ಮಾನವ ಜಗತ್ತಿನ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಧಾರುಣ ಕೃತ್ಯಕ್ಕೆ ಸಾಕ್ಷಿಯಾಗಿದ್ದು ಜಲಿಯನ್ ವಾಲಾಬಾಗ್!

ಭಾರತೀಯ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನೇ ಬದಲಿಸಿದ ಘಟನೆ. ಭಗತ್ ಸಿಂಗ್, ರಾಜಗುರು, ಸುಖದೇವ ಸೇರಿದಂತೆ ಅನೇಕರು ಸ್ವಾತಂತ್ರ್ಯ ಹೋರಾಟದ ಯಜ್ಞಕ್ಕೆ ಹವಿಸ್ಸಾಗಿ ಅರ್ಪಣೆಯಾಗುವಂತೆ ಪ್ರೇರೇಪಿಸಿದ ಘಟನೆ. ಉಧಮ್ ಸಿಂಗ್‌ನಂತಹ ಕ್ರಾಂತಿಕಾರಿ ಪ್ರತಿಕಾರವನ್ನು ಬ್ರಿಟೀಷರದ್ದೇ ನೆಲದಲ್ಲಿ ಪಡೆಯಲರ್ಜಿಸಿದ ಘಟನೆ. ಬ್ರಿಟೀಷರ ವ್ಯಾಘ್ರ ಮುಖವನ್ನು ಜಗತ್ತಿಗೆ ಪ್ರದರ್ಶಿಸಿದ ಹಾಗೂ ಆಂಗ್ಲರ ಕ್ರೌರ್ಯವನ್ನು ಬೆತ್ತಲಾಗಿಸಿ ತೋರಿದ ಘಟನೆ‌. ಸಾವಿರಾರು ಪಂಜಾಬಿ ಅಸಹಾಯಕರನ್ನು ಧಾರುಣತೆಗೆ ಕನ್ನಡಿಯಾದ ಘಟನೆ. ಡಯರನಂತ ಅಂದಿನ ನೂರಾರು ಆಂಗ್ಲ ಅಧಿಕಾರಿಗಳ ನೀಚ ಮನಸ್ಥಿತಿ ಪ್ರದರ್ಶಿಸಿದ ಘಟನೆ. ಅದುವೇ ಪ್ರಪಂಚದ ಇತಿಹಾಸದಲ್ಲಿ ಎಂದೂ ಕೇಳರಿಯದ ಕ್ರೂರ ಹತ್ಯಾಕಾಂಡ ಜಲಿಯನ್ ವಾಲಾಬಾಗ್ ಘಟನೆ.

ಅಂದು ಸಿಖ್ಖರ ಪಾಲಿನ ಯುಗಾದಿ ಹಬ್ಬ ‘ಬೈಸಾಕಿ’ ಪಂಜಾಬಿನಾದ್ಯಂತ ಅದ್ದೂರಿಯಾಗಿ ನಡೆದಿತ್ತು. ಪ್ರತಿ ವರ್ಷದಂತೆ ಆ ವರ್ಷವೂ ಜನ ಅಮೃತಸರದಲ್ಲಿ ಜಾತ್ರೆಯ ನಿಮಿತ್ತ ಸೇರಿದ್ದರು. ಸ್ವರ್ಣ ಮಂದಿರದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಜಲಿಯನ್ ವಾಲಾಬಾಗ್ ಎಂಬ ಪ್ರದೇಶದಲ್ಲಿ ಇದೇ ದಿನ ಅಂದರೆ 1919ರ ಏಪ್ರಿಲ್ 13ರಂದು, ಬ್ರಿಟೀಷರು ಜಾರಿಗೆ ತಂದಿದ್ದ ರೌಲತ್ ಕಾಯ್ದೆ ವಿರೋಧಿಸಿ ಶಾಂತಿಯುತ ಪ್ರತಿಭಟನೆ ಮಾಡಲು ಜನರ ಬೃಹತ್ ಗುಂಪೊಂದು ನೆರೆದಿತ್ತು.

ಏನಿದು ರೌಲಟ್ ಕಾಯ್ದೆ? ಯಾಕೆ ಪಂಜಾಬ್ ಸೇರಿದಂತೆ ಅನೇಕ ಭಾರತೀಯರು ಇದನ್ನು ವಿರೋಧಿಸಲು ಸಜ್ಜಾಗಿದ್ದರು? ಎನ್ನುವುದಾದರೆ ಅದಕ್ಕೆ ಉತ್ತರ ಇಲ್ಲಿದೆ. 1915ರಲ್ಲಿ ಜಾರಿಗೆ ತಂದಿದ್ದ ಸೇನಾ ಕಾಯ್ದೆ 1919ರ ವೇಳೆಗೆ ಮುಗಿಯಲಿತ್ತು. ಇದೀಗ ಭಾರತೀಯರನ್ನು ನಿಯಂತ್ರಿಸಲು ಒಂದು ಕಾಯ್ದೆ ಬೇಕಾಗಿತ್ತು, ಅದಕ್ಕಾಗಿ 1919ರಲ್ಲಿ ಸಿಡ್ನಿ ಅರ್ಥರ್ ಟೇಲರ್ ರೌಲಟ್ ಎಂಬ ಬ್ರಿಟೀಷ್ ಅಧಿಕಾರಿ ಒಂದು ನಿಯಮ ಜಾರಿಗೆ ತಂದ. ಆ ಕಾಯ್ದೆಗೆ ಅವನ ಹೆಸರೇ ಇಡಲಾಯಿತು, ಅದುವೇ ರೌಲತ್(ರೌಲಟ್) ಕಾಯ್ದೆ! ಏನಿತ್ತು ಆ ಕಾಯ್ದೆಯಲ್ಲಿ? ಆ ಕಾಯ್ದೆಯಲ್ಲಿ ಹೇಳಲಾಗಿತ್ತು ಯಾವುದೇ ಪತ್ರಕರ್ತ ಭಾರತದ ಪರವಾಗಿ ಅಂಕಣವಾಗಲಿ, ಸುದ್ಧಿಯಾಗಲು ಬರೆಯುವಂತಿರಲಿಲ್ಲ. ಒಂದುವೇಳೆ ಬರೆಯಲೇಬೇಕು ಎನ್ನುವುದಾದರೆ ಬ್ರಿಟೀಷರಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಇದನ್ನು ಅದೇಗೋ ಸೈರಿಸಬಹುದಾಗಿತ್ತು ಬಿಡಿ ಆದರೆ ಮುಂದುವರೆದು ಅದರಲ್ಲಿ ಹೇಳಲಾಗಿತ್ತು ಬ್ರಿಟಿಷ್ ಸರ್ಕಾರದ ವಿರುದ್ಧ ಲೇಖನ ಅಥವಾ ಪುಸ್ತಕ ಬರೆದು ಪ್ರಕಟಿಸಿದರೆ ಅನಿರ್ಧಿಷ್ಟಾವಧಿಯ ತನಕ ಕಾರಾಗೃಹಕ್ಕೆ ತಳ್ಳಲಾಗುವುದು‌. ಯಾವುದೇ ವ್ಯಕ್ತಿಯ ಮೇಲೆ ಅನುಮಾನ ಬಂದರೆ ತಕ್ಷಣಕ್ಕೆ ಅವನನ್ನು ಬಂಧಿಸುವ ಹಾಗೂ ಬೇಕಾದಷ್ಟು ಶಿಕ್ಷೆ ವಿಧಿಸುವ ಅಧಿಕಾರ ಬ್ರಿಟೀಷ್ ಸರ್ಕಾರಕ್ಕಿದೆ‌‌. ಬ್ರಿಟಿಷ್ ಸರ್ಕಾರದ ವಿರುದ್ಧ ಸಿಡಿದೇಳುವ ವ್ಯಕ್ತಿಗೆ ವಾರಂಟ್ ಹಾಗೂ ನ್ಯಾಯಾಂಗ ತನಿಖೆ ಇಲ್ಲದೆ ಶಿಕ್ಷಿಸುವ ಸಂಪೂರ್ಣ ಅಧಿಕಾರವನ್ನು ಬ್ರಿಟಿಷ್ ಸರ್ಕಾರಕ್ಕೆ ನೀಡಲಾಗಿದೆಯಲ್ಲದೆ ಯಾವುದಾದರೂ ಕೃತ್ಯಗಳಲ್ಲಿ ಭಾಗಿಯಾದವರ ನ್ಯಾಯಾಂಗ ವಿಚಾರಣೆ ವೇಳೆ ಸಾಕ್ಷಿಗಳನ್ನು ಆರೋಪಿಗೆ ತೋರಿಸುವಂತಿರಲ್ಲಿಲ್ಲ. ಆಪಾಧಿತನನ್ನು ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಎದುರಾದರೆ ಅಂತಹ ವ್ಯಕ್ತಿ ಮುಂದೆ ಯಾವುದೇ ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂಬ ಮುಚ್ಚಳಿಕೆ ಬರೆದು ಕೊಡಬೇಕು ಎಂಬ ಅಂಶಗಳಿದ್ದವು. ಹೀಗಿರುವಾಗ ನಿರಂತರ ತುಳಿತ ಅನುಭವಿಸಿದ ಕ್ಷಾತ್ರತೇಜರು ಮತ್ತಷ್ಟು ಬಂಧನ ಸಹಿಸುವುದಾದರೂ ಹೇಗೆ? ಬ್ರಿಟಿಷರ ಸಾಲು-ಸಾಲು ಕಾನೂನುಗಳಿಂದ ಬೇಸತ್ತಿದ್ದ ಭಾರತೀಯರಲ್ಲಿನ ಸಹಜ ಕ್ಷಾತ್ರಗುಣ ಉದ್ರಿಕ್ತವಾಗಿ ಸಿಡಿದೇಳುವ ಭರದಲ್ಲಿತ್ತು. ಆಗಲೇ 1919ರಲ್ಲಿ ಈ ಕಾಯ್ದೆ ವಿರೋಧಿಸಲೆಂದು ದೆಹಲಿ, ಪಂಜಾಬ್ ಸೇರಿದಂತೆ ಅನೇಕಕಡೆಗಳಲ್ಲಿ ಹರತಾಳ ಆರಂಭವಾದವು. ಅಂತೆಯೇ ಜಲಿಯನ್ ವಾಲಾಬಾಗ್‌ನಲ್ಲೂ ಕೂಡ ಪ್ರತಿಭಟನೆಗೆ ಯೋಜನೆ ರೂಪಿಸಲಾಗಿತ್ತು. ಈ ಪ್ರತಿಭಟನೆಯ ಶಾಂತಿ ಸಭೆಯ ನೇತೃತ್ವವನ್ನು ಸತ್ಯಪಾಲ್ ಮತ್ತು ಸೈಫುದ್ದೀನ್ ಕಿಚಲೂರವರು ವಹಿಸಬೇಕಿತ್ತು ಆದರೆ ಬ್ರಿಟೀಷರು ಅವರನ್ನು ಬಂಧಿಸಿ ಧರ್ಮಶಾಲಾ ಜೈಲಿಗೆ ರವಾನೆ ಮಾಡಿದ್ದರು.

ಈ ಬಂಧನ ವಿರೋಧಿಸಿ ಸ್ವಾಮಿ ಶ್ರದ್ಧಾನಂದರ ನೇತೃತ್ವದಲ್ಲಿ ಒಂದು ಸಮೀತಿ ರಚನೆಯಾಗಿ ಹೋರಾಟ ನಡೆಯಬೇಕಾದಾಗ ಭಾರತೀಯರ ಒಂದು ಗುಂಪಿನ ಮೇಲೆ ಬ್ರಿಟೀಷರು ಹಠಾತ್ತಾಗಿ ದಾಳಿ ಮಾಡಿ ಒಬ್ಬನನ್ನು ಹೊಡೆದುರುಳಿಸಿದರು. ಈ ಪರಿಣಾಮ ವಾತಾವರಣ ಪ್ರಕ್ಷುಬ್ಧವಾಗಿ ಗೋಲಿಬಾರ್ ನಡೆದು 20 ಜನ ಅಮಾಯಕ ಭಾರತೀಯರು ಹತರಾದರು. ಇದರ ಪ್ರತೀಕಾರಕ್ಕಾಗಿ ಭಾರತೀಯರು ಹವಣಿಸುತ್ತಿದ್ದರು.

ಆಗಲೇ ಏಪ್ರಿಲ್ 11,1919 ರ ದಿನ ಅಮೃತಸರದ ಕೂಚಾಕುರಿಚ್ಚಾನ್ ಎಂಬ ರಸ್ತೆಯ ಮೂಲಕ ಹೊರಟಿದ್ದ ಮಾರ್ಸಿಲ್ಲಾ ಶೇರ್‌ವುಡ್ ಎಂಬ ಮಹಿಳೆಯ ಮೇಲೆ ಸಹಜ ಕೋಪದ ಕಾರಣಕ್ಕೆ ಭಾರತೀಯರು ದಾಳಿ ಮಾಡಿದರು. ಆಕೆಗೆ ಗಂಭೀರ ಗಾಯಗಳಾದವು ಹಾಗೂ ಆಕೆ ಇದ್ದ ಗೋವಿಂದಗಢದ ಕೋಟೆಗೆ ರೆಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡಯರ್(ಆರ್.ಇ.ಜಿ ಡಯರ್) ಭೇಟಿ ಇತ್ತು ವಿಚಾರಿಸಿದಾಗ ಆಕೆ ನಡೆದದ್ದನ್ನು ಹೇಳಿದ್ದಷ್ಟೇ, ಡಯರ್ ಒಂದು ರೀತಿ ಹುಚ್ಚನಾಗಿಬಿಟ್ಟ! ಆ ರಸ್ತೆಯಲ್ಲಿ ನಡೆದಾಡುವ ಜನ ಇನ್ನುಮುಂದೆ ತೆವಳಿಕೊಂಡು ಹೋಗಬೇಕು ಆಗದಿದ್ದರೆ ರಸ್ತೆಯುದ್ದಕೂ ಛಡಿಯೇಟಿನ ಶಿಕ್ಷೆ ಅನುಭವಿಸಬೇಕೆಂದು ಆದೇಶ ಹೊರಡಿಸಿದ. ಯಾಕೆ ಈ ರೀತಿಯ ಶಿಕ್ಷೆ ಎಂದರೆ ಡಯರ್ ಹೇಳಿ “ಭಾರತೀಯರು ತಮ್ಮ ದೇವರುಗಳ ಎದುರು ಮಾತ್ರ ಮಂಡಿಯೂರಿ ಪ್ರಾರ್ಥಿಸುತ್ತಾರೆ, ಹೀಗಾಗಿ ಅವರಿಗೆ ಅವಮಾನಿಸಿದ ಬ್ರಿಟೀಷ್ ಸ್ತ್ರೀ ಕೂಡ ಅವರಿಗೆ ದೇವತೆ ಅನ್ನಿಸಬೇಕು. ಬ್ರಿಟೀಷರು ಅವರ ಪಾಲಿನ ಸಾಕ್ಷಾತ್ ದೇವರು ಎನ್ನಿಸಬೇಕು, ಹೀಗಾಗಿ ಆ ರೀತಿಯ ಆದೇಶವಿತ್ತಿದ್ದೇನೆ”. ಹೀಗೆಂದ ಅವನ ಹೇಯ ಮನಸ್ಥಿತಿಯನ್ನೊಮ್ಮೆ ನೋಡಿ! ಅದೆಂಥ ಸಮಾಜೋಧಾರ್ಮಿಕ ದಾಳಿ?

ಇಷ್ಟೆಲ್ಲಾ ಸಂಭವಿಸಿದಾದ ನಂತರ ಜಲಿಯನ್ ವಾಲಾಬಾಗ್ ಉದ್ಯಾನವನ ಪ್ರದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವ ಉದ್ದೇಶ ಸೇರಿದಂತೆ ಅನೇಕ ಕಾರಣಗಳಿಗೆ ಪುರುಷರು, ಮಹಿಳೆಯರು, ಮಕ್ಕಳು, ವೃದ್ಧರು, ತರುಣರಾದಿಯಾಗಿ ಸುಮಾರು 20,000ದಷ್ಟು ಜನ ಸೇರಿದ್ದರು. ಮೊದಲೇ ಬ್ರಿಗೇಡಿಯರ್ ಡಯರನು ಎಲ್ಲಿಯೂ ಜನ ಗುಂಪು ಸೇರಬಾರದೆಂದು ಆದೇಶಿಸಿದ್ದನಾದರೂ ಅಂದು ಬೈಸಾಕಿ ಹಬ್ಬವಾದ್ದರಿಂದ ಪಂಜಾಬಿನ ಜನ ಸೇರಲೇಬೇಕಿತ್ತು. ಈ ವಿಷಯ ಮಧ್ಯಾಹ್ನದ ಹೊತ್ತಿಗೆ ಪೋಲಿಸ್ ಗುಪ್ತಚರರಿಂದ ಅವನ ಕಿವಿಗೆ ಬಿತ್ತು. ವಿವಿಧ ಉದ್ದೇಶಗಳಿಂದ ಸೇರಿದ್ದ ಅಷ್ಟೂ ಜನ ಉದ್ಯಾನವನದಲ್ಲಿದ್ದಾಗ ಸಮಯ ಇಳಿ ಸಂಜೆಯ 4.30ರ ಸುಮಾರು. ಡಯರನು ತನ್ನ ಸೇನೆಯೊಂದೆ ಒಳ ನುಗ್ಗಿದವನೇ ಆ ಉದ್ಯಾನವನದ ಐದು ಕಿರು ಪ್ರವೇಶ ದ್ವಾರಗಳನ್ನು ಮುಚ್ಚಿಸಿದನು. ಹಿರಿದಾದ ಮುಖ್ಯದ್ವಾರದಲಿ ತನ್ನ 90 ಮಷಿನ್ ಗನ್ನುಗಳೊಂದಿಗೆ ಸೇನೆಯನ್ನು ನಿಲ್ಲಿಸಿಕೊಂಡು ನಿಂತಹ ಆತ ಒಂದು ಆದೇಶವಿತ್ತ! “ಯಾರೆಲ್ಲಾ ಇಲ್ಲಿ ಸಭೆಗಾಗಿ ಸೇರಿದ್ದೀರೋ ಮೊಟಕುಗೊಳಿಸಿ ಇಲ್ಲಿಂದ ಹೊರಟುಬಿಡಿ”. ಏನು ಮಾಡಬೇಕೆಂದು ಯಾರಿಗೂ ತೋಚಲಿಲ್ಲ…

ಯಾಕೆಂದರೆ ಜಲಿಯನ್ ವಾಲಾಬಾಗ್ ಅಷ್ಟು ಕ್ಲೀಷ್ಟವಾದ ಪ್ರದೇಶವಾಗಿತ್ತು. ಉದ್ಯಾನವನದ ಹತ್ತು ಅಡಿ ಎತ್ತರದ ಗೋಡೆಗಳು, ಮೂರ್ನಾಲ್ಕು ಅಡಿಯ ತಗ್ಗು ಪ್ರದೇಶ, ಐದು ಕಿರಿದಾದ ಪ್ರವೇಶ ದ್ವಾರಗಳು ಹಾಗೂ ಒಂದು ಐದು ಅಡಿ ಎತ್ತರದ ಮುಖ್ಯ ದ್ವಾರ. ಅಷ್ಟು ಎತ್ತರದ ಗೋಡೆ ಹತ್ತಲೂ ಆಗದು, ದ್ವಾರಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಲಾಗಿದೆ ಆದ್ದರಿಂದ ಆಚೆಗೂ ಹೋಗಲು ಸಾಧ್ಯವಿಲ್ಲ. 40 ಜನ ಗೂರ್ಖಾಗಳು ಕುಕ್ರಿ ಹಿಡಿದು ನಿಂತಿದ್ದರೆ, 25 ಜನ ಬಲೂಚಿ ಸೈನಿಕರು, 25 ಜನ ಗೂರ್ಖಾ ಸೈನಿಕರು ಬಂದೂಕುಧಾರಿಗಳಾಗಿ ನಿಂತಿದ್ದರು‌. ನೋಡನೋಡುತ್ತಿದ್ದಂತೆ ಜನರಿಗೆ ಏನೂ ಸೂಚನೆ ಇಲ್ಲದೆ ಡಯರ್ ಗುಂಡು ಹಾರಿಸಲು ” ಅಟ್ಯಾಕ್” ಎಂಬ ಆದೇಶವಿತ್ತ. ತಪ್ಪಿಸಿಕೊಳ್ಳಲು ಕೆಲವರು ಬಾವಿಗೆ ಹಾರಿದರು, ಬಚಾವ್ ಎನ್ನುವಷ್ಟರಲ್ಲಿ ಮತ್ತಷ್ಟು ಜನ ಮೇಲಿಂದ ನೆಗೆದರು ಪರಿಣಾಮ ಆ ಪುಟ್ಟ ಬಾವಿಯಲ್ಲಿಯೇ 120 ಅಮಾಯಕರ ಉಸಿರು ನಿಂತುಹೋಗಿತ್ತು. ಇತ್ತ ಚಂಡಮಾರುತ ಬೀಸಿದ್ದರಿಂದ ಹಠಾತ್ತಾಗಿ ಸಂಭವಿಸುವ ಗುಡುಗು ಸಹಿತ ಭಾರೀ ಮಳೆಯಂತೆ ಗುಂಡುಗಳು ಸುರಿದು, ಪ್ರವಾಹದ ತೆರೆಯೆಂತೆ ನೆತ್ತರಿನ ಕಾಲುವೆ ತುಂಬಿ ಹರಿಯಲಾರಂಭಿಸಿತು.

ಹತ್ತು ನಿಮಿಷಗಳ ಕಾಲ ನಿರಂತರವಾಗಿ ಅಬ್ಬರಿಸಿ ಬೊಬ್ಬೊರಿವ ಮಳೆಯಂತೆ 1650 ಸುತ್ತುಗಳ ಗುಂಡಿನ ಮಳೆ ಸುರಿಯಿತು. ನಡು ನಡುವೆ ಕಂಗೆಡಿಸುವ ಗುಡುಗು-ಸಿಡಿಲಂತೆ ಈ ದಾಳಿಯ ಮಧ್ಯ ಡಯರ್ ತನ್ನ ಸೈನಿಕರಿಗೆ ಹೇಳುತ್ತಿದ್ದ ” ನಿಮ್ಮ ಬಂದೂಕಿನಿಂದ ಹೊರಟ ಒಂದೂ ಗುಂಡು ವ್ಯರ್ಥವಾಗಬಾರದು, ಒಂದೊಂದು ಗುಂಡು ಒಬ್ಬೊಬ್ಬ ಭಾರತೀಯನ ನೆತ್ತರು ಹೀರಬೇಕು! ನಿಮಗೆ ಹಾಕಿದ ಅನ್ನದ ಒಂದಗಳೂ ವ್ಯರ್ಥವಾಗಬಾರದು. ಹಾಕಿದ ಅನ್ನಕ್ಕೆ ನೀವು ನೀಡುವ ಪ್ರತ್ಯುಪಕಾರ ಇದೆ.” ಛೇ! ಅದೆಂಥಾ ಕ್ರೌರ್ಯ? ಅದೆಂಥ ದಾರ್ಷ್ಯ? ಶಾಂತಿದೂತ ಏಸುವಿನ ಜನಾಂಗೀಯನಾದ ಈತನ ಹವಣಿಕೆ ನೋಡಿದರೆ ಎಂದಾದರೂ ಅನ್ನಿಸುವುದೇ ಇವರೆಲ್ಲ ನಿಜವಾಗಿಯೂ ಏಸುವಿನ ಅನುಚಾರಕರೆಂದು? ಎಂದಾದರೂ ಒಪ್ಪಲಾದೀತೆ ಇವರ ಹುಸಿ ಧರ್ಮ ಬೋಧೆಯನು? ಅಯ್ಯೋ ಬಿಡಿ! ಇಂದಿಗೂ ಒಳ ಮರ್ಮವರಿಯದೆ ಎಂಜಲುಗಾಸಿಗೆ ಅವರ ಬೂಟು ನೆಕ್ಕುವ ನಮಗೆ ಇದೆಲ್ಲ ಅರ್ಥ ಹೇಗಾದೀತು? ನಮಗೇನಿದ್ದರೂ ಪರರದ್ದೇ ಪರಮಾದ್ಭುತ, ಸ್ವಂತದ್ದು ಅಸಹ್ಯ! ಅದು ಬಿಡಿ ಡಯರನ ಕ್ರೌರ್ಯ ಇಲ್ಲಿಗೆ ಮುಗಿಯಲಿಲ್ಲ‌. ಕನ್ನಡದವರೇ ಆದ, ಅಂದಿನ ಕಾರ್ಯಕ್ರಮದ ವರದಿ ಮಾಡಲು ಹೋಗಿದ್ದ ಪಂಡೀತ್ ಸುಧಾಕರ್ ಚತುರ್ವೇದಿಯವರು ಚರಂಡಿಯಲ್ಲಿ ಕುಳಿತು ಹತ್ಯಾಕಾಂಡವನ್ನು ಕಣ್ಣಾರೆ ನೋಡಿ ಉಲ್ಲೇಖಿಸುತ್ತಾರೆ, ಅಂದು ಒಟ್ಟು ಪ್ರಾಣತ್ಯಾಗ ಮಾಡಿದವರು 1,516 ಜನ ಹಾಗೂ ಗಾಯಾಳುಗಳಾದವರು 1,650ಕ್ಕೂ ಹೆಚ್ಚು ಜನ. ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಕನಿಷ್ಟ ಸೌಜನ್ಯವನ್ನು ಬ್ರಿಟೀಷರು ತೋರಲಿಲ್ಲ. ಮಡಿದ ಜನರ ಅಂತ್ಯ ಸಂಸ್ಕಾರಕ್ಕೂ ಜನ ಇರಲಿಲ್ಲ! ರಾವಿ ನದಿಯ ತಟದಲ್ಲಿ ಶವಗಳನ್ನು ಸುಡಲು ಇರಿಸಿದ್ದ ಕಟ್ಟಿಗೆಯ ಒಂದೊಂದೆ ಚಿತೆಯ ಮೇಲೆ ಏಕಕಾಲಕ್ಕೆ ನಾಲ್ಕೈದು ಹೆಣಗಳನ್ನು ಎಳೆದು ಹಾಕಿ ಸುಡಲಾಯ್ತು. ಸತ್ತುಹೋದವರ ಸಂಬಂಧಿಕರು ಹೆಣಕ್ಕಾಗಿ ತಡಕಾಡಿ ತಮ್ಮವರ ಶವ ಸಿಕ್ಕಾಗ ಜೋರಾಗಿ ಜಿತ್ಕಾರಗೈದರೆ ಅವರಿಗೂ ಗುಂಡು ಹಾರಿಸುವ ಹೇಯ ಕೆಲಸ ಮಾಡುತ್ತಾರೆ ಆ ಅಧಿಕಾರಿಗಳು.

ಈ ಇಡೀಯ ಹತ್ಯಾಕಾಂಡದ ವರದಿ ನೀಡಲು ಹಂಟರ್ ಕಮಿಷನ್ ನೇಮಿಸಲಾಗುತ್ತದೆ. ಒಂದೂವರೆ ವರ್ಷಗಳ ಕಾಲ ಅಧ್ಯಯನ ಮಾಡಿದ ಹಂಟರ್ ಕಮಿಷನ್ ಹತ್ಯಾಕಾಂಡದಲ್ಲಿ ತೀರಿದವರು ಕೇವಲ 379 ಜನ ಹಾಗೂ ಗಾಯಗೊಂಡವರು 1100 ಜನ ಎಂದು ವರದಿ ನೀಡುತ್ತದೆ. ಇದರ ಬೆನ್ನಲ್ಲೇ ಸ್ವಾಮಿ ಶ್ರದ್ಧಾನಂದರು ಸಲ್ಲಿಸಿದ ವರದಿಯಲ್ಲಿ 1650 ಜನ ಹತರಾಗಿದ್ದರು ಮತ್ತು ಇದಕ್ಕೂ ಹೆಚ್ಚುಜನ ಗಾಯಗೊಂಡಿದ್ದರು ಎಂದು ಹೇಳಿದರೆ ಕಾಂಗ್ರೇಸ್ ವರದಿಯಲ್ಲಿ 1200 ಜನ ನಿಧನರಾಗಿದ್ದಾರೆ ಮತ್ತು 1500 ಜನ ಗಾಯಗೊಂಡಿದ್ದರೆಂದು ಉಲ್ಲೇಖಿಸಲಾಗಿದೆ. ಇಷ್ಟೆಲ್ಲಾ ಇದ್ದಾಗಲೂ ಸುಳ್ಳು ವರದಿಯನ್ನೇ ಸತ್ಯ ಎಂದೂ ಸಾಬೀತು ಮಾಡಿ ನಂತರ ಒತ್ತಡಕ್ಕೆ ಮಣಿದು ಡಯರನನ್ನು ಅಂಗ್ಲೇಯರು ತಮ್ಮ ದೇಶಕ್ಕೆ ಮರಳಿ ಕಳುಹಿಸಿದರಾದರೂ ಅಲ್ಲಿ ಅವನಿಗೆ ಹತ್ತುಸಾವಿರ ಪೌಂಡುಗಳಷ್ಟು ಹಣ ನೀಡಿ, ಹಾರ-ತುರಾಯಿಗಳೊಂದಿಗೆ ಸನ್ಮಾನಿಸಿ ಎಸಗುದ ಹೇಯ ಕೃತ್ಯಕ್ಕೆ ಗೌರವ ಸಲ್ಲಿಸಿದರು. ಮಾನವ ಜನಾಂಗವೇ ತಲೆ ತಗ್ಗಿಸುವಂತಹ ಈ ಘಟನೆಗೆ ಇಂಗ್ಲೇಂಡಿನ ಒಬ್ಬೆ ಒಬ್ಬ ಕ್ಷಮೆಯಾಚಿಸಲಿಲ್ಲದ್ದು ಕ್ರೈಸ್ತ ದಾಳಿಕೋರರ ಮನಸ್ಥಿತಿಯ ರೂಪಕವಾಗಿದೆ.

ಭಾರತೀಯರ ಹತ್ಯೆಗೈದು ಬೀಗಿದ ಡಯರನನ್ನು ದಶಕಗಳ ಬಳಿಕ ಕ್ರಾಂತಿಕಾರಿ ಉಧಮ್ ಸಿಂಗ್ ಹೊಡೆದುರುಳಿಸಿ ಹಿಂಸಾಚಾರಕ್ಕೆ ಪ್ರತೀಕಾರ ತೆಗೆದುಕೊಂಡ. ಸಾವಿರಾರು ಭಾರತೀಯರ ನೆತ್ತರು ಹರಿಸಿದ್ದ ಡಯರನ ರಕ್ತದ ಕೊಳೆಯನ್ನು ನಮ್ಮ ರಾಷ್ಟ್ರದ ಮಣ್ಣಿಗಂಟಿಸದೆ ಪಾಪಿ ಆಂಗ್ಲೇಯರ ನೆಲದಲ್ಲಿಯೇ ಹರಿಸಿ ಸ್ವಾತಂತ್ರ್ಯ ಲಕ್ಷ್ಮೀಗೆ ಬಲಿ ನೀಡಿ ಅಲ್ಲಿಂದಲೇ ನೈವೇದ್ಯ ಗೈದ!

ಮಾನವ ಜಗತ್ತಿನ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಧಾರುಣ ಕೃತ್ಯಕ್ಕೆ ಸಾಕ್ಷಿಯಾಗಿದ್ದು ಜಲಿಯನ್ ವಾಲಾಬಾಗ್. ಇದು ಆಂಗ್ಲರ ಹೀನ ಮನಸ್ಥಿತಿಯನ್ನು ಜಗತ್ತಿಗೆ ತೋರುವ ಜೀವಂತ ಸಾಕ್ಷಿಯಾಗಿ ನಿಂತಿತು. ಸಾವಿರಾರು ಕ್ರಾಂತಿಕಾರಿಗಳ ಉಗಮಕ್ಕೆ ಕಾರಣವಾದ ಘಟನೆಯಾಯಿತು. ಭಗತ್, ಆಜಾದ್, ಬಿಸ್ಮಿಲ್ಲರಂತ ಮಹಾನ್ ಚೇತನರ ಹೋರಾಟಕ್ಕೆ ಪ್ರೇರಣೆಯಾಯಿತು. ಭಾರತದ ಸ್ವಾತಂತ್ಯ ಹೋರಾಟದ ಹಾದಿಗೆ ಮಹಾನ್ ಓಘ ನೀಡಿತು. ಅಂತಹ ಘಟನೆಗೆ ಇಂದಿಗೆ 103 ವರ್ಷಗಳು ಸಂಧಿಸಿವೆ. ಈ ಕಾಲಘಟದಲ್ಲಿ ಅಂದಿನ ಬಲಿದಾನವನ್ನು ನೆನಪಿಸಿಕೊಳ್ಳುವ ಹಾಗೂ ಪ್ರಾಣತ್ಯಾಗ ಮಾಡಿದ ಭಾರತೀಯರಿಗೆ ಅಶೃತರ್ಪಣ ಸಮರ್ಪಿಸುವ ಸ್ವಾಮಿಕಾರ್ಯ ನಮ್ಮಪಾಲಿನದ್ದು. ನಾವೆಲ್ಲಾ ಈ ಘಟನೆಗಳ ಮೆಲಕು ಹಾಕುತ್ತಾ ಸ್ವಾತಂತ್ರ್ಯವೆಂಬ ಜ್ಯೋತಿಯನ್ನು ಕೇಲವ ಶಾಂತಿಯ ಹೋರಾಟದಿಂದ ಜಯಿಸಿದ್ದಲ್ಲ, ಅದಕ್ಕಾಗಿ ಲಕ್ಷಾಂತರ ಜೀವಗಳ ಬಲಿ ಅರ್ಪಿಸಿ ಪಡೆಯಲಾಗಿದೆ ಎಂಬ ಸೂಕ್ಷ್ಮವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ಮಾತೃಭೂಮಿಯ ಸೇವೆಗೆ ಸದಾ ಜಾಗೃತರಾಗಬೇಕಿದೆ!

-ಕಿರಣಕುಮಾರ ವಿವೇಕವಂಶಿ

Leave a Reply

Your email address will not be published.

This site uses Akismet to reduce spam. Learn how your comment data is processed.