ಮಂಗಳೂರು : ಮಂಗಳೂರು ಲಿಟ್‌ ಫೆಸ್ಟ್‌ 2023 ಐದನೇ ಆವೃತ್ತಿಯು ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ಶನಿವಾರದಂದು ವಿದ್ಯುಕ್ತವಾಗಿ ಆರಂಭಗೊಂಡಿತು. ಮಿಥಿಕ್‌ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ವಿ.ನಾಗರಾಜ್‌ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಟ್ಟೆ ಉಪಕುಲಪತಿ ವಿನಯ್‌ ಹೆಗ್ಡೆ ಅವರು ಮಾತನಾಡಿ ಮಂಗಳೂರು ನಗರವು ವಿದ್ಯಾ ಕ್ಷೇತ್ರ, ಆರೋಗ್ಯ ಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಭಾರತ್‌ ಫೌಂಡೇಶನ್‌ ಮೂಲಕ ಆಯೋಜಿಸಲಾದ ಈ ಲಿಟ್‌ ಫೆಸ್ಟ್‌ ಕಾರ್ಯಕ್ರಮವು ಮಾರ್ಗದರ್ಶಿಯಾಗಿದೆ. ಮಂಗಳೂರು ಪ್ರದೇಶವು ಧಾರ್ಮಿಕವಾಗಿ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಬಹಳ ಎತ್ತರಕ್ಕೆ ಏರಿದ ಸ್ಥಳವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿಯೇ ಮಂಗಳೂರು ಪ್ರದೇಶಕ್ಕೆ ವಿಶೇಷ ಸ್ಥಾನವಿತ್ತು. ಭೌಗೋಳಿಕವಾಗಿಯೂ ಶ್ರೀಮಂತಿಕೆ ಹೋಂದಿರುವ ಈ ಪ್ರದೇಶದಲ್ಲಿ ಆಯೋಜಿಸಲಾದ ಲಿಟ್‌ ಫೆಸ್ಟ್‌ ವಿಶ್ವಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ವಾಣಿಜ್ಯ, ಉದ್ಯೋಗ ಕ್ಷೇತ್ರಗಳಲ್ಲೂ ಮಂಗಳೂರು ದೇಶದಲ್ಲೇ ಶ್ರೇಷ್ಠ ಸ್ಥಳವಾಗಿ ಮಾರ್ಪಡುತ್ತಿದೆ ಎಂದರು. ಎಲ್ಲರೂ ಅರಿಯಬೇಕಾದ, ತಿಳಿಯಬೇಕಾದ ಸ್ಥಳ ಇದಾಗಿದೆ. ಮಂಗಳೂರು ನಗರದ ಅಭಿವೃದ್ಧಿಯಲ್ಲಿ ಹಿರಿಯ ಕಿರಿಯ ಉದ್ಯಮಿಗಳು ಸಹಿತ ಸಾಮಾನ್ಯ ನಾಗರಿಕರು, ಜನಸಮುದಾಯಗಳ ಕೊಡುಗೆಗಳು ಸಾಕಷ್ಟಿದೆ ಎಂದರು.

ಲಿಟ್ ಫೆಸ್ಟ್ 2023 ಉದ್ಘಾಟನಾ ಕಾರ್ಯಕ್ರಮದಲ್ಲಿ ಜಾನಪದ, ಇತಿಹಾಸ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ತುಕಾರಾಂ ಪೂಜಾರಿ ಅವರಿಗೆ ಲಿಟ್‌ ಫೆಸ್ಟ್‌ 2023 ರ ಜೀವಮಾನದ ಶ್ರೇಷ್ಠ ಸಾಧನ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಲಾಯಿತು. ಸ್ವರಾಜ್ಯ ಪತ್ರಿಕೆಯ ಆರ್.ಜಗನ್ನಾಥ್‌ ತುಕರಾಂ ಪೂಜಾರಿ ಅವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಭಾರತ್‌ ಫೌಂಡೇಶನ್‌ ಟ್ರಸ್ಟಿಗಳಾದ ಕ್ಯಾ.ಬೃಜೇಶ್‌ ಚೌಟ, ಸುನಿಲ್‌ ಕುಲಕರ್ಣಿ ಉಪಸ್ಥಿತರಿದ್ದರು.

ಮಿಥಿಕ್‌ ಸೊಸೈಟಿಯ ವಿ. ನಾಗರಾಜ್‌ ಅವರು ಮಾತನಾಡಿ ಇಂದು ಶಿವರಾತ್ರಿಯ ವಿಶೇಷ ಪರ್ವ ದಿನ. ಶಿವನಿಗೆ ದಕ್ಷಿಣಾ ಮೂರ್ತಿಯೆಂಬ ಮಗದೊಂದು ಹೆಸರಿದೆ. ಈ ದಕ್ಷಿಣಾ ಮೂರ್ತಿ ಧರ್ಮ, ಸಂಸ್ಕೃತಿ ಮತ್ತು ವಿದ್ಯೆಗೂ ಒಡೆಯನಾಗಿದ್ದಾನೆ. ಇಂತಹ ಶುಭ ದಿನದಂದು ಈ ಕಾರ್ಯಕ್ರಮ ನಡೆಯುತ್ತಿರುವುದು ಸವಿಶೇಷವಾಗಿದೆ. ಲಿಟ್‌ ಫೆಸ್ಟ್‌ ಮೂಲಕ ವರ್ತಮಾನದ ದೇಶ, ಭಾಷೆ, ಕಲೆ, ಸಂಸ್ಕೃತಿಯ ಅನಾವರಣವಾಗುತ್ತದೆ. ಲಿಟರೇಚರ್‌ ರಿಫ್ಲೆಕ್ಟ್ಸ್‌ ಏಜ್‌ ಅಂಡ್‌ ಕಲ್ಚರ್‌ ಆಫ್‌ ದಿ ನೇಶನ್‌- ಸಾಹಿತ್ಯವು ದೇಶದ ಸಂಸ್ಕೃತಿ ಮತ್ತು ಕಾಲವನ್ನು ಪ್ರತಿಬಿಂಬಿಸುತ್ತದೆ ಎಂದರು. ಕಳೆದ ಹಲವು ದಶಕಗಳು ನಮ್ಮದಲ್ಲದ ವಿಚಾರಗಳಿಂದ ತುಂಬಿಹೋಗಿತ್ತು, ಆದರೆ ಇಂದು ಕಾಲ ಬದಲಾಗಿದೆ. ಕಳೆದ ಐದು ಸಾವಿರ ವರ್ಷಗಳಿಂದ ನಮ್ಮ ಭಾರತೀಯ ಸಂಸ್ಕೃತಿ ನಿರಂತರವಾಗಿ ಬೆಳೆದು ಬಂದಿದೆ ಎಂಬುದೇ ಹೆಮ್ಮೆಯ ವಿಚಾರವಾಗಿದೆ. ವಿಶ್ವದ ಇತರ ದೇಶಗಳಲ್ಲಿ ಇಂತಹ ಹಳೆಯ ನಾಗರಿಕತೆ ಮತ್ತು ಸಂಸ್ಕೃತಿಗಳು ಇಂದಿಲ್ಲವಾಗಿದೆ. ದಾಳಿಯ ಮೂಲಕ, ಪರ ಧರ್ಮಗಳ ಅವಲಂಬಿಕೆಯ ಮೂಲಕ ವಿಶ್ವದ ಇತರೆ ನಾಗರಿಕತೆಗಳ ಪತನವಾಗಿದೆ. ಆದರೆ ಭಾರತದಲ್ಲೀ ಮಾತ್ರವೇ ಐದು ಸಾವಿರ ವರ್ಷಗಳಿಂದ ಸನಾತನತೆಯ ಬೆಳಕು ಹರಿದು ಬಂದಿದೆ ಎಂದರು. ಐಡಿಯಾ ಆಫ್‌ ಭಾರತ್‌ ಮೂಲಕ ದೇಶದ ಇತಿಹಾಸ, ಸಾಹಿತ್ಯ, ಕಲೆ, ಸಂಸ್ಕೃತಿಯ ಅನಾವರಣ ನಡೆಯುತ್ತಿದೆ ಎಂಬುದು ಹೆಮ್ಮೆಯ ವಿಚಾರ. ಜೀವಮಾನ ಸನ್ಮಾನ ಸಾಧಕ ಪ್ರಶಸ್ತಿ ಪಡೆದ ತುಕಾರಾಂ ಪೂಜಾರಿ ಅವರ ಸಾಧನೆಯ ಪಥವನ್ನು ನೆನಪಿಸಿಕೊಂಡು ಪ್ರಶಂಶಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸ್ವರಾಜ್ಯ ಪತ್ರಿಕೆಯ ಸಂಪಾದಕೀಯ ಮಂಡಳಿ ನಿರ್ದೇಶಕ ಆರ್.ಜಗನ್ನಾಥನ್‌ ಮಾತನಾಡಿ ʼಐಡಿಯಾ ಆಫ್‌ ಭಾರತ್‌ ಇಸ್‌ ದಿ ಐಡಿಯಾ ಆಫ್‌ ದಿ ಧರ್ಮʼ ವಾಗಿದೆ, ಭಾರತದ ಚಿಂತನೆ ಧರ್ಮದ ಚಿಂತನೆಯೇ ಆಗಿದೆ. ಚಾಣಕ್ಯ ಸೂತ್ರದಲ್ಲಿ ತಿಳಿಸಿದಂತಹ ʼಸುಖಸ್ಯ ಮೂಲಂ ಧರ್ಮ:, ಧರ್ಮಸ್ಯ ಮೂಲಂ ಅರ್ಥ:, ಆರ್ಥಸ್ಯ ಮೂಲಂ ರಾಜ್ಯ:ʼ ಎಂಬ ಸಂಸ್ಕೃತ ಉಕ್ತಿಯನ್ನು ಉಲ್ಲೇಖಿಸಿದ ಅವರು ದೇಶ ಸುಭೀಕ್ಷೆಯಲ್ಲಿರಬೇಕೆಂಬುದರ ಮೂಲ ಧರ್ಮವೇ ಆಗಿದೆ. ನಂತರದಲ್ಲಿ ಉತ್ತಮ ಆರ್ಥಿಕ ನೀತಿಯು ದೇಶವನ್ನು ಉನ್ನತ ಸ್ಥಾನಕ್ಕೆ ಏರಿಸುತ್ತದೆ ಎಂದರು. ವರ್ತಮಾನದ ಭಾರತವು ಇದೇ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದರು. ಆತ್ಮನಿರ್ಭರತೆಯ ಮೂಲಕ ದೇಶವು ಸುಭೀಕ್ಷವಾಗುತ್ತಲಿದೆ. ದೇಶದಲ್ಲಿ ಬಡತನ ಇಲ್ಲವಾಗುತ್ತಿದೆ. ಆರ್ಥಿಕತೆ ಸದೃಢತೆಯತ್ತ ಮುನ್ನುಗ್ಗಿದೆ. ಮುಂದಿನ 25 ವರ್ಷಗಳ ಅಮೃತಕಾಲದ ಸಮಯವು ದೇಶವನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಲಿದೆ ಎಂದರು.
ಜೀವಮಾನ ಸಾಧಕ ಪ್ರಶಸ್ತಿ ಸ್ವೀಕರಿಸಿದ ತುಕಾರಾಂ ಪೂಜಾರಿ ಮಾತನಾಡಿ ನಮ್ಮ ಪೂರ್ವಜರಿಗೆ ಅಕ್ಷರ ಜ್ಞಾನ ಇಲ್ಲದಿದ್ದರೂ ಪ್ರಕೃತಿ ಮತ್ತು ಸಂಸ್ಕೃತಿಯ ಜ್ಞಾನ ಉತ್ತಮವಾಗಿತ್ತು. ಅವರಿಂದಲೇ ನಮ್ಮ ಸಂಸ್ಕೃತಿಯು ಈ ತನಕ ಹರಿದು ಬಂದಿದೆ. ಅದಕ್ಕೆ ನಾವು ಋಣಿಯಾಗಿರಬೇಕಿದೆ ಎಂದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಲ್ಲಕ್ಕಿಯ ಮೂಲಕ ಪುಸ್ತಕಗಳ ಮೆರವಣಿಗೆಯು ಲಿಟ್‌ ಫೆಸ್ಟ್‌ ನಡೆಯುವ ಟಿ.ಎಂ.ಎ ಪೈ ಸಭಾಂಗಣದವರೆಗೂ ನಡೆಯಿತು. ಹಿರಿಯ ಜಾನಪದ ಕಲಾವಿದೆ ಭವಾನಿ ಅಮ್ಮ ಪೆರ್ಗಡೆ ಅವರು ಪಾಡ್ದನ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತ್‌ ಫೌಂಡೇಶನ್‌ ಟ್ರಸ್ಟಿ ಸುನಿಲ್‌ ಕುಲಕರ್ಣಿ ಸ್ವಾಗತ ಭಾಷಣ ಮಾಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.