ಪು ರವಿವರ್ಮ,
ಉಪನ್ಯಾಸಕರು

ಡಿ ವಿ ಗುಂಡಪ್ಪನವರು ಆಧುನಿಕ ಕನ್ನಡ ಸಾಹಿತ್ಯ ವನದ ಅಶ್ವತ್ಥ ವೃಕ್ಷ ಎಂದೇ ಕೀರ್ತಿತರು. ಹೇಗೆ ಅಶ್ವತ್ಥವು ತನ್ನ ಮಹಾನತೆ – ವಿಶಾಲತೆಗಳಿಂದಾಗಿ ಪೂಜ್ಯವೆನಿಸಿದೆಯೋ ಹಾಗೆಯೇ ಕನ್ನಡ ಸಾಹಿತ್ಯ ಕೃಷಿಯಲ್ಲಿ ಡಿವಿಜಿಯವರ ಪ್ರತಿಮೆಯೂ ಶ್ರೇಷ್ಟವೆನಿಸಿದೆ. ಬರೆದಂತೆ ಬಾಳಿದ ವಿರಳರೀತಿಯ ವ್ಯಕ್ತಿತ್ವದ ಮಹಾನತೆ ಅದು. ಸಾಹಿತ್ಯ, ಸಂಸ್ಕೃತಿ, ಪತ್ರಿಕೊದ್ಯಮ, ಸಮಾಜಸೇವೆಗಳಂಥ ಹತ್ತಾರು ಗಂಭೀರ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ದುಡಿದು ಮಾಸದ ಮುದ್ರೆಯೊತ್ತಿದ ವಿಶಾಲತೆ ಅದು. ಡಿವಿಜಿಯವರು ಈಗ ಇದ್ದಿದ್ದರೆ ಈ ಮಾರ್ಚ್ 17ಕ್ಕೆ ಅವರಿಗೆ 137 ವರ್ಷವಾಗಿರುತ್ತಿತ್ತು.

ಡಿವಿಜಿಯವರ ಸಾಹಿತ್ಯ ಸೃಷ್ಟಿಯನ್ನೊಮ್ಮೆ ಗಮನಿಸಿದರೆ ಅವರ ವಿದ್ವತ್ತೆ ಎಂತಹುದೆಂಬುದರ ಪರಿಚಯವಾಗುತ್ತದೆ. ಅವರೇ ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಪ್ರತೀವಾರ ನಡೆಯುತ್ತಿದ್ದ ಅಧ್ಯಯನ ಮಂಡಲಗಳಲ್ಲಿ ಅವರು ಪೌರಸ್ತ್ಯ-ಪಾಶ್ಚಾತ್ಯ ಜಗತ್ತಿನ ರಾಜ್ಯಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಕಾವ್ಯಶಾಸ್ತ್ರಗಳಲ್ಲಿ ಮಹತ್ತ್ವದ್ದು ಎನಿಸಿರುವ ಹಲವು ಹೆಬ್ಬೊತ್ತಿಗೆಗಳ ಆಳವಾದ ಅಧ್ಯಯನ ನಡೆಸುತ್ತಿದ್ದರು. ಮನು, ವ್ಯಾಸ, ವಾಲ್ಮೀಕಿ, ಕಾಳಿದಾಸ, ಭವಭೂತಿಯಿಂದ ಮೊದಲುಗೊಂಡು ಪ್ಲೇಟೋ, ಗ್ಲ್ಯಾಡ್ ಸ್ಟನ್, ಬಕ್, ಮಾರ್ಲೇ, ಶೇಕ್ಸ್ ಪಿಯರ್ ಮುಂತಾದವರ ಕಾವ್ಯ-ಗ್ರಂಥಗಳೂ ಅವರ ಗಂಭೀರವಾದ ವ್ಯಾಸಂಗಕ್ಕೆ ಒಳಪಡುತ್ತಿದ್ದವು. ಇದು ಕೇವಲ ಓದು-ತಿಳಿವಳಿಕೆಗಷ್ಟೇ ಸೀಮಿತವಾಗದೆ ಅನೇಕ ಬಾರಿ ಗ್ರಂಥದ ಸಾರವತ್ತಾದ ಭಾಗಗಳನ್ನೆಲ್ಲ ಕಂಠಗತವಾಗಿಸಿಕೊಂಡು ಸರ್ವದಾ ನೆನಪಿನಲ್ಲಿಟ್ಟು ಮೆಲುಕಾಡಿಸುತ್ತಿದ್ದರು ಡಿವಿಜಿ.
ಕುವೆಂಪು ಅವರು ’ಮಂಕುತಿಮ್ಮನ ಕಗ್ಗ’ವನ್ನು ಓದಿದ ಬಳಿಕ ತಾವು ಒಂದು ಕಗ್ಗವನ್ನು ಬರೆದು ತಮ್ಮ ಅಭಿಪ್ರಾಯವನ್ನು ಸೊಗಸಾಗಿ ವ್ಯಕ್ತಪಡಿಸಿದ್ದಾರೆ.


ಹಸ್ತಕ್ಕೆ ಬರೆ ನಕ್ಕೆ; ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನಕೆ ತುತ್ತ ತುದಿಯಲಿ ನಿನ್ನ
ಪುಸ್ತಕಕೆ ಕೈ ಮುಗಿದೆ – ಮಂಕುತಿಮ್ಮ
ಡಿವಿಜಿ ಅವರ ಕಾವ್ಯ ಸೃಷ್ಟಿಯಲ್ಲಿ ಸಾಹಿತ್ಯ–ಸುಭಾಷಿತ–ದರ್ಶನ ಹೀಗೆ ಗುರುತಿಸಬಹುದಾದ ಎಲ್ಲ ಲಕ್ಷಣಗಳೂ ದೃಷ್ಟವಾಗುತ್ತಿದ್ದವು. ಇದೆಲ್ಲಕ್ಕಿಂತ ಅಚ್ಚರಿಯ ಸಂಗತಿಯೆಂದರೆ ಅವರ ಲೋಕ ಸಂಗ್ರಹ ಮತ್ತು ಲೋಕ ಸಂಪರ್ಕ. ಇಷ್ಟೆಲ್ಲ ಪಾಂಡಿತ್ಯ, ವಿದ್ವತ್ತೆ ಅವರನ್ನೆಂದು ಸಾಮಾನ್ಯ ಜನರ ಸಂಪರ್ಕದಿಂದ ದೂರ ಕೊಂಡೊಯ್ಯಲೇ ಇಲ್ಲ. ಸಾಮಾನ್ಯವಾಗಿ ಪಂಡಿತರೆನಿಸಿದ ಗಣ್ಯರಿಗೆ ಹಾಗಾಗುತ್ತದೆ. ಅವರು ತಮ್ಮದೇ ಪ್ರತ್ಯೇಕ ವೃತ್ತದೊಳಗಿರುವಲ್ಲೇ ಕ್ಷೇಮವನ್ನು ಆನಂದವನ್ನು ಅನುಭವಿಸುತ್ತಾರೆ. ಡಿವಿಜಿಯವರ ವಿಷಯ ಹಾಗಿಲ್ಲ. ವಿದ್ವಾಂಸರ ಜೊತೆಗಿನ ಕಲಾಪಗಳಲ್ಲಿ ತತ್ತ್ವ ಜಿಜ್ಞಾಸೆ ಎದುರಿಗಿದ್ದ ಸಂದರ್ಭದಲ್ಲಷ್ಟೆ ಅವರ ವಿದ್ವತ್ತೆ ಹೊರಬರುತ್ತಿದ್ದುದು. ಹಾಗಲ್ಲದೆ ರಸ್ತೆ ಬದಿಯಲ್ಲಿ ದಿನನಿತ್ಯ ಭೇಟಿಯಾಗುವ ಸರ್ವಸಾಮಾನ್ಯ ಜನರೊಂದಿಗಿನ ಅನೌಪಚಾರಿಕ ಮಾತುಕತೆಗೆ ಅವರಿಗೆ ಸಮಯವಿರುತ್ತಿತ್ತು ಮಾತ್ರವಲ್ಲ, ಅವರ ಜೊತೆಗಿನ ಚರ್ಚೆಗೆ ವಿಷಯಗಳೂ ಇರುತ್ತಿದ್ದವು. ಹೂ ಮಾರುವವರು, ತರಕಾರಿ ಮಾರುವವರು, ಕಮ್ಮಾರರು, ನೇಯ್ಗೆಕಾರರು ಇಂಥವರೊಡನೆ ಗಂಟೆಗಟ್ಟಲೆ ಅವರ ಮಾತುಕತೆ ನಡೆಯುತ್ತಿತ್ತು. ಅವರಿಗೆ ಪರಿಚಿತವಲ್ಲದ ಜನವರ್ಗ ಯಾವುದೂ ಇರಲಿಲ್ಲ. ಸರ್. ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿ ಮೊದಲಾದವರೊಂದಿಗೆ ಇದ್ದ ಒಡನಾಟವೇ ಪೋಲೆಪಲ್ಲಿ ಚಿನ್ನಪ್ಪ ಶೆಟ್ಟಿ, ಸೊಣ್ಣೇಗೌಡ, ಕಾಷ್ಠಿ ಹೈದರ್ ಸಾಬ್ ಅಂತಹವರೊಂದಿಗೂ ಇರುತ್ತಿತ್ತು. ಇದಕ್ಕೆ ಹಲವಾರು ಉದಾಹರಣೆಗಳನ್ನು ಜ್ಞಾಪಕ ಚಿತ್ರಶಾಲೆಯ ಸಂಪುಟಗಳಲ್ಲಿ ಕಾಣಬಹುದು. ಅದೊಂದು ಚೇತೋಹಾರಿ ಓದು. ಅವರ ಆತ್ಮೀಯತೆ ಯಾವುದೇ ಭೇದವಿಲ್ಲದೆ ಎಲ್ಲರಿಗೂ ವಿತರಣೆಯಾಗಿತ್ತು.

ಇಲ್ಲಿ ಡಿವಿಜಿಯವರ ಮತ್ತೊಂದು ವಿಶೇಷವೆಂದರೆ ಗಹನವಾದ ವಿಷಯಗಳನ್ನು ಸರಳವಾಗಿ ಮಂಡಿಸುವುದು. ಅದಕ್ಕೊಂದು ಅದ್ಭುತ ಉದಾಹರಣೆಯೆಂದರೆ ’ಮಂಕುತಿಮ್ಮನ ಕಗ್ಗ’. ಹಲವು ಬಾರಿ ಅನೇಕರಿಗನ್ನಿಸುವಂತೆ ನನಗೂ ಅನಿಸಿದ್ದಿದೆ, ಈ ಜೀವನಕ್ಕೆ ಮಂಕುತಿಮ್ಮನ ಕಗ್ಗ ಒಂದನ್ನು ಗಟ್ಟಿಯಾಗಿ ಹಿಡಿದು ನಡೆದರೆ ಸಾಕು. ಇದರ ಜನಪ್ರಿಯತೆಗೆ ಒಂದು ಪ್ರಬಲ ಕಾರಣ ಅದರ ವಾಕ್ಯಗಳು ಅಲ್ಲಿರುವ ಉಪಮೆಗಳಿಗೆ ಓದುವವರ ಮನಸ್ಸಿನಲ್ಲಿ ಏಳುವ ಪ್ರತಿಧ್ವನಿ. ಅದರಲ್ಲಿ ಇಲ್ಲದೇ ಇರುವುದಾದರು ಏನು? ಜೀವನದ ಸಂಕೀರ್ಣತೆಗೆ ಸರಳವಾದ ತತ್ತ್ವವಿಚಾರಗಳ ಬೋಧೆ ಕಗ್ಗದ ಹೂರಣವಾಗಿದೆ. ಡಿವಿಜಿ ತಮ್ಮ ಉಪನ್ಯಾಸ ಒಂದರಲ್ಲಿ ಹೀಗೆಂದಿದ್ದಾರೆ “ಮಾನವಕುಲದ ದಿನಚರಿಯ ಗೋಳಾಟ, ಗೊಣಗಾಟ, ಬಡಿದಾಟ, ಕುಣಿದಾಟಗಳಿಗೆ ಪ್ರತಿಧ್ವನಿ ಕೊಡುವುದೇ ಸಜೀವ ಸಾಹಿತ್ಯ… ಕಾವಿನಿಂದ ಕಾವ್ಯ.” ಸಾಹಿತ್ಯ ಸೃಷ್ಟಿಗೆ ಇದು ಸೂತ್ರಪ್ರಾಯವಾದ ಮಾತು. ಐನ್ ಸ್ಟೀನ್ ಹೇಳುವಂತೆ “It takes a touch of genius to make complex things simpler”. ಈ ಕಾರಣದಿಂದಾಗಿಯೇ ಡಿವಿಜಿಯವರು ವಿಶ್ವವಿದ್ಯಾಲಯದ ವಿದ್ವಾಂಸರುಗಳಿಗೆ ಎಷ್ಟು ಬೇಕಾದವರಾಗಿದ್ದರೋ ಅಷ್ಟೇ ಶ್ರೀ ಸಾಮಾನ್ಯನಿಗೂ ಬೇಕಾದವರಾಗಿದ್ದರು. ಅವರೆಲ್ಲರಿಗೆ ಡಿವಿಜಿ ಬೇಕಾಗುವಷ್ಟೇ, ಡಿವಿಜಿಯವರಿಗೂ ಅವರೆಲ್ಲ ಬೇಕಾದವರಾಗಿದ್ದರು. ಮನುಷ್ಯನಿಗೆ ಸಮಾಜದೊಂದಿಗೆ ಸಂಪರ್ಕವಿರಬೇಕು ಎನ್ನುವುದು ಅವರ ಒಂದು ಮಹಾತತ್ತ್ವ ಆಗಿತ್ತು. ಡಿವಿಜಿಯವರಿಗಿದ್ದ ಮುಖ್ಯಬಲವೆಂದರೆ ಅವರ ವಿಶಾಲವಾದ ಜನಸಂಪರ್ಕ. ನಿಜಾರ್ಥದಲ್ಲಿ ಅವರೊಬ್ಬ ’ಸಾರ್ವಜನಿಕ’ ಆಗಿದ್ದರು. ಅವರು ತರುತ್ತಿದ್ದ ಪತ್ರಿಕೆಗೂ ಅವರು ’ಸಾರ್ವಜನಿಕ’ ಎಂದೇ ಹೆಸರಿಟ್ಟಿದ್ದರು. ಸಾಮಾನ್ಯ ಜನರ ಜೀವನದಲ್ಲಿ ನೆಮ್ಮದಿಯನ್ನೂ ಉಲ್ಲಾಸವನ್ನೂ ತರುವುದು ಅವರ ಸಾಹಿತ್ಯ ಕೃಷಿಯ ಮುಖ್ಯ ಆಶಯವಾಗಿತ್ತು ಎನ್ನಬಹುದು. ಗೋಕಾಕರು ಡಿವಿಜಿ ಕುರಿತು “ಐವತ್ತರವತ್ತು ವರ್ಷಗಳ ಹಿಂದೆ ದೇಶವು ಮೂಕವಾಗಿದ್ದಾಗ ಡಿವಿಜಿ ಮೊದಲು ಮಾತನಾಡಿದರು, ಧ್ವನಿ ಎತ್ತಿದರು. ಅನಂತರ ಉಳಿದವರಿಗೂ ಮಾತನಾಡಬೇಕೆನ್ನಿಸಿತು. ಡಿವಿಜಿ ಮೊದಲು ಪ್ರೇರಣೆಗೆ ಒಳಗಾದರು; ಅನಂತರ ತಾವೇ ಪ್ರೇರಕರಲ್ಲಿ ಒಬ್ಬರಾದರು.”
ಸಮಾಜದೊಂದಿಗೆ ಡಿವಿಜಿ ಅವರಿಗೆ ಪೂರ್ಣ ತಾದಾತ್ಮ್ಯವಿತ್ತು. ಸರಳವಾದ ಜೀವನ, ನಿರ್ಮತ್ಸರತೆ, ಸ್ನೇಹಪರತೆ, ದೇಶಹಿತ ಚಿಂತನೆ ಇವೆ ಮೊದಲಾದ ಆತ್ಮಗುಣಗಳಿದ್ದಂತೆಯೇ ಅವರ ಸಾಮಾಜಿಕ ಕಾಳಜಿಯ ಗುಣ ಅವರ ಮನಸ್ಸನ್ನು ದ್ರವಿಸಿದ ಉದಾಹರಣೆಗಳೂ ಸಾಕಷ್ಟಿವೆ.

೧೯೬೧ ರಲ್ಲಿ ಶಿವಮೊಗ್ಗದಿಂದ ಗಂಡನನ್ನು ಕಳೆದುಕೊಂಡ ಹೆಂಗಸೊಬ್ಬಳು ಡಿವಿಜಿ ಯವರಿಗೆ ಪತ್ರ ಬರೆದಿದ್ದಳು. “ವಿಧವೆಯರು ಮುಂಡನ ಮಾಡಿಸಿಕೊಳ್ಳಲೇಬೇಕೆ? ಶಾಸ್ತ್ರ ಈ ಬಗ್ಗೆ ಏನು ಹೇಳುತ್ತದೆ?” ಇದನ್ನು ನೋಡಿ ಆಕೆಯ ಪಾಡನ್ನು ನೆನೆದು ಡಿವಿಜಿ ಗಳಗಳನೆ ಅತ್ತರು. ಅನಂತರ ಒಂದೆರಡು ಸಾಂತ್ವಾನದ ಮಾತುಗಳನ್ನು ಆಕೆಗೆ ಬರೆದು ”ಮುಂಡನಕ್ಕೆ ಯಾವ ಶಾಸ್ತ್ರದ ಆಧಾರವೂ ಇಲ್ಲ” ಎಂದರು.
೧೯೩೦ ರಲ್ಲಿ ಹರಿಜನರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶವಿರಬೇಕೆಂಬ ಆಂದೋಲನ ದೇಶದ ಹಲವೆಡೆಗಳಲ್ಲಿ ನಡೆದಾಗ, ಸಮಾಜದ ಹಿತದೃಷ್ಟಿಯಿಂದ ಈ ಸುಧಾರಣೆಯನ್ನು ಸರ್ಕಾರ ಬೆಂಬಲಿಸಬೇಕು ಎಂದು ಡಿವಿಜಿ ಪ್ರತಿಪಾದಿಸಿದ್ದರು. ಪರಂಪರಾ ಶ್ರದ್ಧೆಯಿದ್ದ ಡಿವಿಜಿ ಸಂಪ್ರದಾಯಜಡವನ್ನು ಅಷ್ಟೇ ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತಿದ್ದರು.

ಡಿವಿಜಿಯವರ ವ್ಯಕ್ತಿತ್ವದ ಇನ್ನಿತರ ಮುಖಗಳಂತೆ ಅವರ ಹಾಸ್ಯ-ವಿನೋದದ ಮುಖವು ವಿಸ್ಮಯಕಾರಿಯಾದುದು. ಹಾಸ್ಯಪ್ರಿಯತೆಯು ಅವರ ಮುಖ್ಯ ಸ್ವಭಾವ ಲಕ್ಷಣ. ಜ್ಞಾಪಕ ಚಿತ್ರಶಾಲೆಯ ವ್ಯಕ್ತಿಚಿತ್ರ ಸಂಪುಟಗಳಲ್ಲಿ ಡಿವಿಜಿಯವರ ಸರಸತೆ ಎದ್ದು ಕಾಣುತ್ತದೆ. ಚಾಟು ಶ್ಲೋಕಗಳು, ಕುಚೋದ್ಯದ ಪದ್ಯಗಳು, ವಿಚಿತ್ರ ವ್ಯಕ್ತಿಚಿತ್ರಗಳು, ಪ್ರಸಿದ್ಧ ಮಹನೀಯರ ಕೊಂಟಿವಿದ್ಯೆಗಳು ಅವರಿಂದ ಎಷ್ಟು ಬೇಕೆಂದರೂ ಹೊರಡುತ್ತಿತ್ತು. ಮಾಸ್ತಿ ಯವರು ಹೇಳುವಂತೆ “ಆರಿಸಿದ ಯಾವುದೇ ಗುಂಪಿನ ಉಲ್ಲಾಸವಂತ ಸದಸ್ಯ ಡಿವಿಜಿ.” ವಿನೋದವೆನ್ನುವುದು ಡಿವಿಜಿಯವರಿಗೆ ಸೀರಿಯಸ್ ಬಿಸಿನೆಸ್ ಆಗಿತ್ತು.

ಜ್ಞಾಪಕ ಚಿತ್ರಶಾಲೆಯಲ್ಲಿರುವ ಒಂದು ಸ್ವಾರಸ್ಯಕರ ಘಟನೆ ಇಲ್ಲಿದೆ. ಡಿವಿಜಿ ಬರೆಯುತ್ತಾರೆ,”ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಸ್ಥಾನಕ್ಕೆ ನಾನು ಬಂದ ಕೂಡಲೆ ವಾರ್ಷಿಕ ಸಮ್ಮೇಳನಗಳ ಬಗ್ಗೆ ಒಂದು ನಿಯಮಾವಳಿಯನ್ನು ತಯಾರುಮಾಡಿ ಪರಿಷತ್ತಿನ ಕಾರ್ಯಸಮಿತಿಯ ಮುಂದೆ ಇರಿಸಿದೆ. ಹಾಗೆಯೇ ವಿಶೇಷ ಸಾಹಿತ್ಯೋತ್ಸವ ಮೊದಲಾದ ಕಾರ್ಯಗಳನ್ನು ಕುರಿತೂ ನಿಯಮಗಳನ್ನು ಸೂಚಿಸಿದೆ: ಸಭೆ ಸಮ್ಮೇಳನಗಳಿಗೆ ಕಾಲನಿಯಮವಿರಬೇಕು, ಉಪನ್ಯಾಸಾದಿಗಳ ಅನುಕ್ರಮವು ನಿಷ್ಕರ್ಷೆಯಾಗಿರಬೇಕು, ಭಾಷಣಗಳಿಗೆ ವೇಳೆ ಕ್ಲ್ ಪ್ತವಾಗಿರಬೇಕು. ಗೊತ್ತುಗುರಿಯಿಲ್ಲದ ಕಾರ್ಯಕಲಾಪದಿಂದ ಪ್ರಯೋಜನವಾಗದು. ಸಮ್ಮೇಳನ ದೊಂಬಿಯ ಗದ್ದಲವಾಗಿರಬಾರದು. ಶಿಸ್ತನ್ನಿರಿಸಿಕೊಂಡು ನಡೆದರೆ ಕೆಲಸ ಹೆಚ್ಚಾಗಿ ಮಾಡಲಾಗುತ್ತದೆ ಮತ್ತು ಮಾಡಿದ ಕೆಲಸ ಹೆಚ್ಚು ಫಲಕಾರಿಯಾಗುತ್ತದೆ. ಇದು ನನ್ನ ವಾದ.

ಪರಿಷತ್ತಿನ ಕಾರ್ಯಸಮಿತಿ ಇದನ್ನು ಉತ್ಸಾಹದಿಂದ ಅನುಮೊದಿಸಿತು. ಹಾಗೆ ಅನುಮೊದಿಸಿ ಚಪ್ಪಾಳೆ ತಟ್ಟಿದವರಲ್ಲಿ ವೆಂಕಣ್ಣಯ್ಯ ಮೊದಲನೆಯವರು. ಅವರು ನಗುನಗುತ್ತ “ತಥಾಸ್ತು” ಎಂದು ಹೇಳಿ, ಆ ಕೂಡಲೆ “ಅನ್ಯಥಾ ಭವತಿ” ಎಂದರು. ನಾವೆಲ್ಲ ಅವರ ಕಡೆ ದಿಟ್ಟಿಸಿ ನೋಡಿದೆವು. ಅವರು ನಗುತ್ತ, “ನೀವು ಹೇಳುವುದೆಲ್ಲ ಸರಿ. ಆದರೆ ಅದೊಂದೂ ನಡೆಯುವುದಿಲ್ಲ” ಎಂದು ಹೇಳಿಬಿಟ್ಟರು.

ನಾನು : “ಅದೇಕೆ ಹಾಗೆನ್ನುತ್ತೀರಿ?”

ವೆಂ: “ಏಕೆಂದರೆ ನಮ್ಮ ಜನದ ಸ್ವಭಾವ ಅಂಥಾದ್ದು. ಅವರು ಒಂದು ನಿಯಮವನ್ನೂ ನಡಸಗೊಡುವುದಿಲ್ಲ.

“ನೀವು ಎಂಟೂವರೆಗೆ ಸಭೆ ಎನ್ನುತ್ತೀರಿ. ಒಂಬತ್ತರವರೆಗೂ ಜನ ಬರುವುದಿಲ್ಲ. ಒಂಬತ್ತಕ್ಕೆ ಸಭೆ ಎನ್ನಿ; ಹತ್ತುಗಂಟೆಯವರೆಗೂ ಒಬ್ಬರು ತಲೆಹಾಕುವುದಿಲ್ಲ. ನೀವು ಭಾಷಣಕ್ಕೆ ಹದಿನೈದು ನಿಮಿಷ ಗೊತ್ತುಮಾಡುತ್ತೀರಿ. ಇಪ್ಪತ್ತೈದು ನಿಮಿಷವಾದರೂ ನಮ್ಮ ಭಾಷಣಕರ್ತರು ವಿಷಯಕ್ಕೆ ಬಂದಿರುವುದಿಲ್ಲ, ಪೀಠಿಕೆಯಲ್ಲೇ ಇರುತ್ತಾರೆ. ನೀವು ಅವರನ್ನೇನು ಮಾಡುತ್ತೀರಿ? ನಿಲ್ಲಿಸಿರೆಂದರೆ ಅವರಿಗೆ ಕೋಪ; ನಾವೂ ಕೋಪ ಮಾಡಿಕೊಂಡು, ನೀವು ಭಾಷಣಕಾರರಿಗೆ ಅಪಮಾನ ಮಾಡಿದಿರಿ ಎನ್ನುತ್ತೇವೆ.

“ಕಾಫಿಗೆ ಕೂಡ ನಿಮ್ಮ ನಿಯಮ ನಡೆಯದಂತೆ ನೋಡಿಕೊಳ್ಳುತ್ತೇವೆ. ನೀವು ಮೂರು ಘಂಟೆಗೆಂದರೆ, ನಾವು ಎರಡೂವರೆಗೇ ಸೇರಿ ದಬಾದುಬಿ ಮಾಡಿ ಕುಡಿದು, ಚೆಲ್ಲಾಡಿ, ಮೂರು ಘಂಟೆಗೆ ಬಂದವರಿಗೆ ಖಾಲಿಪಾತ್ರೆ ಬಿಟ್ಟಿರುತ್ತೇವೆ. ಅಥವಾ ನಾವೇ ನಾಲ್ಕಕ್ಕೆ ಬಂದು ಕಾಫಿ ತಣ್ಣಗಾಯಿತೆಂದು ಬೊಬ್ಬೆಯಿಡುತ್ತೇವೆ. ನಿಮ್ಮ ನಿಯಮ ಶಿಸ್ತುಗಳು ನಮ್ಮ ಸ್ವಭಾವಕ್ಕೆ ಒಗ್ಗುವುದಿಲ್ಲ ದೇವರು.”

ಈ ನಿರುತ್ಸಾಹದ ಮಾತುಗಳನ್ನಾಡುವಾಗ ವಾಕ್ಯಗಳನ್ನು ಛಂದೋಬದ್ಧ ಮಾಡಿ ರಾಗಗಳಲ್ಲಿ ಹಾಡಿದರು.

ಕಡೆಗೆ “ಇದೆಲ್ಲ ಅಚ್ಚಾಗಿರಲಿ. ನಿಮ್ಮ ಉದ್ದೇಶವೇನೆಂಬುದು ತಿಳಿಯುತ್ತದೆ ನೋಡುವವರಿಗೆ. ನಮ್ಮ ಜನಕ್ಕೆ ಒಂದು ಕಟ್ಟಿಲ್ಲ, ಒಂದು ಶಿಸ್ತಿಲ್ಲ. ದೊಂಬಿ ಎಬ್ಬಿಸುವುದೇ ನಮ್ಮ ಸಭೆಯ ಕೆಲಸ. ನೋಡಿ ನೊಡ್ರಲಾ”-ಎಂದರು.

ಅಂದಿನಿಂದೀಚೆಗೆ ನನಗಾಗಿರುವ ಅನುಭವಗಳು ವೆಂಕಣ್ಣಯ್ಯನವರ ವಾದವನ್ನು ಎತ್ತಿಹಿಡಿಯುತ್ತವೆ. ಸಭಿಕರು ಒಂದು ಕ್ರಮದಲ್ಲಿ ಒಂದು ಸಾಲಿನಲ್ಲಿ ಕುಳಿತುಕೊಳ್ಳುವಂತೆ ಹೇಳಲಾಗುತ್ತದೆ. ಬಂದ ಜನ ಬಾಗಿಲ ಹತ್ತಿರಲೇ ಒಬ್ಬರನ್ನೊಬ್ಬರು ಒತ್ತಿಕೊಂಡು, ಮಿಕ್ಕ ಭಾಗವನ್ನು ಖಾಲಿ ಬಿಟ್ಟಿರುತ್ತಾರೆ. ವಿಶಾಲವಾಗಿ ಕೂಡಿರೆಂದರೆ “ಪರವಾಯಿಲ್ಲ, ಇಲ್ಲೆ ಇರುತ್ತೇವೆ”-ಎನ್ನುತ್ತಾರೆ. ಅವರ ಅಭಿಪ್ರಾಯದಲ್ಲಿ ಇದು ವಿನಯ. ಅದರಿಂದ ಇತರರಿಗಾಗುವುದು ತೊಂದರೆ. ಹೀಗೆ ಎಲ್ಲಿಯೂ ಯಾವ ಶಿಸ್ತೂ ನಡೆಯುವುದು ನಮ್ಮ ದೇಶದಲ್ಲಿ ಏಕೋ ಕಷ್ಟವಾಗಿದೆ. ನಾನು ಹೀಗೆ ಸೋತವನಾಗಿದ್ದೇನೆ. ವೆಂಕಣ್ಣಯ್ಯನ ದೊಂಬಿ ಜಯಘೋಷವೇ ಕಾರ್ಯಕ್ಕೆ ಬರುತ್ತಿದೆ.”

೧೯೭೦ ರಲ್ಲಿ ವಿ ಸೀತಾರಮಯ್ಯನವರು ಡಿವಿಜಿಯವರನ್ನು ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಡಿದ ಉಪನ್ಯಾಸದ ಈ ಮಾತು ಇಲ್ಲಿ ಸ್ಮರಣೀಯವಾದುದು, “ಈ ಮಹನೀಯರ ಹೆಸರೇ ಗುಂಡಪ್ಪನವರು. ಗುಂಡಿನ ಅಥವ ಗೋಲದ ಒಂದು ಲಕ್ಷಣ – ಅದರ ಯಾವ ಬಿಂದುವಾದರೂ ಕೇಂದ್ರವಾಗಬಹುದು, ಯಾವುದಾದರೂ ಪರಿಧಿಯಾಗಬಹುದು! ಗೋಲಕ್ಕೆ ಪ್ರಾರಂಭ ಯಾವುದು, ಕೊನೆ ಯಾವುದು? ಗುಂಡಪ್ಪನವರನ್ನು ಕುರಿತು ಮಾತನಾಡ ಹೊರಟಾಗ ನಮ್ಮ ಕಷ್ಟ ಇದೇ. ಎಲ್ಲಿ ಪ್ರಾರಂಭ ಮಾಡಬೇಕು, ಎಲ್ಲಿ ಮುಗಿಸಬೇಕು?” ಇಂತಹ ಜೀವನ – ಸಾಧನೆಗಳ ನಿಕ್ಷೇಪವಾಗಿರುವ ವ್ಯಕ್ತಿತ್ವವನ್ನು ಅನ್ಯತ್ರ ಕಾಣುವುದು ಕಷ್ಟ.

Leave a Reply

Your email address will not be published.

This site uses Akismet to reduce spam. Learn how your comment data is processed.