
14 ಫೆಬ್ರವರಿ 2021, ಬೆಂಗಳೂರು: ದೆಹಲಿಯ ವಿಶೇಷ ಪೊಲೀಸ್ ದಳ ಶನಿವಾರದಂದು ನಗರದ ‘ಫ್ರೈಡೇಸ್ ಫಾರ್ ಫ್ಯೂಚರ್’ ಕಾರ್ಯಕರ್ತೆಯನ್ನು ಗ್ರೇಟಾ ಥೂನ್ಬೆರಿ (Greta Thunberg) ಟೂಲ್ ಕಿಟ್ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಗ್ರೇಟಾ ಥೂನ್ಬೆರಿ ರೈತರ ಚಳುವಳಿಯ ಬಗ್ಗೆ ಟ್ವಿಟ್ ಮಾಡಿ, ಟೂಲ್ ಕಿಟ್ ಹಂಚಿಕೊಂಡಿದ್ದು ತಿಳಿದಿರುವ ಸಂಗತಿ. ದಿಶಾ ರವಿ ಎಂಬ 21 ವರ್ಷ ವಯಸ್ಸಿನ ಮೌಂಟ್ ಕಾರ್ಮೆಲ್ ಕಾಲೇಜಿನ ಬಿಬಿಎ ಪದವಿಧರೆಯಾದ ಹಾಗೂ ಫ್ರೈಡೇಸ್ ಫಾರ್ ಫ್ಯೂಚರ್ ಆಂದೋಲನದ ಸ್ಥಾಪಕರಲ್ಲೊಬ್ಬಳಾದ ಈಕೆಯನ್ನು ಗ್ರೇಟಾ ಹಂಚಿಕೊಂಡಿದ್ದ ಟೋಲ್ ಕಿಟ್ ಅನ್ನು ವ್ಯಾಪಕವಾಗಿ ಹರಡಿಸುವಲ್ಲಿ ಪಾತ್ರವಿತ್ತೆಂದು ಶಂಕಿಸಿರುವ ದೆಹಲಿ ಪೊಲೀಸರು ಆಕೆಯ ವಿಚಾರಣೆ ನಡೆಸಿದ್ದಾರೆನ್ನಲಾಗಿದೆ. ನಗರದ ಸೋಲದೇವನಹಳ್ಳಿಯ ಆಕೆಯ ಮನೆಯಿಂದ ಪೊಲೀಸರು ಆಕೆಯನ್ನು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ದಿಶಾ ರವಿ ಪ್ರಸ್ತುತ ಗುಡ್ ಮಿಲ್ಕ್ (good mylk) ಎಂಬ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಫ್ರೈಡೇಸ್ ಫಾರ್ ಫ್ಯೂಚರ್ ಆರಂಭವಾದ್ದು ಆಗಸ್ಟ್ 2018ರಲ್ಲಿ. ಗ್ರೇಟಾ ಸ್ವೀಡನ್ ಸಂಸತ್ತಿನ ಎದುರು ಆರಂಭಿಸಿದ ಆಂದೋಲನದ ಸಮಯದಲ್ಲೇ ಪರಿಸರದ ಕಾಳಜಿಗಾಗಿ ಆರಂಭಿಸಲಾಗಿತ್ತು ಎನ್ನಲಾಗಿದೆ. ದಿಶಾ ತಂದೆ ಮೈಸೂರಿನವರಾಗಿದ್ದು, ಅಥ್ಲೆಟಿಕ್ಸ್ ತರಬೇತಿದಾರರಾಗಿದ್ದಾರೆ.
