ಬೆಂಗಳೂರು, 13 ಜನವರಿ 2024: ಯುವ ಸಮುದಾಯ ಪ್ರತಿ ರಾಷ್ಟ್ರದ ಅತ್ಯುಮೂಲ್ಯ ಸಂಪತ್ತು. ಭಾರತದ ಬೆಳವಣಿಗೆ ವಿಶ್ವದ ಕಲ್ಯಾಣಕ್ಕಾಗಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಯುವಕರು ಕಾರ್ಯನಿರ್ವಹಿಸಬೇಕು. ಅದಕ್ಕಾಗಿ ಇಂದು ಚೆನ್ನಾಗಿ ಮಾಡುವ ಕೆಲಸವನ್ನು ನಾಳೆ ಅತ್ಯುತ್ತಮವಾಗಿ ಮಾಡಲು ಕಲಿಯಬೇಕು. ಇಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನಿಮ್ಮ ಆಲೋಚನೆಗಳಂತೆ ನೀವಾಗುತ್ತೀರಿ ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯು ಪ್ರೇರಣೆ ಎಂದು ಇಂಡಿಯಾ ಫೌಂಡೇಶನ್ ನ ಅಕಾಡೆಮಿಕ್ಸ್ ಮತ್ತು ರಿಸರ್ಚ್ ವಿಭಾಗದ ಡೆಪ್ಯುಟಿ ಡೈರೆಕರ್ ಡಾ. ಸೃಷ್ಟಿ ಫುಕ್ರೇಮ್ ಹೇಳಿದರು.

ಸಮರ್ಥ ಭಾರತದ ವತಿಯಿಂದ ನಡೆಯುತ್ತಿರುವ ‘ಬಿ ಗುಡ್ ಡು ಗುಡ್’ ಅಭಿಯಾನದ ಆನ್ ಲೈನ್ ಉಪನ್ಯಾಸ ಸರಣಿಯ ಮೊದಲನೇ ದಿನ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು, ಯುವಕರು ಅನೇಕ ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಮಾತುಗಳು ಯುವಕರಿಗೆ ದಾರಿದೀಪದಂತೆ ಕಾರ್ಯ ನಿರ್ವಹಿಸುತ್ತದೆ. ವಿವೇಕಾನಂದರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಾವು ಅವರಿಗೆ ನೀಡುವ ಗೌರವ. ನಮ್ಮ ಕೆಲಸಗಳನ್ನು ನಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಮಾಡುವುದು ಅವರ ಚಿಂತನೆಗೆ ಪೂರಕ ಎಂದರು.

ಇಂದಿನ ಯುವಜನತೆ ನಮ್ಮ ಇತಿಹಾಸದಿಂದ ದೂರ ಉಳಿದಿದ್ದಾರೆ. ನಮ್ಮ ಪೂರ್ವಜರು ನಮ್ಮ ಹೆಮ್ಮೆ ಎನ್ನುವುದನ್ನು ನಾವು ಅರಿಯಬೇಕು. ಭಾರತದ ಮಹಾಕಾವ್ಯಗಳು ಕಲಿಕೆಯ ಅದ್ಭುತವಾದಂತಹ ಮೂಲಗಳು. ರಾಮಾಯಣ ಮಹಾಭಾರತ ಕಾವ್ಯಗಳು ಮಾನವನ ದ್ವಂದ್ವ ಪರಿಸ್ಥಿತಿಗಳಿಗೆ ಪರಿಹಾರವನ್ನು ಅರಿಯುವುದರಲ್ಲಿ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ತಂಡವಾಗಿ ಕೆಲಸ ಮಾಡುವುದು ಇಂದಿನ ಅಗತ್ಯತೆ. ಕೌಶಲ್ಯಯುತವಾಗಿ ಒಗ್ಗಟ್ಟಾಗಿ ಕಲಿಯುವುದನ್ನು ಅರಿಯಬೇಕು. ಅನುಭವದ ಆಧಾರಿತ ಶಿಕ್ಷಣ ನಮ್ಮದಾಗಬೇಕು. ಈ ಉದ್ದೇಶದಿಂದಲೇ ಶಿಕ್ಷಣದ ಕುರಿತು ವಿವೇಕಾನಂದರು ತಿಳಿಸಿದ ಸಂಗತಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿ – 2020 ಅಳವಡಿಸಿಕೊಳ್ಳಲಾಗಿದೆ. ಇಂದಿನ ಯುವಕರ ಅಸ್ತ್ರ ಸಾಮಾಜಿಕ ಜಾಲತಾಣಗಳು. ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೇವೆಗೆ ಮುಂದಾಗುವುದನ್ನು ಅರಿಯಬೇಕು ಎಂದು ನುಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.