ರಾಜ್ಕುಮಾರ್ ಈ ಹೆಸರನ್ನು ಕೇಳದ ಕರ್ನಾಟಕದ ಜನ ಯಾರಾದರೂ ಇರಲು ಸಾಧ್ಯವೆ? ರಾಜ್ಕುಮಾರ್ ಕನ್ನಡ ಚಲನಚಿತ್ರಗಳ ಮೇರು ನಟ, ನೂರಾರು ದಾಖಲೆಗಳ ಸರದಾರ, ಚಲನಚಿತ್ರಗಳ ಮೂಲಕ ಕನ್ನಡಿಗರ ಮನೆ ಮನ ಗೆದ್ದು ಮನೆಮಗನೆನಿಸಿಕೊಂಡವರು.ಕನ್ನಡ ಚಲನಚಿತ್ರಗಳಿಗೆ ಸಾಂಸ್ಕೃತಿಕ ಅಡಿಪಾಯ ಹಾಕಿಕೊಟ್ಟವರು ಡಾ.ರಾಜ್ಕುಮಾರ್.
ಅಷ್ಟಕ್ಕೂ ರಾಜ್ಕುಮಾರ್ ಅವರ ವ್ಯಕ್ತಿತ್ವ, ಅವರ ಸಾತ್ವಿಕತೆ, ಸಜ್ಜನಿಕೆ ಇಡೀ ಕನ್ನಡನಾಡಿಗೆ ಮಾತ್ರವಲ್ಲ ಕಲಾರಂಗದಲ್ಲಿ ಎಂದಿಗೂ ಅಮರವಾದ ಮಾದರಿ.ಕೇವಲ ವೈಯಕ್ತಿಕ ಮಟ್ಟದಲ್ಲಿ, ಅಥವಾ ಕಲೆಯ ವಿಚಾರದಲ್ಲಿ ಮಾತ್ರವಲ್ಲ ನಮ್ಮೆಲ್ಲರಿಗೂ ಸುಳ್ಳು ಇತಿಹಾಸದಿಂದ ದೂರವಿಡುವ,ನಮ್ಮ ಮಣ್ಣಿನ ಬಗೆಗೆ ಹೆಮ್ಮೆಯೆನಿಸುವ,ಸಮಾಜಕ್ಕೆ ಹಿತವೆನಿಸುವ ಕಾರ್ಯವನ್ನು ಮಾಡಲು ಪ್ರೇರಣೆ ನೀಡುವ, ಈ ನೆಲದ ದೇವರು ಧರ್ಮಗಳ ಕುರಿತು ಶ್ರದ್ಧೆಯನ್ನು ರೂಪಿಸುವ ಮಾದರಿಗಳನ್ನು ಅಭಿವ್ಯಕ್ತಿಸುತ್ತಾ ನಮ್ಮ ಮೇಲೆ ಸಾತ್ವಿಕವಾದ ಪ್ರಭಾವ ಬೀರಿದವರು ಡಾ.ರಾಜ್ಕುಮಾರ್.
ಬಾಲಿವುಡ್ಡಿನ ಬಹುತೇಕ ಸಿನೇಮಾಗಳು ದಾಳಿ ಮಾಡಿದ ಮೊಘಲರ ಕುರಿತಾದ ವೈಭವೀಕರಣ,ಧರ್ಮದ ಕುರಿತಾಗಿ ದೇವರ ಕುರಿತಾಗಿ ಅವಹೇಳನ, ಸಾಹಸ ಆಚರಣೆಗಳ ಪರಂಪರೆಗಳ ಕುರಿತಾಗಿ ತುಚ್ಛವಾಗಿ ತೋರಿಸುವಂತಹ ಸಂದರ್ಭದಲ್ಲಿ ರಾಜಕುಮಾರ್ ಅವರ ಸಿನೇಮಾಗಳಲ್ಲಿ ಈ ರೀತಿಯೆಂದೂ ತೋರಿಸಲಿಲ್ಲ.
ಉದಾಹರಣೆಗೆ 1982ರಲ್ಲಿ ಬಿಡುಗಡೆಯಾದ ಬೆಮಿಸಾಲ್ ಎನ್ನುವ ಅಮಿತಾಭ್ ಬಚ್ಚನ್ರ ಸಿನೇಮಾದಲ್ಲಿ ಕಾಶ್ಮೀರವನ್ನು ಮೊಘಲರು ಕಂಡು ಹಿಡಿದರು ಎನ್ನುತ್ತಾ ಮೊಘಲರನ್ನು ಕೊಂಡಾಡುತ್ತಾರೆ. ಸಾವಿರಾರು ವರ್ಷಗಳಿಂದ ಜ್ಞಾನದ ಬಂಡಾರವಾಗಿದ್ದ ಕಾಶ್ಮೀರವನ್ನು ನಾಶ ಮಾಡಿ, ಅಲ್ಲಿ ಜಿಹಾದ್ ನಡೆಸಿದ ಮೊಘಲರು ಕಾಶ್ಮೀರವನ್ನು ಹುಡುಕಿದರು ಎಂಬ ಸುಳ್ಳು ನರೇಟಿವ್ ಅನ್ನು ತುಂಬುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ 1983ರಲ್ಲಿ ಬಿಡುಗಡೆಯಾದ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಭೋಜರಾಜನನ್ನ, ಅವನ ವಿದ್ವತ್ ಪ್ರತಿಭೆಗಳೇ ತುಂಬಿದ ಆಸ್ಥಾನವನ್ನ, ಅಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ, ಅದರ ಪ್ರತಿಭೆಯನ್ನು ಜಗತ್ತಿನೆದುರು ತೆರೆದಿಡುವ ಚಿತ್ರವನ್ನು ತೆರೆಯುತ್ತಾರೆ.ಕನ್ನಡ ನಾಡಿನ ಅನೇಕ ಪೀಳಿಗೆಗಳು ಹೀಗೆ ತಿರುಚಿದ ಇತಿಹಾಸವನ್ನು ನಂಬಿಕೊಂಡು, ತಮ್ಮನ್ನು ಹೀಗಳೆದುಕೊಳ್ಳುವುದಕ್ಕಿಂತ ಶ್ರೇಷ್ಠ ಜ್ಞಾನಪರಂಪರೆಯ ವಾರಸುದಾರರು ನಾವು ಎಂದು ಹೆಮ್ಮೆ ಪಡುವಂತಹ ಕಥೆಗಳನ್ನು ಆರಿಸುತ್ತಾರೆ.ಭಾರತೀಯ ಮೂಲದ ರಾಮಾಯಾಣ ಮಹಾಭಾರತದ ಕಥೆಗಳನ್ನು ಆರಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಆಧುನಿಕವಾಗಿಯೂ ಮತ್ತು ನೆಲಮೂಲದ ಸಂಸ್ಕೃತಿಯನ್ನು ಎರಡನ್ನೂ ಸಮರ್ಥವಾಗಿ ತೂಗಿಸಿಕೊಂಡು ಕರ್ನಾಟಕದ ಸಾಂಸ್ಕೃತಿಕ ಪಲ್ಲಟಗಳನ್ನು ನಿಭಾಯಿಸಿದವರು ಡಾ.ರಾಜ್ಕುಮಾರ್.
ಪೌರಾಣಿಕ ಐತಿಹಾಸಿಕ ಕಥೆಗಳ ಆಯ್ಕೆಯಲ್ಲಿರಬಹುದು ಅಥವಾ ಸಾಮಾಜಿಕ ಸಿನೆಮಾಗಳ ಕಥಾಹಂದರದಲ್ಲಿರಬಹುದು ಎಲ್ಲೆಡೆಯೂ ಅತ್ಯಂತ ಸಾತ್ವಿಕವಾದ ಸಂದೇಶ ನೀಡುತ್ತಾ ಮತ್ತು ಪ್ರಸ್ತುತಿಯಲ್ಲೂ ಕೂಡ ಸಮಾಜಕ್ಕೆ ಮೌಲ್ಯಗಳನ್ನು ನೀಡುತ್ತಾ,ಲೋಕ ಶಿಕ್ಷಣದ ರಹದಾರಿಯಾಗಿ ಕೆಲಸ ಮಾಡಿದ್ದವು ಅವರ ಸಿನೇಮಾಗಳು.ಆ ರೀತಿಯ ಮಾದರಿಯಲ್ಲಿ ರಾಜ್ಕುಮಾರ್ರವರ ಸಿನೇಮಾಗಳು ಅದ್ಭುತವಾದ ಪರಿಣಾಮ ಬೀರಿದ್ದವೆಂದೇ ಹೇಳಬಹುದು.ಬಂಗಾರದ ಮನುಷ್ಯ ಸಿನೆಮಾದಿಂದ ಕೃಷಿ ಕಡೆಗೆ ಮುಖ ಮಾಡಿದವರು ಅದೆಷ್ಟೋ ಮಂದಿ.ಅಥವಾ ಬಾಳುವಂತೆ ಹೂವೆ ಹಾಡಿನಿಂದ ಪ್ರೇರಣೆ ಪಡೆದು ಕುಡಿತ ಬಿಟ್ಟವರು ಅದೆಷ್ಟೋ ಮಂದಿ.
ಇನ್ನು ಅವರ ಪಾತ್ರದ ಪೋಷಣೆಯೂ ಅತ್ಯಂತ ಸಹಜವಾದ ಜನಸಾಮಾನ್ಯರಿಗೆ ನಿಲುಕುವಂತಿತ್ತು.ಕಾರ್ಮಿಕ,ರೈತ,ಮೇಷ್ಟ್ರು,ಕೂಲಿ,ಬ್ಯಾಂಕಿನ ನೌಕರ ಹೀಗಿನ ಪಾತ್ರಗಳಲ್ಲಿ ನಟಿಸುತ್ತಾ ಸಮಾಜದ ದನಿಯಾಗುವ ಅವರೊಳಗೆ ಒಬ್ಬರಾಗುತ್ತಾ ಮಾದರಿಯನ್ನ ನಿರ್ಮಾಣ ಮಾಡಿಕೊಟ್ಟು ಬದುಕಿದವರು ಡಾ.ರಾಜ್ಕುಮಾರರು.
ಅವರ ಸಿನೆಮಾಗಳಲ್ಲಿ ಹೊಯ್ಸಳರ ಶಿಲ್ಪಕಲೆ, ದೇಗುಲಗಳು, ಭಾರತೀಯ ಆಚಾರ ವಿಚಾರಗಳ ಕುರಿತಾದ ಶ್ರದ್ಧೆ ಯಥೇಚ್ಛವಾಗಿ ದೊರೆಯುತ್ತದೆ.ಕನ್ನಡ ನಾಡು ನುಡಿ,ಹೆಣ್ಣುಮಕ್ಕಳ ಕುರಿತಾದ ಗೌರವ ಭಾವ,ಸಾಮರಸ್ಯದ ಹೊಳೆಯೂ ಹರಿಯುತ್ತದೆ.ಇದೇ ಇವತ್ತಿಗೂ ಕನ್ನಡ ಚಿತ್ರರಂಗದ ಅಡಿಪಾಯವಾಗಿ ಮುಂದುವರೆದಿದೆ.
ಅಲ್ಲದೆ ಕನ್ನಡದ ಕವಿ, ಕಾದಂಬರಿಕಾರರು, ಕತೆಗಾರರನ್ನು ಸಾಮಾನ್ಯರಿಗೆ ಪರಿಚಯಿಸುವ ಅವರ ಕವಿತೆಗಳನ್ನು,ವಿಚಾರಗಳನ್ನು ಜನರ ಮುಂದಿಡುವ ಡಾ.ರಾಜ್ರ ಆ ಸಂಪ್ರದಾಯ ಸಾಮಾನ್ಯ ಜನರಿಗೂ ಕೂಡ ಅಪರೋಕ್ಷವಾಗಿ ಸಾಹಿತ್ಯದ ಔತಣವನ್ನು ಊಡಿಸಿತ್ತು ಎಂದರೆ ತಪ್ಪಾಗಲಾರದು.
ಅಲ್ಲದೆ ಮಲೆ ಮಹದೇಶ್ವರನ ಕುರಿತಾದ ಹಾಡುಗಳು, ಭಜನೆಗಳು ಇಂದಿಗೂ ಶ್ರಮ ಸಂಸ್ಕೃತಿಯ, ಗ್ರಾಮೀಣ ಸಂಸ್ಕೃತಿಗಳ ದ್ಯೋತಕವಾಗಿ ನಮ್ಮನ್ನು ಮುನ್ನಡೆಸುತ್ತಲೆ ಬಂದಿದೆ. ಹಾಗು ಅವರ ಯೋಗಾಭ್ಯಾಸ ಶಿಸ್ತಿನಿಂದ ಕೂಡಿದ್ದ ದಿನಚರಿಗಳು ಅವರ ಸಾತ್ವಿಕ ನಡತೆಗಳು ಮೇಲ್ಪಂಕ್ತಿಯೇ ಸೈ.
ಆ ಹಿನ್ನೆಲೆಯಲ್ಲಿ ಡಾ.ರಾಜ್ಅವರ ಚಿತ್ರಗಳು,ಅವರ ಗುಣ ನಡತೆಗಳು ಇಂದಿಗೂ ಪೀಳಿಗೆಗಳ ನಂತರವೂ ಪ್ರಸ್ತುತವೆನಿಸುತ್ತದೆ.ಇಂದಿಗೂ ಅವರೊಬ್ಬ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಕಾಣುತ್ತಾರೆ.