ಹರಿಪ್ರಸಾದ್ ಈಶ್ವರಮಂಗಲ

ಆ ಒಂದು ಘಟನೆ ಭಾರತದ ಅಸಂಖ್ಯ ಹೋರಾಟಗಾರರನ್ನು ಸ್ವಾತಂತ್ರ್ಯದ ಯಜ್ಞಕ್ಕೆ ಸಮಿಧೆಯಾಗಿ ತಯಾರು ಮಾಡಿತು. ಒಬ್ಬ ಬಾಲಕನಂತೂ ಅಲ್ಲಿನ ರಕ್ತ ಮಿಶ್ರಿತ ಮಣ್ಣನ್ನು ಮನೆಗೆ ತಂದು, ಪ್ರತಿದಿನ ಇದರಿಂದಲೇ ಸ್ಪೂರ್ತಿ ಪಡೆದು ಅಪ್ರತಿಮ ದೇಶಭಕ್ತ ಭಗತ್ ಸಿಂಗ್ ಆಗಿ ಬೆಳಗಿದ. ಅಸಂಖ್ಯ ದೇಶಭಕ್ತರಿಗೆ ಹೋರಾಟದ ಕಿಚ್ಚನ್ನು ಹೆಚ್ಚಿಸಿದ್ದು ಅದು ಜಲಿಯನ್ ವಾಲಾಬಾಗ್ ನ ಹತ್ಯಾಕಾಂಡ..

ಅಂದು ಏಪ್ರಿಲ್ 13, 1919. ಅಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು ಎಲ್ಲರನ್ನು ಒಂದೇ ಸಮನೆ ಗುಂಡು ಹಾರಿಸಿ ಕೊಂದು ಹಾಕಿತ್ತು ಬ್ರಿಟಿಷ್ ಸರಕಾರ. ಒಬ್ಬನ ಕೈ ದೇಹದಿಂದ ಬೇರ್ಪಟ್ಟಿತ್ತು, ಇನ್ನೊಬ್ಬನ ದೇಹ ಸೀಳಿ ಹೋಗಿತ್ತು, ಮತ್ತೊಂದು ಮಹಿಳೆಯ ಕಾಲುಗಳೆರಡು ತುಂಡಾಗಿದ್ದವು, ತಾಯಿಯ ಸಾವನ್ನು ಕಂಡು ಪುಟ್ಟ ಮಗು ಒಂದು ಕೂಗಾಡುತ್ತಿತ್ತು. ಅಸಂಖ್ಯ ಮುಗ್ಧ ಮಕ್ಕಳ ಶವಗಳು ರಾಶಿ ಬಿದ್ದಿದ್ದವು. ಅಂದು ಅಲ್ಲೇ ಜನಸಾಮಾನ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಹೌದು ಇಂದಿಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ಬರೋಬ್ಬರಿ 104 ವರ್ಷ. ಇದರ ಹಿನ್ನೆಲೆಯನ್ನು ತಿಳಿಯುವುದು ಪ್ರತಿ ಭಾರತೀಯನ ಆದ್ಯ ಕರ್ತವ್ಯ. ಅದು 1900ರ ಕಾಲ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಯಾಗಿತ್ತು. ಇದನ್ನು ವಿರೋಧಿಸಿ ಸ್ವಾತಂತ್ರ್ಯ ಹೋರಾಟಗಳು ತೀವ್ರಗತಿಯಲ್ಲಿ ಸಾಗುತ್ತಿದ್ದವು. ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷ ಸರಕಾರ ರೌಲೆಟ್ ಆ್ಯಕ್ಟ್ ಎಂಬ ಅನ್ಯಾಯದ ನಿಯಮ ಒಂದನ್ನು ಜಾರಿಗೆ ತಂದಿತು. ಇದರ ಪ್ರಕಾರ ಬ್ರಿಟಿಷರಿಗೆ ಯಾವುದೇ ವ್ಯಕ್ತಿಯ ಮೇಲೆ ಅನುಮಾನ ಬಂದರೂ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆತನನ್ನು ಬಂಧಿಸಿ ಎರಡು ವರ್ಷಗಳ ಕಾಲ ಜೈಲಿನಲ್ಲಿಡಬಹುದು.
ಸಂಪೂರ್ಣದೇಶದಲ್ಲಿ ಇದನ್ನು ವಿರೋಧಿಸಿ ತೀವ್ರ ಪ್ರತಿಭಟನೆಗಳು ನಡೆದವು. ಆ ಸಂದರ್ಭದಲ್ಲಿ ಗಾಂಧೀಜಿ ಸತ್ಯಾಗ್ರಹಗಳಿಗೆ ಕರೆ ನೀಡಿದರು. ದೇಶದ ಮೂಲೆ ಮೂಲೆಗಳಲ್ಲೂ ಹರಾತಳಗಳು ನಡೆದವು.
ಪಂಜಾಬಿನಲ್ಲೂ ರೌಲೆಟ್ ಕಾಯಿದೆಯನ್ನು ವಿರೋಧಿಸಿ ತೀವ್ರ ಪ್ರತಿಭಟನೆಗಳು ನಡೆದವು. ಈ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಡಾಕ್ಟರ್ ಸತ್ಯಪಾಲ್ ಮತ್ತು ಸೈಪುದ್ದಿನ್ ಎಂಬ ಇಬ್ಬರು ಹೋರಾಟಗಾರರನ್ನು ವಿನಾಕಾರಣ ಬ್ರಿಟೀಷರು ಬಂಧಿಸಿದರು. ಇದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಯಿತು. ಪಂಜಾಬಿನ ಗಲ್ಲಿ ಗಲ್ಲಿಗಳಲ್ಲೂ ಹೋರಾಟಗಳು ಹೆಚ್ಚಿದವು.

ಅದು ಅಮೃತ್ಸರದ ಜಲಿಯನ್ ವಾಲಾಬಾಗ್ ಎಂಬ ಪ್ರದೇಶ. ಅಂದು ಪಂಜಾಬಿನ ವಿಶಿಷ್ಟ ಹಬ್ಬಗಳಲ್ಲೊಂದಾದ ಬೈಸಾಕಿ ಹಬ್ಬದ ಆಚರಣೆಯ ದಿನ. ಜಲಿಯನ್ ವಾಲಾಬಾಗ್ ನಲ್ಲಿ ಇದರ ಆಚರಣೆಯೊಂದಿಗೆ ಇಬ್ಬರು ಹೋರಾಟಗಾರರನ್ನು ಬಂಧಿಸಿದ ಸಲುವಾಗಿ ಶಾಂತಿಯುತ ಪ್ರತಿಭಟನೆಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಜನರೆಲ್ಲರೂ ಸೇರಿದ್ದರು. ಅಲ್ಲಿ ಯಾವುದೇ ಧರ್ಮಭೇದವಿರಲಿಲ್ಲ ಅವರೆಲ್ಲರಿಗೂ ಇದ್ದದ್ದು ಸ್ವಾತಂತ್ರ್ಯದ ಕಲ್ಪನೆ. ಆ ಹೊತ್ತಿಗೆ ಅಲ್ಲಿಗೆ ಒಬ್ಬ ದುಷ್ಟನ ಆಗಮನವಾಯಿತು ಅವನೇ ಜನರಲ್ ಡಯರ್. ಈತ ಅಂದು ಮೆರೆದ ಕ್ರೌರ್ಯವನ್ನು ನೋಡಿದರೆ ಅವನನ್ನು ಮನುಷ್ಯನೆಂದು ಹೇಳಲು ಸಾಧ್ಯವಿಲ್ಲ. ಹೋರಾಟದ ತೀವ್ರತೆಯನ್ನು ಹತ್ತಿಕ್ಕಲು ಆತ ನೀಲಿನಕಾಶೆಯನ್ನು ಅದಾಗಲೇ ತಯಾರಿಸಿದ್ದ. ಜನರೆಲ್ಲರೂ ಜಲಿಯನ್ ವಾಲಾಬಾಗ್ ನಲ್ಲಿ ಸೇರಿರುವುದನ್ನು ಕಂಡು ಕೂಡಲೇ ಅಲ್ಲಿಗೆ ತನ್ನ ಬ್ರಿಟಿಷ್ ಸೇನೆಯನ್ನು ಕಳುಹಿಸಿದ. ಜಲಿಯನ್ ವಾಲಾಬಾಗಿನ ಪ್ರವೇಶ ದ್ವಾರವನ್ನು ಮುಚ್ಚಿದ ಸೈನಿಕರೆಲ್ಲರನ್ನು ಸುತ್ತುವರಿಸಿ ನಿಲ್ಲಿಸಿದ. ಯಾವುದೇ ಎಚ್ಚರಿಕೆಯನ್ನು ಕೊಡದೆ ಗುಂಡಿನ ಮಳೆಯನ್ನು ಸುರಿಸಿ ಬಿಟ್ಟ. ಅಂದು ಅಸಂಖ್ಯಾತ ಮುಗ್ಧ ಜೀವಗಳು ಬಲಿಯಾಗಿಬಿಟ್ಟವು. ಸಹಸ್ರ ಭಾರತೀಯರ ಮಾರಣಹೋಮವಾಯಿತು. ಮಹಿಳೆಯರು, ಮಕ್ಕಳು ಯುವಕರು, ಯುವತಿಯರು ವೃದ್ಧರು ಹೀಗೆ ಎಲ್ಲಾ ವಯೋಮಾನದವರು ಪ್ರಾಣವನ್ನು ಕಳೆದುಕೊಂಡಿದ್ದರು.

ಬ್ರಿಟಿಷ್ ವರದಿಗಳ ಪ್ರಕಾರ ಅಂದು ಪ್ರಾಣ ಕಳೆದುಕೊಂಡದ್ದು ಕೇವಲ 379 ಮಂದಿ. ಆದರೆ ನೈಜವಾಗಿ ಅಂದು ಅಲ್ಲಿ ಸಹಸ್ರಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದರು.1500ಕ್ಕೂ ಅಧಿಕ ಜನರು ಗಾಯಗೊಂಡಿದ್ದರು . ಈ ಒಂದು ಘಟನೆ ಅಗಣಿತ ದೇಶಭಕ್ತರನ್ನು ಬಡಿದೆಬ್ಬಿಸಿತು. ಸರ್ದಾರ್ ಉದಂ ಸಿಂಗರಂತಹ ಅಪ್ರತಿಮ ರಾಷ್ಟ್ರಭಕ್ತರನ್ನು ತಯಾರು ಮಾಡಿತು.

ಇಂದಿಗೂ ಕೂಡ ಜಲಿಯನ್ ವಾಲಾಬಾಗ್ ನ ಗೋಡೆಗಳು ಅಲ್ಲಿ ಮೆರೆದ ಕ್ರೌರ್ಯದ ಪರಮಾವಧಿಯನ್ನು ಸೂಚಿಸುತ್ತವೆ. ಅವರ ಕ್ರೌರ್ಯಕ್ಕೆ ಸಾಕ್ಷಿ ಎಂಬಂತೆ ಗುಂಡಿನ ಕಲೆಗಳು ಕಾಣಸಿಗುತ್ತವೆ. ಇತಿಹಾಸದ ಪುಟದಲ್ಲಿ ಅಚ್ಚಳಿಯದ ಈ ದಿನವನ್ನು ನಾವೆಂದಿಗೂ ಮರೆಯದಿರೋಣ. ‘Forgive and Forget’ ಭಾವನೆ ರಾಷ್ಟ್ರೀಯತೆ ವಿಚಾರಗಳಿಗೆ ಸಲ್ಲ.

ಜೈ ಹಿಂದ್

Leave a Reply

Your email address will not be published.

This site uses Akismet to reduce spam. Learn how your comment data is processed.