಿನವಾದ ಆಗಸ್ಟ್ ೨೩ಕ್ಕೆ ಮೊದಲೇ ಹಂತಕರನ್ನು ಬಂಧಿಸಬೇಕೆಂದೂ ಒತ್ತಾಯಿಸಿದ್ದರು. ಆದರೆ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಈ ಬಗ್ಗೆ ತಲೆಕೆಡಿಸಿಕೊಳ್ಳದಿದ್ದಾಗ ಅಶೋಕ್ ಸಾಹು ಪುಲ್‌ಬನಿ ಜಿಲ್ಲಾ ಕೇಂದ್ರಕ್ಕೆ ಧಾವಿಸಿ ಅಲ್ಲಿ ನಿರಶನ ವ್ರತ ಕೈಗೊಂಡಿದ್ದರು.

ತಮಾಷೆಯೆಂದರೆ ಲಕ್ಷಾಂತರ ಮಂದಿ ವನವಾಸಿಗಳ ಆದರ್ಶಮೂರ್ತಿಯಾಗಿದ್ದ ಲಕ್ಷ್ಮಣಾನಂದ ಸರಸ್ವತಿಯವರ ಬರ್ಬರ ಹತ್ಯೆ ನಡೆದಾಗ ಕಂದಮಾಲ್ ನಿವಾಸಿಗಳು ಸುಮ್ಮನಿರಲಿಲ್ಲ. ಅವರ ಆಕ್ರೋಶ ಮುಗಿಲುಮುಟ್ಟಿತ್ತು. ಸ್ವಾಮೀಜಿ ಹತ್ಯೆಯ ಹಿನ್ನೆಲೆಯಲ್ಲಿ ಕ್ರೈಸ್ತ ಮುಖಂಡರು ಹಾಗೂ ಮಾವೋವಾದಿಗಳ ಸಂಚು ಅಡಗಿದೆ ಎಂಬುದು ಗುಟ್ಟಾಗಿರಲಿಲ್ಲ. ಸ್ವಾಮೀಜಿಯ ಶಿಷ್ಯರು, ಅಭಿಮಾನಿಗಳು ಜಿಲ್ಲೆಯಾದ್ಯಂತ ಸಿಡಿದೆದ್ದು ಕ್ರೈಸ್ತರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದರು. ಈ ಸಿಟ್ಟು ಹಿಂಸಾಚಾರಕ್ಕೆ ತಿರುಗಿದ್ದು ಮಾತ್ರ ದುರದೃಷ್ಟಕರ. ಆಗ ಮಾತ್ರ ಪಾಟ್ನಾಯಕ್ ಸರ್ಕಾರ ತಕ್ಷಣ ಜಾಗೃತಗೊಂಡು ಈ ಹಿಂಸಾಚಾರದ ತನಿಖೆ ಹೆಸರಿನಲ್ಲಿ ಅನೇಕ ಮುಗ್ಧ ಜನರನ್ನು ಬಂಧಿಸಿ ಸೆರೆಗಟ್ಟಿತು. ಬಂಧಿತರಾದ ಕೆಲವರಿಗೆ ತಾವೇಕೆ ಬಂಧನಕ್ಕೊಳಗಾಗಿzವೆ ಎಂಬುದು ಕೂಡ ತಿಳಿದಿರಲಿಲ್ಲ. ಕ್ರೈಸ್ತ ನನ್‌ವೊಬ್ಬಳ ಅತ್ಯಾಚಾರ ಪ್ರಕರಣದಲ್ಲೂ ೩೨ ಮಂದಿ ಅಮಾಯಕರನ್ನು ಬಂಧಿಸಿ ಸೆರೆಗಟ್ಟಲಾಗಿತ್ತು. ಅವರ ವಿಚಾರಣೆ ಇನ್ನೂ ಶುರುವಾಗಿಲ್ಲ. ಪ್ರಧಾನಿ ಮನಮೋಹನ್‌ಸಿಂಗ್ ಆಗ ಕ್ರೈಸ್ತ ನನ್ ಮೇಲಿನ ಅತ್ಯಾಚಾರ ಪ್ರಕರಣ ‘ಒಂದು ರಾಷ್ಟ್ರೀಯ ಅವಮಾನ’ (ಓಚಿಣioಟಿಚಿಟ Shಚಿme) ಎಂದು ವಿದೇಶಗಳಲ್ಲಿ ಭಾಷಣ ಮಾಡುತ್ತ ಆಕ್ರೋಶ ವ್ಯಕ್ತಪಡಿಸಿದ್ದರು. ಲಕ್ಷ್ಮಣಾನಂದ ಸರಸ್ವತಿ ಸ್ವಾಮೀಜಿಯವರ ಬರ್ಬರ ಹತ್ಯೆ ಮಾತ್ರ ಅವರ ದೃಷ್ಟಿಯಲ್ಲಿ ರಾಷ್ಟ್ರೀಯ ಅವಮಾನದ ಪ್ರಸಂಗವೆಂದು ಅನಿಸಲೇ ಇಲ್ಲ. ಹಿಂದೂ ಸ್ವಾಮೀಜಿಯೊಬ್ಬರ ಹತ್ಯೆಗಿಂತ ಕ್ರೈಸ್ತ ನನ್ ಮೇಲಿನ ಅತ್ಯಾಚಾರ ಪ್ರಸಂಗವೇ ಬಹಳ ಗಂಭೀರ ಸ್ವರೂಪದ್ದೆಂದು ನಮ್ಮ ಪ್ರಧಾನಿಗೆ ಯಾಕೆ ಅನಿಸಿರಬೇಕೆಂದು ನಿಮಗೆ ಬಿಡಿಸಿ ಹೇಳಬೇಕಾದ ಅಗತ್ಯವಂತೂ ಇಲ್ಲ!

ಹೇಡಿ ಸರ್ಕಾರ

ಸ್ವಾಮಿ ಲಕ್ಷ್ಮಣಾನಂದರ ಹತ್ಯೆಯ ಹಿಂದೆ ಮಾವೋವಾದಿ ನಾಯಕ ಸಬ್ಯಸಾಚಿ ಪಾಂಡ್ಯನ ಕೈವಾಡವಿದೆ ಎನ್ನುವುದು ಒಡಿಶ್ಶಾ ಸರ್ಕಾರದ ಹೇಳಿಕೆ. ಆತನಿಗೆ ಲಕ್ಷ್ಮಣಾನಂದರ ಹತ್ಯೆ ಮಾಡುವುದಕ್ಕಾಗಿ ಚರ್ಚ್ ಆಡಳಿತ ಭಾರೀ ಪ್ರಮಾಣದ ಹಣ ನೀಡಿತ್ತೆಂದೂ ಹೇಳಲಾಗುತ್ತಿದೆ. ಅದಕ್ಕಾಗಿ ಪಾಂಡ್ಯನನ್ನು ಮಾವೋವಾದಿಗಳು ತಮ್ಮ ಸಂಘಟನೆಯಿಂದ ಹೊರಹಾಕಿದ್ದರೆಂದೂ ಸುದ್ದಿ. ಅದೇನೇ ಇರಲಿ, ಒಡಿಶ್ಶಾ ಸರ್ಕಾರಕ್ಕೆ ಮಾತ್ರ ಲಕ್ಷ್ಮಣಾನಂದರ ಹಂತಕರನ್ನು ಸೆರೆಹಿಡಿಯುವ ಮನಸ್ಸಿಲ್ಲ. ಹಾಗೇನಾದರೂ ಮಾಡಿದರೆ, ಮುಂದಿನ ಚುನಾವಣೆಯಲ್ಲಿ ಕ್ರೈಸ್ತ ವೋಟ್‌ಬ್ಯಾಂಕ್‌ನ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿ ಪಾಟ್ನಾಯಕ್ ಅವರನ್ನು ಕಾಡಿದೆ. ಇತ್ತೀಚೆಗೆ ಭಯೋತ್ಪಾದಕ ಯಾಸಿನ್ ಭಟ್ಕಳ್ ಒಡಿಶ್ಶಾದಲ್ಲಿ ಅಡಗಿದ್ದನೆಂಬ ಸುದ್ದಿ ಹರಡಿದ್ದಾಗಲೂ ಮುಖ್ಯಮಂತ್ರಿ ಪಾಟ್ನಾಯಕ್ ಆತನನ್ನು ಬಂಧಿಸುವ ಗೋಜಿಗೇ ಹೋಗಿರಲಿಲ್ಲ. ಯಾಸಿನ್ ಭಟ್ಕಳ್‌ನನ್ನು ತನ್ನ ರಾಜ್ಯದಲ್ಲಿ ಬಂಧಿಸಿದರೆ ಎಲ್ಲಿ ಮುಸ್ಲಿಮರಿಗೆ ಸಿಟ್ಟು ಬರುತ್ತದೆಯೋ ಎಂಬ ಭೀತಿ ಅವರನ್ನು ಕಾಡಿರಬೇಕು. ಯಾಸಿನ್ ಭಟ್ಕಳನನ್ನು ಬೇರೆ ಯಾವ ಸರ್ಕಾರವಾದರೂ ಬಂಧಿಸಲಿ, ತನ್ನ ಸರ್ಕಾರದಿಂದ ಮಾತ್ರ ಆತನ ಬಂಧನವಾಗಿ ಮುಸ್ಲಿಮರಿಗೆ ಬೇಸರವಾಗುವುದು ಬೇಡ ಎಂಬ ಕಾಳಜಿ ಅವರದ್ದು! ಇಂತಹ ಹೇಡಿ ಸರ್ಕಾರದಿಂದ ಹಿಂದೂ ಸಂತ ಲಕ್ಷ್ಮಣಾನಂದ ಸರಸ್ವತಿಯವರ ಹಂತಕರ ಬಂಧನ ಆಗಬಹುದೆಂದು ಯಾರಾದರೂ ನಿರೀಕ್ಷಿಸಲು ಸಾಧ್ಯವೆ?

ಕಾಂಗ್ರೆಸ್ ಪಕ್ಷ ತನ್ನ ಪ್ರಬಲ ಶತ್ರು ಎಂದು ಹೇಳಿಕೊಳ್ಳುವ ಪಾಟ್ನಾಯಕ್ ನೇತೃತ್ವದ ಬಿಜು ಜನತಾದಳ (ಬಿಜೆಡಿ)ಕ್ಕೆ ಮುಸ್ಲಿಂ ಹಾಗೂ ಕ್ರೈಸ್ತರನ್ನು ಯಾವ ಕಾರಣಕ್ಕೂ ಎದುರು ಹಾಕಿಕೊಳ್ಳಲು ಧೈರ್ಯವಿಲ್ಲ. ಲಕ್ಷ್ಮಣಾನಂದ ಸರಸ್ವತಿಯ ಹಂತಕರು ಯಾರೆಂದು ಗೊತ್ತಿದ್ದರೂ ಬಂಧಿಸುವ ಧೈರ್ಯ ಅವರೇಕೆ ಮಾಡಿಲ್ಲ? ಈ ಪ್ರಶ್ನೆಗೆ ಸರಳವಾದ ಉತ್ತರ: ಸೋನಿಯಾ ಗಾಂಧಿಯ ಭಯ! ಸೋನಿಯಾ ಗಾಂಧಿ ಮುನಿದರೆ ಕೇಂದ್ರದಿಂದ ಸಿಗಬೇಕಾದ ಆರ್ಥಿಕ ನೆರವು ತನ್ನ ರಾಜ್ಯಕ್ಕೆ ಹರಿದು ಬರುವುದಿಲ್ಲ ಎಂಬ ಗಾಬರಿ ಬೇರೆ ಪಾಟ್ನಾಯಕ್‌ರನ್ನು ಹಾಗೆ ಮಾಡಿರಲೇಬೇಕು. ಲಕ್ಷ್ಮಣಾನಂದ ಸ್ವಾಮಿಯವರ ಹತ್ಯೆಯ ಪ್ರಸಂಗ ಕೊನೆಗೂ ನಿಗೂಢವಾಗಿಯೇ ಉಳಿದು ಹೋಗಲಿದೆಯೆ?

***

ಸೋನಿಯಾಗಾಂಧಿ ಯುಪಿಎ ಅಧ್ಯಕ್ಷೆಯಾಗಿ ಆಡಳಿತ ಸೂತ್ರ ಕೈಗೆತ್ತಿಕೊಂಡ ಬಳಿಕ ಒಡಿಶ್ಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಝಾರ್ಖಂಡ್ ಮೊದಲಾದ ಹಿಂದುಳಿದವರೇ ಹೆಚ್ಚಾಗಿರುವ ರಾಜ್ಯಗಳಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರ ಚಟುವಟಿಕೆ ಶರವೇಗದಲ್ಲಿ ಸಾಗಿದೆ. ಸೋನಿಯಾ ಯುಪಿಎ ಅಧ್ಯಕ್ಷೆ ಆಗಿರುವುದು ಮಿಶನರಿಗಳ ಮತಾಂತರದಂತಹ ಸಮಾಜಘಾತುಕ ಕೃತ್ಯಗಳಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ. ಇದನ್ನೇ ದುರುಪಯೋಗಿಸಿಕೊಂಡು ಮಿಷನರಿಗಳು ಅಮಾಯಕ ವನವಾಸಿಗಳನ್ನು ಬಲಾತ್ಕಾರವಾಗಿ ಮತಾಂತರಿಸುವ ಕಾರ್ಯಕ್ಕೆ ಕೈ ಹಚ್ಚಿದ್ದಾರೆ.

ಮೇರಿ ವನವಾಸಿ ಸ್ತ್ರೀಯಂತೆ!

ಇತ್ತೀಚೆಗೆ ಝಾರ್ಖಂಡ್‌ನ ರಾಂಚಿಯಲ್ಲಿ ವನವಾಸಿ ಜನರ ಬೃಹತ್ ಪ್ರತಿಭಟನೆಯೊಂದು ನಡೆಯಿತು. ರಾಂಚಿಯ ಮೊರ‍್ಹಾಬಾದಿ ಮೈದಾನದಲ್ಲಿ ನಡೆದ ಆ ಪ್ರತಿಭಟನೆಯಲ್ಲಿ ೨೦ ಸಾವಿರಕ್ಕೂ ಹೆಚ್ಚು ಮಂದಿ ವನವಾಸಿಗಳು ಪಾಲ್ಗೊಂಡಿದ್ದರು. ವನವಾಸಿಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಸರಣ ಸಂಪ್ರದಾಯ ಪಾಲಿಸುವ ವನವಾಸಿ ಸ್ತ್ರೀಯರ ಕೆಂಪು ಅಂಚಿನ ಬಿಳಿ ಸೀರೆಯನ್ನು ರಾಂಚಿಯಲ್ಲಿರುವ ಮದರ್‌ಮೇರಿ ಪ್ರತಿಮೆಗೆ ಸುತ್ತಿz ಈ ಪ್ರತಿಭಟನೆಗೆ ಕಾರಣ. ಮದರ್ ಮೇರಿ ಸರಣ ಸಂಪ್ರದಾಯದ ವನವಾಸಿ ಸ್ತ್ರೀಯರಂತೆ ಕೆಂಪು ಅಂಚಿನ ಬಿಳಿ ಸೀರೆಯುಟ್ಟು ತನ್ನ ಕಂದ ಜೀಸಸ್‌ನನ್ನು ಕಂಕುಳಲ್ಲಿ ಎತ್ತಿಕೊಂಡಿರುವ ದೃಶ್ಯ ನೋಡಿ ಸರಣ ಸಂಪ್ರದಾಯದ ವನವಾಸಿಗಳ ರಕ್ತ ಕುದ್ದುಹೋಗಿತ್ತು. ‘ಕೆಂಪು ಅಂಚಿನ ಬಳಿ ಸೀರೆ ವನವಾಸಿ ಸ್ತ್ರೀಯರ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಉಡುಗೆ. ಇದನ್ನು ಬೇರೆ ಯಾರೂ ಬಳಸಬಾರದೆಂದು ನಾನು ಹೇಳುತ್ತಿಲ್ಲ. ಆದರೆ  ವಿದೇಶಿಯಳಾದ ಮದರ್ ಮೇರಿಗೆ ಈ ಸೀರೆ ತೊಡಿಸಿ ವನವಾಸಿಗಳನ್ನು ಮತಾಂತರಗೊಳಿಸುವ ಷಡ್ಯಂತ್ರ ಇದರ ಹಿಂದಿದೆ ಎಂಬುದನ್ನು ನಾವು ಮರೆಯುವುದಿಲ್ಲ. ಮದರ್ ಮೇರಿ ಮೂಲತಃ ಝಾರ್ಖಂಡ್ ರಾಜ್ಯಕ್ಕೆ ಸೇರಿದವಳು ಎಂದು ಮಿಷನರಿಗಳ ಅಪಪ್ರಚಾರ ಮಾಡಿ ನಮ್ಮ ಜನರ ತಲೆ  ಕೆಡಿಸುತ್ತಿದ್ದಾರೆ. ಇಂತಹ ಹುನ್ನಾರವನ್ನು ಅವರು ಕಳೆದ ೫೦ ವರ್ಷಗಳಿಂದಲೂ ಮಾಡುತ್ತಲೇ ಇದ್ದಾರೆ. ವನವಾಸಿಗಳಾದ ನಮ್ಮ ಅಸ್ಮಿತೆಯೇ ಆತಂಕದಲ್ಲಿದೆ’ ಎಂದು ಸರಣ ವನವಾಸಿ ಸಮಾಜದ ಮುಖ್ಯಸ್ಥ ಬಂಧನ್ ಟಿಗ್ಗ ಬೇಸರದಿಂದ ಹೇಳುತ್ತಾರೆ.

ಮದರ್ ಮೇರಿಗೆ ವನವಾಸಿ ಸ್ತ್ರೀಯರ ಸಾಂಪ್ರದಾಯಿಕ ಸೀರೆ ಉಡಿಸಿರುವ ಬಗ್ಗೆ ಚರ್ಚ್ ಆಡಳಿತ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ಧರಿಸಿದೆ. ಒಂದಿಬ್ಬರು ಫಾದರ್‌ಗಳು ಮಾತ್ರ ‘ಇದರಲ್ಲೇನು ತಪ್ಪು? ಸಾವಿರಾರು ಬುಡಕಟ್ಟು ನಿವಾಸಿಗಳು ಈಗಾಗಲೇ ಕ್ರೈಸ್ತ ಮತವನ್ನು ಅಪ್ಪಿಕೊಂಡಿದ್ದಾರೆ. ಆದರೆ ಅವರು ಈಗಲೂ ತಮ್ಮ ಉಡುಗೆ-ತೊಡುಗೆ, ರೀತಿ-ರಿವಾಜುಗಳನ್ನು ಗೌರವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮದರ್ ಮೇರಿಯನ್ನು ವನವಾಸಿಗಳ ಸಾಂಪ್ರದಾಯಿಕ ಸೀರೆಯ ಉಡುಗೆಯಲ್ಲಿ ಕಂಡರೆ ಅವರಿಗೆ ಖುಷಿಯಾಗುವುದಿಲ್ಲವೆ?’ ಎಂದು ಸಮಜಾಯಿಷಿ ನೀಡುತ್ತಾರೆ. ಹಿಂದುಗಳನ್ನು ಮತಾಂತರಿಸಲು ಕ್ರೈಸ್ತ ಮಿಷನರಿಗಳು ಎಂತೆಂತಹ ಕಿತಾಪತಿಗಳನ್ನು ಮಾಡುತ್ತಾರೆ ಎಂಬುದು ಗುಟ್ಟೇನೂ ಅಲ್ಲ. ಬೆಂಗಳೂರಿನ ರಾಯನ್ ಸರ್ಕಲ್ ಬಳಿ ಇರುವ ಚರ್ಚ್ ಗೋಡೆಯ ಮೇಲೆ ‘ಓಂ ಯೇಸು ಕ್ರಿಸ್ತಾಯ ನಮಃ’ ಎಂದು ಎದ್ದು ಕಾಣುವಂತೆ ಬರೆಯಲಾಗಿದೆ. ‘ಓಂ ಕೃಷ್ಣಾಯ ನಮಃ’ ಎಂದು ಪ್ರತಿನಿತ್ಯ ಆರಾಧಿಸುವ ಹಿಂದುಗಳು ಅದೇ ಧಾಟಿಯ ‘ಓಂ ಯೇಸು ಕ್ರಿಸ್ತಾಯ ನಮಃ’ ಎಂಬ ಮಂತ್ರಕ್ಕೆ ಮರುಳಾಗಲಿ ಎಂಬುದೇ ಇದರ ಹಿಂದಿನ ಷಡ್ಯಂತ್ರ. ಮೊದಲೆಲ್ಲ ಕ್ರೈಸ್ತ ನನ್‌ಗಳು ಬಿಳಿ ಉಡುಗೆ ತೊಡುತ್ತಿದ್ದರು. ಆದರೀಗ ಹಿಂದುಳಿದವರನ್ನು ಮರುಳು ಮಾಡಿ ಅವರನ್ನು ಕ್ರೈಸ್ತರನ್ನಾಗಿ ಮತಾಂತರಿಸಲು ನನ್‌ಗಳು ಕಾವಿ ಸೀರೆ ಧರಿಸತೊಡಗಿದ್ದಾರೆ! ಚರ್ಚ್‌ಗಳಲ್ಲಿ ಯೇಸುವಿಗೆ, ಮೇರಿಗೆ ಹಿಂದುಗಳಂತೆಯೇ ಆರತಿ ಬೆಳಗಿ, ತೀರ್ಥ ಪ್ರಸಾದ ವಿತರಿಸುವ ಕಾರ್ಯಕ್ರಮವನ್ನೂ ಶುರು ಹಚ್ಚಿಕೊಂಡಿದ್ದಾರೆ. ಒಂದೊಂದು ರಾಜ್ಯದಲ್ಲಿ, ಇಂತಹ ಅಲ್ಲಿಗೆ ಒಪ್ಪುವ ಷಡ್ಯಂತ್ರಗಳ ಬಲೆಯನ್ನು ಮಿಷನರಿಗಳು ಹೆಣೆಯುತ್ತಲೇ ಇರುತ್ತಾರೆ.

ಝಾರ್ಖಂಡ್ ರಾಜ್ಯದಲ್ಲೂ ವನವಾಸಿ ಜನರನ್ನು ಮತಾಂತರಿಸಲು ಮೇರಿಗೆ ಸೀರೆ ತೊಡಿಸುವ ಕಾಯಕಕ್ಕೆ ಈ ಮಿಷನರಿಗಳು ಕೈ ಹಚ್ಚಿದ್ದಾರೆ. ಆದರೆ ಇದರ ವಿರುದ್ಧ ಭಾರೀ ಪ್ರತಿಭಟನೆ ಪ್ರಾರಂಭವಾಗಿದೆ. ಪ್ರತಿಭಟನೆ ಝಾರ್ಖಂಡ್ ರಾಜ್ಯಕ್ಕೆ ಮಾತ್ರ ಸೀಮಿತವಾಗಿರದೆ ನೆರೆಯ ಛತ್ತೀಸ್‌ಗಢ, ಪಶ್ಚಿಮ ಬಂಗಾಳಕ್ಕೂ ವ್ಯಾಪಿಸಿದೆ. ಏಕೆಂದರೆ ಅಲ್ಲೆಲ್ಲ ಭಾರೀ ಸಂಖ್ಯೆಯಲ್ಲಿ ಸರಣ ಸಂಪ್ರದಾಯ ಪಾಲಿಸುವ ವನವಾಸಿಗಳು ನೆಲೆಸಿದ್ದಾರೆ. ೨೧ ವನವಾಸಿ ಗುಂಪುಗಳನ್ನು ಪ್ರತಿನಿಧಿಸುವ  ಅಖಿಲ ಭಾರತ ಸರಣ ಧಾರ್ಮಿಕ ಮತ್ತು ಸಾಮಾಜಿಕ ಸಮನ್ವಯ ಸಮಿತಿ ಈ ಪ್ರತಿಭಟನೆಯ ಮುಂಚೂಣಿಯಲ್ಲಿದೆ. ‘ವನವಾಸಿ ಸೀರೆ ತೊಟ್ಟ ಮದರ್ ಮೇರಿಯ ಪ್ರತಿಮೆಯನ್ನು ಮೊದಲು ತೆಗೆದು ಹಾಕಿ. ಇಲ್ಲದಿದ್ದರೆ ಬರುವ ಡಿಸೆಂಬರ್ ೨೫ರಂದು ಲಕ್ಷಾಂತರ ವನವಾಸಿ ಜನರು ರಾಂಚಿಯಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ’ ಎಂದು ಈ ಸಮಿತಿ ಎಚ್ಚರಿಕೆಯ ಕರೆ ನೀಡಿದೆ. ೨೦೦೧ರಲ್ಲಿ ಝಾರ್ಖಂಡ್ ರಾಜ್ಯವೊಂದರಲ್ಲೇ ೩೨ ಲಕ್ಷ ಸರಣ ಸಂಪ್ರದಾಯದ ವನವಾಸಿ ಜನರಿದ್ದರು. ಆ ಸಂಖ್ಯೆ ಈಗ ಇನ್ನಷ್ಟು ಹೆಚ್ಚಿದೆ. ಇಡೀ ದೇಶದಲ್ಲಿ ಸುಮಾರು ೧೦ ಕೋಟಿ ಸರಣ ಸಂಪ್ರದಾಯದ ವನವಾಸಿ ಜನರಿದ್ದಾರೆ ಎಂದು ಸಮೀಕ್ಷೆಯೊಂದರಿಂದ ಗೊತ್ತಾಗಿದೆ.

ಚರ್ಚ್ ಮಿಷನರಿಗಳಿಗೆ ಮಾತ್ರ ಯಾವುದೇ ಭಯವಿದ್ದಂತೆ ಕಾಣುತ್ತಿಲ್ಲ. ೭೦ರ ದಶಕದಲ್ಲೇ ವನವಾಸಿ ಜನರಿರುವ ರಾಜ್ಯಗಳಿಗೆ ಕಾಲಿಟ್ಟ ಅವರು ಆಗ ಹಾಕಿದ ಜನಪ್ರಿಯ ಘೋಷಣೆ ಏನು ಗೊತ್ತೆ? ‘ನಾಗಾಲ್ಯಾಂಡ್ ಸೇ ನಾಗ್ಪುರ್ ವಯಾ ಛೋಟಾ ನಾಗ್ಪುರ್’. ಮತಾಂತರದ ಮೂಲಕ ಹಿಂದೂ ಸಮಾಜದ ಬುಡಕ್ಕೆ ಕೊಡಲಿಯೇಟು ಹಾಕಬೇಕೆಂಬುದೇ ಮಿಷನರಿಗಳ ಮೂಲ ಉzಶ. ಬಡ ಜನರಿಗೆ ಸೇವೆ, ಶಿಕ್ಷಣ ಎನ್ನುವುದೆಲ್ಲ ಕೇವಲ ಸೋಗು ಅಷ್ಟೆ. ಸೇವೆ, ಶಿಕ್ಷಣದ ಸೋಗು ಹಾಕಿ ಅಮಾಯಕ ಹಿಂದುಗಳನ್ನು ಮತಾಂತರಗೊಳಿಸುವ ಷಡ್ಯಂತ್ರ ನಿರಂತರವಾಗಿ ನಡೆಯುತ್ತಲೇ ಇದೆ. ೧೯೭೦ರಲ್ಲಿ ಝಾರ್ಖಂಡ್‌ನಲ್ಲಿ ಮಂತ್ರಿ ಹಾಗೂ ಕಾಂಗ್ರೆಸ್ ನಾಯಕರಾಗಿದ್ದ ಕಾರ್ತಿಕ್ ಒರಾನ್ ಮತ್ತು ಆತನ ಪತ್ನಿ ಸುಮತಿ ಒರಾನ್ ಕ್ರೈಸ್ತ ಮಿಷನರಿಗಳ ಮತಾಂತರ ಚಟುವಟಿಕೆ ವಿರುದ್ಧ ಪ್ರತಿಭಟಿಸಿದ್ದರು. ಅದನ್ನು ತಡೆಯಲು ಆಂದೋಲನ ಶುರು ಮಾಡಿದ್ದರು. ಈಗಿನ ಕಾಂಗ್ರೆಸ್ ನಾಯಕರು ಮಾತ್ರ ಮತಾಂತರದ ವಿರುದ್ಧ ಧ್ವನಿಯೆತ್ತದೆ ಮೌನವಾಗಿದ್ದಾರೆ. ವನವಾಸಿ ಜನರು ಮಾತ್ರ ಮೌನವಾಗಿಲ್ಲ. ಆಕ್ರೋಶ ಒಳಗೊಳಗೇ ಹೆಪ್ಪುಗಟ್ಟುತ್ತಿದೆ. ಆಕ್ರೋಶದ ಆ ಲಾವಾರಸ ಯಾವಾಗ ಬೇಕಾದರೂ ಉಕ್ಕಿ ಹರಿಯಬಹುದು. ಆಗ ಏನಾಗುತ್ತದೋ ಗೊತ್ತಿಲ್ಲ. ಏನಾದರೂ ಅನಾಹುತ ನಡೆದರೆ  ಕಾಂಗ್ರೆಸ್ ನಾಯಕರೇ ಅದಕ್ಕೆ ಆಗ ಜವಾಬ್ದಾರರಾಗಬೇಕಾಗುತ್ತದೆ.

ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷೆ ಆಗಿz ತಡ, ದೇಶದ ಆಯಕಟ್ಟಿನ ಉನ್ನತ ಹುದ್ದೆಗಳಿಗೆ ಕ್ರೈಸ್ತರನ್ನೇ ತಂದುತಂದು ಕೂರಿಸಲಾಗುತ್ತಿದೆ. ಕೇಂದ್ರ ವಿಚಕ್ಷಣಾ ದಳ (ಸಿವಿಸಿ)ದಂತಹ ಪ್ರಮುಖ ಹುದ್ದೆಗೂ ಕೇರಳ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ತಾಳೆ ಎಣ್ಣೆ ಆಮದು ಹಗರಣದ ಪ್ರಮುಖ ಆರೋಪಿಯಾಗಿದ್ದ ಪಿ.ಜೆ.ಥಾಮಸ್ ಅವರನ್ನು ತಂದು ಕೂರಿಸಲಾಗಿತ್ತು. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಇದರ ವಿರುದ್ಧ ಭಾರೀ ಕೋಲಾಹಲ ಎಬ್ಬಿಸಿದ ಮೇಲಷ್ಟೇ ಥಾಮಸ್‌ಗೆ ಎತ್ತಂಗಡಿಯಾಯಿತು. ಕೇಂದ್ರ ರಕ್ಷಣಾ ಸಚಿವ ಸ್ಥಾನದಲ್ಲಿ ಎ.ಕೆ.ಆಂಟನಿ, ಕೇರಳ ಮುಖ್ಯಮಂತ್ರಿಯಾಗಿ ಒಮನ್ ಚಾಂಡಿ, ಇದೀಗ ಕರ್ನಾಟಕದಲ್ಲೂ ಗೃಹಸಚಿವರಾಗಿ ಕೆ.ಜೆ.ಜಾರ್ಜ್… ಇವೆಲ್ಲ ಕೆಲವು ಉದಾಹರಣೆಗಳು, ಅಷ್ಟೆ. ಗೃಹಸಚಿವರಾಗಲು ಕೆ.ಜೆ.ಜಾರ್ಜ್‌ಗಿಂತ ಸಮರ್ಥರಾದ ಶಾಸಕರು ರಾಜ್ಯ ಕಾಂಗ್ರೆಸ್‌ನಲ್ಲಿ ಇರಲಿಲ್ಲವೆ? ಸೋನಿಯಾ ಗಾಂಧಿ ಕೈಯಲ್ಲಿ ಅಧಿಕಾರ ಸೂತ್ರ ಇರುವಷ್ಟು ದಿನ ಇಂತಹ ಅಪಸವ್ಯಗಳು ನಡೆಯುತ್ತಲೇ ಇರುತ್ತವೆ. ಜೊತೆಗೆ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರಂಥ ಹಿಂದೂ ಸಂತರು, ಸಾಮಾಜಿಕ ಸುಧಾರಕರ ಬರ್ಬರ ಹತ್ಯೆಗಳೂ ನಡೆಯುತ್ತಲೇ ಇದ್ದರೆ ಆಶ್ಚರ್ಯವೇನೂ ಇಲ್ಲ!

Leave a Reply

Your email address will not be published.

This site uses Akismet to reduce spam. Learn how your comment data is processed.