ರಾಷ್ಟ್ರೀಯ ಸ್ವಯಂಸೇವಕ ಸಂಘ
ಅಖಿಲ ಭಾರತೀಯ ಪ್ರತಿನಿಧಿ ಸಭಾ, ಬೆಂಗಳೂರು
ಫಾಲ್ಗುಣ ಶುಕ್ಲ ೭-೯, ಯುಗಾಬ್ಧ ೫೧೧೫
(ಮಾರ್ಚ್ ೭, ೮ ಮತ್ತು ೯, ೨೦೧೪)
ಪೂಜ್ಯ ಮಾತಾ ಅಮೃತಾನಂದಮಯಿ ಅವರನ್ನು ಅವಮಾನಿಸುವ ಷಡ್ಯಂತ್ರದ ಕುರಿತು
ಆರೆಸ್ಸೆಸ್ ಸರಕಾರ್ಯವಾಹ ಶ್ರೀ ಸುರೇಶ್ (ಭಯ್ಯಾಜಿ) ಜೋಷಿಯವರ ಪತ್ರಿಕಾ ಹೇಳಿಕೆ
ಲಕ್ಷಾಂತರ ಜನರ ’ಅಮ್ಮ’ ಮಾತಾ ಅಮೃತಾನಂದಮಯಿಯವರು ಜಗತ್ತಿನಾದ್ಯಂತ ವಿವಿಧ ಭಾಷೆ, ಜಾತಿ, ಮತಗಳ ಅನುಯಾಯಿಗಳನ್ನು ಹೊಂದಿರುವ ಜಗದ್ವಂದ್ಯರು. ತಮ್ಮ ಅಮಿತ ವಾತ್ಸಲ್ಯ ಮತ್ತು ದೈವಿಕ ಸ್ಪರ್ಶದಿಂದ ಲಕ್ಷಾಂತರ ದುಃಖತಪ್ತ ಜೀವಗಳಿಗೆ ಸಾಂತ್ವನ ನೀಡುತ್ತಿರುವವರು. ಮನುಕುಲದ ದುಃಖ ದುಮ್ಮಾನಗಳನ್ನು ತಗ್ಗಿಸಲು ಶ್ರಮಿಸುತ್ತಿರುವ ಈ ’ಅಪ್ಪುಗೆಯ ಅಮ್ಮ’ನನ್ನು ವಿಶ್ವಸಂಸ್ಥೆ ಮತ್ತು ಅನೇಕ ದೇಶಗಳು ನೂರಾರು ಪ್ರಶಸ್ತಿಗಳೊಂದಿಗೆ ಗೌರವಿಸಿವೆ. ದೈವಿಕ ಪ್ರೇಮವೇ ಮೈವೆತ್ತಂತಿರುವ ಅಮ್ಮ ಪ್ರಪಂಚದ ಮೂಲೆ ಮೂಲೆಗಳಿಗೆ ಭೇಟಿ ಕೊಟ್ಟು ಗಂಟೆಗಟ್ಟಲೆ ಪ್ರವಚನ, ಭಕ್ತಜನರ ಪ್ರಶ್ನೆಗಳಿಗೆ ತಾಳ್ಮೆಯ ಉತ್ತರ, ಸಮಾಧಾನ ನೀಡುವುದರ ಜೊತೆಗೆ ಇಮೈಲ್ ಮತ್ತು ಪತ್ರಗಳಿಗೂ ದಣಿವಿಲ್ಲದೇ ಉತ್ತರಿಸುತ್ತಾರೆ. ಇವಿಷ್ಟೇ ಅಲ್ಲದೇ, ಲೆಕ್ಕವಿಲ್ಲದಷ್ಟು ಸೇವಾಕಾರ್ಯಗಳ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನಗಳೂ ಕೂಡ ಇವರ ದಿನಚರಿಯ ಅವಿಭಾಜ್ಯ ಭಾಗಗಳಾಗಿವೆ. ಇವರು ತಮ್ಮ ದಣಿವಿಲ್ಲದ ಸೇವಾಕಾರ್ಯದ ಮೂಲಕ ಪ್ರಪಂಚದಾದ್ಯಂತ ಸೇವೆಯ ಆಂದೋಲನಕ್ಕೆ ಪ್ರೇರಣೆಯಾಗಿದ್ದಾರೆ.
ಪಶ್ಚಿಮದ ಕೆಲವು ಧೂರ್ತ ಶಕ್ತಿಗಳು ಇಂತಹ ಶ್ರೇಷ್ಠ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಸನಾತನ ಧರ್ಮ ಮತ್ತು ಮನುಕುಲದ ವಿರೋಧಿಗಳು ಪ್ರಕಟಿಸಿರುವ ’ಹೋಲಿ ಹೆಲ್’ ಎನ್ನುವ ಪುಸ್ತಕವು ಮಾತಾ ಅಮೃತಾನಂದಮಯಿಯವರ ಧಾರ್ಮಿಕ ಆಂದೋಲನವನ್ನು ಹಾಳುಗೆಡಹುವ ಒಂದು ಸಂಚು. ಬಹುಶಃ, ಈ ಆಂದೋಲನದ ಹೆಚ್ಚುತ್ತಿರುವ ಪ್ರಭಾವವನ್ನು ಸಹಿಸಲಾಗದ ಪಶ್ಚಿಮದ ಮತೀಯ ಮೂಲಭೂತವಾದಿಗಳ ಕುತಂತ್ರದ ಫಲವೇ ಈ ಪುಸ್ತಕ ಎಂದು ತೋರುತ್ತದೆ.
ಪುಸ್ತಕ ಪ್ರಕಟಣೆಗೆ ಆಯ್ದುಕೊಂಡ ಸಂದರ್ಭ, ಅಮ್ಮ ಮತ್ತು ಅವರ ಕಾರ್ಯದ ಬಗ್ಗೆ ಅದರಲ್ಲಿ ಉಲ್ಲೇಖಿಸಿರುವ ಸಂಪೂರ್ಣ ಆಧಾರರಹಿತ ಆರೋಪಗಳು ಹಾಗೂ ಸತ್ಯಕ್ಕೆ ದೂರವಾದ ವಿಷಯಗಳು ಮತ್ತು ಕೆಲವು ಹಿಂದೂವಿರೋಧಿ ಮಾಧ್ಯಮಗಳು ಹಾಗೂ ಕೆಲವು ಬುದ್ಧಿಜೀವಿಗಳು ಪುಸ್ತಕದಲ್ಲಿನ ನಿಂದನಾತ್ಮಕ ವಿಷಯಗಳನ್ನು ತಕ್ಷಣವೇ ಪ್ರಚುರಪಡಿಸಲು ಶುರುವಿಟ್ಟುಕೊಂಡಿದ್ದನ್ನು ನೋಡಿದರೆ ಇದೊಂದು ದುರುದ್ದೇಶಪೂರಿತ ಅಂತರರಾಷ್ಟ್ರೀಯ ಷಡ್ಯಂತ್ರ ಎಂದು ಅನ್ನಿಸದಿರದು.
ಅಮ್ಮ ಅವರಂತಹ ಶ್ರೇಷ್ಠ ಸಂತರನ್ನು ಅವಮಾನಿಸುವ ಇಂತಹ ನಾಚಿಕೆಗೇಡಿನ ಪ್ರಯತ್ನಗಳನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ. ಹಾಗೆಯೇ, ಸಂಪೂರ್ಣ ಹಿಂದೂ ಸಮಾಜ ಮತ್ತು ಜಗತ್ತಿನ ಎಲ್ಲ ಸಜ್ಜನರು ಈ ಷಡ್ಯಂತ್ರದ ಹಿಂದಿರುವ ಶಕ್ತಿಗಳನ್ನು ಮನುಕುಲದ ವೈರಿಗಳೆಂದು ಪರಿಗಣಿಸಿ ಬಹಿಷ್ಕರಿಸಬೇಕೆಂದು ಕರೆ ನೀಡುತ್ತೇವೆ.
ಅಮ್ಮ ಮತ್ತು ಅವರ ಉದಾತ್ತ ಕಾರ್ಯಗಳ ಬಗ್ಗೆ ನಮ್ಮ ಶ್ರದ್ಧಾಗೌರವಗಳನ್ನು ಒತ್ತಿಹೇಳುತ್ತಾ, ಅವರ ಮತ್ತು ಇತರ ಹಿಂದೂ ಸಾಧು-ಸಂತರ ಹಾಗೂ ಸಂಸ್ಥೆಗಳ ವಿರುದ್ಧದ ದುಷ್ಟ ಷಡ್ಯಂತ್ರದ ಸವಾಲುಗಳನ್ನು ಎದುರಿಸುವ ಎಲ್ಲ ಪ್ರಯತ್ನಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸುತ್ತೇನೆ.
**********************************