ಪಂಚಮಿ ಬಾಕಿಲಪದವು, ತೃತೀಯ ಬಿ.ಎ, ಪತ್ರಿಕೋದ್ಯಮ ವಿಭಾಗ, ಅಂಬಿಕಾ ಮಹಾವಿದ್ಯಾಲಯ, ಬಪ್ಪಳಿಗೆ, ಪುತ್ತೂರು

ಹಬ್ಬಗಳ ನಾಡು ಎಂದೇ ಪ್ರಸಿದ್ಧವಾದ ಭಾರತದಲ್ಲಿ‌ಹಲವಾರು ಹಬ್ಬಗಳನ್ನು, ವ್ರತಗಳನ್ನು ಆಚರಿಸಲಾಗುತ್ತವೆ. ಹಬ್ಬಗಳು ಕೇವಲ ಆಚರಣೆಗಳಾಗದೆ, ಸಮಾಜದಲ್ಲಿ ಒಗ್ಗಟ್ಟು ಒಡಮೂಡಲು, ಮನಸ್ಸಿಗೆ ನೆಮ್ಮದಿ ದೊರಕಲು, ದೇವರೊಂದಿಗೆ ಸಂಬಂಧ ಬೆಸೆಯಲು, ಸನಾತನ ಪರಂಪರೆ- ಸಂಸ್ಕೃತಿ ತಿಳಿಯಲು ಇತ್ಯಾದಿಗಳಿಗೆ ಹಬ್ಬಗಳು ಕಾರಣೀಭೂತವಾಗಿದೆ.

ಶ್ರಾವಣ ಮಾಸದಲ್ಲಿ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಪೌರಾಣಿಕ ಚರಿತ್ರೆಯನ್ನು ಹೊಂದಿದೆ. ಹಿಂದೊಮ್ಮೆ ಶಿವ ಪಾರ್ವತಿಯರು ಏಕಾಂತದಲ್ಲಿ ಮಾತನಾಡುತ್ತಿದ್ದಾಗ, ಯಾವ ವ್ರತ ಶ್ರೇಷ್ಠ ಎಂದು ದೇವಿಯು ಕೇಳುತ್ತಾಳೆ. ಆಗ ಪರಮೇಶ್ವರನು ಸ್ತ್ರೀಯರಿಂದ ಅರ್ಚನೆಗೈದು, ಆರಾಧಿಸಲ್ಪಡುವ ಮಹಾಲಕ್ಷ್ಮೀಯ ವ್ರತವೇ ಅತ್ಯಂತ ಶ್ರೇಷ್ಠವಾದ ವ್ರತವಾಗಿದೆ‌ ಎಂದು ಹೇಳುತ್ತಾನೆ. ನಂತರ ವ್ರತದ ಮಹಾತ್ಮೆಯನ್ನು ಪಾರ್ವರ್ತಿಗೆ ಕಥೆಯ ರೂಪದಲ್ಲಿ ಹೇಳುತ್ತಾನೆ.

ಕುಂಡಿನ ಎಂಬ ಊರಿನಲ್ಲಿ ಚಾರುಮತಿ ಎಂಬ ಮಹಿಳೆಯಿದ್ದಳು.‌‌ ಬಡತನದಲ್ಲಿ ಬೇಯುತ್ತಿದ್ದ ಆಕೆ ಖಾಯಿಲೆ ಪೀಡಿತ ತನ್ನ ವಯೋವೃದ್ಧ ಅತ್ತೆ ಮಾವಂದಿರ ಸೇವೆಯನ್ನು ಅತ್ಯಂತ ಶ್ರದ್ಧೆಯಿಂ‌ದ ಮಾಡುತ್ತಿದ್ದರೂ ಅವರ ಖಾಯಿಲೆಗಳು ವಾಸಿಯಾಗುತ್ತಿರಲಿಲ್ಲ.‌ ಹೀಗೆ ಖಾಯಿಲೆಯಿಂದ ಅವರು ನರಳುತ್ತಿದ್ದನ್ನು ನೋಡಿ, ಓ ದೇವರೇ, ದಯವಿಟ್ಟು ನಮ್ಮ ಅತ್ತೆ ಮಾವನವರ ಖಾಯಿಲೆಯನ್ನು ಗುಣಪಡಿಸು. ಅವರ ನರಳುವಿಕೆಯನ್ನು ನಾನು ನೋಡಲಾರೆ ಎಂದು ಪ್ರತೀ ದಿನವೂ ದೇವರಲ್ಲಿ ಕೇಳಿಕೊಳ್ಳುತ್ತಿದ್ದಳು. ಅದೊಂದು ದಿನ ಇದ್ದಕ್ಕಿದ್ದಂತೆಯೇ ಆಕೆಗೆ ಸ್ವಪ್ನದಲ್ಲಿ ಮಹಾಲಕ್ಷ್ಮಿ ಕಾಣಿಸಿಕೊಂಡು, ಎಲೈ ಚಾರುಮತಿಯೇ ನೀನು ಅತ್ತೆ- ಮಾವಂದಿರನ್ನು ಕಾಳಜಿಯಿಂದ ಸೇವೆ ಮತ್ತು ಶುಶ್ರೂಷೆ ಮಾಡುವುದನ್ನು ಕಂಡು ಮೆಚ್ಚಿದ್ದೇನೆ. ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರ ನನ್ನನ್ನು ಪೂಜಿಸು. ನಿನ್ನ ಇಷ್ಟಾರ್ಥಗಳನ್ನೆಲ್ಲಾ ನೆರವೇರಿಸುತ್ತೇನೆ ಎಂದು ಹೇಳಿ ಕಣ್ಮರೆಯಾದಳು. ಹೀಗೆ ಚಾರುಮತಿಗೆ ತನ್ನ ಕನಸಿನ ಬಗ್ಗೆ ತನ್ನೆಲ್ಲಾ ಬಂಧು- ಮಿತ್ರರಿಗೆ ತಿಳಿಸಿ, ಶ್ರಾವಣ ಮಾಸದ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರ ಭಕ್ತಿ ಭಾವಗಳಿಂದ ಮಹಾಲಕ್ಷ್ಮಿಯನ್ನು ಆರಾಧನೆ ಮಾಡಿ ಆ ತಾಯಿಯ ಅನುಗ್ರಹ ಪಡೆಯುತ್ತಾಳೆ. ಇದಾದ ಬಳಿಕ, ಆಕೆಯ ಬಡತನವೂ ನೀಗುವುದಲ್ಲದೆ, ಆಕೆಯ ಅತ್ತೆ ಮತ್ತು ಮಾವನವರ ಖಾಯಿಲೆಗಳೂ ವಾಸಿಯಾಗುತ್ತವೆ. ಅಂದಿನಿಂದ ಪ್ರತೀ ವರ್ಷವೂ ಆಕೆ ತನ್ನ ಬಂಧು ಮಿತ್ರರೊಡನೆ ತಪ್ಪದೇ ಮಹಾಲಕ್ಷ್ಮಿಯ ವ್ರತಾಚರಣೆ ಮಾಡಿ ಸಕಲ ಆಯುರಾರೋಗ್ಯ ಐಶ್ವರ್ಯವಂತಳಾಗಿ ಹಲವಾರು ವರ್ಷ ಸುಖವಾದ ನೆಮ್ಮದಿಯಾದ ಜೀವನವನ್ನು ಮುನ್ನಡೆಸುತ್ತಾಳೆ. ಇದರಿಂದಾಗಿ ವರಮಹಾಲಕ್ಷ್ಮೀ ವ್ರತಾಚರಣೆಯು ಸುಖ, ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಒಡಮೂಡಿದೆ.‌ ಅದರಂತೆ ಸಾವಿರಾರು ಮುತ್ತೈದೆಯರು ಪ್ರತಿ ವರ್ಷವೂ ಭಕ್ತಿಯಿಂದ ವತ್ರವನ್ನು ಆಚರಿಸುತ್ತಾರೆ.‌

ವತ್ರವನ್ನು ಕಟ್ಟುನಿಟ್ಟಿನಿಂದ ಮಾಡಿದರೆ ದೊರಕುವ ಫಲ ಅಧಿಕವಾಗುತ್ತದೆ ಎಂಬುದು ಅನಾದಿ ಕಾಲದಿಂದ ಬಂದ ನಂಬಿಕೆ. ವರಮಹಾಲಕ್ಷ್ಮೀ ಹಬ್ಬದ ದಿನ ಮುತ್ತೈದೆಯರು ಮುಂಜಾನೆಯಿಂದ ಸಾಯಂಕಾಲದವರೆವಿಗೂ ಉಪವಾಸ ಇರಬೇಕು. ವ್ರತ ಮಾಡುವವರು ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸಬೇಕು.

ಕಲಶದಲ್ಲಿ ಅಕ್ಕಿ ತುಂಬಿಸಿ ಖರ್ಜೂರ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸಬೇಕು.‌ ಇದರ ಮೇಲೆ ಚಿನ್ನ ಅಥವಾ‌ ಬೆಳ್ಳಿಯಿಂದ ತಯಾರಿಸಿದ ದೇವಿಯ ಮುಖವಾಡಗಳನ್ನಿಟ್ಟು, ಅವುಗಳಿಲ್ಲವಾದರೆ ತೆಂಗಿನಕಾಯಿಗೆ ಅರಸಿನದ ಹಿಟ್ಟಿನಿಂದ ದೇವೀ ಮುಖವಾಡವನ್ನು ಮಾಡಿಡಬೇಕು. ಸಮುದ್ರ ಮಂಥನದ ಸಮಯದಲ್ಲಿ ಮಹಾಲಕ್ಷ್ಮಿ ಶ್ವೇತ ವಸ್ತ್ರದಲ್ಲಿ ಉದ್ಭವವಾದ ಕಾರಣ, ದೇವಿಯ ಮುಖವಾಡವನ್ನು ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ, ನಾನಾ ಒಡವೆಗಳಿಂದ ಅಲಂಕರಿಸಬೇಕು.

ವರಮಹಾಲಕ್ಷ್ಮೀ ಪೂಜೆಯಲ್ಲಿ ದಾರಗಳಿಗೆ ಪೂಜೆ ಸಲ್ಲಿಸುವುದು ವಿಶೇಷವಾಗಿದೆ. ಪೂಜಿಸಲ್ಪಡುವ ದಾರಗಳನ್ನು ದೋರವೆಂದು ಕರೆವರು. ಹೊಸದಾದ 12 ದಾರಗಳಿಗೆ 12 ಗಂಟುಗಳನ್ನು ಹಾಕಿ, ಅದನ್ನು ದೇವಿಯ ಪಕ್ಕದಲ್ಲಿರಿಸಿ, ಅರಿಶಿನ, ಕುಂಕುಮ, ಹೂವು, ಪತ್ರೆಗಳಿಂದ ಪೂಜಿಸಬೇಕು.‌ ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ ಹೀಗೆ ದೇವಿಯ ಹನ್ನೆರಡು ಹೆಸರುಗಳನ್ನು (ದ್ವಾದಶನಾಮಾವಳಿಯನ್ನು) ಉಚ್ಚರಿಸಬೇಕು. ದೇವಿಯ ಮೂರ್ತಿಗೂ ಅರಿಶಿನ, ಕುಂಕುಮ, ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ತಯಾರಿಸಿದ ವಿವಿಧ ಭಕ್ಷ್ಯಗಳನ್ನಿಟ್ಟು ನೈವೇದ್ಯ ಮಾಡಬೇಕು. ತದನಂತರ ಪೂಜಿಸಿದ ಹೆಣ್ಣುಮಕ್ಕಳು ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳಬೇಕು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ, ದಾನವನ್ನು ನೀಡಬೇಕು. ತದನಂತರ ನೆರೆಹೊರೆಯ ಮುತ್ತೈದೆಯರಿಗೆ ಅರಸಿನ ಕುಂಕುಮ, ಬಳೆಗಳನ್ನಿಟ್ಟು ದಾನವನ್ನು ಕೊಡಬೇಕು. ಪೂಜೆ ಮಾಡುವ ಮುತ್ತೈದೆಯರು ಲಕ್ಷಣವಾಗಿ ಸೀರೆಯನ್ನುಟ್ಟು, ಹಣೆಯಲ್ಲಿ ಬಿಂದಿಯನ್ನು ತಪ್ಪದೆ ಇಡಬೇಕು ಎನ್ನುವುದು ಪೂಜೆಯ ಕ್ರಮ. ಮಾತ್ರವಲ್ಲದೆ, ಇದು ಹಿಂದೂ‌‌ ಸಂಸ್ಕಾರದ ಪ್ರತೀಕವಾಗಿದೆ.‌

ಆದರೆ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಎಲ್ಲಾ ಆಚರಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನಕ್ಕೆ ಸೀಮಿತವಾಗಿಬಿಟ್ಟಿದೆ.‌ ಭಕ್ತಿ ಶೋಕಿಯಾಗದೆ, ಅಂತರಂಗದಿಂದ ಒಡಮೂಡಬೇಕು. ಹಿಂದೂ ಧರ್ಮದ ಆಚಾರ- ವಿಚಾರ, ಸಂಪ್ರದಾಯ- ಪದ್ಧತಿಗಳನ್ನು ಭಕ್ತಿಪೂರ್ವಕವಾಗಿ ಆಚರಿಸಬೇಕಾದ ಕರ್ತವ್ಯದೆಡೆಗೆ ಪ್ರತಿಯೊಬ್ಬ ಭಕ್ತನ ನಿಷ್ಠೆಯಿರಲಿ!

Leave a Reply

Your email address will not be published.

This site uses Akismet to reduce spam. Learn how your comment data is processed.