ಪುಸ್ತಕಗಳು ಆಂತರಿಕ ಅಂಧಾಕಾರವನ್ನು ಹೋಗಲಾಡಿಸುತ್ತವೆ: ಡಾ. ಬಿ.ವಿ. ವಸಂತಕುಮಾರ್
ಬೆಂಗಳೂರು: ಸಾಹಿತ್ಯಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳೆಸುವ ಕೆಲಸ ಮಾಡುತ್ತವೆ. ಹೊರಗಿನ ಕತ್ತಲನ್ನು ಹೋಗಲಾಡಿಸುವುದಕ್ಕೆ ಆಧುನಿಕ ವಿಜ್ಞಾನ ತಂತ್ರಜ್ಞಾನಗಳಿವೆ. ಬಹುಮುಖ್ಯವಾದ ಒಳಗಿನ ಕತ್ತಲನ್ನು ಹೋಗಲಾಡಿಸುವ ಕೆಲಸವನ್ನು ಪುಸ್ತಕಗಳು ಮಾಡುತ್ತವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ತಿಳಿಸಿದರು.
ಅವರು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನ ಸಂಸ್ಥೆಯು ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆಂಪೇಗೌಡ ನಗರದ (ಉಮಾ ಥಿಯೇಟರ್ ಸಮೀಪದ) ಕೇಶವಶಿಲ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಕನ್ನಡ ಪುಸ್ತಕ ಹಬ್ಬ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 55ಕ್ಕೂ ಅಧಿಕ ವರ್ಷಗಳಿಂದ ರಾಷ್ಟ್ರೀಯತೆಯನ್ನು ಬಿತ್ತುವ ಕಾರ್ಯವನ್ನು ರಾಷ್ಟ್ರೋತ್ಥಾನ ಸಾಹಿತ್ಯ ಮಾಡುತ್ತಿದೆ. ಹಾಗಾಗಿ ನವ್ಯ, ನವೋದಯ ಮುಂತಾದ ಕನ್ನಡ ಸಾಹಿತ್ಯದ ವಿವಿಧ ಧಾರೆಗಳಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ್ದೂ ಇನ್ನೊಂದು ಬಹಳ ಮುಖ್ಯವಾದ ಧಾರೆ. ಇದನ್ನು ಗುರುತಿಸಿ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ವಸಂತ್ ಕುಮಾರ್ ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೇಖಕರು, ಕಾದಂಬರಿಕಾರರು, ಹಿರಿಯ ಪತ್ರಕರ್ತರೂ ಆದ ಜೋಗಿ (ಗಿರೀಶ್ ರಾವ್ ಹತ್ವಾರ್ ಅವರು ಮಾತನಾಡಿ, ಪುಸ್ತಕ ಓದುವುದರಿಂದ ವ್ಯಕ್ತಿಯ ಉತ್ಥಾನ ಸಾಧ್ಯ. ಒಂದು ಬದುಕಿನಲ್ಲಿ ಜಗತ್ತಿನ ನೂರು ಬದುಕನ್ನು ಅನುಭವಿಸಲು ಪುಸ್ತಕ ಓದಬೇಕು. ಓದು ಬದುಕನ್ನು ವಿಸ್ತರಿಸುತ್ತದೆ. ಓದು ವ್ಯಕ್ತಿತ್ವದ ಭಾಗವಾಗಬೇಕಿದೆ. ಅದನ್ನು ಸಹಜವಾಗಿ ರೂಢಿಸಿಕೊಳ್ಳಬೇಕು. ಪುಸ್ತಕ ಹಬ್ಬ ನಮ್ಮೊಳಗೆ ನಿರಂತರ ನಡೆಯಲಿ ಎಂದರು.
ಒಂದು ಪುಸ್ತಕ ಮತ್ತೊಂದು ಪುಸ್ತಕವನ್ನು ಓದಿಸುತ್ತದೆ. ಆ ಪ್ರಕ್ರಿಯೆ ಬದುಕನ್ನೇ ವಿಸ್ತಾರಗೊಳಿಸುತ್ತದೆ. ಪುಸ್ತಕಗಳು ಆತ್ಮವಿಶ್ವಾಸವನ್ನು ಬೆಳೆಸಿ, ಮಾನಸಿಕ ಯೋಧರನ್ನಾಗಿಸುತ್ತವೆ. ಪ್ರಸ್ತುತ ಕಾಲಘಟ್ಟದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಓದು ನಿಂತಿಲ್ಲ; ಓದುವಕ್ರಮ ಬದಲಾಗಿದೆ. ಪುಸ್ತಕದ ಸ್ಥಾನಕ್ಕೆ ಮೊಬೈಲ್ ಬಂದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ವೇದಿಕೆಯಲ್ಲಿದ್ದರು. ಈ ‘ಕನ್ನಡ ಪುಸ್ತಕ ಹಬ್ಬ’ವು ಅಕ್ಟೋಬರ್ 30ರಿಂದ ನವೆಂಬರ್ 28ರ ವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಾರಾಂತ್ಯದಲ್ಲಿ ವಿಶೇಷ ಉಪನ್ಯಾಸಗಳು, ಪುಸ್ತಕ ಲೋಕಾರ್ಪಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. 3,000ಕ್ಕೂ ಅಧಿಕ ಶೀರ್ಷಿಕೆಯ ಪುಸ್ತಕಗಳು ಲಭ್ಯವಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳಿಗೆ 40% ರಿಯಾಯಿತಿ ಹಾಗೂ ಇತರ ಪ್ರಕಾಶಕರ ಪುಸ್ತಕಗಳಿಗೆ 20% ರಿಯಾಯಿತಿ ಇರುತ್ತದೆ.
ನಾಳೆ, ಅಕ್ಟೋಬರ್ 31, ಭಾನುವಾರದಂದು ಕನ್ನಡ ಪುಸ್ತಕ ಹಬ್ಬದಲ್ಲಿ
ಬೆಳಗ್ಗೆ 11ಕ್ಕೆ ಅರಣ್ಯ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷರಾದ ಶ್ರೀ ಮದನಗೋಪಾಲ್ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಪತ್ರಕರ್ತ ಶ್ರೀ ರಮೇಶ್ ದೊಡ್ಡಪುರ ಅವರು ಸಂವಾದ ನಡೆಸಿಕೊಡಲಿದ್ದಾರೆ.
ಸಂಜೆ 5ಕ್ಕೆ ‘ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡ ಸಾಹಿತಿಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದ್ದು, ಲೇಖಕರು, ಅಂಕಣಕಾರರು ಹಾಗೂ ಯುವಾ ಬ್ರಿಗೇಡ್‍ನ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಉಪನ್ಯಾಸ ಮಾಡಲಿದ್ದಾರೆ. ಖ್ಯಾತ ಸಾಹಿತಿ ಡಾ|| ಬಾಬು ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.