ಸುಲಕ್ಷಣಾ ಶರ್ಮಾ, ವಿವೇಕಾನಂದ ಕಾಲೇಜು, ಪುತ್ತೂರು

ಅದುವರೆಗೂ 1857ರಲ್ಲಿ ನಡೆದುದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಲ್ಲ, ಪ್ರಾದೇಶಿಕ ಹಿತಾಸಕ್ತಿಗಾಗಿ ಮಾಡಿದ ಕ್ಷುದ್ರ ದಂಗೆ ಎಂದೇ ಬಿಂಬಿಸಲಾಗಿತ್ತು. ಭಾರತದ ಯುವಶಕ್ತಿ ಒಂದಾಗಿ, ಕ್ರಾಂತಿಗಿಳಿದರೆ; ತಮ್ಮ ಸೂರ್ಯ ಮುಳುಗದ ಸಾಮ್ರಾಜ್ಯ ಮತ್ತೆಂದೂ ಸೂರ್ಯನನ್ನು ಕಾಣದು ಎಂಬ ಭಯದಿಂದಲೇ ಬ್ರಿಟಿಷರು 1857ರ ಘಟನೆಯನ್ನು ಭಾರತೀಯರ ಪಾಲಿಗೆ ಸೋಲು ಎಂದು ಹೇಳುತ್ತಿದ್ದರು.  ಬಿಳಿಯರ ಮಾತು ನಿಜವೆಂದು ಭ್ರಮೆಯಲ್ಲಿದ್ದ ಭಾರತೀಯರಿಗೆ, ರಾಷ್ಟ್ರೀಯತೆಯನ್ನು ಮೊಳಕೆಯೊಡೆಯುವಂತೆ ಮಾಡಿದ್ದೇ 1857ರ ಘಟನೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂಬ ವಾಸ್ತವವನ್ನು ಭಾರತೀಯರಿಗೆ ಹೇಳಲು ವೀರ ಸಾವರ್ಕರರು ನಿಷೇಧ- ವಿರೋಧಗಳ ನಡುವೆ ಒಂದು ಪುಸ್ತಕವನ್ನೇ ಬರೆದಿದ್ದರು. ಬ್ರಿಟಿಷರು ಸತ್ಯವನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಪಟ್ಟರೂ , ಅದು ಪುಸ್ತಕರೂಪದಲ್ಲಿ ಜನರ ಕೈಗೆ ಸೇರಿಯಾಗಿತ್ತು.

ಅಂದು ಸುಳ್ಳಿನ ಮೇಲೆ ಸುಳ್ಳು ಹೇಳಿ ಸಾಮ್ರಾಜ್ಯ ಕಟ್ಟಿದ ಬಿಳಿಯರ ಬಣ್ಣ ಬಯಲಾಗಿತ್ತು ಮತ್ತು  ಮೊದಲ ಕ್ರಾಂತಿಯ ಕಿಡಿ ಹಚ್ಚಿದ  ‘ಮಂಗಲ್ ಪಾಂಡೆ’ ಎಂಬ ಪುರುಷಸಿಂಹನ ಪರಿಚಯವಾಗಿತ್ತು.
ಮಧ್ಯಮ ವರ್ಗದ ಕುಟುಂಬದಿಂದ ಬಂದ ಮಂಗಲ್ ಪಾಂಡೆ ಬ್ರಿಟಿಷರ ಸೈನ್ಯದಲ್ಲಿ ಸೇರಿಕೊಂಡ ವೇಳೆಯಲ್ಲಿ ಬ್ರಿಟಿಷರು ಭಾರತೀಯರ ಮೇಲೆ ಮಾಡುವ ದಬ್ಬಾಳಿಕೆ ಅತಿರೇಕಕ್ಕೆ ಹೋಗಿತ್ತು. ಭಾರತದ ಆರ್ಥಿಕ-ರಾಜಕೀಯ-ಸಾಮಾಜಿಕ- ಧಾರ್ಮಿಕ ರಂಗಗಳಲ್ಲಿ ಹಸ್ತಕ್ಷೇಪ ಮಾಡಿ, ಜನಸಾಮಾನ್ಯರನ್ನು ಶೋಷಣೆ ಮಾಡುವ ಅವರಿಗೆ ಭಾರತೀಯರ ತಾಕತ್ತು ಏನೆಂದು ತಿಳಿಸುವ ಸಲುವಾಗಿ 1857 ಮೇ 31ರಂದು ಕ್ರಾಂತಿಗಿಳಿಯುವುದೆಂದು ನಿರ್ಧರಿಸಲಾಗಿತ್ತು. ದಂಗೆಯ ವಾಸನೆ ಹಿಡಿದ ಬ್ರಿಟಿಷರು ಭಾರತೀಯರನ್ನು ತಮ್ಮ ಹತೋಟಿಗೆ ತರಲು ಬರ್ಮಾದಿಂದ ಯುರೋಪಿಯನ್ನರ ಹೆಚ್ಚುವರಿ ಸೈನ್ಯ ಭಾರತಕ್ಕೆ ಕರೆತರುತ್ತಾರೆ ಎಂಬ ಸುಳಿವು ಕ್ರಾಂತಿಕಾರಿಗಳಿಗೆ ಅದಾಗಲೇ ಸಿಕ್ಕಿತ್ತು. ಹಾಗಾಗಿ  ಕ್ರಾಂತಿಯನ್ನು ಮೇ 10ಕ್ಕೆ ಮಾಡುವುದೆಂದು ಪ್ರಮುಖರು ನಿಗದಿಪಡಿಸಿದ್ದರು.

ಅದೇ ವೇಳೆಗೆ ಬ್ರಿಟಿಷರ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಮತ್ತು ಮುಸಲ್ಮಾನ ಸೈನಿಕರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುವ ವದಂತಿಯೊಂದು ಹಬ್ಬಿತು. ಸೈನ್ಯದಲ್ಲಿ ಹೊಸದಾಗಿ ವಿತರಣೆ ಮಾಡಿದ ಎನ್ಫೀಲ್ಡ್ ಕೋವಿಗಳಲ್ಲಿ ಗೋವಿನ ಮತ್ತು ಹಂದಿಯ ಕೊಬ್ಬಿನ ಲೇಪನ ಮಾಡಿದ ಕಾರ್ಟ್ ರಿಡ್ಜ್  (Cartridge)ನ್ನು ಬಳಸಲಾಗುತ್ತಿದೆ ಎಂಬ ವಿಷಯ ತಿಳಿದು ಬ್ಯಾರಕ್ಪುರ್ ನಲ್ಲಿದ್ದ 34ನೇ ಪದಾತಿ ಸೈನ್ಯದ ಬಂಗಾಳ ರೆಜಿಮೆಂಟ್ ನಲ್ಲಿದ್ದ ಮಂಗಲ್ ಪಾಂಡೆ ಅವರ ಸಹನೆಯ ಕಟ್ಟೆ ಒಡೆಯಿತು.
1857 ಮಾರ್ಚ್ 29ರಂದು ಮಂಗಲ್ ಪಾಂಡೆ ಬ್ರಿಟಿಷರ ವಿರುದ್ಧ ಸಿಡಿದೆದ್ದು ನಿಲ್ಲುತ್ತಾರೆ. ತಲ್ವಾರ್ ಮತ್ತು ಕೋವಿ ಹಿಡಿದು ಬ್ರಿಟಿಷ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದಾಗ ಹ್ಯೂಸನ್ ಎಂಬ ಆಂಗ್ಲ ನೆಲಕ್ಕುರುಳಿದನು. ಮಂಗಲ್ ಪಾಂಡೆ ಅವರ ಕೋವಿಯಿಂದ ಹೊರಟ ಇನ್ನೊಂದು ಗುಂಡು ಲೆಫ್ಟಿನೆಂಟ್ ಬಾಘ್ ಎಂಬ ಆಂಗ್ಲನ ಕುದುರೆಯನ್ನು ಘಾಸಿಗೊಳಿಸಿತು. ಗುಂಡೇಟಿನಿಂದ ತಪ್ಪಿಸಿಕೊಂಡ ಬಾಘ್ ಮಂಗಲ್ ಪಾಂಡೆ ಮೇಲೆ ಪ್ರತಿದಾಳಿ ಮಾಡಲು ಪ್ರಯತ್ನಿಸಿ ವಿಫಲವಾಗಿ ಸ್ವತಃ ಗಾಯಗೊಳ್ಳುತ್ತಾನೆ. ಇದೇ ಸಂದರ್ಭದಲ್ಲಿ ಶೇಖ್ ಪಲ್ಟು ಎಂಬುವನು ಮಂಗಲ್ ಪಾಂಡೆಯನ್ನು ತಡೆಯಲು ಪ್ರಯತ್ನಿಸಿದ. ಮಂಗಲ್ ಪಾಂಡೆಯವರು ರಂಗಕ್ಕಿಳಿದ ಉದ್ದೇಶವನ್ನು ಅರಿಯದೆ ತಡೆಯಲು ಬಂದ ಶೇಖ್ ಪಲ್ಟುವಿನ ವರ್ತನೆ ಅವರ ಕೋಪವನ್ನು ಹೆಚ್ಚಿಸಿತು. ಇತ್ತ ಕೆಲ ಸೈನಿಕರು ಪಾಂಡೆಯವರಂತೆ ಬ್ರಿಟಿಷರ ಮೇಲೆ ದಾಳಿಗೆ ಸಜ್ಜಾದರು. ಅಷ್ಟರಲ್ಲಿ ಅಲ್ಲಿಗೆ ಬಂದ ಮೇಜರ್ ಹಿಯರ್ಸೆ ಬಂದು ಮಂಗಲ್ ಪಾಂಡೆಯವರನ್ನು ಹಿಡಿಯುವಂತೆ ಆಜ್ಞೆ ಮಾಡಿದಾಗ ಅಲ್ಲಿದ್ದ ಇತರೆ ಸಿಪಾಯಿಗಳು ಪಾಂಡೆಯವರನ್ನು ಸುತ್ತುವರಿದು ಬ್ರಿಟಿಷರ ಆಜ್ಞೆಯನ್ನು ಶಿರಸಾ ಪಾಲಿಸಿದ್ದು ವಿಷಾದವಲ್ಲದೆ ಮತ್ತೇನು?

ಬ್ರಿಟಿಷರ ಕೈಯಲ್ಲಿ ತಾನು ಸಾಯಬಾರದೆಂದು ಮೊದಲೇ ನಿರ್ಧರಿಸಿದ್ದ ಪಾಂಡೆ ಪಿಸ್ತೂಲಿನಿಂದ ಗುಂಡು ಹಾರಿಸಿ ಆತ್ಮಾಹುತಿ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಅವರ ಸ್ವಾಭಿಮಾನಕ್ಕೆ ಧಕ್ಕೆ ತರಬೇಕೆಂದು ಆಸ್ಪತ್ರೆಗೆ ದಾಖಲು ಮಾಡಿ ಅವರನ್ನು ಉಳಿಸಿದ ಬ್ರಿಟಿಷರು ನಂತರ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆಗೊಳಪಡಿಸುತ್ತಾರೆ. ತಮ್ಮ ಮೇಲಿನ ಅಧಿಕಾರಿಗಳ ಮೇಲೆ ದಾಳಿ ಮಾಡಿದ ಪಾಂಡೆ ಅಪರಾಧಿ ಎಂದು ಘೋಷಣೆ ಮಾಡಿ, ಮರಣ ದಂಡನೆಯ ಶಿಕ್ಷೆಯನ್ನು ಬ್ರಿಟಿಷರು ವಿಧಿಸುತ್ತಾರೆ. 1857 ರ ಎಪ್ರಿಲ್ 8ರಂದು ಪುರುಷ ಸಿಂಹ ಮಂಗಲ್ ಪಾಂಡೆಯವರನ್ನು ನೇಣುಗಂಬಕ್ಕೇರಿಸಲಾಗುತ್ತದೆ. ಈ ಬಲಿದಾನ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಶೆಯನ್ನು ಕೊಡುತ್ತದೆ.
ಸ್ವಾತಂತ್ರ್ಯ ಸಮರ ಸೇನಾನಿ ಮಂಗಲ್ ಪಾಂಡೆಯವರು ಸಮರದ ಯಜ್ಞದಲ್ಲಿ ಸ್ವಾತಂತ್ರ್ಯಕ್ಕಾಗಿ ತಮ್ಮ ರಕ್ತವನ್ನೇ ಆಜ್ಯವಾಗಿಸಿ, ಕ್ರಾಂತಿಯ ಕಿಡಿ ಹಚ್ಚಿ ಸಮಿದೆಯಾಗಿ ಉರಿದು, ಮುಂದಿನ ಯುವಜನತೆಯ ಮನಸ್ಸಿನಲ್ಲಿ ರಾಷ್ಟ್ರೀಯ ಪ್ರಜ್ಞೆ ಮೊಳಕೆಯೊಡೆಯುವಂತೆ ಮಾಡಿದ್ದು ಹೀಗೆ!!!

Leave a Reply

Your email address will not be published.

This site uses Akismet to reduce spam. Learn how your comment data is processed.