ನೇರನೋಟ by Du Gu Lakshman June-10-2013

ತುಕ್ಕು ಹಿಡಿಯಿತೇ ಮಾನವೀಯತೆಗೆ?

ಮಾನವೀಯತೆಯೇ ನಾಚಿ ತಲೆತಗ್ಗಿಸುವಂತಾಗಿದೆಯೆ? ಮಾನವೀಯತೆಗೆ ತುಕ್ಕು ಹಿಡಿದಿದೆಯೆ? ಮನುಷ್ಯ – ಮನುಷ್ಯರ ನಡುವಣ ಸಂಬಂಧಕ್ಕೆ ಅರ್ಥವೇ ಇಲ್ಲವೆ? ಇಂತಹ ಹಲವು ಪ್ರಶ್ನೆಗಳು ಇತ್ತೀಚೆಗೆ ನಡೆದ ಘಟನೆಗಳನ್ನು ಅವಲೋಕಿಸಿದಾಗ ನನ್ನನ್ನು ಕಾಡತೊಡಗಿವೆ. ಬಹುಶಃ ಇಂತಹದೇ ಪ್ರಶ್ನೆಗಳು ನಿಮ್ಮನ್ನೂ ಕಾಡಿರಬಹುದು.

ಆಕೆ ಸುಂದರಿ. ಹೆಸರು ಹೇಮಾವತಿ. ಬಿ.ಕಾಂ. ಪದವೀಧರೆ. ಇಷ್ಟೊತ್ತಿಗಾಗಲೇ ಗಂಡನ ಮನೆಯಲ್ಲಿ ನೆಮ್ಮದಿಯಾಗಿ ಬದುಕು ಸಾಗಿಸಬೇಕಿದ್ದ ಹೆಣ್ಣು ಮಗಳು. ಆದರೆ ಆಕೆಯ ಪಾಲಿಗೆ ಹೆತ್ತವರು ಮತ್ತು ಒಡಹುಟ್ಟಿದವರೇ ಶತ್ರುಗಳಾಗಿ ಪರಿಣಮಿಸಿ, ಕಳೆದ ೪ ವರ್ಷಗಳಿಂದ ಗೃಹಬಂಧಿಯಾಗಿ ನರಕಯಾತನೆ ಅನುಭವಿಸಬೇಕಾಯಿತು. ಕನಿಷ್ಠ ಧರಿಸಲೊಂದು ಬಟ್ಟೆಯೂ ಇಲ್ಲದೆ ಬೆತ್ತಲಾಗಿ ಚಿಕ್ಕ ಕೊಠಡಿಯೊಂದರಲ್ಲಿ ಹಗಲು ರಾತ್ರಿ ಕಾಲ ಕಳೆಯಬೇಕಾದ ಪರಿಸ್ಥಿತಿ ಆಕೆಯದಾಗಿತ್ತು. ಮಲಗಿದಲ್ಲೇ ಮಲ-ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರಿಂದ ಆಕೆಯಿದ್ದ ಕೊಠಡಿ ತುಂಬಾ ಕೆಟ್ಟ ವಾಸನೆ ಆವರಿಸಿತ್ತು. ಈ ವಿಷಯ ಹೇಗೋ ಸ್ವಯಂಸೇವಾ ಸಂಘವೊಂದರ ಸದಸ್ಯರಿಗೆ ತಲುಪಿ, ಪೊಲೀಸರೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಿದಾಗ ಯುವತಿಯ ಕರುಣಾಜನಕ ಸ್ಥಿತಿ ಬಯಲಾಗಿದೆ.

ಇಷ್ಟಕ್ಕೂ ಈ ಘಟನೆ ನಡೆದಿರುವುದು ಯಾವುದೋ ಹಳ್ಳಿ ಮೂಲೆಯಲ್ಲಲ್ಲ. (ಅಲ್ಲೂ ಅಂತಹ ಘಟನೆ ನಡೆದಿದ್ದರೆ ಅದು ಅಕ್ಷಮ್ಯ) ರಾಜಧಾನಿ ಬೆಂಗಳೂರಿನ ಮಲ್ಲೇಶ್ವರ ಬಡಾವಣೆಯ ೧೭ನೇ ಅಡ್ಡರಸ್ತೆಯಲ್ಲಿ ವಾಸವಿರುವ ರೇಣುಕಪ್ಪ ಮತ್ತು ಪುಟ್ಟಗೌರಮ್ಮ ಎಂಬವರ ಮನೆಯಲ್ಲಿ ನಡೆದ ಘಟನೆಯಿದು. ಹೇಮಾವತಿಗೆ ಈಗ ೩೫ರ ಹರೆಯ. ಆಕೆಯ ಸಂಬಂಧಿಕರು ಹಾಗೂ ನೆರೆಹೊರೆಯವರಿಗೂ ತಿಳಿಯದಂತೆ ಆಕೆಯನ್ನು ಗೃಹಬಂಧನದಲ್ಲಿಡಲಾಗಿತ್ತು. ಸರಿಹೊತ್ತಿನಲ್ಲಿ ಆಕೆ ಕೂಗಾಡುತ್ತಿದ್ದುದನ್ನು ಕೇಳಿ ಅನುಮಾನಗೊಂಡ ಅಕ್ಕಪಕ್ಕದವರು ತಂದೆ ರೇಣುಕಪ್ಪನನ್ನು ಕೇಳಿದಾಗ ಏನೂ ಇಲ್ಲ ಎಂದು ಸಮಜಾಯಿಷಿ ನೀಡಿ ನುಣುಚಿಕೊಳ್ಳುತ್ತಿದ್ದರು. ಸ್ವಯಂಸೇವಾ ಸಂಘದ ಸದಸ್ಯರ ಕಾರ್ಯಾಚರಣೆಯಿಂದ ಘಟನೆ ಬೆಳಕಿಗೆ ಬಂದಿದೆ.

ಸ್ಥಿತಿವಂತ ಕುಟುಂಬದಲ್ಲಿ ಜನಿಸಿದ್ದ ಹೇಮಾವತಿ ಶಾಲಾ ದಿನಗಳಿಂದಲೂ ಓದಿನಲ್ಲಿ ಮುಂದೆ. ಹೇಮಾವತಿಗೆ ಸೋಮಶೇಖರನೆಂಬ ತಮ್ಮನಿದ್ದಾನೆ. ಬಿ.ಕಾಂ.ನಲ್ಲಿ ತನ್ನ ಗೆಳತಿಯರಿಗಿಂತ ಹೆಚ್ಚು ಅಂಕ ಗಳಿಸಿದ್ದ ಹೇಮಾವತಿ ಸ್ಥಳೀಯ ಚಾರ್ಟೆರ್ಡ್ ಅಕೌಂಟೆಂಟ್ ಬಳಿ ಕೆಲಸಕ್ಕೆ ಸೇರಿದ್ದಳು. ಆದರೆ ಆಕೆ ಕೆಲಸಕ್ಕೆ ಹೋಗುವುದು ಪಾಲಕರಿಗೆ ಇಷ್ಟವಿರಲಿಲ್ಲ. ಆಗಾಗ ಆಕೆಗೆ ಅವರು ವೃಥಾ ನಿಂದಿಸುತ್ತಿದ್ದರು. ಪೊಲೀಸರ ಕಾರ್ಯಾಚರಣೆ ವೇಳೆ ಆಕೆ ಮಾಧ್ಯಮ ಪ್ರತಿನಿಧಿಗಳಿಗೆ ಕೇಳಿದ ಪ್ರಶ್ನೆ: ‘ನಾನೇನು ತಪ್ಪು ಮಾಡಿzನೆ?’ ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದರೆ ಇಂತಹ ಪ್ರಶ್ನೆ ಕೇಳುತ್ತಿದ್ದಳೆ? ಆಕೆಗೆ ಆರೋಗ್ಯ ಸರಿ ಇರಲಿಲ್ಲ ಎಂಬುದೇನೋ ನಿಜ. ೪ ವರ್ಷಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಕೊನೆಗೆ ಆಸ್ಪತ್ರೆಯಿಂದ ಮನೆಗೆ ಕರೆತಂದರು. ಅನಂತರ ಏನಾಯ್ತು ಎಂಬುದು ಹೇಮಾವತಿಗೆ ತಿಳಿದಿಲ್ಲ. ೪ ವರ್ಷಗಳಿಂದ ಒಂದೇ ಕೊಠಡಿಯಲ್ಲಿ ವಾಸವಿರುವುದು ಮಾತ್ರ ಆಕೆಗೆ ತಿಳಿದಿದೆ. ಒಂದೇ ಕಡೆ ಸತತವಾಗಿ ಮಲಗಿದ್ದರಿಂದ ಆಕೆಯ ಕೈಕಾಲು ಸ್ವಾಧೀನದಲ್ಲಿಲ್ಲ. ಎಲುಬು ಸವೆದಿದೆ. ಈಗ ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಗೆ ಕೌನ್ಸೆಲಿಂಗ್ ನಡೆಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಆದರೆ ಚೇತರಿಸಿಕೊಳ್ಳಲು ಇನ್ನೂ ಸಾಕಷ್ಟು ಸಮಯ ಬೇಕು ಎನ್ನುತ್ತಾರೆ ವೈದ್ಯರು. ಮಾನಸಿಕ ಖಿನ್ನತೆಯಿಂದ ಹೊರಗೆ ಬರಬೇಕಾದರೆ ಸೂಕ್ತ ಚಿಕಿತ್ಸೆಯೇ ಬೇಕು.

ಹೇಮಾವತಿಯ ತಂದೆ ರೇಣುಕಪ್ಪ ಬಡವರೇನಲ್ಲ. ಬೆಂಗಳೂರಿನಲ್ಲೇ ೨-೩ ಕಡೆ ಆಸ್ತಿ ಹೊಂದಿದ್ದಾರೆ. ಪ್ರತಿ ತಿಂಗಳೂ ಸಾಕಷ್ಟು ಬಾಡಿಗೆಯೂ ಬರುತ್ತಿದೆ. ಆದರೆ ಆದಾಯಕ್ಕೆ ತಕ್ಕಂತೆ ಜೀವನಶೈಲಿ ಅವರದ್ದಾಗಿರಲಿಲ್ಲ. ಅಲ್ಲಲ್ಲಿ ಬಿರುಕು ಬಿಟ್ಟ , ಬಣ್ಣ ಮಾಸಿದ ಗೋಡೆಗಳ ಭೂತಬಂಗಲೆಯಂತಿರುವ ಮನೆ. ಪೊಲೀಸರು ಹಾಗೂ ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತರು ಅವರ ಮನೆಗೆ ತೆರಳಿದಾಗ ರೇಣುಕಪ್ಪ ವ್ಯಗ್ರರಾಗಿ ಕೂಗಾಡಿದ್ದಾರೆ. ಈ ನಡುವೆ ಮನೆಗೆ ಭೇಟಿ ನೀಡಿದ ಮಾಧ್ಯಮ ಮಂದಿ ಹೇಮಾವತಿಯನ್ನು ಪಾಲಕರು ಈ ಸ್ಥಿತಿಗೆ ದೂಡಲು ಪ್ರೇಮ ಪ್ರಕರಣವೇ ಕಾರಣವೆಂದು  ಷರಾ ಬರೆದುಬಿಟ್ಟಿದ್ದಾರೆ! ಪಾಲಕರಿಗೆ ಆಕೆಯ ನಡವಳಿಕೆ ಇಷ್ಟವಿಲ್ಲದ ಕಾರಣಕ್ಕೆ ಮನೆಯೊಳಗೆ ಬೆತ್ತಲೆಯಾಗಿ ಕೂಡಿ ಹಾಕಿದ್ದಾರೆ ಎಂದೂ ಆರೋಪಿಸಲಾಗಿದೆ. ಆದರೆ ಇದರಲ್ಲಿ ನಿಜಾಂಶವೆಷ್ಟು ಎಂಬುದು ಮಾತ್ರ ಹೇಮಾವತಿ ಚಿಕಿತ್ಸೆಯ ಮೂಲಕ ಚೇತರಿಸಿಕೊಂಡು ಸ್ವಸ್ಥಳಾದಾಗ ಮಾತ್ರ ಗೊತ್ತಾದೀತು. ಪ್ರೇಮ ಪ್ರಕರಣವೇ ಇರಲಿ ಅಥವಾ ಇನ್ನೇನೇ ಕಾರಣವಿರಲಿ, ಪದವೀಧರೆಯಾದ ಮಗಳನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಪಾಲಕರು ಈ ಪರಿ ನಡೆಸಿಕೊಳ್ಳುತ್ತಾರೆಂದರೆ ಆ ಪಾಲಕರಿಗೆ ಮನುಷ್ಯತ್ವ ಇದೆಯೆಂದು ಹೇಳಲು ಹೇಗೆ ಸಾಧ್ಯ? ಒಂದು ವೇಳೆ ಹೇಮಾವತಿ ಮಾನಸಿಕ ಅಸ್ವಸ್ಥೆಯಾಗಿದ್ದರೂ ಅದಕ್ಕೆ ಚಿಕಿತ್ಸೆ ಕೊಡಿಸುವುದು ಪಾಲಕರ ಕರ್ತವ್ಯವಲ್ಲವೆ?

***

ಈ ಘಟನೆ ಇನ್ನಷ್ಟು ವಿಚಿತ್ರವಾದುದು. ಇಡೀ ಜೀವನವನ್ನು ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ಮುಡಿಪಿಟ್ಟು ನಾಲ್ಕೂ ಮಕ್ಕಳಿಗೆ ಸೂಕ್ತ ನೆಲೆ ಕೂಡ ಕಲ್ಪಿಸಿಕೊಟ್ಟಿದ್ದ ವ್ಯಕ್ತಿ ಇಳಿವಯಸ್ಸಿನಲ್ಲಿ ನಾಯಿ ಸರಪಳಿ ಮತ್ತು ಹಗ್ಗದಿಂದ ಬಂಧಿಯಾಗಿ ಚಿತ್ರಹಿಂಸೆ ಅನುಭವಿಸಬೇಕಾದ ಆತಂಕಕಾರಿ ಘಟನೆ. ಇದು ಕೂಡ ನಡೆದಿದ್ದು ಅದೇ ಬೆಂಗಳೂರಿನ ಬನಶಂಕರಿ ಬಳಿಯ ಮನೆಯೊಂದರಲ್ಲಿ. ಬನಶಂಕರಿಯ ಶಾಕಾಂಬರಿ ನಗರ ನಿವಾಸಿ ಅನಂತರಾಮ ಶೆಟ್ಟಿ (೯೩) ಅವರು ತಮ್ಮ ಸ್ವಂತ ಮಗ-ಸೊಸೆಯಿಂದ ಚಿತ್ರಹಿಂಸೆ ಅನುಭವಿಸಿದ ದುರ್ದೈವಿ. ಅನಂತರಾಮ ಶೆಟ್ಟಿ ಅವರು ೩೦ ವರ್ಷಗಳಿಂದ ಕೆ.ಆರ್.ಮಾರ್ಕೆಟ್‌ನಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದು ಇತ್ತೀಚೆಗೆ ಅದು ಮುಚ್ಚಿ ಹೋಗಿದೆ. ಶಾಕಾಂಬರಿ ನಗರದಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಸಿಕೊಂಡಿದ್ದರು. ೨ನೇ ಮಗ ಸುರೇಶ್‌ನ ಜೀವನ ನಿರ್ವಹಣೆಗೆ ಪ್ರತ್ಯೇಕ ಪ್ರಾವಿಶನ್ ಸ್ಟೋರ್ ಕೂಡ ಹಾಕಿಕೊಟ್ಟಿದ್ದರು. ತಮ್ಮ ಪತ್ನಿ ಮೃತಪಟ್ಟ ಬಳಿಕ ೨ನೇ ಮಗನ ಮನೆಯಲ್ಲಿ ವಾಸವಾಗಿದ್ದರು. ತಮ್ಮ ಸುಪರ್ದಿಗೆ ತಂದೆಯ ಆಸ್ತಿ ಬಂದ ಬಳಿಕ ಮಗ-ಸೊಸೆ ಅವರನ್ನು ಕಾಲ ಕಸಕ್ಕಿಂತ ಕೀಳಾಗಿ ಕಾಣತೊಡಗಿದ್ದರು. ಹೊತ್ತು ಹೊತ್ತಿಗೆ ಊಟವನ್ನೇ ಹಾಕುತ್ತಿರಲಿಲ್ಲ. ಹಸಿವು ತಡೆಯಲಾರದೆ ಈ ವೃದ್ಧ ಸುತ್ತಮುತ್ತಲ ಜನರ ಮನೆಗೆ ಹೋಗಿ ಹಣ, ಊಟ ಬೇಡುತ್ತಿದ್ದರು. ಈ ವಿಷಯ ಅರಿತ ಮಗ ಸುರೇಶ್ ‘ಬೀದಿಯಲ್ಲಿ ಸುತ್ತಾಡಿ ನಮ್ಮ ಮರ್ಯಾದೆ ತೆಗೀತೀಯಾ’ ಎಂದು ಕೂಗಾಡಿ, ಕಟ್ಟಡದ ೩ನೇ ಮಹಡಿಗೆ ಎಳೆದೊಯ್ದು ಅಲ್ಲಿರುವ ೨ ನೀರಿನ ಸಿಂಟೆಕ್ಸ್ ಟ್ಯಾಂಕ್‌ಗಳ ಕೆಳಗಿನ ಸಣ್ಣ ಜಾಗದಲ್ಲಿ ಕಬ್ಬಿಣದ ಸರಪಣಿ ಮತ್ತು ಹಗ್ಗದಿಂದ ತಂದೆಯನ್ನು ಕಟ್ಟಿ ಹಾಕಿದ್ದ. ಕಳೆದ ೬ ತಿಂಗಳಿಂದ ವೃದ್ಧ ಅಲ್ಲೇ ಇದ್ದರು. ಇನ್ನೂ ಮೂರ‍್ನಾಲ್ಕು ದಿನ ಅಲ್ಲೇ ಇದ್ದಿದ್ದರೆ ಆ ಹಿರಿಯ ಜೀವ ನಿದ್ರಾಹಾರವಿಲ್ಲದೆ ಪ್ರಾಣ ಬಿಡುತ್ತಿದ್ದರೇನೋ… ಮನೆಯಲ್ಲಿ ಗಲೀಜು ಮಾಡ್ತೀನಿಂತ ಬೈಯುತ್ತಿದ್ದ ಮಗ-ಸೊಸೆ ಮಹಡಿ ಮೇಲೆ ಕರೆದೊಯ್ದು ನನ್ನ ಕೈಕಾಲುಗಳಿಗೆ ಹಗ್ಗ ಕಟ್ಟಿ ಕೂಡಿ ಹಾಕಿದ್ದರು ಎಂದು ಆ ವೃದ್ಧ ಪೊಲೀಸರ ಕಾರ್ಯಾಚರಣೆ ವೇಳೆ ತಿಳಿಸಿದ್ದಾರೆ. ಮಗ ಸುರೇಶ್ ಮಾತ್ರ ಹೇಳುವುದೇ ಬೇರೆ ‘ಎಲ್ಲೆಂದರಲ್ಲಿ ಉಗುಳಿ ಮನೆಯೆಲ್ಲ ಗಲೀಜು ಮಾಡುತ್ತಿದ್ದ. ಜತೆಗೆ ಬೀದಿಗೆ ಹೋಗಿ ಭಿಕ್ಷೆ ಬೇಡುತ್ತಿದ್ದ. ಈ ಕಾರಣಕ್ಕಾಗಿ ಹಗಲಿನಲ್ಲಿ ಮಾತ್ರ ಟೆರೇಸ್ ಮೇಲೆ ಇಟ್ಟು ರಾತ್ರಿ ವೇಳೆ ಮಲಗಲು ಮನೆಯೊಳಗೆ ಕರೆತರುತ್ತಿದ್ದೆವು. ಸಮಯಕ್ಕೆ ಸರಿಯಾಗಿ ಊಟ ಕೊಡುತ್ತಿದ್ದೆವು’. ಮಗ ಹೇಳುವ ಈ ಮಾತು ನಿಜವೇ ಆಗಿದ್ದರೆ ಸ್ಥಳೀಯರು ಈ ಬಗ್ಗೆ ವಿಚಾರಿಸಿದಾಗ ‘ನೀನ್ಯಾರೋ ಕೇಳೋಕೆ?’ ಎಂದು ಜಗಳಕ್ಕೆ ಬರುತ್ತಿದ್ದುದಾದರೂ ಏಕೆ? ತನ್ನ ೪ ಮಕ್ಕಳಿಗೆ ಜೀವನ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟ ತಂದೆಗೆ ಮಕ್ಕಳು ಮಾಡುವ ಉಪಕಾರ ಇದೇನಾ? ಸಾಯುವ ತನಕ ತಮ್ಮ ತಂದೆಯನ್ನು ಗೌರವದಿಂದ ಬಾಳಿ ಬದುಕುವಂತೆ ನೋಡಿಕೊಳ್ಳಲು ಅವರಿಗೆ ಸಾಧ್ಯವಿರಲಿಲ್ಲವೆ?

ತಂದೆ ಮನೆಯೊಳಗೆ ಎಲ್ಲೆಂದರಲ್ಲಿ ಉಗುಳಿ ಗಲೀಜು ಮಾಡುತ್ತಿದ್ದರು ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಹಾಗೆ ಮಾಡಿದ ಮಾತ್ರಕ್ಕೆ ಅವರಿಗೆ ಇಂತಹ ಶಿಕ್ಷೆ ವಿಧಿಸಬೇಕೆ? ಮನೆಯಲ್ಲಿ ಬೆಕ್ಕು, ನಾಯಿ ಮೊದಲಾದ ಸಾಕು ಪ್ರಾಣಿಗಳು ಗಲೀಜು ಮಾಡಿದರೆ ಅದನ್ನು ಸ್ವಚ್ಛಗೊಳಿಸುವುದಿಲ್ಲವೆ? ಅವುಗಳನ್ನು ಆ ಕಾರಣಕ್ಕಾಗಿ ದಂಡಿಸಲು ಸಾಧಾರಣವಾಗಿ ಯಾರೂ ಹೋಗುವುದಿಲ್ಲ. ಕೆಲವರಂತೂ ಸಾಕು ನಾಯಿಗಳನ್ನು ಮನುಷ್ಯರಿಗಿಂತ ಹೆಚ್ಚು ಪ್ರೀತಿಸಿ, ತಮ್ಮ ಕಾರಿನಲ್ಲಿ ಅವುಗಳನ್ನು ಹೊರಗೆ ಕರೆದುಕೊಂಡು ಹೋಗುವುದಲ್ಲದೆ ದುಬಾರಿ ಆಹಾರವನ್ನೂ ಅವುಗಳಿಗಾಗಿ ವ್ಯಯಿಸುವುದುಂಟು. ಆದರೆ ಚಿಕ್ಕಂದಿನಿಂದ ತಮ್ಮನ್ನು ಪಾಲಿಸಿ, ಪೋಷಿಸಿ, ಬದುಕು ರೂಪಿಸಿ, ಬದುಕಿಗೆ ಬೇಕಾದ ನೆಲೆ ಕೂಡ ಕಲ್ಪಿಸಿಕೊಟ್ಟ ತಂದೆಯನ್ನು ಮನೆಯಲ್ಲಿ ನಾಯಿಗಿಂತ ಕೀಳಾಗಿ ನೋಡುತ್ತಾರೆಂದರೆ… ಅಂಥವರಿಗೆ ಮನುಷ್ಯತ್ವ ಇದೆ ಎಂಬುದನ್ನು ಒಪ್ಪಿಕೊಳ್ಳುವುದಾದರೂ ಹೇಗೆ?

***

ಮಾವನಿಂದ ಬಂಧನಕ್ಕೊಳಗಾದ ಮಾನಸಿಕ ಅಸ್ವಸ್ಥನಾಗಿದ್ದ ಅಳಿಯ ಕಳೆದ ೩ ವರ್ಷಗಳಿಂದ ದನದ ಕೊಟ್ಟಿಗೆಯಲ್ಲಿರಬೇಕಾದ ಘಟನೆ ನಡೆದಿರುವುದು ರಾಣೆಬೆನ್ನೂರು ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ. ೪೮ರ ವಯಸ್ಸಿನ ಹನುಮಂತಪ್ಪ ಭರಮಪ್ಪ ಕ್ಯಾತಪ್ಪನವರ ಮಾನಸಿಕ ಅಸ್ವಸ್ಥನಾಗಿ ಅಸಭ್ಯವಾಗಿ ವರ್ತಿಸುತ್ತಿದ್ದನೆನ್ನಲಾಗಿದೆ. ಇದರಿಂದ ಬೇಸತ್ತ ಆತನ ಮಾವ ತನ್ನ ಜಮೀನಿನ ಕೊಟ್ಟಿಗೆಯಲ್ಲಿ ಆತನನ್ನು ಕೂಡಿ ಹಾಕಿದ್ದ. ಸದ್ಯ ಈಗ ಆತ ಬಂಧಮುಕ್ತನಾಗಿದ್ದಾನೆ. ಆತನಿಗೆ ಧಾರವಾಡದ ಹುಚ್ಚಾಸ್ಪತ್ರೆಯಲ್ಲಿ ಒಮ್ಮೆ ಚಿಕಿತ್ಸೆಯನ್ನು ಕೊಡಿಸಲಾಗಿತ್ತಂತೆ. ಮಾನಸಿಕ ಅಸ್ವಸ್ಥನಾದ ಮಾತ್ರಕ್ಕೆ ದನದ ಕೊಟ್ಟಿಗೆಯಲ್ಲಿ ಆತನನ್ನು ಕೂಡಿ ಹಾಕುವುದು ಎಷ್ಟು ಸಮಂಜಸ?

***

ಮಂಗಳೂರಿನ ಸಮೀಪದ ಗ್ರಾಮವೊಂದರಿಂದ ನನಗೊಂದು ಪತ್ರ ಬಂದಿದೆ. ಆ ಪತ್ರ  ಬರೆದವಳು ಮೆಹಬೂಬ ಎಂಬ ಪದವೀಧರೆ ಯುವತಿ. ಬಡತನದಲ್ಲೇ ಬೆಳೆದ ಆಕೆಯನ್ನು ಸ್ವಾಭಿಮಾನಿ ತಂದೆ-ತಾಯಿ ಸಮಾಜದ ಚುಚ್ಚು ನುಡಿಗಳಿಗೆ ಹೆದರದೆ ಪದವಿವರೆಗೂ ಓದಿಸಿದರು. ಸಂಬಂಧಿಕರೊಬ್ಬರು ಮದುವೆ ಪ್ರಸ್ತಾಪ ತೆಗೆದು ಆಕೆಯ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವಲ್ಲಿ ಯಶಸ್ವಿಯಾದರು. ಮದುವೆಯಂತೂ ಆಯ್ತು. ಆದರೆ ಎಂಥವನ ಜೊತೆಯಲ್ಲಿ? ಶಾಲೆಯ ಕೊಠಡಿಯನ್ನೇ ಕಾಣದ, ಎದೆ ಸೀಳಿದರೂ ಎರಡಕ್ಷರವಿರದ, ಆದರೆ ಸಭ್ಯನ ಮುಖವಾಡ ಧರಿಸಿದ ಆತ ಚತುರ ಮಾತುಗಾರನಾಗಿ ಮನೆಯವರನ್ನು ಆಕರ್ಷಿಸಿದ್ದ. ಆದರೆ ಆತನೊಬ್ಬ ಸ್ಯಾಡಿಸ್ಟ್ ಮನೋಭಾವದ ವ್ಯಕ್ತಿ ಎಂದರಿವಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಸದಾಕಾಲ ಹೆಂಡತಿಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಅಸಭ್ಯವರ್ತನೆ, ಅಶ್ಲೀಲ ಮಾತುಗಳು… ಇದರಿಂದ ನೊಂದ ಮೆಹಬೂಬ ಕೊನೆಗೂ ಆತನಿಗೆ ತಲಾಖ್ ನೀಡಿ ಇದೀಗ ಅರ್ಧಕ್ಕೇ ನಿಂತ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾಳೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂಬುದು ಆಕೆಯ ಬಯಕೆ.

‘ಭಾರತದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಇಲ್ಲ ಎಂಬುದನ್ನು ಅಲ್ಲಗಳೆಯಲು ಇನ್ನೂ ನೂರಾರು ವರ್ಷಗಳ ಕಾಲ ಬೇಕಾದೀತು. ಯಾಕೆಂದರೆ ಯಾವ ಪುರುಷ ಕೂಡ ತನಗಿಂತಲೂ ಒಬ್ಬ ಹೆಣ್ಣು ಹೆಚ್ಚು ಪ್ರತಿಷ್ಠೆ ಹೊಂದುವುದಾಗಲಿ, ಯಜಮಾನಿಕೆ ತೋರುವುದಾಗಲಿ ಇಷ್ಟಪಡುವುದಿಲ್ಲ… ಮುಸ್ಲಿಂ ಕುಟುಂಬದಲ್ಲಿ ಜನಿಸಿದ ನನ್ನ ಸಮುದಾಯದ ಮಹಿಳೆಯರ ಸ್ಥಿತಿಗತಿ ನೋಡುವಾಗ ಅಯ್ಯೋ ಅನ್ನಬೇಕೋ ಅಥವಾ ಅದರಿಂದ ಹೊರಬರಲು ಪ್ರೇರೇಪಿಸಬೇಕೋ ಎಂಬುದೇ ಅರಿವಾಗುತ್ತಿಲ್ಲ… ಮೂಢನಂಬಿಕೆ, ಸಂಪ್ರದಾಯಗಳ ಕೊಂಪೆಯಲ್ಲಿ ನರಳುತ್ತಿರುವ ಈ ಸಮುದಾಯ ಎಂದೂ ಕೂಡ ತನ್ನ ಸೃಷ್ಟಿಯ ಉzಶಗಳನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಕುರ್ ಆನ್ ಧಾರ್ಮಿಕ ಗ್ರಂಥ ಎಂದು ಒಪ್ಪಿಕೊಂಡು ಅದನ್ನು ಹೊತ್ತು ನಡೆಯಿತೆ ಹೊರತು ಅದನ್ನೆಂದೂ ಅರ್ಥವರಿತು ಓದಲು, ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಮುಂದಾಗಲಿಲ್ಲ…’ ಮೆಹಬೂಬ ಅವಳ ಪತ್ರ ಹೀಗೇ ಸಾಗುತ್ತದೆ. ಮೆಹಬೂಬ ತನ್ನ ಬದುಕಿನಲ್ಲಿ ಅದೆಷ್ಟು ಕಷ್ಟಪಟ್ಟಿರಬಹುದು, ಆಕೆ ಕಟ್ಟಿಕೊಂಡಿದ್ದ ಹೊಂಗನಸುಗಳು ಅದೆಷ್ಟು ಛಿದ್ರವಾಗಿರಬಹುದು ಎಂಬುದು ಈ ಪತ್ರದ ಸಾಲುಗಳಿಂದ ವ್ಯಕ್ತ.

ತನ್ನ ಹಾಗೆಯೇ ಇನ್ನೂ ಅನೇಕ ಮಂದಿ ಮುಸ್ಲಿಂ ಯುವತಿಯರು ಇಂತಹ ನರಕಸದೃಶ ಶೋಷಣೆಗೆ ಒಳಗಾಗಿರುತ್ತಾರೆ. ತನ್ನ ಈ ಪತ್ರದ ಪ್ರಕಟಣೆ ಮೂಲಕ  ಅಂಥವರಿಗೆ ಒಂದಷ್ಟು ಸಾಂತ್ವನ ಸಿಗಬಹುದೇನೋ ಎಂಬ ಆಸೆಯಿಂದ ಮೆಹಬೂಬ ಈ ಪತ್ರ ಬರೆದಿರಬಹುದು.

ಅದೆಷ್ಟು  ಯೋಚಿಸಿದರೂ ಒಂದಂತೂ ಅರ್ಥವಾಗುತ್ತಿಲ್ಲ. ಮನುಷ್ಯನೆಂಬ ಪ್ರಾಣಿ ಬೇರೆ ಪ್ರಾಣಿಗಳಿಗಿಂತ ವಿಭಿನ್ನ. ಬೇರೆ ಪ್ರಾಣಿಗಳಿಗೆ ಯೋಚಿಸುವ ಶಕ್ತಿ ಇಲ್ಲ. ಆದರೆ ಮನುಷ್ಯನಿಗಿದೆ. ಬೇರೆ ಪ್ರಾಣಿಗಳಿಗಿಂತ ಮಿಗಿಲಾದ ಶಕ್ತಿ ಆತನಿಗಿದೆ. ಆದ್ದರಿಂದಲೇ ಆತನಿಗೆ ಮನುಷ್ಯ ಎನ್ನುವುದು. ದಯೆ, ಕರುಣೆ, ಅನುಕಂಪ, ಸ್ನೇಹ, ಆರ್ದ್ರತೆ, ಪ್ರೀತಿ, ವಿಶ್ವಾಸ, ಔದಾರ್ಯ, ಪರೋಪಕಾರ ಮನೋಭಾವ… ಮುಂತಾದ ಗುಣಗಳಿರುವುದು ಆತ ಮನುಷ್ಯ ಎಂಬ ಕಾರಣಕ್ಕಾಗಿಯೇ. ವಯಸ್ಸು ಮಾಗಿದಂತೆ ಮನುಷ್ಯನಲ್ಲಿ ಇಂತಹ ಉತ್ತಮ ಗುಣಗಳು ವಿಕಾಸವಾಗಬೇಕು ಎನ್ನುವುದು ಒಂದು ನಿರೀಕ್ಷೆ. ಆದರೆ ಪದವೀಧರೆಯಾದ ಮಗಳನ್ನೇ ಬೆತ್ತಲೆಯಾಗಿ ಕತ್ತಲ ಕೋಣೆಯಲ್ಲಿ ವರ್ಷಗಳಿಂದ ಕೂಡಿ ಹಾಕುವ ಕೆಟ್ಟ ತಂದೆ, ನೆಲೆ ಕಲ್ಪಿಸಿಕೊಟ್ಟ ವೃದ್ಧ ತಂದೆಯನ್ನೇ ಸರಪಳಿಯಿಂದ ಬಂಧಿಸಿ ಕೂಡಿ ಹಾಕುವ ನಿಷ್ಕರುಣಿ ಮಗ, ಮಾನಸಿಕ ಅಸ್ವಸ್ಥನೆಂಬ ಕಾರಣಕ್ಕೆ ಅಳಿಯನನ್ನು ದನದ ಕೊಟ್ಟಿಗೆಯಲ್ಲಿ ಕೂಡಿ ಹಾಕುವ ಕ್ರೂರಿ ಮಾವ, ವಿದ್ಯಾವಂತ ಹೆಂಡತಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬಯಸುವ ಅವಿದ್ಯಾವಂತ ಸ್ಯಾಡಿಸ್ಟ್ ಗಂಡ… ಇಂತಹ ಇನ್ನೂ ಅದೆಷ್ಟೋ ಬೆಳಕಿಗೆ ಬಾರದ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇವೆ. ಮಾನವೀಯ ಸಂಬಂಧಗಳು ಅರಳಬೇಕಾದ ಮನೆಯೇ ಅಲ್ಲಿರುವ ಕೆಲವರ ಪಾಲಿಗೆ ನರಕವಾಗುತ್ತಿದೆ. ಮನುಷ್ಯ ಸಂಬಂಧಗಳಿಗೆ ಬೆಲೆಯೇ ಇಲ್ಲವೇನೋ ಎಂಬ ವಾತಾವರಣ ಸೃಷ್ಟಿಯಾಗುತ್ತಿದೆ.

ಹಾಗಿದ್ದರೆ ಮಾನವೀಯತೆಗೆ ತುಕ್ಕು ಹಿಡಿದಿದೆಯೆ? ಇಂತಹ ಸಂಶಯ ನಿಮಗೂ ಬಂದಿರಬಹುದು!

Leave a Reply

Your email address will not be published.

This site uses Akismet to reduce spam. Learn how your comment data is processed.