ಜನವರಿ 11, 1966 ಲಾಲ್ ಬಹದ್ದೂರ್ ಶಾಸ್ತ್ರಿಗಳು ತಾಷ್ಕೆಂಟ್ ನಲ್ಲಿ ತೀರಿಕೊಂಡರು. ಅವರ ಸಾವಿನ ವಿಷಯದ ಕುರಿತಾಗಿ ಕನ್ನಡದಲ್ಲಿ ಬಂದಿರುವ ಪುಸ್ತಕದ ಪರಿಚಯ

ಲೇಖನ: ಪ್ರವೀಣ್ ಪಟವರ್ಧನ್

ನಮ್ಮ ದೇಶದಲ್ಲಿ ಹಲವಾರು ರಾಷ್ಟ್ರೀಯ ನಾಯಕರುಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ಆಯಾಮದಲ್ಲಷ್ಟೇ ಅಲ್ಲದೆ, ಅದರ ಸುತ್ತ ಬೆಸೆದಿರುವಂತಹ ಅನೇಕ ವಿಷಯಗಳಲ್ಲಿ ಮೋಸ ವಂಚನೆಗಳನ್ನು ಕಾಣಬಹುದಾಗಿರುತ್ತದೆ. ಕಾಲಕ್ರಮೇಣ ಹೊಸ ಸತ್ಯಗಳು ಬೆಳಕು ಕಂಡಂತೆ ತಪ್ಪಿತಸ್ಥರ ಮುಖವಾಡ ಕಳಚಲಾರಂಭಿಸುತ್ತದೆ.  ಕಾಶ್ಮೀರದಲ್ಲಿ ಜನ ಸಂಘದ ಶ್ಯಾಮಾ ಪ್ರಸಾದ್ ಮುಖರ್ಜಿ ಸಾವನ್ನಪ್ಪಿದರು. ಉತ್ತರ ಪ್ರದೇಶದ ಮುಘಲ್ ಸರೈ ನಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರನ್ನು ರೈಲಿನಿಂದ ಹೊರದೂಡಿ ಕೊಲ್ಲಲಾಯ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಕಥೆ ಏನಾಯಿತು ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿಯಲೇ ಇಲ್ಲ. ಹೋಮಿ ಜಹಾಂಗೀರ್ ಭಾಭಾ ಎಂಬ ಅಣು ವಿಜ್ಞಾನಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಈ ಎಲ್ಲ ಸಾವುಗಳ ಬಗ್ಗೆ ತನಿಖೆಯಾಗಬೇಕು ಎಂದು ಯಾರು ಎಷ್ಟೇ ಬೊಬ್ಬೆ ಹೊಡೆದರೂ ಆಳುವವರು ಕೇಳುವವರಾಗಿರಲಿಲ್ಲ.

ಇಂದಿಗೆ ೫೫ ವರ್ಷದ ಕೆಳಗೆ (ಜನವರಿ ೧೧ ೧೯೬೬) ಈ ದೇಶದ ಪ್ರಧಾನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದರು. ಆಗ ದೇಶಕ್ಕೆ ದೇಶವೇ ದುಃಖದಲ್ಲಿ ಮುಳುಗಿತು. ತನ್ನ ನಾಯಕನನ್ನು ಕಳೆದುಕೊಂಡ  ಕಾಂಗ್ರೆಸ್ ಆಗಲಿ, ಆಗಿನ ಭಾರತ ಸರ್ಕಾರವಾಗಲಿ ಯಾವುದೇ ತನಿಖೆಯನ್ನು ನಿರ್ದೇಶಿಸಲಿಲ್ಲ. ಹೆಜ್ಜೆ ಹೆಜ್ಜೆಗೂ ಅನುಮಾನಗಳೇ ಇರುವ ಅವರ ಸಾವಿನ ಸುತ್ತ ಕಾಂಗ್ರೆಸ್ ನೇತೃತ್ವದ ಸರ್ಕಾರ  ಅಂದು ನಿಷ್ಪಕ್ಷಪಾತ ತನಿಖೆ ನಡೆಸಬೇಕಿತ್ತು. ತನಿಖೆ ಒತ್ತಟ್ಟಿಗಿರಲಿ. ಪ್ರಧಾನಿಯಾಗಿ ಸತ್ತ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹೆಣದ ಬಳಿ ಅವರ ಕುಟುಂಬದವರು ಹೋಗದಂತೆ ಮಾಡಿತ್ತು ಅಧಿಕಾರದ ಮದದಲ್ಲಿದ್ದ ನಮ್ಮದೇ ದೇಶದ ಸರ್ಕಾರ.

ಇಂದು ನಾನು ಪರಿಚಯಿಸುತ್ತಿರುವ ಪುಸ್ತಕ ಧಾತ್ರಿ ಪ್ರಕಾಶನದ  ಶ್ರೀ ಎಸ್ ಉಮೇಶ್ ಬರೆದಿರುವ ‘ತಾಷ್ಕೆಂಟ್ ಡೈರಿ.’  ಮೈಸೂರಿನವರಾದ ಉಮೇಶ್ ಅವರು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ತಾಷ್ಕೆಂಟ್ ಫೈಲ್ಸ್, ಅನುಜ್ ಧರ್ ಬರೆದಿರುವ “Your Prime Minister is Dead” ಅನ್ನು ಓದಿದ ಬಳಿಕ ಶಾಸ್ತ್ರಿಗಳ ವಿಷಯವಾಗಿ ಇನ್ನಷ್ಟು ಅಧ್ಯಯನ ಮಾಡಿರುವ ಲೇಖಕರಾದ ಉಮೇಶ್ ಕನ್ನಡಕ್ಕೆ ಒಂದು ಉತ್ತಮ ಕೃತಿಯನ್ನು ನೀಡಿದ್ದಾರೆ.

೧೯೬೫ರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸಾಗಿದ್ದ ಯುದ್ಧದ ಸಂಧಾನದ ಜವಾಬ್ದಾರಿಯನ್ನು ತಾನೊಬ್ಬ ಹಿರಿಯಣ್ಣನೆಂಬಂತೆ, ರಷ್ಯಾ ಕೈಗೆತ್ತುಕೊಂಡಿತು. ವಿಶ್ವದ ಕಣ್ಣಿನಲ್ಲಿ ತಾನೊಬ್ಬ ಹಿರಿಯಣ್ಣ ಎಂದು ಸಾರಬೇಕೆಂಬುದು, ಅಮೆರಿಕಾ ವಿರುದ್ಧ ಬಲಿಷ್ಠ ರಾಷ್ಟ್ರವೊಂದಿದ್ದರೆ ಅದು ರಷ್ಯಾ ಮಾತ್ರ ಎಂದೂ, ಜಂಭದಲ್ಲಿ ವಿಶ್ವದೆದುರು  ಬೀಗಬಹುದು ಎಂದೇ  ಈ ಸಂಧಾನ ಏರ್ಪಡಿಸಿತ್ತು. ರಷ್ಯಾ ಬಗ್ಗೆ ಮೊದಲ ಪ್ರಧಾನಿ ನೆಹರೂಗೆ, ಭಾರತ ಚೀನಾ ವಿರುದ್ಧದ ಯುದ್ಧದಲ್ಲಿ ಸೋಲಲು ಕಾರಣವಾಗಿದ್ದ ಆಗಿನ ರಕ್ಷಣಾ ಸಚಿವ ಕೃಷ್ಣ ಮೆನನ್ ಗೆ, ನೆಹರೂ ಪುತ್ರಿ ಇಂದಿರಾ ಗಾಂಧಿಗೆ ಎಲ್ಲಿಲ್ಲದ ಪ್ರೀತಿ ಎಂಬುದು ತಿಳಿದೇ ಇದೆ. ರಷ್ಯಾದ ಬೇಹುಗಾರಿಕಾ ಇಲಾಖೆ ಕೆ.ಜಿ.ಬಿ ಯ ಜೊತೆಗೂ ಅಷ್ಟೇ ನಿಕಟ ಸಂಬಂಧ.  ಕೆ.ಜಿ.ಬಿ ಈ ನಾಯಕರಲ್ಲದೆ ಕಾಂಗ್ರೆಸ್ ನ ಹಲವು ನಾಯಕರ ಜೊತೆ ಉತ್ತಮ ಸಂಬಂಧವಿರಿಸಿಕೊಂಡು ತಮ್ಮ ಕೆಲಸ ಸುಗಮವಾಗಿಸಿಕೊಳ್ಳುತ್ತಿತ್ತು. ಭಾರತದಲ್ಲಿ  ಹಣದ ಹೊಳೆಯೂ ಹರಿಸಿದರು ಎಂದು ಕೆಜಿಬಿಯ ನಿವೃತ್ತ ಮಿಟ್ರೋಖಿನ್ ಹೇಳಿಕೊಂಡಿದ್ದಾನೆ. ಈ ಪ್ರೀತಿ ರಾಜತಾಂತ್ರಿಕವಾಗಿ ರಷ್ಯಾ ನಮ್ಮ ಹತ್ತಿರವಾಗುವಂತೆ, ಇಲ್ಲಿನ ಒಳಗಿನ ಗುಟ್ಟುಗಳು ರಟ್ಟಾಗುವಂತೆ ಮಾಡಿದ ಅದೆಷ್ಟೋ ಕಾಂಗ್ರೆಸ್ ನಾಯಕರುಗಳು ನಮ್ಮಲ್ಲಿ ಆಗಿಹೋಗಿದ್ದಾರೆ ಎಂದು ಲೇಖಕರು ಬರೆಯುತ್ತಾರೆ.

ಈ ವಿಷಯದ ಬಗ್ಗೆ, ಶಾಸ್ತ್ರಿಯವರ ಮುತ್ಸದ್ದಿತನದ ಬಗ್ಗೆ, ಅವರ ದೇಶಪ್ರೇಮ, ಪ್ರಾಮಾಣಿಕತೆ, ಛಲ, ನೇತೃತ್ವದ ಬಗ್ಗೆ, ಅವರ  ಸಾವಿನ ಬಗ್ಗೆ, ಸಾವಿನ ನಂತರ ಸರ್ಕಾರದ ಉಡಾಫೆ, ಆಗ ಹರಿದಾಡುತ್ತಿದ್ದ ವರದಿಗಳು, ಲೇಖನಗಳು, ಇವುಗಳೆಲ್ಲದರ ಬಗ್ಗೆ ಉಮೇಶ್ ಹದಿನೈದು ಅಧ್ಯಾಯಗಳಲ್ಲಿ ‘ತಾಷ್ಕೆಂಟ್ ಡೈರಿ’ ಯಲ್ಲಿ ಬರೆದಿದ್ದಾರೆ. ಎಷ್ಟೋ ಸಂಗತಿಗಳನ್ನು ವಿವಿಧ ಗ್ರಂಥಾಲಯ, ಸಂಗ್ರಹಾಲಯಗಳಿಂದ ಕ್ರೋಢಿಕರಿಸಿ ಉತ್ತಮ ಪುಸ್ತಕವೊಂದನ್ನು ರಚಿಸಿದ್ದಾರೆ. ಉತ್ತಮ ಹಾಗೂ ಅಪರೂಪದ ಫೋಟೋಗಳನ್ನು ಪುಸ್ತಕದಲ್ಲಿ ಸೇರಿಸಿದ್ದಾರೆ.

ಚೀನಾ ವಿರುದ್ಧದ ಯುದ್ಧದಲ್ಲಿ ಭಾರತ ಸೋಲುವಂತಾಗಿದ್ದು ಆಗಿನ ನಮ್ಮದೇ ಸರ್ಕಾರದ ಕೃಪೆಯಿಂದ ಎಂಬುದು ತಿಳಿದಿರುವ ಸತ್ಯ. ಅಂತಹ ಭಾರತದಿಂದ ಕಾಶ್ಮೀರವನ್ನು ಕಸಿದುಕೊಳ್ಳುವುದುದು ಸುಲಭ, ಹಾಗೂ ಪ್ರಧಾನಿ (ಲಾಲ್ ಬಹಾದ್ದೂರ್ ಶಾಸ್ತ್ರಿ) ಯ ವಾಮನಾಕಾರ ಏನು ಮಾಡೀತು ಎಂದು ನಮ್ಮ ಮೇಲೆ ೧೯೬೫ರಲ್ಲಿ ಎರಗಿದ ಪಾಕಿಸ್ತಾನಕ್ಕೆ ಶಾಸ್ತ್ರಿಯವರು ತ್ರಿವಿಕ್ರಮನಂತೆ ಪ್ರತಿರೋಧ ಒಡ್ಡುತ್ತಾರೆಂದು ಯಾರೂ ಊಹಿಸಿರಲಿಲ್ಲ ಎಂದು ಬರೆಯುತ್ತಾರೆ ಲೇಖಕರು.  ಈ ಯುದ್ಧ ನಿಲ್ಲಿಸಿ, ಭಾರತವನ್ನು ಸಂಧಾನಕ್ಕೆ ಒಪ್ಪಿಸಿದರೆ ತಾನು ಉಸಿರಾಡಬಹುದೆಂದು ತಿಳಿದ ಪಾಕಿಸ್ತಾನದ  ಸಹಾಯಕ್ಕೆ ಬಂದದ್ದು ಸೋವಿಯತ್  ರಷ್ಯಾ. ಅದು  ತಾಷ್ಕೆಂಟ್ ನ ಸಂಧಾನದ ಮೂಲಕ. ಮೊದಲಿಗೆ ಈ ಸಂಧಾನಕ್ಕೆ, ಒಪ್ಪದ ಪ್ರಧಾನಿ ಶಾಸ್ತ್ರಿಯವರು ನಂತರದ ದಿನಗಳಲ್ಲಿ ಒತ್ತಡಕ್ಕೆ ಮಣಿದು ತಾಷ್ಕೆಂಟ್ ಗೆ ತೆರಳಿ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸಾರಿದರು ಹಾಗೂ, ಪಾಕಿಸ್ತಾನದ ಆಯುಬ್ ಖಾನ್ ಮಂಡಿಯೂರುವಂತೆ ಮಾಡಿದ್ದರು ಎಂದು ಬರೆಯುತ್ತಾರೆ ಲೇಖಕರು. (ಶಾಸ್ತ್ರಿಯವರು ಗಾಂಧಿ-ನೆಹರೂ ಅನುಯಾಯಿಯೇ ಆಗಿದ್ದರೂ, ನೆಹರೂ ಅವರಿಗಿದ್ದ ಕಾಶ್ಮೀರದ “ಕಾಳಜಿ”ಗಿಂತ ಶಾಸ್ತ್ರಿಯವರ ದಿಟ್ಟತನವನ್ನು ಗಮನಿಸಲೇಬೇಕು ಹಾಗೂ ಮೆಚ್ಚಲೇಬೇಕು.)

  ತಾಷ್ಕೆಂಟ್  ಸಂಧಾನದ ಸಹಿಯಾಯ್ತು. ಕೊಡುಕೊಳ್ಳುವಿಕೆಯ ಚರ್ಚೆ ಮುಗಿಯಿತು. ಆದರೆ ಅಂದಿನ ರಾತ್ರಿ, ಶಾಸ್ತ್ರಿಯವರ ವಿಷಯವಾಗಿ ಭಾರತಕ್ಕೆ ಕಹಿ ಸುದ್ದಿ ಇದೆ ಎಂದು ಯಾರಿಗೂ ತಿಳಿದಿರಲಿಲ್ಲ. ತಮ್ಮ ರಾತ್ರಿಯ ಊಟ ಮುಗಿಸಿ, ಹಾಲು ಕುಡಿದು ಫ್ಲಾಸ್ಕ್ ನಲ್ಲಿದ್ದ ನೀರನ್ನು ಕುಡಿದ ಪ್ರಧಾನಿಗಳು ಎದೆ ಹಿಡಿದುಕೊಂಡು, ರಷ್ಯಾದಲ್ಲಿ ತಂಗಿದ್ದ ಡಾಚಾದಲ್ಲಿನ ಪಕ್ಕದ ಕೋಣೆ ಯಲ್ಲಿ ಮಲಗಿದ್ದ ತಮ್ಮ ಖಾಸಗಿ ವೈದ್ಯರ, ಸಹಾಯಕರ ಕೋಣೆಯ ಬಾಗಿಲು ತಟ್ಟತೊಡಗಿದರು . ಹಿಂದೊಮ್ಮೆ ಭಾರತದಲ್ಲಿದ್ದಾಗ ಅವರಿಗೆ ಹೃದಯಾಘಾತವಾಗಿತ್ತಾದರೂ  ರಷ್ಯಾಕ್ಕೆ ತೆರಳುವಾಗ ಅವರು ಆರೋಗ್ಯವಾಗಿಯೇ ಇದ್ದರು ಎನ್ನುತ್ತಾರೆ ವೈದ್ಯರು.

Ayub Khan, Lal bahaddur Shastri, Kosigin

ಊಟವಾದ ಮೇಲೆ ಎಷ್ಟೋ ಜನರು ಸಾಯುತ್ತಾರೆ, ಶಾಸ್ತ್ರಿಗಳಿಗೆ ಹೃದಯಾಘಾತವಾಗಿರಬಹುದೆಂದೂ, ಅದರಲ್ಲೇನಿದೆ ಅನುಮಾನವೆಂದು ತಿಳಿಯಬೇಡಿ. ಶಾಸ್ತ್ರಿಯವರು ಸತ್ತ ನಂತರದಲ್ಲಿ ನಡೆದ ಘಟನೆಗಳು, ಆ ಕುರಿತಾದ ಷಡ್ಯಂತ್ರ,  ರೋಚಕ ಎಂದನಿಸಿದರೂ, ನಮ್ಮ ರಾಷ್ಟ್ರ ನಾಯಕನೊಬ್ಬನ ಜೀವ ತೆಗೆದು ಆಟವಾಡಿದ ಈ ಕೃತ್ಯ ಭಯ ಹಾಗೂ  ಹೇವರಿಕೆ ಹುಟ್ಟಿಸುತ್ತವೆ. ಸಾವಿನ ಸುತ್ತದ ಪಿತೂರಿ, ಸಾವಿನ ವಿಷಯವಾಗಿ ವಿಶ್ವದಲ್ಲಿ ಚಾಲ್ತಿಯಲ್ಲಿದ್ದ ಮಾತುಗಳು, ಸಂಸತ್ತಿನಲ್ಲಿ ಇಂದಿರಾ ಗಾಂಧಿ ಹಾಗೂ ಸರ್ಕಾರದ ವಿರುದ್ಧ ನಡೆದ ನಿರಂತರ ವಾಗ್ದಾಳಿ, ಆರೋಪ, ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಡುವ ಸಮರ್ಥ ಪ್ರಯತ್ನವನ್ನು ಲೇಖಕರು ಈ ಪುಸ್ತಕದ ಮೂಲಕ ಮಾಡಿದ್ದಾರೆ.

ಸತ್ತ ಪ್ರಧಾನಿಗಳ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ. ಅದಕ್ಕೆ ಭಾರತ ಆಗ್ರಹಿಸಲಿಲ್ಲ. ಸದಾ ಕಾಲ ಅವರ ಜೊತೆಯಿದ್ದ ಅವರ ಸಹಾಯಕ ರಾಮನಾಥ, ಹಾಗೂ ವೈದ್ಯ ಛುಗ್  ಅವರನ್ನು ಶಾಸ್ತ್ರಿಯವರ ಸಾವಿನ ನಂತರ ಯಾರೂ ಮಾತನಾಡಿಸಿಲ್ಲ. ಅವರನ್ನು ಮಾಧ್ಯಮದವರೂ ಸಂದರ್ಶಿಸಲಿಲ್ಲ. ಕಡೆಗೆ ಇಂದಿರಾ ಗಾಂಧಿಯ ಸರ್ಕಾರ ಪತನಗೊಂಡು ಮುಂದೆ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಶಾಸ್ತ್ರಿ ಅವರ ಸಾವಿನ ಕುರಿತಾಗಿ  ತನಿಖೆ ನಡೆಯಬಹುದೆಂದು ಊಹಿಸಿದರೋ ಏನೋ – ಡಾ. ಛುಗ್  ಕುಟುಂಬಸಮೇತ ರಸ್ತೆ ಅಪಘಾತದಲ್ಲಿ ತೀರಿಕೊಂಡರು. ರಾಮನಾಥ, ಶಾಸ್ತ್ರಿಯವರ ಸಹಾಯಕ. ಆತ ನಿಜವನ್ನು ಬಾಯಿಬಿಡುವ ಮುನ್ನವೇ ಒಂದು ಅಪಘಾತ ನಡೆದು ಪರಾಧೀನನಾದರು.

ಇನ್ನು ಶಾಸ್ತ್ರಿಯವರ ಸಾವಿನ ಸುತ್ತದ ಅನೇಕಾನೇಕ ಸಿದ್ಧಾಂತಗಳು.

೧. ಶಾಸ್ತ್ರಿಗಳು ತೀರಿಕೊಂಡದ್ದು ಸೋವಿಯತ್ ರಷ್ಯಾದಲ್ಲಿ. ಶಾಸ್ತ್ರಿಗಳಿಗೆ ರಷ್ಯಾದ ಬಗ್ಗೆ, ಅವರು ನೀಡಿದ್ದ ಕಳಪೆ ಶಸ್ತ್ರಾಸ್ತ್ರಗಳ ಬಗ್ಗೆ ತಿಳಿದುಬಂದಿತ್ತಾದ್ದರಿಂದ ರಷ್ಯಾ, ಕೆ.ಜಿ.ಬಿ ಇವರನ್ನು ಕೊಂದಿತೇ ?  ಗೊತ್ತಿಲ್ಲ. ಭಾರತದಲ್ಲಿನ ಕೆಲ ಮಾಧ್ಯಮಗಳು ರಷ್ಯಾ ವಿರುದ್ಧ ಮಾತನಾಡುತ್ತಾ, ಶಾಸ್ತ್ರಿಯವರ ಸಾವಿಗೆ ನೇರ ಹೊಣೆ ಎಂದು ಬೊಟ್ಟು ಮಾಡುತ್ತಿದ್ದರೆ ರಷ್ಯಾ ಇದು ಭಾರತದಲ್ಲಿ ರಾಜಕೀಯವಾಗಿ ಮೇಲೆ ಬರಬೇಕೆಂದು ಯತ್ನಿಸಿದ್ದವರ ಕುಕೃತ್ಯವಷ್ಟೇ ಎಂದಿತು.

೨. ನೆಹರೂ  ಅನಾರೋಗ್ಯದಿಂದ ತೀರಿಕೊಂಡಾಗ ಪ್ರಧಾನಿ ಗದ್ದುಗೆ ತನ್ನದೇ ಎಂದು ನಂಬಿದ್ದ ಇಂದಿರಾಗಾಂಧಿಗೆ ನಿರಾಶೆಯಾಗಿತ್ತು. ಪ್ರಧಾನಿಯಾದದ್ದು ಶಾಸ್ತ್ರಿಯವರು. ಒಳ್ಳೆಯ ಖಾತೆಯೂ ಸಿಗದೇ ಎಲ್ಲರ ಬಳಿಯಲ್ಲಿಯೂ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು. ಇನ್ನು ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್  ಶಾಸ್ತ್ರಿ ತೀರಿಕೊಂಡಾಗ ಇಂದಿರಾ ಗಾಂಧಿ ಪ್ರಧಾನಿಯಾಗುವ ಗುರಿ ಸಫಲವಾಯ್ತು. ತನಿಖೆಗಂತೂ ಎಂದೂ ಒಪ್ಪಿಗೆ ನೀಡಲಿಲ್ಲ. ರಾಜ್ ನಾರಾಯಣ್ ಶಾಸ್ತ್ರಿಗಳ ಸಾವಿನ ಬಗ್ಗೆ ಒಂದು ತನಿಖೆ ನಡೆಸಿದರು. ಸಂಸತ್ತಿನಲ್ಲಿ ಪ್ರಸ್ತಾಪಿಸಿದರು, ಸರ್ದಾರ್ ವಲ್ಲಭಭಾಯಿ ಪಟೇಲರ ಮಗ ದಾಹ್ಯಭಾಯಿ ಪಟೇಲ್ ಶಾಸ್ತ್ರಿಗಳ ಸಾವಿನ ಬಗ್ಗೆ ಪುಸ್ತಕ ಬರೆದರು. ಸಚಿವರುಗಳು, ಸರ್ಕಾರಗಳು ಮಾತ್ರ ಏನೂ ನಡೆದೇ ಇಲ್ಲವೆಂಬಂತೆ ಸುಮ್ಮನಿದ್ದುಬಿಟ್ಟರು. ಹಾಗಾದರೆ ಅವರ ಸಾವಿನ ಹಿಂದೆ, ಇಂದಿರಾ ಗಾಂಧಿ, ಅವರ ಹೊಗಳುಭಟರೆ ಇದ್ದರೇ? ಗೊತ್ತಿಲ್ಲ.

Nehru, Indira Gandhi, Lal Bahaddur Shastri

 ೩. ಲಾಲ್ ಬಹದ್ದೂರ್  ಶಾಸ್ತ್ರಿ ಹಾಗೂ ಹೋಮಿ ಜಹಾಂಗೀರ್ ಭಾಭಾ (ಶಾಸ್ತ್ರಿಗಳು ತೀರಿಕೊಂಡ ಕೆಲವೇ ತಿಂಗಳುಗಳಲ್ಲಿ ವಿಮಾನಾಪಘಾತದಲ್ಲಿ ಭಾಭಾ ತೀರಿಕೊಂಡರು) ಅವರ ನೇತ್ರುತ್ವದಲ್ಲಿ ಭಾರತದಲ್ಲಿ ಅಣು ಪರೀಕ್ಷೆ ನಡೆಸುವವರಿದ್ದರು. ಹಾಗಾದರೆ, ಭಾರತ ಅಣ್ವಸ್ತ್ರ ರಾಷ್ಟ್ರವಾಗಬಾರದೆಂದು ಅವರಿಬ್ಬರ ಸಾವಿನ ಆಪೋಷನ ತೆಗೆದುಕೊಂಡದ್ದು ಸಿ ಐ ಎ ಹಾಗೂ ಅಮೆರಿಕವಾ? ಗೊತ್ತಿಲ್ಲ.

೪. ಅಮೆರಿಕಾ ರಷ್ಯಾವನ್ನು ಹಣಿಯಲು ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಕೊಂದಿತೇ? ಗೊತ್ತಿಲ್ಲ.

ಹೀಗೆ ಅನೇಕಾನೇಕ ಪ್ರಶ್ನೆಗಳು ಸಾವಿನ ಸುತ್ತ ಬರುತ್ತವೆ ಹಾಗೂ ಅವುಗಳನ್ನು ತಮ್ಮ ಸುಂದರ ಭಾಷೆಯಲ್ಲಿ ಲೇಖಕರಾದ ಉಮೇಶ್ ಬರೆದಿದ್ದಾರೆ. ಅಲ್ಲದೆ ತಾವು ಯಾರನ್ನೋ ಕಟಕಟೆಯಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸಕ್ಕಾಗಿ, ಪುಸ್ತಕ ಬರೆಯದೆ, ಸತ್ಯವನ್ನು ಕಂಡುಕೊಳ್ಳುವ ಉದ್ದೇಶದಿಂದ ಬರೆದ್ದದ್ದು ಎಂದು ಪುಸ್ತಕದಲ್ಲಿ ಬರೆಯುತ್ತಾರೆ.

ರಾಶಿ ರಾಶಿ ಅನುಮಾನಗಳು.

ಶಾಸ್ತ್ರಿಯವರು ಹೆಣವಾಗಿ ಭಾರತಕ್ಕೆ ಬಂದಾಗ ಅವರ ದೇಹ ಊದಿಕೊಂಡಿತ್ತು. ಕುತ್ತಿಗೆಯಲ್ಲಿ, ಹೊಟ್ಟೆಯಲ್ಲಿ ಸಣ್ಣ ಗಾಯಗಳಿದ್ದವು. ಅವರ ಮರಣ ಪ್ರಮಾಣಪತ್ರಕ್ಕೆ ಸಹಿ ಹಾಕಿದವರ ಬಗ್ಗೆಯೂ ಅನುಮಾನಗಳಿದ್ದವು. ಅವರು ಉಳಿದುಕೊಂಡಿದ್ದ ಡಾಚಾ ಸುರಕ್ಷಿತವಾಗಿರಲಿಲ್ಲವೆನ್ನುತ್ತಿದ್ದ ಮಾತು ಕೇಳಿಬಂತು ಹಾಗೂ ಉದ್ದೇಶಪೂರ್ವಕವಾಗಿಯೇ ಅವರನ್ನಲ್ಲಿ ಇರಿಸಲಾಗಿತ್ತು. ಡಾಚಾ ತಾಷ್ಕೆಂಟ್ ನಗರದಿಂದ ೧೫ ಕಿಮಿ ದೂರದಲ್ಲಿತ್ತು. ಪ್ರಧಾನಿಗಳ ಕೋಣೆಯಲ್ಲಿ ಫೋನ್ ವ್ಯವಸ್ಥೆ ಇರಲಿಲ್ಲ ಎಂಬ ಮಾತುಗಳು ಕೇಳಿಬಂದವು.  ತಾವು ನೀರು ಕುಡಿದ ಫ್ಲಾಸ್ಕ್, ಬರೆಯುತ್ತಿದ್ದ ಡೈರಿ ವಾಪಸ್ಸು ಮನೆಗೆ ಬರಲೇ ಇಲ್ಲ. ಹಾಗಾದರೆ ಈ ಲೋಪ ಉದ್ದೇಶಪೂರ್ವಕವೇ? ಪ್ರಧಾನಿಗಳ ಬಾಣಸಿಗ ಮೊಹಮ್ಮದ್ ಜಾನ್ ಇವರ ಸಾವಿನ ನಂತರ ತಪ್ಪಿಸಿಕೊಂಡಿದ್ದ. ಅವನನ್ನು ನಿಯೋಜಿಸಿದ್ದು ಇಂದಿರಾ ಕುಟುಂಬಕ್ಕೆ ಹತ್ತಿರನಾದ ರಷ್ಯಾದಲ್ಲಿನ ಭಾರತದ ರಾಯಭಾರಿ ಟಿ ಏನ್ ಕೌಲ್ ಹಾಗೂ ಈತನ ಸಹಾಯಕ್ಕಿದ್ದವನು ಇಂದಿರಾಗಾಂಧಿಯ ಕುಟುಂಬದ ಮತ್ತೊಬ್ಬ ನಿಷ್ಠ ಉದ್ಯಮಿ ಜಯಂತಿ ಧರ್ಮತೇಜ.

ಇಡಿಯ ಪುಸ್ತಕದಲ್ಲಿ ಲೇಖಕರು ಲಾಲ್ ಬಹದ್ದೂರ್ ಶಾಸ್ತ್ರಿ ಎಂದು ಬಳಸುವಲ್ಲಿ ಶಾಸ್ತ್ರೀಜಿ ಎಂದು ಗೌರವಸೂಚಿಸಿ ಬರೆದಿರುವುದು ಅವರ ಬಗ್ಗೆ ಇರುವ ಅಭಿಮಾನ ಸೂಚಿಸುತ್ತದೆ. ಒಬ್ಬ ನಿಷ್ಠಾವಂತ ಪ್ರಧಾನಿಯನ್ನು ಅಂದು ಕಳೆದುಕೊಂಡು ಬಡವಾದ ಕಥೆಯನ್ನು ಇಂದಿನ ಪೀಳಿಗೆ ಓದಲೇಬೇಕಾಗಿದೆ.

ದೇಶದಲ್ಲಿ ಆಹಾರ ಸಮಸ್ಯೆ ಎದುರಾದಾಗ ಒಂದು ಹೊತ್ತು ಊಟ ಬಿಡೋಣವೆಂದು ಕರೆಕೊಡುವುದಷ್ಟೇ ಅಲ್ಲದೆ, ಅಂತೆಯೇ ಆಚರಿಸಿದ, ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿನಲ್ಲಿದ್ದಾಗ ತಮಗೆ ಬರುತ್ತಿದ್ದ ಗೌರವ ಧನ ಹೆಚ್ಚಾಗುತ್ತದೆಂದು ತಿಳಿದುಕೊಂಡು ಬೇಕಿರುವಷ್ಟನ್ನು ಮಾತ್ರ ಕಳುಹಿಸಿಕೊಡಬೇಕೆಂದು ಆಗ್ರಹಿಸಿದ, ತಮ್ಮ ಸಣ್ಣ ಮಕ್ಕಳು ಸರಕಾರೀ ಕಾರನ್ನು ಮೋಜಿಗೆ ಬಳಸಿದ್ದಕ್ಕೆ ಸ್ವ ಪ್ರೇರಣೆಯಿಂದ ದಂಡ ಪಾವತಿಸಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿಯವರು. ಇಂತಹ ಸರಳ ವ್ಯಕ್ತಿಯ  ಪರಿಚಯವನ್ನೂ ಪುಸ್ತಕದಲ್ಲಿ ಮಾಡಿಕೊಡಲಾಗಿದೆ.

ದೇಶದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸ್,  ಅಸಲಿಗೆ ಅವರ ಆದರ್ಶಗಳನ್ನು, ದೇಶಸೇವೆಯನ್ನು, ಅವರ ಸಾವನ್ನೂ ಮುಚ್ಚಿಟ್ಟು, ಕಡೆಗೆ ಅವರನ್ನೇ ಮರೆತದ್ದು ಇಡಿಯ  ದೇಶಕ್ಕೆ ಮಾಡಿದ ವಂಚನೆಯಲ್ಲದೇ ಮತ್ತೇನು?

ಪ್ರವೀಣ್ ಪಟವರ್ಧನ್

Leave a Reply

Your email address will not be published.

This site uses Akismet to reduce spam. Learn how your comment data is processed.