ಡಾ. ಜನಾರ್ದನ ಹೆಗಡೆ ಅವರಿಗೆ “ರಾಷ್ಟ್ರಪತಿ ಪುರಸ್ಕಾರ” ಪ್ರಕಟ
ಭಾರತಸರಕಾರದ ಮಾನವಸಂಸಾಧನ ಮಂತ್ರಾಲಯವು ಪ್ರತಿವರ್ಷ ಭಾರತೀಯ ಭಾಷೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡುತ್ತದೆ. 2019ನೇ ಸಾಲಿನ ಪುರಸ್ಕಾರವು(Presidential Award)” ಶ್ರೀಯುತ ಡಾ. ಜನಾರ್ದನ ಹೆಗಡೆ ಅವರಿಗೆ ಸಂದಿದೆ.
ಸಂಸ್ಕೃತ ಭಾಷೆಗಾಗಿ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಪ್ರಮಾಣ ಪತ್ರ ಮತ್ತು ೫ ಲಕ್ಷ ನಗದು ಪುರಸ್ಕಾರ ಒಳಗೊಂಡಿದೆ. ಸಂಸ್ಕೃತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಸಂಸ್ಕೃತ, ಪಾಳಿ, ಪ್ರಾಕೃತ, ಕನ್ನಡ, ಮಲಯಾಳಂ, ಓಡಿಯಾ ಶಾಸ್ತ್ರೀಯ ಭಾಷೆಯ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಂಸ್ಕೃತ ಜಗತ್ತಿನ ಅನೇಕ ಗಣ್ಯರು ಡಾ. ಜನಾರ್ದನ ಹೆಗಡೆ ಅವರಿಗೆ ಈ ಪ್ರಶಸ್ತಿ ಲಭಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಜನಾರ್ದನ ಹೆಗಡೆ ಅವರು “ಸಂಭಾಷಣ ಸಂದೇಶಃ” ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರು.
ವಿದ್ವಾನ್ ಜನಾರ್ದನ ಹೆಗಡೆಯವರು ಸಂಸ್ಕೃತ ಭಾಷೆಯನ್ನು ಜನಭಾಷೆಯಾಗುವಲ್ಲಿ ಅನವರತವೂ ಶ್ರಮಿಸುತ್ತಿರುವ “ಸಂಸ್ಕೃತ ಭಾರತಿ” ಸಂಸ್ಥೆಯ ಹಿರಿಯ ಸಂಸ್ಥಾಪಕರಲ್ಲೊಬ್ಬರು.
ಇವರು ಸಂಸ್ಕೃತ ಭಾಷಾಭ್ಯಾಸ ಹಾಗೂ ವ್ಯಾಕರಣ ಕಲಿಕೆಗೆ ಸಂಬಂಧಿಸಿದಂತೆ ಸುಮಾರು 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಾಮಾನ್ಯ ವ್ಯಾಕರಣಾಭ್ಯಾಸಕ್ಕೆ ಬೇಕಾದ ‘ಅಭ್ಯಾಸದರ್ಶಿನಿ’, ‘ಶುದ್ಧಿಕೌಮುದಿ’ಯಿಂದ ಆರಂಭಿಸಿ ಪ್ರೌಢ ಗ್ರಂಥಗಳಾದ ‘ಭಾಷಾಪಾಕಃ’, ‘ಧಾತುರೂಪನಂದಿನೀ’, ‘ಕೃದಂತರೂಪನಂದಿನೀ’ ಮುಂತಾದವು ಇವರ ಇತ್ತೀಚಿನ ಕೃತಿಗಳು.
ಸಮಕಾಲೀನ ಸಂಸ್ಕೃತ ಸಾಹಿತ್ಯಸೃಷ್ಟಿಯಲ್ಲಿಯೂ ಇವರದು ಗಣನೀಯ ಸೇವೆ. ಸಂಸ್ಕೃತ ಚಂದಮಾಮಾದ ಸಂಪಾದಕರಾಗಿ ಪತ್ರಿಕೆಯನ್ನು ಸುಮಾರು 25 ವರ್ಷ ನಡೆಸಿದ ಹೆಗ್ಗಳಿಕೆ ಇವರದು. ಕತೆ, ಕಾದಂಬರಿ, ಕಾವ್ಯ, ವೈಚಾರಿಕ ಪ್ರಬಂಧ ಮುಂತಾದ ಸಾಹಿತ್ಯಪ್ರಕಾರಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಬಾಲಕಥಾಸಾಹಿತ್ಯಪ್ರಕಾರದಲ್ಲಿ ಇವರು ರಚಿಸಿದ “ಬಾಲಕಥಾಸಪ್ತತಿಃ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ “ಬಾಲ ಸಾಹಿತ್ಯ ಪುರಸ್ಕಾರ” (2015) ಸಂದಿದೆ. ಕನ್ನಡದ ಪ್ರಖ್ಯಾತ ಕಾದಂಬರಿಕಾರರಾದ ಶ್ರೀ ಎಸ್.ಎಲ್.ಭೈರಪ್ಪನವರ ‘ಧರ್ಮಶ್ರೀ’ ಕಾದಂಬರಿಯ ಸಂಸ್ಕೃತಾನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅವರು ಅನೇಕ ಬಾರಿ ಸಂಸ್ಕೃತ ಶಿಕ್ಷಕರ ತರಬೇತಿಯನ್ನು ಭಾರತ ಹಾಗು ವಿದೇಶಗಳಲ್ಲಿ ನಡೆಸಿದ್ದಾರೆ. ನ್ಯಾಷನಲ್ ಬುಕ್ ಟ್ರಸ್ಟ್, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನಗಳಲ್ಲಿ ಪ್ರಮುಖ ಸಲಹಾ ಸಮಿತಿಯಲ್ಲಿ ಇದ್ದಾರೆ. ಭಾರತೀಯ ಭಾಷಾ ಭಾರತಿ, ಎಂ. ಹಿರಿಯಣ್ಣ ಪ್ರಶಸ್ತಿ ಮತ್ತು ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ೨೦೧೭ರಲ್ಲಿ ಉತ್ತರ ಪ್ರದೇಶ ಸಂಸ್ಕೃತ ಸಂಸ್ಥಾನ ಕೊಡಮಾಡುವ ಮಹರ್ಷಿ ನಾರದ ಪ್ರಶಸ್ತಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಅವರು ‘ಸಂಭಾಷಣ ಸಂದೇಶಃ’ ದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.