ನೈಜ ಅಸ್ಮಿತೆಯ ಪುನರುತ್ಥಾನದತ್ತ ಭಾರತ

ಲೇಖನ: ಡಾ. ಮನಮೋಹನ್ ವೈದ್ಯ.
ಸಹ ಸರಕಾರ್ಯವಾಹ
ರಾಷ್ಟ್ರೀಯ ಸ್ವಯಂಸೇವಕ ಸಂಘ

ಈ ಕನ್ನಡ ಲೇಖನ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಲೇಖನದ ಆಂಗ್ಲ ಮೂಲವನ್ನು ಇಲ್ಲಿ ಓದಬಹುದು.

ಕೊರೋನಾ ಸಾಂಕ್ರಾಮಿಕ ರೋಗದೊಂದಿಗಿನ ಯುದ್ಧದ ಮಧ್ಯೆಯೇ ಲಡಾಖಿನ ಗಾಲ್ವಾನ್ನಿಲ್ಲಿನ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರ ಬಲಿದಾನದ ಸುದ್ದಿ ದೇಶಾದ್ಯಂತ ಕಳವಳ ಸೃಷ್ಟಿ ಮಾಡಿತು. 1962 ರ ನಂತರ ಮೊದಲ ಬಾರಿಗೆ ಸಂಭವಿಸಿದ ಚೀನಾದೊಂದಿಗಿನ ಈ ರಕ್ತಸಿಕ್ತ ಸಂಘರ್ಷದ ಬಗ್ಗೆ ಎಲ್ಲೆಡೆ ಚರ್ಚೆ ಪ್ರಾರಂಭವಾಯಿತು. ಕೆಲವರು ಭಾರತೀಯ ಸೇನೆಯ ಶೌರ್ಯ, ಶಕ್ತಿ ಮತ್ತು ಭಾರತದ ನಾಯಕತ್ವದ ದೃಢತೆಯನ್ನು ಪ್ರಶ್ನಿಸುತ್ತಿದ್ದಾರೆ. ಹೀಗೆ ಪ್ರಶ್ನೆ ಮಾಡುವವರ ಇತಿಹಾಸವನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರದಂತೆ ತಡೆಯಲು ಮತ್ತು ನರೇಂದ್ರ ಮೋದಿಯವರನ್ನು ಸೋಲಿಸಲು ಪ್ರಯತ್ನಿಸಿದ್ದು ಇದೇ ಜನರ ಗುಂಪು ಎಂಬುದು ನಮಗೆ ತಿಳಿಯುತ್ತದೆ. ಈಗ ನಡೆಯುತ್ತಿರುವ ವಿದ್ಯಮಾನಗಳೂ ಸೇರಿದಂತೆ ದೇಶ ಎದುರಿಸುತ್ತಿರುವ ಗಡಿಸಮಸ್ಯೆ, ಸಾಮಾಜಿಕ ಅಥವಾ ಆರ್ಥಿಕ ಸವಾಲುಗಳಿಗೆ ಕಾರಣ ಈ ಗುಂಪಿನಲ್ಲಿರುವ ದೂರದೃಷ್ಟಿಯ ಕೊರತೆ, ಅವಾಸ್ತವವಾದ, ದುರ್ಬಲ ನಾಯಕತ್ವ ಮತ್ತು ರಾಷ್ಟ್ರದ ಸರಿಯಾದ ಪರಿಕಲ್ಪನೆ ಇಲ್ಲದಿರುವುದೇ ಆಗಿದೆ.

Former PM AB Vajapayee, Defence Minister George Fernandes, APJ Abdul Kalam and others at Pokhran

ಬಹುಶಃ ಭಾರತದ ಉನ್ನತ ನಾಯಕತ್ವವು ಹಿಂದೆ ಡೋಕ್ಲಾಮ್ ಮತ್ತು ಈಗ ಗಾಲ್ವಾನ್‍ನಲ್ಲಿ ತೋರಿದ ಧೈರ್ಯ, ಮುನ್ನುಗ್ಗುವ ಸ್ವಭಾವವನ್ನು ಚೀನಾ ಹಿಂದೆಂದೂ ನೋಡಿರಲಿಲ್ಲ. 1962 ರಿಂದ ಚೀನಾ ನಿರಂತರವಾಗಿ ಭಾರತದ ಭೂಭಾಗವನ್ನು ಅತಿಕ್ರಮಣ ಮಾಡುತ್ತಿದ್ದರೂ ಇದುವರೆಗೆ ಯಾವುದೇ ಪ್ರಬಲ ವಿರೋಧವನ್ನು ಎದುರಿಸಿರಲಿಲ್ಲ. ಇಂತಹ ಪ್ರಬಲ ಪ್ರತಿರೋಧ ಒಡ್ಡಲು ಕೇವಲ ಸೈನ್ಯದ ಶೌರ್ಯ ಮತ್ತು ಶಕ್ತಿ ಮಾತ್ರ ಸಾಕಾಗುವುದಿಲ್ಲ. ರಾಜಕೀಯ ನಾಯಕತ್ವದ ದೃಢನಿಶ್ಚಯ, ರಣತಂತ್ರಗಳು ಸೈನಿಕಶಕ್ತಿಯ ಜೊತೆಗೂಡಿದರೆ ಮಾತ್ರ ಇದು ಸಾಧ್ಯ. 1998 ರಲ್ಲಿ ನಡೆಸಿದ ಯಶಸ್ವಿ ಪೆÇೀಖ್ರಾನ್ ಅಣು ಪರೀಕ್ಷೆಯಲ್ಲಿ ಈ ಸಂಗತಿ ಬಹಳ ಸ್ಪಷ್ಟವಾಗಿ ಎಲ್ಲರ ಗಮನಕ್ಕೆ ಬಂತು. 1994 ರಲ್ಲೇ ಅಣುಬಾಂಬ್‍ಗೆ ಬೇಕಾದ ಎಲ್ಲ ಸಂಶೋಧನೆಗಳು ಪೂರ್ಣಗೊಂಡಿದ್ದರೂ, 1998 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ತೋರಿಸಿದ ಧೈರ್ಯವನ್ನು ಅದುವರೆಗಿನ ಸರ್ಕಾರಗಳು ತೋರಿಸಿರಲಿಲ್ಲ. ಆ ಯಶಸ್ವಿ ಪರೀಕ್ಷೆಯ ನಂತರ, ಭಾರತ ಮತ್ತು ಭಾರತೀಯರ ಆತ್ಮವಿಶ್ವಾಸ ಹೆಚ್ಚಾಯಿತು. ಉರಿ ವೈಮಾನಿಕ ದಾಳಿ, ಬಾಲಕೋಟ್, ಡೋಕ್ಲಾಮ್, ಗಾಲ್ವಾನ್ ಹಾಗೂ ಜಮ್ಮು ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಭಯೋತ್ಪಾದನೆಗೆ ಸಮರ್ಥ ಪ್ರತಿರೋಧ – ಈ ಎಲ್ಲವನ್ನು ಗಮನಿಸಿದಾಗ 2014 ರಿಂದ ದೇಶದ ರಕ್ಷಣೆ ತಂತ್ರಗಾರಿಕೆಯಲ್ಲಿ ಭಾರತದ ನಡೆಯಲ್ಲಿ ಮೂಲಭೂತ ಬದಲಾವಣೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿಯವರೆಗೆ ನಿರ್ಲಕ್ಷಿಸಲ್ಪಟ್ಟ ಭಾರತೀಯ ಗಡಿಗಳಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಈ ಹಿಂದೆ ಪಾಕಿಸ್ತಾನದಲ್ಲಿದ್ದು ಈಗ ಚೀನಾದ ವಶದಲ್ಲಿರುವ ಅಕ್ಸಾಯ್ ಚಿನ್ ಭಾಗಗಳ ಮೇಲೆ ನ್ಯಾಯಯುತವಾದ ಹಕ್ಕು ತನ್ನದೆಂದು ಸಮರ್ಥವಾಗಿ ಪ್ರತಿಪಾದಿಸುತ್ತಿರುವುದು ಭಾರತದ ನಾಯಕತ್ವದ ದೃಢತೆ, ಧೈರ್ಯ ಮತ್ತು ದೂರದೃಷ್ಟಿಯ ಸಂಕೇತವಾಗಿದೆ. ಈ ಎಲ್ಲ ಸಂಗತಿಗಳು ಚೀನಾದ ಕೋಪಕ್ಕೆ ಕಾರಣವಾಗಿರಬಹುದು. ಹಾಗೆಯೇ, ಭಾರತದಲ್ಲಿನ ರಾಷ್ಟ್ರವಿರೋಧಿ ಶಕ್ತಿಗಳೂ ಈ ಬದಲಾವಣೆಗಳನ್ನು ಜೀರ್ಣಿಸಿಕೊಳ್ಳಲು ಆಗದೇ ಚಡಪಡಿಸುತ್ತಿರುವುದು ಕೂಡ ಆಶ್ಚರ್ಯಕರ ಸಂಗತಿಯೇನಲ್ಲ.

1962 ರಲ್ಲಿ ಚೀನಾದೊಂದಿಗಿನ ಯುದ್ಧದಲ್ಲಿ ಭಾರತೀಯ ಸೇನೆಯ ಅತುಲ್ಯ ಶೌರ್ಯ ಮತ್ತು ತ್ಯಾಗದ ಹೊರತಾಗಿಯೂ, ನಾವು ಸೋತೆವು. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದಾಗಿ, ಆ ಸಮಯದಲ್ಲಿ ಭಾರತದ ಉನ್ನತ ನಾಯಕತ್ವದಲ್ಲಿದ್ದ ದೂರದೃಷ್ಟಿಯ ಕೊರತೆ ಮತ್ತು ಎರಡನೆಯದು ಯುದ್ಧಕ್ಕೆ ಯಾವುದೇ ಸಿದ್ಧತೆ ಇರದಿದ್ದುದು. `ಹಿಂದೀ ಚೀನೀ ಭಾಯಿ ಭಾಯಿ’ ಎನ್ನುತ್ತಾ, ಚೀನಾವನ್ನು ಸಂಪೂರ್ಣ ನಂಬಿ, ಅದರೊಂದಿಗೆ ಸ್ನೇಹ ಬೆಳೆಸುವುದು ನಮಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ ಎಂದು ಚೀನಾದ ವಿಸ್ತರಣಾವಾದಿ ಸ್ವಭಾವದ ಅರಿವಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿ ಗೋಳ್ವಲ್ಕರ್ ಮತ್ತು ಇತರ ಅನೇಕ ನಾಯಕರು ಎಚ್ಚರಿಸಿದ್ದರು. ಚೀನಾ ನಮ್ಮನ್ನು ಮೋಸಗೊಳಿಸಬಹುದು ಎಂಬುದು ಅವರ ಆತಂಕವಾಗಿತ್ತು. ಆ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಯಾವುದೇ ಯುದ್ಧಸಿದ್ಧತೆಗಳನ್ನು ಮಾಡದಿದ್ದುದು ಹಾಗೂ ಚೀನಾ ನಮ್ಮ ಮಿತ್ರನೆಂದು ಕುರುಡಾಗಿ ನಂಬಿದ್ದರ ಪರಿಣಾಮವಾಗಿ, 1962 ರ ಯುದ್ಧದಲ್ಲಿ ನಾವು ಮುಜುಗರಪಡುವಂತಹ ಸೋಲಾಯಿತು.

ಈ ಘಟನೆಯ ನಂತರ ಭಾರತೀಯ ಸೇನೆಯನ್ನು ಸಜ್ಜುಗೊಳಿಸುವ ಕೆಲಸ ಪ್ರಾರಂಭವಾಯಿತು. ಆದರೆ ಸೈನ್ಯದ ಬಲವೊಂದೇ ಸಾಕಾಗುವುದಿಲ್ಲ. ರಾಜಕೀಯ ನಾಯಕತ್ವದ ಪ್ರಬುದ್ಧತೆ ಮತ್ತು ದೃಢ ನಿಶ್ಚಯ ಕೂಡಾ ಅತ್ಯಗತ್ಯ. 2013 ರ ಡಿಸೆಂಬರ್ 6 ರಂದು ಅಂದಿನ ರಕ್ಷಣಾ ಸಚಿವ ಶ್ರೀ ಎ ಕೆ ಆಂಟನಿ ಸದನದಲ್ಲಿ ಮಾತನಾಡಿದ ವೀಡಿಯೊವೊಂದು ಇತ್ತೀಚೆಗೆ ಹೊರಬಿದ್ದಿದೆ. ಅದರಲ್ಲಿ ಅವರು, “ಭಾರತಕ್ಕಿಂತ ಮೂಲಸೌಕರ್ಯ ನಿರ್ಮಾಣದಲ್ಲಿ ಚೀನಾ ಉತ್ತಮವಾಗಿದೆ. ಅವರ ಕೆಲಸದ ಗುಣಮಟ್ಟ ಕೂಡಾ ಭಾರತಕ್ಕಿಂತ ಉತ್ತಮವಾಗಿದೆ. ನಾವು ಅವರನ್ನು ಹಿಂಬಾಲಿಸುತ್ತಿದ್ದೇವೆ ಅಷ್ಟೇ. ಗಡಿಯನ್ನು ಅಭಿವೃದ್ಧಿಪಡಿಸುವುದು ಉತ್ತಮ ರಕ್ಷಣಾ ತಂತ್ರಗಾರಿಕೆಯಲ್ಲ ಎಂಬುದು ಹಲವು ವರ್ಷಗಳ ಕಾಲ ಸ್ವತಂತ್ರ ಭಾರತದ ನೀತಿಯಾಗಿತ್ತು. ಅಭಿವೃದ್ಧಿ ಹೊಂದಿದ ಗಡಿಗಳಿಗಿಂತ ಅಭಿವೃದ್ಧಿಯಾಗದ ಗಡಿಗಳು ಸುರಕ್ಷಿತ ಎಂಬ ಭಾವನೆಯಿಂದ ಅನೇಕ ವರ್ಷಗಳಿಂದ ನಾವು ಗಡಿಪ್ರದೇಶಗಳಲ್ಲಿ ರಸ್ತೆ ಅಥವಾ ವಾಯುನೆಲೆಗಳನ್ನು ನಿರ್ಮಿಸಿಲ್ಲ. ಆ ಸಮಯದಲ್ಲಿ ಚೀನಾ ತನ್ನ ಗಡಿಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಲೇ ಇತ್ತು. ಪರಿಣಾಮವಾಗಿ, ಅವರು ಈ ವಿಷಯದಲ್ಲಿ ಈಗ ನಮ್ಮನ್ನು ಮೀರಿಸಿದ್ದಾರೆ. ಗಡಿಪ್ರದೇಶದಲ್ಲಿ ಸೈನ್ಯದ ಸಾಮಥ್ರ್ಯ ಮತ್ತು ಮೂಲಸೌಕರ್ಯದ ದೃಷ್ಟಿಯಿಂದ ಅವರು ನಮಗಿಂತ ಮುಂದಿದ್ದಾರೆ. ನಾನು ಇದನ್ನು ಒಪ್ಪುತ್ತೇನೆ. ಇದು ಐತಿಹಾಸಿಕ ಸತ್ಯ.”

ಸ್ವತಂತ್ರಭಾರತದ ಪ್ರಾರಂಭದ ದಿನಗಳಲ್ಲಿಯೇ ನಮ್ಮ ವಿದೇಶಾಂಗ ನೀತಿ, ರಕ್ಷಣಾ ನೀತಿ ಮತ್ತು ಆರ್ಥಿಕ ನೀತಿಗಳು ತಪ್ಪುದಾರಿಯನ್ನು ಹಿಡಿದವು. ರಕ್ಷಣಾ ನೀತಿ ತಪ್ಪಿದ್ದರ ಉದಾಹರಣೆಯೇ ಮೆಲೆ ಹೇಳಿದ ವಿದ್ಯಮಾನ. ಆರ್ಥಿಕ ನೀತಿಯ ಬಗ್ಗೆ ಹೇಳುವುದಾದರೆ, ಗ್ರಾಮಾಧಾರಿತ ಮತ್ತು ವಿಕೇಂದ್ರೀಕೃತ ಆರ್ಥಿಕತೆಗೆ ಒತ್ತು ನೀಡುವ ಬದಲು, ಮಹಾನಗರಕೇಂದ್ರಿತವಾದ ಆರ್ಥಿಕತೆಗೆ ಒತ್ತು ನೀಡಿದ್ದರ ಪರಿಣಾಮ, ನಮ್ಮ ಜನಜೀವನ ಮಹಾನಗರಗಳ ಸುತ್ತಲೇ ಗಿರಕಿ ಹೊಡೆಯುವಂತಾಗಿದೆ. ಹಾಗಾಗಿಯೇ, ಭಾರತದ ಶೇಕಡಾ 70 ರಷ್ಟು ಜನರು ವಾಸಿಸುವ ಹಳ್ಳಿಗಳು ಇಂದಿಗೂ ಅಭಿವೃದ್ಧಿಯಾಗದೇ ಉಳಿದಿವೆ. ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯ ಮತ್ತು ಉದ್ಯೋಗಕ್ಕಾಗಿ ಜನರು ತಮ್ಮ ಗ್ರಾಮಗಳನ್ನು ತೊರೆದು ದೂರದ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆಯುಂಟಾಗಿದೆ. ಸ್ವತಂತ್ರ ಭಾರತದ ಅರ್ಥಿಕ ನೀತಿಗಳು ಕೃಷಿ ಮತ್ತು ಕೃಷಿಕನನ್ನು ನಿರ್ಲಕ್ಷಿಸಿವೆ. ಈ ನೀತಿಗಳ ಫಲಿತಾಂಶವನ್ನು ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಕಾಣಿಸಿದೆ. ಉದ್ಯೋಗಕ್ಕಾಗಿ ಇತರ ರಾಜ್ಯಗಳಿಗೆ ವಲಸೆ ಹೋದ ಲಕ್ಷಾಂತರ ಕಾರ್ಮಿಕರು ತಾವು ಕೆಲಸ ಮಾಡುವ ನಗರದಲ್ಲಿ ಪರಕೀಯರಾಗಿದ್ದೇವೆ ಎಂಬ ಭಾವನೆಯಿಂದಾಗಿ ತಮ್ಮ ಹಳ್ಳಿಯ ಕಡೆಗೆ ತೆರಳಿದ್ದನ್ನು ನಾವು ನೋಡಿದ್ದೇವೆ. ನಗರೀಕರಣದಿಂದಾಗಿ ಜನರು ತಮ್ಮ ಭೂಮಿ, ತಮ್ಮ ಸಂಸ್ಕೃತಿಯಿಂದ ದೂರವಾದರು. ಇಂದಿಗೂ ಕೂಡ, ಕೃಷಿ ಮತ್ತು ಕೃಷಿ ಉತ್ಪನ್ನಗಳ ಕ್ಷೇತ್ರದಲ್ಲಿ ಅತ್ಯಧಿಕ ಪ್ರಮಾಣದ ಉದ್ಯೋಗಸೃಷ್ಟಿಯ ಸಾಧ್ಯತೆಯಿದೆ. ಆತ್ಮನಿರ್ಭರ ಭಾರತ ಅಭಿಯಾನದ ಮೂಲಕ ಇದರ ಬಗ್ಗೆ ಒಂದಷ್ಟು ಪ್ರಯತ್ನಗಳು ನಡೆಯುತ್ತಿವೆ.

ವಿದೇಶಾಂಗ ನೀತಿಯನ್ನು ನೋಡುವುದಾದರೆ, ಅಲಿಪ್ತ ನೀತಿಯೇ ನಮ್ಮ ವಿದೇಶಾಂಗ ನೀತಿ ಎಂಬಂತೆ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಜಾಗತಿಕ ಸನ್ನಿವೇಶದಲ್ಲಿ, ಭಾರತವು ಜಗತ್ತಿನಲ್ಲಿ ಒಂದು ಪ್ರಭಾವಿ ರಾಷ್ಟ್ರವಾಗುವವರೆಗೆ, ಅಲಿಪ್ತ ನೀತಿ ಒಂದು ಕಾರ್ಯತಂತ್ರವಾಗಿರಲು ಅಡ್ಡಿಯಿಲ್ಲ. ಆದರೆ ಇದು ನಮ್ಮ ವಿದೇಶಾಂಗ ನೀತಿಯ ಶಾಶ್ವತ ಆಧಾರವಾಗಿರಲು ಸಾಧ್ಯವಿಲ್ಲ! ಏಕೆಂದರೆ, ಅಲಿಪ್ತ ನೀತಿಗೆ ಮೂಲವಾದ ಎರಡು ಸೂಪರ್ ಪವರ್ ದೇಶಗಳು ನಮಗೆ ಹೋಲಿಸಿದರೆ ತುಂಬಾ ಹೊಸ ದೇಶಗಳು. ಆ ದೇಶಗಳ ಸೈದ್ಧಾಂತಿಕ ಹಿನ್ನೆಲೆ, ಅವರ ವೈಯಕ್ತಿಕ-ಸಾಮಾಜಿಕ ಜೀವನಾನುಭವಗಳು ಇನ್ನೂ ಪಕ್ವಗೊಂಡಿಲ್ಲ. ಅವನ್ನು ಭಾರತದ ಪರಿಪಕ್ವವಾದ, ಪರಿಪೂರ್ಣ ಜೀವನದೃಷ್ಟಿ ಹೊಂದಿದ ರಾಷ್ಟ್ರ, ಸಮಾಜ ಮತ್ತು ಜೀವನಾದರ್ಶಗಳಿಗೆ ಹೋಲಿಸಲು ಸಾಧ್ಯವಿಲ್ಲ. ನಮ್ಮ ನೀತಿಯನ್ನು ಅವುಗಳ ಆಧಾರದ ಮೇಲೆ ನಿರ್ಧರಿಸುವ ಕಲ್ಪನೆಯೇ ಗುಲಾಮೀ ಮನಃಸ್ಥಿತಿಯ ಸಂಕೇತವಾಗಿದೆ. ಆ ಸಮಯದಲ್ಲಿ ಅಮೆರಿಕ ಮತ್ತು ರಷ್ಯಾ ದೇಶಗಳು ಶಕ್ತಿಕೇಂದ್ರಗಳಾಗಿದ್ದವು. ಅವರ ರಾಷ್ಟ್ರೀಯ ಜೀವನವು 500 ವರ್ಷಗಳನ್ನು ಕೂಡ ದಾಟಿಲ್ಲ. ಅವರ ಸಿದ್ಧಾಂತಕ್ಕೆ 100 ವರ್ಷಗಳೂ ಕೂಡ ತುಂಬಿಲ್ಲ. ಮತ್ತೊಂದೆಡೆ, ಭಾರತದ ಇತಿಹಾಸ, ರಾಷ್ಟ್ರಜೀವನವು ಕನಿಷ್ಠ 10 ಸಾವಿರ ವರ್ಷಗಳಷ್ಟು ಹಳೆಯದು.

ಅಧ್ಯಾತ್ಮಾಧರಿತವಾದ ಭಾರತೀಯ ಜೀವನದೃಷ್ಟಿಯು ಪರಿಪೂರ್ಣ ಮತ್ತು ವೈಶ್ವಿಕವಾದದ್ದು. ಆದ್ದರಿಂದಲೇ, ಬಲಿಷ್ಠ ರಾಷ್ಟ್ರವಾಗಿದ್ದ ಕಾಲದಲ್ಲಿಯೂ ಭಾರತ ಇತರ ರಾಷ್ಟ್ರಗಳೊಂದಿಗೆ ಯುದ್ಧಕ್ಕಿಳಿಯಲಿಲ್ಲ. ವ್ಯಾಪಾರಕ್ಕಾಗಿ ವಿಶ್ವದ ದೂರದ ಮೂಲೆಗಳಿಗೆ ಹೋದರೂ, ಭಾರತವು ಅಲ್ಲಿ ವಸಾಹತುಗಳನ್ನು ಸ್ಥಾಪಿಸಲಿಲ್ಲ, ಶೋಷಣೆ ಮಾಡಲಿಲ್ಲ, ಲೂಟಿ ಮಾಡಲಿಲ್ಲ, ಮತಾಂತರಗೊಳಿಸಲಿಲ್ಲ ಅಥವಾ ಗುಲಾಮರನ್ನಾಗಿ ಮಾಡಲಿಲ್ಲ. ನಮ್ಮ ಜನರು ಅಲ್ಲಿನ ಜನರನ್ನು ಶ್ರೀಮಂತಗೊಳಿಸಿದ್ದಾರೆ, ಸುಸಂಸ್ಕøತರನ್ನಾಗಿ ಮಾಡಿದ್ದಾರೆ. ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಉತ್ತಮಗೊಳ್ಳುವಂತೆ ಮಾಡಿದ್ದಾರೆ. ಎಲ್ಲರನ್ನೂ ಒಳಗೊಳ್ಳುವ ಈ ವಿಶ್ವದೃಷ್ಟಿಯೇ ಭಾರತದ ಹೆಗ್ಗುರುತು. ಸಹಜವಾಗಿ, ಈ ವಿಶ್ವದೃಷ್ಟಿಯೇ ನಮ್ಮ ವಿದೇಶಾಂಗ ನೀತಿಯ ಆಧಾರವಾಗಿರಬೇಕಿತ್ತು. ಆದರೆ ಭಾರತದ ಮೊದಲ ಪ್ರಧಾನಮಂತ್ರಿಯ ಮೇಲೆ ಕಮ್ಯುನಿಸಮ್ಮಿನ ಪ್ರಭಾವ ಗಾಢವಾಗಿತ್ತು. ಆಧುನಿಕತೆಯ ಹೆಸರಿನಲ್ಲಿ ಈ ಭಾರತೀಯ ಜೀವನದೃಷ್ಟಿಯನ್ನು ಕಡೆಗಣಿಸಲಾಯಿತು. ಅನಂತರದ ದಿನಗಳಲ್ಲಿ ಕಾಂಗ್ರೆಸ್ಸಿನ ಮೇಲೆ ಕಮ್ಯುನಿಸ್ಟರ ಪ್ರಭಾವ ಇನ್ನೂ ಹೆಚ್ಚಾಗಿದ್ದರ ಪರಿಣಾಮವಾಗಿ, ಆಧುನಿಕ ಭಾರತವು ತನ್ನತನದಿಂದ, ಅಂದರೆ ನಿಜವಾದ ಭಾರತದಿಂದ ದೂರವಾಗುತ್ತಾ ಹೋಯಿತು. ಭಾರತದ ಗುರುತು ಭಾರತೀಯ ಜೀವನದೃಷ್ಟಿಯೆಂಬುದು ಹೋಗಿ, ಪ್ರಗತಿಪರ, ಉದಾರವಾದಿ ಚಿಂತನೆಗಳೇ ನಮ್ಮ ಗುರುತು ಎನ್ನುವಂತಾಯಿತು. ಆದರೆ ಸಮಾಜದಲ್ಲಿ ಗುಪ್ತವಾಹಿನಿಯಂತೆ ಹರಿಯುತ್ತಿದ್ದ ಸಾಮಾಜಿಕ ಮತ್ತು ರಾಷ್ಟ್ರೀಯ ಜಾಗೃತಿಯ ಪ್ರಭಾವದಿಂದಾಗಿ, 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲದ ಪಕ್ಷವೊಂದು ಸ್ವತಂತ್ರಭಾರತದಲ್ಲಿ ಮೊದಲ ಬಾರಿಗೆ ಸಂಪೂರ್ಣ ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂದಿತು. ಭಾರತದ ಪ್ರಾಚೀನ ಪರಂಪರೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಅನ್ವಯಿಸಿ, ರಾಷ್ಟ್ರದ ಪುನರುಜ್ಜೀವನ ಮಾಡಲು ಕಟಿಬದ್ಧರಾದ ವ್ಯಕ್ತಿಗಳ ವಿಜಯ ಇದು ಎನ್ನಬಹುದು. ಇದು, ಪ್ರಗತಿಪರ ಚಿಂತನೆಯ ಹೆಸರಿನಲ್ಲಿ ವಸಾಹತುಷಾಹಿ ಚಿಂತನೆಗಳನ್ನು ನಮ್ಮ ಮೇಲೆ ಹೇರುವುದನ್ನು ರಾಷ್ಟ್ರ ತಿರಸ್ಕರಿಸಿದ್ದರ ಸಂಕೇತವೂ ಹೌದು. 2019 ರಲ್ಲೂ ಇನ್ನೂ ಹೆಚ್ಚಿನ ಜನಬೆಂಬಲದೊಂದಿಗೆ ಅದೇ ವಿದ್ಯಮಾನವು ಪುನರಾವರ್ತನೆಯಾಯಿತು.

2014 ರ ಮೇ 16 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎನ್ ಡಿ ಎ ಸರ್ಕಾರ ರಚನೆಯಾಯಿತು. ಮೇ 18 ರಂದು `ಸಂಡೇ ಗಾರ್ಡಿಯನ್’ ತನ್ನ ಸಂಪಾದಕೀಯದಲ್ಲಿ ಹೀಗೆ ಬರೆಯಿತು, “ಇಂದು, 18 ಮೇ 2014, ಬ್ರಿಟನ್ ಅಂತಿಮವಾಗಿ ಭಾರತವನ್ನು ತೊರೆದ ದಿನ ಎಂದು ಇತಿಹಾಸದಲ್ಲಿ ದಾಖಲಿಸಬಹುದು. ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಗೆಲುವು ಸುದೀರ್ಘಯುಗದ ಅಂತ್ಯವನ್ನು ಸೂಚಿಸುತ್ತದೆ. ಇದುವರೆಗಿನ ಸರ್ಕಾರಗಳ ನಾಯಕತ್ವ ಮತ್ತು ಕಾರ್ಯವೈಖರಿ ಬ್ರಿಟಿಷ್ ಆಡಳಿತಕ್ಕಿಂತ ಬಹಳ ಭಿನ್ನವಾಗಿರಲಿಲ್ಲ. ಕಾಂಗ್ರೆಸ್ ಪಕ್ಷದ ಅಡಿಯಲ್ಲಿ ಭಾರತದ ಆಡಳಿತವೆಂಬುದು ಒಂದು ರೀತಿಯಲ್ಲಿ ಬ್ರಿಟಿಷ್ ರಾಜ್ಯದ ಮುಂದುವರಿಕೆಯೇ ಆಗಿತ್ತು.”

ಅದೇ ಸಮಯದಲ್ಲಿ ಶ್ರೀ ಶಿವ ವಿಶ್ವನಾಥನ್ ಎಂಬುವವರ ಒಂದು ಲೇಖನವೂ ಪ್ರಕಟವಾಯಿತು. ಈ ಲೇಖನದಲ್ಲಿ ಲೇಖಕರು ಒಂದು ಪ್ರಮುಖ ತಪೆÇ್ಪಪ್ಪಿಗೆಯನ್ನು ಹಂಚಿಕೊಂಡಿದ್ದಾರೆ. ಲೇಖನದ ಶೀರ್ಷಿಕೆ ಹೀಗಿತ್ತು – “ಮೋದಿ ನನ್ನಂತಹ `ಉದಾರವಾದಿಗಳನ್ನು’ ಹೇಗೆ ಸೋಲಿಸಿದರು”. ಶಿವ ವಿಶ್ವನಾಥನ್ ಬರೆಯುತ್ತಾರೆ – “ಸೆಕ್ಯುಲರಿಸಂ ಸಿದ್ಧಾಂತವು ಮಧ್ಯಮವರ್ಗದ ಜನರಲ್ಲಿ ತಮ್ಮ ನಂಬಿಕೆಗಳು, ಆಚರಣೆಗಳ ಬಗ್ಗೆ ಕೀಳರಿಮೆ ಅನುಭವಿಸುವಂತಹ ವಾತಾವರಣವನ್ನು ಸೃಷ್ಟಿಸುತ್ತಿತ್ತು. ಸೆಕ್ಯುಲರಿಸಂ ಎಂಬುದು ಒಂದು ಮೇಲ್ವರ್ಗದ, ಪ್ರಗತಿಯ ಸಂಕೇತದಂತೆ ಬಿಂಬಿತವಾದ್ದರಿಂದ ಮಧ್ಯಮವರ್ಗದ ಜನರಿಗೆ ಇದು ತಮ್ಮದು ಎಂದು ಯಾವತ್ತೂ ಅನ್ನಿಸಲೇ ಇಲ್ಲ. ಮೇ 17 ರಂದು ನರೇಂದ್ರ ಮೋದಿಯವರು ಕಾಶಿಗೆ ಭೇಟಿ ನೀಡಿದರು. ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ದಶಾಶ್ವಮೇಧ ಘಾಟ್‍ನಲ್ಲಿ ಗಂಗಾ ಆರತಿ ನಡೆಸಲಾಯಿತು. ಕಾಶಿಯ ಪ್ರಾಚೀನ ಪರಂಪರೆಯಾದ ಗಂಗಾ ಆರತಿಗೆ ಒಂದು ವಿಶ್ವಮಾನ್ಯತೆ ನೀಡಿದ ಘಟನೆ ಇದು. ಇವೆಲ್ಲ ದೂರದರ್ಶನದಲ್ಲಿ ಪ್ರಸಾರವಾದಾಗ, ಮಧ್ಯದಲ್ಲಿ ಯಾವುದೇ ಚರ್ಚೆ-ವಿವರಣೆ ಇಲ್ಲದೇ ಸಂಪೂರ್ಣ ಕಾರ್ಯಕ್ರಮವನ್ನು ಯಥಾವತ್ ತೋರಿಸಿ ಎಂಬ ಬೇಡಿಕೆ ಸಾರ್ವಜನಿಕರಿಂದ ಬಂತು! ಇಂತಹ ಸಾಂಪ್ರದಾಯಿಕ ಆಚರಣೆಯನ್ನು ಬಹಿರಂಗವಾಗಿ ದೂರದರ್ಶನದಲ್ಲಿ ತೋರಿಸಿದ್ದು ಅದೇ ಮೊದಲು ಎಂಬುದು ಹಲವರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಮೋದಿಯ ಉಪಸ್ಥಿತಿಯಲ್ಲಿ `ನಮ್ಮ ಧರ್ಮದ ಬಗ್ಗೆ ನಾವು ನಾಚಿಕೆಪಡುವ ಅಗತ್ಯವಿಲ್ಲ’ ಎಂಬ ಸ್ಪಷ್ಟ ಸಂದೇಶವು ರವಾನೆಯಾಗಿತ್ತು. ಇಂತಹದ್ದು ಮೊದಲೆಂದೂ ನಡೆದಿರಲಿಲ್ಲ. ಮೊದಲಿಗೆ ಇದು ನನಗೆ ಕಿರಿಕಿರಿಯೆನಿಸಿದರೂ, ನಂತರ ಇದು ನನ್ನನ್ನು ಯೋಚನೆಗೆ ಹಚ್ಚಿತು. ನನ್ನ ಸಹೋದ್ಯೋಗಿಯೊಬ್ಬರು ಹೀಗೆ ಹೇಳಿದರು, “ನೀವು, ಇಂಗ್ಲಿಷ್ ಮಾತನಾಡುವ ಸೆಕ್ಯುಲರಿಸ್ಟರು, ಯಾವುದು ಸಹಜವಾಗಿ ಸಾವಿರಾರು ವರ್ಷಗಳಿಂದ ನಡೆದುಬಂದಿತ್ತೋ, ಅದರ ಬಗ್ಗೆ ಬಹುಸಂಖ್ಯಾತರು ನಾಚಿಕೆಪಡುವಂತಹ ವಾತಾವರಣ ಸೃಷ್ಟಿ ಮಾಡಿದ್ದಿರಿ. ಈ ಪ್ರತಿಕ್ರಿಯೆ ಕಹಿ ಮತ್ತು ಆಘಾತಕಾರಿಯಾದರೂ, ನನ್ನಂತಹ ಉದಾರವಾದಿಗಳು ಎಷ್ಟು ದೊಡ್ಡ ತಪ್ಪು ಮಾಡಿದ್ದೆವೆಂದು ನನಗೆ ಅರಿವಾಯಿತು.”

PM Modi at Dashashwamedha Ghat in 2019

ಇದು ಹೊಸ ಭಾರತವಾಗಿದ್ದು, ಭಾರತದ ಈ ಪುನರುತ್ಥಾನವು ಈಗಾಗಲೇ ಎಲ್ಲಾ ಭಾರತೀಯರ ಅನುಭವಕ್ಕೆ ಬರುತ್ತಿದೆ. ಹಾಗೆ ನೋಡಿದರೆ, ಇದು ನಿಜಕ್ಕೂ ಹೊಸದೇನಲ್ಲ. ಆದರೆ ಅದನ್ನು ಆಧುನಿಕ ಭಾರತದ ಚಿಂತಕರು ಗುರುತಿಸಲಿಲ್ಲ ಅಥವಾ ಅದನ್ನು ಪ್ರಯತ್ನಪೂರ್ವಕವಾಗಿ ದಮನಿಸಲಾಯಿತು. ಸ್ವಾವಲಂಬೀ ಮತ್ತು ಸಂಘಟಿತ ಸಮಾಜದ ಶಕ್ತಿಯಲ್ಲಿ ನಂಬಿಕೆಯಿರುವ, ನಮ್ಮದೇ ಆದ ನೈಜ ಭಾರತವು ಸುಳ್ಳು ಪ್ರಚಾರದ ಅಬ್ಬರದಲ್ಲಿ ಮಸುಕಾಗಿ ಹೋಗಿತ್ತು. “ವಸುಧೈವ ಕುಟುಂಬಕಂ” ಮತ್ತು “ಸರ್ವೇಪಿ ಸುಖಿನಃ ಸಂತು” ಎಂಬುದು ನಮ್ಮ ಸಂಸ್ಕøತಿಯ ತಳಹದಿಯಾಗಿರುವುದರಿಂದ, ಭಾರತದ ಅಸ್ಮಿತೆಯ ಈ ಪುನರುತ್ಥಾನ ಮತ್ತು ಆತ್ಮನಿರ್ಭರತೆಯ ಘೋಷಣೆಯ ಬಗ್ಗೆ ಯಾರೂ ಭಯಗೊಳ್ಳಬೇಕಾದ ಅಗತ್ಯವಿಲ್ಲ. ಬದಲಾಗಿ, ಪ್ರಪಂಚದ ಎಲ್ಲರೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇದು ಒಂದು ಆಹ್ವಾನವೆಂದೇ ಭಾವಿಸಬಹುದು. ಏಕೆಂದರೆ ಈಗ ಉದಯವಾಗುತ್ತಿರುವ ಹೊಸ ಭಾರತವೆಂಬುದು ಎಲ್ಲರನ್ನೂ ಒಳಗೊಳ್ಳುವ, ಎಲ್ಲರಿಗೂ ಒಳಿತನ್ನು ಬಯಸುವ ಅದೇ ಪ್ರಾಚೀನ ಭಾರತವೇ ಹೊರತು ಬೇರೇನಲ್ಲ.

ಕೊರೋನಾ ಸಾಂಕ್ರಾಮಿಕದ ವಿರುದ್ಧ ಇಡೀ ದೇಶವು ಹೋರಾಡುತ್ತಿರುವ ಈ ಸಂದರ್ಭದಲ್ಲಿ ವಿಸ್ತರಣಾವಾದಿ ಧೋರಣೆಯ ಚೀನಾ ಒಡ್ಡಿರುವ ಸವಾಲನ್ನು ಎದುರಿಸಲು, ಇಡೀ ಭಾರತೀಯ ಸಮಾಜವು ಒಟ್ಟಾಗಿ ತನ್ನ ಏಕತೆಯನ್ನು ತೋರಿಸಬೇಕಾಗಿದೆ. ಇದುವರೆಗೂ ಇದನ್ನು ನಾವು ಯಶಸ್ವಿಯಾಗಿ ಮಾಡಿದ್ದೇವೆ. ಸೈನ್ಯದ ಶಕ್ತಿ ಮತ್ತು ಸರ್ಕಾರದ ನಿರ್ಣಯ ತೆಗೆದುಕೊಳ್ಳುವ ಸಾಮಥ್ರ್ಯದ ಬಗ್ಗೆ ವಿಶ್ವಾಸವಿರಿಸಿ ಒಂದಾಗಿ ನಿಲ್ಲುವ ಪ್ರಬುದ್ಧತೆಯನ್ನು ರಾಜಕೀಯ ಪಕ್ಷಗಳು ಮತ್ತು ಜನರು ಪ್ರದರ್ಶಿಸುವುದು ಅತ್ಯಂತ ಅಗತ್ಯ. ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ಹಾಕಲು ಅಥವಾ ಪರಸ್ಪರ ಸೋಲು-ಗೆಲುವುಗಳ ಬಗ್ಗೆ ಚಿಂತಿಸುವ ಸಮಯ ಇದಲ್ಲ.

ಡಾ. ಮನಮೋಹನ್ ವೈದ್ಯ
ಸಹ ಸರಕಾರ್ಯವಾಹ
ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published.

This site uses Akismet to reduce spam. Learn how your comment data is processed.