ದು.ಗು.ಲಕ್ಷ್ಮಣ, ಹಿರಿಯ ಪತ್ರಕರ್ತರು

ಯಾವ ಕೆಲಸ ಮಾಡುವುದಿದ್ದರೂ ನನಗೆ ಇದರಿಂದೇನು ಲಾಭ ಎಂದು ಲೆಕ್ಕಾಚಾರ ಹಾಕುವ ಈ ವ್ಯಾವಹಾರಿಕ ಯುಗದಲ್ಲಿ “ನನಗೇನೂ ಬೇಕಿಲ್ಲ.ನಾನು ಮಾಡುವುದೆಲ್ಲವೂ ಈ ಸಮಾಜಕ್ಕರ್ಪಿತ”ಎಂದು ಜೀವನಪೂರ್ತಿ ಒಂದು ಧ್ಯೇಯಕ್ಕಾಗಿ,ನಂಬಿದ ಸಿದ್ಧಾಂತಕ್ಕಾಗಿ ಬದುಕುವವರು ಯಾರ ಕಣ್ಣಿಗೂ ಅಷ್ಟಾಗಿ ಬೀಳುವುದಿಲ್ಲ. ಏಕೆಂದರೆ”ಸ್ವಂತಕ್ಕೆ ಸ್ವಲ್ಪ,ಸಮಾಜಕ್ಕೆ ಸರ್ವಸ್ವ”ಎಂದು ಬದುಕುವ ಇಂಥವರು ಕೀರ್ತಿ,ಪ್ರಸಿದ್ಧಿ, ಲಾಭ,ಪ್ರಚಾರಗಳಿಗೆ ಬೆನ್ನು ತಿರುಗಿಸಿದವರು.’ರಾಷ್ಟ್ರಾಯ ಸ್ವಾಹಾ ರಾಷ್ಟ್ರಾಯ ಇದಂ,ನ ಮಮ’ ಎಂದು ರಾಷ್ಟ್ರದೇವ ನಿಗೆ ಪ್ರಾಣದೀವಿಗೆ ಯಾದವರು.ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸ್ವಂತಕ್ಕೇನೂ ದುಡಿಯದೆ ಸಮಾಜಕ್ಕಾಗಿ,ಈ ದೇಶಕ್ಕಾಗಿಯೇ ಜೀವನ ಸಮರ್ಪಿಸಿದ ಇಂಥ ವ್ಯಕ್ತಿಗಳಿಗೆ ಪ್ರಚಾರಕ ಅಥವಾ ಪೂರ್ಣಾವಧಿ ಕಾರ್ಯಕರ್ತ ಎಂದು ಕರೆಯಲಾಗುತ್ತದೆ.ಅಂಥವರಲ್ಲಿ ಒಬ್ಬ ಪ್ರಾತಃಸ್ಮರಣೀಯರೆಂದರೆ ಇತ್ತೀಚೆಗೆ(13.05.2023) ಅಗಲಿದ ಶ್ರೀ ಹರಿಭಾವು ವಝೆಯವರು.

ಬರೋಬ್ಬರಿ 91 ವರ್ಷ(ಜನನ:4.10.1932) ಸಾರ್ಥಕ ಜೀವನ ನಡೆಸಿದ ಹರಿಭಾವು ವಝೆಯವರು ತಮ್ಮ ಎಂಎಸ್ಸಿ ಪದವಿ ಬಳಿಕ ಒಟ್ಟು 67 ವರ್ಷ ದೀರ್ಘಕಾಲ ಸಂಘದ ಪ್ರಚಾರಕರಾಗಿದ್ದರು. ನಾಲ್ಕೈದು ವರ್ಷಗಳ ಕಾಲ ಒಬ್ಬ ತರುಣ ಪ್ರಚಾರಕನಾಗಿ ಏಕನಿಷ್ಠೆಯಿಂದಿರುವುದೇ ಸಾಹಸದ ಸಂಗತಿಯಾಗಿರುವ ಇಂದಿನ ದಿನಮಾನಗಳಲ್ಲಿ ಹರಿಭಾವು ವಝೆಯವರು ತಮ್ಮ ಬದುಕಿನ ಕೊನೆಯುಸಿರಿನವರೆಗೆ ಬರೋಬ್ಬರಿ 67 ವರ್ಷಕಾಲ ಪ್ರಚಾರಕರಾಗಿದ್ದರೆನ್ನುವುದು ಸಾಧಾರಣ ಸಂಗತಿಯಂತೂ ಖಂಡಿತ ಅಲ್ಲ.ಹಾಗಿರುವುದಕ್ಕೂ ಒಂದು ವಿಶಿಷ್ಟ,ಸುಸ್ಥಿರ ಮನಸ್ಥಿತಿ ಇರಬೇಕಾಗುತ್ತದೆ.

ಹರಿಭಾವು ವಝೆಯವರು ಪ್ರಚಾರಕರಾಗಿ ಹೊರಟ ಕಾಲಘಟ್ಟದಲ್ಲಿ(1956)ಆರೆಸ್ಸೆಸ್ ಕುರಿತು ಇಡೀ ದೇಶದಲ್ಲಿ ಒಂದು ಬಗೆಯ ಅಸಹನೀಯ ತಿರಸ್ಕಾರ,ಪ್ರತಿಕೂಲ ಭಾವನೆಗಳೇ ಹೆಪ್ಪುಗಟ್ಟಿದ್ದವು.ಗಾಂಧಿಹತ್ಯೆಯ ಪೊಳ್ಳು ಆರೋಪ ಸಂಘವನ್ನು ಅಗ್ನಿಪರೀಕ್ಷೆಗೆ ಒಡ್ಡಿತ್ತು.ಸಂಘದ ಮುಂದೆ ಕಠಿನಾಂಪ್ತಿ ಕಠಿಣ ಸವಾಲುಗಳ ಹಿಮಾಲಯವೇ ಧುತ್ತೆಂದು ಎದ್ದು ನಿಂತಿತ್ತು.ಅಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ, ಸಿಗಬಹುದಾಗಿದ್ದ ಆಕರ್ಷಕ ಉದ್ಯೋಗಕ್ಕೆ ಬೆನ್ನು ತಿರುಗಿಸಿ,ಮನೆಮಠ,ಬಂಧುಗಳಿಂದ ದೂರವಾಗಿ, ಸಂಬಳಸಾರಿಗೆ ಏನೊಂದೂ ಇಲ್ಲದ ಸಂಘದ ಪ್ರಚಾರಕನಾಗುವುದೆಂದರೆ ಒಂದೋ ಆತನಿಗೆ ಧ್ಯೇಯದ ಹುಚ್ಚು ಬಲವಾಗಿ ಅಡ ರಿರಬೇಕು ಇಲ್ಲವೇ ಏನಾಗುತ್ತದೋ ನೋಡಿಯೇಬಿಡೋಣ ಎಂಬ ಗಟ್ಟಿ ಗುಂಡಿಗೆಯವ ನಾಗಿರಬೇಕು ಎಂದೇ ಭಾವನೆಯಾಗಿತ್ತು.ಹರಿಭಾವು ಅಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ ಪ್ರಚಾರಕರಾಗಿ ಹೊರಟವರು.ಧ್ಯೇಯದ ಹುಚ್ಚು ಹಿಡಿದಿತ್ತು.ಜೊತೆಗೆ ಗುಂಡಿಗೆಯೂ ಗಟ್ಟಿಯಾಗಿತ್ತು.ಹಾಗಾಗಿಯೇ ಪ್ರಚಾರಕನಾಗಿ ಹೊರಟ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ.ಹಸಿವೆ,ಸಂಕಟ,ಸಮಾಜದ ತೀವ್ರ ವಿರೋಧ,ಇನ್ನೂ ನಾನಾ ಬಗೆಯ ಸವಾಲುಗಳನ್ನು ಎದುರಿಸಬೇಕಾಯಿತು.ಹಲವರ ಗೇಲಿ ಮಾತುಗಳನ್ನು ಮೌನವಾಗಿ ಸಹಿಸಬೇಕಾಯಿತು.ನಗರ ಪ್ರಚಾರಕ,ಜಿಲ್ಲಾ ಪ್ರಚಾರಕ,ವಿಭಾಗ ಪ್ರಚಾರಕ,ವಿದ್ಯಾ ಭಾರತಿ ಸಂಸ್ಥೆಯ ಕಾರ್ಯ ನಿರ್ವಹಣೆ,ಅನಂತರ ದೀರ್ಘಕಾಲದವರೆಗೆ ಭಾರತೀಯ ಇತಿಹಾಸ ಸಂಕಲನ ಯೋಜನೆಗೆ ಚಾಲನೆ-ಹೀಗೆ ಹತ್ತಾರು ಸಂಘಕಾರ್ಯ ಯೋಜನೆಗಳಿಗೆ ಹೆಗಲುಹಚ್ಚಿ ದುಡಿದರು.ಬದುಕಿನ ಸಂಧ್ಯಾಕಾಲದಲ್ಲಿ ಕಳೆದೈದು ವರ್ಷಗಳಿಂದ ಪಾರ್ಶ್ವವಾಯುವಿನ ಆಘಾತಕ್ಕೆ ಒಳಗಾಗಿದ್ದರೂ ಬೆಳಗಾವಿ ಸಂಘಕಾರ್ಯಾಲಯವನ್ನೇ ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ,ಹಿರಿಕಿರಿಯ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದ ಒಬ್ಬ ಹಿರಿಯ ಆದರ್ಶ ಪ್ರಚಾರಕ.”The best should suffer so that the rest may prosper”(ಒಳ್ಳೆಯವರ ಕಷ್ಟದ ಕಾರಣ ದಿಂದಲೇ ಉಳಿದವರು ನೆಮ್ಮದಿಯಿಂದಿರುವುದು)ಎಂಬ ಸಂಘ ದ ಕಾರ್ಯಕರ್ತನ ನಡವಳಿಕೆ ಕುರಿತು ದತ್ತೋ ಪಂತ ರು ನುಡಿದಂತೆ, ಬದುಕು ಸಾಗಿಸಿದ ಧೀಮಂತ.

ಇಂಥ ಒಬ್ಬ ಹಿರಿಯ ಪ್ರಚಾರಕರ ಸಾರ್ಥಕ ಬದುಕಿನ ಹಲವು ನೋಟಗಳನ್ನು ಒಂದೆಡೆ ಸಂಗ್ರಹಿಸಿ, ವರ್ತಮಾನದ ಸಂಘದ ಕಾರ್ಯಕರ್ತರಿಗೆ ಪ್ರೇರಕವಾಗಲೆಂದು ಕೃತಿ ರೂಪದಲ್ಲಿ ತಂದವರು ಕರ್ನಾಟಕ ಇತಿಹಾಸ ಸಂಕಲನ ಸಮಿತಿಯ ಕಾರ್ಯಕರ್ತರು. ಸಾಧಾರಣವಾಗಿ ಸಂಘದ ಪ್ರಚಾರಕರ ಅನನ್ಯ ಸಾಧನೆಗಳು; ಸಂಕಟ ಸವಾಲುಗಳನ್ನು ನಿರ್ಭಯವಾಗಿ ಎದುರಿಸಿ ಪರಿಹಾರ ಕಂಡು ಹಿಡಿದ ಪರಿ ಇತ್ಯಾದಿಗಳ ಬಗ್ಗೆ ಅವರ ಶ್ರದ್ಧಾಂಜಲಿ ಕಾರ್ಯಕ್ರಮಗಳಲ್ಲಿ ಉಲ್ಲೇಖವಾಗುವುದು ಬಿಟ್ಟರೆ ಕೃತಿ ರೂಪದಲ್ಲಿ ಬರುವುದು ತೀರಾ ವಿರಳ. ಮೈಸೂರಿನ ಇತಿಹಾಸ ಸಂಕಲನ ಸಮಿತಿ ಹಾಗಾಗದಂತೆ ಮುತುವರ್ಜಿ ವಹಿಸಿ, ಡಾ. ವಿ. ರಂಗನಾಥ್ ಅವರ ಸಂಪಾದಕತ್ವದಲ್ಲಿ ಹರಿಭಾವು ಅವರ ಹೆಜ್ಜೆ ಗುರುತುಗಳ ಸ್ಮರಣೆಯಾಗಿ ‘ಚರಿತಾರ್ಥ’ ಎಂಬ ಕೃತಿಯನ್ನು ಹೊರ ತಂದು ಉತ್ತಮ ಕಾರ್ಯವೆಸಗಿದೆ.

ಸಂಘ ವಲಯದ ಹಿರಿಯರಾದ ಮಂಗೇಶ ಭೇಂಡೆ, ಸು .ರಾಮಣ್ಣ , ಕಾ.ಶ್ರೀ. ನಾಗರಾಜ್, ಮ. ವೆಂಕಟರಾಮು, ಶಂಕರಾನಂದ, ಕಲ್ಯಾಣ ಮರಳಿ, ಪ್ರೊ. ಪಿ.ವಿ. ಕೃಷ್ಣ ಭಟ್ಟ, ಹೆಚ್.ಎನ್. ನಾಗಭೂಷಣ ರಾವ್, ಪ್ರಮೋದ ಪೇಟ್ಕರ್, ಡಾ. ಸು. ಕೃಷ್ಣಸ್ವಾಮಿ, ಎಸ್. ಕಲ್ಯಾಣ ರಾಮನ್, ಇಂದುಮತಿ ಕಾಟದರೆ, ದು.ಗು ಲಕ್ಷ್ಮಣ,ತೇಜ ಸ್ವಿನಿ ಅನಂತಕುಮಾರ್…. ಹೀಗೆ ಒಟ್ಟು ೪೭ ಮಂದಿ ದಾಖಲಿಸಿದ ಲೇಖನಗಳು ಹರಿಭಾವು ವಝೆಯವರ ಬದುಕಿನ ವಿವಿಧ ಸ್ವಾರಸ್ಯಕರ ಮಗ್ಗುಲುಗಳನ್ನು ತೆರೆದಿಟ್ಟಿವೆ. ಹರಿಭಾವು ವಝೆ ಅವರ ಕುರಿತು ಇದುವರೆಗೆ ಸಂಘ ವಲಯದಲ್ಲಿ ಹಲವರಿಗೆ ಗೊತ್ತಿರದ ಅನೇಕ ಅವಿಸ್ಮರಣೀಯ ಪ್ರೇರಕ ಪ್ರಸಂಗಗಳು ಇಲ್ಲಿ ಅನಾವರಣಗೊಂಡಿವೆ. ಕೆಲವೊಂದು ಪುನರುಕ್ತಿಗಳು ಇರಬಹುದಾದರೂ ಅನನ್ಯ ಸಾಧಕನೊಬ್ಬನ ಬದುಕಿನ ವಿಭಿನ್ನ ನೋಟಗಳನ್ನು ಗ್ರಹಿಸುವಲ್ಲಿ ಅವೇನೂ ಅಡ್ಡಿ ಎನಿಸುವುದಿಲ್ಲ.

“ಇದರಲ್ಲಿ ಒಬ್ಬ ಅನನ್ಯ ಸಾಧಕನ ಜೀವನದ ಸಂದೇಶಗಳ ಅನಾವರಣವಿದೆ. ಚರಿತಾರ್ಥ ಎಂದರೆ ಸಾರ್ಥಕತೆಯತ್ತ ಸಾಗಿದ ಜೀವನದ ಯಾತ್ರೆ ಎಂದರ್ಥ. ಧ್ಯೇಯದ ದಾರಿಯಲ್ಲಿ ನಡೆಯುತ್ತಾ ಅವರೇ ದಾರಿಯಾದರು ಎನ್ನಬಹುದು. ಲೇಖನಗಳನ್ನು ಬರೆದವರೆಲ್ಲರೂ ಹರಿಭಾವು ಅವರ ಅಪೇಕ್ಷೆಯಂತೆ ಸಮಾಜಮುಖಿಯಾಗಿ ತಮ್ಮ ಜೀವನ ನಡೆಸುತ್ತಿರುವವರೇ….” ಎಂದು ಹರಿಭಾವು ಅವರ ಗರಡಿಯಲ್ಲಿ ಪಳಗಿ ವ್ಯಕ್ತಿತ್ವ ರೂಪಿಸಿಕೊಂಡ ಹಿರಿಯ ಪ್ರಚಾರಕರಾದ ಶ್ರೀ ಸು. ರಾಮಣ್ಣನವರು ಬರೆದಿರುವ ಬೆನ್ನುಡಿ ಚರಿತಾರ್ಥ ಗ್ರಂಥವನ್ನು ರಚಿಸಿರುವ ಉದ್ದೇಶವನ್ನು ಸಾದರ ಪಡಿಸುವಂತಿದೆ. ಸರಸಂಘ ಚಾಲಕರಾದ ಡಾ. ಮೋಹನ ಭಾಗವತ್ ಅವರ ಶ್ರದ್ಧಾಂಜಲಿ ರೂಪದ ಅಕ್ಷರಾಂಜಲಿ ಕೃತಿಯ ಮೆರುಗನ್ನು ಹೆಚ್ಚಿಸಿದೆ.

೨೦೦೧ರಲ್ಲಿ ಸಂಘವು ಅವರಿಗೆ ಅಖಿಲ ಭಾರತ ಇತಿಹಾಸ ಸಂಕಲನ ಯೋಜನೆ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿಯ ಹೊಣೆಗಾರಿಕೆ ಹೊರಿಸಿದಾಗ ಆ ಯೋಜನೆಗೊಂದು ಸಂಘಟನಾತ್ಮಕ ನೆಲೆಯಾಗಲಿ ರಚನೆಯಾಗಲಿ ಇರಲೇ ಇಲ್ಲ. ಇತಿಹಾಸ, ಪುರಾತತ್ವ ಶಾಸ್ತ್ರದ ಕ್ಷೇತ್ರದಲ್ಲಿ ವಾಮಪಂಥೀಯ ವಿಚಾರಧಾರೆಯ ವಿದ್ವಾಂಸರದೇ ಹೆಚ್ಚಿನ ಪ್ರಭಾವವಿತ್ತು. ರಾಷ್ಟ್ರೀಯ ಚಿಂತನೆಗಳನ್ನುಳ್ಳವರ ಸಂಖ್ಯೆ ತುಂಬ ಕಡಿಮೆ ಇತ್ತು. ಹರಿಭಾವು ಅವರು ಓದಿದ್ದು ಎಂ.ಎಸ್‌ಸಿ. ಅವರ ಪದವಿಗೂ ಇತಿಹಾಸ ಸಂಕಲನ ಯೋಜನೆಗೂ ಅರ್ಥಾರ್ಥ ಸಂಬಂಧವಿರಲಿಲ್ಲ. ವಿಶ್ವವಿದ್ಯಾಲಯದ ದೊಡ್ಡ ದೊಡ್ಡ ಇತಿಹಾಸದ ಪ್ರಾಧ್ಯಾಪಕರುಗಳ ಬಳಿ ಚರ್ಚಿಸುವಷ್ಟು ಶಾಸ್ತ್ರಾಧ್ಯಯನ ತಿಳುವಳಿಕೆಯೂ ಇರಲಿಲ್ಲ. ಆದರೆ ಈ ಕಾರ್ಯಕ್ಕೊಂದು ಸೂಕ್ತ ದಿಕ್ಕು ದೆಸೆ ಕೊಡಬಲ್ಲೆನೆಂಬ ದೃಢ ವಿಶ್ವಾಸ, ಉತ್ಸಾಹ ಮಾತ್ರ ಅವರಲ್ಲಿತ್ತು. ಇತಿಹಾಸ, ಪುರಾತತ್ವ , ಭೂವಿಜ್ಞಾನ ಮತ್ತು ಸಂಸ್ಕೃತ ವಿದ್ವಾಂಸರು ಅಷ್ಟೇ ಅಲ್ಲ ,ಇಸ್ರೋ ವಿಜ್ಞಾನಿಗಳೊಂದಿಗೂ ಹರಿಭಾವು ಉತ್ತಮ ಸಂಪರ್ಕವನ್ನು ಸಾಧಿಸಿದ್ದರು. ಸರಸ್ವತಿ ನದಿಯ ಸಂಶೋಧನೆಯ ಯೋಜನೆಗೆ ಒಂದು ತಾರ್ಕಿಕ ಅಂತ್ಯ ತಲುಪಿದ್ದು ಹರಿಭಾವು ಅವರ ಸತತ ಪರಿಶ್ರಮ, ಸಂಶೋಧನೆ ಹಾಗೂ ಅಧ್ಯಯನದಿಂದಲೇ.

ಸರಸ್ವತಿ ನದಿಯ ಕುರಿತಾದ ಸಂಶೋಧನೆ ವಿವರಗಳನ್ನು ೧೪ ಭಾಷೆಗಳಲ್ಲಿ ಪ್ರಕಟಿಸಿದ್ದಲ್ಲದೆ, ಸಣ್ಣ ಮಕ್ಕಳಿಗೆ, ಶಾಲಾ ಮಟ್ಟದಲ್ಲಿ, ಕಾಲೇಜು ಮಟ್ಟದಲ್ಲಿ ಹಾಗೂ ವಿದ್ವಾಂಸರ ಮಟ್ಟದಲ್ಲಿ ಪುಸ್ತಕ ಪ್ರಕಟಣೆಯನ್ನು ಸಾಧ್ಯವಾಗಿಸಿದ್ದು ಅವರ ದೃಢ ನಿರ್ಧಾರಕ್ಕೆ ದಿವ್ಯ ಸಾಕ್ಷಿ. ವಿಶ್ವವಿದ್ಯಾನಿಲಯಗಳಿಗೆ ಸವಾಲಾಗಬಹುದಾದ ಸಂಶೋಧನಾ ಪುಸ್ತಕಗಳ ಪ್ರಕಟಣೆಯನ್ನು ಅವರು ಲೀಲಾಜಾಲವಾಗಿ ನಿರ್ವಹಿಸಿದ್ದು ಹರಿಭಾವು ಅವರ ಕಾರ್ಯ ಬದ್ಧತೆಗೆ ನಿದರ್ಶನ.

ಹೀಗೆ ಹರಿಭಾವು ವಝೆಯವರ ಬಹುಮುಖೀ ವ್ಯಕ್ತಿತ್ವದ ಪ್ರತಿಬಿಂಬಗಳಿಗೆ ಈ ಕೃತಿ ಕನ್ನಡಿ ಹಿಡಿದಿದೆ. ಸಂಘ ಪರಿವಾರದವರೂ ಸೇರಿದಂತೆ ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡವರೆಲ್ಲರೂ ಒಮ್ಮೆಯಾದರೂ ಓದಿ ಮನನ ಮಾಡಬೇಕಾದ ಕೃತಿ-ಚರಿತಾರ್ಥ.

ಚರಿತಾರ್ಥ

(ಮಾನ್ಯ ಶ್ರೀ ಹರಿಭಾವು ವಝೆಯವರ ಹೆಜ್ಜೆಗಳು)

ಸಂಪಾದಕ : ಡಾ| ವಿ. ರಂಗನಾಥ್

ಪ್ರಕಾಶನ : ಇತಿಹಾಸ ಸಂಕಲನ ಸಮಿತಿ, ಕರ್ನಾಟಕ

ಪುಟಗಳು : 252, ಬೆಲೆ : ರೂ. 200

ಕೃತಿಗಳಿಗಾಗಿ ಸಂಪರ್ಕ : 9449264729 (ಬ. ಸ .ಆನಂದ,ಮೈಸೂರು)

Leave a Reply

Your email address will not be published.

This site uses Akismet to reduce spam. Learn how your comment data is processed.