– ರಾಧಾಕೃಷ್ಣ ಹೊಳ್ಳ, ನಿರ್ದೇಶಕರು, ಸಂವಾದ ಫೌಂಡೇಶನ್

ಯುಗಾದಿಯು ಭಾರತೀಯರಿಗೆ ಹೊಸವರ್ಷದ ಆರಂಭದ ದಿನ. ಯುಗಾದಿಯ ದಿನವೇ ನಾಗಪುರದಲ್ಲಿ ಸಂಘಸ್ಥಾಪಕರಾದ ಡಾ. ಕೇಶವ ಬಲಿರಾಂ ಹೆಡಗೇವಾರರ ಜನನವೂ ಆಯಿತು. ಅವರು ಪ್ರಾರಂಭಿಸಿದ ಆರೆಸ್ಸೆಸ್ ಇಂದು ದೇಶಾದ್ಯಂತ ಮಾತ್ರವಲ್ಲ, ವಿಶ್ವಾದ್ಯಂತ ಪಸರಿಸಿದೆ. 100 ವರ್ಷಗಳ ಹಿಂದೆ ಪ್ರಾರಂಭವಾದ ಸಂಘಟನೆ ಇಂದೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡು ಹೊಸ ಹೊಸ ತಲೆಮಾರಿನ ಜನರನ್ನು ತನ್ನತ್ತ ಸೆಳೆಯುತ್ತಾ ವಿಸ್ತಾರಗೊಳ್ಳುತ್ತಿದೆ. ಸಂಘಪ್ರಾರಂಭದ ಹಿಂದೆ ಇರುವ ಚಿಂತನೆ ಎಷ್ಟು ಆಳವಾದದ್ದು ಹಾಗೂ ಎಷ್ಟು ದೂರದೃಷ್ಟಿಯುಳ್ಳದ್ದು ಎಂಬುದನ್ನು ಇದು ತೋರಿಸುತ್ತದೆ. ಇಂತಹ ಸಂಘವನ್ನು ಸ್ಥಾಪಿಸಿದ ಡಾಕ್ಟರ್ ಜೀ ಅವರ ಜೀವನವನ್ನು ಮೆಲುಕು ಹಾಕುವುದು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆ ಕೊಡಬಲ್ಲದು.

ಸಂಘದ ಪ್ರಾರಂಭಕ್ಕೂ ಮೊದಲು

ನಾಗಪುರದಲ್ಲಿ ಶಾಲಾಶಿಕ್ಷಣ ಪಡೆಯುತ್ತಿರುವಾಗಲೇ ತನ್ನ ಅಪ್ರತಿಮ ದೇಶಭಕ್ತಿಯಿಂದಾಗಿ ಹಿರಿಯ ಸಾಮಾಜಿಕ ನಾಯಕರ ಕಣ್ಣಿಗೆ ಬಿದ್ದ ಕೇಶವನನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಹಿರಿಯರು ಅನೇಕರು. ಹಾಗಾಗಿ, ವೈದ್ಯಕೀಯ ಶಿಕ್ಷಣಕ್ಕೆ ಕೊಲ್ಕತ್ತಾಕ್ಕೆ ಹೋಗುತ್ತೇನೆಂದು ಕೇಶವ ಹೇಳಿದಾಗ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಟ್ಟರು. ಮಾತ್ರವಲ್ಲ, ಅಲ್ಲಿನ ನ್ಯಾಷನಲ್ ಮೆಡಿಕಲ್ ಕಾಲೇಜಿಗೆ ಸೇರಲು ಪರಿಚಯಪತ್ರವನ್ನೂ ಕೊಟ್ಟರು. ಕೊಲ್ಕತ್ತಾದಲ್ಲಿ ಶಿಕ್ಷಣದ ಜತೆಜತೆಗೆ ಅನುಶೀಲನ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಹೆಡಗೇವಾ‌ರ್, ಕ್ರಾಂತಿಕಾರಿ ಸಂಘಟನೆಯ ಕಾರ್ಯವಿಧಾನವನ್ನು ಕರಗತ ಮಾಡಿಕೊಂಡರು.

ರಜೆಯ ಸಂದರ್ಭದಲ್ಲಿ ನಾಗಪುರಕ್ಕೆ ಬರುವಾಗ ಕೇಶವ ಬರಿಗೈಯಲ್ಲಿ ಬಂದದ್ದೇ ಇಲ್ಲ. ಪ್ರತಿಬಾರಿಯೂ ಗೌಪ್ಯವಾಗಿ ಪಿಸ್ತೂಲನ್ನು ತಂದು ನಾಗಪುರದ ಕ್ರಾಂತಿಕಾರಿಗಳಿಗೆ ತಲುಪಿಸುವುದು ಸಾಮಾನ್ಯವಾಗಿತ್ತು. ಶಿಕ್ಷಣ ಮುಗಿಸಿ ನಾಗಪುರಕ್ಕೆ ಹಿಂತಿರುಗಿದ ಬಳಿಕ ಕ್ರಾಂತಿಕಾರಿ ಸಂಘಟನೆಯನ್ನು ಬಲಗೊಳಿಸುವತ್ತ ಗಮನ ಹರಿಸಿದರು ಹೆಡಗೇವಾ‌ರ್. ಆದರೆ, ಕೇವಲ ಮೂರ್ನಾಲ್ಕು ವರ್ಷಗಳಲ್ಲೇ ಕ್ರಾಂತಿಕಾರಿ ಸಂಘಟನೆಯ ಇತಿಮಿತಿಗಳು ಅರಿವಾಗತೊಡಗಿದ್ದರಿಂದ. ತಾನೇ ಕಟ್ಟಿದ ಸಂಘಟನೆಯನ್ನು ವಿಸರ್ಜಿಸುವ ನಿರ್ಣಯ ತೆಗೆದುಕೊಂಡರು. ಬೇರೆ ಬೇರೆ ಸ್ಥಳಗಳಿಗೆ ಹೋಗಿದ್ದ ಕ್ರಾಂತಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡರು. ಶಸ್ತ್ರಾಸ್ತ್ರಗಳನ್ನು ನಾಶಗೊಳಿಸಿದರು. ಯಾವುದೇ ಮೋಹಕ್ಕೆ ಒಳಗಾಗಲಿಲ್ಲ. ಬಳಿಕ ಕೆಲವು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದರು. ಸತ್ಯಾಗ್ರಹಗಳಲ್ಲಿ ಭಾಗವಹಿಸಿದರು. ಕಾರಾಗೃಹಶಿಕ್ಷೆ ಅನುಭವಿಸಿದರು. ರಾಜಕೀಯದಲ್ಲಿದ್ದ ಅಲ್ಪಸಂಖ್ಯಾತ ತುಷ್ಟಿಕರಣ, ನಾಯಕರ ಸ್ವಾರ್ಥ, ಅಪ್ರಾಮಾಣಿಕತೆ ಮೊದಲಾದವನ್ನು ನೋಡಿದ ಹೆಡಗೇವಾರರಿಗೆ ಇದರಿಂದ ಸಮಾಜಪರಿವರ್ತನೆ ಅಸಾಧ್ಯ ಎನಿಸಿತು. ದೇಶನಿಷ್ಠರಾದ ಪ್ರಾಮಾಣಿಕವಾಗಿ ಕೆಲಸ ಮಾಡಬಲ್ಲ, ಸಮಾಜದಲ್ಲಿ ಜಾಗೃತಿ ಮೂಡಿಸುವ ಹಾಗೂ ಸಂಘಟನೆ ಮಾಡುವ ಧೈರ್ಯಶಾಲಿ ಕಾರ್ಯಕರ್ತರು ಇದ್ದರೆ ಮಾತ್ರ ಸ್ವಾತಂತ್ರ್ಯಪ್ರಾಪ್ತಿ ಸಾಧ್ಯ ಎಂಬುದು ಅವರಿಗೆ ಮನವರಿಕೆಯಾಯಿತು. ಅಂತಹ ವ್ಯಕ್ತಿಗಳನ್ನು ತಯಾರು ಮಾಡಲು ಸಂಘವನ್ನು ಪ್ರಾರಂಭಿಸಿದರು. ವ್ಯಕ್ತಿನಿರ್ಮಾಣದಿಂದ ಮಾತ್ರ ರಾಷ್ಟ್ರನಿರ್ಮಾಣ ಸಾಧ್ಯ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಆದ್ದರಿಂದ ವ್ಯಕ್ತಿನಿರ್ಮಾಣವೇ ಸಂಘದ ಪ್ರಮುಖ ಉದ್ದೇಶವಾಯಿತು.

ಸ್ನೇಹದಿಂದಲೇ ಎಲ್ಲರನ್ನೂ ಗೆದ್ದ ಡಾಕ್ಟರ್‌ಜೀ

1937ರಲ್ಲಿ ಒಮ್ಮೆ ಸಾವರ್ಕರ್ ಅವರು ವಿದರ್ಭದಲ್ಲಿ ಪ್ರವಾಸ ಕೈಗೊಂಡಿದ್ದರು. ಅವರ ಸಭೆಗಳಿಗೆ ಜನ ಸೇರುವಂತೆ ಮಾಡಿ ಅವರ ಕಾರ್ಯಕ್ರಮಗಳನ್ನು ಎಲ್ಲೆಡೆ ಯಶಸ್ವಿಗೊಳಿಸುವಲ್ಲಿ ಸಂಘದ ಸ್ವಯಂಸೇವಕರ ಪಾತ್ರ ಬಹಳ ದೊಡ್ಡದಿತ್ತು. ತಮ್ಮ ಭಾಷಣದಲ್ಲಿ ಸಾವರ್ಕರ್ ಅವರು ಸಂಘವನ್ನು ಬಹಳ ಹೊಗಳಿದರು. ಸಂಜೆ ಡಾಕ್ಟರ್‌ಜೀ ಸಿಕ್ಕಾಗ, “ನಾನು ಸ್ವಯಂಸೇವಕನಾಗಲೇ?” ಎಂದು ಕೇಳಿದರು. “ನೀವು ಸಂಘದ ಬಗ್ಗೆ ಬಹಳ ಪ್ರಶಂಸೆಯ ಮಾತುಗಳನ್ನಾಡಿದ್ದೀರಿ. ಅದೇ ಸಾಕು. ಈ ಸ್ನೇಹ ಹೀಗೆಯೇ ಇರಲಿ” ಎಂದರು ಡಾಕ್ಟರ್‌ಜೀ. ಮರುವರ್ಷ ನಾಗಪುರ ಪ್ರವಾಸದ ಸಂದರ್ಭದಲ್ಲೂ ಸಂಘದ ಸ್ವಯಂಸೇವಕರು ಹೀಗೇ ಸಹಕರಿಸಿದರು. ಸಂಘದ ಶಿಬಿರಕ್ಕೆ ಬಂದ ಸಾವರ್ಕರ್ ಅವರು ಮಾತನಾಡುವಾಗ, “ದಂಡ ತಿರುಗಿಸಿ, ಪೆರೇಡ್ ಮಾಡುವುದರಲ್ಲೇನಿದೆ? ಹೊರಗೆ ಹೋಗಿ ಸಮಾಜಜಾಗೃತಿ ಮಾಡಬೇಕಾಗಿದೆ” ಎಂದು ವ್ಯಂಗ್ಯ ಮಾಡಿದರು. ಇದರಿಂದ ಸ್ವಯಂಸೇವಕರಲ್ಲಿ ಸ್ವಲ್ಪ ನಿರಾಶೆ ಮೂಡಿತು. ಆದರೆ ಡಾಕ್ಟರಜೀ ಏನೂ ಮಾತನಾಡಲಿಲ್ಲ. ಬಳಿಕ ಡಾಕ್ಟರ್‌ಜೀ ‘ಹದಿಮೂರನೇ ವರ್ಷದ ಸಿಂಹಾವಲೋಕನ’ ಎಂದು ಪ್ರಸಿದ್ಧವಾದ ತಮ್ಮ ಭಾಷಣದಲ್ಲಿ ಸಂಘವು ಕಳೆದ 13 ವರ್ಷಗಳಲ್ಲಿ ಏನೇನು ಮಾಡಿದೆ ಎಂದು ಅಂಕಿಅಂಶ ಸಹಿತ ವಿವರಿಸಿದರು. ಇದರಿಂದ ಸ್ವಯಂಸೇವಕರಲ್ಲಿದ್ದ ಗೊಂದಲ ನಿವಾರಣೆಯಾಗಿ, ತಮ್ಮ ಗುರಿ ಹಾಗೂ ದಾರಿ ಸರಿಯಿದೆ ಎಂಬ ವಿಶ್ವಾಸ ಮೂಡಿತು.

ಈ ವಿಷಯ ಸಾವರ್ಕರ್ ಅವರ ಕಿವಿಗೂ ಬಿತ್ತು. ಮುಂದಿನ ವರ್ಷ ಪುಣೆಯ ಸಂಘಶಿಕ್ಷಾವರ್ಗದ ಸಂದರ್ಭದಲ್ಲಿ ಸಾವರ್ಕರ್ ಅವರೂ ಅಲ್ಲಿಗೆ ಬಂದಿದ್ದರು. ರೈಲು ಇಳಿದ ಬಳಿಕ ಎಲ್ಲಿಗೆ ಹೋಗುವರೆಂದು ಹಿಂದೂ ಮಹಾಸಭಾದ ಕಾರ್ಯಕರ್ತರು ವಿಚಾರಿಸಿದರು. ಆರೆಸ್ಸೆಸ್ ವರ್ಗಕ್ಕೆ ಎಂದು ತಿಳಿಸಿದರು. “ಆದರೆ ತಮ್ಮನ್ನು ಕರೆದುಕೊಂಡು ಹೋಗಲು ಸಂಘದಿಂದ ಯಾರೂ ಬಂದಿಲ್ಲವಲ್ಲ” ಎಂದು ಕಾರ್ಯಕರ್ತರು ಕೇಳಿದರು. “ನಮ್ಮ ಮನೆಗೆ ಹೋಗಲು ನಮ್ಮನ್ನು ಆಹ್ವಾನಿಸಬೇಕೇನು?” ಎಂದು ಮರುಪ್ರಶ್ನೆ ಹಾಕಿ ತಾವೇ ವರ್ಗಕ್ಕೆ ಬಂದರು. ಅವರ ಅನಿರೀಕ್ಷಿತ ಆಗಮನ ಡಾಕ್ಟರ್‌ಜೀಯವರಿಗೆ ಬಹಳ ಖುಷಿ ನೀಡಿತು. ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡುವಂತೆ ವಿನಂತಿಸಿದರು. ತಮ್ಮ ಮಾತಿನಲ್ಲಿ ಸಾವರ್ಕರ್ ಅವರು, “ನಮ್ಮ ಕಾರ್ಯವಾದರೋ ಮುಸಲಧಾರೆ ಮಳೆಯಂತೆ. ತುಸುಕಾಲ ಅಬ್ಬರದಿಂದ ಸುರಿದು ಎಲ್ಲವನ್ನೂ ಜಲಮಯಗೊಳಿಸಿ ಹರಿದುಹೋಗುತ್ತದೆ. ಆದರೆ ಡಾ. ಹೆಡಗೇವಾರರ ಕೆಲಸ ಓರ್ವ ರೈತನಂತೆ. ಮಳೆನೀರನ್ನು ತಡೆದು ಸಂಗ್ರಹಿಸಿಡುತ್ತಾನೆ. ತನಗೆ ಬೇಕಾದಾಗ ಬಳಸಿಕೊಳ್ಳುತ್ತಾನೆ. ನೀವೆಲ್ಲರೂ ಡಾ. ಹೆಡಗೇವಾರರು ತೋರಿದ ಮಾರ್ಗವನ್ನೇ ಅನುಸರಿಸಬೇಕು” ಎಂದು ಹೇಳಿದರು. ಡಾಕ್ಟರ್‌ಜೀ ತಮ್ಮ ಸೌಮ್ಯ ಸ್ವಭಾವ ಹಾಗೂ ಶುದ್ಧ ಸ್ನೇಹದಿಂದ ಹೇಗೆ ಎಲ್ಲರ ಮನ ಗೆಲ್ಲುತ್ತಿದ್ದರು ಎಂದುದಕ್ಕೆ ಇದೊಂದು ಒಳ್ಳೆಯ ನಿದರ್ಶನ.


ಗಾಂಧಿಯವರ ಭೇಟಿ

1934ರ ಡಿಸೆಂಬರ್‌ನಲ್ಲಿ ವಾರ್ಧಾದಲ್ಲಿ ನಡೆಯುತ್ತಿದ್ದ ಸಂಘದ ಶಿಬಿರಕ್ಕೆ ಮಹಾತ್ಮ ಗಾಂಧಿಯವರು ಬಂದಾಗ ಡಾಕ್ಟರ್‌ಜೀ ಇರಲಿಲ್ಲ. ಸಮಾರೋಪಕ್ಕೆ ಬಂದಾಗ ಗಾಂಧಿಯವರನ್ನು ಭೇಟಿಯಾಗಲು ಅವರ ಆಶ್ರಮಕ್ಕೆ ಹೋದರು. ಅಲ್ಲಿ ನಡೆದ ಮಾತುಕತೆಯ ಒಂದೆರಡು ಅಂಶಗಳು ಇಲ್ಲಿವೆ.

ಗಾಂಧೀಜಿ: ಸ್ವಯಂಸೇವಕರ ಬಗ್ಗೆ ನಿಮ್ಮ ಕಲ್ಪನೆಯೇನು? ಡಾಕ್ಟರ್‌ಜೀ: ಸಂಘಟನೆಯಲ್ಲಿ ನಾಯಕರು ಹಾಗೂ ಕಾರ್ಯಕರ್ತರು ಎಂಬ ಎರಡು ವರ್ಗಗಳಿರಬಾರದು. ಸಂಘದಲ್ಲಿರುವವರೆಲ್ಲರೂ ಸ್ವಯಂಸೇವಕರೇ. ಸ್ವಪ್ರೇರಣೆಯಿಂದ ಓರ್ವ ವ್ಯಕ್ತಿ ಸಮಾಜ ಹಾಗೂ ರಾಷ್ಟ್ರಕಾರ್ಯಕ್ಕೆ ಮಹತ್ತ್ವ ನೀಡುವವನಾದಲ್ಲಿ ಅವನ ಮನೋಭಾವ ತಾನು ಕೇವಲ ಜಮಖಾನ ಹಾಸುವವನು ಎಂಬಷ್ಟೇ ಆಗಿ ಉಳಿಯುವುದಿಲ್ಲ. ಬದಲಾಗಿ, ಆತ ರಾಷ್ಟ್ರನಿರ್ಮಾಣದ ಬುನಾದಿಯ ಕಲ್ಲಿನಂತಾಗುತ್ತಾನೆ. ಸರ್ವಸಾಮಾನ್ಯನಂತೆ ಇದ್ದರೂ ಸಹ ಆತ ಅಸಾಮಾನ್ಯ ಕಾರ್ಯವೆಸಗುತ್ತಾನೆ. ಈ ಕಾರಣದಿಂದಾಗಿಯೇ, ಮನಸ್ಸಿನ ಏಕತೆ ಹಾಗೂ ಆತ್ಮವಿಶ್ವಾಸಗಳು ಚೆನ್ನಾಗಿದ್ದು, ಸ್ವಲ್ಪ ಮಾತ್ರ ಹಣವಿದ್ದರೂ ಹಲವು ವಿಧದ ಕಷ್ಟಗಳನ್ನೆದುರಿಸಿಯೂ ಸಂಘವು ಹೊಸ ಹೊಸ ಸ್ವಯಂಸೇವಕರನ್ನು ರೂಪಿಸುವಲ್ಲಿ ಶಕ್ತವಾಗಿದೆ.

ಗಾಂಧೀಜಿ: ನಿನ್ನೆ ವಿಭಿನ್ನ ಜಾತಿಗಳ ಸ್ವಯಂಸೇವಕರು ಶಿಬಿರದಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಕಂಡೆ. ಇದು ಹೇಗೆ ಸಾಧ್ಯವಾಯಿತು? ಡಾಕ್ಟರ್‌ಜೀ: ಅವರ ಅಂತಃಕರಣದಲ್ಲಿ ರಾಷ್ಟ್ರೀಯತೆಯ ಭಾವನೆ ಹಾಗೂ ಹಿಂದೂ ಸ್ವಾಭಿಮಾನ ಜಾಗೃತಗೊಳಿಸಿದ ಪರಿಣಾಮ ಮಿಕ್ಕೆಲ್ಲ ಸಂಕುಚಿತ ವಿಚಾರಗಳಿಂದ ಅವರು ಮೇಲೆದ್ದಿದ್ದಾರೆ.


ಒಮ್ಮೆ ತಾವು ನೋಡಿದ ಒಂದು ಚಿತ್ರದಲ್ಲಿ ‘ನನಗೆ , ಹುತಾತ್ಮನಾಗುವುದನ್ನು ಕಲಿಸಿ’ (Teach me how to die) ಎಂದು ಇದ್ದುದನ್ನು ತಿದ್ದಿ. ‘ನನಗೆ ಸಾರ್ಥಕವಾಗಿ ಬದುಕುವುದನ್ನು ಕಲಿಸಿ’ (Teach me how to live) ಎಂದು ಬರೆಸಿದರು. ದೇಶಕ್ಕಾಗಿ ಸಾಯುವುದಲ್ಲ, ದೇಶಕ್ಕಾಗಿ ಬದುಕಬೇಕು ಎಂದು ಯೋಚಿಸಿದವರು ಅವರು.

ನಾವು ಬಲಿಷ್ಠವಾಗಿದ್ದರೆ ಮಾತ್ರ, ದೇವರು ನಮಗೆ ಸಹಾಯ ಮಾಡುತ್ತಾನೆ ಎಂದು ನಂಬಿದವರು ಡಾಕ್ಟರ್‌ಜೀ. ಹಾಗಾಗಿ, ಪುರುಷಪ್ರಯತ್ನಕ್ಕೇ ಅವರ ಆದ್ಯತೆ, ಜಾತಿ, ಸಂಪ್ರದಾಯ, ಮೇಲುಕೀಳು, ಸ್ವಾರ್ಥಗಳಿಂದ ತುಂಬಿದ್ದ ಹಿಂದೂಸಮಾಜದ ಬಗ್ಗೆ ನೋವಿನಿಂದ ಅವರು ಹೀಗೆ ಹೇಳುತ್ತಿದ್ದರು, “ಭಗವಂತ ನಮಗೆ ಸಹಾಯ ಮಾಡಬೇಕಾದರೂ ಯಾಕೆ? ನಮ್ಮ ಮೇಲೆ ಅವನಿಗೆ ದಯೆ ಬರಬೇಕೇಕೆ? ನಾವೇ ನಮಗಾಗಿ ಏನೂ ಸಹಾಯ ಮಾಡಿಕೊಳ್ಳದಿದ್ದರೆ, ಆತ ನಮಗೆ ಯಾಕೆ ಸಹಾಯ ಮಾಡುತ್ತಾನೆ? ನಾವು ಏನನ್ನೂ ಮಾಡುತ್ತಿಲ್ಲ, ‘ಪರಿತ್ರಾಣಾಯ ಸಾಧೂನಾಂ’ ಎಂಬುದಕ್ಕಾಗಿ ತಾನು ಅವತಾರ ಎತ್ತುವುದಾಗಿ ಭಗವಂತ ಹೇಳಿದ್ದಾನೆ. ನಿಜ. ಆದರೆ, ಸಾಧು ಎಂದರೆ ಯಾರು? ಯಾರಿಗೆ ಸಮಾಜದ್ದಾಗಲೀ, ರಾಷ್ಟ್ರದ್ದಾಗಲೀ ಪರಿವೆಯೇ ಇಲ್ಲವೋ, ಯಾರಿಗೆ ಧರ್ಮ, ಸಂಸ್ಕೃತಿಗಳ ಬಗ್ಗೆ ಚಿಂತೆಯೇ ಇಲ್ಲವೋ, ಯಾರಿಗೆ ಸ್ವಾರ್ಥ ಬಿಟ್ಟು ಬೇರೇನೂ ಗೊತ್ತಿಲ್ಲವೋ ಅಂತಹ ದುಷ್ಟರ ನಾಶಕ್ಕಾಗಿಯೇ ಭಗವಂತ ಅವತಾರವೆತ್ತುತ್ತಾನೆ. ಹಿಂದೂಸಮಾಜದಲ್ಲಿಂದು ಇರುವವರು ಇಂತಹವರೇ. ಯಾರು ಧರ್ಮ, ಸಂಸ್ಕೃತಿಗಳ ರಕ್ಷಣೆಯಲ್ಲಿ ತೊಡಗಿ, ಯಾವುದೇ ಸ್ವಾರ್ಥವಿಲ್ಲದೇ ಕೆಲಸ ಮಾಡುತ್ತಾರೋ ಅವರು ಮಾತ್ರ ಸಾಧುಗಳು.” ಹೀಗಿರುತ್ತಿದ್ದವು ಅವರ ಬಡಿದೆಬ್ಬಿಸುವ ಮೊನಚು ಮಾತುಗಳು! ನಮ್ಮ ಕೆಲಸದಿಂದ ಸಮಾಜದಲ್ಲಿ ಅಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ದೃಢವಾಗಿ ನಂಬಿದ್ದವರು ಅವರು.

ವಿದಾಯ

1940ರಲ್ಲಿ ಡಾಕ್ಟರ್‌ಜೀ ನಿಧನರಾದಾಗ ‘ಕೇಸರಿ’ ಪತ್ರಿಕೆ ಹೀಗೆ ಬರೆಯಿತು. “ಸಾಮಾನ್ಯವಾಗಿ ನಾಯಕರಲ್ಲಿ ಕಾಣಿಸದಿರುವ ವಿನಯಶೀಲತೆಯು ಅವರಲ್ಲಿ ತುಂಬಿತ್ತು. ರಾಷ್ಟ್ರಸೇವೆಗಾಗಿ ತಮ್ಮ ಸ್ವಂತ ಪರಿವಾರ ಹಾಗೂ ತಮ್ಮ ಉಜ್ವಲ ಭವಿಷ್ಯವನ್ನೂ ತ್ಯಾಗ ಮಾಡಿದವರು ಅವರು. ಇನ್ನೊಂದು ಮರಾಠಿ ಪತ್ರಿಕೆ ‘ಕಾಳೆ’ ಹೀಗೆ ಬರೆಯಿತು, “ಭಾರತದ ಸ್ವಾತಂತ್ರಕ್ಕಾಗಿ ಅವರು ನಡೆಸಿದ ಅವಿರತ ಪ್ರಯತ್ನಕ್ಕೆ ಸರಿಸಾಟಿಯಾದುದು ಬೇರೊಂದಿಲ್ಲ.”

ಅವರ ನಿಧನದ ಬಳಿಕ ಆರೆಸ್ಸೆಸ್ ನಿಂತೇ ಹೋಗುತ್ತದೆ ಎಂದು ಹಲವರು ಷರಾ ಬರೆದುಬಿಟ್ಟಿದ್ದರು. ಆದರೆ, ಕುಶಲ ಸಂಘಟಕರಾದ ಹಾಗೂ ಸ್ಪಷ್ಟ ದೂರದೃಷ್ಟಿಯಿದ್ದ ಡಾಕ್ಟರ್‌ಜೀ ಸಂಘವು ವ್ಯಕ್ತಿಕೇಂದ್ರಿತವಾಗದೇ ಇರುವಂತೆ ಎಚ್ಚರಿಕೆ ವಹಿಸಿ, ಸಂಘವನ್ನು ಮುನ್ನಡೆಸಿದರು. ಬೀಜ ಬಿತ್ತಿ, ಮೊಳಕೆಗೆ ನೀರೆರೆದು. ಗಿಡ ಚಿಕ್ಕದಿರುವಾಗಿ ಅದರ ರಕ್ಷಣೆ ಮಾಡಿ. ಇನ್ನು ಇದು ಚೆನ್ನಾಗಿ ಬೆಳೆಯುತ್ತದೆ ಎಂಬ ಹಂತಕ್ಕೆ ಬಂದಮೇಲೆ ದೇಹತ್ಯಾಗ ಮಾಡಿದವರು ಡಾಕ್ಟರ್‌ಜೀ.

ದೇಶಕ್ಕಾಗಿ ಬದುಕುವವರ ಸಂಖ್ಯೆ ಇಂದು ಲಕ್ಷಾಂತರ ಇದೆ. ಅದರ ಪರಿಣಾಮವೂ ನಮ್ಮ ಕಣ್ಣಿಗೆ ಕಾಣುತ್ತಿದೆ. ಭಾರತವೊಂದು ಸ್ವಾಭಿಮಾನಿ, ಸಮೃದ್ಧ ರಾಷ್ಟ್ರವಾಗಿ ತಲೆ ಎತ್ತಿ ನಿಲ್ಲಬೇಕೆಂಬ ಕನಸು ಕಂಡಿದ್ದು ಮಾತ್ರವಲ್ಲದೇ, ಜನಸಾಮಾನ್ಯರನ್ನು ರಾಷ್ಟ್ರನಿರ್ಮಾಣದ ಈ ಮಹತ್ಕಾರ್ಯದಲ್ಲಿ ತೊಡಗಿಸಲು ಸಂಘಟನೆಯನ್ನು ಕಟ್ಟಿ ಬೆಳೆಸಿದ ದ್ರಷ್ಟಾರ ಡಾಕ್ಟರ್‌ಜೀ.

(ವಿಕ್ರಮ ವಾರಪತ್ರಿಕೆಯ ಎಪ್ರಿಲ್ 7, 2024 ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ)

Leave a Reply

Your email address will not be published.

This site uses Akismet to reduce spam. Learn how your comment data is processed.