

ಬೆಂಗಳೂರು: ಸಮಾಜದ ಹಿತಕ್ಕಾಗಿ ತನ್ನನ್ನು ತಾನು ರೂಪಿಸಿಕೊಳ್ಳುವ ಅದ್ಭುತ ವ್ಯವಸ್ಥೆ ಯೋಗಾಭ್ಯಾಸ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಕಾಪಾಡುವಿಕೆ, ಎಲ್ಲರನ್ನು ತೆರೆದ ಮನಸ್ಸಿನಿಂದ ಗೌರವಿಸುವ ಭಾವ ನಿರ್ಮಾಣಕ್ಕಾಗಿ ನಿರಂತರ ಯೋಗಾಭ್ಯಾಸ ಅಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.
ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಜಯನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಬುಧವಾರ ಉಪನ್ಯಾಸ ನೀಡಿದರು.

ಯೋಗದ ಮೂಲ ಉದ್ದೇಶವೇ ಯೋಗಕ್ಷೇಮ. ತಾನು ಚೆನ್ನಾಗಿರುವುದು (wellbeing) ಹಾಗೂ ಉತ್ತಮ ಸ್ವಭಾವವನ್ನು ರೂಪಿಸಿಕೊಳ್ಳುವುದೇ (well behaved) ಯೋಗಾಭ್ಯಾಸಿಯ ಲಕ್ಷಣ. ಉತ್ತಮ ಸ್ವಭಾವಕ್ಕಾಗಿ ತಮ್ಮ ಚಾರಿತ್ರ್ಯ ಮತ್ತು ಶೀಲವನ್ನು ಅತ್ಯುನ್ನತ ಮಟ್ಟದಲ್ಲಿ ಕಾಪಾಡಬೇಕಿದೆ. ಯೋಗ ಎನ್ನುವುದು ಯುಜ್ ಎಂಬ ಧಾತುವಿನಿಂದ ಹುಟ್ಟಿಕೊಂಡ ಶಬ್ದ. ಯುಜ್ ಎಂದರೆ ಜೋಡಿಸುವುದು.ಯೋಗ ದೇಹ, ಮನಸ್ಸನ್ನು ಜೋಡಿಸುತ್ತದೆ.
ಯೋಚನೆಗಳು ಆರೋಗ್ಯಪೂರ್ಣವಾಗಿ ಸಮಾಜದ ಹಿತಕ್ಕಾಗಿ ಇರಲು ಸಹಕರಿಸುತ್ತದೆ. ಇನ್ನೊಬ್ಬರನ್ನು ಅರ್ಥ ಮಾಡಿಕೊಂಡು ಅವರ ನೋವುಗಳಿಗೆ ಸ್ಪಂದಿಸುವುದಕ್ಕೆ ಸಾಧ್ಯವಾದಾಗ ಮನಸ್ಸಿನ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಯೋಗ ಕೇವಲ ದೈಹಿಕ ಆರೋಗ್ಯಕ್ಕಾಗಿ ಮಾತ್ರವಲ್ಲ. ಒಬ್ಬ ವ್ಯಕ್ತಿಯ ಮಾನಸಿಕ, ಭಾವನಾತ್ಮಕ, ವರ್ತನಾತ್ಮಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನೂ ಕಾಪಾಡುತ್ತದೆ. ಅಷ್ಟೇಯಲ್ಲದೇ ನಮ್ಮ ಚಿಂತನೆಗಳು ವಿಶಾಲವಾಗುವಂತೆ ಮಾಡಿ, ವಿಶ್ವವೇ ನಮ್ಮ ಕುಟುಂಬ ಎಂಬ ಭಾವಜಾಗೃತಿಗೆ ಯೋಗ ಸಹಕಾರಿ, ಈ ನಿಟ್ಟಿನಲ್ಲಿ ಈ ವರ್ಷದ ಯೋಗ ದಿನಾಚರಣೆಯ ಧ್ಯೇಯ ‘ವಸುಧೈವ ಕುಟುಂಬಕಮ್’ನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಮಾತೃವತ್ ಪರದಾರೇಷು – ಪರಸ್ತ್ರೀಯನ್ನು ತಾಯಿಯಂತೆ ಕಾಣುವುದು, ಪರದ್ರವ್ಯೇಷು ಲೋಷ್ಠವತ್- ಪರರ ಸಂಪತ್ತನ್ನು ಮಣ್ಣಿನ ಸಮಾನವಾಗಿ ಕಾಣುವುದು, ಆತ್ಮವತ್ ಸರ್ವಭೂತೇಷು- ಪ್ರತಿಯೊಬ್ಬರಲ್ಲೂ ಇರುವ ಆತ್ಮಕ್ಕೆ ಗೌರವ ಕೊಡುವುದು ಮುಂತಾದ ವೈಶ್ವಿಕ ಚಿಂತನೆಗಳಿಂದ ‘ವಸುಧೈವ ಕುಟುಂಬಕಂ’ ಭಾವ ಜಾಗೃತವಾಗುತ್ತದೆ ಎಂದು ಅವರು ನುಡಿದರು.
ಇನ್ನೊಬ್ಬರಿಗೆ ದೈಹಿಕ ಅಥವಾ ಮಾನಸಿಕ ಹಿಂಸೆಯನ್ನೂ ಕೊಡದೆ ಇರುವಲ್ಲಿನಿಂದ ಯೋಗದ ಪಯಣ ಪ್ರಾರಂಭವಾಗುತ್ತದೆ.ಇಂತಹ ನಿಷ್ಕಲ್ಮಶ ಆಲೋಚನೆಗಳನ್ನ ಚಿತ್ತ ಎಂದು ಕರೆಯುತ್ತೇವೆ. ಅಂತಹ ಆಲೋಚನೆಗಳು ಎಲ್ಲರಲ್ಲೂ ಮೂಡಿದರೆ ಸಹಚಿತ್ತವೆನಿಸಿಕೊಳ್ಳುತ್ತದೆ. ಸಹಚಿತ್ತತೆಯ ನಿರ್ಮಾಣಕ್ಕೆ ಯೋಗ ಉಪಯುಕ್ತ. ಇದರ ಮೂಲಕ ಅಂತಿಮ ಗುರಿಯಾದ ಜಗತ್ತಿನ ಶಾಂತಿಯ ಸ್ಥಾಪನೆ ಸಾಧ್ಯವಾಗುತ್ತದೆ ಎಂದರು.

ಸಮಾಜದ ಅಪೇಕ್ಷೆಯಂತೆ ಬದುಕುವ ಚಾರಿತ್ರ್ಯ ಮತ್ತು ಸ್ವಯಂ ನಿರ್ಧಾರದಿಂದಾಗುವ ಸ್ವಭಾವದ ಪ್ರಕಟೀಕರಣವನ್ನು ಶುದ್ಧವಾಗಿರಿಸಿಕೊಳ್ಳುವುದೇ ಯೋಗದ ಅಡಿಪಾಯ. ಇದರ ಆಧಾರದ ಮೇಲೆ ಎಲ್ಲಾ ಬಂಧನಗಳಿಂದ ಮುಕ್ತಿಯನ್ನು ಪಡೆದು ರಾಷ್ಟ್ರ ಹಿತಕ್ಕಾಗಿ ಜೀವನವನ್ನು ಸಾಗಿಸುವವರೇ ಯೋಗಿಗಳು. ಸಮಾಜ ಹಿತಕ್ಕಾಗಿ ಬದುಕುವ ಅಂತಹ ಅಸಂಖ್ಯಾತ ಯೋಗಿಗಳ ನಿದರ್ಶನ ಯೋಗದ ಕೊಡುಗೆ ಎಂದು ಅಭಿಪ್ರಾಯಪಟ್ಟರು.
ಎಲ್ಲರನ್ನೂ ಒಂದು ವೈಶ್ವಿಕ ಚಿಂತನೆಯೆಡೆಗೆ ಕರೆದೊಯ್ಯುವ ಪ್ರಯತ್ನವಾಗಬೇಕು. ಯೋಗದ ಧ್ಯೇಯಕ್ಕಾಗಿ ವರ್ಷವಿಡೀ ಕಾರ್ಯಪ್ರವೃತ್ತರಾಗಲು ನಾವು ತಯಾರಿರಬೇಕು. ನಮ್ಮ ಮನೆ ಎಲ್ಲರಿಗೂ ತೆರೆದ ಮನೆಯಾಗಿ, ನಮ್ಮ ಮನಸ್ಸು ಎಲ್ಲರನ್ನೂ ಒಪ್ಪಿಕೊಳ್ಳುವ ತೆರದ ಮನಸ್ಸಾಗಿ ರೂಪುಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಶ್ರೀ ನಾ. ದಿನೇಶ್ ಹೆಗ್ಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ಆರೆಸ್ಸೆಸ್ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ನೂರಾರು ಯೋಗಾಭ್ಯಾಸಿಗಳು ಯೋಗ ಪ್ರದರ್ಶನ ಮಾಡಿದರು.
