ಕನ್ನಡ ನಾಡು ಕಂಡಂತಹ ದೊಡ್ಡ ಸಾಹಿತಿ, ಕವಿ, ದಾರ್ಶನಿಕ, ಪತ್ರಕರ್ತ ಡಾ. ಡಿ. ವಿ .ಗುಂಡಪ್ಪನವರು ಬಹಳ ಕಾಳಜಿ ವಹಿಸಿ ತಮ್ಮ ಸಾರ್ವಜನಿಕ ಜೀವನಕ್ಕೆ ಕಳಸವಿಟ್ಟಂತೆ ಬೆಂಗಳೂರಿನಲ್ಲಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಪ್ರಾರಂಭಿಸಿದರು. ಇಂದಿಗೂ ಬೆಂಗಳೂರಿನ ಪ್ರತಿಷ್ಠಿತ ,ಜನಪ್ರಿಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.ಗುಂಡಪ್ಪನವರು ಈ ಸಂಸ್ಥೆಯಲ್ಲಿ ವ್ಯಾಸಂಗ ಗೋಷ್ಠಿ ಎಂಬ ಬಹಳ ವಿಶೇಷವಾದ ಒಂದು ಚಟುವಟಿಕೆಯನ್ನು ಪ್ರಾರಂಭಿಸಿದರು.ವ್ಯಾಸಂಗ ಎಂದರೆ ಅಭ್ಯಾಸ ,ಪ್ರಯತ್ನ ಎಂಬ ಅರ್ಥಗಳಿವೆ .ಗೋಷ್ಠಿ ಎಂದರೆ ಸಂಭಾಷಣೆ ,ಮಾತುಕತೆ .ವ್ಯಾಸಂಗ ಗೋಷ್ಠಿ ಎಂದರೆ ಒಟ್ಟಾಗಿ ಕುಳಿತು ಅಭ್ಯಾಸ ಮಾಡುವುದು.18-2-1945ರಲ್ಲಿ ಬಹಳ ವರ್ಷಗಳ ಪ್ರಯತ್ನದ ಫಲವಾಗಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಗುಂಡಪ್ಪನವರ ಮನೆಯಲ್ಲಿಯೇ ಪ್ರಾರಂಭವಾಯಿತು. ಅನಂತರ 1946 ರ ಸುಮಾರಿನಲ್ಲಿ ವ್ಯಾಸಂಗ ಗೋಷ್ಠಿಯ ಪ್ರಾರಂಭಿಸಿದಂತೆ ಕಾಣುತ್ತದೆ. "ಸಾರ್ವಜನಿಕ ಜೀವನದ ಅನುಭವ ಬೆಳೆದಂತೆ ರಾಜಕೀಯಕ್ಕೂ ಧರ್ಮ ಪ್ರಶ್ನೆಗೂ ಇರುವ ಸಂಬಂಧ ನನ್ನ ಮನಸ್ಸಿಗೆ ವಿಷದ ಪಡುತ್ತ ಬಂತು. ಧಾರ್ಮಿಕ ಸಾಹಿತ್ಯದ ಅನಿವಾರ್ಯತೆ ಎಷ್ಟೆಂಬುದು ಮತ್ತಷ್ಟು ಸ್ಪಷ್ಟ ವಾಯಿತು. ಗುಣಾವಗುಣ ವಿಮರ್ಶೆ ಮಾಡದ ಸಾರ್ವಜನಿಕ ಕಾರ್ಯದಿಂದ ಎಂಥ ಪ್ರಜಾ ಕ್ಷೇಮವಾದೀತು" ಈ ಕೊರತೆಯನ್ನು ನೀಗಿಸಲು ವ್ಯಾಸಂಗ ಗೋಷ್ಠಿಯನ್ನು ಪ್ರಾರಂಭಿಸಿದರು.1946 ರಲ್ಲಿ ಅಕ್ಟೋಬರ್ ನವಂಬರ್ ನಲ್ಲಿ ಪ್ರತಿ ಭಾನುವಾರ ಬೆಳಗ್ಗೆ ಎರಡು ಗಂಟೆಗಳ ಕಾಲ ವ್ಯಾಸಂಗ ಗೋಷ್ಠಿ ಪ್ರಾರಂಭವಾಯಿತು. ಎಸ್ .ರಾಘವಾಚಾರ್ಯರು ಪ್ಲೇಟೋನ ರಿಪಬ್ಲಿಕ್ ಗ್ರಂಥವನ್ನು ಗೋಷ್ಠಿಯಲ್ಲಿ ವಿವರಿಸುತ್ತಿದ್ದರು .15-12-1947 ರ ಅನಂತರದ ವರ್ಷಗಳಲ್ಲಿ ವ್ಯಾಸಂಗ ಗೋಷ್ಠಿ ಡಿವಿಜಿಯವರ ನೇತೃತ್ವದಲ್ಲಿಯೇ ನಡೆಯುತ್ತಿತ್ತು .ಸುಮಾರು 15-20 ಮಂದಿ ಗೋಷ್ಠಿಯಲ್ಲಿ ಸೇರುತ್ತಿದ್ದರು. ಎರಡು ಗ್ರಂಥಗಳನ್ನು ವ್ಯಾಸಂಗ ಮಾಡಲಾಗುತ್ತಿತ್ತು .ಒಂದು ಇಂಗ್ಲಿಷಿನ ಗ್ರಂಥ ಮತ್ತೊಂದು ಸಂಸ್ಕೃತ ಭಾಷೆಯ ಗ್ರಂಥ. ಸುಮಾರು 27 ವರ್ಷಗಳು ಡಿವಿಜಿಯವರು ಪ್ರತಿ ಭಾನುವಾರ ಬೆಳಗ್ಗೆ ವ್ಯಾಸಂಗ ಗೋಷ್ಠಿ ನೇತೃತ್ವ ವಹಿಸಿದ್ದರು ಎಂಬುದು ಗಮನಿಸಬೇಕಾದ ಅಂಶ. ಡಿವಿಜಿಯವರ ನೇತೃತ್ವದಲ್ಲಿ ನಡೆದ ವ್ಯಾಸಂಗ ಗೋಷ್ಠಿ ಎಲ್ಲ ವಯೋಮಾನದವರಿಗೂ

ಸಮಾಜದಲ್ಲಿದ್ದ ಎಲ್ಲ ಸ್ತರಗಳ ಜನರಿಗೂ ಜ್ಞಾನವನ್ನು ನೀಡುವ
ದೇಗುಲವಾಗಿತ್ತು.
ನಮ್ಮ ದೇಶದ ಅತಿ ಪ್ರಾಚೀನವಾದ ಭಾಷೆ ಸಂಸ್ಕೃತ .ಇದನ್ನು ಗುರು ಸಮಾನವಾದ ಭಾಷೆ ಎಂದು ಪರಿಗಣಿಸಲಾಗುತ್ತದೆ. ನಮ್ಮ ಭಾರತ ಭೂಮಿಯ ಶ್ರೇಷ್ಠತೆ ಹೆಗ್ಗಳಿಕೆ ನಮ್ಮಲ್ಲಿರುವ ಅಧ್ಯಾತ್ಮ ಜ್ಞಾನ .ಹೀಗಾಗಿ ಈ ಪವಿತ್ರವಾದ ಜ್ಞಾನವನ್ನು ಸಂಪಾದಿಸಿಕೊಳ್ಳಲು ಸಂಸ್ಕೃತ ಗ್ರಂಥಗಳ ಅಧ್ಯಯನ ಅತ್ಯಗತ್ಯ .ಇದನ್ನು ಮನಗಂಡು ಅಧ್ಯಾತ್ಮ ಚಿಂತನೆಗಳನ್ನೂ, ಅದರ ತತ್ವಗಳನ್ನೂ.,ಆಳವಾಗಿ ಅಭ್ಯಾಸ ಮಾಡಿಕೊಂಡಿದ್ದ ಅವರು ಸಂಸ್ಕೃತ ಭಾಷೆಯ ಪಾಂಡಿತ್ಯ ಇಲ್ಲದಿದ್ದರೂ ಭಾಷೆಯ ಪರಿಚಯ ಸಾಮಾನ್ಯರಿಗೆ ಇರಬೇಕೆಂಬ ಸದುದ್ದೇಶದಿಂದ ಸಂಸ್ಕೃತ ಮಹಾಕಾವ್ಯಗಳನ್ನು ಪಾಠ ಮಾಡುತ್ತಿದ್ದರು .ಆದರೆ ಸಂಸ್ಕೃತ ಪಾಠಗಳನ್ನು ತಿಳಿದುಕೊಳ್ಳಲು ಮೊದಲು ಸಂಸ್ಕೃತ ಭಾಷೆಯ ಸ್ವಲ್ಪ ಅರಿವಿರಬೇಕಷ್ಟೇ .ಆದ್ದರಿಂದ ವ್ಯಾಸಂಗ ಗೋಷ್ಠಿಯ ಕಿರಿಯ ಮಿತ್ರರೆಲ್ಲಿಗೂ, ಸಂಸ್ಕೃತದ ಪಂಡಿತರಾದ ವಿದ್ವಾನ್ ಎನ್. ರಂಗನಾಥ ಶರ್ಮಾ ಅವರು ವ್ಯಾಕರಣ ಮುಂತಾದವನ್ನು ಪಾಠ ಮಾಡುತ್ತಿದ್ದರು .ಪಾಠಗಳಿಗೆ ಹೋಗುವ ಮೊದಲು ಕಚೇರಿಯಿಂದ ಬಂದು ರಾಮ ಶಬ್ದವನ್ನು ಗಟ್ಟಿ ಮಾಡುತ್ತಿದ್ದ ಪರಿಯನ್ನು ನನ್ನ ತಂದೆ ಡಿ. ಆರ್. ವೆಂಕಟರಮಣನ್ ಹಾಗೂ ಅವರ ಸ್ನೇಹಿತರಾದ ಬಿ. ಎಸ್. ಸುಬ್ಬರಾಯ ಮತ್ತು ಎಂ.ವಿ.ರಾಮ ಚೈತನ್ಯ ಬಹಳ ವರ್ಷಗಳ ನಂತರವೂ ಸಂತೋಷದಿಂದ ನೆನಪು ಮಾಡಿಕೊಳ್ಳುತ್ತಿದ್ದರು. ಸಂಸ್ಕೃತದ ಉತ್ಕೃಷ್ಟವಾದ ಕಾವ್ಯಗಳನ್ನು ವ್ಯಾಸಂಗ ಮಾಡುವ ಉದ್ದೇಶವನ್ನು ಡಿವಿಜಿಯವರು "ಕಾವ್ಯೋಪಾಸನೆಯು ಅತ್ಯುತ್ತಮವಾದ ಆತ್ಮ ಸಂಸ್ಕಾರವೆಂದು ನಂಬಿದ್ದೇನೆ" ಎಂದು ಹೇಳಿದ್ದಾರೆ. ಅವರು ವ್ಯಾಸಂಗ ಗೋಷ್ಠಿಯಲ್ಲಿ ಕಾಳಿದಾಸನ ಶಾಕುಂತಲ, ಉತ್ತರರಾಮಚರಿತ, ಉಪನಿಷತ್ತುಗಳು,ವಿಷ್ಣುಸಹಸ್ರನಾಮ, ಭಗವದ್ಗೀತೆ ಮುಂತಾದ ಗ್ರಂಥಗಳನ್ನು ಪಾಠ ಮಾಡಿದರು. ಭಗವದ್ಗೀತೆಯ ಮೇಲೆ ಅವರು ನೀಡಿದ ಉಪನ್ಯಾಸಗಳು ಮುಂದೆ "ಜೀವನ ಧರ್ಮ ಯೋಗ"ಎಂಬ ಹೆಸರಿನಿಂದ ಮುದ್ರಣಗೊಂಡಿತು.ಅಪಾರ ಜನಪ್ರಿಯತೆಯನ್ನು ಪಡೆದಿರುವ ಈ ಕೃತಿಗೆ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆಯಿತು. ಇಂಗ್ಲಿಷಿನ ಮಾರ್ಲೆ ,ಬರ್ಕ್ ,ಮಿಲ್ ,ಬಾರ್ಕರ್ ಮುಂತಾದವರ ರಾಜ್ಯ ಶಾಸ್ತ್ರಗ್ರಂಥಗಳನ್ನೂ,ಎರಿಕ್ ರೋಲ್ ಮುಂತಾದವರ ಅರ್ಥಶಾಸ್ತ್ರದ ಗ್ರಂಥಗಳನ್ನೊ, ರಾನಡೆ,ಗೋಪಾಲಕೃಷ್ಣ ಗೋಖಲೆ,ಗ್ಲಾಡ್ ಸ್ಟನ್,ಮಿಲ್ ಮೊದಲಾದವರ ಜೀವನ ಚರಿತ್ರೆಗಳನ್ನೂ ವ್ಯಾಸಂಗ ಮಾಡಲಾಯಿತು. "ಡಿವಿಜಿಯವರದ್ದು ದೊಡ್ಡ ಧ್ವನಿ. ಬೋಧನಾಕ್ರಮ ಅದ್ವಿತೀಯವಾಗಿತ್ತು .

ಇಂಥ ಕ್ಲಿಷ್ಟಕರವಾದ ಗ್ರಂಥಗಳನ್ನು ಸರಳವಾದ ಭಾಷೆಯಲ್ಲಿ ಭೋಧಿಸುತ್ತಿದ್ದರು . ನಿತ್ಯಜೀವನದ ಉದಾಹರಣೆಗಳನ್ನು ಕೊಟ್ಟು ,ಎಲ್ಲರಲ್ಲಿಯೊ ತಿಳಿವಳಿಕೆ ಶ್ರದ್ಧೆ,ಉತ್ಸಾಹ ವನ್ನು ಉಂಟುಮಾಡುತ್ತಿದ್ದರು”ಎಂದು ಗೋಷ್ಠಿಗೆ ತಪ್ಪದೆ ಹಾಜರಾಗುತ್ತಿದ್ದ ಹಿರಿಯ ಸದಸ್ಯ ಗುಂ. ನಾ. ಜೋಶಿಯವರು ಜ್ಞಾಪಿಸಿಕೊಂಡಿದ್ದಾರೆ . ಡಿವಿಜಿಯವರಿಗೆ ಸಾರ್ವಜನಿಕ ಜೀವನ, ರಾಜ್ಯಶಾಸ್ತ್ರ ಮುಂತಾದವುಗಳಲ್ಲಿ ಆಸಕ್ತಿ ಇದ್ದಂತೆ ವೇದ-ಉಪನಿಷತ್ತುಗಳ ಬಗ್ಗೆಯೂ ಆಳವಾದ ಜ್ಞಾನ ಮತ್ತು ಗೌರವಾದರಗಳಿದ್ದವು.ಸಂಸ್ಥೆಯಲ್ಲಿ ವೇದಪಾರಾಯಣದ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ವ್ಯವಸ್ಥಿತ ಅಧ್ಯಯನ ಹಾಗೂ ಮನನದಿಂದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ಅವರು ತೋರಿಸಿದ ಮಾರ್ಗ.ವ್ಯಾಸಂಗ ಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದವರಲ್ಲಿ ಹೆಚ್ಚಿನವರು ಯುವಕರು .ಇವರುಗಳು ಗೋಖಲೆ ಸಾರ್ವಜನಿಕ ಸಂಸ್ಥೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು .ವ್ಯಾಸಂಗ ಗೋಷ್ಠಿಯಿಂದ ಭಾಷಣಗಳನ್ನು ಆಯೋಜಿಸುವುದು,ಪುಸ್ತಕ ಪ್ರಕಟಣೆಗಳೇ ಅಲ್ಲದೆ ವ್ಯಾಸಂಗ ಗೋಷ್ಠಿಯ ಮುಖ್ಯವಾದ ಚಟುವಟಿಕೆ ಎಂದರೆ ಪಬ್ಲಿಕ್ ಒಪಿನಿಯನ್ ಸರ್ವೆ .ವ್ಯಾಸಂಗ ಗೋಷ್ಠಿ ಸದಸ್ಯರು ಬೆಂಗಳೂರಿನ ವಿವಿಧ ಬಡಾವಣೆಯ ಜನರನ್ನು ಭೇಟಿ ಮಾಡಿ,ಅವರ ಕುಂದುಕೊರತೆಗಳನ್ನು ಪಟ್ಟಿ ಮಾಡಿ, ಸಂಬಂಧಪಟ್ಟ ಸರ್ಕಾರದ ಅಧಿಕಾರಿಗಳಿಗೆ ಕಳುಹಿಸಿಕೊಡುತ್ತಿದ್ದರು.ಈ ವರದಿಗಳು ದಿವಾನರಾಗಿದ್ದ ಮಾಧವ ರಾಯರ ಮೆಚ್ಚುಗೆಗೆ ಕೂಡ ಪಾತ್ರವಾಯಿತು. “ಸಾರ್ವಜನಿಕ ಜೀವನದಲ್ಲಿ ತೊಡಗಿಕೊಳ್ಳುವುದು ನಾನು ನನ್ನದು ಎಂಬ ನಿತ್ಯ ಚಿಂತನೆಯಿಂದ ದೂರವಾದ ,ಬಹು ಜನೋಪಯೋಗಿಯಾದ , ಸಣ್ಣದಾದರೂ ಪರಿಶುದ್ಧವಾದ ವ್ರತ ನಿಷ್ಠೆಯು ಯಾವಾತನನ್ನು ಹಿಡಿದಿರುತ್ತದೆಯೋ ಆತನೇ ಪರಮ ಧನ್ಯ.ಉತ್ತಮವಾದ ಆದರ್ಶವು ಸದಾ ನಿಮ್ಮ ಹೃದಯಾಂಗಣದಲ್ಲಿ ನಿಂತು ನಿಮ್ಮ ನಡವಳಿಕೆಯನ್ನು ಅಹೋರಾತ್ರಿ ತಿದ್ದುತಿರಬೇಕು”ಎಂಬ ಅವರ ಸಾಹಿತ್ಯ ಶಕ್ತಿಯ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ. ವ್ಯಾಸಂಗ ಗೋಷ್ಠಿಯ ಮಿತ್ರರೆಲ್ಲರೂ ಸೇರಿ ಅದರ ವಾರ್ಷಿಕೋತ್ಸವವನ್ನು ಏರ್ಪಡಿಸುತ್ತಿದ್ದರು. ಇದಕ್ಕೆ ಪೂರ್ವಭಾವಿಯಾಗಿ ಹಲವಾರು ಕ್ರೀಡಾಸ್ಪರ್ಧೆಗಳು ,ಭಾಷಣ ಸ್ಪರ್ಧೆಗಳು, ಗಾಯನ ಸ್ಪರ್ಧೆಗಳು ಮುಂತಾದವುಗಳನ್ನು ಏರ್ಪಡಿಸಲಾಗುತ್ತಿತ್ತು .ವಾರ್ಷಿಕೋತ್ಸವದಲ್ಲಿ ಸಂಸ್ಥೆಯ ತಮ್ಮ ಕಿರಿಯ ಮಿತ್ರರೊಂದಿಗೆ ಡಿವಿಜಿಯವರು ಬೆಳಗ್ಗಿನಿಂದಲೇ ಬಹಳ ಆನಂದದಿಂದ ಕಾಲ ಕಳೆಯುತ್ತಿದ್ದರು .ಸಂಜೆ ಸುಶ್ರಾವ್ಯವಾದ ಸಂಗೀತ. ಮುಖ್ಯ ಅತಿಥಿಗಳಿಂದ ಬಹುಮಾನ ವಿತರಣೆ,ಅನಂತರ ರುಚಿಯಾದ ಭೋಜನ. ಸಂಸ್ಥೆಯ ಎಲ್ಲ ಸದಸ್ಯರು ಅಂದು ತಪ್ಪಿಸದೆ ಗುಂಡಪ್ಪನವರೂಡನೆ ಇರಲು ಅವರ ಮಾತನ್ನು ಕೇಳುವ ಸಲುವಾಗಿ ಬರುತ್ತಿದ್ದರು .ತಮ್ಮನ್ನು ಕಾಣಲು ಬಂದವರನ್ನು ಬಹಳ ಪ್ರೀತಿ-ವಿಶ್ವಾಸದಿಂದ ಮಾತನಾಡಿಸುತ್ತಿದ್ದರು . ಅವರು ಕೊನೆ ಪಂಕ್ತಿಯಲ್ಲಿ ತಮ್ಮ ಕಿರಿಯ ಮಿತ್ರರು ಮತ್ತು ಸಿಬ್ಬಂದಿ ಯೊಂದಿಗೆ ಊಟ ಮಾಡುತ್ತಿದ್ದರು. ಜನರನ್ನು ಆಕರ್ಷಿಸುವ ಒಂದು ವಿಶೇಷ ಗುಣ ಅವರಲ್ಲಿತ್ತು . ವ್ಯಾಸಂಗ ಗೋಷ್ಠಿ ಸದಸ್ಯರಲ್ಲಿ ಯಾರ ಯಾರಲ್ಲಿ ಯಾವ ಯಾವ ಶಕ್ತಿ ಅಡಗಿದೆ ಎಂಬುದನ್ನು ಅರಿತು ಅವರ ಶಕ್ತಿಗೆ ಅನುಗುಣವಾಗಿ ಸನ್ನಿವೇಶವನ್ನು ಒದಗಿಸಿ ,ಅವರಿಂದಲೂ ಮಹತ್ಕಾರ್ಯಗಳನ್ನು ಮಾಡಿಸುತ್ತಿದ್ದರು. ಸಂಸ್ಥೆಯ ಚಟುವಟಿಕೆಗಳಲ್ಲಿ ಯಾವ ರೀತಿಯ ತಾರತಮ್ಯ ಇಲ್ಲದೆ ಎಲ್ಲರೂ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದರು.ವ್ಯಾಸಂಗ ಗೋಷ್ಠಿಯ ಅನೇಕರು ಮುಂದೆ ಪ್ರಸಿದ್ಧ ಸಾಹಿತಿಗಳಾಗಿ ರೂಪುಗೊಂಡರು.ವ್ಯಾಸಂಗ ಗೋಷ್ಠಿಗೆ ಹೋಗಿ ಡಿವಿಜಿಯವರ ಪಾಠವನ್ನು ಕೇಳಿದವರಿಗೆ ಅದು ಜೀವನದ ವಿಶೇಷ ಅನುಭವವಾಗಿದೆ. ಡಿವಿಜಿಯವರು ಸ್ವತಃ ಯಾವ ವಿಶ್ವವಿದ್ಯಾಲಯದ ತರಗತಿಯಲ್ಲಿಯೂ ಕುಳಿತು ಪಾಠ ಕೇಳಿದವರಲ್ಲ. ಅಗಾಧವಾದ ಪಾಂಡಿತ್ಯವನ್ನು ಗಳಿಸಿದ್ದು ತಮ್ಮ ಸ್ವಂತ ಪರಿಶ್ರಮದಿಂದ ,ಅಪಾರವಾದ ಜೀವನಾನುಭವದಿಂದ ಹಾಗೂ ಹಲವಾರು ಗುರುಗಳ ತಿಳಿದವರ ಒಡನಾಟದಿಂದ.ಕಿರಿಯರಿಗೆ ವ್ಯವಸ್ಥಿತವಾದ ಅಧ್ಯಯನದ ಅವಕಾಶ ಇರಬೇಕೆಂದು, ವ್ಯಾಸಂಗದಭಿರುಚಿಯೂಡನೆ ಸಾರ್ವಜನಿಕ ಜೀವನದಲ್ಲಿ ತೂಡಗುವಿಕೆ ಎಂಬ ಉದಾತ್ತವಾದ ಧ್ಯೇಯದಿಂದ ಅವರು ಸುಮಾರು 27 ವರ್ಷಗಳ ಕಾಲ ಗೋಷ್ಠಿಯನ್ನು ನಡೆಸಿದರು ಎಂಬುದು ಆಶ್ಚರ್ಯವನ್ನು ಉಂಟುಮಾಡುತ್ತದೆ. ಅಪ್ರತಿಮ ಕವಿ ಸಾಹಿತಿಯಾಗಿದ್ದ ಅವರ ಮನಸ್ಸು ಸಾಮಾನ್ಯ ಜನಜೀವನವನ್ನು ಉತ್ತಮಗೊಳಿಸಬೇಕು ಎಂದು ಸದಾ ತುಡಿಯುತ್ತಿತ್ತು. ಸಾಮಾನ್ಯರಿಗೆ ಉತ್ತಮ ಜೀವನವನ್ನು ನಡೆಸಲು ಬೇಕಾದ ಜ್ಞಾನವನ್ನು ಒದಗಿಸಿ,ಯುಕ್ತಾಯುಕ್ತ ವಿವೇಕವನ್ನು ಹೆಚ್ಚಿಸಬೇಕೆಂದುಅವರ ವ್ಯಾಸಂಗ ಗೋಷ್ಠಿಯ ಧ್ಯೇಯವಾಗಿತ್ತು. ಅವರು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಒಂದು ಗ್ರಂಥಾಲಯವನ್ನು ಸ್ಥಾಪಿಸಿದರು.ವ್ಯಾಸಂಗ ಗೋಷ್ಠಿಗೆ ಹೋಗುತ್ತಿದ್ದವರಲ್ಲಿ ನನ್ನ ತಂದೆ ಡಿ.ಆರ್ .ವೆಂಕಟರಮಣನ್ , ಬಿ.ಎಸ್. ಸುಬ್ಬರಾಯ , ಎಂ.ವಿ.ರಾಮ ಚೈತನ್ಯ, ಟಿ.ಎನ್. ಪದ್ಮನಾಭನ್ ,ನಾಗರಾಜರಾವ್, ಆರ್. ವಿ ಪ್ರಭಾಕರ್ ರಾವ್,ಎನ್.ಎಸ್ .ಸುಬ್ಬಣ್ಣ ಪದ್ಮಮ್ಮ ನಿಟ್ಟೂರು ಶ್ರೀನಿವಾಸರಾವ್, ಮತ್ತೂರ್ ಕೃಷ್ಣಮೂರ್ತಿ,ಪಾಂಡುರಂಗ ರಾವ್, ವಿ.ಶ್ರೀಕಂಠಯ್ಯ, ಗುಂ. ನಾ. ಜೋಶಿ , ಸ. ವೆಂಕಟಾಚಲಪತಿ, ಹೆಚ್.ಎಸ್. ನಾಗರಾಜ್, ಶ್ರೀನಿವಾಸ ಮೂರ್ತಿ ಇವರುಗಳು ಪ್ರಮುಖರು. ನನಗೆ ಈ ವ್ಯಾಸಂಗ ಗೋಷ್ಠಿ ಎಂದ ಕೂಡಲೇ ನೆನಪಾಗುವುದು ಹಲವಾರು ಪ್ರಸಂಗಗಳು. ವ್ಯಾಸಂಗ ಗೋಷ್ಠಿಯಲ್ಲಿ ಬರೀ ಗಹನವಾದಯ ವಿಷಯಗಳನ್ನು ಮಾತ್ರ ಚರ್ಚಿಸುತ್ತಿರಲ್ಲಿಲ್ಲ.ಡಿವಿಜಿ ಅವರಿಗೆ ಇದ್ದ ಹಾಸ್ಯ ಪ್ರಜ್ಞೆಯೂ ಬಹಳ ಪ್ರಸಿದ್ಧವಾದದ್ದು.ಆಗಾಗ ಅವರು ನಗೆ ಚಟಾಕಿಗಳನ್ನು ಹಾರಿಸಿ ತಮ್ಮ ಶಿಷ್ಯವೃಂದವನ್ನು ನಗಿಸುತ್ತಿದ್ದರು .ಟಿ ಎನ್ ಪದ್ಮನಾಭನ್ ಅವರು ಸಂಸ್ಕೃತ ಪದ್ಯಗಳನ್ನು ಬಹಳ ಚೆನ್ನಾಗಿ ಹೇಳುತ್ತಿದ್ದರು .ಅವರಿಗೆ ಅಪಾರವಾದ ನೆನಪಿನ ಶಕ್ತಿಯೂ ಇತ್ತು. ಅದನ್ನು ಅರಿತ ಡಿವಿಜಿಯವರು ವ್ಯಾಸಂಗ ಗೋಷ್ಠಿಯಲ್ಲಿ"ಪದ್ಯ ಪಂಡಿತ ","ಮುಲ್ಕಿ ಪದ್ಮಾ"( ಅವರು ಮುಲುಕುನಾಡು ಪಂಗಡದವರು) ಎಂದೆಲ್ಲಾ ಅವರನ್ನು ಸಂಬೋಧಿಸಿ ಪದ್ಯವನ್ನು ಹೇಳಿಸುತ್ತಿದ್ದರು. ಒಮ್ಮೆವ್ಯಾಸಂಗ ಗೋಷ್ಠಿಯಲ್ಲಿ ವಿಷ್ಣುಸಹಸ್ರನಾಮ ಪಾಠ ಮಾಡೋದು ಎಂದು ತೀರ್ಮಾನವಾಯಿತು. ಆಗ ನನ್ನ ತಾಯಿ ಸರಸ್ವತಿಯವರು ನನ್ನ ತಂದೆಯನ್ನು ನಾನೂ ವ್ಯಾಸಂಗ ಗೋಷ್ಠಿಗೆ ಬಂದು ಪಾಠ ಕೇಳಬೇಕು ಎಂದರು .ಆಗ ನನ್ನ ತಂದೆ "ನನ್ನನ್ನು ಕೇಳಬೇಡ, ನೀನು ಬಂದು ಛೀಫ್ ಅನ್ನು ಕೇಳು" ಎಂದು ಹೇಳಿದರು.(ಅವರೆಲ್ಲಾ ಡಿವಿಜಿಯವರನ್ನು ಚೀಫ್ ಅಥವಾ ಯಜಮಾನರು ಎಂದೇ ಕರೆಯುತ್ತಿದ್ದರು). ಡಿವಿಜಿಯವರು ಗೋಷ್ಠಿಗೆ ಹೋಗಲು ಅನುಮತಿ ಏನೋ ಕೊಟ್ಟರು, ಆದರೆ ಪ್ರತಿ ಭಾನುವಾರ ನನ್ನ ತಾಯಿ ಗೋಷ್ಠಿಗೆ ಹೋಗುತ್ತಿದ್ದ ಕೂಡಲೇ ಈ ದಿನ ಅಡಿಗೆ ಏನು, ತಿಂಡಿ ಏನು ,ಮಕ್ಕಳಿಗೆಲ್ಲ ಕೊಟ್ಟಾಯಿತೆ ಎಂದು ತಪ್ಪದೇ ವಿಚಾರಿಸುತ್ತಿದ್ದರು. ಅವರವರ ಕರ್ತವ್ಯಗಳನ್ನು ಮೊದಲು ಪಾಲಿಸಬೇಕೆಂಬುದೇ ಇಲ್ಲಿ ಧ್ವನಿತವಾಗಿರುವ

ಆಶಯ. ಅನಂತರ ನನ್ನ ತಾಯಿಯೂ ಹಲವಾರು ವರ್ಷ ವ್ಯಾಸಂಗ ಗೋಷ್ಠಿಯ ಪಾಠಗಳಿಗೆ ಹೋಗುತ್ತಿದ್ದರು. ಡಿವಿಜಿಯವರು ಒಮ್ಮೊಮ್ಮೆ ಗೋಷ್ಠಿಯ ನಂತರ ಜಟಕಾ ಗಾಡಿಯಲ್ಲಿ ಮನೆಗೆ ತೆರಳುತ್ತಿದ್ದರು.ಚಿಕ್ಕ ಮಕ್ಕಳಾಗಿದ್ದ ನಮಗೆ ಅವರು ಕೈ ಬೀಸುತ್ತಿದ್ದರು. ಆ ನೆನಪು ಈಗಲೂ ಹಸಿರಾಗಿದೆ. ನನ್ನ ತಂದೆ ಡಿವಿಜಿಯವರ ವ್ಯಾಸಂಗ ಗೋಷ್ಠಿಯಲ್ಲಿ ವಿಧೇಯ ವಿದ್ಯಾರ್ಥಿಯಂತೆ ಪುಸ್ತಕ ಮತ್ತು ಲೇಖನಿಯನ್ನು ಹಿಡಿದು ಕೊಂಡು ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದರು. ಡಿವಿಜಿಯವರು ಅಸ್ವಸ್ಥರಾಗಿ ವ್ಯಾಸಂಗ ಗೋಷ್ಠಿಗೆ ಬರಲಾರದೆ ಹೋದಾಗ ನನ್ನ ತಂದೆ ವ್ಯಾಸಂಗ ಗೋಷ್ಠಿಯನ್ನು ಮುಂದುವರಿಸಿದರು. ಡಿವಿಜಿಯವರು ವ್ಯಾಸಂಗ ಗೋಷ್ಠಿಯಲ್ಲಿ ಸಂಸ್ಕೃತ ಇಂಗ್ಲಿಷ್ ಇವುಗಳ ಉಚ್ಚಾರಣೆ ಅರ್ಥಎಲ್ಲವನ್ನೂ ವಿವರಿಸುತ್ತಿದ್ದರು.ತಾವು ಕಷ್ಟಪಟ್ಟು ಸಂಪಾದಿಸಿಕೊಂಡ ಅಮೂಲ್ಯವಾದ ವಿದ್ಯೆಯನ್ನು ನಿಷ್ಪಕ್ಷಪಾತ ದೃಷ್ಟಿಯಿಂದ ಎಲ್ಲ ಶಿಷ್ಯರಿಗೂ ಧಾರೆ ಎರೆದರು .

ಎಲ್ಲರೂಳಗೂಂದಾಗು ಎಂಬುದರೂಂದಿಗೆ,

ಕೊಳದಿ ನೀಂ ಮೀವಂದು ತೆರೆಯೆದ್ದು ಹರಡುತ್ತೆ
ವಲಯ ವಲಯಗಳಾಗಿಸಾರುವುದು ದಡಕ್ಕೆ
ಅಲೆಗಳ ತೆರದಿ ನಿನ್ನಾತ್ಮದಿಂ ಪರಿಪರಿದು
ಕಳೆದುಕೊಳ್ಳಲಿ ಜಗದಿ ಮಂಕುತಿಮ್ಮ ಆತ್ಮ ವಿಸ್ತರಣಾಭ್ಯಾಸವನ್ನು ಬೋಧಿಸಿದ ಮಹಾ ಗುರುಗಳಿಗೆ ಭಕ್ತಿಪೂರ್ವಕ ನಮನಗಳು. ಅವರ 135 ನೇಯ ಜಯಂತಿಯ ಪ್ರಯುಕ್ತ ಈ ಲೇಖನ.

ಡಾ.ರುಕ್ಮಿಣಿ ರಘುರಾಮ್

Leave a Reply

Your email address will not be published.

This site uses Akismet to reduce spam. Learn how your comment data is processed.