ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೆಯ ಜಯಂತಿಯ ಪ್ರಯುಕ್ತ ಮಿಥಿಕ್ ಸೊಸೈಟಿಯಲ್ಲಿ ‘ಬಹಿಷ್ಕೃತ ಭಾರತದಿಂದ ಪ್ರಬುದ್ಧ ಭಾರತದ ಕಡೆಗೆ : ಡಾ.ಬಿ.ಆರ್.ಅಂಬೇಡ್ಕರ್’ ಎಂಬ ವಿಚಾರದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಜಯ್ ಪಾಸ್ವಾನ್ ಅವರು ಮಾತನಾಡಿ, “ಈ ದೇಶವನ್ನು ಮುನ್ನಡೆಸಬೇಕಾದರೆ ರಾಜಕೀಯ ಪ್ರಜಾಪ್ರಭುತ್ವದಿಂದ ಸಾಮಾಜಿಕ ಪ್ರಜಾಪ್ರಭುತ್ವದ ಕಡೆಗೆ ನಡೆಯಬೇಕಿದೆ” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದು.ಗು.ಲಕ್ಷ್ಮಣ ಅವರು, “ಬಹಿಷ್ಕೃತ ಭಾರತದಲ್ಲಿ ಎಷ್ಟು ಬಹಿಷ್ಕಾರ ಮಾಡಿದ್ದರೋ ಪ್ರಬುದ್ಧ ಭಾರತದಲ್ಲಿ ಅಷ್ಟೇ ಸಮ್ಮಾನವಿದೆ. ವಿಶೇಷಣಗಳಿಗಿಂತ ಮಿಗಿಲಾಗಿ ಅಂಬೇಡ್ಕರ್ ಅವರು ದೃಷ್ಟಾರರು, ಪ್ರಾತಃ ಸ್ಮರಣೀಯರು. ಅಷ್ಟೇ ಅಲ್ಲ , ಅವರೊಬ್ಬ ದಾರ್ಶನಿಕರಾಗಿದ್ದರು. ಅವರ ಬೌದ್ಧಿಕ ತೀಕ್ಷ್ಣತೆ, ಚಿಂತನೆಯ ಪ್ರಖರತೆ, ಸಾಮಾಜಿಕ ಕಳಕಳಿ, ವಿಶ್ಲೇಷಕ ಮನೋಭಾವ ಎಲ್ಲವೂ ಅಂಬೇಡ್ಕರರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಜಾಗೃತಿಯಾದಾಗ ಮಾತ್ರ ದಲಿತ ಸಮುದಾಯ ನಿಜವಾಗಿಯೂ ಸ್ವಾತಂತ್ರ್ಯಗೊಳ್ಳಲು ಸಾಧ್ಯ. ಅಂಬೇಡ್ಕರರು ಕೇವಲ ದಲಿತರ ಅಭ್ಯುದಯದ ಬಗ್ಗೆ ಮಾತ್ರವಲ್ಲದೆ ಶಿಕ್ಷಣ, ಆರ್ಥಿಕತೆ, ಧರ್ಮ ಇತರ ಅನೇಕ ವಿಚಾರಗಳ ಕುರಿತು ಮಾತನಾಡಿದವರು.”
“ಅಸ್ಪೃಶ್ಯತೆ ದಲಿತ ಸಮುದಾಯದ ಸಮಸ್ಯೆಯಲ್ಲ, ಹಿಂದೂ ಧರ್ಮದ ಸಮಸ್ಯೆ. ಇಡೀ ಸಮಾಜ ಒಂದಾಗಿ ಹೋರಾಟ ಮಾಡಬೇಕು. ಅವರ ಕೈಗೆ ಶಸ್ತ್ರಗಳನ್ನ ಕೊಟ್ಟಿದ್ದರೆ ನಮಗೆ ಯಾವತ್ತೋ ಸ್ವಾತಂತ್ರ್ಯ ಬಂದಿರುತ್ತಿತ್ತು ಎಂಬ ಅಭಿಪ್ರಾಯ ಹೊಂದಿದ್ದರು” ಎಂದರು.
ಮುಖ್ಯ ಭಾಷಣಕಾರರಾದ ಸಂಜಯ್ ಪಾಸ್ವಾನ್ ಅವರು ಮಾತನಾಡಿ, “ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜಗತ್ತಿನ ಸ್ವೀಕೃತಿ ಹೆಚ್ಚಾಗುತ್ತಲೇ ಇದೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ಹೆಸರಿನ ಚೇರ್ಗಳು ಆರಂಭವಾಗಿದೆ, ಕೆಲವು ಕಡೆ ಥಿಂಕ್ಟ್ಯಾಂಕ್ಗಳು, ರಿಸರ್ಚ್ ಸೆಂಟರ್ ಆರಂಭವಾಗಿದೆ. ಅವರನ್ನು ಅಧ್ಯಯನ ಮಾಡುತ್ತಾ ಭಾರತೀಯ ಜನಮಾನಸ ಅರ್ಥ ಮಾಡಿಕೊಳ್ಳುತ್ತಿದೆ. ಭಾರತದೊಳಗೆ ಅಂಬೇಡ್ಕರ್ವಾದದ ಕುರಿತು ಶೋಧ ಮತ್ತು ಬೋಧ ಎರಡೂ ನಡೆಯುತ್ತಿದೆ. ಇದೇ ಕಾರಣಕ್ಕೆ ಪ್ರತಿರೋಧ ಕಡಿಮೆಯಾಗುತ್ತಿದೆ. ಕಣ್ಣಿಗೆ ತನ್ನದೇ ಭಾಷೆಯಿದೆ. ಅಂಬೇಡ್ಕರ್ ಅವರಿಗೆ ಇದರ ಅರಿವಿತ್ತು. ಹೀಗಾಗಿಯೇ ಇಷ್ಟು ವರ್ಷದ ನಂತರವೂ ನಾವು ಅವರನ್ನು ಒಪ್ಪಿಕೊಳ್ಳುತ್ತಿದ್ದೇವೆ” ಎಂದರು.
“ಅವರ ಕ್ರಾಂತಿಗಳು ಕೇವಲ ರಿಯಾಕ್ಷನರಿಯಾಗಿರದೆ ಎವಲ್ಯೂಷನ್ಗಳಾಗಿದ್ದವು. ವ್ಯಷ್ಟಿಯಿಂದ ಸಮಷ್ಠಿಯ ಕಡೆಗಿನ ಪಯಣವೇ ಅವರ ಜೀವನವಾಗಿತ್ತು. ಅದರ ದಾರಿಗಳಲ್ಲಿ ಹೋರಾಟ ಹಾಸುಹೊಕ್ಕಾಗಿತ್ತು. ಅಂಬೇಡ್ಕರ್ ಅವರ ಗಾಂಧಿಯವರ ಯಮ ನಿಯಮ, ಲೋಹಿಯಾ ಅವರ ವಿಚಾರ, ಮಹಾವೀರ ಮತ್ತು ತಥಾಗತರ ವಿಚಾರಗಳು, ದೀನ ದಯಾಳರ ಅಂತ್ಯೋದಯ ಹೀಗೆ ಎಲ್ಲದರ ಒಟ್ಟು ಸಾರವನ್ನೇ ಪ್ರತಿಪಾದನೆ ಮಾಡುತ್ತಿದ್ದರು.
“ಇಂದಿನ ಸಮಾಜದಲ್ಲಿ ಕರುಣೆಯ ಅವಶ್ಯಕತೆಯಿದೆ. ಅಂಬೇಡ್ಕರ್ ಅವರೂ ಅದನ್ನೇ ಪ್ರತಿಪಾದನೆ ಮಾಡಿದ್ದವರು. ಕರುಣೆ, ಶುಚಿತಾ, ಶೀಲ, ಸಾಮರಸ್ಯ ಹೀಗೆ ಅನೇಕ ಅಂಶಗಳಿಂದ ಮಾತ್ರ ಸಮಾಜವನ್ನು ಮೇಲೆತ್ತಲು ಸಾಧ್ಯವೆಂದಿದ್ದರು. ಅಲ್ಲದೆ ಅನೇಕ ಬಾರಿ ಗಾಂಧಿಯವರ ನಡುವೆ ಎಷ್ಟೇ ವೈಮನಸ್ಸಿದ್ದರೂ ಸಹ ಅವರಿಂದ ಎಷ್ಟೋ ಕಲಿತಿದ್ದೇನೆ ಕಲಿಸಿದ್ದೇನೆ ಎಂದು ಬರೆದುಕೊಳ್ಳುತ್ತಾರೆ” ಎಂದರು.”
“ಅಂಬೇಡ್ಕರ್ ಅವರ ವಿಚಾರ ಕೇವಲ ದಲಿತರ ವಿಚಾರವಲ್ಲ. ಅದು ಸಮಾಜದ ವಿಚಾರ. ಇದು ಕೇವಲ ಅಮುಖ್ಯ ವಿಚಾರ, ಅಮುಖ್ಯ ಸಮುದಾಯದ ವಿಚಾರವಲ್ಲ. ಇದು ಇಡೀ ಸಮಾಜದ ಮುಖ್ಯ ವಾಹಿನಿಯ ವಿಚಾರ.”
“ನಾವು ವಿಶೇಷ ಸಮಾಜ, ಸಂವಿಧಾನ ಸ್ಥಾಪಿತ ಬ್ರಾಹ್ಮಣರು ನಾವು ಎಂದರೂ ಅತಿಶಯೋಕ್ತಿಯಲ್ಲ. ಉಳಿದ ಶೇಷ ಸಮಾಜಕ್ಕೆ ಈ ಸವಲತ್ತು ಇಲ್ಲ.ಇನ್ನು ಬ್ರಾಹ್ಮಣರ ಮೇಲೆ ಎಷ್ಟೆಲ್ಲ ಹಲ್ಲೆಯಾದರೂ ಸಹ, ತಮ್ಮ ಜ್ಞಾನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಅವರು ನಮನಯೋಗ್ಯರು. ನಾವು ಒಂದು ಸಾಮರಸ್ಯದ ಸಮಾಜವಾಗಿ ಮುಂದೆ ಹೇಗೆ ನಡೆಯಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಬೇಕು. ಒಟ್ಟಿಗೆ ನಡೆಯುವ ಕಾಲವಿದು ಎಂದರು.”
“Caste is reality, casteism is brutality, hindusim is equality. ಜಾತಿ ನಮ್ಮ ಸಮಾಜದ ಬಲ, ಅದರಿಂದ ಓಡಿ ಹೋಗಲು ಸಾಧ್ಯವಿಲ್ಲ. ಅದನ್ನು ಪುನಃಪ್ರವೇಶಿಸುವ ಅಗತ್ಯವಿದೆ. ವರ್ಣ ವ್ಯವಸ್ಥೆಯನ್ನು ನಾವು ಅರಿಯಬೇಕು. ನಾವು ನಮ್ಮ ಮೂಲವನ್ನು ಕಂಡಿಕೊಳ್ಳಬೇಕಿದೆ. ವಸಾಹತು ಚಿಂತನೆಯಿಂದ ಹೊರಬರಬೇಕಿದೆ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಆರಿಸಿಕೊಂಡರು. ಅದು ಹಿಂಧೂ ಧರ್ಮದ ಕವಲಾಗಿತ್ತು ಎಂದೇ ಅದನ್ನು ಅವರು ಒಪ್ಪಿಕೊಂಡರು” ಎಂದರು.
“ನಮಗೆ ಭೀಮರನ್ನ ಅರ್ಥ ಮಾಡಿಕೊಳ್ಳಬೇಕಾದರೆ ಭಾರತವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮುಸಲ್ಮಾನರು ಭೀಮ್ – ರಹೀಮ್ ಬಗ್ಗೆ ಮಾತನಾಡುತ್ತಾರೆ. ನಮ್ಮಲ್ಲಿನ ಭೇದಭಾವವನ್ನು ಎತ್ತಿ ಹಿಡಿದು ತಾವು ಜಗತ್ತಿನ ತುಂಬಾ ಏಕತೆಯಿಂದ ಇದ್ದೇವೆ ಎಂಬಂತೆ ಮಾತನಾಡುತ್ತಾರೆ.ಆದರೆ ಅಲ್ಲಿ ನಮಗಿಂತ ಅಧಿಕ ಭೇದಭಾವವಿದೆ. ಅವರು ನಮ್ಮ ಮೇಲೆ ಬೆರಳು ತೋರಿಸಿದರೂ. ನಾವು ಅದನ್ನು ಮಾಡದೆ, ಅವರಲ್ಲಿರುವ ಕೆಳವರ್ಗದವರ ಬಗೆಗೆ ಚಿಂತನೆ ಮಾಡಬೇಕಿದೆ.”
“ಈ ದೇಶವನ್ನು ಮುನ್ನೆಸಬೇಕಾದರೆ ರಾಜಕೀಯ ಪ್ರಜಾಪ್ರಭುತ್ವದಿಂದ ಸಾಮಾಜಿಕ ಪ್ರಜಾಪ್ರಭುತ್ವದ ಕಡೆಗೆ ನಡೆಬೇಕಿದೆ. Grammer of anarchyಯಿಂದ chemistry of construction ಕಡೆಗೆ ಸಾಗಬೇಕಿದೆ. ಇಂದು ಸೋಷಿಯಲ್ ಇಂಜಿನಿಯರಿಂಗ್ನ ಪರಿಭಾಷೆ ಬದಲಾಗಿದೆ. ಕರ್ನಾಟಕದಲ್ಲಿ ನಡೆದ ಬದಲಾವಣೆಗಳು ಸಕಾರಾತ್ಮಕ ಮತ್ತು ಅಭಿನಂದನೀಯ” ಎಂದರು.
ಸಭೆಯಲ್ಲಿ ವೇದಿಕೆಯ ಮೇಲೆ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ವಿ.ನಾಗರಾಜ, ಚಿಂತಕರಾದ ಜಿ.ಬಿ ಹರೀಶ್ ಇದ್ದರು. ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ್, ತುಮಕೂರಿನ ಪ್ರೊ.ಕೊಟ್ರೇಶ್, ಪಟಾಪಟ್ ಶ್ರೀನಿವಾಸ್, ಗಾಯಕಿ ಸಿಂಚನಾ ಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.