2 ಫೆಬ್ರವರಿ, ತಿರುಪತಿ: ಹಿರಿಯ ಸಂಸ್ಕೃತ ಸಾಹಿತಿಗಳು ಮತ್ತು ವಿದ್ವಾಂಸರಾದ ಡಾ.ಜನಾರ್ದನ ಹೆಗಡೆ ಹಾಗೂ ಡಾ.ಎಚ್ .ಆರ್. ವಿಶ್ವಾಸ ಅವರಿಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ವಾಚಸ್ಪತಿ ಪುರಸ್ಕಾರ ಘೋಷಿಸಿದೆ. ಸಂಸ್ಕೃತ ಭಾಷೆ, ಸಂಸ್ಕೃತ ಸಾಹಿತ್ಯ, ಭಾರತೀಯ ಸಂಸ್ಕೃತಿ ಮತ್ತು ಸಮಾಜ ಸೇವೆ ಈ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಗೌರವ ಡಾಕ್ಟರೇಟ್ ಪದವಿಯೇ ವಾಚಸ್ಪತಿ ಪುರಸ್ಕಾರ.
ಭಾನುವಾರದಂದು ತಿರುಪತಿಯಲ್ಲಿ ಜರುಗಿದ 23ನೇ ಘಟಿಕೋತ್ಸವದಲ್ಲಿ ನಿವೃತ್ತ ಚುನಾವಣಾ ಮುಖ್ಯ ಆಯುಕ್ತರಾದ ಶ್ರೀ ಎನ್. ಗೋಪಾಲಸ್ವಾಮಿಯವರು ಹಿರಿಯ ವಿದ್ವಾಂಸರಿಬ್ಬರಿಗೂ ಪುರಸ್ಕಾರ ಪ್ರದಾನ ಮಾಡಿ, ಸನ್ಮಾನಿಸಿದರು.
ಡಾ.ಜನಾರ್ಧನ ಹೆಗಡೆ ಅವರ ಕಿರು-ಪರಿಚಯ
ಪ್ರಸಿದ್ಧ ಸಂಸ್ಕೃತ ಮಾಸಪತ್ರಿಕೆ ಸಂಭಾಷಣಾ ಸಂದೇಶದ ಸಂಪಾದಕರಾದ ಜನಾರ್ಧನ ಹೆಗಡೆಯವರು ಕಳೆದ ಮೂರು ದಶಕಗಳಿಗೂ ಹೆಚ್ಚು ಸಂಸ್ಕೃತ ಸಾಹಿತ್ಯ ರಚನೆ, ಭಾಷಾಭ್ಯಾಸ, ವ್ಯಾಕರಣ ಗ್ರಂಥ ಮುಂತಾದವುಗಳ ರಚನೆಯಲ್ಲಿ ತೊಡಗಿದ್ದಾರೆ. ಈ ಮೊದಲು ಅನೇಕ ವರ್ಷಗಳ ಕಾಲ ಸಂಸ್ಕೃತ ಚಂದಮಾಮ ಪತ್ರಿಕೆಯ ಸಂಪಾದಕರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಇವತ್ತು ದೇಶದ ಎಲ್ಲೆಡೆ ಮತ್ತು ವಿದೇಶದಲ್ಲಿ ‘ಜನಸಾಮಾನ್ಯರಿಗೆ ಸಂಸ್ಕೃತ’ ಎಂಬ ಧ್ಯೇಯದಿಂದ ಸಂಸ್ಕೃತ ಭಾಷೆಯ ಪ್ರಸಾರಕ್ಕೆ ಕೆಲಸ ಮಾಡುವ ಸಂಸ್ಕೃತ ಭಾರತಿ ಸಂಸ್ಥೆಯ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಿದೆ. ಎರಡುಬಾರಿ ಸಂಸ್ಕೃತ ಸಾಹಿತ್ಯ ಸೇವೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗಿದ್ದಾರೆ. ಅನೇಕ ಸಂಸ್ಕೃತ ಗ್ರಂಥಗಳ ರಚನೆ, ಕನ್ನಡ ಪ್ರಸಿದ್ಧ ಗ್ರಂಥಗಳ ಸಂಸ್ಕೃತ ಅನುವಾದ ಮತ್ತು ವಿಶೇಷವಾಗಿ ಶಿಶು ಸಾಹಿತ್ಯ ರಚನೆಯಲ್ಲಿ ಮಹತ್ವದ ಕೊಡುಗೆಯಿದೆ. ಸಂಸ್ಕೃತ ಅಧ್ಯಯನದ ಉನ್ನತ ಸಂಸ್ಥೆಗಳಲ್ಲಿ, ವಿಶ್ವವಿದ್ಯಾನಿಲಯದಗಳ ಪಠ್ಯಕ್ರಮ ರಚನೆಯಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.
ಡಾ.ಎಚ್. ಆರ್. ವಿಶ್ವಾಸ್ ಅವರ ಕಿರು-ಪರಿಚಯ
ಪ್ರಸ್ತುತ ಮಂಗಳೂರಿನಲ್ಲಿರುವ ಡಾ.ವಿಶ್ವಾಸ ಸಂಸ್ಕೃತ ಸಾಹಿತ್ಯದಲ್ಲಿ ದೇಶದಲ್ಲಿಯೇ ಪ್ರಸಿದ್ಧ ಹೆಸರು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಅವರು ಸಂಸ್ಕೃತ ಸೃಜನಶೀಲ ಸಾಹಿತ್ಯ ರಚನೆ, ಕಾವ್ಯರಚನೆ, ಅನುವಾದ ಮತ್ತು ಭಾಷಾಭ್ಯಾಸ ಗ್ರಂಥಗಳನ್ನು ರಚಿಸಿದ್ದಾರೆ. ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರ ಪ್ರಸಿದ್ಧ ಕಾದಂಬರಿಗಳನ್ನು ಸಂಸ್ಕೃತ ಅನುವಾದ ಮಾಡಿದ್ದಾರೆ. ಇವರು ಸಂಸ್ಕೃತ ಭಾರತೀಯ ಸಂಸ್ಥಾಪಕ ಕಾರ್ಯಕರ್ತರಲ್ಲಿ ಒಬ್ಬರು. ಈಗ ಸಂಸ್ಕೃತ ಭಾರತೀಯ ಅಖಿಲ ಭಾರತ ಸ್ತರದಲ್ಲಿ ಸಾಹಿತ್ಯ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ.