ಸಂತ ಕಬೀರರು ಈ ರಾಷ್ಟ್ರ ಕಂಡಂತಹ ಪ್ರಮುಖ ಕವಿ, ಸಮಾಜ ಸುಧಾರಕ ಮತ್ತು ಶ್ರೇಷ್ಠ ಚಿಂತಕರು. ಇವರು ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿ ಹರಡಿದ್ದ ಅನಿಷ್ಟ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದವರು. ತಮ್ಮ ದ್ವಿಪದಿಗಳ ಮೂಲಕ ಜೀವನದ ಅನೇಕ ಪಾಠಗಳನ್ನು ತಿಳಿಸಿಕೊಟ್ಟವರು. ಇವರ ಬರಹಗಳು ಭಕ್ತಿ ಚಳುವಳಿಯ ಮೇಲೆ ಮಹತ್ತರ ಪ್ರಭಾವಬೀರಿದೆ. ಇಂದು ಅವರ ಜಯಂತಿ.


ಪರಿಚಯ
ಸಂತ ಕಬೀರದಾಸರ ಜನನದ ವರ್ಷದ ಕುರಿತು ಚರ್ಚೆಗಳಿದ್ದು ಬಹುತೇಕ ವಿದ್ವಾಂಸರು ಸಾಮಾನ್ಯ ಶಕ ವರ್ಷ 1398 ರಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದರು ಎನ್ನುವುದನ್ನು ತಿಳಿಸುತ್ತವೆ. ವೃತ್ತಿಯಲ್ಲಿ ನೇಕಾರರಾಗಿದ್ದ ಮುಸ್ಲಿಂ ದಂಪತಿಗಳು ಅವರನ್ನು ಬೆಳೆಸಿದರು. ಸಂತ ಕಬೀರದಾಸರು ಚಿಕ್ಕ ವಯಸ್ಸಿನಲ್ಲಿಯೇ  ಆಧಾತ್ಮದೆಡೆಗೆ ಹೆಚ್ಚು ಒಲವು ತೋರಿದರು. ತಮ್ಮ ಗುರುಗಳಾದ ರಮಾನಂದರಿಂದ ಆಧ್ಯಾತ್ಮಿಕ ಮಾರ್ಗದರ್ಶನ ಪಡೆದರು. ಅವರು ಯಾವುದೇ ಧಾರ್ಮಿಕ ತಾರತಮ್ಯಗಳನ್ನು ನಂಬುತ್ತಿರಲಿಲ್ಲ. ಏಕೆಂದರೆ ಎಲ್ಲಾ ಧರ್ಮಗಳೂ ಆರಾಧಿಸುವ ಪರಮಾತ್ಮ ಒಬ್ಬನೇ ಎಂಬುದು ಅವರ ನಿಲುವಾಗಿತ್ತು.

ದೇಶದಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿರುವ ಸಾಮಾಜಿಕ ಜಾತಿ ಬೇಧದ ವಿರುದ್ಧ ಹೋರಾಡುತ್ತಿದ್ದರು. ಕಬೀರದಾಸರದ್ದು ಎಲ್ಲರನ್ನು ಪ್ರೀತಿಸುವುದು ಪ್ರಧಾನ ತತ್ವವಾಗಿತ್ತು. ದ್ವೇಷ ಎಂದಿಗೂ ಮನುಕುಲವನ್ನು ಒಟ್ಟಿಗೆ ಜೋಡಿಸಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ದ್ವೇಷವನ್ನು ತೊರೆದು ಒಬ್ಬರಿಗೊಬ್ಬರು ಪ್ರೀತಿಯನ್ನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕಬೀರರ ಕೆಲವು ದೋಹೆಗಳು

ವೃಕ್ಷಕ್ಕಲ್ಲ ವೃಕ್ಷದ ಫಲವು, ನದಿಯ ನೀರು ನದಿಗಲ್ಲ|
ಸಂತನ ಬದುಕು ಸಂತರಿಗಲ್ಲ, ಅದು ಲೋಕದ ಹಿತಕೆ ಕಬೀರ||

ಯತಿಗಳ ಜಾತಿಯ ಕೇಳಲು ಬೇಡ, ಜ್ಞಾನವನೇ ನೋಡು|
ಕೇವಲ ಖಡ್ಗದ ಬೆಲೆಯನು ಕಟ್ಟು, ಒರೆಯನು ಬದಿಗಿಟ್ಟು ಕಬೀರ||

ಶೀಲವಂತನೇ ಶ್ರೇಷ್ಠನು, ಸಕಲ ರತ್ನಗಳ ಗಣಿಯು|
ಭೂಲೋಕದ ಸಿರಿಸಂಪದವೆಲ್ಲ ಶೀಲದೊಳಗೆ ಇಹುದು ಕಬೀರ||

ದೇವರನೆಲ್ಲೋ ಹುಡುಕುತ ಹೊರಟೆ, ದೇವರೇ ಸಿಗಲಿಲ್ಲ|
ನಿನ್ನಯ ದೇವನು ನಿನ್ನೊಳಗಿಹನೈ ಕೈಲಾದರೆ ನೋಡೈ ಕಬೀರ||

ಸಾಹಿತ್ಯ ಕೊಡುಗೆ
ಸಂತ ಕಬೀರದಾಸರು ಸಾಹಿತ್ಯದ ಕಡೆ ಹೆಚ್ಚು ಆಸಕ್ತಿ ಹೊಂದಿದರು. ಇವರ ಪದ್ಯಗಳಲ್ಲಿ ಭಗವದ್ಭಕ್ತಿ ತುಂಬಿರುತ್ತಿತ್ತು. ಅವರು ಬರೆಯುತ್ತಿರುವ ಕವಿತೆಗಳು ಸಂಕ್ಷಿಪ್ತ, ಸರಳ ಶೈಲಿಯಲ್ಲಿ ಇರುತ್ತಿದ್ದವು. ಕಬೀರರ ಪದ್ಯ, ವಚನ ಸಂಕಲನ ಬೀಜಕ್ ಎಂಬ ಹೆಸರಿನಿಂದ ಪ್ರಕಟವಾಗುತ್ತಿತ್ತು. ತಮ್ಮ ಕವಿತೆಗಳನ್ನು ಅವಧಿ, ಬ್ರಜ್ ಮತ್ತು ಭೋಜ್‌ಪುರಿಗಳೊಂದಿಗೆ ಬೆರೆಸಿ ಹಿಂದಿಯಲ್ಲಿ ಬರೆದಿದ್ದರು. ಕಬೀರದಾಸರು ಸಮಾರು 82 ಕೃತಿಗಳನ್ನು ರಚಿಸಿದ್ದಾರೆ.


ಕಬೀರದಾಸರು ಸಾಮಾನ್ಯ ಶಕ ವರ್ಷ 1518ರಲ್ಲಿ ತಮ್ಮ 120ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.