ಬೆಂಗಳೂರು: ನಾನೊಬ್ಬ ಹಿಂದು ಎಂದು ಹೇಳುವುದಕ್ಕೆ ಹಿಂಜರಿಯುತ್ತಿದ್ದ ವಾತಾವರಣದಿಂದ ಹೊರಬಂದು ಹಿಂದೂ ಎಂದು ಕರೆಸಿಕೊಳ್ಳುವುದು ನನ್ನ ಹೆಮ್ಮೆ ಎಂಬ ಭಾವ ನಿರ್ಮಾಣ ಕಾರ್ಯ ಸಂಘದ ಸಾಧನೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು.

ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ವಿತೀಯ ವರ್ಷ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಶನಿವಾರ ಮಾತನಾಡಿದರು.

ಹಿಂದುಗಳು ಸಾಮಾಜಿಕವಾಗಿ ಸಂಘಟಿತರಾಗಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ಈಗ ಬದಲಾಗಿದೆ. ಒಂದೇ ಮತ, ಒಂದೇ ಭಾಷೆ, ಒಂದೇ ಆಚಾರ ವಿರುವ ರಾಷ್ಟ್ರಗಳೇ ಜಗಳವಾಡುತ್ತಿರುವಾಗ ಅಸಂಖ್ಯಾತ ಪಂಥಗಳು, ಭಾಷೆಗಳು, ಆಚಾರಗಳನ್ನೊಳಗೊಂಡ ನಮ್ಮ ರಾಷ್ಟ್ರದಲ್ಲಿ ಸಂಘಟಿತ ಮತ್ತು ಸಾಮರಸ್ಯದ ಜೀವನ ನಡೆಸುವ ಹಿಂದೂ ಸಮಾಜದ ನಿರ್ಮಾಣ ಸಂಘ ಕಾರ್ಯದ ಪರಿಣಾಮ ಎಂದು ನುಡಿದರು.

ಸಂಘ ಕಾರ್ಯ ಆಸಕ್ತಿ ಮತ್ತು ಅವಕಾಶದ ಕಾರಣಕ್ಕಾಗಿ ನಡೆಯುತ್ತಿರುವುದಲ್ಲ. ಬದಲಾಗಿ ಅಗತ್ಯತೆಯ ಕಾರಣಕ್ಕಾಗಿ ಸಂಘ ಕಾರ್ಯ ಮಾಡಬೇಕಾಗಿದೆ. ನನ್ನ ರಾಷ್ಟ್ರ ಎಂಬ ಭಾವಜಾಗೃತಿಯೊಂದಿಗೆ ಸಂಘದ ಹಿತೈಷಿಗಳೂ ಸ್ವಯಂಸೇವಕರು, ಕಾರ್ಯಕರ್ತರಾಗಿ ಜೊತೆಯಾಗಬೇಕಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೃಷಿ ವಿಜ್ಞಾನಿ ರಾಜೇಂದ್ರ ಹೆಗಡೆ ಅವರು ಮಾತನಾಡಿ ಅಪ್ರತಿಮ ರಾಷ್ಟ್ರಭಕ್ತರನ್ನು ನಿರ್ಮಿಸುವಲ್ಲಿ ಸಂಘ ಅಮೂಲ್ಯ ಕೊಡುಗೆ ನೀಡುತ್ತಿದೆ. ಸಾಮಾಜ ಸೇವೆಗಾಗಿ ಸದಾ ಮಿಡಿಯುವ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಸಂಘವನ್ನು ತಿಳಿಯಬೇಕಿದ್ದರೆ, ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ವರ್ಗದ ಸರ್ವಾಧಿಕಾರಿ ಕೃಷ್ಣಮೂರ್ತಿ ವರ್ಗದ ವರದಿ ಪ್ರಸ್ತುತ ಪಡಿಸಿದರು.
ಮೇ 14 ರಂದು ಪ್ರಾರಂಭವಾದ ಈ ವರ್ಗಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಪೇಜಾವರದ ಶ್ರೀ ವಿಶ್ವಪ್ರಸನ್ನತೀರ್ಥರು ಭೇಟಿ ನೀಡಿದ್ದರು. ರಾಜ್ಯದ 77 ಸ್ಥಾನಗಳಿಂದ 89 ಶಿಕ್ಷಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿತೈಷಿಗಳು, ಸಾರ್ವಜನಿಕರು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 
                                                         
                                                         
                                                         
                                                         
                                                         
                                                         
                                                        