– ಕೌಸ್ತುಭಾ ಭಾರತೀಪುರಂ, ವಕೀಲರು

ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021, ಇದನ್ನು ಸೆಪ್ಟೆಂಬರ್ 15 2022ರಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ವಿಧಾನ ಪರಿಷತ್ತಿನಲ್ಲಿ ಮಂಡನೆಯನ್ನು ಮಾಡಿದ್ದುದಲ್ಲದೆ ಧ್ವನಿ ಮತದ ಮೂಲಕ ವಿಧೇಯಕಕ್ಕೆ ಅಂಗೀಕಾರವು ಸಿಕ್ಕಿತು. ರಾಜ್ಯಪಾಲರು ರುಜು ಹಾಕಿರುವುದಷ್ಟೇ, ಅಧಿಕೃತ ಜ್ಞಾಪನವನ್ನು ಹೊರಡಿಸಿದರೆ ವಿಧೇಯಕವು ಕಾಯ್ದೆಯಾಗುತ್ತದೆ.

ಮತಾಂತರ ನಿಷೇಧ ಕಾಯ್ದೆ ಎಂದೇ ಹೆಸರನ್ನು ಪಡೆದಿರುವ ಈ ಕಾಯ್ದೆಯ ಬಗೆಗೆ ಒಂದಿಷ್ಟು ಮಾತನಾಡೋಣ.

ಮತಾಂತರವೆಂದರೇನು?

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021 ರ ಕಲಂ 2(ç) ಹೇಳುವಂತೆ “ಮತಾಂತರ ಎಂದರೆ ಯಾರೇ ವ್ಯಕ್ತಿಯು ತನ್ನ ಸ್ವಂತ ಧರ್ಮವನ್ನು ತ್ಯಜಿಸಿ ಮತ್ತೊಂದು ಧರ್ಮವನ್ನು ಅಳವಡಿಸಿಕೊಳ್ಳುವುದು”

ವಿಶ್ವಕೋಶ 2022ರ ಪ್ರಕಾರ ” ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು ಇತರ ಜನರಿಗೆ ಒಂದು ಕಾರಣ ,ಸಿದ್ಧಾಂತ ಅಥವಾ ಧರ್ಮವನ್ನು ಅನುಸರಿಸಲು ಅಥವಾ ಬೆಂಬಲಿಸಲು ಮನವೊಲಿಸುವ  ನಿಟ್ಟಿನಲ್ಲಿ ಪ್ರಯತ್ನಿಸುವ ನಿರ್ಣಯ ಅಥವಾ ಉತ್ಸಾಹ”

ಮತಾಂತರದಲ್ಲಿ ಎರಡು ಬಗೆಯನ್ನು ಕಾಣಬಹುದು ಒಂದು ರಾಜಕೀಯ ಮತಾಂತರ ಮತ್ತೊಂದು ಧಾರ್ಮಿಕ ಮತಾಂತರ.

ಇದರಲ್ಲಿ ರಾಜಕೀಯ ಮತಾಂತರವು ನಮಗೆಲ್ಲಾ  ಗೊತ್ತೇ ಇದೆ. ಪ್ರಸ್ತುತ ಇಲ್ಲಿ ನಾವು ಮಾತನಾಡಲು ಹೊರಟಿರೋದು ಧಾರ್ಮಿಕ ಮತಾಂತರದ ಬಗ್ಗೆ .

ನಾವು ಈವರೆಗೆ ನಂಬಿಕೊಂಡು ಆಚರಿಸಿಕೊಂಡು ಬಂದಿರುವಂತಹ ಮತವನ್ನು ಬಿಟ್ಟು ಅನ್ಯ ಮತವನ್ನು ಅನುಸರಿಸುವ ಅಪ್ಪಿಕೊಳ್ಳುವ ತನ್ಮೂಲಕ ತನ್ನ ಅಸಲಿ ಮತದ ಜೊತೆಗೆ ಅಂತರವನ್ನು ಕಾಪಾಡಿಕೊಳ್ಳುವುದು ಮತಾಂತರವೆನಿಸುತ್ತದೆ.

ಸ್ವ ಇಚ್ಛೆಯಿಂದ ಆಗುವ ಮತಾಂತರಕ್ಕಲ್ಲ , ಈ ಸಮಾಜದ ಅಥವಾ ಕಾನೂನಿನ ವಿರೋಧ, ಹಿಂದೂವೇತರ ಧಾರ್ಮಿಕ ಮತಗಳು ತಮ್ಮ ಧರ್ಮದ ಅನುಯಾಯಿಗಳನ್ನು ಹೆಚ್ಚಿಸುವ ಅಥವಾ ಅವರ ಸಿದ್ಧಾಂತಗಳಿಗೆ ನಂಬಿಕೆಗಳಿಗೆ ನಿಷ್ಠರಾಗುವಂತೆ ಯಾವುದಾದರೂ ರೂಪದಲ್ಲಿ (ಏನ ಕೇನ ಪ್ರಕಾರೇಣ ) ಪ್ರಯತ್ನಿಸುವ ಉಪ ಮಾರ್ಗಗಳನ್ನು.

ಒಂದು ಧರ್ಮವು ಲವ್ ಜಿಹಾದ್ ಮುಂತಾದ ದಾರಿಗಳನ್ನು ಹುಡುಕಿದರೆ ಕ್ರಿಶ್ಚಿಯನ್ ಧರ್ಮವು  ಬೈಬಲ್ ನಲ್ಲಿಯೇ ಧಾರ್ಮಿಕ ಮತಾಂತರವನ್ನು ಸುವಾರ್ತಾ ಬೋಧನೆ ಎಂದು ಕರೆಯಲ್ಪಡುತ್ತದೆ. ಇದರಂತೆ ಕ್ರೈಸ್ತರಿಗೆ ಕರ್ತವ್ಯವನ್ನು ಈ ನಿಟ್ಟಿನಲ್ಲಿ  ವಿಧಿಸುತ್ತದೆ. ಬೈಬಲ್ಲಿನ ಮತ್ತಾಯ 28: 19- 20 ಅಡಿಯಲ್ಲಿ ಹೀಗೆ ಹೇಳುತ್ತದೆ.”… ಆದ್ದರಿಂದ, ಹೋಗಿ ಎಲ್ಲಾ ರಾಷ್ಟ್ರಗಳನ್ನು ಶಿಷ್ಯರನ್ನಾಗಿ ಮಾಡಿ, ತಂದೆ, ಮಗ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ಅವರನ್ನು ಬ್ಯಾಪ್ಟೈಜ್ ಮಾಡುವುದು; ನಾನು ನಿಮಗೆ ಆಜ್ಞಾಪಿಸಿದ ಎಲ್ಲಾ ವಿಷಯಗಳನ್ನು ಅವರಿಗೆ ಬೋಧಿಸುತ್ತಿದ್ದೇನೆ”.

ಧಾರ್ಮಿಕ  ಮತಾಂತರವು ಸಂವಿಧಾನಿಕ ಹಕ್ಕೇ?

ಇಲ್ಲ ,  ಯಾವುದೇ  ಮತಾಂತರವು ಸಂವಿಧಾನದಡಿಯಲ್ಲಿ ಲಭ್ಯವಿರುವ ಮೂಲಭೂತ ಹಕ್ಕಿಗೆ ಸಂಬಂಧಿಸಿದುದ್ದಲ್ಲ.

ಹಾಗಿದ್ದರೆ, “ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ  2021” ಇದರಲ್ಲಿ  ನಮೂದಿಸಲಾಗಿರುವಂತಹ ಪ್ರಮುಖ ಅಂಶಗಳ ಕಡೆ ಗಮನವನ್ನು ಕೊಡೋಣ;

ಇಲ್ಲಿಯ ಕಲಂ 2 ಪರಿಭಾಷೆಗಳು ಎಂಬುದಕ್ಕೆ ವ್ಯಾಖ್ಯಾನವನ್ನು ನೀಡುತ್ತದೆ. ಅತಿ ಮುಖ್ಯವಾದ ಕಲಂ ಆಗಿದ್ದು ಬಹುತೇಕ ಮತಾಂತರಗಳು ಹೇಗೆ ಜರುಗುತ್ತವೆ ಎಂಬುದನ್ನು ಪರೋಕ್ಷವಾಗಿ ಹೆಸರಿಸಿದಂತಿದೆ.

ಕಲಂ 2 a(i) “ಆಮಿಷ” ಪದವನ್ನು ವಿವರಿಸುತ್ತದೆ. ಇದರಂತೆ “ಆಮಿಷ ಎಂಬುದು ಈ ಮುಂದಿನ ಯಾವುದೇ ರೀತಿಯ ಪ್ರಲೋಭನೆ ಒಡ್ಡುವುದನ್ನು ಒಳಗೊಳ್ಳುತ್ತದೆ”

ನಗದುರೂಪದಲ್ಲಾಗಲೀ ಅಥವಾ ವಸ್ತುವಿನ ರೂಪದಲ್ಲಾಗಲೀ ನೀಡುವ ಯಾವುದೇ ಉಡುಗೊರೆ ಪ್ರತಿಫಲ ಸುಲಭ ಹಣ ಅಥವಾ ಬೌತಿಕ ಪ್ರಯೋಜನ, ಯಾವುದೇ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉದ್ಯೋಗ, ಶಿಕ್ಷಣ; ಅಥವಾ  ಮದುವೆಯಾಗುವುದಾಗಿ ವಾಗ್ದಾನ ಮಾಡುವುದು; ಅಥವಾ ಉತ್ತಮ ಜೀವನ ಶೈಲಿ, ದೈವಿಕ ಅ ಸಂತೋಷ ಅಥವಾ ಅನ್ಯಥಾ; ಅಥವಾ ಯಾವುದೇ ಧರ್ಮದ ಅವಿಭಾಜ್ಯ ಅಂಗವಾಗಿರುವ ಪದ್ಧತಿಗಳು, ಸಂಪ್ರದಾಯಗಳು ಅಥವಾ ಆಚರಣೆಗಳನ್ನು ಇನ್ನೊಂದು ಧರ್ಮಕ್ಕೆ ಎದುರಾಗಿ ಧಕ್ಕೆಯಾಗುವ ರೀತಿಯಲ್ಲಿ ಚಿತ್ರಿಸುವುದು ಅಥವಾ ಒಂದು ಧರ್ಮವನ್ನು ಇನ್ನೊಂದು ಧರ್ಮಕ್ಕೆ ವಿರುದ್ಧವಾಗಿ ವೈಭವೀಕರಿಸುವುದು. ಈ ಎಲ್ಲಾ ಅಂಶಗಳು ಆಮೀಷ ಎನಿಸಿಕೊಳ್ಳುತ್ತದೆ.

ಕಲಂ 2 (b) ಯ ಪ್ರಕಾರ “ಒತ್ತಾಯ”ಯಾರೇ ವ್ಯಕ್ತಿಯನ್ನು ಶರೀರಿಕ ಹಾನಿ ಉಂಟು ಮಾಡುವ ಅಥವಾ ಅದರ ಬೆದರಿಕೆ ಒಡ್ಡುವ ಮಾನಸಿಕ ಒತ್ತಡ ಅಥವಾ ದೈಹಿಕ ಬಲಪ್ರಯೋಗ ಬಳಸಿ ಆತನ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡುವಂತೆ ಒತ್ತಾಯಿಸುವುದು

ಹಾಗಿದ್ರೆ ಮತಾಂತರ ಎಂದರೇನು ಎಂಬುದಕ್ಕೂ ಇದೇ ವಿಧೇಯಕ ಉತ್ತರವನ್ನು ನೀಡುತ್ತದೆ ಕಲಂ 2(c) ಯ ಪ್ರಕಾರ “ಮತಾಂತರ” ಅಂದರೆ ಯಾರೇ ವ್ಯಕ್ತಿಯು ತನ್ನ ಸ್ವಂತ ಧರ್ಮವನ್ನು ತ್ಯಜಿಸಿ ಮತ್ತೊಂದು ಧರ್ಮವನ್ನು ಅಳವಡಿಸಿಕೊಳ್ಳುವುದು.

ಯಾವುದೇ ಧಾರ್ಮಿಕ ಮತಾಂತರವು ಬಲವಂತದ್ದಾಗಬಾರದು ಇದು ಕಾನೂನು. ಕಲಂ 2(d) “ಬಲವಂತ” ಪದವನ್ನು ಹೀಗೆ ವ್ಯಾಖ್ಯಾನಿಸುತ್ತದೆ ಅದರಂತೆ”ಬಲವಂತ” ಎಂಬುದು ಮತಾಂತರಗೊಂಡ ಅಥವಾ ಮತಾಂತರಗೊಳ್ಳುವಂತೆ ಕೋರಲಾದ ವ್ಯಕ್ತಿಯ ಮೇಲೆ ಒತ್ತಾಯ ಪ್ರದರ್ಶಿಸುವುದು ಅಂಥ ವ್ಯಕ್ತಿ ಅಥವಾ ಇತರ ಯಾರೇ ವ್ಯಕ್ತಿ ಅಥವಾ ಸ್ವತ್ತಿಗೆ ಯಾವುದೇ ಬಗೆಯ ಹಾನಿ ಉಂಟುಮಾಡುವ ಬೆದರಿಕೆಯನ್ನು ಒಳಗೊಂಡಿರುತ್ತದೆ. ಈ ಭಾಗವನ್ನು ವಿಶೇಷವಾಗಿ ಅವಲೋಕಿಸುವುದಾದರೆ ಇಲ್ಲಿ ಒಡ್ಡುವುದು ಮಾತ್ರ ಎಂಬಂತಿಲ್ಲ ಅದಕ್ಕೆ ಬದಲಾಗಿ “ಒಡ್ಡುವುದೂ ಒಳಗೊಂಡಿರುತ್ತದೆ” ಎಂಬ ಮಾತು ವಿಶ್ಲೇಷಕರ ಅರ್ಥ ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ ಎಂಬುದು ಯಾರಿಗಾದರೂ ಗೋಚರವಾಗುವ ಸಂಗತಿಯಾಗಿದೆ.

ಇನ್ನು ಕಲಂ 2(ē) “ವಂಚನೆ”ಯನ್ನು ಅರ್ಥೈಸುತ್ತದೆ ಅದರಂತೆ ಸುಳ್ಳು ಹೆಸರು, ಅಡ್ಡ ಹೆಸರು, ಧಾರ್ಮಿಕ ಸಂಕೇತ ಅಥವಾ ಅನ್ಯಥಾ ವಿಧಾನಗಳ ಮೂಲಕ ಯಾವುದೇ ರೀತಿಯಲ್ಲಿ ಮತ್ತೊಬ್ಬ ವ್ಯಕ್ತಿಯಂತೆ ನಟಿಸುವುದನ್ನು ಒಳಗೊಳ್ಳುತ್ತದೆ.

ಹಾಗಿದ್ದರೆ ಮತಾಂತರಿಸುವ ಉದ್ದೇಶದಿಂದ ನಾನೇ “ಇಂತಹ” ದೇವರು.ಎಂಬ ಸೋಗುತನವನ್ನು ಹಾಕಿಕೊಂಡು ಜನರನ್ನು ತಮ್ಮ ಧರ್ಮದತ್ತ ಹೇಮಾರಿಸುವ ಕ್ರಿಯೆಯೂ ಒಳಪಡಬಹುದಲ್ಲವೇ?

ಕಲಂ 2 ನಮಗೆ ಇನ್ನಷ್ಟು ಪರಿವಿಡಿಗಳನ್ನು ನೀಡುವುದರ ಜೊತೆಗೆ ಕಲಂ 3 ಹೀಗೆ ಹೇಳುತ್ತದೆ.

“ತಪ್ಪು ನಿರೂಪಣೆ, ಬಲವಂತ, ವಂಚನೆ, ಅನುಚಿತ ಪ್ರಭಾವ, ಒತ್ತಾಯ, ಆಮಿಷ ಒಡ್ಡುವ ಮೂಲಕ ಅಥವಾ ಮದುವೆಯ ವಾಗ್ದಾನದ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮಾಡುವ ಮತಾಂತರದ ನಿಷೇಧ”

ಮೇಲ್ಕಂಡ ಎಲ್ಲಾ ಪದಗಳ ನಿರೂಪಣೆಯನ್ನು ನಾವು ಕಲಂ ಎರಡರಲ್ಲಿ ವಿಸ್ತೃತವಾಗಿ ನೋಡಿದ್ದೇವೆ.

ಇಲ್ಲಿ ಬಹು ಮುಖ್ಯವಾದ ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. *ಈ ವಿಧೇಯಕವು ಯಾವುದೇ ವ್ಯಕ್ತಿ ತನ್ನ ಮೂಲ ಧರ್ಮಕ್ಕೆ ಮರು ಮತಾಂತರಗೊಳ್ಳುವುದನ್ನು ನಿರ್ಬಂಧಿಸುವುದಿಲ್ಲ*

ಹಾಗಿದ್ದಲ್ಲಿ ಯಾರು ದೂರನ್ನು ದಾಖಲಿಸಬಹುದು?

ಕಲಂ 4 ಹೇಳುವಂತೆ “ಯಾರೇ ಮತಾಂತರಗೊಂಡ ವ್ಯಕ್ತಿ, ಆತನ ಪಾಲಕರು ಸೋದರ ಸೋದರಿ ಅಥವಾ ಆತನಿಗೆ ರಕ್ತ ಸಂಬಂಧಿ ಮದುವೆ ಅಥವಾ ದತ್ತು ಮೂಲಕ ಸಂಬಂಧಿ ಆದ ಅಥವಾ ಯಾವುದೇ ರೂಪದಲ್ಲಿ ಸಹವರ್ತಿ ಅಥವಾ ಸಹೋದ್ಯೋಗಿ ಯಾದ ಇತರೆ ಯಾರೇ ವ್ಯಕ್ತಿಯು ಕಲಂ ಮೂರರ ಪ್ರಕಾರ ಉಲ್ಲಂಘಿಸುವಂತಹ ಮತಾಂತರದ ಬಗ್ಗೆ ದೂರನ್ನು ದಾಖಲು ಮಾಡಬಹುದು”.ಇಲ್ಲಿ ‘ಇತರೆ ಯಾರೇ ವ್ಯಕ್ತಿ ‘ ಎಂಬುದು ಸಾಮಾನ್ಯ ವ್ಯಕ್ತಿಯನ್ನು ಒಳಪಟ್ಟಿರುತ್ತದೆ ಅಲ್ಲವೇ?

ಕಾನೂನು ಬಾಹಿರ ಮತಾಂತರಕ್ಕೆ ಶಿಕ್ಷೆ ಏನು?

ಕಲಂ 5 ಇದರ ಬಗ್ಗೆ ಒಂದಷ್ಟು ಬೆಳಕನ್ನು ಚೆಲ್ಲುತ್ತದೆ. ರಂತೆ ಕಲಮ್ 3ರ ಪ್ರಕರಣದ ಉಪಬಂಧಗಳ ಉಲ್ಲಂಘನೆ ಯಾದರೆ ಅವರಿಗೆ ಮೂರು ವರ್ಷಗಳ ಅವಧಿಯ ಅಥವಾ ಐದು ವರ್ಷಗಳವರೆಗೆ ವಿಸ್ತರಿಸಬಹುದಾದಂತಹ ಅವಧಿಯ ಕಾರವಾಸ ಹಾಗೂ ಗರಿಷ್ಠ 5 ಲಕ್ಷದವರೆಗೆ ಜುಲ್ಮನೆಯನ್ನು ವಿಧಿಸುತ್ತದೆ.  ಈ ಕಲಂ ನ ಮತ್ತಷ್ಟು. ವಿಸ್ತೃತ ಮಾಹಿತಿಗೆ ನಾವು ಅಧಿನಿಯಮವನ್ನು ಓದಬಹುದು  ಇಂತಹ ಉಲ್ಲಂಘಿತ ಮತಾಂತರದ ಅದವು ಕ್ರಿಮಿನಲ್ ಪ್ರಕ್ರಿಯ ಸಂಹಿತೆಗೆ ಒಳಪಟ್ಟಿರುವುದಲ್ಲದೆ ಜಾಮೀನು ರಹಿತವಾಗಿರುತ್ತದೆ ಎಂಬುದನ್ನು ಕಲಂ 7 ತಿಳಿಸುತ್ತದೆ.

ಹಾಗಿದ್ದರೆ ಯಾವುದು ಒಪ್ಪಿತ ಮತಾಂತರ?

ಪ್ರಶ್ನೆಗೆ ಉತ್ತರವನ್ನು ಕಲಂ 9 ಸೂಚಿಸುತ್ತದೆ. ಅದರಂತೆ ಮತಾಂತರಗೊಳ್ಳುತ್ತಿರುವ ವ್ಯಕ್ತಿ ಮತಾಂತರದ ದಿನಾಂಕದಿಂದ 30 ದಿನದ ಒಳಗೆ ನಮೂನೆ ಮೂರು ರಲ್ಲಿ ಘೋಷಣೆಯೊಂದನ್ನು ತಾನು ವಾಸವಾಗಿರುವ ಜಿಲ್ಲೆಯ ಜಿಲ್ಲಾ ದಂಡಾಧಿಕಾರಿಗಳಿಗೆ ಘೋಷಣೆಯನ್ನು ಕಳುಹಿಸಿರಬೇಕು. ಅದನ್ನು ಜಿಲ್ಲಾ ದಂಡಾಧಿಕಾರಿಗಳ ಹಾಗೂ ತಹಶೀಲ್ದಾರ್ ಕಚೇರಿಯ ಸೂಚನಾ ಫಲಕದ ಮೇಲೆ  ಹಾಕಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು, ಘೋಷಣೆಯಲ್ಲಿ ಜನ್ಮ ದಿನಾಂಕ ಖಾಯಂ ವಿಳಾಸ, ಪ್ರಸ್ತುತ ವಾಸವಿರುವ ಸ್ಥಳ, ತಂದೆ/ ಗಂಡನ ಹೆಸರು , ಮೂಲ ಧರ್ಮ ಮತ್ತು ಮತಾಂತರಗೊಂಡ ಧರ್ಮ, ಅತಾಂತರದ ದಿನಾಂಕ ಸ್ಥಳ ಗುರುತಿನ ಚೀಟಿ ಆಧಾರ್ ಕಾರ್ಡ್ ಪ್ರತಿಯೊಂದೂಂದಿಗೆ ಮತ ಮತಾಂತರ ಒಳಗಾದ ಕಾರ್ಯವಿಧಾನವನ್ನು ವಿವರವಾಗಿ ಒಳಗೊಂಡಿರಬೇಕು. ಹೀಗೆ ಘೋಷಣೆಯನ್ನು ಕಳಿಸಿದ ದಿನಾಂಕದಿಂದ 21 ದಿನಾಂಕ ದೊಳಗೆ ಜಿಲ್ಲಾ ದಂಡಾಧಿಕಾರಿಯ ಮುಂದೆ ಹಾಜರಿರತಕ್ಕದ್ದು. ಜಿಲ್ಲಾಧಿಕಾರಿಗಳು 30 ದಿನದೊಳಗೆ ಯಾವುದೇ ಆಕ್ಷೇಪಣೆಯನ್ನು ಪರಾಂಬರಿಸಿದ್ದೆ ಆದರೆ ಅವರ ಎಲ್ಲ ವಿವರಗಳನ್ನು ಆಕ್ಷೇಪಣೆಯ ಸ್ವರೂಪವನ್ನು ದಾಖಲೆ ಮಾಡಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮುಖಾಂತರ ವಿಚಾರಣೆಯನ್ನು ನಡೆಸತಕ್ಕದ್ದು. ಹೀಗೆ ವಿಚಾರಣೆಗೊಳ ಪಟ್ಟಾಗ ಕಲ್ಲ ಮೂರರ ಅಡಿಯಲ್ಲಿ ಉಪಬಂಧಗಳ ಉಲ್ಲಂಘನೆಯಾಗಿದ್ದರೆ ಕ್ರಿಮಿನಲ್ ಮೊಕದ್ದಮೆಯ ಕ್ರಮ ಕೈಗೊಳ್ಳುವಂತೆ ಸಂಬಂಧ ಪಟ್ಟ ಪೊಲೀಸ ಅಧಿಕಾರಿಗಳಿಗೆ ಸೂಚಿಸಲಾಗುವುದು ಹಾಗೂ ಇಂತಹ ಮತಾಂತರವನ್ನು ಕಾನೂನುಬಾಹಿರ ಮತ್ತು ಅಸಿಂಧುವನ್ನಾಗಿಸುವುದು.

ಈ ವಿಧೇಯಕದ ಮುಂದಿನ ಅಂದರೆ ಕಲಂ 10 ರಿಂ15 ರವರೆಗೆ, ಸಂಸ್ಥೆಯ ಮೂಲಕ ಉಲ್ಲಂಘನೆಯಾದರೆ ದಂಡನೆ ಯಾವುದು ,ಅಪರಾಧದ ಪಕ್ಷಕಾರರ ಬಗೆಗೆ, ರುಜುವಾತಿನ  ಭಾರ ಯಾರದ್ದು, ಈ ಅಧಿನಿಯಮದ ತೊಂದರೆಗಳ ನಿವಾರಣೆ ಇತ್ಯಾದಿಗಳ ಬಗ್ಗೆ ವಿವರಿಸಲಾಗಿದೆ. ಈ ಅಧಿನಿಯಮದಲ್ಲಿ ಸಂಬಂಧಿಸಿದ ಎಲ್ಲಾ ನಮೂನೆಗಳನ್ನು ಅನುಕೂಲಕ್ಕಾಗಿ ನೀಡಲಾಗಿದೆ.

ಇವಿಷ್ಟು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅದಿನಿಯಮ ಅಥವಾ ಮತಾಂತರ ನಿಷೇಧ ಕಾಯ್ದೆಯ ಬಗೆಗಾಯಿತು.

ಹಿಂದೂ ಧರ್ಮವನ್ನು ಉಲ್ಲಂಘಿತ ಮತಾಂತರಕೋರರ ಕಪಿಮುಷ್ಟಿಯಿಂದ ಕಾಪಾಡಿಕೊಳ್ಳಲು ಏನೆಲ್ಲ ಮಾಡಬಹುದು

*ಜನ ಸಾಮಾನ್ಯರಿಗೆ ನಮ್ಮ ಧರ್ಮವು ಕ್ಲಿಷ್ಟವಲ್ಲ ಸರಳ ಎಂಬುದನ್ನು ಮನವರಿಕೆ ಮಾಡಿಕೊಡಬೇಕು.

*ಭಗವದ್ಗೀತೆ, ಭಗವತದಂತಹ ಜೀವನೋಪಾಯಕ್ಕೆ ಬೇಕಾದಂತಹ ಕಥೆಗಳನ್ನು ಉಪಕಥೆಗಳನ್ನು ಸಣ್ಣ ಸಣ್ಣ ಕೈಪಿಡಿಗಳಾಗಿ ಹಂಚುವಂಥದ್ದು.

* ಧರ್ಮದ ಆಚರಣೆಗಳನ್ನು ಅಳವಡಿಸಿಕೊಳ್ಳುವಂತೆ ನಿರಂತರ ಪ್ರೇರಣೆಯನ್ನು ಒದಗಿಸುವುದು

* ನಮ್ಮ ಧರ್ಮ ಸಂಸ್ಕೃತಿಯ ಉಳಿವಿನ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡುವುದು

*ನಾಳಿನ ಪ್ರಜೆಗಳಿಗೆ ಅಂದರೆ ಮಕ್ಕಳಿಗೆ ಸಂಸ್ಕೃತಿಯ ಪಾಠ ಪ್ರವಚನಗಳನ್ನು ಕಲಿಸುವುದು ಇತ್ಯಾದಿ ಇತ್ಯಾದಿ.

ಅಪರಾಧಕ್ಕೊಂದು ಕಾನೂನನ್ನು ತರುವುದು ಎಷ್ಟು ಮುಖ್ಯವೋ ಅಪರಾಧವಾಗದಂತೆ ತಡೆಗಟ್ಟುವುದೂ ಅಷ್ಟೇ ಮುಖ್ಯ ! ಇದಕ್ಕೆ ಧರ್ಮ ಜಾಗೃತಿಯಲ್ಲದೇ ಬೇರಾವ ಉಪಾಯವಿದೆ  ?

 

 

 

 

 

 

Leave a Reply

Your email address will not be published.

This site uses Akismet to reduce spam. Learn how your comment data is processed.