ಡಾ. ಮೈತ್ರಿ ಭಟ್, ಸಹಾಯಕ ಪ್ರಾಧ್ಯಾಪಕಿ, ಕನ್ನಡ ವಿಭಾಗ, ವಿವೇಕಾನಂದ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು(ಸ್ವಾಯತ್ತ), ಪುತ್ತೂರು

‘ರೂಢಿಯಾದದ್ದರ ಒಳಹೊಕ್ಕು ಸಿಡಿಮದ್ದಿನ ಹಾಗೆ ಸ್ಫೋಟಿಸಿ ಅದನ್ನು ಅಸ್ತವ್ಯಸ್ತಗೊಳಿಸದೆ ಹೊಸ ಕಾಲದ ಹೊಸ ಬದುಕಿಗೆ ಅತ್ಯಗತ್ಯವಾದ ಮೌಲ್ಯಗಳನ್ನು ಬೆಳೆಯುವುದು ಸಾಧ್ಯವಾಗುವುದಿಲ್ಲ. ಆದ ಕಾರಣ ಯಾಂತ್ರಿಕ ವ್ಯವಸ್ಥೆಯಲ್ಲಿ ಸೇರಿದ ನಮ್ಮ ಸಂಸ್ಕೃತಿಯ ಮೌಲ್ಯಗಳ ತಿರುಳನ್ನು ಭೇದಿಸಿ ಮೂಲ ಬೀಜಗಳನ್ನು ಹೊರತೆಗೆದು ಅದಕ್ಕೆ ಇಂದಿಗೆ ತಕ್ಕ ರೂಪಗಳನ್ನು ಸಿದ್ಧಪಡಿಸುವುದೇ ಬುದ್ಧಿಯ ಮೂಲಕ ಕೆಲಸ ಮಾಡುವವನ ಕರ್ತವ್ಯ’ ಎಂದು ಸಾರಿದ ಮತ್ತು ಅದರಂತೆ ‘ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು/ ಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದು/ ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ/ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’ ಎಂದು ವಸ್ತು, ಅಭಿವ್ಯಕ್ತಿ ಎರಡರಲ್ಲೂ ಹೊಸತನವನ್ನು ಸಾಧಿಸಲು ಬಯಸಿ ಅಂತೆಯೇ ನವೋದಯ, ಪ್ರಗತಿಶೀಲ, ನವ್ಯ ಈ ಮೂರೂ ಮಾರ್ಗಗಳಲ್ಲಿ ಕಾವ್ಯ ರಚಿಸಿದ ಗೋಪಾಲಕೃಷ್ಣ ಅಡಿಗರ ಜನ್ಮದಿನದ ಈ ಸುದಿನ ಅವರ ಕಾವ್ಯಲೋಕದ ಘಮ ಮತ್ತೆ ಮತ್ತೆ ಪಸರಿಸುತಲಿದೆ.


ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತೊಂದು ಹಾದಿಯನ್ನು ರೂಪಿಸಿದ ನೇತಾರ; ಕನ್ನಡ ಭಾಷೆಯ ಸೂಕ್ಷ್ಮತೆಗೆ, ಸಾಹಿತ್ಯ ವಿಮರ್ಶೆಗೆ ಹೊಸ ದೃಷ್ಟಿಯನ್ನೂ, ಪ್ರಬುದ್ಧತೆಯನ್ನೂ ನೀಡುವ ಮೂಲಕ ‘ನವ್ಯಕಾವ್ಯ’ ಎನ್ನುವ ಹೊಸದೊಂದು ದಿಶೆಗೆ ಚಾಲನೆ ನೀಡಿದ ಅಡಿಗರು, ಕನ್ನಡ ಕಾವ್ಯಲೋಕದ ಹೊಸ ಬಗೆಯ ಕ್ರಾಂತಿಗೆ ಮುನ್ನುಡಿ ಬರೆದವರೂ ಹೌದು.


ಅಡಿಗರ ಕಾವ್ಯವೇ ಹೀಗೆ: ಮೋಹನ ಮುರಳಿಯ ನಾದಕ್ಕೆ ಪರವಶ ಮಾಡುವ ನಾದಮಯತೆಯನ್ನು ಹೊಂದಿರುವಂಥದ್ದು. ಅಳುವ ಕಡಲಿನಲ್ಲೂ ನಗೆಯ ಹಾಯಿ ದೋಣಿ ತೇಲಿ ಬರುವಂತೆ ಮಂತ್ರಮುಗ್ಧಗೊಳಿಸಬಲ್ಲಂಥದ್ದು, ಮನ ಸೆಳೆಯಬಲ್ಲಂಥದ್ದು.


೨೦ನೇ ಶತಮಾನದ ಉತ್ತರಾರ್ಧದ ಸಮಯದಲ್ಲಿ ಸುಮಾರು ಮೂರು ದಶಕಗಳ ಕಾಲ ನವ್ಯಪಂಥದ ನೇತಾರರಾಗಿ, ಹೊಸತನದ ಹರಿಕಾರರಾಗಿ, ಕಿರಿಯ ತಲೆಮಾರಿನ ಕವಿ-ಸಾಹಿತಿ-ವಿಮರ್ಶಕರಿಗೆ ಸ್ಫೂರ್ತಿಕೇಂದ್ರವಾಗಿ ನಿಂತವರು ಇವರು. ನಿಲ್ಲುವುದು, ಪಾಚಿಗಟ್ಟುವುದು ಅವರಿಗೆ ಎಂದಿಗೂ ಇಷ್ಟವಿರಲಿಲ್ಲ. ‘ಇಷ್ಟು ಸಾಕು’ ಎಂದು ತೃಪ್ತರಾಗುವ ಜಾಯಮಾನ ಅವರದಲ್ಲ. ಇಲ್ಲವಾದಲ್ಲಿ, ಅವರ ‘ಚೆಂಡೆಮದ್ದಳೆ’ಯಂಥ ಕೃತಿಗಳು ರೂಪು ತಳೆಯಲು ಸಾಧ್ಯವೇ ಇರಲಿಲ್ಲ.


‘ಭೂಮಿ’ ಎನ್ನುವುದು ಅಡಿಗರಿಗೆ ಅತ್ಯಂತ ಪ್ರಿಯವಾದ, ಆಪ್ತವಾದ ಪ್ರತಿಮೆ. ಭೂಮಿಯ ಆಳದಲ್ಲಿ ಹುದುಗಿರುವ ಮುತ್ತು ರತ್ನಗಳನ್ನು ತೆಗೆದು, ಶೋಧಿಸಿ, ಶುದ್ಧೀಕರಿಸಿ ಮನಮೋಹಕಗೊಳಿಸುವ ಆಭರಣವಾಗಿಸುವಂತೆ ಸುಪ್ತಮನಸ್ಸಿನ ಆಳದಲ್ಲಿ ಅಡಗಿರುವ ಅದೆಷ್ಟೋ ಭಾವನೆಗಳ ಬಗೆದು ತೆಗೆದು ಸಂವೇದನೆಗಳನ್ನು ಮೂರ್ತಗೊಳಿಸಿದರು.


ಅವರೇ ಈ ಸುಪ್ತವಾದುದನ್ನು ಮೂರ್ತಗೊಳಿಸಬೇಕಾದ ಅವಶ್ಯಕತೆಯ ಬಗ್ಗೆ ಆಗಾಗ ಕವಿತೆಗಳ ಮೂಲಕ ವ್ಯಕ್ತಪಡಿಸುತ್ತಿದ್ದುದನ್ನು ಕಾಣಬಹುದು: ‘ಬಗೆಯೊಳಗನು ತೆರೆದು’ ತೋರುವ ಆಶಯದೊಡನೆ ‘ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು/ ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ/ ಕಂಡೀತು ಗೆರೆಮಿರಿವ ಚಿನ್ನದದಿರು/ ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ/ ಇನ್ನಾದರೂ ಕೊಂಚ ಕಲಿಯಬೇಕು’ ಎಂಬ ಸಾಲುಗಳು ‘ಭೂತ’ ಕವಿತೆಯಲ್ಲಿ ಕಾಣಿಸಿಕೊಂಡರೆ, ‘ನೆಲದೊಳಗೆ ಅದಿರಾಗಿ ಹೊದ್ದು ಮಲಗಿದ್ದ ಹೊನ್ನನ್ನು/ ಹೊರತೆಗೆದು ಸುಟ್ಟು ಸೋಸಿ ಪರಿಶುದ್ಧ ಮಾಡಿದರೆ/ ಅಪರಂಜಿ ಅಪ್ಪಟ; ಬಂಗಾರದಾದರ್ಶ ರೂಪ’ ಕಾಣಿಸುವುದನ್ನು ಸ್ವಾತಂತ್ರ್ಯದ ಬಗೆಗಿನ ಕವಿತೆಯಲ್ಲಿ ಪರಿಶೋಧಿಸುತ್ತಾರೆ.


ಅಂತರಂಗದ ಶೋಧನೆಯ ಜೊತೆಜೊತೆಗೇ ಬದುಕನ್ನು ಹಸನಾಗಿಸಬೇಕಾದ ಅನಿವಾರ್ಯತೆಯನ್ನೂ ಅವರ ಕವಿತೆಗಳು ಧ್ವನಿಸುತ್ತವೆ. ‘ಕೆಂಡದ ಬಳಿ ಇದ್ದು ಕೂಡ ಈ ಇದ್ದಲು ಇತ್ತು ಹಾಗೆ-/ ಆಗ ಈಗಿನಂತೆಯೇ ಹೊತ್ತದೇ ಉರಿಯದೆ..’ ಅಡಿಗರ ‘ನನ್ನ ಅವತಾರ’ ಕವನದ ಸಾಲುಗಳಿವು. ವೈರುಧ್ಯಗಳಿಗೆ ಮುಖಾಮುಖಿ ಆಗುತ್ತಾ ವೈರುಧ್ಯದೊಳಗಿನಿಂದಲೇ ಪ್ರಶ್ನೆಗಳಿಗೆ ಉತ್ತರ ಹುಡುಕುವ ಅದ್ಭುತ ಪ್ರಯತ್ನ ಇಲ್ಲಿದೆ.


ಸಂಸ್ಕೃತಿಯ ಆಳಕ್ಕೆ ಇಳಿಯುತ್ತಾ, ಸಂಸ್ಕೃತಿಯ ಸತ್ವಗಳನ್ನು ಹೀರಿಕೊಳ್ಳುತ್ತಾ, ಮತ್ತೆ ಚಿಮ್ಮಿ ನೆಗೆಯುವುದು ಆಕಾಶಕ್ಕೆ ಬೆಳೆಯುವುದು ಅಂದರೆ ಊರ್ಧ್ವಮುಖಿಯಾಗುವ ಚಿಂತನೆಗಳು ಅಡಿಗರನ್ನು ಕಾಡಿದಷ್ಟು ಇನ್ನಾರನ್ನೂ ಕಾಡಿಲ್ಲವೆನಿಸುತ್ತದೆ. ಭೂಮಿ-ಆಕಾಶದ ಪ್ರತಿಮೆಗಳ ಜೊತೆಗೆ ಬದುಕಿನ ವಿಶ್ಲೇಷಣೆಯೂ ಅವರ ಕವಿತೆಗಳ ವೈಶಿಷ್ಟ.
ಕವಿತೆಯೊಂದು ಮನಸೆಳೆದು ಭಾವಕೋಶವ ಮುಟ್ಟಿ, ಹೃದಯತಂತಿಗಳನ್ನು ಮೀಟಿ, ಅನುಗಾಲ ಮಾಸದೆ ಉಳಿಯಬೇಕಾದರೆ ಕವಿತೆಯ ವಸ್ತು ಮೇಲ್ಪದರುಗಳನ್ನಷ್ಟೇ ಒಳಗೊಂಡಿದ್ದರೆ ಸಾಲದು; ಅದು ಪ್ರಜ್ಞೆಯ ತಳದ ಅಂಶಗಳನ್ನೂ ತನ್ನೊಳಗೆ ಸೇರಿಸಿಕೊಂಡಿರಬೇಕಾಗುತ್ತದೆ. ಅವರ ಕವಿತೆಗಳ ಕೇಂದ್ರ ಎನ್ನುವಂತೆಯೇ ಕಾಣಿಸಿಕೊಳ್ಳುವ ಈ ನೆಲ-ಮುಗಿಲುಗಳ ಸೆಳೆತ ಎನ್ನುವುದು ದೇಹ-ಮನಸ್ಸುಗಳ ನಡುವಿನ ತಿಕ್ಕಾಟದ ಸೂಚಕವೂ ಹೌದು. ಆದರ್ಶ-ವಾಸ್ತವಗಳ ಮಧ್ಯೆ ಸೆಣಸಾಡುವ, ತಿಣುಕಾಡುವ ಜೀವಿತದ ರೂಪಕವೂ ಹೌದು. ಹಾಗಾಗಿಯೇ ಇರಬೇಕು- ಅಡಿಗರಿಗೆ ನೆಲ-ಮುಗಿಲುಗಳೆಂದರೆ ಎಲ್ಲಿಲ್ಲದ ಪ್ರೀತಿ.


ಚಿತ್ತ ಹುತ್ತಗಟ್ಟಬೇಕಾದ ಅವಶ್ಯಕತೆಯನ್ನೂ, ಅನಿವಾರ್ಯತೆಯನ್ನೂ ಪ್ರತಿಯೊಬ್ಬ ವ್ಯಕ್ತಿಯೂ ವಿಕಾಸವಾಗಬೇಕಾದ ಉನ್ನತ ಚೇತನವಾಗಿ ರೂಪುಗೊಳ್ಳಬೇಕಾದ ಪರಿಯನ್ನೂ ಕವಿತೆಗಳ ಮೂಲಕ ವಿಶ್ಲೇಷಿಸುತ್ತಾರೆ. ವ್ಯಕ್ತಿತ್ವ ವಿಕಾಸಕ್ಕೆ ಅಂತರಂಗದ ಶೋಧನೆಯಂತೆಯೇ ಬಹಿರಂಗದ ತಿಳಿವಳಿಕೆಯೂ ಮುಖ್ಯ ಎಂಬ ಎಚ್ಚರದೊಡನೆ ವ್ಯಕ್ತಿತ್ವ ವಿಕಾಸದಲ್ಲಿ ವ್ಯಕ್ತಿಯು ತನ್ನನ್ನು ತಾನು ಕಂಡುಕೊಳ್ಳಬೇಕಾದುದನ್ನು ‘ಚಿಂತಾಮಣಿಯಲ್ಲಿ ಕಂಡ ಮುಖ’ ಸೂಚಿಸುತ್ತದೆ. ಹೀಗೆ ಸದಾ ತನ್ನ ಅಗಾಧವಾದ ಪ್ರತಿಭೆ, ವ್ಯುತ್ಪತ್ತಿ ವಿಶೇಷವಾದ ಪ್ರಯೋಗಗಳಿಂದಾಗಿ ಸಹೃದಯರನ್ನು ಸೆಳೆಯುವ ಅಡಿಗರ ಕಾವ್ಯಗಳ ತುಂಬೆಲ್ಲಾ ವಿಶಿಷ್ಟವಾದ, ಧ್ವನಿಯುಕ್ತವಾದ ಹಾಗೂ ಅವರದ್ದೇ ಎನ್ನಬಹುದಾದ ಹೊಸಹೊಸ ಪ್ರಯೋಗಗಳು ಸಿಗುತ್ತವೆ.


“ಶತಮಾನದ ಕವಿ”, “ಒಂದು ಜನಾಂಗದ ಕಣ್ಣು ತೆರೆಸಿದ ಕವಿ” ಎನ್ನುವಂಥ ಮಾತುಗಳನ್ನು ಅವರಿಗೆ ಅರ್ಪಿಸುವ ಮೂಲಕ ಅವರ ಸಾಹಿತ್ಯ ಕೊಡುಗೆಯನ್ನು ಎತ್ತರಕ್ಕೆ ಏರಿಸಿದ್ದೇವೆ. ಇದು ಅತ್ಯಂತ ಸಹಜವೂ ಕೂಡಾ. ಅವರ ಕವಿತೆಗಳ ಓದು ನಮ್ಮನ್ನು ರಂಜಿಸಿ ತೇಲಾಡಿಸುವಂಥವುಗಳು ಅಲ್ಲ. ಅವರ ಕವಿತೆಗಳ ಘಮವೇ ಬೇರೆ. ಅವು ನಮ್ಮ ಮನಸ್ಸನ್ನು ಕೆಣಕುತ್ತ, ಕಾಡುತ್ತ, ದಿಗ್ಭ್ರಮೆಗೊಳಿಸುತ್ತಾ, ಚಿಂತನೆಗೆ ಹಚ್ಚಿ ಮನವನ್ನು ಅಲುಗಾಡಿಸುತ್ತವೆ. ಒಂದೇ ಓದಿಗೆ ಅವುಗಳನ್ನು ದಕ್ಕಿಸುತ್ತೇನೆಂದು ಹೊರಟಲ್ಲಿ ಸಾಧ್ಯವೂ ಇಲ್ಲ. ಸಾಕಷ್ಟು ತಯಾರಿಯೊಡನೆ ಮತ್ತೆ ಮತ್ತೆ ಓದಿದಾಗ ಯೋಚಿಸಿದಾಗ ಮಾತ್ರ ಅರ್ಥವಾಗಲು ಸಾಧ್ಯ. ಒಂದೊಂದು ಓದಿಗೆ ಅಂದರೆ ಬೇರೆ ಬೇರೆ ಕಾಲದಲ್ಲಿ ಓದಿಗೊಳಪಡಿಸಿದಾಗ ಅವೇ ಸಾಲುಗಳು ಭಿನ್ನ ಅರ್ಥವನ್ನು ಸ್ಫುರಿಸಬಲ್ಲವು. ಅವರ ಬದುಕಿನ ಅನುಭವ, ಸಂವೇದನೆ ಮತ್ತು ಓದು ಅವಲೋಕನಗಳ ಪ್ರಬುದ್ಧತೆಯೊಡನೆ ಒಡಮೂಡಿದ ಕಾವ್ಯದ ಸ್ವಾದ ಸವಿಯಬೇಕಾದರೆ ಓದುಗನಿಗೂ ಪ್ರೌಢತೆ, ಪ್ರಬುದ್ಧತೆ, ಪರಿಪಕ್ವತೆ ಅಗತ್ಯ.


ಅದರಲ್ಲೂ ಅವರ ಲೌಕಿಕದ ಜಾಗದಾಚೆಗಿನ ಅಲೌಕಿಕದ ಸೆಳೆತವನ್ನು, ಹಂಬಲವನ್ನು ‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನನ್ನನು’ ಕವಿತೆ ಹಿಡಿದಿಡುವ ಪರಿ ಅನೂಹ್ಯವಾದುದು. ಇಹದ ಸುಖಗಳನ್ನು ಪ್ರಸ್ತಾಪಿಸುತ್ತಲೇ ತನ್ಮಯತೆ, ಇಹದ ಬದುಕಿನಿಂದ ಮುಕ್ತಿ, ಬಿಡುಗಡೆಯ ವಿಶಿಷ್ಟವಾದ ನೆಲೆಯಲ್ಲಿ, ಅಧ್ಯಾತ್ಮಿಕ ಪರಿಧಿಯಲ್ಲಿ ಗಿರಕಿ ಹೊಡೆಯುತ್ತದೆ. ಮೋಹನ ಮುರಳಿ ಮತ್ತು ಬೃಂದಾವನಗಳ ಭಾವಸಾಹಚರ್ಯವು ಕೃಷ್ಣನ ಪ್ರೀತಿ ಮತ್ತು ಭಕ್ತಿಯನ್ನು ಸಾರುವ ಮೂಲಕವೇ ಅಲೌಕಿಕ ಲೋಕದತ್ತ ಸೆಳೆಯುತ್ತದೆ. ಪ್ರತಿ ಬಾರಿ ಓದಿದಾಗಲೂ ಹೊಸ ಅನುಭವ, ಹೊಸ ಅರ್ಥ, ಹೊಸ ಭಾವವನ್ನು ಮೂಡಿಸುವ ಈ ಕವಿತೆಯೊಂದು ಸಾಕು ಅವರ ಕವಿತೆಗಳ ಗಂಧ ಘಮ ಹಚ್ಚಲು… ಕವಿ ಪ್ರೀತಿ ಹೆಚ್ಚಿಸಲು…

Leave a Reply

Your email address will not be published.

This site uses Akismet to reduce spam. Learn how your comment data is processed.