ಎಂದು ಕೊನೆ ಇಂತಹ ಸಾವಿಗೆ ?
ಕೇವಲ ಎರಡು ಜನ ಉಗ್ರರು ಐದು ಜನ ಸೈನಿಕರನ್ನು ಕೊಂದರೆಂದರೆ ನಮ್ಮ ಸೈನಿಕರದ್ದು ಎಂತಹ ಸಾವಾಗಿರಬೇಕು ?? ಎಂದಾದರೂ ಯೋಚಿಸಿದ್ದೇವೆಯೇ? ಕೈಯಲ್ಲಿ ಉಗ್ರರು ಆಧುನಿಕ ಮೆಷೀನ್ ಗನ್ನುಗಳನ್ನೂ ಹಿಡಿದು ಬಂದರೆ , ಭಾರತೀಯ ಸೈನಿಕನಲ್ಲಿ ಎಂತಹ ಗನ್ನುಗಳಿರುತ್ತವೆ ಎಂದು ಗಮನಿಸಿದ್ದೆವೆಯೇ?? ನಮ್ಮ ಮುಗ್ಧ ಯೋಧರ ಎದೆಯಲ್ಲಿ ಅಗಾಧ ದೇಶಪ್ರೇಮವನ್ನು ಬಿತ್ತಿ , ಅದನ್ನು ಬೆಳೆಸಿ ಹೆಮ್ಮರ ವಾಗಿಸಿ , ಕೈಯಲ್ಲಿ ಸರಿಯಾದ ಗನ್ನುಗಳನ್ನೂ ಕೊಡದೆ, ಎದೆಗೆ ರಕ್ಷಾ ಕವಚಗಳನ್ನು ನೀಡದೆ , ಯುದ್ದಕ್ಕೆ ನಿಲ್ಲಿಸಿ ಬಿಡುತ್ತೆವಲ್ಲ ಇದಾವ ನ್ಯಾಯ ?
ಸೈನಿಕರನ್ನು ಕೊಲ್ಲಲು ಬಿಟ್ಟು, ಸತ್ತಮೇಲೆ ಪರಮವೀರ ಚಕ್ರ ಕೊಡುವ ಸರ್ಕಾರ ಬಹುಶಃ ಯಾವ ದೇಶದಲ್ಲೂ ಇಲ್ಲ. ನಮ್ಮ ನೆಲದಲ್ಲೇ ನಮ್ಮ ಸೈನಿಕರ ಹತ್ಯೆ ನಡೆಯುತ್ತದಲ್ಲ ಇದಕ್ಕಿಂತ ವಿಪರ್ಯಾಸ ಎಲ್ಲಾದರೂ ಉಂಟೇ ?? ಕಟ್ಟ ಕಡೆಗೆ ಸೈನಿಕ ಸತ್ತಿದ್ದಾನೆ , ಅವನದು ಮಾತೃ ಭಕ್ತಿ , ನೆಲದ ಮಣ್ಣಿನ ಪ್ರೀತಿ , ಎಲ್ಲವೂ ಸರಿ , ಆದರೇ ಅದನ್ನು ತೋರಿಸಲು ಸಾಯಲೇ ಬೇಕಿತ್ತೆ?? ಅಥವಾ ಆ ಸಾವು ಅನಿವಾರ್ಯವಾಗಿತ್ತೆ ??
ಎಂದು ಕೊನೆ ಈ ಸಾವಿಗೆ ?? 1947 ರಿಂದಲೂ ನಮ್ಮ ಸೈನಿಕರು ಸಾಯುತ್ತಲೇ ಇದ್ದಾರೆ ನಮ್ಮ ಸೈನಿಕನಿಗೆ , ಅವನ ವೀರಾವೇಶಕ್ಕೆ , ಅವನ ಆತ್ಮ ಸ್ತೈರ್ಯಕ್ಕೆ , ಅವನ ಮಣ್ಣಿನ ಪ್ರೀತಿಗೆ , ಸರ್ಕಾರ ಕೊಟ್ಟಿದ್ದಾದರೂ ಏನು ? ನಮ್ಮ ಸೈನಿಕರ ಆಲೋಚನೆಯನ್ನೇಕೆ ಬದಲು ಮಾಡಲಾಗದು ?? ನೀನು ಹೊರಟಿರುವುದು ವೀರಮರಣವನ್ನೊಪ್ಪಲು ಅಲ್ಲ , ನಿನ್ನನ್ನು ಕಳುಹಿಸುತ್ತಿರುವುದು , ಸಾಯಲಿ ಎಂದಲ್ಲ , ಸಾಯಿಸು ಎಂದು . ನಿನಗೆ ಮುಕ್ತ ಅವಕಾಶವಿದೆ , ದೇಶದ್ರೋಹಿಗಳನ್ನು ಸದೆ ಬಡಿ ಎಂದು ಯಾಕೆ ಆತನಿಗೆ ತಿಳಿಸಬಾರದು ??
ಮೊನ್ನೆ ನನ್ನ ಎರಡು ಸಹೋದರರ ತಲೆ ಕಡಿದು ಹೋದಾಗ ಸರ್ಕಾರವಾಗಲಿ , ಸೈನ್ಯ ವಾಗಲಿ ಮಾತನಾಡಲೇ ಇಲ್ಲ . ನಿನ್ನೆ ಮತ್ತದೇ ಉಗ್ರರ ಗುಂಡಿಗೆ ಐದು ಸಹೋದರರು ಸತ್ತಾಗಲೂ ಯಾರೊಬ್ಬರೂ ಮಾತನಾಡಲಿಲ್ಲ , ಹಾಗಾದರೆ ಕಾಂಗ್ರೆಸ್ ಸರ್ಕಾರ ಪಾಕಿಸ್ತಾನದ ಪರವಾಗಿ ಭಾರತದಲ್ಲಿ ಆಡಳಿತ ನಡೆಸುತ್ತಿದೆಯೇ ?? ನಮ್ಮ ಸೈನ್ಯವೆಕೆ ಇಷ್ಟೊಂದು ಮೌನವಾಗಿ ಕುಳಿತು ಬಿಟ್ಟಿದೆ , ಎಷ್ಟೊಂದು ರಾಷ್ಟ್ರಗಳಲ್ಲಿ ಸರ್ಕಾರ ಆಡಳಿತ ನಡೆಸಲು ವಿಫಲವಾಗುತ್ತಿದ್ದಂತೆ ಸೈನ್ಯ ತಾನೇ ದೇಶವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ , ನನ್ನ ತಾಯ್ನಾಡಿನಲ್ಲೇಕೆ ಸೈನ್ಯ ವೈರಿಗಳಿಗೆ ತಕ್ಕ ಉತ್ತರ ನೀಡುತ್ತಿಲ್ಲ , ಎಂದೂ ವೈರಿಗಳು ಭಾರತದ ಕಡೆ ತಲೆಹಾಕದಂತೆ ಮಾಡಲಾಗುತ್ತಿಲ್ಲ, ಸೈನ್ಯವೇಕೆ ಹೇಡಿ ಸರಕಾರದ ಅಡಿಯಾಳಾಗಿದೆ??
ನನ್ನ ಸಹೋದರರು ಸತ್ತಾಗ ಅವರ ಕೈಯಲ್ಲಿ ಸರಿಯಾದ ಆಯುಧವಿರಲಿಲ್ಲ , ಅದೇಶವಿರಲಿಲ್ಲ , ಸಂದೇಹ ಬಂದಾಗ ಅಂತಹ ವ್ಯಕ್ತಿಗಳನ್ನು ವಿಚಾರಿಸಲು ಅನುಮತಿಯಿರಲಿಲ್ಲ , ನಮ್ಮ ನೆಲದ ಅನ್ನವುಂಡು ನಮ್ಮನೆಲದ ನೀರು ಕುಡಿದು ನಮ್ಮವರನ್ನೇ ಗುಂಡಿಟ್ಟು ಸಾಯಿಸಿದರೂ ಮೌನವಾಗಿರುವ ನಾವು ನಮ್ಮ ವೀರ ಯೋಧರಿಗೆ ಕೊಡುವ ಗೌರವವೆಂಥದ್ಧು?
ತಾಯಿ ಶಾರದೆಯ ಶ್ರದ್ದೆಯ ಕೇಂದ್ರ, ತಂದೆ ಶಿವನ ವಾಸಸ್ತಾನ , ಜಗತ್ತಿಗೆ ಶಾಂತಿಯನ್ನು , ನೆಮ್ಮದಿಯನ್ನು ನೀಡುತ್ತಿದ್ದ , ಋಷಿ ಪರಂಪರೆಯ ಬೀಡಾಗಿದ್ದ ಕಾಶ್ಮೀರ ಹೇಗೆ ಉಗ್ರರ ತಾಣವಾಯಿತು?? ನಮಗೆಲ್ಲರಿಗೂ ಆತ್ಮ ಸಾಕ್ಷಿ ಕೆಲಸಮಾಡುತ್ತಿಲ್ಲವೇಕೆ? ನಮ್ಮ ಸಂಸ್ಕೃತಿ ಸಂಸ್ಕಾರಗಳ , ಜ್ಞಾನದ ಮೂಲಕ್ಕೆ ಹೊಡೆತ ಬಿದ್ದಾಗಲು ನಾವೇಕೆ ಮೂಕ ಪ್ರೇಕ್ಷಕರಾಗಿದ್ದೇವೆ??
ಇನ್ನೆಷ್ಟು ಬಲಿ ಬೇಕು ತಾಯ್ನೆಲದ ರಕ್ಷಣೆಗೆ ?? ನಮ್ಮ ಸೈನಿಕರಿಗೆ ಸಿಗುತ್ತಿರುವುದು ನಾಯಿಯ ಸಾವಲ್ಲದೇ ಮತ್ತಿನ್ನೇನು??, ಕೈಯಲ್ಲಿ ಆಯುಧವಿಲ್ಲದೇ, ಆಜ್ಞೆಯಿಲ್ಲದೇ ಶತ್ರುಗಳ ಗುಂಡಿಗೆ ಗುಂಡಿಗೆಯನ್ನಿಟ್ಟು ಮಲಗಿಬಿಡುತ್ತಾರಲ್ಲ ಇದು ವೀರ ಮರಣವೇ ?? ನನ್ನ ಪ್ರಕಾರ ಇದು ಸರ್ಕಾರವೇ ನೀಡಿದ ಸಾವು , ಹೇಗೆ ಬಂದರು ಉಗ್ರರು ಒಳಗೆ ?? ಅವಕಾಶ ಕೊಟ್ಟವರಾರು ?? ನನ್ನ ಸಹೋದರ ಸೈನಿಕರು ಸತ್ತಾಗ ಹೊಣೆ ಹೊರಬೇಕಾದ್ದು ಯಾವ ಇಸ್ಲಾಂ ಸಂಘಟನೆಯೂ ಅಲ್ಲ, ಅದು ಭಾರತದ ಕಾಂಗ್ರೆಸ್ ಸರ್ಕಾರ . ಜೀವದ ಬೆಲೆಯೇ ಗೊತ್ತಿಲ್ಲವೇ ಆಳುತ್ತಿರುವವರಿಗೆ ?? ಇಂತಹ ಹತ್ಯೆಗಳಾಗುತ್ತಿರುವುದು ಇಂದು ನಿನ್ನೆಯಲ್ಲ ಸುಮಾರು 70 ವರ್ಷಗಳಿಂದ .
ಯಾವತ್ತಾದರೂ ಮಡಿದ ಸೈನಿಕರ ಮನೆಯವರ ಕಣ್ಣಿರನ್ನು ಒರೆಸಿದ್ದಿರಾ?? ಅವರ ಕೂಗನ್ನು ಆಲಿಸಿದ್ದೀರಾ?? ಅಂತಹ ನೋವಿನ ಅನುಭವವಾಗಿದೆಯೆ ನಮಗೆ ? ಒಂದು ಚಿಕ್ಕ ಪಿನ್ ಚುಚ್ಚಿದಾಗ ಸಂಕಟ ಪಡುವ ನಾವುಗಳು , ಗುಂಡೇಟು ತಿನ್ನುವವರನ್ನೂ , ಅವರ ನೋವನ್ನೂ , ಅವರ ನಿಷ್ಟೆಯನ್ನು ಎಂದಾದರೂ ಗಮನಿಸಿದ್ದೇವೆಯೇ?? ಸೈನ್ಯಕ್ಕೆ ಸೇರಿದರೆ ಅವರ ಬದುಕು ಮುಗಿದಿದೆ ಎಂದಲ್ಲವಲ್ಲ ?? ಅವರ ಆಸೆ ಆಕಾಂಕ್ಷೆಗಳಿಗೆ ತಿಲಾಂಜಲಿ ಹಾಕಬೇಕೆಂದೆನಿಲ್ಲವಲ್ಲ . ಒಮ್ಮೆ ಈ ಸಾವಿನ ಸರಣಿಗೆ ವಿದಾಯ ವೇಕೆ ಹೇಳಬಾರದು ? ?
ಎಂದು ಕೊನೆ ಇಂತಹ ಸಾವಿಗೆ ?? ಇನ್ನೆಷ್ಟು ಹೆಣಗಳು ಉರುಳಬೇಕು ಈ ತಾಯ್ನಾಡಿಗೆ?? ಎಂದು ಸಿಗುವುದು ನೆಮ್ಮದಿಯ ಬದುಕು ನನ್ನ ವೀರ ಸಹೋದರನಿಗೆ ?? ಇದ್ದಾಗ ಬೆಲೆ ಕೊಡದೆ ಸತ್ತಾಗ ಶಾಲು ಹೊದೆಸಿದರೇನು ಫಲ ?? ಶ್ರದ್ಧಾಂಜಲಿ ಇಟ್ಟರೇನು ಫಲ ?? ಎಷ್ಟು ಅತ್ತರೇನು ಫಲ ?? ಸಮಾಧಿ ನಿರ್ಮಿಸಿದರೇನು
ಫಲ ?? ಪಾರ್ಕ್ ಕಟ್ಟಿದರೇನು ಫಲ ?? ರಸ್ತೆ ಗೆ ಬೋರ್ಡ್ ಹಾಕಿದರೇನು ಫಲ ?? ಪುತ್ಥಳಿ ನಿರ್ಮಿಸಿದರೇನು ಫಲ ?? ಪರಮವೀರ ಕೊಟ್ಟರೇನು ?? ಪದ್ಮಶ್ರೀ ಕೊಟ್ಟರೇನು ?? ಹುತಾತ್ಮ ಅಂದರೇನು ?? ಎಷ್ಟು ಲಕ್ಷ ನೀಡಿದರೇನು ? ಅವನೇ ಇಲ್ಲವಾದಮೇಲೆ ? ಯಾರಿಗಿದನ್ನು ನೀಡಿ ಸಂತೈಸೋಣ ? ಇನ್ನೊಬ್ಬ ಸೈನಿಕ ಸಾಯುವುದನ್ನು ತಡೆಯದ ನಾವು-ನೀವು !!.
-ಗುರುಗಜಾನನ ಭಟ್