ಕಾಳಿದಾಸ-ಭಾಸ ಪಠ್ಯವಾಗಲಿ : ಶ್ರೀಮತಿ ಸುಧಾಮೂರ್ತಿ
ಮೂರು ಗ್ರಂಥಗಳ ಲೋಕಾರ್ಪಣ ಸಮಾರಂಭ
ದಿನಾಂಕ : 20.04.2019, ಬೆಂಗಳೂರು: ನಗರದ ಗಿರಿನಗರದ
“ಅಕ್ಷರಂ”ನಲ್ಲಿ ಮೂರು ಸಂಸ್ಕೃತ ಗ್ರಂಥಗಳ ಲೋಕಾರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. “ಮಹಾಬ್ರಾಹ್ಮಣ” (ಸಂಸ್ಕೃತ ಅನುವಾದ), “ಇಂದುಲೇಖಾ” ಮತ್ತು
“ಗ್ರಂಥಿಲ” – ಈ ಮೂರು ಗ್ರಂಥಗಳ ಲೋಕಾರ್ಪಣೆಯನ್ನು ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಪ್ರತಿಷ್ಠಾನ, ಇವರು ಮಾಡಿದರು.
ಬಹುಶ್ರುತ ವಾಗ್ಮಿಗಳಾದ ಶತಾವಧಾನಿ ಡಾ. ರಾ ಗಣೇಶ್ ಮಹಾಬ್ರಾಹ್ಮಣದ ಕರ್ತೃಗಳಾಗಿದ್ದಾರೆ. ಸಂಸ್ಕೃತ ಸಂಭಾಷಣ ಮಾಸಪತ್ರಿಕೆಯ ಸಂಪಾದಕರಾದ ಡಾ. ಜನಾರ್ಧನ್ ಹೆಗಡೆ ರಚಿಸಿರುವ ಇಂದುಲೇಖಾ, ಹಾಗೂ ಶ್ರೀಮತಿ ಶ್ಯಾಮಲಾ ಜೊತೆ ರಚಿಸಿರುವ ಗ್ರಂಥಿಲ ಕೃತಿಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡವು.
ಶ್ರೀಮತಿ ಸುಧಾಮೂರ್ತಿ ಅವರು ಮಾತನಾಡಿ – “ಕಾಳಿದಾಸ -ಭಾಸ ಮುಂತಾದವರು ಪಠ್ಯವಾಗಲಿ. ಆಗ ಮಾತ್ರ ನಮ್ಮ ಬೇರುಗಳು ನಮ್ಮಲ್ಲೇ
ಉಳಿಯುತ್ತವೆ. ನಮ್ಮ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಎಷ್ಟು ಕಲಿಸುತ್ತೇವೆ? ಎಂದು ಯೋಚಿಸಬೇಕಿದೆ. ಸಂಸ್ಕೃತ, ಕನ್ನಡ ಮುಂತಾದ ಭಾಷೆಗಳನ್ನು ಬಳುವಳಿಯಾಗಿ ನಾವು ನೀಡಬೇಕು,
ಯಾವುದಾದರೂ ಸಭೆ-ಸಮಾರಂಭಗಳಲ್ಲಿ ಈ ಭಾಷೆಗಳ ಪುಸ್ತಕಗಳನ್ನು ಬಳುವಳಿಯಾಗಿ ನೀಡೋಣ” ಎಂದು
ಅಭಿಪ್ರಾಯಪಟ್ಟರು. ಅನೇಕ ಸಂಸ್ಕೃತ ಶ್ಲೋಕಗಳನ್ನು ಅವರು ಉದಾಹರಿಸಿದರು. ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ದೇವುಡು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಗಂಗಾಧರ
ದೇವುಡು ಅವರು ದೇವುಡು ಅವರ ಅನೇಕ ಜೀವನ ಘಟನೆಗಳನ್ನು ಹೃದಯಂಗಮವಾಗಿ ಸ್ಮರಿಸಿದರು.
“ಮಹಾಬ್ರಾಹ್ಮಣ” ಸಂಸ್ಕೃತ ಕೃತಿಯ ಅನುವಾದಕರಾದ ಶತಾವಧಾನಿ ಡಾ. ರಾ. ಗಣೇಶ ಅವರು –
ದೇವುಡು ಅವರಿಗಿದ್ದ ದೃಢತೆ (authenticity) ಬೇರಾವ ಲೇಖಕರಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ಮೂರು ಗ್ರಂಥಗಳ ಲೇಖಕರಾದ ವಿದ್ವಾನ್ ಜನಾರ್ದನ ಹೆಗಡೆ, (ಸಂಪಾದಕರು, ಸಂಭಾಷಣ ಸಂದೇಶ, ಸಂಸ್ಕೃತ ಮಾಸಪತ್ರಿಕೆ), ಶತಾವಧಾನಿ ಡಾ. ರಾ. ಗಣೇಶ್, ಶ್ರೀ ಶಶಿಕಿರಣ ಬಿ.ಎನ್ (ಪ್ರೇಕ್ಷಾ ತಂಡದ ಸದಸ್ಯರು), ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಶ್ರೀನಿವಾಸ ವರಖೇಡಿ, ಕುಲಪತಿಗಳು, ಕವಿಕುಲಗುರು ಕಾಲಿದಾಸ ಸಂಸ್ಕೃತ ವಿಶ್ವವಿದ್ಯಾಲಯ, ನಾಗಪುರ, ಇವರು ವಹಿಸಿದ್ದರು.
ನೂರಾರು ಸಂಸ್ಕೃತಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.