ಸಿನಿಮಾ ಎಲ್ಲರಿಗೂ ಎಟುಕದ ಸ್ಥಿತಿಯಲ್ಲಿದ್ದ ಸಮಯದಲ್ಲಿ ಕಿರುತೆರೆ ಜನರನ್ನು ಆಕರ್ಷಿಸತೊಡಗಿತು. ದೂರದರ್ಶನವೆಂಬ ಒಂದೇ ವಾಹಿನಿಯಿದ್ದಾಗಿನಿಂದ ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳು ಪ್ರಕಟವಾಗಿವೆ. ಧಾರವಾಹಿ ರೂಪಾರಲ್ಲಿ ೧೩ ವಾರಗಳಿಗೆಂದೇ ಸಮಯಾವಕಾಶ ಕೊಡುತ್ತಿದ್ದ ಮುಂಚಿನ ದಿನಗಳನ್ನು ಈಗ ತುಲನೆ ಮಾಡಬೇಕಾಗಿರುವುದು ನಿತ್ಯ ಬರುವ ಧಾರಾವಾಹಿ ಕಂತುಗಳಿಗೆ. ಸಿನಿಮಾ ಶೈಲಿಯಲ್ಲೇ ಮೂಡಿಬರುವ ಹಲವು ಧಾರಾವಾಹಿಗಳಿವೆ. ಕೆಲವನ್ನು ಜನರು ಬಹಳವಾಗಿ ಇಷ್ಟಪಟ್ಟಿದ್ದಾರೆ. ಮತ್ತೆ ಕೆಲವನ್ನು ಖಂಡಿಸಿದ್ದಾರೆ. ಸಂಗೀತಕ್ಕೆ ಸಂಬಂಧಿಸಿದಂತೆ, ಹಾಡುಗಾರಿಕೆಗೆ ಸಂಬಂಧಿಸಿದಂತೆ ಹಲವು ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಜನರು ವೀಕ್ಷಿಸಿ ಇಷ್ಟಪಟ್ಟಿದ್ದಾರೆ. ರಸಪ್ರಶ್ನೆ, ಜ್ಞಾನಾರ್ಜನೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಕಿರುತೆರೆಯಲ್ಲಿ ಮೂಡಿಬಂದಿವೆ.
ನಮ್ಮ ಪಟ್ಟಿಯಲ್ಲಿದ್ದ ೧೦ ಕಾರ್ಯಕ್ರಮಗಳಲ್ಲಿ ಹೆಚ್ಚು ಅಂಕ ಪಡೆದ ಮೊದಲ ೩ ಕಾರ್ಯಕ್ರಮಗಳು ಬೇರೆ ಬೇರೆಯ ಪ್ರಕಾರದ್ದು ಎಂಬುದೇ ವಿಶೇಷ. ಅತಿ ಹೆಚ್ಚು ಅಂಕ ಪಡೆದ ಎದೆ ತುಂಬಿ ಹಾಡುವೆನು ಸಂಗೀತಕ್ಕೆ ಸಂಬಂಧಿಸಿದ್ದಾದರೆ, ನಾ ಸೋಮೇಶ್ವರರು ನಡೆಸಿಕೊಡುವ ‘ಥಟ್ ಅಂತ ಹೇಳಿ’ ಜ್ಞಾನ, ಓದು, ಪುಸ್ತಕ, ಇವುಗಳಿಗೆ ಸಂಬಂಧಿಸಿದ್ದು. ನಂತರ ಸ್ಥಾನದಲ್ಲಿ – ದೂರದರ್ಶನದಲ್ಲಿ ಹಿಂದೆ ಪ್ರಸಾರವಾಗುತ್ತಿದ್ದ ಟಿ ಏನ್ ಸೀತಾರಾಮ್ ಅವರ ಮಾಯಾಮೃಗ ಧಾರವಾಹಿ.
ಸಂಗೀತಕ್ಕೆ ಹೆಚ್ಚು ಮತ ದೊರೆತಿದೆ ಎಂದು ಒಂದು ತರಹದಲ್ಲಿ ವಿಶ್ಲೇಷಿಸಿದರೆ, ಇಂದಿನ ದಿನಕ್ಕೆ ಗಮನಿಸಬೇಕಾದ್ದು ಈ ಕಾರ್ಯಕ್ರಮದಿಂದ ಬಹಳಷ್ಟಿವೆ. ರಿಯಾಲಿಟಿ ಷೋ ಅಂದರೆ ಅದೊಂದು ಟಿಆರ್ಪಿ ವಸ್ತು ಎಂಬಂತೆ ಆಗಿರುವ ಹಾಗೂ ಪ್ರಕಟವಾಗುವ ಇಂದಿನ ಸಂಗೀತದ ಕಾರ್ಯಕ್ರಮಗಳ ಮುಂದೆ ಎಸ್ ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಅತಿಯಾದ ರಂಜನೆ, ಅತಿಯಾದ ಆಡಂಬರ ಕಾಣಸಿಗುತ್ತಿರಲಿಲ್ಲ. ಸಂಗೀತಕ್ಕೆ ಆದ್ಯತೆ, ಎಲ್ಲರನ್ನು ಪ್ರೋತ್ಸಾಹಿಸುವ ಕೆಲಸ ಈ ಕಾರ್ಯಕ್ರಮದಿಂದ ನಡೆಯುತ್ತಿತ್ತು. ಸ್ಪರ್ಧೆಯಿಂದ ದೂರ ಉಳಿಯಬೇಕಾದವರನ್ನು ಅಳುವಂತೆ ಮಾಡಿ ಟಿಆರ್ಪಿ ಹೆಚ್ಚಿಸಿಕೊಳ್ಳುವ ಕೆಲಸಕ್ಕೆ ಈ ಕಾರ್ಯಕ್ರಮ ಎಂದೂ ಕೈ ಹಾಕಲಿಲ್ಲ. ಈ ಕಾರ್ಯಕ್ರಮದಿಂದ ಹಲವಾರು ಪ್ರತಿಭೆಗಳಿಗೆ ಸಿನಿಮಾಗಳಲ್ಲಿ ಹಾಡಲು ಅವಕಾಶ ಲಭಿಸಿದೆ.
ಇನ್ನು ಥಟ್ ಅಂತ ಹೇಳಿ ಎಂಬ ರಸಪ್ರಶ್ನೆಯ ಬಗ್ಗೆ, ನಿರೂಪಣೆಯಲ್ಲಿ ಏಕತಾನತೆ ಹೊಂದಿದೆಯೆಂದು ಅಭಿಪ್ರಾಯಪಡುತ್ತಾರಾದರೂ, ಜ್ಞಾನಾರ್ಜನೆಗೆ, ನಿರೂಪಕರಾದ ಡಾ. ನಾ ಸೋಮೇಶ್ವರ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಮೂಡಿ ಬರುವ ಹಲವಾರು ಪುಸ್ತಕಗಳು, ಅವುಗಳ ಪರಿಚಯ ಹಲವು ಜನರನ್ನು ಆಕರ್ಷಿಸಿದೆ. ೩೦೦೦ಕ್ಕೂ ಹೆಚ್ಚು ಸಂಚಿಕೆಗಳು ಪ್ರಕಟವಾಗಿವೆ ಹಾಗೂ ದೂರದರ್ಶನದ ಕೆಲವೇ ಕೆಲವು ಕಾರ್ಯಕ್ರಮಗಳಲ್ಲಿ ಆಸ್ಥೆಯಿಂದ ನೋಡುವ ಕಾರ್ಯಕ್ರಮ ಇದಾಗಿದೆ ಎಂದರೆ ತಪ್ಪಾಗಲಾರದು.
ಇನ್ನು ದೂರದರ್ಶನದಲ್ಲಿ ಪ್ರಕಟವಾದ ಮೊಟ್ಟ ಮೊದಲ ದೈನಂದಿನ ಧಾರಾವಾಹಿ “ಮಾಯಾಮೃಗ” ನಾಲ್ಕು ಸಾಮಾನ್ಯ ಮನೆಗಳ ಕಥೆಗಳನ್ನು ತೆಗೆದುಕೊಂಡು ನಿರ್ದೇಶಕ ಟಿ ಏನ್ ಸೀತಾರಾಮ್ ಈ ವಿಶೇಷ ಪ್ರಯತ್ನಕ್ಕೆ ಕೈ ಹಾಕಿದರು. ಮೊದಲೆಲ್ಲ ಈ ಪ್ರಯತ್ನ ಫಲಕಾರಿಯಾಗುವುದೋ ಇಲ್ಲವೋ ಎಂಬ ಅನುಮಾನವಿತ್ತಾದರೂ, ಮುಂದಿನ ದಿನಗಳಲ್ಲಿ ದೈನಂದಿನ ಧಾರಾವಾಹಿಗೆ ಮುನ್ನುಡಿ ಬರೆದದ್ದು ಮಾಯಾಮೃಗ. ಇಂದಿನ ಧಾರಾವಾಹಿಗಳಲ್ಲಿ ಬರುವ ಇಬ್ಬರ ನಡುವಿನ ಕಲಹ, ಅತ್ತೆ ಸೊಸೆ ಜಗಳ, ಗಂಡ ಹೆಂಡತಿ ವೈಮನಸ್ಸು ಇವಾವುದನ್ನೂ ತೋರಿಸದೆ ಸಾತ್ವಿಕ ರೀತಿಯ ಧಾರಾವಾಹಿಯನ್ನು ಅಂದು ನಿರ್ದೇಶಿಸಿದ್ದರು. ಇದರಲ್ಲಿ ಬರುವ ನ್ಯಾಯಾಲಯದ ಸೀನುಗಳು ನಿಜವೇನೋ ಎಂಬಂತೆ ಚಿತ್ರಿಸಿದ್ದ ಸೀತಾರಾಮ್ ಅವರಿಗೊಂದು ವಿಶೇಷ ಅಭಿಮಾನಿ ವರ್ಗ ಹುಟ್ಟಿಕೊಂಡಿತು.