
ಕನ್ನಡ ಶಾಲಾ ಮಕ್ಕಳ ಹಬ್ಬದ ವಿಶೇಷ ಆಕರ್ಷಣೆ:
ಸಾವಿರಾರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು. ಮೆರವಣಿಗೆಯಲ್ಲಿ ಸಾಂಕೇತಿಕವಾಗಿ ಕೆಲವು ಪುಸ್ತಕಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ತರವ ಮೂಲಕ ಕನ್ನಡದ ಕೆಲಸಕ್ಕೆ ಹೆಗಲು ಕೊಡಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿಯೆಂದು ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಲ್ಲಿ ಕನ್ನಡ ನಾಡು, ನುಡಿ, ಸಾಧಕರ ಕುರಿತಾದ ಅಪೂರ್ವ ಮಾಹಿತಿಯುಳ್ಳ ಮತ್ತು ಸಾಮಾನ್ಯ ಜ್ಞಾನವನ್ನು ವೃದ್ಧಿಸುವ ಪ್ರದರ್ಶಿನಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಮೊದಲ ದಿನದ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ರವೀಂದ್ರ ಪ್ರಭು ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ, ಅಂತರಾಷ್ಟ್ರೀಯ ಖ್ಯಾತಿಯ ಕುದ್ರೋಳಿ ಗಣೇಶ್ ಹಾಗೂ ಬಳಗದವರ ವತಿಯಿಂದ ಜಾದೂ ಕಾರ್ಯಕ್ರಮ, ಆಳ್ವಾಸ್ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಲ್ಲಕಂಬ, ತುಳು ಲಿಪಿ ಪರಿಚಯ, ಉದ್ಯೋಗಾವಕಾಶ ಮಾರ್ಗದರ್ಶಿ, ವಿಜ್ಞಾನ ಮಾದರಿಗಳ ಪ್ರದರ್ಶನ, ಆಟದ ಬಯಲು, ಮಂಗಳೂರಿನ ಶಾರದಾ ವಿದ್ಯಾಲಯ ಹಾಗೂ ಪೊಳಲಿ ಟೈಗರ್ಸ್ ಹುಲಿ ಕುಣಿತ ಪ್ರದರ್ಶನ, ಗೊಂಬೆ ವೇಷಧಾರಿಗಳ ಮೂಲಕ ಮಕ್ಕಳನ್ನು ಮನೋರಂಜಿಸಿದವು. ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.





ಗೋಷ್ಠಿ – 1
ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮೊದಲ ದಿನದ ಮೊದಲ ಸಂವಾದ ಗೋಷ್ಠಿ ಶಿವರಾಮ ಕಾರಂತ ವೇದಿಕೆಯಲ್ಲಿ ಜರುಗಿತು. ಸಂವಾದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ರಾಷ್ಟ್ರೀಯ ಶಿಕ್ಷಣ ನೀತಿ ಎಂಬ ವಿಷಯದ ಕುರಿತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳ್ಳುವ ಪೂರ್ವದ ತಯಾರಿ, ನಂತರದ ಅನುಷ್ಠಾನ ಮತ್ತು ಅದರ ಧ್ಯೇಯದ ಸಾಧನೆಗಾಗಿ ಶಿಕ್ಷಕರ ಪಾತ್ರವೇನು ಎನ್ನುವುದನ್ನು ಚರ್ಚಿಸಲಾಯಿತು. ಶಿಕ್ಷಣದ ಕೊರತೆ ಮತ್ತು ಬದಲಾಗಬೇಕಾದ ಅನಿವಾರ್ಯತೆಯ ಕುರಿತು ತಿಳಿಸಿದರು. ವೇದಿಕೆಯಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.


ಗೋಷ್ಠಿ – 2
ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮೊದಲ ದಿನದ ದ್ವಿತೀಯ ಸಂವಾದ ಗೋಷ್ಠಿ ಶಿವರಾಮ ಕಾರಂತ ವೇದಿಕೆಯಲ್ಲಿ ಜರುಗಿತು. ಈ ಸಂವಾದ ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ನಂದಿನಿ ಕೆ.ಆರ್ ಕನ್ನಡ ಮಾಧ್ಯಮ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ, ಒತ್ತಡ ನಿರ್ವಹಣೆ, ಸಮಯ ನಿರ್ವಹಣೆ, ತಾಳ್ಮೆಯ ಮಹತ್ವ, ನಿರಂತರ ಪ್ರಯತ್ನದ ಕುರಿತಾದ ಮಕ್ಕಳ ಹಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು.
ಗೋಷ್ಠಿ – ೩
ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮೊದಲ ದಿನದ ತೃತೀಯ ಗೋಷ್ಠಿ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯಿತು. ಗೋಷ್ಠಿಯಲ್ಲಿ ಖ್ಯಾತ ಅಂಕಣಕಾರ ಮತ್ತು ಕರ್ನಾಟಕ ಸರಕಾರದ ಪಠ್ಯ ಪುಸ್ತಕ ಪುನರ್ ರಚನಾ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಪೋಷಕರೊಂದಿಗೆ ಸಂವಾದ ನಡೆಸಿದರು. ಸಂವಾದದಲ್ಲಿ ಪೋಷಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಗೊಂದಲಗಳನ್ನು ನಿವಾರಿಸಿದರು. ವೇದಿಕೆಯಲ್ಲಿ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.

ಗೋಷ್ಠಿ – ೪
ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮೊದಲ ದಿನದ ನಾಲ್ಕನೇ ಗೋಷ್ಠಿ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯಿತು. ಗೋಷ್ಠಿಯಲ್ಲಿ ಬೆಂಗಳೂರಿನ ಉಪನ್ಯಾಸಕ ರಾಜೇಶ್ ಪದ್ಮಾರ್ ಕನ್ನಡ ಮತ್ತು ರಾಷ್ಟ್ರೀಯತೆ ಕುರಿತಾಗಿ ವಿಚಾರ ಮಂಡಿಸಿದರು. ಹಾಗೆಯೇ ಕನ್ನಡ ಮತ್ತು ರಾಷ್ಟ್ರೀಯತೆಯ ಕುರಿತಾಗಿ ಉಪಸ್ಥಿತರಿದ್ದವರೊಂದಿಗೆ ಸಂವಾದ ನಡೆಸಲಾಯಿತು. ವೇದಿಕೆಯಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ಮಾಧವ ಎಂ.ಕೆ. ಉಪಸ್ಥಿತರಿದ್ದರು.







ವರದಿ : ಅರುಣ್ ಕಿರಿಮಂಜೇಶ್ವರ