by Du Gu Lakshman

ಮಾಧ್ಯಮಗಳಲ್ಲಿ ಈಗ ಕೇಜ್ರಿವಾಲ್ ಅವರz ಪ್ರಚಾರ ಭರಾಟೆ. ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇಜ್ರಿವಾಲ್ ಭಾರತಕ್ಕೊಂದು ಆಶಾಕಿರಣ, ಭಾರತವನ್ನು ಉದ್ಧರಿಸಲೆಂದೇ ಧರೆಗಿಳಿದು ಬಂದ ದೇವತೆ ಎಂಬಂತೆ ಕೇಜ್ರಿವಾಲರನ್ನು ಚಿತ್ರಿಸಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕೇಜ್ರಿವಾಲ್ ಮ್ಯಾಜಿಕ್ ನಡೆಯಲಿದೆ ಎಂದು ಮಾಧ್ಯಮಗಳು ಭವಿಷ್ಯ ನುಡಿದಿವೆ! ಆದರೆ ಈ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗಲಿದೆ ಅಥವಾ ಠುಸ್ ಆಗಲಿದೆ ಎಂಬುದು ಚುನಾವಣೆ ಸನ್ನಿಹಿತವಾದಾಗಲಷ್ಟೇ ಗೊತ್ತಾಗಬಹುದು.

FN _ cartoon 2 1 2014 vikrama copy

ನಿಜ, ಸತತ ೧೦ ವರ್ಷಗಳ ಕಾಂಗ್ರೆಸ್‌ನ ದುರಾಡಳಿತ, ಭ್ರಷ್ಟಾಚಾರದಿಂದ ಬೇಸತ್ತ ದಿಲ್ಲಿ ಜನತೆ ಈ ಬಾರಿ ಬದಲಾವಣೆ ಬಯಸಿದ್ದರು. ಅದಕ್ಕೇ ಅವರು ಹಿಂದಿನಂತೆ ಆಲಸ್ಯದಿಂದಿರದೆ ಮತದಾನದಂದು ಮತಗಟ್ಟೆಗೆ ನಡೆದಿದ್ದರ ಪರಿಣಾಮವಾಗಿ ದಾಖಲೆಯ ಪ್ರಮಾಣದಲ್ಲಿ ಮತದಾನ ಕಂಡುಬಂದಿತ್ತು. ಆದರೆ ದಿಲ್ಲಿ ಜನತೆ ಕೇವಲ ಕೇಜ್ರಿವಾಲರ ಆಮ್‌ಆದ್ಮಿ ಪಕ್ಷಕ್ಕೇ (ಎಎಪಿ) ಮತ ಹಾಕಿರಲಿಲ್ಲ. ಎಎಪಿ ಗೆದ್ದಿದ್ದು ೨೮ ಸ್ಥಾನಗಳಲ್ಲಿ. ಬಿಜೆಪಿಯಾದರೋ ೩೨ ಸ್ಥಾನಗಳಲ್ಲಿ ಗೆದ್ದು ಅಧಿಕಾರದ ಬಾಗಿಲಿಗೆ ತೀರಾ ಹತ್ತಿರ ಬಂದಿತ್ತು. ಬಹುಮತ ಸಾಧಿಸಲು ಕನಿಷ್ಠ ೩೬ ಸ್ಥಾನ ಅಗತ್ಯವಿದ್ದಿದ್ದರಿಂದ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಇಲ್ಲವೆ ‘ಕುದುರೆ ವ್ಯಾಪಾರ’ಕ್ಕಿಳಿಯದೆ ಪ್ರತಿಪಕ್ಷದಲ್ಲೇ ಇರಲು ಅದು ಬಯಸಿತ್ತು. ಇದನ್ನು ಜನರು ಕೂಡ ಸ್ವಾಗತಿಸಿದ್ದರು. ಆದರೆ ಕೇವಲ ೨೮ ಸ್ಥಾನ ಗೆದ್ದಿದ್ದ ಎಎಪಿ ಮೊದಮೊದಲು ತಾನು ಅಧಿಕಾರಕ್ಕೇರಲಾರೆ ಎಂದು ಬಡಾಯಿ ಕೊಚ್ಚಿಕೊಂಡು, ಒಳಗೊಳಗೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಕೊನೆಗೂ ಅಧಿಕಾರಕ್ಕೇರಿದೆ. ‘ಎಎಪಿ ಸರ್ಕಾರ ರಚಿಸಬೇಕೆ ಬೇಡವೆ ಎಂದು ಎಸ್ಸೆಮ್ಮೆಸ್ ಮಾಡಿ’ ಎಂದು ಕೇಜ್ರಿವಾಲ್ ದಿಲ್ಲಿ ಮತದಾರರಿಗೆ ಕರೆ ನೀಡಿದ್ದರು. ಮತ್ತೆ ಮರುಚುನಾವಣೆ ಬಯಸದ ದಿಲ್ಲಿ ಮತದಾರರು ‘ಸರ್ಕಾರ ರಚಿಸಿ’ ಎಂದು ಪ್ರತಿಕ್ರಿಯೆ ನೀಡಿರುವುದು ಸ್ವಾಭಾವಿಕ. ಆದರೆ ‘ತಮ್ಮ ಪಕ್ಷ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು? ಕಾಂಗ್ರೆಸ್ ಜೊತೆಗೋ ಅಥವಾ ಬಿಜೆಪಿ ಜೊತೆಗೋ’ ಎಂದು ಮತದಾರರಿಗೆ ಕೇಜ್ರಿವಾಲ್ ಎಸ್ಸೆಮ್ಮೆಸ್ ಕಳುಹಿಸಲು ತಿಳಿಸಿರಲಿಲ್ಲ. ಕೇಜ್ರಿವಾಲ್ ಅವರ ಜಾಣತನ ಅಡಗಿರುವುದೇ ಇಲ್ಲಿ! ಹೀಗೇನಾದರೂ ಎಸ್ಸೆಮ್ಮೆಸ್ ಕಳುಹಿಸಿ ಎಂದು ಮತದಾರರಿಗೆ ಅವರು ಕರೆ ನೀಡಿದ್ದರೆ, ಅದಕ್ಕೆ ಮತದಾರರ ಪ್ರತಿಕ್ರಿಯೆ ಹೇಗಿರುತ್ತಿತ್ತು? ‘ಕಾಂಗ್ರೆಸ್ ಜೊತೆ ಸರ್ಕಾರ ರಚಿಸಿ’ ಎಂದು ಯಾವೊಬ್ಬ ಪ್ರಜ್ಞಾವಂತ ಮತದಾರನೂ ಖಂಡಿತ ಹೇಳುತ್ತಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಎಎಪಿ ನಖಶಿಖಾಂತವಾಗಿ ಖಂಡಿಸಿದ್ದು ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು , ಆಗಿನ ಮುಖ್ಯಮಂತ್ರಿ ಶೀಲಾದೀಕ್ಷಿತ್ ಅವರ ಜನವಿರೋಧಿ, ದುರಾಡಳಿತವನ್ನು. ಆದರೀಗ ಅಧಿಕಾರಕ್ಕಾಗಿ ಬೆಂಬಲ ಯಾಚಿಸಿದ್ದು ಮತ್ತೆ ಅದೇ ಕಾಂಗ್ರೆಸ್ ಪಕ್ಷವನ್ನು! ಇದೆಂತಹ ವೈರುಧ್ಯ? ಚುನಾವಣೆ ಸಂದರ್ಭದಲ್ಲಿ ‘ಎಎಪಿ ಕಾಂಗ್ರೆಸ್‌ನ ಬಿ ಟೀಮ್’ ಎಂದು ಬಿಜೆಪಿ ಆರೋಪಿಸಿದ್ದು ಈಗಂತೂ ನಿಜವಾಗಿದೆ. ಭ್ರಷ್ಟಾಚಾರವನ್ನು ಗುಡಿಸಿ ಹಾಕುತ್ತೇವೆಂದು ಪ್ರತಿಜ್ಞೆ ಮಾಡಿದ ಮಂದಿ ಮತ್ತೆ ಅದೇ ಭ್ರಷ್ಟಾಚಾರಿಗಳ ಜೊತೆ ಸೇರಿ ಆಡಳಿತ ನಡೆಸುತ್ತಾರೆಂದರೆ ಅದಕ್ಕಿಂತ ಕ್ರೂರ ವ್ಯಂಗ್ಯ ಇನ್ಯಾವುದು!

ಇದ್ಯಾವ ನೈತಿಕತೆ?

ನಿಜವಾಗಿ ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷಕ್ಕೆ ಸರ್ಕಾರ ರಚಿಸಲೇಬೇಕು ಎಂಬ ತಹತಹ ಇದ್ದಿದ್ದರೆ ಅದು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕಾಗಿತ್ತು. ಹಾಗಲ್ಲದಿದ್ದರೆ ಬಿಜೆಪಿಗೆ ಸರ್ಕಾರ ರಚನೆಗೆ ಎಎಪಿ ಬೆಂಬಲ ನೀಡಬೇಕಾಗಿತ್ತು. ಅದನ್ನು ಮತದಾರರು ಕೂಡ ಸ್ವಾಗತಿಸುತ್ತಿದ್ದರು. ಆದರೆ ಎಎಪಿ ಇವೆರಡನ್ನೂ ಮಾಡದೆ, ಗುಟ್ಟಾಗಿ ಕಾಂಗ್ರೆಸ್ ಬೆಂಬಲ ಪಡೆದಿದ್ದು ಅದ್ಯಾವ ನೈತಿಕತೆ? ಎಎಪಿಗೆ ನೈತಿಕತೆ ಪಾಲನೆಗಿಂತ ಅಧಿಕಾರದಾಹವೇ ಮಹತ್ವದ್ದೆನಿಸಿದ್ದು, ಅದು ಇತರ ಪಕ್ಷಗಳಿಗಿಂತ ಒಂದಿಷ್ಟೂ ಭಿನ್ನವಲ್ಲ ಎಂಬುದನ್ನು ಈ ವಿದ್ಯಮಾನ ಬಯಲಾಗಿಸಿದೆ.

ನಾವು ಸಾಮಾನ್ಯರಂತೆಯೇ ಬದುಕುತ್ತೇವೆ. ವಾಸಿಸಲು ಬಂಗಲೆ ಬಯಸುವುದಿಲ್ಲ. ಸಾಧಾರಣ ಕಾರಿನಲ್ಲಿ ಸಂಚರಿಸುತ್ತೇವೆ… ಎಂದೆಲ್ಲ ಅಧಿಕಾರಕ್ಕೇರಿದೊಡನೆ ಕೇಜ್ರಿವಾಲರ ಟೀಮ್ ಹೇಳಿz ಹೇಳಿದ್ದು. ಆದರೆ ಅವರ ಹೇಳಿಕೆಗಳು ಅದೆಷ್ಟು ಸತ್ಯಕ್ಕೆ ದೂರ ಎಂಬುದು ಈಗ ನಿಧಾನವಾಗಿ ಅರಿವಾಗತೊಡಗಿದೆ. ಅಧಿಕಾರಸೂತ್ರ ಹಿಡಿದ ಒಂದೇ ವಾರದೊಳಗೆ ಮುಖ್ಯಮಂತ್ರಿ ಕೇಜ್ರಿವಾಲ್ ಭಗವಾನ್‌ದಾಸ್ ರಸ್ತೆಯಲ್ಲಿ ೫ ಕೊಠಡಿಗಳ ಡುಪ್ಲೆಕ್ಸ್ ಭವ್ಯ ಬಂಗಲೆಗೆ ತಮ್ಮ ವಸತಿ ಬದಲಾಯಿಸಿದ್ದಾರೆ. ಕೇಜ್ರಿವಾಲ್ ಸಂಪುಟದ ಹಲವು ಸಚಿವರಿಗೆ ದುಬಾರಿ ಬೆಲೆಯ ಟೊಯೊಟಾ ಇನ್ನೋವಾ ಕಾರುಗಳನ್ನು ಅಧಿಕೃತವಾಗಿ ನೀಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಎಎಪಿ ಮುಖಂಡರು ಹೇಳಿದ್ದು – ‘ನಾವು ಸಾಮಾನ್ಯ ಜನರಂತೆ ಸಾಧಾರಣ ಮನೆಗಳಲ್ಲೇ ಇರುತ್ತೇವೆ, ಸಾಧಾರಣ ವಾಹನಗಳಲ್ಲೇ ಸಂಚರಿಸುತ್ತೇವೆ.’ ಈಗ ಮಾತ್ರ ಮಾಡುತ್ತಿರುವುದು ತದ್ವಿರುದ್ಧ. ಜನವರಿ ೪ರ ಪ್ರಮುಖ ಇಂಗ್ಲಿಷ್ ಪತ್ರಿಕೆಯೊಂದರ ಮುಖಪುಟದಲ್ಲಿ ಕೇಜ್ರಿವಾಲರ ಭವ್ಯ ಬಂಗಲೆಯ ಎದುರು ಕೂಲಿಕಾರರ ಮಕ್ಕಳು ಚಳಿಯಿಂದ ಮುದುಡಿ ಮಲಗಿರುವ ಭಾವಚಿತ್ರ ಪ್ರಕಟವಾಗಿದೆ. ಆಮ್‌ಆದ್ಮಿಯ ಹಿತರಕ್ಷಕರೆಂದು ಬೊಗಳೆ ಬಿಟ್ಟ ಕೇಜ್ರಿವಾಲ್ ಮನೆ ಮುಂದೆ ಈಗ ಅದೇ ಆಮ್‌ಆದ್ಮಿಗಳ ಸ್ಥಿತಿ ಏನಾಗಿದೆ ನೋಡಿ!

ಮುಖ್ಯಮಂತ್ರಿಯಾದ ಕೂಡಲೇ ದಿಲ್ಲಿ ಜನರಿಗೆ ಉಚಿತ ನೀರು ಹಾಗೂ ವಿದ್ಯುತ್ ಬಿಲ್ ಕಡಿತದಂತಹ ಘೋಷಣೆಗಳನ್ನು ಕೇಜ್ರಿವಾಲ್ ಜಾರಿಗೊಳಿಸಿದ್ದನ್ನು ಮಾಧ್ಯಮಗಳು ‘ನುಡಿದಂತೆ ನಡೆದ ನಾಯಕ’ ಎಂದು ಬಣ್ಣಿಸಿವೆ. ಆದರೆ ಕೇಜ್ರಿವಾಲರ ಈ ಭರವಸೆ ಈಡೇರಿಕೆ ಹಿಂದಿರುವ ವಾಸ್ತವವೇನು ಎಂಬುದನ್ನು ಯಾವ ಮಾಧ್ಯಮವೂ ವಿಶ್ಲೇಷಿಸುವ ಗೋಜಿಗೆ ಹೋಗಿಲ್ಲ. ದೆಹಲಿಯಲ್ಲಿ ಸಬ್ಸಿಡಿ ನೀರು ಎಂಬ ಕೇಜ್ರಿವಾಲರ ಘೋಷಣೆ ಒಂದು ಗಿಮಿಕ್ ಅಷ್ಟೆ. ಸಬ್ಸಿಡಿ ಎಂದರೆ ಒಂದು ವರ್ಗದ ಜನರಿಗೆ ನೀಡಲಾಗುವ ಅನಿಗದಿತ ನಗದು ಮೊತ್ತ. ಸಬ್ಸಿಡಿಯ ಮೂಲಕ ಸರ್ಕಾರವು ಬೆಲೆಯಲ್ಲಿ ಇಳಿಕೆಯನ್ನೇನೂ ತರುವುದಿಲ್ಲ. ಚಾಲ್ತಿಯಲ್ಲಿರುವ ದರ ಮತ್ತು ಶುಲ್ಕಗಳೇ ಮುಂದುವರಿದಿರುತ್ತದೆ. ಸಬ್ಸಿಡಿಗಳನ್ನು ಹೆಚ್ಚಿಸುತ್ತಾ ಹೋದಷ್ಟು ತೆರಿಗೆಗಳನ್ನು ಹೆಚ್ಚು ಹೆಚ್ಚು ವಸೂಲು ಮಾಡಬೇಕಾಗುತ್ತದೆ. ನೀರಿನ ಸಬ್ಸಿಡಿ ಎಂಬುದು ವಾಸ್ತವದಲ್ಲಿ ದೆಹಲಿಯ ದುರ್ಬಲ ವರ್ಗವನ್ನು ಸಂಪೂರ್ಣ ಕಡೆಗಣಿಸಿರುವ ವಿದ್ಯಮಾನ. ಪೈಪ್‌ಲೈನ್‌ಗಳಿಲ್ಲದ ಪ್ರದೇಶಗಳು, ನಲ್ಲಿಗಳಿಲ್ಲದ ಮನೆಗಳು, ಮೀಟರ್‌ಗಳನ್ನು ಅಳವಡಿಸಿಕೊಳ್ಳದ ಸಮುಚ್ಚಯಗಳು, ದೋಷಪೂರಿತ ಮೀಟರ್ ಹೊಂದಿರುವವರು – ಇವರ‍್ಯಾರಿಗೂ ಸಬ್ಸಿಡಿ ಸಿಗುವುದೇ ಇಲ್ಲ. ಕಡಿಮೆ ವೇತನದ ನೌಕರರು, ದೆಹಲಿ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಮನೆಗಳು ನೀರಿನ ಸಬ್ಸಿಡಿಯನ್ನು ಪಡೆಯುವುದೇ ಇಲ್ಲ. ಅದು ಸಿಗುವುದು ಮೀಟರ್ ಹೊಂದಿರುವ ನೀರಿನ ಬಳಕೆ ಮಾಡುತ್ತಿರುವ ಒಂದು ಚಿಕ್ಕ ಸಮೂಹಕ್ಕೆ ಮಾತ್ರ. ಕೇಜ್ರಿವಾಲರ ಘೋಷಣೆಯ ಪ್ರಕಾರ, ದೆಹಲಿಯ ಕೇವಲ ೧೮ ಲಕ್ಷ ಜನಸಂಖ್ಯೆಗೆ ಮಾತ್ರ ಪುಕ್ಕಟೆ ನೀರು ಲಭ್ಯ. ಉಳಿದ ಅಸಂಖ್ಯಾತ ಜನರಿಗೆ ಈ ಸೌಲಭ್ಯ ಮರೀಚಿಕೆ. ಇದನ್ನು ಯಾವುದೇ ಮಾಧ್ಯಮವೂ ವಿಶ್ಲೇಷಿಸಿಲ್ಲ.

ಭ್ರಷ್ಟಾಚಾರದ ವಿಷಯದಲ್ಲಿ ತಮ್ಮ ಪಕ್ಷ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಕೇಜ್ರಿವಾಲರ ಇನ್ನೊಂದು ಘೋಷಣೆ. ಅದು ಎಷ್ಟರಮಟ್ಟಿಗೆ ನಿಜವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಈಗಂತೂ ಭ್ರಷ್ಟಾಚಾರಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿರುವುದು ಭ್ರಷ್ಟಾಚಾರ ವಿಷಯದಲ್ಲಿ ಎಎಪಿ ರಾಜಿ ಮಾಡಿಕೊಂಡಿದೆ ಎಂಬುದನ್ನು ತೋರಿಸುತ್ತದೆಯಲ್ಲವೆ?

ಪರಿವರ್ತನೆಯ ಪ್ರಯೋಗ ಹೊಸತಲ್ಲ

ಆಮ್‌ಆದ್ಮಿ ಪಕ್ಷ ದಿಢೀರನೆ ಚುನಾವಣೆಗೆ ಸ್ಪರ್ಧಿಸಿ, ಅಷ್ಟೇ ದಿಢೀರನೆ ಅಧಿಕಾರ ಹಿಡಿದಿರುವ ವಿದ್ಯಮಾನ ಯುವಜನತೆಯನ್ನು ಪುಳಕಿತಗೊಳಿಸಿದೆ. ಇದೆಲ್ಲ ದೇಶದಲ್ಲಿ ಮೊದಲ ಬಾರಿ ನಡೆಯುತ್ತಿದೆಯೇನೋ ಎಂಬಂತೆ ಮಾಧ್ಯಮಗಳೂ ಬಿಂಬಿಸಿವೆ. ಆಡಳಿತದಲ್ಲಿರುವ ಯಾವುದೇ ಪಕ್ಷ ಹದ್ದುಮೀರಿ ವರ್ತಿಸಿದಾಗ ಮತದಾರರು ರೋಸಿ ಹೋಗಿ ಬದಲಾವಣೆ ಬಯಸುವುದು ಸ್ವಾಭಾವಿಕ. ಅದು ಈಗ ಮಾತ್ರವಲ್ಲ , ೧೯೭೪ರಲ್ಲಿ ಗುಜರಾತ್‌ನಲ್ಲಿ ಸೋಲಂಕಿ ಸರ್ಕಾರದ ವಿರುದ್ಧ ನವನಿರ್ಮಾಣ ಆಂದೋಲನ ನಡೆದಿದ್ದೂ ಇದೇ ರೀತಿ. ಅದೇ ವರ್ಷ ಬಿಹಾರದ ಗಫೂರ್ ಮಂತ್ರಿಮಂಡಲದ ವಿರುದ್ಧ ನಡೆದಿದ್ದೂ ಕೂಡ ಭ್ರಷ್ಟಾಚಾರ ವಿರೋಧಿ ಆಂದೋಲನ. ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಿದ್ದು ಇದೇ ಹಿನ್ನೆಲೆಯಲ್ಲಿ. ಆಗಿನ ‘ಆಸು’ (ಂಟಟ ಂssಚಿm Sಣuಜeಟಿಣs Uಟಿioಟಿ) ಅನಂತರ ಅಸ್ಸಾಂ ಗಣ ಪರಿಷತ್ (ಎಜಿಪಿ) ಎಂಬ ರಾಜಕೀಯ ಪಕ್ಷವಾಗಿ ಪರಿವರ್ತನೆ ಹೊಂದಿ ಚುನಾವಣೆಗೆ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಪ್ರಫುಲ್ಲಕುಮಾರ್ ಮಹಂತ ಯುವ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು. ಅವರಿಗೆ ಆಗ ಮದುವೆ ಕೂಡ ಆಗಿರಲಿಲ್ಲ , ಅಷ್ಟೊಂದು ಚಿಕ್ಕ ವಯಸ್ಸು. ಆದರೆ ಆಮೇಲೇನಾಯಿತು ಎಂಬುದು ಈಗ ದುರಂತ ಇತಿಹಾಸ. ರಾಜಕೀಯದಲ್ಲಿ ಸ್ವಚ್ಛತೆ ತರುತ್ತೇವೆಂದು ಹೊರಟ ಎಜಿಪಿ ಮಂದಿ ತಾವೇ ಕೊಳಕು ವ್ಯವಸ್ಥೆಯ ಭಾಗವಾಗಿ, ಅನಂತರ ಜನರೇ ಛೀ, ಥೂ ಎಂದು ಹಳಿಯುವಷ್ಟು ಭ್ರಷ್ಟಾಚಾರದ ಕೊಳೆ ಮೆತ್ತಿಸಿಕೊಂಡರು. ೧೯೭೭ರಲ್ಲಿ ಇಂದಿರಾಗಾಂಧಿಯ ಸರ್ವಾಧಿಕಾರ ಧೋರಣೆಗೆ ಬೇಸತ್ತು ಜನತಾ ಪಕ್ಷವನ್ನು ಮತದಾರರು ಇದೇ ರೀತಿ ಗದ್ದುಗೆಗೇರಿಸಿದ್ದರು. ಅದು ನಿಜವಾಗಲೂ ಆಗ ಜನತೆಯ ಗೆಲುವಾಗಿತ್ತು. ಜಯಪ್ರಕಾಶ್ ನಾರಾಯಣರ ಸಮ್ಮುಖದಲ್ಲಿ ಜನತಾ ಪಕ್ಷದ ಮುಖಂಡರು ಗಾಂಧಿ ಸಮಾಧಿಯ ಮುಂದೆ ‘ಸ್ವಹಿತಕ್ಕಾಗಿ ರಾಷ್ಟ್ರ ಹಿತವನ್ನು ಬಲಿ ಕೊಡುವುದಿಲ್ಲ’ ಎಂದು ಪ್ರಮಾಣ ಬೇರೆ ಮಾಡಿದ್ದರು. ಭಾರತದ ರಾಜಕೀಯ ಇತಿಹಾಸಕ್ಕೆ ಹೊಂಗಿರಣದ ಹೊಸ ದಿಕ್ಕು ಸಿಕ್ಕಿತೆಂದೇ ಜನತೆ ಭಾವಿಸಿದ್ದರು. ಆದರೆ ಜನತೆ ಕೊಟ್ಟ ಅಧಿಕಾರ ಕೊನೆಗೂ ವ್ಯರ್ಥವಾಯಿತು. ಜನತಾ ಪಕ್ಷ ಹೋಳಾಗಿ, ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಆಳ್ವಿಕೆಗೆ ದಾರಿಯಾಯಿತು.

ಈಗಲೂ ಅಷ್ಟೆ. ದೆಹಲಿಯಲ್ಲಿ ಹೊಸದೊಂದು ಸರ್ಕಾರ ಬಂದ ಮಾತ್ರಕ್ಕೆ ರಾಜಕೀಯ ಪರಿವರ್ತನೆ ಆಗಿದೆ ಎಂದು ಭ್ರಮಿಸುವುದು ಶುದ್ಧ ದಡ್ಡತನ. ಇಂಥ ಪರಿವರ್ತನೆಯ ಪ್ರಯೋಗಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಆ ಪ್ರಯೋಗಗಳು ಎಷ್ಟರಮಟ್ಟಿಗೆ ಯಶಸ್ವಿಯಾಗಿವೆ ಎಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸದಿದ್ದರೆ ನಾವು ಮೂರ್ಖರಾಗುತ್ತೇವೆ.

ಸಮಗ್ರ ದೃಷ್ಟಿ ಬೇಡವೆ?

ಇಷ್ಟಕ್ಕೂ ಆಮ್‌ಆದ್ಮಿ ಪಕ್ಷ ಜನಸಾಮಾನ್ಯರಿಗೆ ಸುಖೀ ಜೀವನ ಒದಗಿಸುತ್ತೇವೆಂದು ಭರವಸೆ ನೀಡಿದ ಮಾತ್ರಕ್ಕೆ ಅದು ಇಡೀ ದೇಶವನ್ನೇ ಯಶಸ್ವಿಯಾಗಿ ಆಳಬಲ್ಲದೆಂದು ಭಾವಿಸುವುದು ತಪ್ಪು ಲೆಕ್ಕಾಚಾರವಾಗುತ್ತದೆ. ಜನರಿಗೆ ಕುಡಿಯುವ ನೀರು, ಇರಲೊಂದು ಸೂರು, ಬೀದಿ ದೀಪ, ಉಚಿತ ಶಿಕ್ಷಣ ಇತ್ಯಾದಿ ಸೌಲಭ್ಯ ಒದಗಿಸಿದರೆ ಸಾಮಾನ್ಯ ಜನರ ದೃಷ್ಟಿಯಲ್ಲಿ ಅದೊಂದು ಜನಪರ ಸರ್ಕಾರ ಎನಿಸಿಕೊಳ್ಳಬಹುದು. ಆದರೆ ಸರ್ಕಾರವೊಂದಕ್ಕೆ ಅದಷ್ಟೇ ಅಲ್ಲದೆ, ಅದಕ್ಕೂ ಮೀರಿದ ಗುರುತರ ಜವಾಬ್ದಾರಿಗಳಿವೆ ಎಂಬುದನ್ನು ಮರೆತರೆ ಹೇಗೆ? ದೇಶವನ್ನು ಕಾಡುತ್ತಿರುವ ಹಣದುಬ್ಬರ, ಭಯೋತ್ಪಾದನೆ, ಗಡಿಗಳ ಸುರಕ್ಷತೆ, ಅಕ್ರಮ ನುಸುಳುಕೋರರ ನಿಯಂತ್ರಣ ಮುಂತಾದ ಗಂಭೀರ ಸವಾಲುಗಳಿಗೆ ಎಎಪಿ ಬಳಿ ಯಾವುದೇ ಪರಿಹಾರದ ಉತ್ತರವಿಲ್ಲ. ಎಎಪಿ ಪ್ರಣಾಳಿಕೆಯಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖವೂ ಇಲ್ಲ. ಮೊನ್ನೆ ಚುನಾವಣೆಯಲ್ಲೂ ಆ ಪಕ್ಷ ಸಮಾಜವಾದಿ ಪಕ್ಷದವರಂತೆ ಅಮಾಯಕ ಮುಸ್ಲಿಮರ ಮೇಲಿನ ಕೇಸು ರದ್ದುಗೊಳಿಸುತ್ತೇವೆಂದು ಭರವಸೆ ನೀಡಿದೆ. ಇದು ಎಂತಹ ಜಾತ್ಯತೀತ ನೀತಿ? ಮುಸ್ಲಿಮರಷ್ಟೇ ಎಎಪಿಗೆ ಓಟು ಕೊಟ್ಟರೆ ಸಾಕೆ? ಹಿಂದುಗಳ ಸಮಸ್ಯೆ ಬಗ್ಗೆ ಹಾಗಿದ್ದರೆ ಎಎಪಿ ನಿಲುವೇನು? ಒಂದೊಮ್ಮೆ ದೆಹಲಿಯ ಮೇಲೆ ಪಾಕ್ ಭಯೋತ್ಪಾದಕರ ದಾಳಿ ನಡೆದು, ಭಾರೀ ಹಿಂಸಾಚಾರವಾದರೆ ಅದಕ್ಕೇನು ಪರಿಹಾರ? ಕೇಜ್ರಿವಾಲ್ ಬಳಿ ಖಂಡಿತ ಈ ಪ್ರಶ್ನೆಗಳಿಗೆ ತಕ್ಷಣದ ಉತ್ತರ ಇರಲಿಕ್ಕಿಲ್ಲ.

ಇನ್ನೂ ತಮಾಷೆಯೆಂದರೆ, ಎಎಪಿಯಿಂದ ಗೆದ್ದು ಬಂದವರೆಲ್ಲ ಸಾಚಾಗಳೇನೂ ಅಲ್ಲ. ಎಎಪಿ ಶಾಸಕರಲ್ಲಿ ೧೦ಕ್ಕೂ ಹೆಚ್ಚು ಮಂದಿ ಕ್ರಿಮಿನಲ್ ಆರೋಪ ಹೊತ್ತವರಿದ್ದಾರೆ. ಕಾಂಗ್ರೆಸ್, ಬಿಜೆಪಿ, ಆರ್‌ಜೆಡಿ ಪಕ್ಷಗಳಲ್ಲಿ ಸ್ಥಾನಮಾನ ಸಿಗದ ಭ್ರಷ್ಟ , ಅತೃಪ್ತ ವ್ಯಕ್ತಿಗಳು ಎಎಪಿ ಟಿಕೆಟ್ ಪಡೆದು ಗೆದ್ದವರಿದ್ದಾರೆ. ಇಲ್ಲೂ ಸೂಕ್ತ ಸ್ಥಾನಮಾನ ಸಿಗದಿದ್ದರೆ ಅವರು ನಾಳೆ ಮತ್ತೊಂದು ಪಕ್ಷದತ್ತ ಗುಳೇ ಹೋಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಇಂಥವರಲ್ಲಿ ಯಾವ ವೈಚಾರಿಕ, ಸೈದ್ಧಾಂತಿಕ ಬದ್ಧತೆ ಇರಲು ಸಾಧ್ಯ?

ಮಾಧ್ಯಮಗಳ ಭಟ್ಟಂಗಿತನ

ಮಾಧ್ಯಮಗಳಂತೂ ಆಮ್‌ಆದ್ಮಿ ಪಕ್ಷದ ನಾಯಕರನ್ನು ಧರೆಗಿಳಿದ ದೇವತೆಗಳೆಂದೇ ಬಿಂಬಿಸುತ್ತಿರುವುದು ಬೌದ್ಧಿಕ ದಿವಾಳಿತನವಲ್ಲದೆ ಮತ್ತೇನು? ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತೀವ್ರ ಜ್ವರ, ಬೇಧಿಯಿಂದ ನರಳಿದ್ದು, ಎಎಪಿ ಸಚಿವರು ಇಡೀ ದಿನ ಏನೇನು ಮಾಡಿದರು… ಇತ್ಯಾದಿ ಚಿಕ್ಕಪುಟ್ಟ ವೈಯಕ್ತಿಕ ಮಾಹಿತಿಗಳನ್ನೂ ಬೆನ್ನುಹತ್ತಿ ವರದಿ ಮಾಡಿದ ಮಾಧ್ಯಮಗಳಿಗೆ, ಅತ್ತ ಜೈಪುರದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ಇಡೀ ದಿನ ಜನಪರ ಕಾರ್ಯ ನಿರ್ವಹಿಸಿದ್ದಾಗಲಿ, ಮಧ್ಯಪ್ರದೇಶ, ಛತ್ತೀಸ್‌ಗಢ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸಿದ ಬಳಿಕ ಏನೇನು ಮಾಡಿದರು ಎಂಬುದನ್ನು ವರದಿ ಮಾಡುವ ವ್ಯವಧಾನವಾಗಲೀ ಇರಲಿಲ್ಲ. ಮಾಧ್ಯಮಗಳ ಪಕ್ಷಪಾತ ನಿಲುವಿಗೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?

ಕೇಜ್ರಿವಾಲ್ ಅವರನ್ನು ಇಂದ್ರಚಂದ್ರ ದೇವೇಂದ್ರನೆಂದು ಹೊಗಳಿ ಅಟ್ಟಕ್ಕೇರಿಸುವ ಮಾಧ್ಯಮಗಳು ಅವರ ಹಿನ್ನೆಲೆಯನ್ನು ಮಾತ್ರ ಬೇಕೆಂದೇ ಬಹಿರಂಗಪಡಿಸುತ್ತಿಲ್ಲ. ಅಣ್ಣಾ ಹಜಾರೆ ಆಂದೋಲನದ ಮೂಲಕ ರಾಜಕೀಯ ಲಾಭ ಮಾಡಿಕೊಂಡ ಕೇಜ್ರಿವಾಲ್ ಅದಕ್ಕೂ ಮುನ್ನ ‘ಕಬೀರ್’ ಎಂಬ ಎನ್‌ಜಿಒ ಸ್ಥಾಪಿಸಿ, ಅದಕ್ಕೆ ಅಮೆರಿಕದ ಫೋರ್ಡ್ ಫೌಂಡೇಶನ್‌ನಿಂದ ೨೦೦೭ರಿಂದ ೨೦೧೧ರವರೆಗೆ ಒಟ್ಟು ೩,೯೭,೦೦೦ ಅಮೆರಿಕನ್ ಡಾಲರ್ ವಂತಿಗೆ ಪಡೆದ ವಿಷಯ ಅದೆಷ್ಟು ಜನರಿಗೆ ಗೊತ್ತು? ಅಷ್ಟೊಂದು ಭಾರೀ ಮೊತ್ತದ ಹಣ ಪಡೆದ ಕಬೀರ್ ಸಂಸ್ಥೆ ಕಡಿದು ಕಟ್ಟೆ ಹಾಕಿದ್ದಾದರೂ ಏನನ್ನು? ಆಮ್‌ಆದ್ಮಿ ಪಕ್ಷಕ್ಕೆ ವಿದೇಶಗಳಿಂದ ಹಣದ ಹೊಳೆಯೇ ಹರಿದು ಬರುತ್ತಿದೆ. ಈ ಬಗ್ಗೆ ತನಿಖೆ ಮಾಡುತ್ತೇವೆಂದು ಕೇಂದ್ರ ಗೃಹಸಚಿವ ಸುಶೀಲ್‌ಕುಮಾರ್ ಶಿಂಧೆ ಕಳೆದ ನ.೧೧ರಂದು ಹೇಳಿಕೆ ನೀಡಿದ್ದರು. ಆದರೆ ಆ ತನಿಖೆ ಎಲ್ಲಿಗೆ ಬಂದಿದೆಯೋ ಗೊತ್ತಿಲ್ಲ.

ಅಮೆರಿಕದ ಒಳಸಂಚು

ವಿದೇಶಗಳಿಂದ ಭಾರೀ ಮೊತ್ತದ ಹಣ ಪಡೆದು, ದಿಲ್ಲಿಯಲ್ಲಿ ಸರ್ಕಾರ ರಚಿಸಿರುವ ಕೇಜ್ರಿವಾಲ್ ಯಾರ ಆಣತಿಯಂತೆ ವರ್ತಿಸುತ್ತಿದ್ದಾರೆ ಎಂಬುದನ್ನೂ ತಿಳಿಯುವ ಅಗತ್ಯವಿದೆ. ರಾಹುಲ್ ಗಾಂಧಿಗೆ ಪರ್ಯಾಯವಾಗಿ ನರೇಂದ್ರ ಮೋದಿ ಅವರ ಹೆಸರು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಘೋಷಣೆಯಾಗುತ್ತಿದ್ದಂತೆ ಇಡೀ ದೇಶದ ಜನಮಾನಸದಲ್ಲಿ ಅದ್ಭುತ ಸಂಚಲನ ಆಗಿದ್ದು ನಿಜ. ಆದರೆ ಮೋದಿ ಪ್ರಧಾನಿಯಾಗುವುದು ಅಮೆರಿಕ ಸರ್ಕಾರಕ್ಕೆ ಬೇಕಾಗಿಲ್ಲ. ಈ ಹಿಂದೆಯೇ ಅದು ಮೋದಿಗೆ ವೀಸಾ ನಿರಾಕರಿಸಿತ್ತು. ಮೋದಿ ವಿರುದ್ಧ ಸಾಕಷ್ಟು ಅಪಪ್ರಚಾರವನ್ನೂ ಮಾಡಿತ್ತು. ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಗಳಿಸುತ್ತಿರುವ ಜನಪ್ರಿಯತೆಗೆ ಕಡಿವಾಣ ಹಾಕಲೆಂದೇ ಅಮೆರಿಕ ಅರವಿಂದ ಕೇಜ್ರಿವಾಲ್ ಎಂಬ ೪೫ ವರ್ಷದ ಮಾಜಿ ಸರ್ಕಾರಿ ಅಧಿಕಾರಿಗೆ ಮಣೆ ಹಾಕುತ್ತಿದೆ ಎಂಬ ಸಂಶಯ ಈಗ ದಟ್ಟವಾಗಿದೆ. ಮೋದಿ ಪ್ರಭಾವ ತಗ್ಗಿಸಿ, ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವ ಹುನ್ನಾರ ಇದರ ಹಿಂದಿದೆ. ಭಾರತದಲ್ಲಿ ಕಾಂಗ್ರೆಸ್ ವಿರುದ್ಧ ಎದ್ದಿರುವ ಜನಾಕ್ರೋಶದ ಲಾಭ ಮೋದಿಗೆ ದೊರಕಬಾರದು. ಅವರನ್ನು ಹೊರತುಪಡಿಸಿದ ಇನ್ನೊಬ್ಬ ವ್ಯಕ್ತಿಗೆ ದೊರಕಬೇಕು ಎಂಬುದು ಅಮೆರಿಕದ ಲೆಕ್ಕಾಚಾರ. ಯಾವುದೇ ದೇಶದಲ್ಲಿ ಆಗುವ ಪರಿವರ್ತನೆ ತನ್ನ ಮರ್ಜಿಗೆ ತಕ್ಕಂತೆಯೇ ಇರಬೇಕು ಎಂಬುದು ಅಮೆರಿಕದ ದೊಡ್ಡಣ್ಣನ ಇರಾದೆ.

ಸಾಮಾನ್ಯರ ಗಮನಕ್ಕೇ ಬಾರದ ಈ ಒಳಗಿನ ಸಂಗತಿಗಳನ್ನೆಲ್ಲ ದೇಶದ ಪ್ರಜ್ಞಾವಂತ ಜನತೆ ತಿಳಿಯಬೇಕಾಗಿದೆ. ವಿದೇಶೀ ಹಣ ಪಡೆಯುವ ವ್ಯಕ್ತಿ ನಮಗೆ ಬೇಕೆ ಅಥವಾ ವಿದೇಶೀ ನೆರವು ಪಡೆಯದ, ಈ ನೆಲದ ಸಂಸ್ಕೃತಿ, ಪರಂಪರೆಗಳನ್ನು ಎತ್ತಿಹಿಡಿಯುವ ನಿಷ್ಠಾವಂತ ದೇಶಪ್ರೇಮಿಯೊಬ್ಬ ಮುಂದಿನ ಪ್ರಧಾನಿಯಾಗಬೇಕೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಹುಡುಕಬೇಕಾದ ಹೊಣೆಗಾರಿಕೆ ಪ್ರಜ್ಞಾವಂತ ಮತದಾರರದ್ದು. ಕೇಜ್ರಿವಾಲ್ ಕ್ರೇಜಿಗೆ ಮರುಳಾಗಿ, ಈ ವಿಷಯದಲ್ಲಿ ಅವರು ಎಡವಿದರೆ ದುರಂತ ತಪ್ಪಿದ್ದಲ್ಲ.

ಬ್ಲರ್ಬ್: ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಇಂದ್ರಚಂದ್ರ ದೇವೇಂದ್ರನೆಂದು, ಧರೆಗಿಳಿದು ಬಂದ ದೇವತೆಯೆಂದು ಹೊಗಳಿ ಅಟ್ಟಕ್ಕೇರಿಸುವ ಮಾಧ್ಯಮಗಳು ಅವರ ಹಿನ್ನೆಲೆಯನ್ನೇಕೆ ಬಹಿರಂಗಪಡಿಸುತ್ತಿಲ್ಲ? ಅಮೆರಿಕದ ಫೋರ್ಡ್ ಫೌಂಡೇಶನ್ನಿನಿಂದ ೩,೯೭,೦೦೦ ಡಾಲರ್ ವಂತಿಗೆ ಪಡೆದ ಕೇಜ್ರಿವಾಲ್ ಯಾರ ಆಣತಿಯಂತೆ ವರ್ತಿಸುತ್ತಿದ್ದಾರೆ? ಮೋದಿಗೆ ಅಡ್ಡಗಾಲಾಗಿ ಕೇಜ್ರಿವಾಲರನ್ನು ಅಮೆರಿಕ ಎತ್ತಿಕಟ್ಟುತ್ತಿದೆಯೆ? ಈ ಸಂಶಯಗಳು ಈಗ ಹೊಗೆಯಾಡುತ್ತಿವೆ.

 

Leave a Reply

Your email address will not be published.

This site uses Akismet to reduce spam. Learn how your comment data is processed.