ಸುಲಕ್ಷಣಾ ಶರ್ಮಾ, ವಿದ್ಯಾರ್ಥಿನಿ, ಪುತ್ತೂರು
ಆಂಧ್ರಪ್ರದೇಶದ ಹಿರಿಯ ಪತ್ರಕರ್ತರು ಲೇಖಕರು ಆಗಿರುವ ಎಂವಿಆರ್ ಶಾಸ್ತ್ರಿ ಅವರು ತಮ್ಮ ಪುಸ್ತಕ ‘ಏದಿ ಚರಿತ್ರ ‘ದಲ್ಲಿ ಹೀಗೆ ಬರೆಯುತ್ತಾರೆ,
“ಹಳೆಯ ತಪ್ಪುಗಳಿಂದ ಪಾಠ ಕಲಿಯದವರು ಮತ್ತೆ ಅದೇ ತಪ್ಪುಗಳನ್ನು ಎಸಗುತ್ತಾರೆ. ಪರಾಭವಗಳಿಗೆ ಕಾರಣ ಕಂಡುಹಿಡಿದು ಸೂಕ್ತ ಎಚ್ಚರಿಕೆ ವಹಿಸದ ರಾಷ್ಟ್ರಕ್ಕೆ ಅದೇ ಚರಿತ್ರೆ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತದೆ.”
ಹೌದು. ಭಾರತದ ಚರಿತ್ರೆಯ ಕುರಿತು ವಿಮರ್ಶೆ ಮಾಡುವಾಗ ಪ್ರತಿಯೊಬ್ಬರೂ ಈ ನಿಗಮನಕ್ಕೆ ಬರುವುದು ಸಹಜ. ಶತ್ರುಗಳ ಜೊತೆ ನಿರಂತರವಾಗಿ ಹೋರಾಟ ಮಾಡಿ ಜಯವನ್ನು ಸಾಧಿಸಿದ ನಮ್ಮ ರಾಜರು ಕೈಗೆ ಸಿಕ್ಕ ಶತ್ರುವನ್ನು ಮಾನವೀಯತೆಯ ನೆಲೆಯಲ್ಲಿ ಕ್ಷಮಿಸಿ ಬಿಟ್ಟರು. ಪರಿಣಾಮ ಏನಾಯಿತು ಎಂದರೆ ಮೋಸ, ಕುತಂತ್ರ, ಮಿತ್ರದ್ರೋಹಗಳು ರಕ್ತಗತವಾಗಿ ಪಡೆದುಕೊಂಡು ಬಂದಿದ್ದ ಪರಕೀಯ ಶಕ್ತಿಗಳು ನಮ್ಮ ರಾಜರಿಂದ ಹಿಂದುಸ್ಥಾನದ ಆಡಳಿತವನ್ನು ಕಸಿದುಕೊಂಡರು.
ಆದರೆ ಚರಿತ್ರೆಯಿಂದ ಪಾಠ ಕಲಿತು ಹಿರಿಯರು ಮಾಡಿದ ತಪ್ಪನ್ನು ಪುನರಾವರ್ತಿಸದೆ ತಂತ್ರಕ್ಕೆ ತಂತ್ರ, ಧೈರ್ಯಕ್ಕೆ ಧೈರ್ಯ , ಕ್ರೌರ್ಯಕ್ಕೆ ಕ್ರೌರ್ಯ ಎಂಬ ನೀತಿಯನ್ನು ಅನುಸರಿಸಿ ; ಶತ್ರುಗಳಿಗೆ ಸವಾಲಾಗಿ ಸೆಟೆದು ನಿಂತು, ಧರ್ಮ ಮತ್ತು ಸ್ವರಾಜ್ಯವನ್ನು ವಿಧರ್ಮೀಯರಿಂದ ರಕ್ಷಿಸಿ, ಮಧ್ಯಕಾಲೀನ ಚರಿತ್ರೆಯಲ್ಲಿ ಪೂಜ್ಯ ಸ್ಥಾನವನ್ನು ಪಡೆದುಕೊಂಡ ಕ್ಷಾತ್ರ ಚೇತನ ಎಂದರೆ ಅದು ಛತ್ರಪತಿ ಶಿವಾಜಿ ಮಹಾರಾಜರು!
ತಂದೆ ಶಹಾಜಿ ಪರಕೀಯನ ಸೇವೆಯಲ್ಲಿ ತೊಡಗಿರುವಾಗ, ಧರ್ಮ ಜಾಗೃತಿಯ ಪಾಠ ಮಾಡಿದ ತಾಯಿ ಜೀಜಾಬಾಯಿ ತನ್ನ ಮಗನನ್ನು ಒಬ್ಬ ಸ್ವಾಭಿಮಾನಿ ಯೋಧನಾಗಿ ಬೆಳೆಸುವಲ್ಲಿ ಸಾಫಲ್ಯವನ್ನು ಪಡೆಯುತ್ತಾಳೆ. ಜೀಜಾ ಮತ್ತು ದಾದಾಜಿ ಕೊಂಡದೇವ ಅವರ ತರಬೇತಿಯಲ್ಲಿ ಪಳಗಿದ ಶಿವಾಜಿ ಮುಂದೆ ಬಿಜಾಪುರದ ಅದಿಲ್ ಶಾಹಿಗಳನ್ನಷ್ಟೇ ಅಲ್ಲ, ಕುತುಬ್ ಶಾಹಿಗಳು, ಫ್ರೆಂಚರು , ಇಂಗ್ಲೀಷರು, ಪೋರ್ಚುಗೀಸರು ಮತ್ತು ಮೊಘಲರು ಮುಂತಾದ ವಿದೇಶಿ ಶಕ್ತಿಗಳನ್ನು ಮಟ್ಟ ಹಾಕಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದ್ದು ನಮ್ಮ ಚರಿತ್ರೆಯಲ್ಲಿ
ಮರೆಯಲಾಗದ ಪರ್ವ!
ಬಿಜಾಪುರದ ಸರದಾರನ ಮಗ ಮಾವೋಳಿ ಹುಡುಗರ ಜೊತೆಗೆ ಕಾಡುಮೇಡುಗಳಲ್ಲಿ ಅಲೆಯುವಾಗ ಕೆಲವರು ಅವನೊಬ್ಬ ಜವಾಬ್ದಾರಿ ಇಲ್ಲದ ಹುಡುಗ ಎಂದು ಬೈದರು, ಪ್ರಬುದ್ಧತೆ ಇಲ್ಲದ ಪೋರ ಇನ್ನೇನು ಮಾಡುತ್ತಾನೆ ಎಂದು ಇನ್ನೂ ಕೆಲವರು ಆಡಿಕೊಂಡರು. ಎಲ್ಲರ ಪ್ರಕಾರ ಶಿವಾಜಿ ‘ ದಾರಿ ತಪ್ಪಿದ ಮಗ’ನಾಗಿದ್ದ. ಶಿವಾಜಿಯ ಪ್ರಬುದ್ಧತೆ, ಘನತೆ, ಗೌರವಗಳ ಬಗ್ಗೆ ಆಡಿಕೊಂಡವರೆಲ್ಲ ವಿದೇಶಿಗರ ಬೂಟು ನೆಕ್ಕಿ ಕಾಲ ಕಳೆಯುತ್ತಿದ್ದ ಸೋ ಕಾಲ್ಡ್ ಸ್ವಾಭಿಮಾನಿಗಳಾಗಿದ್ದರು. ಪಾರತಂತ್ರ್ಯದ ಎಂಜಲು ಸೋಕಿದ ಅವರ ಕೈಗಳು ಸ್ವರಾಜ್ಯಕ್ಕಾಗಿ ಒಂದೇ ಒಂದು ಬಾರಿಯಾದರೂ ಖಡ್ಗ ಹಿಡಿದಿರಲಿಲ್ಲ, ಪರಕೀಯನು ಅವರನ್ನು ‘ಲಜ್ಜೆಗೆಟ್ಟ ಕಾಫಿರ್ ಹೇಡಿಗಳು’ ಎಂದು ಹಂಗಿಸಿ ಮಾತನಾಡಿದಾಗ ಎಂದೂ ತುಟಿ ಬಿಚ್ಚಿರಲಿಲ್ಲ, ಕಣ್ಣೆದುರಿಗೆ ಮತಾಂಧರಿಂದ ದುಷ್ಕೃತ್ಯಗಳು ನಡೆದಾಗ ಮೂಕ ಪ್ರೇಕ್ಷಕರಾಗಿ ಉಳಿದಿದ್ದ ಅವರಿಗೆ ಸ್ವರಾಜ್ಯದ ಕನಸು ಬಿಡಿ, “ಹರ ಹರ ಮಹಾದೇವ” ಎಂದು ಘೋಷಣೆ ಕೂಗುವ ಉತ್ಸಾಹವೇ ಇರಲಿಲ್ಲ.
ಜನರ ಮಾತುಗಳನ್ನು ಕೇಳಿ ಬಾಲಕ ಶಿವಾಜಿ ತಲೆಕೆಡಿಸಿಕೊಳ್ಳಲಿಲ್ಲ, ಯಾಕೆಂದರೆ ಮಾವೋಳಿ ಸಿಂಹದ ಮರಿಗಳಿಗೆ ಧರ್ಮ ಜಾಗೃತಿಯ ಪಾಠ ಮಾಡಿ, ಅಖಂಡ ಹಿಂದವೀ ಸಾಮ್ರಾಜ್ಯ ಸ್ಥಾಪನೆ ಮಾಡುವ ದೊಡ್ಡ ಕನಸನ್ನು ನನಸು ಮಾಡುವ ಹೊಣೆಗಾರಿಕೆಯನ್ನು ಅವನು ಅದಾಗಲೇ ಸ್ವೀಕರಿಸಿದ್ದನು. ಶಿವಾಜಿ ತನ್ನ ಹದಿಮೂರನೇ ವಯಸ್ಸಿಗೆ ಸ್ವಂತ ರಾಜಮುದ್ರೆಯನ್ನು ಸಂಸ್ಕೃತದಲ್ಲಿ ರಚಿಸಿದ್ದ. ಶಹಾಜಿಯ ಪುತ್ರ ಶಿವಾಜಿಯ ರಾಜಮುದ್ರೆ ಲೋಕಕಲ್ಯಾಣಕ್ಕಾಗಿ ಬೆಳಗುವುದೆಂದು ಎಳೆಯ ವಯಸ್ಸಿನಲ್ಲಿಯೇ ಹೇಳಿದ ಶಿವಾಜಿಯ ಪ್ರಬುದ್ಧತೆ ಪರಕೀಯರ ಸೇವೆಯಲ್ಲಿ ಕಾಲ ಕಳೆದವರಿಗೆ ಹೇಗೆ ಅರ್ಥವಾಗಬೇಕು? ಹದಿನೈದನೇ ವಯಸ್ಸಿನಲ್ಲಿ ತನ್ನ ಒಡನಾಡಿಗಳ ಜೊತೆಗೆ ಹಿಂದುಸ್ಥಾನವನ್ನು ದಾಸ್ಯದ ಶೃಂಖಲೆಯಿಂದ ಬಿಡುಗಡೆ ಮಾಡಿ ಸ್ವರಾಜ್ಯವನ್ನು ಸ್ಥಾಪಿಸುವೆವು ಎಂದು ಶಿವನ ಮುಂದೆ ನಿಂತು ಪ್ರತಿಜ್ಞೆ ಮಾಡಿದ ಶಿವಾಜಿಯನ್ನು ದಾರಿ ತಪ್ಪಿದವನೆಂದು ಹೇಳುವ ಅರ್ಹತೆಯು ಅಂದು ಯಾರಿಗೂ ಇರಲಿಲ್ಲ.
ಹಿಂದವೀ ಸ್ವರಾಜ್ಯ ಸ್ಥಾಪನೆಯ ಪ್ರತಿಜ್ಞೆ ಮಾಡಿದ ಮುಂದಿನ ವರ್ಷವೇ ಬಾಲಕ ಶಿವಾಜಿ ತೋರಣಗಡವನ್ನು ವಶಪಡಿಸಿ ಅಲ್ಲಿ ಪರಮಪೂಜ್ಯ ಭಗವಾ ಧ್ವಜವನ್ನು ಹಾರಿಸಿದ. ತೋರಣಗಡವನ್ನು ಗೆದ್ದ ಮೇಲೆ ಒಂದೊಂದೇ ಕೋಟೆಯನ್ನು ಗೆದ್ದು ತನ್ನ ಗುರಿಯನ್ನು ಸಾಧಿಸುವ ಸಲುವಾಗಿ ವೇಗವಾಗಿ ಮುನ್ನಡೆಯತೊಡಗಿದ, ಗುರಿ ತುಂಬಾ ದೂರದಲ್ಲಿತ್ತು; ಮಾರ್ಗದರ್ಶನ ನೀಡಲು ಗುರು ಸಮರ್ಥ ರಾಮ ದಾಸರು ಬೆನ್ನ ಹಿಂದೆ ನಿಂತಿದ್ದರು ; ದಾರಿಯಲ್ಲಿ ಕಲ್ಲು ಮುಳ್ಳುಗಳಾಗಿದ್ದ ಮತಾಂಧರನ್ನು ತೊಡೆದು ಹಾಕಿ ಶಿವಾಜಿಯ ರಕ್ಷಣೆಯನ್ನು ಮಾಡಲು ಮಾವೋಳಿ ವೀರರು ಸದಾ ಸಿದ್ಧರಾಗಿದ್ದರು.
ಗೋಹತ್ಯೆ, ಮತಾಂತರ ಮತ್ತು ಹಿಂದುಗಳ ಮೇಲೆ ಅತ್ಯಾಚಾರ , ದಬ್ಬಾಳಿಕೆ ಇವೆಲ್ಲವೂ ಸರ್ವೇ ಸಾಮಾನ್ಯವಾಗಿದ್ದ ಆ ಮಧ್ಯಯುಗದಲ್ಲಿ ಅನ್ಯಾಯದ ವಿರುದ್ಧ ಸಿಡಿದೆದ್ದು , ಹಿಂದುಗಳ ಮನಸ್ಸಿನಲ್ಲಿ ಮನೆ ಮಾಡಿದ್ದ ಭಯವನ್ನು ನೀಗಿಸಿದ ಶಿವಾಜಿ ಮಹಾರಾಜರ ನಡೆ-ನುಡಿ ಇಂದಿನ ಯುವಶಕ್ತಿಗೆ ಸ್ಪೂರ್ತಿದಾಯಕವಾದುದು. ಕೈಗೆ ಸಿಕ್ಕಿದ ಶತ್ರುವಿನ ಕೋರಿಕೆಗೆ ಕರಗಿ, ಪ್ರಾಣಭಿಕ್ಷೆ ನೀಡಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ ಎಂಬುದನ್ನು ಮಹಾರಾಜರು ಅರಿತಿದ್ದರು. ಎದುರಿಗಿದ್ದ ದುರುಳ ಕತ್ತಿ ಮಸೆಯುವಾಗ ಶಾಂತಿ -ಸಂಧಾನದ ಮಾತುಕತೆ ಆಡುವುದು ವ್ಯರ್ಥ ಎಂಬುದನ್ನು ಪೂರ್ವಿಕರಿಂದ ತಿಳಿದುಕೊಂಡಿದ್ದ ಶಿವಾಜಿ ಮಹಾರಾಜರು ಅಗತ್ಯ ಬಿದ್ದಾಗ ಕತ್ತಿ ಎತ್ತಲು ಹಿಂದೆ ಮುಂದೆ ನೋಡಲಿಲ್ಲ. ಶತ್ರುಗಳ ನಯವಂಚನೆಗೆ ಬಲಿಯಾಗಲಿಲ್ಲ. ಶಾಂತಿಗೆ ಶಾಂತಿ , ಕ್ರಾಂತಿಗೆ ಕ್ರಾಂತಿ ಎಂಬ ಛತ್ರಪತಿಯ ನಡೆಯು ಅಂದಿಗೂ ಇಂದಿಗೂ ಸನಾತನ ಸಂಸ್ಕೃತಿಯನ್ನು ಉಳಿಸುವುದಕ್ಕೆ ಕಾರಣವಾಗಿದೆ.
ಕಾಡುಮೇಡುಗಳಲ್ಲಿ ಅಲೆದು ಬೆಳೆದ ಯಕಶ್ಚಿತ್ ಕಾಫಿರನನ್ನು ಮುಗಿಸಿ ಬರುತ್ತೇನೆ ಎಂದು ಅಹಂಕಾರದಲ್ಲಿ ಎದುರು ಬಂದಿದ್ದ ಅಫ್ಜಲ್ ಖಾನ್ ಶಿವಾಜಿಯ ಬಾಹುಗಳ ಮಧ್ಯೆ ವ್ಯಾಘ್ರನಖಗಳಿಂದ ಹತನಾದ, ಇರುಳಿನಲ್ಲಿ ಗಾಢ ನಿದ್ರೆಯಲ್ಲಿರುವಾಗ ಷೆಯಿಸ್ತೇ ಖಾನನಿಗೆ ಶಿವಾಜಿ ಹುಟ್ಟಿಸಿದ ಭಯದ ತೀವ್ರತೆ ಎಷ್ಟಿತ್ತೆಂದರೆ ಹಿಂದುಸ್ಥಾನದಲ್ಲಿ ನೆಲೆಯೂರಿದ್ದ ಮತಾಂಧ ಶಕ್ತಿಗಳು ರಾತ್ರಿ ಕನಸಿನಲ್ಲಿ ಬರುತ್ತಿದ್ದ ಶಿವಾಜಿ ಮಹಾರಾಜರನ್ನು ನೋಡಿ ಬೆಚ್ಚಿ ಬೀಳುತ್ತಿದ್ದರು. ತನ್ನ ನಿದ್ದೆಗೆಡಿಸಿದ ಛತ್ರಪತಿಯನ್ನು ಮುಗಿಸಿ ಇಡೀ ಹಿಂದುಸ್ಥಾನವನ್ನು ದಾರ್ -ಉಲ್- ಇಸ್ಲಾಂ ಮಾಡಬೇಕೆಂದುಕೊಂಡಿದ್ದ ಔರಂಗಜೇಬನಿಗೆ ಚಳ್ಳೆ ಹಣ್ಣು ತಿನ್ನಿಸಿ ಆಗ್ರಾದಿಂದ ತಪ್ಪಿಸಿಕೊಂಡು ಬಂದ ಛತ್ರಪತಿ ಶಕ್ತಿ-ಯುಕ್ತಿಯುಳ್ಳ ಶ್ರೇಷ್ಠ ನಾಯಕ ಎಂಬುದು ಚರಿತ್ರೆಯ ಅಧ್ಯಯನದಿಂದ ಸ್ಪಷ್ಟವಾಗುತ್ತದೆ.
ಹಿಂದುಗಳಿಗೆ ತೊಂದರೆಯಾದಾಗ ಖಡ್ಗ ಹಿಡಿಯುತ್ತಿದ್ದ ಶಿವಾಜಿ ಮಹಾರಾಜರು ಮುಸ್ಲಿಂ ದ್ವೇಷಿಯಾಗಿದ್ದರು ಎಂಬುದು ಸತ್ಯಕ್ಕೆ ದೂರವಾದ ಮಾತು. ಛತ್ರಪತಿಯ ಆಸ್ಥಾನದಲ್ಲಿ ಸ್ವರಾಜ್ಯಕ್ಕೆ ನಿಷ್ಠಾವಂತರಾಗಿದ್ದ ಪ್ರತಿಯೊಬ್ಬರಿಗೂ ಗೌರವ ಸಿಗುತ್ತಿತ್ತು. ಮುಲ್ಲಾ ಹೈದರ್ , ದರ್ಯಾ ದರಂಗ್ , ಇಬ್ರಾಹಿಂ ಖಾನ್ , ಸಿದ್ದಿಮಿಶ್ರೀ ಎಂಬವರು ಛತ್ರಪತಿಯ ಸೇನೆಯಲ್ಲಿ, ನೌಕಾಪಡೆಯಲ್ಲಿ ಮುಖ್ಯ ಜವಾಬ್ದಾರಿಗಳನ್ನು ಹೊಂದಿದ್ದರು. 3W (Wealth – Wine – Women) ನ ಗೀಳು ಹತ್ತಿಸಿಕೊಂಡಿದ್ದ ಪರಕೀಯರ ಜೊತೆಗೆ ಸಂದರ್ಭೋಚಿತವಾಗಿ ನಡೆದುಕೊಂಡಿದ್ದ ಮಹಾರಾಜರಿಗೆ ಸನಾತನ ಧರ್ಮದ ಮೇಲೆ ಎಷ್ಟು ಪ್ರೀತಿ ಇತ್ತೋ , ಅಷ್ಟೇ ಗೌರವ ಇತರ ಮತಗಳ ಮೇಲೂ ಇತ್ತು. ಈ ನೆಲದ ಸಂಪತ್ತನ್ನು ಲೂಟಿ ಮಾಡಿದ ವಿದೇಶಿಗರಿಂದ ಪುನಃ ಅದನ್ನು ವಸೂಲಿ ಮಾಡುವ ವೇಳೆಯಲ್ಲಿ ಶಿವಾಜಿ ಮಹಾರಾಜರು ಕುರಾನ್ ಪ್ರತಿಗಳು ಸಿಕ್ಕಿದರೆ , ಅವುಗಳನ್ನು ಸುಡದೆ ಮುಸ್ಲಿಮರಿಗೆ ಕೊಡುತ್ತಿದ್ದರು ಎಂಬುದನ್ನು ಮೊಘಲ್ ಆಸ್ಥಾನದಲ್ಲಿದ್ದ ಖಾಫಿಖಾನ್ ಮೆಚ್ಚುಗೆಯಿಂದ ಹೇಳಿದ್ದ. ಶಿವಾಜಿ ಮಹಾರಾಜರು ಎಂದೂ ಮಸೀದಿಯನ್ನು ಕೆಡವಲಿಲ್ಲ, ಅಮಾಯಕರ ಹತ್ಯೆಯಾಗಲಿ, ಮತಾಂತರವಾಗಲಿ ಮಾಡಲಿಲ್ಲ, ಅದೂ ಅಲ್ಲದೆ ಗೆರಿಲ್ಲಾ ಯುದ್ಧಗಳನ್ನು ಮಾಡುವ ವೇಳೆಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಸಿಕ್ಕಿ ಬಿದ್ದಾಗ ಅವರನ್ನು ಗೌರವಾದರಗಳೊಂದಿಗೆ ಪುನಃ ಕಳುಹಿಸಿ ಕೊಡುತ್ತಿದ್ದರು. ಜೀಜಾಮಾತೆ ಛತ್ರಪತಿಗೆ ಕಲಿಸಿ ಕೊಟ್ಟ ಸಂಸ್ಕಾರ ಹೇಗಿತ್ತು ಎಂಬುದಕ್ಕೆ ಇದುವೇ ಸಾಕ್ಷಿ!
ಶತ್ರುಗಳ ಮೇಲೆ ದಂಡೆತ್ತಿ ಹೋಗುವ ವೇಳೆಯಲ್ಲಿ ಮಹಾರಾಜರು ಪ್ರಜಾಪಾಲನೆಯಿಂದ ವಿಮುಖರಾಗಲಿಲ್ಲ, ಶತ್ರುಗಳನ್ನು ಗೆಲ್ಲುವುದರ ಜೊತೆಗೆ , ಉತ್ತಮ ಆಡಳಿತದಿಂದ ಜನರ ಮನವನ್ನು ಗೆದ್ದಿದ್ದರು. ಛತ್ರಪತಿಯ ಕರ್ತವ್ಯ ಪ್ರಜ್ಞೆಗೆ , ಛಲಕ್ಕೆ ಮತ್ತು ಸಾಧನೆಗೆ ಯಾವ ಪ್ರಶಸ್ತಿ, ಪ್ರಮಾಣ ಪತ್ರ ಕೊಟ್ಟರೂ ಕಡಿಮೆಯೇ! ಎಳೆಯ ವಯಸ್ಸಿನಲ್ಲಿಯೇ ವ್ಯಾವಹಾರಿಕ ಜಾಣ್ಮೆಯಿಂದ ದುರ್ಗಗಳನ್ನು ಗೆದ್ದು , ಸಂದರ್ಭೋಚಿತವಾಗಿ ಶತ್ರುಗಳಿಗೆ ಖಡ್ಗದ ರುಚಿ ತೋರಿಸಿ, ಸ್ವರಾಜ್ಯ ಸಿದ್ಧಾಂತದ ಬಗ್ಗೆ ಚಿಂತಿಸದ ಜನರಲ್ಲಿ ಜಾಗೃತಿ ಮೂಡಿಸಿ ಅವರನ್ನು ಸಂಘಟಿತರಾಗುವಂತೆ ಮಾಡುವುದು ಸಾಮಾನ್ಯನಾದವನಿಗೆ ಸಾಧ್ಯವೇ? ವಿದೇಶಿ ಶಕ್ತಿಗಳ ಅತ್ಯಾಚಾರಗಳಿಂದ ಮನೋಬಲವನ್ನು ಕಳೆದುಕೊಂಡಿದ್ದ ಹಿಂದುಗಳಲ್ಲಿ ರಾಷ್ಟ್ರೋತ್ಥಾನದ ಕಿಡಿ ಹೊತ್ತಿಸಿದ ಛತ್ರಪತಿ ಶಿವಾಜಿ ಮಹಾರಾಜರಿಗೆ ಶ್ರೇಷ್ಠ ರಾಷ್ಟ್ರೀಯ ವಾರಿಸುದಾರಿಕೆಯ ಪಟ್ಟ ಕೊಟ್ಟರೆ ಆ ಧೀಮಂತ ವ್ಯಕ್ತಿತ್ವ ಸ್ವರಾಜ್ಯಕ್ಕಾಗಿ, ಸ್ವಧರ್ಮಕ್ಕಾಗಿ ಪಟ್ಟ ಶ್ರಮಕ್ಕೆ ಸ್ವಲ್ಪವೇ ಸ್ವಲ್ಪವಾದರೂ ನ್ಯಾಯ ಒದಗಿಸಿದಂತಾಗುತ್ತದೆ.
ಹಿಂದುಸ್ಥಾನದಲ್ಲೇ ಹಿಂದುವಿಗೆ ರಕ್ಷಣೆ ಇಲ್ಲವಾದಾಗ ಶೂನ್ಯದಿಂದ ಪ್ರಾರಂಭಿಸಿ ಔನತ್ಯಕ್ಕೇರುವ ಮೂಲಕ ನವಚರಿತ್ರೆಗೆ ನಾಂದಿ ಹಾಡಿದ ಛತ್ರಪತಿ ಅಂದಿಗೂ ಇಂದಿಗೂ ಎಂದಿಗೂ ಆದರ್ಶ ಪುರುಷ.
ವಿಲಾಸೀ ಜೀವನ ನಡೆಸಿ , ರಕ್ತದ ಕೋಡಿ ಹರಿಸಿ ಭಯದ ವಾತಾವರಣ ಸೃಷ್ಟಿಸಿ ಆಡಳಿತವನ್ನು ಮಾಡಿದವರ ಬಗ್ಗೆ ಪುಸ್ತಕಗಳಲ್ಲಿ ಹೊಗಳಿ ಬರೆದುದುದನ್ನು ಓದಿದಾಗ ಮನಸ್ಸಿನ ಮೂಲೆಯಲ್ಲಿ ತಳಮಳವಾಗುತ್ತದೆ. ಮುಂದಿನ ಪೀಳಿಗೆಗೆ ಪಾರತಂತ್ರ್ಯದ ಎಂಜಲು ಸೋಕಬಾರದೆಂದು ಬಯಸಿ ಸವಾಲುಗಳನ್ನು ಎದುರಿಸಿ , ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರನ್ನು ಯುಗಪುರುಷನೆಂದು ಒಪ್ಪಕ್ಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಅವರು ತಂದು ಕೊಟ್ಟ ಸ್ವಾತಂತ್ರ್ಯವನ್ನು ಇಂದು ಅನುಭವಿಸುವ ಅರ್ಹತೆ ನಮಗಿದೆಯೇ?