Bhoomi Poojan Ceremony, Senior RSS Functionaries K Suryanarayana Rao, Mangesh Bhende seen

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ಉತ್ತರ ಪ್ರಾಂತವು ಬರುವ 2012 ಜನವರಿ 27, 28, 29 ಈ ಮೂರು ದಿನಗಳು ಹುಬ್ಬಳ್ಳಿಯಲ್ಲಿ ಪ್ರಾಂತ ಮಹಾಶಿಬಿರ “ಹಿಂದು ಶಕ್ತಿ ಸಂಗಮ”ವನ್ನು ಹಮ್ಮಿಕೊಂಡಿದೆ. ಸಾವಿರಾರು ಗ್ರಾಮ, ನಗರಗಳಿಂದ ಹತ್ತಾರು ಸಾವಿರ ಗಣವೇಶಧಾರಿ ಸ್ವಯಂಸೇವಕರು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ಸಂಘದ ಸರಸಂಘಚಾಲಕ  ಶ್ರೀ ಮೋಹನಜೀ ಭಾಗವತ್ ರವರು,  ಸರಕಾರ್ಯವಾಹ ಶ್ರೀ ಬಯ್ಯಾಜಿ ಜೋಷಿಯವರನ್ನು ಒಳಗೊಂಡಂತೆ ಅನೇಕ ಅಖಿಲ ಭಾರತೀಯ ಅಧಿಕಾರಿಗಳು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಲಿದ್ದಾರೆ.

Hindu Shakti Sangam – LOGO
ಭೂಮಿಕೆ

ಹಿಮಾಲಯದಿಂದ ಹಿಂದು ಮಹಾಸಾಗರದವರೆಗೆ ವಿಸ್ತಾರವಾಗಿ ಹಬ್ಬಿರುವ ದೇಶ ನಮ್ಮದು. ಜಗತ್ತಿನ ಅತಿ ಪ್ರಾಚೀನ ಸಂಸ್ಕೃತಿ – ನಾಗರಿಕತೆ ಎನ್ನಿಸಿಕೊಂಡ ಭಾರತವು ಕಾಲದ ಅವಶ್ಯಕತೆಗೆ ತಕ್ಕ ಬದಲಾವಣೆಗಳೊಂದಿಗೆ ನಿತ್ಯ ನೂತನವಾಗಿ ಬೆಳೆದುಬಂದಿದೆ. ಜಾತಿ, ಭಾಷೆ-ಪ್ರಾಂತ ಮುಂತಾದ ಮೇಲ್ನೋಟಕ್ಕೆ ಕಾಣುವ ವಿವಿಧತೆಗಳಲ್ಲಿ ಏಕತೆಯನ್ನು ಕಾಣುತ್ತ ಬಾಳಿದವರು ನಮ್ಮ ಹಿರಿಯರು. ಭಾರತದ ನೆಲ ಜಲ ಸಂಸೃತಿಗಳೊಂದಿಗೆ ಏಕರಸವಾಗಿ ನಮಗೆ ದೈವ ಶ್ರದ್ಧೆ, ರಾಷ್ಟ್ರಶ್ರದ್ಧೆಗಳು ಬೇರೆಬೇರೆ ಅಲ್ಲ. “ಭಾರತ ನಮ್ಮ ಮಾತೃಭೂಮಿ, ನಾವದರ ಮಕ್ಕಳು” ಎಂಬ ಭಾವ ಸಂಬಂಧವನ್ನು ಬೆಳೆಸಿಕೊಂಡು ಬಂದಿರುವ ಹಿಂದು ಸಮಾಜ ತನ್ನ ಸುದೀರ್ಘ ಇತಿಹಾಸದಲ್ಲಿ ಅನೇಕ ಬಾರಿ ಪರಕೀಯರ ದಾಳಿಗಳಿಂದ ತತ್ತರಿಸಿದೆ. ಆದರೆ ರಾಷ್ಟ್ರೀಯ ಭಾವ ಜಾಗೃತಿಯಿಂದಾಗಿ ಮೃತ್ಯುಂಜಯವಾಗಿ ತಲೆಯೆತ್ತಿ ನಿಂತಿದೆ.

ಸಂಘಟಿತ ಹಿಂದು ಸಮಾಜದಿಂದಲೇ ಬಲಿಷ್ಠ ಭಾರತ ಸಾಧ್ಯ ಎಂಬುದು ಐತಿಹಾಸಿಕ ಸತ್ಯ. ಇದನ್ನು ಮನಗಂಡು ಸಾಮರಸ್ಯದಿಂದ ಕೂಡಿದ ಸಂಘಟಿತ ಹಿಂದು ಸಮಾಜವನ್ನು, ತನ್ಮೂಲಕ ಸಮೃದ್ಧ ಭಾರತವನ್ನು ಕಟ್ಟುವ ಸಂಕಲ್ಪದಿಂದ ಜನ್ಮ ತಾಳಿದ್ದು “ರಾಷ್ಟ್ರೀಯ ಸ್ವಯಂಸೇವಕ ಸಂಘ”. 1925 ರಲ್ಲಿ ಪರಮಪೂಜನೀಯ ಡಾ|| ಕೇಶವ ಬಲಿರಾಂ ಹೆಡಗೇವಾರ್ ಅವರು ಆರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ದೇಶಾದ್ಯಂತ 40 ಸಾವಿರಕ್ಕೂ ಹೆಚ್ಚು ಶಾಖೆಗಳ ಮೂಲಕ ರಾಷ್ಟ್ರವ್ಯಾಪಿಯಾಗಿ ಬೆಳೆದಿದೆ. ಜಗತ್ತಿನ 33 ಕ್ಕೂ ಹೆಚ್ಚು ದೇಶಗಳಲ್ಲಿ ಇಂದು ಹಿಂದು ಸಂಘಟನೆಯ ಕಾರ್ಯ ನಡೆಯುತ್ತಿದೆ. ಧ್ಯೇಯವಾದ, ಸೇವೆ ಮತ್ತು ಸಮರ್ಪಣಾ ಮನೋಭಾವಗಳನ್ನು ಸ್ವಯಂಸೇವಕರಲ್ಲಿ ಬೆಳೆಸಿ ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಜಾಗೃತಿಯನ್ನು ಸಾಧಿಸುವುದು ಸಂಘದ ಉದ್ದೇಶ.

ಸಮಾಜ ಪರಿವರ್ತನೆಯ ಹಾದಿಯಲ್ಲಿ….

ಕಳೆದ ೮೭ ವರುಷಗಳಿಂದ ನಡೆಯುತ್ತಿರುವ ಸಂಘಕಾರ್ಯದ ಪರಿಣಾಮವಾಗಿ ದೇಶದಲ್ಲಿ ಕಂಡುಬರುತ್ತಿರುವ ಪರಿವರ್ತನೆ ಭರವಸೆ ಮೂಡಿಸುತ್ತಿದೆ. ಹಿಂದು ಎಂದರೆ “ಕಮ್ಯುನಲ್”, “ಸಂಕುಚಿತ”, “ಪ್ರಗತಿ ವಿರೋಧಿ” ಎನ್ನುವ ಅಪಪ್ರಚಾರಗಳು ಅರ್ಥ ಕಳೆದುಕೊಳ್ಳುತ್ತಿವೆ. “ಹಿಂದು” ಶಬ್ದದ ಉಚ್ಛಾರಣೆಯೇ ಅಪರಾಧ ಎನ್ನುವ ಸ್ಥಿತಿ ಬದಲಾಗಿದೆ. “ನಾವೆಲ್ಲ ಹಿಂದು, ನಾವೆಲ್ಲ ಒಂದು”; “ನಾವು ಒಂದು ರಾಷ್ಟ್ರ – ಹಿಂದುರಾಷ್ಟ್ರ” ಎಂಬ ಭಾವ ಬಲಗೊಳ್ಳುತ್ತಿದೆ.

ರಾಷ್ಟ್ರೀಯತೆಯ ಆಧಾರದಲ್ಲಿ ಸಮಾಜ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಯಂಸೇವಕರು ದೇಶವ್ಯಾಪಿ ಸಂಘಟನೆಗಳನ್ನು ಕಟ್ಟಿ ಬೆಳೆಸಿದ್ದಾರೆ. ವಿಶ್ವಹಿಂದು ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಮಜದೂರ ಸಂಘ, ಭಾರತೀಯ ಕಿಸಾನ್ ಸಂಘ, ವನವಾಸಿ ಕಲ್ಯಾಣ ಆಶ್ರಮ, ವಿದ್ಯಾಭಾರತಿ – ಹೀಗೆ ನೂರಾರು ಸಂಸ್ಥೆಗಳು ಇಂದು ದೇಶದ ತುಂಬೆಲ್ಲ ರಾಷ್ಟ್ರೀಯ ಜಾಗೃತಿಯ ಕಾರ್ಯದಲ್ಲಿ ತೊಡಗಿಕೊಂಡಿವೆ.

ಸ್ವಯಂಸೇವಕರು ತಮಗೆ ಒದಗುವ ಎಲ್ಲಾ ಅವಕಾಶಗಳನ್ನು – ವಿಶೇಷವಾಗಿ ಧಾರ್ಮಿಕ, ಸಾಂಸ್ಕೃತಿಕ ಸ್ವರೂಪದ ಸಂದರ್ಭಗಳನ್ನು ಉಪಯೋಗಿಸಿಕೊಂಡು ಏಕರಸ, ಹಿಂದುತ್ವದ ಭಾವನೆಯನ್ನು ಬಲಗೊಳಿಸುತ್ತಿದ್ದಾರೆ. ದೇಶ ವಿರೋಧಿ ಶಕ್ತಿಗಳನ್ನು ಎದುರಿಸುವಲ್ಲಿ ಸಮಾಜಕ್ಕೆ ಧೈರ್ಯ ತುಂಬುತ್ತಿದ್ದಾರೆ. ಅಂತೆಯೇ ಶಿಕ್ಷಣ, ಆರೋಗ್ಯ, ಸೇವೆಗಳ ಮುಖಾಂತರ ಸಮಾಜ ಜಾಗೃತಿ, ಸಾಮರಸ್ಯ ಹಾಗೂ ಪರಿವರ್ತನೆಗಾಗಿ ಶ್ರಮಿಸುತ್ತಿದ್ದಾರೆ. ಸಮಾಜದ ಸಹಕಾರದೊಂದಿಗೆ ಜಗತ್ತಿನಲ್ಲೇ ಅತಿ ಹೆಚ್ಚು ಸೇವಾ ಪ್ರಕಲ್ಪಗಳನ್ನು ನಡೆಸುತ್ತಿರುವವರು ಸಂಘದ ಸ್ವಯಂಸೇವಕರು ಎಂಬುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಹಿಂದು ಸೇವಾ ಪ್ರತಿಷ್ಠಾನ, ಗುರುಕುಲ ಶಿಕ್ಷಣದಂತಹ ಪರಿಕಲ್ಪನೆಗೆ ಪ್ರಯೋಗ ಭೂಮಿಯಾಗಿ ಯಶಸ್ಸನ್ನು ಕಂಡ ಕರ್ನಾಟಕ, ಸೇವೆ ಹಾಗೂ ಸಾಮರಸ್ಯಕ್ಕೆ ಹೊಸ ಮುನ್ನುಡಿ ಬರೆದಿದೆ.

ಕರ್ನಾಟಕ ಉತ್ತರ ಪ್ರಾಂತ

ಸಂಘದ ಪ್ರಚಾರಕರಾಗಿದ್ದ ದಾದಾರಾವ್ ಪರಮಾರ್ಥರು 1935 ರಲ್ಲಿ ಚಿಕ್ಕೋಡಿಯಲ್ಲಿ ಸಂಘದ ಶಾಖೆಯನ್ನು ಆರಂಭಿಸಿದರು. 1937 ಜನವರಿ 16 ರಂದು ಪರಮ ಪೂಜನೀಯ ಡಾಕ್ಟರ್ ಜೀಯವರ ಪಾದಸ್ಪರ್ಶದಿಂದ ಪುನೀತವಾದ ಸ್ಥಾನ ಚಿಕ್ಕೋಡಿ. ಅಲ್ಲಿ ಈಗ ಸ್ವಯಂಸೇವಕರು ಶೀಲಬಲ ಸಂವರ್ಧಕ ವ್ಯಾಯಾಮಶಾಲೆ, ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತಿದ್ದಾರೆ. ಡಾಕ್ಟರ್ ಜೀಯವರು ಸಂದರ್ಶನ ನೀಡಿ 75 ವರ್ಷಗಳು ತುಂಬುತ್ತಿರುವ ಶುಭಪರ್ವವಿದು.

ಕರ್ನಾಟಕ ಉತ್ತರ ಭಾಗದಲ್ಲಿ ಸಂಘಟನೆಯ ವಿಸ್ತಾರ ಮತ್ತು ಸಾಮಾಜಿಕ ಪರಿವರ್ತನೆ ಇವುಗಳಿಗೆ ಹೆಚ್ಚಿನ ಗಮನ ನೀಡುವ ಸಲುವಾಗಿ 1996 ರಲ್ಲಿ ಸಂಘದ ದೃಷ್ಟಿಯಿಂದ “ಕರ್ನಾಟಕ ಉತ್ತರ ಪ್ರಾಂತ”ವನ್ನು ರಚಿಸಲಾಯಿತು. ಅಲ್ಲಿಂದೀಚೆಗೆ ಕಳೆದ 15 ವರ್ಷಗಳಲ್ಲಿ ಸ್ವಯಂಸೇವಕರ ಪರಿಶ್ರಮ ಮತ್ತು ಸಮಾಜದ ಸಹಕಾರದಿಂದ ಸಂಘ ಕಾರ್ಯಕ್ಕೆ ಹೊಸ ವೇಗ ಬರುತ್ತಿದೆ. ರಾಷ್ಟ್ರೀಯ ವಿಪತ್ತಿನ ಸಂದರ್ಭಗಳಲ್ಲಿ, ಪ್ರಾಕೃತಿಕ ವಿಕೋಪಗಳುಂಟಾದಾಗ ಸಮಸ್ಯೆಯ ಪರಿಹಾರಕ್ಕೆ ತಕ್ಷಣ ಧಾವಿಸುವುದು ಸ್ವಯಂಸೇವಕರ ಸಹಜ ಸ್ವಭಾವ. 2009 ರ ಹಿಂಗಾರು ಮಳೆಗೆ ಉತ್ತರ ಕರ್ನಾಟಕ ತತ್ತರಿಸಿತು. 2500 ಕ್ಕೂ ಹೆಚ್ಚು ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡರು. ಸೇವಾ ಭಾರತಿಯ ಆಶ್ರಯದಲ್ಲಿ ಕರ್ನಾಟಕ ಉತ್ತರ ಪ್ರಾಂತದ 5 ಜಿಲ್ಲೆಗಳ 9 ಗ್ರಾಮಗಳಲ್ಲಿ 1300 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. 850 ಮನೆಗಳನ್ನು ನಿರ್ಮಿಸಿ ಈಗಾಗಲೇ ಸಂತ್ರಸ್ತರಿಗೆ ವಿತರಿಸಲಾಗಿದೆ.

ಹುಬ್ಬಳ್ಳಿಯಲ್ಲಿ ಅನಾಥ ಮಕ್ಕಳಿಗಾಗಿ ಬಾಲಕಲ್ಯಾಣ ಕೆಂದ್ರ, ಗದಗ್ ನಲ್ಲಿ ಬುದ್ಧಿಮಾಂದ್ಯ ಹಾಗೂ ವಿಕಲಾಂಗರಿಗಾಗಿ ಶಾಲೆ, ಬೆಳಗಾವಿಯಲ್ಲಿ “ಜಾಗೃತಿ” ಎಂಬ ಹೆಸರಿನಲ್ಲಿ ನಿರ್ಗತಿಕ, ನೊಂದ ಮಹಿಳೆಯರಿಗಾಗಿ ಸ್ವಾವಲಂಬನ ಕೇಂದ್ರ, “ಆಶ್ರಯ ಧಾಮ” ಪ್ರಕಲ್ಪದಡಿ ಬಾಗಲಕೋಟೆಯಲ್ಲಿ ಚಿಂದಿ ಆಯುವ ಮಕ್ಕಳಿಗಾಗಿ ವಸತಿನಿಲಯ, ಗುಲಬರ್ಗಾ ಹಾಗೂ ಬಾಗಲಕೋಟೆ ನಗರಗಳ ಸೇವಾಬಸ್ತಿ(ಸ್ಲಮ್)ಗಳಲ್ಲಿ ಮಕ್ಕಳಿಗಾಗಿ ೧೮ ಕ್ಕೂ ಹೆಚ್ಚು ಅನೌಪಚಾರಿಕ ಶಿಕ್ಷಣ ಕೇಂದ್ರಗಳು, ಗುಳೇದಗುಡ್ಡದಲ್ಲಿ ಜನಪ್ರಿಯವಾಗಿರುವ ಸಂಚಾರಿ ಆಸ್ಪತ್ರೆ, ಬೀದರ ಜಿಲ್ಲೆಯಲ್ಲಿ ಮತಾಂತರವನ್ನು ತಡೆಗಟ್ಟುವಲ್ಲಿ ಯಶಸ್ವಿಯಾದ ಧರ್ಮಜಾಗರಣದ ಕಾರ್ಯ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ವನವಾಸಿಗಳಿಗೆ ಭರವಸೆಯಾದ ವನವಾಸಿ ಕಲ್ಯಾಣದ ಕಾರ್ಯ – ಹೀಗೆ ಸಂಘದ ಸ್ವಯಂಸೇವಕರು ವಿವಿಧ ಸಾಮಾಜಿಕ ಪರಿವರ್ತನೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ವರ್ತಮಾನದ ಸವಾಲುಗಳು

ರಾಷ್ಟ್ರೀಯ ಕಳಕಳಿ ಮತ್ತು ಸಾಮಾಜಿಕ ಬದ್ಧತೆಯುಳ್ಳ ಎಲ್ಲರಲ್ಲೂ ಆತಂಕ ಹುಟ್ಟಿಸುವ ಅನೇಕ ಸಂಗತಿಗಳು ನಮ್ಮ ಸುತ್ತ ಗೋಚರಿಸುತ್ತಿವೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಕ್ಕೆ ರಾಜಕೀಯ ಪುಷ್ಟಿ ದೊರೆಯುತ್ತಿದೆ. ಪಾಕಿಸ್ತಾನ ನಡೆಸುತ್ತಿರುವ ಸರಣಿ ವಿಧ್ವಂಸಕ ಕೃತ್ಯಗಳು ಭಾರತವನ್ನು ತಲ್ಲಣಗೊಳಿಸುತ್ತಿವೆ. ಚೀನಾದೇಶ ಅರುಣಾಚಲ ಪ್ರದೇಶವನ್ನು ತನ್ನದೇ ಎನ್ನುತ್ತಿದೆ. ಭಾರತವನ್ನು ಛಿದ್ರಗೊಳಿಸಲು ಯತ್ನಿಸುತ್ತಿರುವ ಶಕ್ತಿಗಳಿಗೆ ಕುಮ್ಮಕ್ಕು ನೀಡುವುದರ ಜತೆಗೆ ಅದು ಹಿಂದು ಮಹಾಸಾಗರದಲ್ಲಿ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸಿ ಭಾರತವನ್ನು ಸುತ್ತುವರಿಯಲು ಯತ್ನಿಸುತ್ತಿದೆ. ದೇಶದ ಸತ್ವಹೀನ ನಾಯಕತ್ವ ಈ ವಾಸ್ತವಿಕತೆಯನ್ನು ಎದುರಿಸುವ ಯಾವುದೇ ಯೋಜನೆ ಹೊಂದಿಲ್ಲ. ಶತ್ರುಗಳ ಆಕ್ರಮಣಗಳೆದುರು ಹೋರಾಡುವ ಕೆಚ್ಚಿಲ್ಲದ ನಮ್ಮ ಸರಕಾರ ಇದೀಗ “ಮತೀಯ ಗಲಭೆ ಮತ್ತು ಉದ್ದೇಶಿತ ಹಿಂಸೆ ತಡೆ” ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸುವ ಮೂಲಕ ರಾಷ್ಟ್ರಹಿತವನ್ನೇ ಬಲಿಕೊಡಲು ಮುಂದಾಗಿದೆ. ದೇಶದೊಳಗೆ ಆಸೆ ಅಮಿಷಗಳ ಮೂಲಕ ಮತಾಂತರ ನಿರಂತರವಾಗಿ ನಡೆಯುತ್ತಿದೆ. ಜಾತಿಗಳ ಹೆಸರಿನಲ್ಲಿ ಅಸಮಾನತೆ, ದುರಭಿಮಾನಗಳು ಸಾಮರಸ್ಯಕ್ಕೆ ಅಡ್ಡಿಯಾಗಿವೆ. ಗೋಹತ್ಯಾ ನಿಷೇಧ ಇನ್ನೂ ಕನಸಾಗಿದೆ. ವ್ಯಾಪಕವಾದ ಭ್ರಷ್ಟಾಚಾರ ಸಮಾಜದ ನೈತಿಕತೆಗೇ ಸವಾಲಾಗಿದೆ. ಭೋಗವಾದದ ಆಕರ್ಷಣೆಯಿಂದ ಜನಮಾನಸವು ಕಲುಷಿತಗೊಳ್ಳುತ್ತಿದೆ.

ಈ ಎಲ್ಲ ಸವಾಲುಗಳನ್ನು ಸಂಘಟಿತ ಸಮಾಜವೇ ಸಮರ್ಥವಾಗಿ ಎದುರಿಸಬಲ್ಲದು. ಈ ನಿಟ್ಟಿನಲ್ಲಿ 2012 ಜನವರಿ 27, 28, 29 ರಂದು ಹುಬಳ್ಳಿಯಲ್ಲಿ ನಡೆಯಲಿರುವ “ಹಿಂದು ಶಕ್ತಿ ಸಂಗಮ” ನಮಗೆ ಸಂಘದ ವಿರಾಟ್ ಶಕ್ತಿಯನ್ನು ಕಾಣುವ ಅಪೂರ್ವ ಅವಕಾಶವನ್ನು ಒದಗಿಸಲಿದೆ. ಸ್ವಯಂಸೇವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ, ಸಂಘಕಾರ್ಯದ ಕುರಿತಾಗಿ ನಮ್ಮ ಬದ್ಧತೆಯನ್ನು ಗಟ್ಟಿಗೊಳಿಸುವ ಸಾಧನವಾಗಲಿದೆ. ಅಂತೆಯೇ ಸಂಘಟಿತ ಕ್ಷಾತ್ರ ತೇಜದ ದರ್ಶನದಿಂದ ಸಜ್ಜನರಲ್ಲಿ ಭರವಸೆ ಮೂಡಲಿದೆ.

ಶಿಬಿರ ಏಕೆ?

ಇಂದಿನ ದೇಶದ ಮುಂದಿರುವ ಸವಾಲುಗಳನ್ನು ಹಿಂದು ಸಮಾಜವು ಸಮರ್ಥವಾಗಿ ಎದುರಿಸಿ ಯೋಗ್ಯ ಪರಿಹಾರವನ್ನು ತಾನೇ ಕಂಡುಕೊಳ್ಳುವಷ್ಟು ಶಕ್ತಿಯಾಗಬೇಕು. ಅದಕ್ಕಾಗಿ ಸಂಘ ಕಂಡುಕೊಡಿರುವ ಎರಡು ಉಪಾಯಗಳೇ – ಜಾಗೃತಿ ಮತ್ತು ಸಂಘಟನೆ.

ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು. ಹೆಚ್ಚು ಗ್ರಾಮಗಳಿಗೆ ನಮ್ಮ ಕಾರ್ಯ ತಲುಪಬೇಕು. ಹಳಬರೆಲ್ಲರೂ ಸಕ್ರಿಯರಾಗಬೇಕು. ಹೆಚ್ಚು ಮಂದಿ ಹೊಸಬರು ಸಂಘಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.

ಇದರ ಪರಿಣಾಮವಾಗಿ ಸಮಾಜದಲ್ಲಿ ನಿರಂತರ ಜಾಗೃತಿ ಉಂಟಾಗಿ ಸಜ್ಜನ ಶಕ್ತಿಗಳೆಲ್ಲ ರಾಷ್ಟ್ರಹಿತದ ಕಾರ್ಯದಲ್ಲಿ ಒಂದಾಗಿ, ಒಟ್ಟಾಗಿ ಕೆಲಸ ಮಾಡುವಂತಾಗಬೇಕು.

ಸಂಘಟಿತ ಶಕ್ತಿಯ ದರ್ಶನದಿಂದ ಹಿಂದು ಸಮಾಜದಲ್ಲಿ ಒಂದು ಭರವಸೆ ನಿರ್ಮಾಣವಾಗುತ್ತದೆ. ಇಡೀ ಸಮಾಜ ಈ ಭರವಸೆಯನ್ನು ಮೂಡಿಸಿಕೊಂಡು ಸಂಘಟಿತವಾಗಿ ಸಜ್ಜನ ಶಕ್ತಿಗಳನ್ನು ಅನುಸರಿಸಬೇಕು. ಈ ರೀತಿ ಸಮಾಜದ ಬೆಂಬಲವನ್ನು ಹೆಚ್ಚಿಸಿಕೊಂಡು ನಮ್ಮ ಪ್ರಾಂತದಲ್ಲಿ ಕಾರ್ಯವನ್ನು ಬಲಗೊಳಿಸಲು ಈ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರ ಎಲ್ಲಿ?

ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಿಂದ, ವಿಮಾನ ನಿಲ್ದಾಣದ ರಸ್ತೆಯಲ್ಲಿ 6.5 ಕಿ.ಮಿ. ದೂರದಲ್ಲಿ ತಾರಿಹಾಳ ಬೈಪಾಸ್ ರಸ್ತೆಗೆ ತಗುಲಿಕೊಂಡಿರುವ 120 ಎಕರೆ ಪ್ರದೇಶದಲ್ಲಿ ಈ ಶಿಬಿರ ತಲೆಯೆತ್ತಲಿದೆ. ಡೇರೆಗಳಲ್ಲಿ ನಡೆಯುವ ಈ ಶಿಬಿರದಲ್ಲಿ 14 ನಗರಗಳು ನಿರ್ಮಾಣಗೊಳ್ಳಲಿವೆ.

ಹತ್ತು ಹಲವು ವಿಶೇಷತೆಗಳನ್ನು ಒಡಲಲ್ಲಿಟ್ಟುಕೊಂಡಿರುವ ಈ ಶಿಬಿರವು ಕರ್ನಾಟಕ ಉತ್ತರ ಪ್ರಾಂತದ ಸಂಘಟನೆಯ ಬೆಳವಣಿಗೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಲಿದೆ. ಈ ಶಿಬಿರದಿಂದ ಸಂಘಟನೆಯ ಕಾರ್ಯಕ್ಕೆ ಒಂದು ಮುನ್ನೆಗೆತ ಸಿಗಲಿದೆ.

ಈ ಮಹಾ ಶಿಬಿರ “ಹಿಂದು ಶಕ್ತಿ ಸಂಗಮ”ವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ಹಿಂದು ಸಮಾಜಕ್ಕಾಗಿ ಕ್ರಿಯಾಶೀಲರಾಗಿರುವ, ಸಂಘ ಕಾರ್ಯಕ್ಕೆ ಸದಾ ಬೆಂಬಲ ನೀಡುತ್ತಿರುವ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಆಯ್ದ ಸಮಾಜದ ಪ್ರಮುಖರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.

ನಮ್ಮ ಸೌಭಾಗ್ಯದಿಂದ ಹುಬ್ಬಳ್ಳಿಯ ಮೂರು ಸಾವಿರ ಮಠದ ಪೂಜ್ಯರಾದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿಯವರು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಬಿಜಾಪುರದ ಬಿ.ಎಲ್.ಡಿ.ಎ. ವಿಶ್ವ ವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ|| ಸತೀಶ ಜಿಗಜಿನ್ನಿಯವರು ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸಿದ್ದಾರೆ. ಇವರೆಲ್ಲರ ಹಾಗೂ ಸಮಾಜದ ಸಹಕಾರದಿಂದ ಈ ಶಿಬಿರ ಯಶಸ್ವಿಯಾಗುವುದೆಂಬ ವಿಶ್ವಾಸ ನಮಗಿದೆ.

ಶಿಬಿರಕ್ಕೆ ಆಗಮಿಸಲಿರುವ ಸ್ವಯಂಸೇವಕರನ್ನು ನೋಂದಾಯಿಸುವ ಕಾರ್ಯ ನವೆಂಬರ್ 1 ರಿಂದ ಆರಂಭವಾಗಿದೆ.

ಶಿಬಿರದ ಬಗ್ಗೆ
 • ಉತ್ತರ ಕರ್ನಾಟಕದ ಸಾವಿರಾರು ಸ್ಥಾನಗಳ ಹತ್ತಾರು ಸಹಸ್ರ ಗಣವೇಷಧಾರಿ ಸ್ವಯಂಸೇವಕರ ಬೃಹತ್ ಶಿಬಿರ.
 • ಶಿಬಿರ ಸ್ಥಾನ: ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ 6.5 ಕಿ.ಮಿ. ದೂರದಲ್ಲಿ (ಬೈಪಾಸ್ ಸಮೀಪ) ಹಾಗೂ ರೈಲ್ವೆ ನಿಲ್ದಾಣದಿಂದ 10 ಕಿ.ಮಿ. ದೂರದಲ್ಲಿ ಇದೆ.
 • ದಿನಾಂಕ: ಖರ ಸಂವತ್ಸರದ ಮಾಘ ಶುಕ್ಲ ಚೌತಿ, ಪಂಚಮಿ, ಷಷ್ಠಿ – 2012 ಜನವರಿ 27, 28, 29 ಶುಕ್ರವಾರ-ಶನಿವಾರ-ರವಿವಾರ.
 • 120 ಎಕರೆ ವಿಸ್ತಾರವಾದ ಪ್ರದೇಶದಲ್ಲಿ, ಡೇರೆಗಳಲ್ಲಿ ಶಿಬಿರ.
 • 40 ಎಕರೆ ಪ್ರದೇಶದಲ್ಲಿ ಶಾರೀರಿಕ ಕಾರ್ಯಕ್ರಮಗಳಿಗಾಗಿ ಮೈದಾನ (ಸಂಘಸ್ಥಾನ)
 • ಹುಬ್ಬಳ್ಳಿ, ಧಾರವಾಡ ನಗರಗಳಲ್ಲಿ ನಾಲ್ಕು ಕಡೆ ಗಣವೇಷಧಾರಿ ಸ್ವಯಂಸೇವಕರ ಘೋಷ ಸಹಿತ ಪಥಸಂಚಲನ.
 • ಸಹಸ್ರಾರು ಘೋಷವಾದಕರಿಂದ ಸಾಮೂಹಿಕ ವಾದನ.
 • ದೇಶ, ಸಂಸ್ಕೃತಿ, ಸಂಘ – ಇವುಗಳ ಕುರಿತು ಎಲ್ಲರೂ ನೋಡಲೇಬೇಕಾದ ಪ್ರೇರಣಾದಾಯಿ ಪ್ರದರ್ಶಿನಿ
 • ಪ್ರದರ್ಶಿನಿ”ಯ ಉದ್ಘಾಟನೆ – 26 / 01 / 2012
 • 26-01-2012 ರಂದು ಬೆಳಿಗ್ಗೆ 11-00 ಗಂಟೆಗೆ ಮಾನ್ಯ ಸರಕಾರ್ಯವಾಹ ಶ್ರೀ ಭಯ್ಯಾಜೀ ಜೋಶಿಯವರ ಕರಕಮಲಗಳಿಂದ ಪ್ರದರ್ಶಿನಿಯ ಉದ್ಘಾಟನೆ. ದೇಶ, ಸಂಸ್ಕೃತಿ ಮತ್ತು ಸಂಘದ ಕುರಿತಾದ ವಿಫುಲ ಮಾಹಿತಿಗಳಿಂದ ಕೂಡಿದ ಹಾಗೂ ಪ್ರೇರಣಾದಾಯಿ ವಿಶಾಲ ಪ್ರದರ್ಶಿನಿ ಇದು.
 • “ಹಿಂದು ಶಕ್ತಿ ಸಂಗಮ” ಶಿಬಿರದ ಉದ್ಘಾಟನೆ
  27-01-2012 ಬೆಳಿಗ್ಗೆ 10-45 ಕ್ಕೆ ಮಾನ್ಯ ಸರಕಾರ್ಯವಾಹ ಶ್ರೀ ಭಯ್ಯಾಜೀ ಜೋಶಿಯವರು ಶಿಬಿರವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಮಾರ್ಗದರ್ಶನ ಮಾಡಲಿದ್ದಾರೆ.
 • ಪಥಸಂಚಲನ
  28-01-2012 ಸಂಜೆ 4-30 ರ ವೇಳೆಗೆ ಘೋಷ್(ಬ್ಯಾಂಡ್) ಸಹಿತ ಆಕರ್ಷಕ ಪಥಸಂಚಲನಗಳು ಹುಬ್ಬಳ್ಳಿಯಲ್ಲಿ 3 ಮತ್ತು ಧಾರವಾಡದಲ್ಲಿ 1 ಹೀಗೆ ಒಟ್ಟು 4 ಪಥಸಂಚಲನಗಳು.
  – ಪ್ರತಿಯೊಂದು ಸಂಚಲನದಲ್ಲಿ 5-6 ಸಾವಿರ ಗಣವೇಶಧಾರಿ ಸ್ವಯಂಸೇವಕರು ಭಾಗವಹಿಸಲಿದ್ದಾರೆ.
 • ಸಾರ್ವಜನಿಕ ಸಮಾರಂಭ
  29-01-2012 ಸಂಜೆ 5-00 ರ ವೇಳೆಗೆ ಸಾರ್ವಜನಿಕ ಸಮಾರಂಭ.
  – ಈ ವಿಶಾಲ ಸಭೆಯನ್ನುದ್ದೇಶಿಸಿ ಪರಮ ಪೂಜನೀಯ ಸರಸಂಘಚಾಲಕ ಮಾನ್ಯಶ್ರೀ ಮೋಹನಜೀ ಭಾಗವತ್ ಮಾರ್ಗದರ್ಶನ ಮಾಡಲಿದ್ದಾರೆ.
  – ಭಾಷಣಕ್ಕೆ ಮುಂಚೆ ಸಹಸ್ರಾರು ಸ್ವಯಂಸೇವಕರಿಂದ ಶಾರೀರಿಕ ಪ್ರದರ್ಶನಗಳು ನಡೆಯಲಿವೆ.

Leave a Reply

Your email address will not be published.

This site uses Akismet to reduce spam. Learn how your comment data is processed.