ಸಿಖ್‌ ಮತದ ಸಂಸ್ಥಾಪಕ ಗುರುನಾನಕ್‌ ಅವರು ಸಾಮಾಜಿಕ ಮತ್ತು ಆಧ್ಯಾತ್ಮಿಕತೆ ಹೆಚ್ಚು ಹೆಸರುವಾಸಿಯಾಗಿದ್ದರು. ಇವರು ಸಮಾನತೆ, ಭ್ರಾತೃತ್ವ, ನಮ್ರತೆ, ಸೇವೆ ಮತ್ತು ಸದ್ಗುಣಭರಿತ ಜೀವನದ ಸಂದೇಶವನ್ನು ಜಗದಗಲಕ್ಕೆ ಸಾರಿದವರು. ಗುರು ನಾನಕ್ ದೇವ್ ಜಿ ಸಿಖ್ ಮತದ ಮೊದಲ ಗುರು ಈ ಕಾರಣಕ್ಕಾಗಿ ಇವರನ್ನು ಸ್ಮರಿಸುವ ಸಲುವಾಗಿ ಏಪ್ರಿಲ್‌ 15 ರಂದು  ಜಯಂತಿ ಆಚರಣೆ ಮಾಡಲಾಗುತ್ತದೆ. ಇದನ್ನು ಪ್ರಕಾಶ ಪರ್ವ ಅಥವಾ ಗುರು ಪುರಬ್ ಎಂದೂ ಕರೆಯುತ್ತಾರೆ.

ಪರಿಚಯ

ಗುರುನಾನಕ್‌ ಅವರು ಏಪ್ರಿಲ್‌ 15, 1469 ರಂದು  ಪಂಜಾಬ್‌ನ ನನಕಾನಾ ಎಂಬಲ್ಲಿ  ಜನಿಸಿದರು. ಇವರ ತಂದೆ ಮೆಹ್ತಾ ಕಲು ಮತ್ತು ತಾಯಿ ತ್ರಿಪ್ತಾ.  ಗುರುನಾನಕ್‌ ಅವರು  ಬಾಲ್ಯದಿಂದಲೇ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದರು. ತಮ್ಮ 16ನೇ ವಯಸ್ಸಿನಲ್ಲಿ ಅವರು ಸಂಸ್ಕೃತ, ಪರ್ಷಿಯನ್‌, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಪರಿಣಿತಿ ಹೊಂದಿದರು.

ಗುರುನಾನಕ್ 16 ವಯಸ್ಸಿಗೆ ತಲುಪುತ್ತಿದ್ದಂತೆ ಇವರ ಸಹೋದರಿ ಸುಲ್ತಾನ್ ಪುರದಲ್ಲಿ ಕೆಲಸಕ್ಕಾಗಿ ಕಳುಹಿಸುತ್ತಾರೆ. ದೆಹಲಿ ಸುಲ್ತಾನರ ಲೆಕ್ಕಾಚಾರವನ್ನು ಲಾಹೋರ್ ನಲ್ಲಿ ಗಮನಿಸುವ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾರೆ. ಕಾಲಾಂತರದಲ್ಲಿ ಗುರುನಾನಕರ ಮೇಲೆ ವ್ಯವಹಾರದಲ್ಲಿ ಕಳ್ಳತನದ ಆರೋಪವನ್ನು ಹಾಕಲಾಗುತ್ತದೆ. ಇದರಿಂದ ತೀವ್ರವಾಗಿ ನೊಂದ ನಾನಕರು ಲೌಕಿಕ ಜೀವನವನ್ನು  ತೊರೆಯಲು ನಿರ್ಧರಿಸಿ  ಇದಕ್ಕಿದ್ದಂತೆ ಒಂದು ದಿನ ಸಂಜೆ ಊರ ಕೆರೆಯ ಬಳಿ ಕಾಣ್ಮರೆಯಾಗುತ್ತಾರೆ. ಗುರುನಾನಕರ ಅಲಭ್ಯತೆಯಿಂದ ಮನೆಯವರಿಗೆ ಗಾಬರಿಯಾಗುತ್ತದೆ. ಆದರೆ ಅಚ್ಚರಿ ಎಂಬಂತೆ ಗುರುನಾನಕರು ಮೂರು ದಿನಗಳ ನಂತರ ಅದೇ ಸ್ಥಳದಲ್ಲಿ ಪ್ರತ್ಯಕ್ಷರಾಗುತ್ತಾರೆ. ನೋಡಲು ಅತ್ಯಂತ ತೇಜೋಮಯರಾಗಿ, ತನಗಾದ ದಿವ್ಯದರ್ಶನದ ಸಾರವನ್ನು ನಾನಕರು ಸಮಾಜಕ್ಕೆ ತಿಳಿಸಲು ಮುಂದಾಗುತ್ತಾರೆ. ಹಿಂದುಸ್ತಾನಿ ಭಾಷೆಯಲ್ಲಿ ಕಲಿಯುವುದನ್ನು ಸೀಕ್ ಎನ್ನುತ್ತಾರೆ. ಇವರ ಬೋಧನೆಗಳನ್ನು ಅರಿಯಲು ಬಂದ ವಿದ್ಯಾರ್ಥಿಗಳು ಮುಂದೆ ಸಿಖ್ಖರಾಗುತ್ತಾರೆ.

ನಂತರದ ಕಾಲಘಟ್ಟದಲ್ಲಿ ಸಮಾಜದಲ್ಲಿರುವ ಕಳಂಕಗಳನ್ನು ವಿರೋಧಿಸಿ ಸಮಾನತೆಯ ಸಂದೇಶವನ್ನು ಸಾರುತ್ತಾರೆ. ದೇವರು ಒಬ್ಬನೇ ಅವನು ನಿರ್ಗುಣ, ನಿರಾಕಾರ. ಆತ ಪ್ರತಿ ವಸ್ತುವಿನಲ್ಲೂ ಇದ್ದಾನೆ ಎಂಬುದನ್ನು ಸಮಾಜಕ್ಕೆ ಬೋಧಿಸುತ್ತಾರೆ. ಇವರ ಬೋಧನೆಗಳಿಗೆ ಆಕರ್ಷಿತರಾಗಿ ಇವರಿಗೆ ಮೊದಲ ಶಿಷ್ಯನಾಗಿ ದೊರೆತದ್ದು ಬಡಗಿ ಲಾಲ. ಮುಂದೆ ಸಂಪೂರ್ಣ ರಾಷ್ಟ್ರದಲ್ಲಿ ಸಂಚರಿಸಿ  ತಮ್ಮ  ಚಿಂತನೆಯನ್ನು  ಹರಡುತ್ತಾರೆ. ಭಾರತ ಮಾತ್ರವಲ್ಲದೆ ದೂರದ ಅರೇಬಿಯಾ, ಸಿರಿಯ, ಟಿಬೆಟ್ ದಕ್ಷಿಣ ಏಷ್ಯಾದ ಪ್ರವಾಸವನ್ನು ಕೈಗೊಳ್ಳುತ್ತಾರೆ. ಇವರ ಬೋಧನೆಗಳಿಗೆ ಆಕರ್ಷಿತರಾಗಿ ವಿಶ್ವದಾದ್ಯಂತ ಇವರ ಶಿಷ್ಯರ ಸಂಖ್ಯೆ ಏರುತ್ತಾ ಹೋಗುತ್ತದೆ. ನಂತರದ ಸಮಯದಲ್ಲಿ ಕರ್ತಾರ್ ಪುರದಲ್ಲಿ ರೈತನಾಗಿ ನೆಲೆಯೂರಿ ಜಾತಿ, ಧರ್ಮ, ಲಿಂಗವನ್ನು ಮೀರಿದ ಸಾಮೂಹಿಕ ಸಹಭೋಜನವನ್ನು ಪ್ರಾರಂಭಿಸುತ್ತಾರೆ. ಇವರ ಜೀವನದ ಪ್ರತಿ ಹಂತದಲ್ಲೂ ಸಾಮರಸ್ಯವನ್ನು ಸಾರಲು ಶ್ರಮವಹಿಸುತ್ತಾರೆ.

ಗುರುನಾನಕರು ಒಬ್ಬ ಶ್ರೇಷ್ಠ ಕವಿಯು ಹೌದು. ಇವರು ತಮ್ಮ ಬೋಧನೆಗಳನ್ನು 974 ಭಜನೆಗಳ ರೂಪದಲ್ಲಿ ಬರೆದಿಟ್ಟಿದ್ದರು. ಇದುವೇ ಮುಂದೆ ಸಿಕ್ಕರ ಪವಿತ್ರ ಗ್ರಂಥ ಗುರುಗ್ರಂಥ ಸಾಹೇಬ್ ಆಗುತ್ತದೆ. ಸಮಾಜದಲ್ಲಿ ಸಮಾನತೆಯ ಜ್ಯೋತಿಯನ್ನು ಬೆಳಗಿಸಲು ಶ್ರಮಿಸಿದ, ಕ್ಷಾತ್ರ ಪರಂಪರೆಗೆ ಹೆಸರುವಾಸಿಯಾಗಿರುವ ಸಿಖ್ ಪಂತವನ್ನು ಸ್ಥಾಪಿಸಿದ ಗುರುನಾನಕ್ 22 ಸೆಪ್ಟೆಂಬರ್ 1539 ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ದೈವಾಧೀನರಾಗುತ್ತಾರೆ.

ಗುರುನಾನಕ್  ಅವರ  ಬೋಧನೆಗಳು

  • ಪ್ರಾಮಾಣಿಕತೆಯಿಂದ ಕೆಲಸ ಮಾಡಿ.
  • ಎಲ್ಲಿ ಸತ್ಯವಿದೆಯೋ ಅಲ್ಲಿ ಭಯಕ್ಕೆ ಸ್ಥಾನವಿಲ್ಲ. ಸುಳ್ಳಿನ ಹಿಂದೆ ಅಡಗಿಕೊಂಡರೆ ನಿಮಗೆ ತಾತ್ಕಾಲಿಕ ಜಯ ಸಿಗಬಹುದು, ಸತ್ಯ ಯಾವಾಗಲೂ ಮೇಲುಗೈ ಸಾಧಿಸುತ್ತದೆ.
  • ವಂದ್ ಚಾಕೋ ಅಥವಾ ದೇವರು ನಿಮಗೆ ನೀಡಿದ ಎಲ್ಲವನ್ನೂ ಎಲ್ಲರಿಗೂ ಹಂಚಿಕೊಳ್ಳುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವುದು.
  • ನಿಸ್ವಾರ್ಥ ಸೇವೆ.
  • ಸಮಾನತೆ
  • ಮಹಿಳೆಯರನ್ನು ಗೌರವಿಸಿ
  • ದಯೆ ಮತ್ತು ಕರುಣೆ
  • ಪ್ರತಿ ಜೀವಕ್ಕೂ ಉದ್ದೇಶವಿದೆ
  • ಧರ್ಮ, ಜನಾಂಗ, ಜಾತಿ, ಪಂಥ, ಲಿಂಗ ಮತ್ತು ಎಲ್ಲರ ಕಲ್ಯಾಣದ ಹೊರತಾಗಿಯೂ ಜಗತ್ತಿನಲ್ಲಿ ಎಲ್ಲರೂ ಸಮೃದ್ಧಿ ಮತ್ತು ಶಾಂತಿಯಿಂದ ಇರಬೇಕು. ಅಹಂಕಾರ, ಕೋಪ, ದುರಾಸೆ, ಕಾಮ ಮತ್ತು ಬಾಂಧವ್ಯ ದೇವರ ಹೆಸರನ್ನು ಧ್ಯಾನಿಸುವ ಮೂಲಕ ಇವುಗಳನ್ನು ಜಯಿಸಬಹುದು.

Leave a Reply

Your email address will not be published.

This site uses Akismet to reduce spam. Learn how your comment data is processed.