ಬೆಂಗಳೂರು: ಕಳೆದು ಕೆಲವು ವರ್ಷಗಳ ಭಾರತದ ಸಾಧನೆಗಳು ಭಾರತದ ಕಥೆಯನ್ನು ಜಾಗತಿಕ ಮಟ್ಟದಲ್ಲಿ ತಿಳಿಸುತ್ತಿದೆ. ಇದರಲ್ಲಿ ಕರ್ನಾಟಕದ ಕೊಡುಗೆಯೂ ಅಪಾರವಾಗಿದೆ. ಅವಕಾಶಗಳು ಸಿಕ್ಕರೆ ಸಮರ್ಥವಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವುದನ್ನು ಬೆಂಗಳೂರಿನ ಯುವಕರು ಇಡೀ ಭಾರತಕ್ಕೆ ತಿಳಿಸಿಕೊಟ್ಟಿದ್ದಾರೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಹೇಳಿದರು.
ಬೆಂಗಳೂರಿನ ಥಿಂಕರ್ಸ್ ಫೋರಮ್‌ನ ವತಿಯಿಂದ ಜೆ.ಪಿ.ನಗರದ ಆರ್.ವಿ.ಡೆಂಟಲ್ ಕಾಲೇಜಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು.
ಈ ಹಿಂದೆ ಯುದ್ಧಗಳು, ಸಾಂಕ್ರಾಮಿಕ ರೋಗಗಳು, ಬರಗಾಲ, ಪ್ರವಾಹ ಹೀಗೆ ಅನೇಕ ಸಮಸ್ಯೆಗಳನ್ನು ಭಾರತ ಎದುರಿಸಿದೆ. ಕೋವಿಡ್ ಭಾರತವನ್ನೂ ಒಳಗೊಂಡಂತೆ ಜಗತ್ತಿನ ಸಣ್ಣ ರಾಷ್ಟ್ರಗಳನ್ನೂ ಬಿಡದೆ ಕಾಡಿದೆ. ಉಕ್ರೇನ್ ಮತ್ತು ರಷ್ಯ ನಡುವಿನ ಯುದ್ಧ ಭಾರತದಲ್ಲಿ ಆಹಾರ, ಆರೋಗ್ಯ, ಯುದ್ಧೋಪಕರಣಗಳು ಇತ್ಯಾದಿಗಳ ಮೇಲೆ ಪರಿಣಾಮ ಬೀರಿತ್ತು. ವಿಶ್ವದ ಹಲವು ರಾಷ್ಟ್ರಗಳ ಮೇಲೂ ಇದು ಪ್ರಭಾವ ಬೀರಿದ್ದಲ್ಲದೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತಮ್ಮ ಆರ್ಥಿಕ ನಿಯಮಗಳ ಕಾರಣಕ್ಕಾಗಿ ಹಣದುಬ್ಬರ ಇಮ್ಮಡಿಗೊಳಿಸಿತು. ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸಿದ ನಂತರವೂ ಭಾರತ ಪ್ರಸ್ತುತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಮುಖ್ಯಮಂತ್ರಿಯಾಗಿದ್ದರಿಂದ ರಾಜ್ಯಗಳಿಗೆ ನೀಡುವ ಅನುದಾನಗಳ ಪ್ರಾಮುಖ್ಯತೆ ತಿಳಿದಿದೆ. ಕೋವಿಡ್ ಸಂದರ್ಭದಲ್ಲೂ ಅನುದಾನ ಕಾರ್ಯಕ್ರಮವನ್ನು ತಂದರೂ ಅದರ ಹೊರೆಯನ್ನು ಯಾರ ಮೇಲೂ ಹೊರಿಸಲಿಲ್ಲ. ಕರ್ನಾಟಕವೂ ಭಾರತದ ಅಭಿವೃದ್ಧಿಗೆ ತುಂಬಾ ಸಹಕರಿಸುತ್ತಿದೆ. ಇಲ್ಲಿನ ಜವಾಬ್ದಾರಿಯುತ ನಾಗರಿಕರು ದೇಶ ಮೊದಲು ಎಂಬ ಭಾವನೆಯಿಂದ ಅಭಿವೃದ್ಧಿಗೆ ಜೊತೆಯಾಗುತ್ತಿದ್ದಾರೆ ಎಂದರು.
ಕರ್ನಾಟಕದ ಜನರ ಕೊಡುಗೆಯ ಕಾರಣಕ್ಕಾಗಿ ಬೆಂಗಳೂರಿನಂತೆ ಮಂಗಳೂರು, ತುಮಕೂರಿಗೂ ಉದ್ಯಮಗಳು ವ್ಯಾಪಿಸಿವೆ. ಕಲ್ಯಾಣ ಕರ್ನಾಟಕಕ್ಕೂ ಪ್ರಾಧಾನ್ಯತೆ ನೀಡಲಾಗುತ್ತಿದ್ದು ಅಭಿವೃದ್ಧಿಯ ಶಖೆ ಆರಂಭವಾಗಿದೆ. ಬಸವ ಮಂಟಪವನ್ನು ವಿಶ್ವಗುರು ಬಸವಣ್ಣನವರಿಗೆ ಗೌರವಾರ್ಥವಾಗಿ ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕದ ಪಾತ್ರವನ್ನು ಗೌರವಿಸುತ್ತದೆ ಎಂದು ಹೇಳಿದರು.
ರೂಪಾಯಿ ಇಂದು ಜಾಗತಿಕ ವ್ಯವಹಾರದಲ್ಲಿ ಮನ್ನಣೆ ಪಡೆದುಕೊಳ್ಳುತ್ತಿದೆ. ಆದರೆ ಈ ವಾತಾವರಣ ನಿರ್ಮಾಣವಾಗುವುದು ಕೇವಲ ಸರ್ಕಾರದ ಕೈಯಲ್ಲಿಲ್ಲ. ಡಾಲರ್‌ನ ತನ್ನದೇ ಆದ ಕಾರಣಗಳಿಂದ ತನ್ನ ಮೌಲ್ಯಗಳನ್ನು ಹೆಚ್ಚಿಸಿಕೊಂಡಿದೆ. ಆದರೆ ರೂಪಾಯಿ ಮೌಲ್ಯ ಸ್ಥಿರವಾಗಿದೆ. ಭಾರತದ ವಸ್ತುಗಳ ಖರೀದಿಯ ಬೆಲೆ ಉಳಿದ ರಾಷ್ಟ್ರಗಳಿಗೂ ಪೂರಕವಾಗಿರುವ ಕಾರಣಕ್ಕಾಗಿ ಹಲವು ರಾಷ್ಟ್ರಗಳು ನಮ್ಮೊಂದಿಗೆ ವ್ಯವಹಾರಕ್ಕೆ ಒಪ್ಪುತ್ತಿವೆ. ಇದರಲ್ಲಿ ಆ ರಾಷ್ಟ್ರಗಳಿಗೆ ಪ್ರಜಾಪ್ರಭುತ್ವ, ಸದೃಢ ಮತ್ತು ಸ್ಥಿರವಾದ ಸರ್ಕಾರದ ಮೇಲಿನ ನಂಬಿಕೆಯೂ ಪ್ರಮುಖ ಪಾತ್ರವಹಿಸುತ್ತದೆ.
ಆರ್ಥಿಕ ಸಾಕ್ಷರತೆ ಮೂಡಿಸುವಲ್ಲಿ ಕೇಂದ್ರ ಸರ್ಕಾರದ ಪಾತ್ರದ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹಲವು ಪ್ರಯತ್ನಗಳನ್ನು ಅದಾಗಲೇ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಮಕ್ಕಳಿಗಾಗಿ ಕಾಮಿಕ್ ಪುಸ್ತಕಗಳನ್ನು ಹೊರತರಲಾಗಿದೆ. ಡಿಜಿಟಲ್ ಕಾಮಿಕ್ ಸ್ಟ್ರಿಪ್ಗಳನ್ನು ತರಲಾಗಿದೆ. ಆನ್‌ಲೈನ್ ತರಗತಿಯ ಮೂಲಕ ನಮಗೆ ಬಿಡುವಿರುವಾಗ ಯಾವಾಗ ಬೇಕಾದರೂ ಆರ್ಥಿಕ ಸಂಗತಿಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ನುಡಿದರು.
ಪ್ರತಿ ಮಹಿಳೆಯೂ ತನಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಇಟ್ಟುಕೊಳ್ಳಬೇಕು. ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಹೊಂದಲು ಯಾವುದೇ ಹಿಂಜರಿಕೆ ಬೇಡ. ನೀವು ಕೂಡಿಟ್ಟ ಹಣವನ್ನು ಹೇಗೆ ವ್ಯಯಮಾಡಬಹುದು ಎನ್ನುವ ಸರ್ವಾಧಿಕ ಅಧಿಕಾರ ನಿಮಗಿರುವುದಲ್ಲದೇ, ನಿಮ್ಮ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲೂ ಸಾಧ್ಯವಾಗುತ್ತದೆ ಎಂದರು.
ಅಮುಲ್ ಮತ್ತು ನಂದಿನಿ ವಿವಾದದ ಕುರಿತು ಮಾತನಾಡಿದ ವಿತ್ತ ಸಚಿವೆ ಪ್ರತಿ ರಾಜ್ಯಕ್ಕೂ ಅದರದ್ದೇ ಆದ ಹಾಲು ಉತ್ಪಾದಕ ಘಟಕಗಳಿವೆ. ಈ ಎಲ್ಲಾ ಘಟಕಗಳ ಸಹಕಾರದಿಂದ ಇಂದು ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಹಾಲನ್ನು ಉತ್ಪಾದಿಸುವ ಮಾಡುವ ದೇಶವಾಗಿದೆ. ಆದರೆ ನಮ್ಮ ನಾಡಿನ ವಸ್ತುವಿಗೆ ಪ್ರಾಧಾನ್ಯತೆ ನೀಡಲೇಬೇಕು. ನಮಗೆ ಅವಶ್ಯಕತೆ ಇದ್ದು ಪ್ರಾದೇಶಿಕ ಉತ್ಪನ್ನಗಳು ದೊರೆಯದಿದ್ದಾಗ ಉಳಿದ ರಾಜ್ಯಗಳ ಉತ್ಪನ್ನಗಳು ಬಳಸುವುದರಲ್ಲಿ ತಪ್ಪಿಲ್ಲ. ದೈನಂದಿ ಜೀವನದಲ್ಲಿ ಕೊಡುಕೊಳ್ಳುವಿಕೆ ಸಹಜ, ಇದನ್ನು ರಾಜಕೀಯ ಮಾಡಬಾರದಷ್ಟೆ ಎಂದು ಅಭಿಪ್ರಾಯಪಟ್ಟರು.
ಉಚಿತ ಭಾಗ್ಯಗಳ ಕುರಿತು ಮಾತನಾಡಿದ ಕೇಂದ್ರ ಸಚಿವೆ ಆಹಾರ ಪದಾರ್ಥಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟ ವಿತ್ತಿಯೊಳಗಡೆ ನೀಡಬಹುದು. ಆದರೆ ಇರುವ ವಿತ್ತಿಯ ಬಹುಪಾಲನ್ನು ಉಚಿತವಾಗಿ ನೀಡುವುದು ಅಭಿವೃದ್ಧಿಗೆ ಕಂಟಕವಾಗುತ್ತದೆ. ಜನರ ಸಬಲೀಕರಣಕ್ಕೆ ಕಾರಣವಾಗುವ ಯೋಜನೆಗಳನ್ನು ಸರ್ಕಾರಗಳು ನೀಡಬೇಕು. ಪಾರದರ್ಶಕತೆಯನ್ನು ವ್ಯವಸ್ಥೆಯಲ್ಲಿ ತರುವ ಮೂಲಕ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.
ಭಾರತ ಜಾಗತಿಕ ಮನ್ನಣೆ ಪಡೆಯುತ್ತಿದೆ. ಕರ್ನಾಟಕವೂ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಸರ್ಕಾರದ ಯೋಜನೆಗಳು ಸಹ ಅನುಷ್ಠಾನವಾಗಬೇಕಾದ ಸಮಯದಲ್ಲೇ ಆಗುತ್ತಿದೆ. ಅಭಿವೃದ್ಧಿಯ ವೇಗದ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಮುಂದುವರಿಯುವುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರೂ ಆಗುತ್ತಿರುವ ಅಭಿವೃದ್ಧಿಯ ಅಂಕಿಅಂಶಗಳನ್ನು ಪ್ರಾಮಾಣಿಕವಾಗಿ ಗಮನಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಥಿಂಕರ್ಸ್ ಫಾರಮ್‌ನ ಕಾರ್ಯಕರ್ತರಾದ ನಿತ್ಯಾ ಪಾರ್ಥಿಸಿ, ಸೌಮ್ಯ ಸ್ವಾಗತಿಸಿ, ಸುರಭಿ ಕಾರ್ಯಕ್ರಮವನ್ನು ನಿರೂಪಿಸಿದರು.