“ಇತ್ತೀಚೆಗೆ ಘರ್ ವಾಪ್ಸಿ ಎನ್ನುವ ಶಬ್ದವನ್ನು ಎಲ್ಲೆಡೆ ವಿವಾದಾತ್ಮಕವಾಗಿ ಬಳಸಲಾಗುತ್ತಿದೆ. ಮೋಸ, ಲೋಭ, ದೌರ್ಬಲ್ಯಗಳ ಕಾರಣಕ್ಕೆ, ಅಥವಾ ಮತ್ತ್ಯಾವುದೇ ಕಾರಣಕ್ಕೆ ಮತಾಂತರಗೊಂಡು ನಂತರ ಮಾತೃಧರ್ಮಕ್ಕೆ ಮರಳಬೇಕೆನ್ನುವ ಇಚ್ಛೆ ಅನೇಕ ಮಂದಿಗೆ ಇದೆ, ಇದನ್ನು ತೆರೆದ ತೋಳಿನಿಂದ ಸ್ವಾಗತಿಸಬೇಕಿದೆ. ಅಲ್ಲದೆ ಪ್ರತ್ಯೇಕ ವ್ಯಕ್ತಿಗೂ ತನ್ನ ಆಚರಣೆಗೆ ಸ್ವಾತಂತ್ರ್ಯವಿದ್ದು, ತನ್ನ ಇಚ್ಛಾನುಸಾರ, ಯಾವುದೇ ಬಲವಂತಕ್ಕೊಳಗಾಗದೆ  ಪರಿವರ್ತನೆಗೆ ಮುಂದಾಗುವುದು ಸಂವಿಧಾನದತ್ತವಾಗಿ ಪ್ರತಿ ವ್ಯಕ್ತಿಗೂ ದೊರೆತಿರುವ ಹಕ್ಕು. ಹೀಗಿರುವಾಗ ಘರ್ ವಾಪ್ಸಿ ವಿವಾದ ಅಲ್ಲ ಅದು ನಮ್ಮ ಹಕ್ಕು” ಎಂದು ನವಭಾರತ ಹಿಂದೂ ದಲಿತ ಸಂಘದ ಕಾರ್ಯಕರ್ತರೊಬ್ಬರು ಪತ್ರಕರ್ತರೊಂದಿಗೆ ಮಾತನಾಡಿದರು.

ಈ ನಿಟ್ಟಿನಲ್ಲಿ ಶನಿವಾರ ತುಮಕೂರಿನ ಶಿರಾ ತಾಲೂಕಿನಲ್ಲಿ ಒಟ್ಟು 22 ಕುಟುಂಬಗಳು ಸನಾತನ ಧರ್ಮಕ್ಕೆ ಮರಳಿದೆ. ನವಭಾರತ ಹಿಂದೂ ದಲಿತ ಸಂಘವು ಕ್ರಿಯಾಶೀಲವಾಗಿ ದಲಿತ ಸಮಾಜದ ನಡುವೆ ಅವರ ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ಘರ್‌ವಾಪ್ಸಿಯ ಕುರಿತಾಗಿ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿದೆ‌. ದಲಿತರ ನೋವುಗಳಿಗೆ ಸ್ಪಂದಿಸುತ್ತಾ, ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಈ ಸಂಸ್ಥೆಯು ದಲಿತ ಕಾಲೋನಿಗಳಲ್ಲಿ ಹಣದ ಆಮಿಷವೊಡ್ಡಿ, ಶಿಕ್ಷಣ – ಆರೋಗ್ಯಗಳ ನೆಪವೊಡ್ಡಿ ಮತಾಂತರ ನಡೆಯುತ್ತಿದ್ದುದ್ದನ್ನೂ ಕಂಡು ದಲಿತ ಬಂಧುಗಳನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಿದೆ.

ನೆಲಗುಂದನ ಹಟ್ಟಿಯ ಸುಮಾರು 22 ಕುಟುಂಬಗಳ 68 ಮಂದಿ ಮಾತೃಧರ್ಮಕ್ಕೆ ಮರಳಿದ್ದು ನವಭಾರತ ಹಿಂದೂ ದಲಿತ ಸಂಘವು ಇದರ ನೇತೃತ್ವವನ್ನು ವಹಿಸಿದೆ. ಆ ಕುಟುಂಬಗಳ ಯುವಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಲಾಗಿದೆ. “ಅಂಬೇಡ್ಕರ್ ಅವರ ಆಶಯಗಳನ್ನು ಮುಂದಿಟ್ಟುಕೊಂಡು ರೂಪುಗೊಂಡಿರುವ ಸಂಘಟನೆ ಇದಾಗಿದ್ದು, ದಲಿತರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ” ಎನ್ನುತ್ತಾರೆ ಕಾರ್ಯಕರ್ತರಾದ ಹೇಮೇಶ್

1 thought on “ತುಮಕೂರಿನಲ್ಲಿ ಘರ್‌ವಾಪ್ಸಿಯಾದ 22ಕುಟುಂಬಗಳು

  1. ಭಾರತದಲ್ಲಿ ಹುಟ್ಟಿ ಬೆಳೆದ ಸನಾತನ, ಬೌದ್ಧ ಜೈನ ಸಿಖ್ ಧರ್ಮ ಬಗ್ಗೆ ಅಭಿಮಾನ ಇರಬೇಕು. ಹೆಚ್ಚಿನ ಆದ್ಯತೆ ಭಾರತೀಯ ಸಂಸ್ಕೃತಿಗೆ ಕೊಡಬೇಕು ️

Leave a Reply

Your email address will not be published.

This site uses Akismet to reduce spam. Learn how your comment data is processed.