ಕೇಶವಸೃಷ್ಟಿ: ಆರೆಸ್ಸೆಸ್ ಅಂತಃಶಕ್ತಿಯ ಇನ್ನೊಂದು ಅದ್ಭುತ!
ಲೇಖನ: ಶ್ರೀವತ್ಸ ಜೋಶಿ, ಅಂಕಣಕಾರರು.

{ವಿಶ್ವವಾಣಿ ಪತ್ರಿಕೆಯ ತಿಳಿರುತೋರಣ ಅಂಕಣದಲ್ಲಿ 14Feb2021 ರಂದು ಮೊದಲು ಪ್ರಕಟವಾದ್ದು}

ಕೃಪೆ: ವಿಶ್ವವಾಣಿ ಹಾಗೂ ಲೇಖಕರು

ಅಪಪ್ರಚಾರದ ವೇಗ, ವ್ಯಾಪ್ತಿ, ತೀಕ್ಷ್ಣತೆ, ಪರಿಣಾಮ ಎಲ್ಲವೂ ಜಾಸ್ತಿ. ವಿಪರ್ಯಾಸವೆಂದರೆ ಅಂಥದರ ಬಗ್ಗೆ ಜನರಿಗೆ ಆಸಕ್ತಿಯೂ ಜಾಸ್ತಿ. ಎಷ್ಟೋ ಸರ್ತಿ ಅಪ್ಪಟ ಸುಳ್ಳೆಂದು ಗೊತ್ತಿದ್ದರೂ ಯಾವುದೋ ಚೀಪ್ ಗಾಸಿಪ್‌ಅನ್ನು ಚಪ್ಪರಿಸುವ ಚಪಲ. ಆಡಿಕೊಳ್ಳುವವರಿಗೆ ಒಂಥರದ ತೆವಲು, ಕೇಳಿಸಿಕೊಳ್ಳುವವರಿಗೆ ಕೆಟ್ಟ ಕುತೂಹಲ. ಯಾರಾದರೂ ಇಬ್ಬರು ಕಾಲ್ಕೆರೆದು ಜಗಳಾಡುತ್ತಿದ್ದರೆ (ನಿಜ ಜೀವನದಲ್ಲಾದ್ರೂ ಅಷ್ಟೇ, ಸೋಶಿಯಲ್ ಮೀಡಿಯಾದಲ್ಲಾದ್ರೆ ಇನ್ನಷ್ಟು ಕುತೂಹಲದಿಂದ) ಅದರ ಪೂರ್ತಿ ಎಂಟರ್‌ಟೇನ್‌ಮೆಂಟ್ ಸವಿಯಲು ಸಮಯ ಹೊಂದಿಸಿಕೊಳ್ಳುತ್ತೇವೆ. ನಂದೆಲ್ಲಿಡ್ಲಿ ಎನ್ನುತ್ತ ಇನ್ನಷ್ಟು ಕಿಚ್ಚು ಹೊತ್ತಿಕೊಳ್ಳಲು ಕುಮ್ಮಕ್ಕು ಕೊಡುತ್ತೇವೆ. ಅದೇ ಒಳ್ಳೆಯ ರಚನಾತ್ಮಕ ಸುದ್ದಿ ಅಥವಾ ವಿಚಾರ ಅಂತಾದರೆ ಅಷ್ಟು ಬೇಗ ಕಿವಿ ನಿಮಿರುವುದಿಲ್ಲ. ತಿಳಿದುಕೊಳ್ಳುವ ಖಾಯಿಶಿ ಇರುವುದಿಲ್ಲ. ನಾಲ್ಕು ಜನರೊಡನೆ ಒಳ್ಳೆಯ ವಿಚಾರಗಳನ್ನು ನಾವಂತೂ ಹಂಚಿಕೊಳ್ಳುವುದಿಲ್ಲ, ಬೇರೆಯವರು ಹಂಚಿಕೊಳ್ಳಲು ಹೊರಟವರಿದ್ದರೆ ಅವರ ಉತ್ಸಾಹಕ್ಕೂ ತಣ್ಣೀರೆರಚುತ್ತೇವೆ. ಮಾಧ್ಯಮಗಳು- ಮುಖ್ಯವಾಹಿನಿಯವು ಇರಲಿ ಅಥವಾ ಈಗಿನ ಸೋಷಿಯಲ್ ಮೀಡಿಯಾ ಇರಲಿ- ಕಾರ್ಯವೆಸಗುವುದೇ ಹೀಗೆ. ನೇತ್ಯಾತ್ಮಕ(ನೆಗೆಟಿವ್) ಸುದ್ದಿಗಳಿಗೆ, ವಿಧ್ವಂಸಕ ಆಲೋಚನೆಗಳಿಗೆ ಸಿಗುವ ವಿಸಿಬಿಲಿಟಿ ಪಬ್ಲಿಸಿಟಿ ಬಿಸಿಬಿಸಿ ಚರ್ಚೆಗಳು ಲೈಕುಗಳು ಕಾಮೆಂಟುಗಳು ಇಲ್ಲಿ ಸದ್ವಿಚಾರ ಸಮಾಚಾರಗಳಿಗೆ, ರಚನಾತ್ಮಕ ಕೆಲಸಗಳಿಗೆ ಸಿಗುವುದಿಲ್ಲ.

ಇಂದು ನಾನು ಹೇಳಹೊರಟಿರುವ ವಿಚಾರಕ್ಕೆ ಬಹುಶಃ ಇನ್ನೊಂದು ರೀತಿಯ ಪೀಠಿಕೆಯೂ ಸಮರ್ಪಕವೆನಿಸೀತು. ಅದೇನೆಂದರೆ, ಸ್ವತಂತ್ರ ಭಾರತದಲ್ಲಿ ಅತಿ ಹೆಚ್ಚು ಅಪಪ್ರಚಾರ ಆದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಆರು ತಿಂಗಳೊಳಗೆ ಮಹಾತ್ಮ ಗಾಂಧೀಜಿಯವರ ಹತ್ಯೆಯಾದಾಗ ಆ ಭಯಾನಕ ಕೊಲೆಯ ಆರೋಪವನ್ನು ಅಂದಿನ ನೆಹರು ಸರ್ಕಾರ ಏಕಾ‌ಏಕಿಯಾಗಿ ಆರೆಸ್ಸೆಸ್ ಮೇಲೆ ಹೊರಿಸಿತ್ತು. ಸರಸಂಘಚಾಲಕರನ್ನೂ ಸಾವಿರಾರು ಕಾರ್ಯಕರ್ತರನ್ನೂ ಬಂಧಿಸಿತ್ತು. ಸಂಘದ ಮೇಲೆ ನಿಷೇಧ ಹೇರಿತ್ತು. ಆಮೇಲೆ ಕೆಲ ತಿಂಗಳುಗಳಲ್ಲೇ ಆರೋಪ ಖುಲಾಸೆ ಆದದ್ದು ಮತ್ತು ಸಂಘದ ಮೇಲಿನ ನಿಷೇಧವನ್ನು ಸರ್ಕಾರ ಬೇಷರತ್ತಾಗಿ ಹಿಂತೆಗೆದುಕೊಂಡದ್ದು ಬೇರೆ ಮಾತು. ಆದಾಗ್ಯೂ ಅಲ್ಲಿಂದ ಶುರುವಾದ ಈ ‘ಸಂಕಷ್ಟಕ್ಕೆಲ್ಲ ಸಂಘ ಕಾರಣ’ ಎಂಬ ಗೋಳು, ಎಲ್ಲದಕ್ಕೂ ಆರೆಸ್ಸೆಸ್ ಮೇಲೆ ಗೂಬೆ ಕೂರಿಸುವುದು, ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ. ತುರ್ತುಪರಿಸ್ಥಿತಿಯ ವೇಳೆಯಂತೂ ಸಂಘದ ಕಾರ್ಯಕರ್ತರನ್ನು ಇಂದಿರಾ ಸರ್ಕಾರ ನಡೆಸಿಕೊಂಡ ರೀತಿ ಅತ್ಯಂತ ಹೇಯ. ಈಗಲೂ ‘ಸಂಘಿ’ಗಳು ‘ಚಡ್ಡಿ’ಗಳು ಅಂತೆಲ್ಲ ತುಚ್ಛವಾಗಿ ಮಾತಾಡುವುದೇ ಒಂದು ಫ್ಯಾಷನ್ ಆಗಿದೆ. ‘ಎಂ.ಎಂ.ಕಲಬುರ್ಗಿಯವರ ಕೊಲೆಯಾಯ್ತಾ, ಆರೆಸ್ಸೆಸ್‌ನವರದೇ ಕೈವಾಡ ಇರಬೇಕು. ಗೌರಿಲಂಕೇಶ್‌ಳನ್ನು ಗುಂಡಿಕ್ಕಿ ಕೊಂದ್ರಾ, ಆರೆಸ್ಸೆಸ್‌ನವರೇ ಮಾಡಿರಬೇಕು…’ ಪೊಕಳೆ ಮಾತುಗಳಿಗೇನು ತೆರಿಗೆ ತೆರಬೇಕಾಗಿಲ್ಲವಷ್ಟೆ. ಕನ್ನಡದ ಒಂದಿಬ್ಬರು ಜ್ಞಾನಪೀಠಿಗಳೂ ಸೇರಿದಂತೆ ಕೆಲವು ಕ್ಷುದ್ರಜೀವಿಗಳಿಗೆ ಆರೆಸ್ಸೆಸ್ ಬಗ್ಗೆ ಕೆಟ್ಟ ಮಾತು ನಾಲಗೆ ತುದಿಯಲ್ಲೇ ಇರುತ್ತದೆ ಯಾವಾಗಲೂ. ಇನ್ನು, ಬೇರೇನೂ ಮಾಡಲಿಕ್ಕೆ ಬಾರದೆ ರಾಜಕೀಯದ ಬೇಳೆ ಬೇಯಿಸುವುದೊಂದೇ ಗೊತ್ತಿರುವ ಪಪ್ಪು(ತೆಲುಗಿನಲ್ಲಿ ಬೇಳೆ ಎಂದೇ ಅರ್ಥ) ಯುವರಾಜನಿಗಂತೂ ಸದಾ ಆರೆಸ್ಸೆಸ್‌ನದೇ ಧ್ಯಾನ. ಅಲ್ಲ, ದುಃಸ್ವಪ್ನ ಅಂತಂದರೆ ಹೆಚ್ಚು ಸಮಂಜಸ. ‘ನಿಕ್ಕರ್‌ವಾಲಾಸ್ ಫ್ರಮ್ ನಾಗ್ಪುರ್ ಕ್ಯಾನ್ ನೆವರ್ ನೆವರ್ ಎವರ್ ಡಿಸೈಡ್ ದ ಫ್ಯೂಚರ್ ಆಫ್ ದಿಸ್ ಸ್ಟೇಟ್!’ ಎಂದು ಮೊನ್ನೆ ತಮಿಳುನಾಡಿನಲ್ಲಿ ಭಾಷಣ ಬಿಗಿದಿದ್ದ. ಅದನ್ನು ತಮಿಳಿಗೆ ಅನುವಾದ ಮಾಡಿದವನೋ ಪಪ್ಪುವಿಗಿಂತ ದೊಡ್ಡ ಬೆಪ್ಪ. ‘ನಿಕ್ಕರ್’ ಎಂಬುದನ್ನು ‘ಲಿಕ್ಕರ್’ ಎಂದು ಕೇಳಿಸಿಕೊಂಡು ‘ನಾಗ್ಪುರದ ಸಾರಾಯಿ ದೊರೆಗಳು ಈ ರಾಜ್ಯದ ಭವಿಷ್ಯ ನಿರ್ಧರಿಸಲಾರರು’ ಎಂದು ಭಾಷಾಂತರದ ಅವಾಂತರ ಮಾಡಿದ್ದ! ರಾ.ಗಾ ರ‍್ಯಾಲಿಗಳಲ್ಲಿ ಮನೋರಂಜನೆಗೇನೂ ಕೊರತೆಯಿಲ್ಲವೆನ್ನಿ.

ಇದ್ಯಾವುದರಿಂದಾದರೂ ಆರೆಸ್ಸೆಸ್‌ನ ವರ್ಚಸ್ಸು ಕುಂದಿತೇ? ರವಷ್ಟೂ ಇಲ್ಲ. ಅಸಲಿಗೆ ಆ ಆರೋಪಗಳಲ್ಲಿ, ಕೊಳಕು ಮಾತುಗಳಲ್ಲಿ ಸತ್ಯ-ತಥ್ಯಗಳಿದ್ದರೆ ತಾನೆ? ಇನ್ನೇನು ಶತಕ ಸಂಭ್ರಮ (ಸ್ಥಾಪನೆಯಾದದ್ದು 1925ರಲ್ಲಿ ವಿಜಯದಶಮಿಯಂದು) ಕಾಣಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇದಿಷ್ಟೂ ವರ್ಷಗಳಲ್ಲಿ ದೇಶದ ಹಿತಕ್ಕಾಗಿ ಮಾಡಿದ, ಮಾಡುತ್ತಿರುವ ಕೆಲಸಗಳು ಒಂದೆರಡಲ್ಲ. ‘ತ್ವದೀಯಾಯ ಕಾರ್ಯಾಯ ಬದ್ಧಾಕಟೀಯಂ’ (ಮಾತೃಭೂಮಿಯೇ, ನಿನ್ನ ಕೆಲಸಕ್ಕಾಗಿಯೇ ಟೊಂಕ ಕಟ್ಟಿ ನಿಂತಿರುವೆ) ಎಂದು ಬರೀ ಪ್ರಾರ್ಥನೆಯಲ್ಲಿ ಹೇಳುವುದಷ್ಟೇ ಅಲ್ಲ, ಸಂಘದಲ್ಲಿ ಪ್ರತಿಯೊಬ್ಬ ಸ್ವಯಂಸೇವಕ ಇರುವುದೇ ಹಾಗೆ. ಪ್ರಕೃತಿವಿಕೋಪ ಅಥವಾ ಮಾನವಕೃತ ದುರ್ಘಟನೆಯೇ ಇರಲಿ ದೇಶದ ಯಾವ ಮೂಲೆಯಲ್ಲಿ ಸಾವು-ನೋವು ಸಂಭವಿಸಿದಾಗ ಆಸ್ತಿ-ಪಾಸ್ತಿ ನಷ್ಟವಾದಾಗ ನೆರವಿಗೆ ಧಾವಿಸುವುದರಲ್ಲಿ ಮೊದಲಿಗರು ಆರೆಸ್ಸೆಸ್ ಸ್ವಯಂಸೇವಕರೇ. ಯಾರದೋ ಆದೇಶಕ್ಕಾಗಿ ಕಾಯುತ್ತ ಕುಳಿತುಕೊಳ್ಳುವುದು, ತನಗಿದರಲ್ಲಿ ಏನು ಲಾಭವಿದೆ ಎಂದು ರಾಜಕೀಯ ಲೆಕ್ಕಾಚಾರ ಮಾಡುವುದು ಇದೆಲ್ಲ ಅವರ ಜಾಯಮಾನವೇ ಅಲ್ಲ. ಜಾತಿ-ಮತ ಮೇಲು-ಕೀಳು ಭೇದಭಾವ ಸಂಘದ ಸಂರಚನೆಯಲ್ಲಂತೂ ಇಲ್ಲವೇ‌ಇಲ್ಲ; ಯಾರ ಸೇವೆಗೆ ಧಾವಿಸುತ್ತಿದ್ದೇವೆಂಬ ವಿಚಾರ ಬಂದಾಗ ‘ನಮ್ಮ ದೇಶದ ಸಹಪ್ರಜೆಗಳಿಗೆ’ ಎಂಬುದೊಂದೇ ಚಿಂತನೆ, ಬೇರೆ ಆಲೋಚನೆಯೇ ಇಲ್ಲ. ‘ಸೆಕ್ಯುಲರ್’ ಎಂಬ ಪದದ ನಿಜಾರ್ಥಕ್ಕೆ ನ್ಯಾಯ ಸಂದಿರುವುದು ಬೇರೆಲ್ಲೂ ಅಲ್ಲ, ಸಂಘದ ಪ್ರತಿಯೊಂದು ಜೀವಕೋಶದಲ್ಲಿ!

ಇಂತಿರುವ ಆರೆಸ್ಸೆಸ್‌ನ ಇನ್ನೊಂದು ಅರ್ಥಪೂರ್ಣ ಅದ್ಭುತ ಕೆಲಸವು ಕೆಲ ದಿನಗಳ ಹಿಂದೆಯಷ್ಟೇ ನನ್ನ ತಿಳಿವಳಿಕೆಗೆ ಸಿಕ್ಕಿತು. ಅದೂ ಯುಟ್ಯೂಬ್‌ನಲ್ಲಿ ಒಂದು ವಿಡಿಯೊ ಸಾಕ್ಷ್ಯಚಿತ್ರದ ಮೂಲಕ. ೨೦೧೮ರಲ್ಲಿ ಅಪ್‌ಲೋಡ್ ಆದ ವಿಡಿಯೊ. ಇದುವರೆಗೆ 100 ಮಿಲಿಯನ್ ವ್ಯೂಸ್ ಗಳಿಸಿ ವೈರಲ್ ಆಗಿರುವುದೆಲ್ಲ ಅಲ್ಲ, ಜುಜುಬಿ 6500 ವ್ಯೂಸ್ ಅಷ್ಟೇ. ನಾನು ನೋಡಿದಾಗ 130 ಲೈಕುಗಳು ಇದ್ದವು (ಮೂರು ಡಿಸ್‌ಲೈಕುಗಳೂ ಇದ್ದವು). ನಾಲ್ಕೈದು ಜನರು ‘ಚೆನ್ನಾಗಿದೆ’ ಎಂಬರ್ಥದ ಕಾಮೆಂಟ್ ದಾಖಲಿಸಿದ್ದರು ಅಷ್ಟೇ. ಕೇವಲ ಆರು ನಿಮಿಷ ಅವಧಿಯ ವಿಡಿಯೊ. ಇಂಥದೊಂದಿದೆ ಎನ್ನುವುದು ನನಗೆ ಇದುವರೆಗೂ ಗೊತ್ತಿರಲಿಲ್ಲ. ಮಾತ್ರವಲ್ಲ, ವಿಡಿಯೊದಲ್ಲಿ ವಿವರಿಸಿದ ಸಂಸ್ಥೆಯ ಬಗ್ಗೆಯೂ ನಾನು ಇದುವರೆಗೆ ಎಲ್ಲೂ ಕೇಳಿದ್ದಿಲ್ಲ ಓದಿದ್ದಿಲ್ಲ. ಅಕ್ಷರಶಃ ‘ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲಿವಿಂ ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ’ ಇದೂ ಒಂದು ವನಸುಮವೇ!

ಸಾಕ್ಷ್ಯಚಿತ್ರ ನನ್ನನ್ನು ಗಾಢವಾಗಿ ತಟ್ಟಿತು. ಆರೆಸ್ಸೆಸ್ ಬಗೆಗಿನ ನನ್ನ ಅಭಿಮಾನ ಮತ್ತಷ್ಟು ಹೆಚ್ಚಿತು. ಅಷ್ಟೇ‌ಅಲ್ಲ, ಆರೆಸ್ಸೆಸ್‌ಅನ್ನು ಮೂದಲಿಸುವವರೆಲ್ಲ ಇದರ ಮುಂದೆ ಮತ್ತಷ್ಟು ಕುಬ್ಜರಾಗಿ, ಕ್ಷುದ್ರರಾಗಿ ಕಂಡರು. ಆರೆಸ್ಸೆಸ್‌ನಂಥ ಸಂಘಟನೆಗಳು ದೇವಸ್ಥಾನಕ್ಕಾಗಿ ಹಣ ಸಂಗ್ರಹಿಸುತ್ತಿವೆ ಎಂದು ಮೊನ್ನೆಯಷ್ಟೇ ಕನ್ನಡದ ಪತ್ರಕರ್ತನೊಬ್ಬನ ಪ್ರಲಾಪವನ್ನು ಓದಿದ್ದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜನಸಾಮಾನ್ಯರು ತಾವಾಗಿಯೇ ದೇಣಿಗೆ ಸಲ್ಲಿಸುತ್ತಿರುವುದನ್ನು ನೋಡಿ ಅಸೂಯೆಯಿಂದ ಬಂದ ಮಾತು ಅದು. ‘ಇದುವರೆಗೆ ಯಾರಾದರೂ ಶಾಲೆ ಕಟ್ಟಿಸಲು ಹಣ ಎತ್ತಿದ ಉದಾಹರಣೆ ಇದೆಯಾ? ಆದರೆ ಸ್ವಾತಂತ್ರ್ಯ ಬಂದು 71 ವರ್ಷ ಕಳೆದರೂ ದೇವಸ್ಥಾನ ಕಟ್ಟಲು ಹಣ ಸಂಗ್ರಹಿಸಲಾಗುತ್ತಿದೆ. ಅಂದರೆ ಶಾಲೆಯ ಗಂಟೆಗಿಂತ, ದೇವಸ್ಥಾನದ ಗಂಟೆ ಹೆಚ್ಚಾಗಿ ಕೇಳಿಸುತ್ತಿದೆ. ಇದು ಅನಕ್ಷರಸ್ಥರ ಕೂಪ’ ಅಂತೆಲ್ಲ ಏನೇನೋ ಹಲುಬಿಕೊಂಡಿದ್ದ. ಈ ಸಾಕ್ಷ್ಯಚಿತ್ರ ನೋಡಿದ ಮೇಲೆ ಆತ ನನಗೆ ಮತ್ತಷ್ಟು ಕುಬ್ಜನಾಗಿ ಕಂಡ. ಅದೇನೇ ಇರಲಿ ಇಂತಹ ಹೊಸ ತಿಳಿವಳಿಕೆಯದೊಂದು ತೋರಣ ಕಟ್ಟಲೇಬೇಕು ಎಂದು ತತ್‌ಕ್ಷಣ ತೀರ್ಮಾನಿಸಿದೆ. ಬೇರೇನೂ ಬೇಡ, ಸಾಕ್ಷ್ಯಚಿತ್ರದ ಯುಟ್ಯೂಬ್ ಕೊಂಡಿ ಹಂಚಿಕೊಳ್ಳುತ್ತ, ಹಿಂದೀ ಭಾಷೆಯಲ್ಲಿರುವ ಅದರ ನಿರೂಪಣೆಯನ್ನು ನೀಟಾಗಿ ಕನ್ನಡಕ್ಕೆ ಅನುವಾದಿಸಿದರೆ ಸಾಕು ಎಂದುಕೊಂಡು ಹಾಗೆಯೇ ಮಾಡಿದೆ. ನೀವು ಇದನ್ನು ಓದಬೇಕು. ಓದಿ ಆದಮೇಲೆ ಕೊನೆಯಲ್ಲಿ ಕೊಟ್ಟಿರುವ ಲಿಂಕ್‌ನಿಂದ ವಿಡಿಯೊ ನೋಡಬೇಕು. ‘ಕೇಶವಸೃಷ್ಟಿ’ ಎಂಬ ಅನನ್ಯ ಲೋಕದ ಪರಿಚಯವು ನಿಮಗೂ ರೋಮಾಂಚನ ತರುತ್ತದೆಂದು ನನ್ನ ಅಂದಾಜು. ಯಾವ್ಯಾವುದೋ ಉಪಯೋಗವಿಲ್ಲದ ಫಾರ್ವರ್ಡುಗಳನ್ನು ವೈರಲ್ ಆಗಿಸುವುದಕ್ಕಿಂತ ಇಂತಹ ಸದ್ವಿಚಾರವನ್ನು ನೀವೂ ಹಂಚಿಕೊಳ್ಳಬೇಕೆಂದು ನನ್ನ ಆಶಯ.

‘ಈ ಭೂಮಿಯ ಮೇಲೆ ಅನೇಕಾನೇಕ ಮಹಾನಗರಗಳು ಇವೆ. ಆದರೆ ನಮ್ಮ ಭಾರತ ದೇಶದಲ್ಲಿ ಇಲ್ಲಿನ ಮಾಯಾನಗರಿ ಎಂದು ಕರೆಯಲ್ಪಡುವ ಮುಂಬೈ ಮಹಾನಗರದ ಖದರೇ ಬೇರೆ. ಇದರ ನಾಡಿಮಿಡಿತ ಮತ್ತು ಇಲ್ಲಿರುವ ಜನರ ಜೀವನಶೈಲಿ ವೈವಿಧ್ಯಗಳ ಆಗರ. ಇದೇ ಮುಂಬಯಿಯ ವಿಮಾನ ನಿಲ್ದಾಣದಿಂದ ಕೇವಲ 35 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಭಾಯಿಂದರ್‌ನ ಉತ್ತನ್ ಗ್ರಾಮದಲ್ಲಿರುವ ‘ಕೇಶವಸೃಷ್ಟಿ’, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೆವಾರ್‌ಜೀ ಅವರ ಹೆಸರಿಗೆ ಸಮರ್ಪಿತವಾಗಿದೆ. ಇಲ್ಲಿ ‘ಸೃಷ್ಟಿ’ಗಾಗಿ ಸೃಷ್ಟಿಯಿಂದಲೇ, ಅಂದರೆ ಪ್ರಕೃತಿಯಿಂದಲೇ ಸಿಂಗರಿಸಲ್ಪಟ್ಟ ನಯನಮನೋಹರ ದೃಶ್ಯಾವಳಿ ಕಾಣಸಿಗುತ್ತದೆ. ಕೇಶವಸೃಷ್ಟಿ ಪ್ರಕೃತಿಯ ಮಡಿಲಲ್ಲಿ ಬೆಚ್ಚಗೆ ಕುಳಿತಿರುವ ಒಂದು ವಿಶಾಲ ಪರಿಸರ. ಇಲ್ಲಿ ಕೃಷಿ, ಶಿಕ್ಷಣ, ಗೋವಿನ ಸೇವೆ, ವನೌಷಧಿಗಳು, ಸಾಮಾಜಿಕ ಕಾಳಜಿ, ವೃದ್ಧಾಶ್ರಮ ಇವೆ. ಜೊತೆಯಲ್ಲೇ ಕೆಲವು ಸಮಕಾಲೀನ ವಿಷಯಗಳಲ್ಲಿ- ಅಂದರೆ ಪರಿಸರ ಪ್ರಜ್ಞೆ, ಪರ್ಯಾಯ ಶಕ್ತಿ ಉತ್ಪಾದನೆ, ಗ್ರಾಮವಿಕಾಸ, ತ್ಯಾಜ್ಯವಿಲೇವಾರಿ ಮುಂತಾದ ಕ್ಷೇತ್ರಗಳಲ್ಲಿ ಅರ್ಥಪೂರ್ಣ ಕೆಲಸಗಳನ್ನು ಮಾಡಲಾಗುತ್ತಿದೆ.

ಇಸವಿ 2005ರಲ್ಲಿ ಆರಂಭವಾದ, ಕೃಷಿಸಂಕುಲ ವನವಾಸಿ ಯುವಕ-ಯುವತಿಯರಿಗೆ ಮೂರು ವರ್ಷಗಳ ಕೃಷಿ ತರಬೇತಿ ಕೊಡುವ ಎ-ಗ್ರೇಡ್ ಪಾಲಿಟೆಕ್ನಿಕ್ ಸಂಸ್ಥೆಯಿದೆ. ಇದು ಶುಲ್ಕರಹಿತ ಕೋರ್ಸ್ ಮತ್ತು ವಸತಿ ಸೌಕರ್ಯವನ್ನೂ ಒದಗಿಸಲಾಗುತ್ತದೆ. ಇದುವರೆಗೆ ಸುಮಾರು 500ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕೃಷಿ ಶಿಕ್ಷಣ ಪಡೆದಿದ್ದಾರೆ. ಅವರ ಪೈಕಿ 400ರಷ್ಟು ವಿದ್ಯಾರ್ಥಿಗಳು ತಮ್ಮತಮ್ಮ ಊರಿನಲ್ಲಿ ಪೂರ್ಣಪ್ರಮಾಣದ ಕೃಷಿಕರಾಗಿ ಜೀವನ ನಡೆಸುತ್ತಿದ್ದಾರೆ. ಈಗಲೂ ಸಂಸ್ಥೆಯು ಅವರೆಲ್ಲರೊಡನೆ ನಿರಂತರ ಸಂಪರ್ಕ ಇಟ್ಟುಕೊಂಡಿದೆ. ಕಾಲಾನುಕಾಲಕ್ಕೆ ಅವರಿಗೆ ಬೇಕಾಗುವ ಮಾರ್ಗದರ್ಶನ ಒದಗಿಸುತ್ತದೆ. ವಿಶ್ವ ಹಿಂದೂ ಪರಿಷತ್‌ನ ಮುತುವರ್ಜಿಯಲ್ಲಿ ಇಲ್ಲಿ ಒಂದು ಮಾದರಿ ಗೋಶಾಲೆಯೂ ಇದೆ. ದೇಸಿ ತಳಿಯ 200ಕ್ಕೂ ಹೆಚ್ಚು ಹಸುಗಳ ಪಾಲನೆ ಪೋಷಣೆ ಇಲ್ಲಿ ನಡೆಯುತ್ತಿದೆ. ತಳಿ ಉತ್ಪಾದನೆ ಒಂದು ಕಡೆಯಾದರೆ ಗೋದಾನದ ಚಟುವಟಿಕೆಗಳು ಇನ್ನೊಂದೆಡೆ. ಮುಂಬಯಿ ಶಹರದಿಂದ ಬರುವ ಜನರು ಇಲ್ಲಿ ಗೋಸೇವೆಯ ಅನುಭವವನ್ನು ಪಡೆಯುತ್ತಾರೆ. ವರ್ಷದುದ್ದಕ್ಕೂ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ.

ಕೇಶವಸೃಷ್ಟಿಯಲ್ಲಿ ಅಳವಡಿಸಿಕೊಂಡಿರುವ ‘ಉತ್ತನ್ ವಿವಿಧೋದ್ದೇಶ ಶಿಕ್ಷಣ ಯೋಜನೆ’ಯ ಅನ್ವಯ ಎರಡು ಪ್ರತ್ಯೇಕ ವಿದ್ಯಾಲಯಗಳು- ರಾಮರತ್ನ ವಿದ್ಯಾಮಂದಿರ, ಮತ್ತು ರಾಮರತ್ನ ಇಂಟರ್‌ನ್ಯಾಷನಲ್ ಸ್ಕೂಲ್- ಇವೆರಡರ ಮೂಲಕ ಶಿಕ್ಷಣದ ಒಂದು ಅನನ್ಯ ಆಯಾಮವು ಇಲ್ಲಿ ಸಮಾಜಕ್ಕೆ ತೆರೆದುಕೊಂಡಿದೆ. 32 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿರುವ ಈ ವಿದ್ಯಾಲಯಗಳು ಆಧುನಿಕ ಶಿಕ್ಷಣ ಮತ್ತು ಸನಾತನ ಸಂಸ್ಕಾರಗಳ ಬೋಧನೆಯ ಅಪೂರ್ವಸಂಗಮ ಎನಿಸಿಕೊಂಡಿವೆ. ಇಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕಾಗಿ ಆವಶ್ಯಕವಾದ ಸೌಲಭ್ಯಗಳು, ಕಲಿಕೆಯ ವಾತಾವರಣ, ಮತ್ತು ಸಮರ್ಥ ಮಾರ್ಗದರ್ಶನ ಎಲ್ಲವನ್ನೂ ಒದಗಿಸಲಾಗುತ್ತದೆ. ‘ಉತ್ತನ್ ವನೌಷಧಿ ಸಂಶೋಧನ ಸಂಸ್ಥಾನ’ದಲ್ಲಿ 600ಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತದೆ. ಗಿಡಮೂಲಿಕೆಗಳ ಸಂವರ್ಧನೆ, ಮನುಷ್ಯನ ಆರೋಗ್ಯದ ಮೇಲೆ ಅವುಗಳ ಪರಿಣಾಮವನ್ನು ಕುರಿತಂತೆ ಸಂಶೋಧನೆ, ಮತ್ತು ಆಯುರ್ವೇದ ಔಷಧಿಗಳ ಉತ್ಪಾದನೆ- ಇವು ಮುಖ್ಯ ಧ್ಯೇಯೋದ್ದೇಶಗಳು. ಅಪೌಷ್ಟಿಕತೆಯನ್ನು ಹೋಗಲಾಡಿಸಲಿಕ್ಕೆ ಸೈನೊಫಾರ್ಮ್ ಮೂಲಕ ಸಂಶೋಧನೆ ಕಾರ್ಯ ಭರದಿಂದ ಸಾಗಿದೆ.

ಇಸವಿ 1982ರಲ್ಲಿ ಇಲ್ಲಿ ‘ರಾಮಭಾವು ಮಹಾಲ್ಗೀ ಪ್ರಬೋಧಿನಿ’ ವಿಭಾಗದ ಸ್ಥಾಪನೆಯಾಯಿತು. ಇಂದು ಇದು ದಕ್ಷಿಣ ಏಷ್ಯಾದ ಏಕೈಕ ಸಾಮಾಜಿಕ ಮತ್ತು ರಾಜನೀತಿಯ ಶಿಕ್ಷಣಕೇಂದ್ರವಾಗಿದೆ. ಸಾರ್ವಜನಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಪ್ರಶಿಕ್ಷಣ ಮತ್ತು ಮಾರ್ಗದರ್ಶನ ಕೊಡುವುದು ಈ ಕೇಂದ್ರದ ಮುಖ್ಯ ಉದ್ದೇಶ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳು ಇಲ್ಲಿಗೆ ಆಗಾಗ ಭೇಟಿ ಕೊಡುತ್ತಿರುತ್ತಾರೆ. ಇಲ್ಲಿರುವ ‘ಕಿಶನ್‌ಗೋಪಾಲ್ ರಾಜಪುರಿಯಾ ವಾನಪ್ರಸ್ಥಾಶ್ರಮ’ದಲ್ಲಿ ಬಾಳಿನ ಮುಸ್ಸಂಜೆಯ ದಿನಗಳನ್ನು ಕಳೆಯುತ್ತಿರುವ ಸುಮಾರು 115ಕ್ಕೂ ಹೆಚ್ಚು ಹಿರಿಯ ನಾಗರಿಕರು ವಾಸಿಸುತ್ತಿದ್ದಾರೆ. ಅವರಿಗೆ ಆವಶ್ಯಕವಾದ ಮೂಲಭೂತ ಸೌಕರ್ಯಗಳು, ಊಟ-ವಸತಿ ವ್ಯವಸ್ಥೆ, ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತದೆ. ಒಂದು ಆಂಬುಲೆನ್ಸ್ ಇದೆ. ಈ ಹಿರಿಜೀವಗಳ ಮನಸ್ಸಿಗೆ ತಂಪೆರೆಯಲೆಂದೇ ಒಂದು ಪ್ರತ್ಯೇಕ ಪುಟ್ಟ ಗೋಶಾಲೆಯೂ ಇದೆ. ಹಾಗೆಯೇ ಭಗವಾನ್ ಶಂಕರನ ಒಂದು ಮಂದಿರ ಕೂಡ ಇದೆ.

ಕೇಶವಸೃಷ್ಟಿ ಗ್ರೀನ್ ಸೊಸೈಟಿ ಮೂಲಕ ಪರಿಸರಸಂರಕ್ಷಣೆ ಮತ್ತು ತ್ಯಾಜ್ಯನಿರ್ವಹಣೆ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ. ನಿಬಿಡ ಅರಣ್ಯಾಭಿವೃದ್ಧಿ ಮಾಡಿ ಮುಂಬಯಿ ಮಹಾನಗರಕ್ಕೂ ಅನುಕೂಲವಾಗುವಂತೆ ಆಕ್ಸಿಜನ್ ಝೋನ್ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಹೂ-ಹಣ್ಣು-ತರಕಾರಿಗಳ ಗಿಡ ನೆಡುವಿಕೆ, ಹೌಸಿಂಗ್ ಸೊಸೈಟಿಗಳಲ್ಲಿ ತ್ಯಾಜ್ಯನಿರ್ವಹಣೆಯ ಕಾರ್ಯಾಗಾರಗಳನ್ನು ಏರ್ಪಡಿಸುವುದು- ಇವು ಈ ವಿಭಾಗದ ಮುಖ್ಯ ಉದ್ದೇಶಗಳು. ಮುಂಬಯಿಯ ಸುಮಾರು ನೂರಕ್ಕೂ ಹೆಚ್ಚು ಮಂದಿರಗಳಲ್ಲಿ ಕಾಂಪೋಸ್ಟರ್‌ಗಳನ್ನು ಅಳವಡಿಸಿ ಅವುಗಳನ್ನು ಕಶ್ಮಲಮುಕ್ತವಾಗಿಸುವ ಕೆಲಸವೂ ನಡೆಯುತ್ತಿದೆ. ಪ್ರೊ.ರಾಜೇಂದ್ರ ಸಿಂಗ್ ಅವರ ಪ್ರೇರಣೆಯಿಂದ ಅವರದೇ ಹೆಸರಿನಲ್ಲಿ ‘ಊರ್ಜಾ ಅಭಿಯಾನ್’ ಆರಂಭಿಸಲಾಗಿದೆ. ಸೌರಶಕ್ತಿಯೇ ಮುಂತಾದ ಪರ್ಯಾಯ ಶಕ್ತಿ ವ್ಯವಸ್ಥೆಯ ಅಧ್ಯಯನಗಳು ಮತ್ತು ಪ್ರಯೋಗಗಳೂ ನಡೆದಿವೆ. ಅವುಗಳ ಅಳವಡಿಕೆಯಿಂದ ಫಲಾನುಭವವೂ ಸಿಗುತ್ತಿದೆ. ಇಂಗಾಲದ ಪ್ರಸರಣವನ್ನು ನಿಯಂತ್ರಣದಲ್ಲಿಡುವ ಪ್ರಯತ್ನಗಳೂ ಆಗುತ್ತಿವೆ. ಈ ನಿಟ್ಟಿನಲ್ಲೇ ಕೇಶವಸೃಷ್ಟಿ ಸಂಸ್ಥೆಯು ಪ್ರಪಂಚದಲ್ಲೇ ಅತಿಹೆಚ್ಚು ಜನರಿಗೆ ಸೌರಶಕ್ತಿ ಬಳಸಿ ಅಡುಗೆ ವಿಧಾನದ ತರಬೇತಿ ಕೊಡುವ ಮೂಲಕ ಗಿನ್ನೆಸ್ ದಾಖಲೆ ಸೃಷ್ಟಿಸಿದೆ. ಇಲ್ಲಿಯವರೆಗೆ ಸಮಾಜದ ಎಲ್ಲ ಸ್ತರಗಳ ಸುಮಾರು ಒಂದೂಕಾಲು ಲಕ್ಷ ಸಂಖ್ಯೆಯ ಮಕ್ಕಳಿಗೆ ಸೋಲಾರ್ ಕುಕ್ಕಿಂಗ್‌ನ ಅನುಭವವನ್ನು ಈ ಕಾರ್ಯಕ್ರಮದ ಮೂಲಕ ಕೊಡಲಾಗಿದೆ. ಪರಿಸರ ಶಿಕ್ಷಣದ ಮೂಲಕ ವಿವಿಧ ವಯೋಮಾನದ ಸಾವಿರಾರು ಜನರು ಕೇಶವಸೃಷ್ಟಿಯಲ್ಲಿ ನಡೆಯುತ್ತಿರುವ ಈ ಎಲ್ಲ ಪ್ರಯೋಗಗಳ ಫಲಾನುಭವಿಗಳಾಗಿದ್ದಾರೆ.

ಮೇ 2017ರಲ್ಲಿ ಕೇಶವಸೃಷ್ಟಿಯು ಗ್ರಾಮವಿಕಾಸ ಕ್ಷೇತ್ರದಲ್ಲೂ ಕಾಲಿಟ್ಟಿತು. ಪಾಲಗಢ ಜಿಲ್ಲೆಯಲ್ಲಿ ಆದಿವಾಸಿಗಳ ದಟ್ಟಣೆಯಿರುವ 42 ಗ್ರಾಮಗಳನ್ನು ಗುರುತಿಸಲಾಯಿತು. ಈಗ ಅಲ್ಲಿ ಸೌರವಿದ್ಯುದುತ್ಪಾದನೆ, ಕುಡಿಯುವ ನೀರು, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮತ್ತು ಸಂಸ್ಕಾರ ಬೋಧೆ, ಆರೋಗ್ಯಕೇಂದ್ರ, ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ, ಕೌಶಲಾಭಿವೃದ್ಧಿ, ಉದ್ಯೋಗ ತರಬೇತಿ, ಸ್ವಚ್ಛತೆಯ ಅರಿವು ಮುಂತಾದುವೆಲ್ಲವನ್ನೂ ಸ್ಥಳೀಯ ಯುವಜನತೆಯ ಸಹಕಾರ ಮತ್ತು ಕೇಶವಸೃಷ್ಟಿಯಿಂದ ನಿಯೋಜಿತ ತಂಡದ ಮೂಲಕ ಮಾಡಲಾಗುತ್ತಿದೆ. ಇದು ಆರಂಭವಾಗಿ ಒಂದು ವರ್ಷದೊಳಗೇ ಉತ್ತಮ ಫಲಿತಾಂಶವನ್ನೂ ಕೊಟ್ಟಿದೆ. ಅಟಲ್ ಬಿಹಾರಿ ವಾಜಪೇಯಿಯವರು ಇಲ್ಲಿಗೆ ಭೇಟಿಯಿತ್ತಾಗ ಹೇಳಿದ್ದರು: ಈ ಹೊಸ ಸೃಷ್ಟಿಯನ್ನು ನೋಡಿ ಮಹದಾನಂದವಾಗಿದೆ. ಇಲ್ಲಿಗೆ ಬರುವವರೆಗೂ ನನಗೆ ಈ ಸೃಷ್ಟಿಯ ರೂಪ ಹೇಗಿದೆಯೆಂಬ ಕಲ್ಪನೆಯೇ ಇರಲಿಲ್ಲ. ಇಂದು ಕಣ್ಣಾರೆ ನೋಡಿದ್ದೆಲ್ಲ ನನಗೆ ಅತ್ಯಂತ ಆಶ್ಚರ್ಯ ಮತ್ತು ಸಂತೋಷ ತಂದಿದೆ. ಹೇ ಕೇಶವ ತುಮಕೋ ಕೋಟಿ ಕೋಟಿ ಅಭಿವಾದನ.’

ಕೇಶವಸೃಷ್ಟಿ ಸಾಕ್ಷ್ಯಚಿತ್ರದ ಯುಟ್ಯೂಬ್ ಕೊಂಡಿ: www.youtube.com/watch?v=ShmoDDTtpz8

Leave a Reply

Your email address will not be published.

This site uses Akismet to reduce spam. Learn how your comment data is processed.