
ಭಾರತವು ಭಾರತವಾಗಿ ಉಳಿಯಬೇಕಾದರೆ ಗ್ರಾಮಗಳು ಸದೃಢವಾಗಬೇಕು
ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ
ಗ್ರಾಮದ ಹಿರಿಮೆಯನ್ನು ಮುಂದಿನ ಪೀಳಿಗೆಗೆ ತಿಳಿಸುವುದರ ಜೊತೆಗೆ ಆ ಗ್ರಾಮದ ಸಂಸ್ಕೃತಿ ಉಳಿಸುವ ಕೆಲಸವಾಗಬೇಕು. ಬ್ರಿಟಿಷರು ದೇಶವನ್ನು ಬಿಟ್ಟು ಹೋದರೂ ಅವರ ಆಚಾರ-ವಿಚಾರಗಳನ್ನು ಇನ್ನೂ ಅಪ್ಪಿಕೊಂಡಿರುವುದು ವಿಷಾದನೀಯ ಎಂದು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಹೇಳಿದರು. ಅವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಿಲಾರು-ಮುದರಂಗಡಿ ಗ್ರಾಮದಲ್ಲಿ ನಡೆದ ಗ್ರಾಮವಿಕಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು. ಮುಂದುವರೆಸಿ ಮಾತನಾಡುತ್ತಾ ಗ್ರಾಮದಲ್ಲಿ ಸ್ವಾರ್ಥ ಕಡಿಮೆಯಾಗಿ ಸ್ವಾವಲಂಬನೆ ಹೆಚ್ಚಾಗಬೇಕು. ಗ್ರಾಮಗಳು ಸದೃಢವಾದರೆ ಭಾರತವು ಭಾರತವಾಗಿ ಉಳಿಯಲು ಸಾಧ್ಯ ಎಂದು ಅವರು ಹೇಳಿದರು. ಗ್ರಾಮವಿಕಾಸ ಕಾರ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹರಾದ ಡಾ. ವಾದಿರಾಜ್ ಮಾತನಾಡಿ ಭಾರತವು ತನ್ನದೇ ಆದ ವಿಶೇಷ ಮೌಲ್ಯಗಳಾದ ಕುಟುಂಬವ್ಯವಸ್ಥೆ, ಜೀವನಪದ್ಧತಿ, ಸಾತ್ವಿಕತೆ, ಸ್ವತ್ವಗಳಿಂದಾಗಿ ಜಗತ್ತಿನ ರಾಷ್ಟ್ರಗಳಿಗೆ ಅನುಕರಣೀಯವಾಗಿದೆ. ಇದರಲ್ಲಿ ಸಾರ್ಥಕತೆ ಕಾಣಬೇಕಾದರೆ ಗ್ರಾಮದಲ್ಲಿ ಜನಸಾಮಾನ್ಯರ ನಡುವೆ, ಸಾಮಾಜಿಕ, ಆರ್ಥಿಕ, ಪರಿಸರ ಚಿಂತನೆ ಆಗಬೇಕಾಗಿದೆ. ಮನುಷ್ಯನ ಮಹತ್ವಾಕಾಂಕ್ಷೆ, ಸ್ವಾರ್ಥ ಗಳಿಂದಾಗಿ ನಗರ ಪ್ರದೇಶಗಳ ಬದುಕು ಯಾಂತ್ರಿಕವಾಗಿದೆ. ಮನುಷ್ಯನ ವಿಪರೀತ ಬಾಹ್ಯ ಸುಖದ ಅಪೇಕ್ಷೆ ಯಿಂದಾಗಿ ಆತ್ಮಿಕ ಸುಖ ಕಳೆದುಹೋಗುತ್ತಿದೆ. ಗ್ರಾಮಗಳು ತನ್ನ ಸ್ವಾವಲಂಬನೆ ಸಂಸ್ಕೃತಿಯನ್ನು ಇನ್ನೂ ಉಳಿಸಿಕೊಂಡಿದೆ. ಪ್ರತಿ ಗ್ರಾಮವು ಆತ್ಮನಿರ್ಭರ ಆಗಬೇಕು ಗ್ರಾಮ ವಿಕಾಸವು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಪಿಲಾರು ಗ್ರಾಮ ವಿಕಾಸ ಸಮಿತಿಯ ಸಂಯೋಜಕ ಶ್ರೀ ಹರಿ ಎಚ್. ಸ್ವಾಗತಿಸಿದರು. ಶ್ರೀ ಸುಧಾಕರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಗ್ರಾಮವಿಕಾಸ ಸಮಿತಿಯ ವಿಭಾಗ ಪ್ರಮುಖರಾದ ಶ್ರೀ ವೆಂಕಟರಮಣ, ಜಿಲ್ಲಾ ಸಂಯೋಜಕರಾದ ಶ್ರೀ ಪ್ರಮೋದ್ ಶೆಟ್ಟಿ ಮಂದಾರ್ತಿ, ತಾಲೂಕು ಸಂಯೋಜಕ ಶ್ರೀ ಜಯ ಬೆಳಪು, ಶ್ರೀ ಕಿಶೋರ್ ಎಲ್ಲೂರು, ಸುರೇಶ್ ಹೆಜಮಾಡಿ, ಕುಂಜುಗುಡ್ಡೆ ಕೃಷ್ಣಾನಂದ ನಾಯಕ್ ಮುಂತಾದವರು ಉಪಸ್ಥಿತರಿದ್ದರು.



