ಬೆಂಗಳೂರು: ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಪ್ರಶ್ನೆಯೇ ಇಲ್ಲ ಏಕೆಂದರೆ ಭಾರತ ಹಿಂದೂ ರಾಷ್ಟ್ರವೇ ಅಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಹೇಳಿದರು.

ಥಿಂಕರ್ಸ್ ಫೋರಮ್ ಕರ್ನಾಟಕದ ವತಿಯಿಂದ ಜಯನಗರದ ಯುವಪಥದಲ್ಲಿ ಆಯೋಜಿಸಲಾದ ಯುವಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಂಗಳವಾರ ಮಾತನಾಡಿದರು.
ಭಾರತವೆಂಬ ರಾಷ್ಟ್ರ ಸ್ವರಾಜ್ಯವನ್ನು ಪಡೆದ ನಂತರ ಜನಿಸಿದ್ದಲ್ಲ. ಅದಕ್ಕಿಂತಲೂ ಮೊದಲೇ ಸಮೃದ್ಧವಾದ ನಾಗರೀಕತೆಯ ಅಸ್ತಿತ್ವವನ್ನು ಹೊಂದಿದ ರಾಷ್ಟ್ರ ಇದಾಗಿತ್ತು. ಭಾರತದ ಪ್ರತಿಯೊಂದು ಪ್ರದೇಶಕ್ಕೂ ಸಾಂಸ್ಕೃತಿಕವಾದ ಸಂಬಂಧವಿದೆ. ಅದನ್ನು ಪುನರುಜ್ಜೀವನಗೊಳಿಸುವ ಕಾರ್ಯ ಕೇಂದ್ರ ಸರ್ಕಾರದ ನಿಲುವುಗಳಿಂದ ಆಗುತ್ತಿದೆ ಎಂದರು.
ನಂದಿನಿ ಮತ್ತು ಅಮುಲ್ ವಿವಾದದ ಕುರಿತು ಮಾತನಾಡಿದ ಅವರು ನಂದಿನಿ ಮತ್ತು ಅಮುಲ್ ಈ ರಾಷ್ಟ್ರದ ಹೆಮ್ಮೆ. ನಾಡಿನ ಮಕ್ಕಳ ಆರೋಗ್ಯಕ್ಕೆ ಅತ್ಯಂತ ಅವಶ್ಯಕ ವಸ್ತುಗಳು. ರಾಜಕೀಯಕ್ಕಾಗಿ ವಿವಾದವನ್ನು ಮಾಡಲಾಗುತ್ತಿದೆ ಅಷ್ಟೆ. ಕರ್ನಾಟಕದ ನಂದಿನಿ ಮತ್ತು ರೈತರಿಗೆ ಒಂದು ದೈವಿಕ ಶಕ್ತಿ ಇದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಂದಿನಿಯ ಮಾರುಕಟ್ಟೆ ವಿಶ್ವವ್ಯಾಪಿಯಾಗಿ ವಿಸ್ತರಿಸುತ್ತದೆ ಎಂಬ ನಂಬಿಕೆ ಇದೆ. ಅಸ್ಸಾಂ ರಾಜ್ಯಕ್ಕೂ ನಂದಿನಿಯನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ ಎಂದರು.

ರಾಜ್ಯದಲ್ಲಿ ಮುಸಲ್ಮಾನರಿಗೆ ಅಸಾಂವಿಧಾನಿಕವಾಗಿ ನೀಡಲಾಗುತ್ತಿದ್ದ ಶೇ.4% ಮೀಸಲಾತಿಯ ರದ್ಧತಿಯ ಕುರಿತಾಗಿ ಮಾತನಾಡಿದ ಅವರು ಚುನಾವಣೆಯ ಸಂದರ್ಭದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಧೈರ್ಯವಿರಬೇಕು. ಅಸಾಂವಿಧಾನಿಕವಾಗಿದ್ದ ಶೇ.4 ಮೀಸಲಾತಿಯನ್ನು ತೆಗೆದು ಲಿಂಗಾಯತ ಮತ್ತು ಒಕ್ಕಲಿಗರಿಗೆ ಹಂಚಿರುವುದು ಶ್ಲಾಘನೀಯ ಕಾರ್ಯ. ಧರ್ಮಾಧಾರಿತವಾಗಿ ಹಿಂದುಗಳಿಗೆ, ಜೈನರಿಗೆ ಮತ್ತು ಇನ್ನುಳಿದವರಿಗೆ ಇಲ್ಲದ ಮೀಸಲಾತಿ ಮುಸಲ್ಮಾನರಿಗೆ ಕೊಡುವುದು ಸಂವಿಧಾನದ ಆಶಯಕ್ಕೆ ವಿರೋಧ. ಹಾಗಾಗಿ ಇಂತಹ ಸದೃಢ ನಿರ್ಧಾರವನ್ನು ತೆಗೆದುಕೊಂಡ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅಭಿನಂದಿಸುತ್ತೇನೆ.
ಸಿಎಎ ಮತ್ತು ಎನ್ ಆರ್ ಸಿ ಕುರಿತು ಮಾತನಾಡಿದ ಅವರು ಧರ್ಮಾಧಾರಿತವಾಗಿ ವಿಭಜನೆಯಾದ ಪಾಕಿಸ್ತಾನ ಇಸ್ಲಾಮಿಕ್ ಸ್ಟೇಟ್ ಆಗಿದೆ. ಅಲ್ಲಿನ ಹಿಂದುಗಳ ಶೋಚನೀಯ ಪರಿಸ್ಥಿತಿ ಜಗಜ್ಜಾಹೀರಾಗಿದೆ. ಆದರೆ ಭಾರತ ಇಂದಿಗೂ ಸೆಕ್ಯುಲರ್ ರಾಷ್ಟ್ರವೇ ಆಗಿದೆ. ಏಕೆಂದರೆ ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ ನಮ್ಮದು. ಭಾರತದ ಬಹುಸಂಖ್ಯಾತ ಹಿಂದೂಗಳಿಗೆ ಈ ನೆಲದೊಂದಿಗೆ ದೈವಿಕವಾದ ಸಂಬಂಧವಿದೆ ಎನ್ನುವುದು ಇಲ್ಲಿನ ಮುಸಲ್ಮಾನರಿಗೂ ತಿಳಿದಿದೆ. ಶೋಷಣೆಗೆ ಒಳಗಾದ ಮುಸ್ಲಿಂಯೇತರ ಬಂಧುಗಳಿಗೆ ಆಶ್ರಯ ನೀಡುವುದಕ್ಕಾಗಿ ಸಿಎಎ ಸಹಕಾರಿಯಾಗುತ್ತದೆ ವಿನಃ ಮುಸಲ್ಮಾನರಿಗೆ ತೊಂದರೆ ನೀಡುವುದಿಲ್ಲ. ಆದರೆ ಕೆಲವು ಮೂಲಭೂತವಾದಿಗಳು ಸೃಷ್ಟಿಸುತ್ತಿರುವ ಗೊಂದಲಗಳಿಂದ ಈ ಸಂಗತಿ ವಿವಾದವಾಗುತ್ತಿದೆ ಎಂದು ನುಡಿದರು.

ಪಠ್ಯಪುಸ್ತಕದ ಕುರಿತು ಮಾತನಾಡಿದ ಅವರು ಪಠ್ಯಪುಸ್ತಕಗಳಲ್ಲಿ ನಮ್ಮ ನಾಡಿನ ಶ್ರೇಷ್ಠತೆಯನ್ನು ಪರಿಚಯಿಸುವ ಕಾರ್ಯ ಸರಿಯಾಗಿ ಆಗಲಿಲ್ಲ. ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಪ್ರಮುಖ ಐದು ರಾಜರನ್ನು ಹೆಸರಿಸುವುದಕ್ಕೆ ಹೇಳಿದರೆ ಅವರ ಉತ್ತರದಲ್ಲಿ ವಿದೇಶಿ ರಾಜರುಗಳೇ ಇರುವಂತೆ ಮಾಡಿದ್ದರು. ಈಗ ನಿರಂತರವಾದ ಪ್ರಯತ್ನದಿಂದ ಪಠ್ಯಪುಸ್ತಕವನ್ನು ಭಾರತೀಕರಣ ಮಾಡಲಾಗುತ್ತಿದೆ ಎಂದರು.

ಮದರಸಾ ಶಿಕ್ಷಣ ರದ್ಧತಿಯ ಕುರಿತು ಮಾತನಾಡಿದ ಅವರು ಮದರಸಾ ಶಿಕ್ಷಣದ ರದ್ಧತಿ ಮುಸಲ್ಮಾನರ ಕಲ್ಯಾಣಕ್ಕಾಗಿ ಮಾಡಲಾಗಿದೆ. ಒಂದು ದೇಶವಾಗಿ ಮುಸಲ್ಮಾನರ ಏಳಿಗೆಯೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವಾಗ ಅವರಿಗಿರುವ ಶಿಕ್ಷಣ ವ್ಯವಸ್ಥೆ ಉನ್ನತ ವ್ಯಾಸಂಗಕ್ಕೆ ಪೂರಕವಾಗಿರದೇ ಇದ್ದಾಗ ಅದನ್ನು ರದ್ದು ಮಾಡಲೇಬೇಕು. ಇದರಲ್ಲಿ ಧಾರ್ಮಿಕ ಹಕ್ಕಿನ ಪ್ರಶ್ನೆಯ ಮಾತಿಲ್ಲ. ಏಕೆಂದರೆ ನಮಗೆ ಸಿಗುವ ಧಾರ್ಮಿಕ ಶಿಕ್ಷಣ ನಮ್ಮ ವಿದ್ಯಾಭ್ಯಾಸಕ್ಕಿರುವ ಪರ್ಯಾಯ ಅಲ್ಲ ಎಂದು ಅಭಿಪ್ರಾಯಪಟ್ಟರು.
ಯುವಜನತೆಯ ಕರ್ತವ್ಯದ ಕುರಿತು ಮಾತನಾಡಿದ ಅವರು ರಾಷ್ಟ್ರದ ಯುವಜನತೆ ನಮ್ಮ ನಾಡಿನ ಗತವೈಭವವನ್ನು ಹೆಮ್ಮೆಯಿಂದ ಕಾಣಬೇಕು. ವರ್ತಮಾನದಲ್ಲಿ ಶ್ರಮವಹಿಸಬೇಕು. ಭವಿಷ್ಯದ ಕುರಿತು ಆತ್ಮವಿಶ್ವಾಸ ಇರಬೇಕು. ಈ ನಾಡಿನ ಅಂತಃಸತ್ವವನ್ನು ಉಳಿಸಬಲ್ಲ ನಾಯಕರನ್ನು ಆಯ್ಕೆ ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ನೂರಾರು ಯುವಕರು, ಶಿಕ್ಷಣ ತಜ್ಞರು ಹಾಗೂ ಚಿಂತಕರು ಉಪಸ್ಥಿತರಿದ್ದರು.
