Sneha Updhyaya- Girl Commits suicide on drug abuse , Mangalore

ನೇರ ನೋಟ: ದು.ಗು.ಲಕ್ಷ್ಮಣ್

 ಇದುವರೆಗೆ ಎಲ್ಲೋ ಕೆಲವೆಡೆ ನಡೆಯುತ್ತಿದ್ದ ವೇಶ್ಯಾವಾಟಿಕೆ ಇದೀಗ ಪ್ಲೇಬಾಯ್ ಕ್ಲಬ್ ಮೂಲಕ ಅಧಿಕೃತಗೊಳ್ಳುವ ವಿದ್ಯಮಾನ ಸನ್ನಿಹಿತವಾಗಿದೆ. ಏಡ್ಸ್ ರೋಗವಲ್ಲದೆ ಲೈಂಗಿಕ ಅರಾಜಕತೆ, ಅನೈತಿಕತೆಗಳಿಗೆ ಕೆಂಪುಹಾಸಿನ ಸ್ವಾಗತ ಕೋರುವ ಪ್ಲೇಬಾಯ್ ಕ್ಲಬ್ ಮೊದಲು ನೈತಿಕ ಮುಸುಕು ಹಾಕಿಕೊಂಡೇ ಬರುತ್ತದೆ ಎನ್ನುವುದನ್ನು ನಮ್ಮ ಸರ್ಕಾರ, ಜನರು ಮರೆಯಕೂಡದು. ಇಂದು ಅಲ್ಲೊಂದು ಇಲ್ಲೊಂದು ಮಾದಕದ್ರವ್ಯ ವ್ಯಸನಿ ಸ್ನೇಹಾಳಂಥ ಯುವತಿಯರು ಕಂಡುಬಂದರೆ ಮುಂದೆ ಪ್ರತೀ ಊರುಗಳಲ್ಲೂ ಇಂತಹ ಅನಿಷ್ಟಪಿಡುಗಿಗೆ ಬಲಿಯಾಗುವ ಯುವಕ-ಯುವತಿಯರ ನೂರಾರು, ಸಾವಿರಾರು ಸಮಾಧಿಗಳು ಕಂಡುಬರಬಹುದು!

ಸ್ನೇಹಾ ಉಪಾಧ್ಯಾಯ. ಅಗಲ ಕಣ್ಣುಗಳ, ಅಮಾಯಕ ನೋಟದ ಈ ಕಾಲೇಜು ವಿದ್ಯಾರ್ಥಿನಿಯ ಹೆಸರನ್ನು ಈಗ ನೆನಪಿಸಿಕೊಂಡರೆ ಅವಳ ಓರಗೆಯವರಿಗೆ ಗಾಬರಿಯಾಗುತ್ತದೆ. ಆಕೆಯ ತಂದೆ-ತಾಯಿಗೆ ದುಃಖ ಉಕ್ಕಿಬಂದು ಕಣ್ಣೀರು ಹರಿಯುತ್ತದೆ. ಪ್ರಜ್ಞಾವಂತರಿಗೆ ಖೇದವೆನಿಸುತ್ತದೆ. ಒಂದು ವಾರದ ಮೊದಲು ಈ ಸ್ನೇಹಾ ಯಾರೆಂಬುದೇ ಜಗತ್ತಿಗೆ ಗೊತ್ತಿರಲಿಲ್ಲ. ತುಂಬಾ ಹತ್ತಿರದವರಿಗೆ ಮಾತ್ರ ಆಕೆಯ ಬಗ್ಗೆ ತಿಳಿದಿತ್ತು. ಆದರೀಗ ಎಲ್ಲರಿಗೂ ಆಕೆ ಯಾರೆಂದು ತಿಳಿದುಹೋಗಿದೆ. ಆದರೆ ಆಕೆಯ ಪರಿಚಯ ಈ ರೀತಿಯಲ್ಲಿ ಜಗತ್ತಿಗೆ ಆಗಬಾರದಿತ್ತು.

Sneha Updhyaya- Girl Commits suicide on drug abuse , Mangalore
Sneha Updhyaya- Girl Commits suicide on drug abuse , Mangalore

ಹೌದು, ಮಾದಕದ್ರವ್ಯವ್ಯಸನಿಯಾಗಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಸ್ನೇಹಾ ಉಪಾಧ್ಯಾಯ ಭವಿಷ್ಯದಲ್ಲಿ ಯಾವ ಉತ್ತುಂಗಕ್ಕೇರುತ್ತಿದ್ದಳೋ ಗೊತ್ತಿಲ್ಲ. ಆದರೆ ತನ್ನ ಸುಂದರ ಭವಿಷ್ಯವನ್ನು ಕೈಯಾರೆ ಹೊಸಕಿ ಹಾಕಿದಳು. ಯಾರದೋ ಪ್ರಚೋದನೆಗೊಳಗಾಗಿ ಮಾದಕದ್ರವ್ಯ ವ್ಯಸನಿಯಾದಳು. ಮಾದಕದ್ರವ್ಯ ಖರೀದಿಸಲು ತಾಯಿಯ ಬಳಿ ಒಂದೂವರೆ ಸಾವಿರ ಹಣ ಬೇಕೆಂದು ಪೀಡಿಸಿದಳು. ತಾಯಿ ನಿರಾಕರಿಸಿದಾಗ ಸಿಟ್ಟಿಗೆದ್ದು ರಾತ್ರಿ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು. ಮರುದಿನ ಬೆಳಿಗ್ಗೆ ಅವಳು ಕಂಡಿದ್ದು ಹೆಣವಾಗಿ. ತನ್ನ ಭವಿಷ್ಯಕ್ಕೆ ತಾನೇ ಕೈಯಾರೆ ಸಮಾಧಿ ಕಟ್ಟಿದ ಈ ಹುಡುಗಿಗೆ ಏನೆನ್ನಬೇಕು?

ಸ್ನೇಹಾ ಉಪಾಧ್ಯಾಯ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದಾಗ ಮಂಗಳೂರಿನ 17ರ ಹರೆಯದ ಇನ್ನೊಬ್ಬ ಹುಡುಗಿ ಆರತಿ (ಹೆಸರು ಬದಲಾಯಿಸಲಾಗಿದೆ) ಬಿಕ್ಕಿಬಿಕ್ಕಿ ಅತ್ತಳು. ತನಗಂಟಿದ ಮಾದಕದ್ರವ್ಯ ವ್ಯಸನವನ್ನು ತೊರೆಯದಿದ್ದಲ್ಲಿ ತನಗೂ ಇಂತಹದೇ ಸಾವು ಬರುತ್ತಿತ್ತು ಎಂದು ಆರತಿ ತನ್ನ ತಾಯಿಯ ಬಳಿ ಹೇಳಿದಳಂತೆ. ಹಾಗೆಂದು ಆಕೆಯ ತಂದೆ ಅರ್ಜುನ್ ಹೇಳುತ್ತಾರೆ. ‘ನಿಜಕ್ಕೂ ನಾನು ಅದೃಷ್ಟವಂತನಾಗಿದ್ದೆ. ನನ್ನ ಮಗಳು ಮಾದಕದ್ರವ್ಯ ವ್ಯಸನಿಯಾಗಿದ್ದಳೆಂಬ ವಿಷಯ ಸಕಾಲಕ್ಕೆ ಗೊತ್ತಾಗಿದ್ದರಿಂದ ತಕ್ಷಣ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಯಿತು. ಈ ಚಿಕಿತ್ಸೆಗಾಗಿ ಹಣ, ಒಡವೆ ಮತ್ತು ಮನೆಯನ್ನೂ ಕಳೆದುಕೊಳ್ಳಬೇಕಾಯಿತು. ಆದರೂ ಅವಳನ್ನು ಜೀವಸಹಿತ ಉಳಿಸಿಕೊಳ್ಳಲು ಸಾಧ್ಯವಾಗಿದ್ದಕ್ಕೆ ನನಗೆ ಸಂತೋಷವೆನಿಸಿದೆ’ ಎಂದು ಅರ್ಜುನ್ ಹೇಳುವಾಗ ಅವರ ಕಣ್ಣಂಚಿನಲ್ಲಿ ಆನಂದಬಾಷ್ಪ ಜಿನುಗುತ್ತದೆ.

ಅದು 2011ರ ಆಗಸ್ಟ್ 4. ಅರ್ಜುನ್ ಅವರ ಮಗಳು ಆರತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುಗೆ ಅವಸರದಲ್ಲಿ ಸೇರಿಸಲಾಗಿತ್ತು. ಆರತಿಯದು ವಿಪರೀತ ನಡವಳಿಕೆ ಹಾಗೂ ವೈಟ್ನರ್ (ಶಾಯಿಯಲ್ಲಿ ಬರೆದಿದ್ದನ್ನು ಅಳಿಸುವ ರಾಸಾಯನಿಕ) ಪದೇಪದೇ ಬೇಕೆಂದು ಪೀಡಿಸುವ ಸ್ವಭಾವ. ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅರ್ಜುನ್ ಅವರ ಮಗಳನ್ನು ಮುಂಬೈಗೆ ಸಾಗಿಸಲು ಆಕೆಯ ಸ್ನೇಹಿತರು ಹುನ್ನಾರ ನಡೆಸಿದ್ದರು. ಒಂದು ದಿನ ಕಾಲೇಜಿನಿಂದ ಆರತಿ ಮನೆಗೆ ಹಿಂದಿರುಗದಿದ್ದಾಗ ಅರ್ಜುನ್ ತಕ್ಷಣ ಪೊಲೀಸರಿಗೆ ದೂರು ನೀಡಿದರು. ಆದರೆ ಅಷ್ಟರಲ್ಲೇ ಮಗಳು ಆರತಿ ಮುಂಬೈಗೆ ಪ್ರಯಾಣಿಸಲು ರೈಲ್ವೇ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಮಾಹಿತಿ ದೊರಕಿತು. ಆಕೆಯ ಸ್ನೇಹಿತರು ನಿಲ್ದಾಣದವರೆಗೆ ಮಾತ್ರ ಬಂದಿದ್ದರು. ಅನಂತರ ಆಕೆಯನ್ನು ಕೈಬಿಟ್ಟಿದ್ದರು. ಆ ದಿನ ರೈಲು ತಡವಾಗಿದ್ದರಿಂದ ಆರತಿ ಮುಂಬೈಗೆ ಹೋಗದೆ ಮಂಗಳೂರಿನಲ್ಲೇ ಉಳಿದುಕೊಂಡಳು. ಒಂದು ವೇಳೆ ಮುಂಬೈಗೆ ಹೋಗಿದ್ದರೆ ಆಕೆಯ ಗತಿ ಏನಾಗುತ್ತಿತ್ತೊ..!

ಆರತಿಗೆ ಡ್ರಗ್ಸ್ ಚಟ ಶುರುವಾಗಿದ್ದು ಮಂಗಳೂರಿನ ಪ್ರತಿಷ್ಠಿತ ಪದವಿಪೂರ್ವ ಕಾಲೇಜೊಂದಕ್ಕೆ ಸೇರಿದ ಬಳಿಕ. ಅವಳಿಗೆ ಇಬ್ಬರು ಸ್ನೇಹಿತರು ಆಗಾಗ ಫಿಜ್ಜಾ , ಚಾಕಲೇಟ್ ಮೊದಲಾದ ತಿನಿಸುಗಳನ್ನು ಕೊಡುತ್ತಿದ್ದರು. ಒಮ್ಮೆ ಅರ್ಜುನ್ ಮಂಗಳೂರಿನಿಂದ ಹೊರಗೆ ಕೆಲಸದ ನಿಮಿತ್ತ ಹೊರಟಾಗ ಈ ಇಬ್ಬರೂ ಸ್ನೇಹಿತೆಯರು ಆರತಿಯ ಜೊತೆ ಆಕೆಯ ಮನೆಗೆ ಬಂದರು. ತಮ್ಮ ತಂದೆ-ತಾಯಿ ದೂರದಲ್ಲಿದ್ದಾರೆ. ಸದ್ಯಕ್ಕೆ ನಿಮ್ಮ ಮಗಳ ಜೊತೆ ಇಲ್ಲೇ ಇರುತ್ತೇವೆ ಎಂದವರು ಅರ್ಜುನ್ ಪತ್ನಿಗೆ ತಿಳಿಸಿದರು. ಅವರು ಆ ಮನೆಯಲ್ಲಿ ತಂಗಿದ್ದಾಗ ಹೊರಗೆ ಊಟ ಮಾಡುತ್ತಿದ್ದರು. ಆಗ ಏನಾಯಿತೋ ಗೊತ್ತಿಲ್ಲ. ಅರ್ಜುನ್ ಮನೆಗೆ ಮರಳಿದ ಬಳಿಕ ಆ ಸ್ನೇಹಿತೆಯರಲ್ಲಿ ಒಬ್ಬಳು ಮಾದಕದ್ರವ್ಯ ವ್ಯಸನಿಯಂತೆ ಕಂಡಳು. ಅವಳನ್ನು ತಕ್ಷಣ ಮನೆಯಿಂದ ಕಳಿಸುವಂತೆ ಮಗಳಿಗೆ ತಾಕೀತು ಮಾಡಿದರು.

ಆರತಿ ಅದಾಗಿ ಮೂರು ತಿಂಗಳ ಕಾಲ ವೈಟ್ನರ್ ಪ್ರಭಾವಕ್ಕೊಳಗಾಗಿದ್ದಳು. ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಆಕೆಯ ರಕ್ತದಲ್ಲಿ ಮಾದಕ ದ್ರವ್ಯ ಸೇರಿರುವುದು ಪತ್ತೆಯಾಯಿತು. ‘ಮಗಳ ಚಿಕಿತ್ಸೆಗಾಗಿ 6 ಲಕ್ಷ ರೂ. ಖರ್ಚು ಮಾಡಿದೆ. ಬಿಜೆಪಿಯ ನಾಯಕ ಶ್ರೀಕರ ಪ್ರಭು ಹಾಗೂ ಬಜರಂಗದಳದ ಶರಣ್ ಪಂಪ್‌ವೆಲ್ ಈ ಸಂದರ್ಭದಲ್ಲಿ ನನಗೆ ತುಂಬಾ ನೆರವಾದರು. 6 ತಿಂಗಳವರೆಗೆ ಆರತಿಗೆ ಮಂಗಳೂರಿನ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು. ಪೂರ್ತಿ ಗುಣಮುಖಳಾದ ಬಳಿಕ ಅವಳನ್ನು ಇನ್ನೊಂದು ಕಾಲೇಜಿಗೆ ಸೇರಿಸಿದೆ. ಆದರೆ ಅಲ್ಲೂ ಡ್ರಗ್ಸ್ ಹಾವಳಿ. ಡ್ರಗ್ಸ್ ಪೂರೈಸುವ ಕಿಡಿಗೇಡಿಗಳು ಅಲ್ಲೂ ಇದ್ದರು. ಮಗಳನ್ನು ಕಾಲೇಜಿನಿಂದ ಬಿಡಿಸಿದೆ. ಈಗ ಅವಳು ಖಾಸಗಿ ಕೋಚಿಂಗ್ ಸೆಂಟರ್‌ಗೆ ಹೋಗುತ್ತಿದ್ದಾಳೆ. ಹಳೆಯದನ್ನು ಮರೆತಿದ್ದಾಳೆ. ನಾವು ಕೂಡ ಅವಳೆದುರು ಹಿಂದಿನದನ್ನು ಚರ್ಚಿಸುವುದಿಲ್ಲ. ವಿದ್ಯಾಭ್ಯಾಸದತ್ತ ಮತ್ತೆ ಆಸಕ್ತಿವಹಿಸಿದ್ದಾಳೆ. ತಾನೊಬ್ಬ ಇಂಜಿನಿಯರ್ ಆಗಬೇಕೆಂಬ ಕನಸು ಅವಳದು’ – ಮಗಳು ಮತ್ತೆ ಸರಿ ಹಾದಿಗೆ ಬಂದಿದ್ದಕ್ಕೆ ಅರ್ಜುನ್‌ಗೆ ಮನಸ್ಸು ಈಗ ಅದೆಷ್ಟೋ ನಿರಾಳವಾಗಿದೆ.

ಅರ್ಜುನ್ ಮಾತ್ರ ತನ್ನ ಮಗಳು ಮಾದಕದ್ರವ್ಯ ವ್ಯಸನದಿಂದ ಮುಕ್ತಳಾದಳೆಂದು ಸುಮ್ಮನೆ ಕುಳಿತಿಲ್ಲ. ಉಳಿದ ಕುಟುಂಬಗಳ ಹೆಣ್ಣುಮಕ್ಕಳು ಈ ಅನಿಷ್ಟಚಟಕ್ಕೆ ಬಲಿಯಾಗಬಾರದು ಎಂಬ ಕಾಳಜಿ ಅವರಲ್ಲಿದೆ. ಅದಕ್ಕಾಗಿ ಅವರು ನಾಗೋರಿಯಲ್ಲಿ 15 ಮಂದಿ ಸಮಾನ ಮನಸ್ಕರ ಒಂದು ತಂಡವನ್ನು ರಚಿಸಿದ್ದಾರೆ. ಕಾಲೇಜುಗಳ ವ್ಯಾಪ್ತಿಯಲ್ಲಿ ಡ್ರಗ್ಸ್‌ಗೆ ಸಂಬಂಧಿಸಿದ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಡ್ರಗ್ಸ್ ಮಾಫಿಯಾಗೆ ಒಂದು ಅಂತ್ಯ ಕಾಣಿಸಬೇಕು, ಇದೇ ನಮ್ಮ ಗುರಿ ಎನ್ನುತ್ತಾರೆ. ಇದಕ್ಕೆ ಸರ್ಕಾರ ಹಾಗೂ ಪೊಲೀಸರ ನೆರವು ಅಷ್ಟೇ ಅಗತ್ಯ ಎನ್ನುವುದು ಅವರ ಆಶಯ.

ಮಂಗಳೂರಿನ ಡ್ರಗ್ ಮಾಫಿಯಾ ಬಗ್ಗೆ ಅರ್ಜುನ್ ಅವರಿಗೆ ಸಾಕಷ್ಟು ಮಾಹಿತಿ ಇದೆ. ಇದರಲ್ಲಿ ಶಾಮೀಲಾಗಿರುವವರ ಹೆಸರುಗಳೂ ಗೊತ್ತಿವೆ. ಅದೆಲ್ಲವನ್ನೂ ಅವರು ಪೊಲೀಸರಿಗೆ ನೀಡಿದ್ದಾರೆ. ಆದರೆ ಇದುವರೆಗೆ ಪೊಲೀಸರು ಡ್ರಗ್ ಮಾಫಿಯಾ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ‘ನಿಮ್ಮ ಮಕ್ಕಳ ಬಗ್ಗೆ ದಯವಿಟ್ಟು ಹೆಚ್ಚಿನ ಎಚ್ಚರಿಕೆ ವಹಿಸಿ. ವಿಶೇಷವಾಗಿ ಅವರು ಹೊರಗೆ ಹೊಟೇಲ್‌ನಲ್ಲಿ ತಿನ್ನದಂತೆ ನೋಡಿಕೊಳ್ಳಿ’ ಎಂದು ಅರ್ಜುನ್ ಎಲ್ಲ ತಂದೆ-ತಾಯಿಯರಿಗೆ ಕಿವಿಮಾತು ಹೇಳಿದ್ದಾರೆ. ಮಕ್ಕಳ ಕಾಲೇಜು ಬ್ಯಾಗಿನತ್ತ ನಿಮ್ಮದೊಂದು ಕಣ್ಣಿರಲಿ. ಅವರ ಸ್ನೇಹಿತರು ಯಾರು ಎಂಬುದು ನಿಮಗೆ ಗೊತ್ತಿರಲಿ ಎಂದು ಸೇರಿಸುವುದನ್ನು ಅರ್ಜುನ್ ಮರೆಯುವುದಿಲ್ಲ. ಆರತಿಗೆ ಒಂದು ಬಗೆಯ ಚಾಕಲೇಟ್ ತಿಂದ ಕೂಡಲೇ ತಲೆ ಸುತ್ತಿ ಬರುತ್ತಿತ್ತಂತೆ. ಡ್ರಗ್ ಮಾಫಿಯಾ ವಿರುದ್ಧ ಅರ್ಜುನ್ ಪೊಲೀಸರಿಗೆ ದೂರು ನೀಡಿದಾಗ ಅವರಿಗೆ ಕೇಸು ವಾಪಸ್ ಪಡೆಯುವಂತೆ ಸಾಕಷ್ಟು ಬೆದರಿಕೆಗಳು ಬಂದದ್ದೂ ಇದೆ. ಆದರೆ ಅವರು ಇದಕ್ಕೆಲ್ಲ ಅಂಜಲಿಲ್ಲ ಎನ್ನುವುದು ವಿಶೇಷ. ಅರ್ಜುನ್ ಮಗಳು ಡ್ರಗ್ ಪ್ರಭಾವದಿಂದ ವಿಚಿತ್ರ ಸ್ವಭಾವ ಬೆಳೆಸಿಕೊಂಡಿದ್ದಳು. ಇದ್ದಕ್ಕಿದ್ದಂತೆ ಸಿಟ್ಟಾಗಿ ಮನೆಯಲ್ಲಿದ್ದ ಪಾತ್ರೆಗಳನ್ನು ಎತ್ತಿ ಎಸೆಯುತ್ತಿದ್ದಳು. ಆತ್ಮಹತ್ಯೆ ಮಾಡಿಕೊಂಡ ಸ್ನೇಹಾ ಉಪಾಧ್ಯಾಯಳ ಸ್ವಭಾವ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ತಾಯಿ ಹಣಕೊಡಲು ನಿರಾಕರಿಸಿದಾಗ ಸಿಟ್ಟಿಗೆದ್ದ ಅವಳು ರೂಮಿನ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಡ್ರಗ್ ಪ್ರಭಾವವೇ ಅಂತಹದು. ತಾನೇನು ಮಾಡುತ್ತಿದ್ದೇನೆ, ಅದು ಸರಿಯೇ ತಪ್ಪೇ ಎಂದು ಅರಿಯುವ ವಿವೇಚನಾ ಶಕ್ತಿಯನ್ನೇ ಇಂಥವರು ಕಳೆದುಕೊಂಡಿರುತ್ತಾರೆ. ತನ್ನ ವರ್ತನೆಯ ಪರಿಣಾಮಗಳೇನಾಗಬಹುದು ಎನ್ನುವುದು ಕೂಡ ಇಂಥವರಿಗೆ ತಿಳಿದಿರುವುದಿಲ್ಲ.

ಮಂಗಳೂರಿನ ಅನೇಕ ಕಾಲೇಜುಗಳಲ್ಲಿ ಡ್ರಗ್ ಹಾವಳಿ ವಿಪರೀತವಾಗಿದೆ ಎಂಬುದು ಪೊಲೀಸ್ ಮಾಹಿತಿಗಳಿಂದಲೇ ಲಭ್ಯ. ಹೋಂಸ್ಟೇ, ಹೊಟೇಲ್, ಕಾಲೇಜು, ಪಬ್‌ಗಳಲ್ಲಿ ಇಂತಹ ಮಾದಕ ದ್ರವ್ಯಗಳ ವಿತರಣೆ, ಮಾರಾಟ ಅವ್ಯಾಹತವಾಗಿ ಸಾಗಿರುವುದು ಈಗ ಗುಟ್ಟಾಗಿಲ್ಲ. ಮಾರ್ನಿಂಗ್ ಮಿಸ್ಟ್ ಎಂಬ ಹೋಂಸ್ಟೇ ಮೇಲೆ ಹಿಂದೂ ಸಂಘಟನೆಯ ಯುವಕರು ದಾಳಿ ಮಾಡಿದಾಗ ಅದನ್ನು ಭಾರೀ ಅಪರಾಧವೆಂಬಂತೆ ವಿಚಾರವಾದಿಗಳು, ಮಾಧ್ಯಮಗಳು ಬಿಂಬಿಸಿದ್ದವು. ಬರ್ತ್‌ಡೇ ಪಾರ್ಟಿ ಆಚರಿಸಿಕೊಳ್ಳಲು ಅಲ್ಲಿ ಯುವಕ-ಯುವತಿಯರು ಸೇರಿದ್ದರು. ಅಂತಹ ಮುಗ್ಧರ ಮೇಲೆ ಹಲ್ಲೆ ಸರಿಯೆ ಎಂಬುದು ಇವರೆಲ್ಲರ ವಾದವಾಗಿತ್ತು. ವಾಸ್ತವವಾಗಿ ಆ ಹೋಂಸ್ಟೇಯಲ್ಲಿ ನಡೆಯುತ್ತಿದ್ದ ದಂಧೆಯೇ ಬೇರೆ. ಆಗ ದಾಳಿ ಮಾಡಿದ ಹಿಂದೂ ಸಂಘಟನೆಯ ಯುವಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಬುದ್ಧಿಜೀವಿಗಳು, ಮಾಧ್ಯಮಗಳು ಸ್ನೇಹಾ ಎಂಬ ಕಾಲೇಜು ಯುವತಿ ಡ್ರಗ್ ವ್ಯಸನದಿಂದ ಆತ್ಮಹತ್ಯೆ ಮಾಡಿಕೊಂಡಾಗ ಮಾತ್ರ ವೌನಕ್ಕೆ ಶರಣಾಗಿದ್ದ ರಹಸ್ಯವೇನು? ಗೌರಿ ಲಂಕಿಣಿಯಂತಹ ಆಧುನಿಕ ಸ್ತ್ರೀವಾದಿ ಪತ್ರಕರ್ತರಿಗೆ ಸ್ನೇಹಾ ಸಾವಿನ ಹಿಂದಿರುವ ಕರಾಳ ಸತ್ಯವನ್ನು ಬಯಲು ಮಾಡಬೇಕೆಂದು ಏಕೆ ಅನಿಸಲಿಲ್ಲ? ಯುವತಿಯರು ಮಾದಕದ್ರವ್ಯ ವ್ಯಸನಿಗಳಾಗುವುದು ಒಂದು ಸಾಮಾಜಿಕ ದುರಂತವೆಂದೇಕೆ ಈ ಮಂದಿಗೆ ಅನಿಸಲಿಲ್ಲ? ಬಜರಂಗದಳವೇ ಇರಲಿ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೇ ಆಗಲಿ ಅವರೆಲ್ಲರ ಉದ್ದೇಶ – ಹಿಂದೂ ಸಮಾಜದ ಯುವಕ-ಯುವತಿಯರು ಅನಿಷ್ಟಪಿಡುಗುಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳದಿರಲಿ ಎಂಬ ಕಾಳಜಿ. ಆದರೆ ಇಂತಹ ಉದ್ದೇಶ ಈಡೇರಿಕೆಗಾಗಿ ಒಂದಿಷ್ಟು ಎಚ್ಚರ ಮೂಡಿಸುವ ಕಾರ್ಯಾಚರಣೆ ನಡೆಸಿದರೆ ಅದನ್ನು ‘ನೈತಿಕ ಪೊಲೀಸ್‌ಗಿರಿ’ ಎಂದು ಬೊಬ್ಬೆ ಹೊಡೆಯುವ ಮಂದಿಗೆ ಯುವಕ-ಯುವತಿಯರು ಹಾಳು ಚಟಗಳಿಗೆ ಬಲಿಯಾದರೂ ಪರವಾಗಿಲ್ಲ ಎಂಬ ನಿಷ್ಕಾಳಜಿಯೆ?

ಮಾದಕದ್ರವ್ಯ ಜಾಲ ನಾವೆಣಿಸಿದಷ್ಟು ಸರಳವಾದ ಸಂಗತಿಯಾಗಿಲ್ಲ. ಅದು ದೇಶದಾದ್ಯಂತ ಕಬಂಧ ಬಾಹುಗಳನ್ನೇ ಚಾಚಿದೆ. ಅದಕ್ಕೆ ಬಲಿಯಾಗುವವರ ಸಂಖ್ಯೆ ಅಧಿಕೃತವಾಗಿ ಕೈಬೆರಳೆಣಿಕೆಯಷ್ಟು . ಆದರೆ ಸುದ್ದಿಯೇ ಆಗದೆ ಬಲಿಯಾಗುವ ಅನಧಿಕೃತ ಸಂಖ್ಯೆ ಇದಕ್ಕಿಂತ ನೂರುಪಟ್ಟು. ಮಾದಕದ್ರವ್ಯ ಜಾಲಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಎನ್‌ಡಿಪಿಎಸ್ ಎಂಬ ಮಾದಕದ್ರವ್ಯ ಪತ್ತೆ ಘಟಕವೇ ಇದೆ. ಬೆಂಗಳೂರು, ಬೆಳಗಾವಿ ಹಾಗೂ ಮಂಗಳೂರಿನಲ್ಲಿ ಇದರ ಕೇಂದ್ರಗಳೂ ಇವೆ. ಇವು ಸಿಐಡಿ ಇಲಾಖೆ ಅಧೀನದಲ್ಲಿದ್ದು ಸಿಐಡಿ ಎಸ್‌ಪಿ ಇದರ ಮೇಲ್ವಿಚಾರಣೆ ವಹಿಸುತ್ತಾರೆ. ಆದರೆ ಸದ್ಯ ಎನ್‌ಡಿಪಿಎಸ್‌ಗೆ ಗ್ರಹಣ ಬಡಿದಿದೆ. ಹಣಕಾಸು, ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ. ಸಮಾಜಬಾಹಿರ ಶಕ್ತಿಗಳಿಗೆ ಇದು ವರವಾಗಿ ಪರಿಣಮಿಸಿದೆ. ಆಂಧ್ರಪ್ರದೇಶ, ಶಿವಮೊಗ್ಗ ಕಡೆಯಿಂದ ಗಾಂಜಾ ಪೂರೈಕೆಯಾಗುತ್ತಿದೆಯಂಬ ಮಾಹಿತಿ ಇದೆ. ಹಣವಂತರು ಬ್ರೌನ್‌ಶುಗರ್, ಹೆರಾಯಿನ್, ಮಾರಿಜುವಾನನಂತಹ ದುಬಾರಿ ಡ್ರಗ್ಸ್‌ಗಳ ದಾಸರಾಗುತ್ತಿದ್ದಾರೆ. ಇಂತಹ ದುಬಾರಿ ಡ್ರಗ್ಸ್ ರಾಜ್ಯಕ್ಕೆ ಪೂರೈಕೆಯಾಗುತ್ತಿರುವುದು ಗೋವಾ, ಕೇರಳ ಮತ್ತು ವಿದೇಶಗಳಿಂದ. ವಿಮಾನ ನಿಲ್ದಾಣ ಹೊರತುಪಡಿಸಿದರೆ ಉಳಿದಂತೆ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಯಾವುದೇ ರೀತಿಯ ತಪಾಸಣೆ ವ್ಯವಸ್ಥೆಗಳಿಲ್ಲ. ಮಾದಕ ದ್ರವ್ಯ ಸಾಗಾಟಗಾರರಿಗೆ ಹೀಗಾಗಿ ರಸ್ತೆ ಮಾರ್ಗ, ರೈಲುಮಾರ್ಗ ಪ್ರಶಸ್ತವಾಗಿ ಪರಿಣಮಿಸಿದೆ.

ಮಾದಕದ್ರವ್ಯ ಸಾಗಾಟದ ಬಗ್ಗೆ ಅನೇಕ ಬಾರಿ ಪೊಲೀಸರಿಗೆ ಖಚಿತ ಮಾಹಿತಿಯಿರುತ್ತದೆ. ಆದರೆ ಮಾದಕವಸ್ತು ಖರೀದಿದಾರರಂತೆ ಸೋಗು ಹಾಕಿ ಹಿಡಿಯಲು ಬೇಕಾಗುವಷ್ಟು ಹಣದ ವ್ಯವಸ್ಥೆ ಇರುವುದಿಲ್ಲ. ತರಬೇತಿಯೂ ಅಷ್ಟಕ್ಕಷ್ಟೆ. ಪರಿಣತ ಸಿಬ್ಬಂದಿ ಹಾಗೂ ಹಣಕಾಸಿನ ವ್ಯವಸ್ಥೆ ಇದ್ದರೆ ಮಾತ್ರ ಮಾದಕದ್ರವ್ಯಜಾಲ ಮಟ್ಟ ಹಾಕಬಹುದು ಎಂಬುದು ರಾಜ್ಯದ ಹಿರಿಯ ಪೊಲೀಸ್

ಅಧಿಕಾರಿಯೊಬ್ಬರ ಅಭಿಮತ.

ಭಾರತೀಯ ಸಂಸ್ಕೃತಿ, ಪರಂಪರೆಗಳಿಗೆ ಮುಖ ತಿರುಗಿಸಿ ಪಾಶ್ಚಾತ್ಯ ಸಂಸ್ಕೃತಿ, ನಾಗರಿಕತೆಗಳನ್ನು ಅಪ್ಪಿಕೊಳ್ಳಲು ಹಾತೊರೆಯುತ್ತಿರುವ ಮಾನಸಿಕತೆಯೇ ಮಾದಕ ದ್ರವ್ಯ ವ್ಯಸನಿಗಳ ಸಂಖ್ಯೆ ಏರುತ್ತಿರುವುದಕ್ಕೆ ಕಾರಣ. ಮೊದಲೆಲ್ಲ ಹದಿಹರೆಯದ ಯುವಕರು ಫ್ಯಾಶನ್‌ಗಾಗಿ, ಅನಂತರ ಥ್ರಿಲ್‌ಗಾಗಿ ಸ್ಮೋಕಿಂಗ್, ಕುಡಿತ, ಮಾದಕದ್ರವ್ಯ ಸೇವನೆ ಮಾಡುತ್ತಿದ್ದರೆ, ಇದೀಗ ಹದಿಹರೆಯದ ಯುವತಿಯರು ಕೂಡ ತಾವೇನು ಕಡಿಮೆಯಿಲ್ಲ ಎಂಬಂತೆ ಇಂತಹದೇ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಹಣವಂತರ ಮನೆಯ ಯುವತಿಯರು ಇಂತಹ ಚಟಗಳನ್ನು ಫ್ಯಾಶನ್ ಎಂಬಂತೆ ಅಂಟಿಸಿಕೊಳ್ಳುತ್ತಿರುವುದು ನಗರ ಪ್ರದೇಶಗಳಲ್ಲಿ ಸಾಮಾನ್ಯ ದೃಶ್ಯ. ಅಮೆರಿಕ, ಇಂಗ್ಲೆಂಡ್‌ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಯಾವುದನ್ನು ಕೆಟ್ಟದ್ದೆಂದು ದೂರ ತಳ್ಳುತ್ತಿವೆಯೋ ಅದು ಭಾರತಕ್ಕೆ ಪ್ರಿಯವಾಗುತ್ತಿದೆಯೆ ಎಂಬ ಸಂದೇಹ ಉಂಟಾಗುತ್ತಿದೆ. ಆ ದೇಶಗಳ ಯುವಕರು ಭಾರತದ ಯೋಗ, ಧ್ಯಾನಗಳತ್ತ ಆಕರ್ಷಿತರಾದರೆ ನಮ್ಮ ಯುವಕ-ಯುವತಿಯರು ಸ್ಮೋಕಿಂಗ್, ಕುಡಿತ, ಡ್ರಗ್ಸ್ ಸೇವನೆಗೆ ಮುಂದಾಗುತ್ತಿದ್ದಾರೆಯೆ? ಜಾಗತೀಕರಣದ ನೆಪದಲ್ಲಿ ಬೀದಿಯಲ್ಲಿ ಹೋಗುವ ಎಲ್ಲಾ ಮಾರಿಗಳನ್ನು ಮನೆಯೊಳಕ್ಕೆ ಕರೆದುಕೊಳ್ಳುವ ಅವಿವೇಕವನ್ನು ಭಾರತ ಪ್ರದರ್ಶಿಸುತ್ತಿದೆಯೆ? ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಇಂತಹ ಸಂಶಯ ಪ್ರಜ್ಞಾವಂತರಲ್ಲಿ ಮೂಡುವುದು ಸ್ವಾಭಾವಿಕ.

ಇತ್ತೀಚೆಗೆ ‘ದಿ ಇಕನಾಮಿಕ್ ಟೈಮ್ಸ್’ನಲ್ಲಿ ಪ್ರಕಟವಾದ ‘India joins the Bunny Race as Playboy comes to town’ ಎಂಬ ಶೀರ್ಷಿಕೆ ಹೊತ್ತ ಸುದ್ದಿ ಹಲವರ ಗಮನಕ್ಕೆ ಬಂದಿರಲಿಕ್ಕಿಲ್ಲ. ಅಮೆರಿಕದಲ್ಲಿ ಕುಪ್ರಸಿದ್ಧವಾಗಿರುವ ಪ್ಲೇಬಾಯ್ ಕ್ಲಬ್‌ಗಳಿಗೆ ನಮ್ಮ ದೇಶದ ಮೇಲೆ ದಾಳಿ ನಡೆಸಲು ಅವಕಾಶ ಕಲ್ಪಿಸುವ ಸುದ್ದಿ ಇದು. ಅಮೆರಿಕದಲ್ಲಿ ಪ್ಲೇಬಾಯ್ ಹೆಸರಿನ ಪತ್ರಿಕೆ ಕೂಡ ಇದೆ. ಅಶ್ಲೀಲ, ನಗ್ನ ಯುವತಿಯರ ಚಿತ್ರಗಳನ್ನು ಪ್ರಕಟಿಸಿ ಹಣ ಮಾಡುವುದೇ ಆ ಪತ್ರಿಕೆಯ ಉದ್ದೇಶ. ಇದನ್ನು ಆರಂಭಿಸಿದ ಹಗ್ ಹೆಫ್ನರ್ ‘ಪ್ರತಿ ಸಂಸ್ಕೃತಿ’ (ಕೌಂಟರ್ ಕಲ್ಚರ್)ಯನ್ನು ಹುಟ್ಟುಹಾಕುವುದೇ ಇದರ ಉದ್ದೇಶವೆಂದಿದ್ದ. ಕುಟುಂಬ ವ್ಯವಸ್ಥೆಯನ್ನು ಧೂಳೀಪಟ ಮಾಡುವುದೇ ಪ್ಲೇಬಾಯ್ ಹುನ್ನಾರ. ಪ್ಲೇಬಾಯ್ ಕ್ಲಬ್‌ಗಳಲ್ಲಿ ಬೆತ್ತಲೆ ನೃತ್ಯಗಳು ಸಾಮಾನ್ಯ. ಇಂತಹ ನೃತ್ಯಗಳ ಬಳಿಕ ಅಲ್ಲಿ ಇನ್ನೇನೇನು ನಡೆಯುತ್ತದೆ ಎಂಬುದನ್ನು ವಿವರಿಸಬೇಕಾಗಿಲ್ಲ. ಪ್ಲೇಬಾಯ್ ಕ್ಲಬ್‌ಗಳಿಂದಾಗಿಯೇ ಭೀಕರ ಏಡ್ಸ್ ರೋಗ ಅಮೆರಿಕದ ಮೇಲೆ ದಾಳಿ ಮಾಡಿತು ಹಾಗೂ ಅಮೆರಿಕದ ಬೀದಿ ಬೀದಿಗಳಲ್ಲಿ ಏಡ್ಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಈಗ ಇತಿಹಾಸ.

ಅಂತಹ ಅನಿಷ್ಟಪ್ಲೇಬಾಯ್ ಕ್ಲಬ್ ಜಾಗತೀಕರಣದ ನೆಪದಲ್ಲಿ ಇದೀಗ ಭಾರತಕ್ಕೂ ವಕ್ಕರಿಸುವ ಸನ್ನಾಹದಲ್ಲಿದೆ. ಅಮೆರಿಕ ಮೂಲದ ಈ ಕ್ಲಬ್ ಭಾರತದಲ್ಲಿ ಇನ್ನೂರು ಕೋಟಿ ಬಂಡವಾಳ ಹೂಡಿ, ಮೊದಲು ಗೋವಾದ 22 ಸಾವಿರ ಚ. ಅಡಿ ಜಾಗದಲ್ಲಿ ಕ್ಲಬ್ ಆರಂಭಿಸಲಿದೆಯಂತೆ. ಉತ್ತರ ಗೋವಾದ ಕಾಂಡೋಲಿಂ ಬೀಚ್ ಈ ಕ್ಲಬ್‌ಗೆ ಜಾಗ ಒದಗಿಸಿದೆ. ಶೀಘ್ರವೇ ಇಂತಹ ಕ್ಲಬ್‌ಗಳು ಇತರ ನಗರಗಳಿಗೂ ವಿಸ್ತರಿಸಲಿದೆಯಂತೆ. ಈ ಕ್ಲಬ್‌ಗಳಲ್ಲಿ ಬೆತ್ತಲೆಗೆ ಅವಕಾಶವಿಲ್ಲ ಎಂದು ಈಗ ಹೇಳಲಾಗಿದೆಯಾದರೂ ಕ್ಲಬ್‌ನಲ್ಲಿ ಪಾಲ್ಗೊಳ್ಳುವವರ ಮೈಮೇಲಿನ ಸಾಂಕೇತಿಕ ಬಟ್ಟೆ ಯಾವಾಗ ಕಳಚಿಬೀಳುವುದೋ ಗೊತ್ತಿಲ್ಲ. ‘ತಂಬಾಕು ಕ್ಯಾನ್ಸರ್‌ಗೆ ಕಾರಣ’ ಎಂದು ಸಿಗರೇಟ್ ಪ್ಯಾಕ್‌ಗಳ ಮೇಲೆ ಚಿಕ್ಕದಾಗಿ ಮುದ್ರಿಸಿದ ಎಚ್ಚರಿಕೆಯಿದ್ದಂತೆ ಇದು !

ಜಾಗತಿಕವಾಗಿ ಪ್ಲೇಬಾಯ್ ವ್ಯವಹಾರವನ್ನು ಸುಮಾರು 180 ದೇಶಗಳ 25 ಸಾವಿರಕ್ಕೂ ಅಧಿಕ ಸ್ಟೋರ್‌ಗಳಲ್ಲಿ ವಿಕ್ರಯಿಸಲಾಗುತ್ತಿದೆ. ಭಾರತ ಅದಕ್ಕೆ ಅಪವಾದವಾಗಲಾರದು. ಪ್ಲೇಬಾಯ್ ಕ್ಲಬ್‌ಗಳು ಭಾರತೀಯ ಸಂವೇದನೆ ಮತ್ತು ನೈತಿಕ ವೌಲ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಕ್ಲಬ್‌ನ ಪ್ರವರ್ತಕರು ತಿಳಿಸಿದ್ದಾರೆ. ಆದರೆ ಈ ಕ್ಲಬ್‌ಗಳ ಸದಸ್ಯರಾಗುವವರು ‘ಪುರುಷರು ಮಾತ್ರ ಅಲ್ಲ’ ಎನ್ನುವ ಅವರ ಮಾತಿನಿಂದಾಗಿ ಅವರ ಹುನ್ನಾರ ಬಯಲಾಗುತ್ತದೆ. ಇದುವರೆಗೆ ಎಲ್ಲೋ ಕೆಲವೆಡೆ ನಡೆಯುತ್ತಿದ್ದ ವೇಶ್ಯಾವಾಟಿಕೆ ಇದೀಗ ಪ್ಲೇಬಾಯ್ ಕ್ಲಬ್ ಮೂಲಕ ಅಧಿಕೃತಗೊಳ್ಳುವ ವಿದ್ಯಮಾನ ಸನ್ನಿಹಿತವಾಗಿದೆ. ಏಡ್ಸ್ ರೋಗವಲ್ಲದೆ ಲೈಂಗಿಕ ಅರಾಜಕತೆ, ಅನೈತಿಕತೆಗಳಿಗೆ ಕೆಂಪುಹಾಸಿನ ಸ್ವಾಗತ ಕೋರುವ ಪ್ಲೇಬಾಯ್ ಕ್ಲಬ್ ಮೊದಲು ನೈತಿಕ ಮುಸುಕು ಹಾಕಿಕೊಂಡೇ ಬರುತ್ತದೆ ಎನ್ನುವುದನ್ನು ನಮ್ಮ ಸರ್ಕಾರ, ಜನರು ಮರೆಯಕೂಡದು. ಇಂದು ಅಲ್ಲೊಂದು ಇಲ್ಲೊಂದು ಮಾದಕದ್ರವ್ಯ ವ್ಯಸನಿ ಸ್ನೇಹಾಳಂಥ ಯುವತಿಯರು ಕಂಡುಬಂದರೆ ಮುಂದೆ ಪ್ರತೀ ಊರುಗಳಲ್ಲೂ ಇಂತಹ ಅನಿಷ್ಟ ಪಿಡುಗಿಗೆ ಬಲಿಯಾಗುವ ಯುವಕ-ಯುವತಿಯರ ನೂರಾರು, ಸಾವಿರಾರು ಸಮಾಧಿಗಳು ಕಂಡುಬರಬಹುದು! ಹಾಗಾಗಬೇಕೆ?

Leave a Reply

Your email address will not be published.

This site uses Akismet to reduce spam. Learn how your comment data is processed.