– ದು.ಗು.ಲಕ್ಷ್ಮಣ, ಹಿರಿಯ ಪತ್ರಕರ್ತರು

ಫೇಸ್ ಬುಕ್ ತಾಣದ ತಮ್ಮ ಪುಟದಲ್ಲಿ ಪತ್ರಕರ್ತಮಿತ್ರರೊಬ್ಬರು  ಇತ್ತೀಚೆಗೆ ಮಾಧ್ಯಮ ಲೋಕದಲ್ಲಿ ನಡೆದ ವಿದ್ಯಮಾನವೊಂದರ ಬಗ್ಗೆ ಬೆಳಕು ಚೆಲ್ಲಿ ವಿಷಾದಪೂರ್ಣ ಲೇಖನವನ್ನು ಬರೆದಿದ್ದರು. ಈ ಬಾರಿಯ ದೀಪಾವಳಿ ಹಬ್ಬಕ್ಕೆ ಆಯ್ದ ಪ್ರಮುಖ ಪತ್ರಕರ್ತರಿಗೆ ಮುಖ್ಯಮಂತ್ರಿ ಕಛೇರಿಯಿಂದ ಸ್ವೀಟ್ ಪ್ಯಾಕೆಟ್ ಜೊತೆಗೆ ಲಕ್ಷಲಕ್ಷ ನಗದು ಹಣವೂ ಉಡುಗೊರೆ ರೂಪದಲ್ಲಿರವಾನೆಯಾಗಿತ್ತು. ‘ವಿಶ್ವಾಸಾರ್ಹ’ ಪತ್ರಿಕೆಯೊಂದರ ವರದಿಗಾರ ಆ ಉಡುಗೊರೆಯನ್ನು ನಿರಾಕರಿಸಿ ತನ್ನ ಪತ್ರಿಕೆಯ ಮಾಲಿಕರಿಗೆ ತಲುಪಿಸಿದ್ದರು. ಆ ಮಾಲಿಕರು, ನಮ್ಮ ಪತ್ರಿಕೆಯ ವರದಿಗಾರರು ‘ಮಾರಾಟಕ್ಕಿಲ್ಲ’ ಎಂದು ಷರಾ ಬರೆದು, ನಗದು ಉಡುಗೊರೆ ಕೊಟ್ಟಿದ್ದನ್ನು ಆಕ್ಷೇಪಿಸಿ, ಮುಖ್ಯಮಂತ್ರಿ ಕಚೇರಿಗೆ ಆ ನಗದು ಹಣವನ್ನು ಹಿಂದಿರುಗಿಸಿದ್ದರು. ನಗದು ಹಣ ಪಡೆದ ಉಳಿದ ಪತ್ರಕರ್ತರು ಅದೇ ರೀತಿ ಯಾಕೆ ಹಿಂದಿರುಗಿಸಲಿಲ್ಲವೋ ನನಗೆ ಗೊತ್ತಿಲ್ಲ.ೀ ವಿದ್ಯಮಾನದ ಕುರಿತು ಹೊರಗೆ ಒಂದಷ್ಟು ಬಿಸಿಬಿಸಿ ಚರ್ಚೆ ನಡೆಯಿತಾದರೂ ಮಾಧ್ಯಮ ಲೋಕದಲ್ಲಿ ಗಂಭೀರವಾದ ಚಿಂತನೆ, ಅವಲೋಕನ ನಡೆಯಲೇ ಇಲ್ಲ.


(ಮೇಲೆ ಉಲ್ಲೇಖಿಸಿದ ನನ್ನ ಪತ್ರಕರ್ತ ಮಿತ್ರರು ಮಾತ್ರ ಈ ವಿದ್ಯಮಾನದ ಕುರಿತು ಖಾರವಾಗಿಯೇ ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರತಿಕ್ರಿಯಿಸಿದ್ದರು : “…. ಮುಖ್ಯಮಂತ್ರಿ,ಕೆಲ ಸಚಿವರು, ವಿಪಕ್ಷ ನಾಯಕರು, ಪತ್ರಕರ್ತರಿಗೆ ಆಗಾಗ ನಗದು ಉಡುಗೊರೆ ನೀಡುವುದು ಲಗಾಯ್ತಿನಿಂದಲೂ ನಡೆದು ಬಂದ ಪದ್ಧತಿ.ತಿಂಗಳಿಗೊಮ್ಮೆ ಹತ್ತರಿಂದ ಮೂವತ್ತು ಸಾವಿರದವರೆಗೆ ಅನೇಕಾನೇಕ ಪತ್ರಕರ್ತರು ಮಾಮೂಲಿ ಪಡೆಯುತ್ತಾರೆ. ಬಹುತೇಕ ಸಂಪಾದಕರುಗಳು ಆಗಾಗ ಲಕ್ಷಲಕ್ಷ ಪಡೆಯುತ್ತಲೇ ಇರುತ್ತಾರೆ. ತಮ್ಮ ಮಗಳ ಮದುವೆಯೋ, ಮಗನ ಉಪನಯನವೋ,ಮನೆ ಗೃಹಪ್ರವೇಶವೋ ಮಾಡಿ ರಾಜಕಾರಣಿಗಳು, ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಕುಳಗಳು,ಭ್ರಷ್ಟ ಅಧಿಕಾರಿಗಳನ್ನು ಕದ್ದು ಹೋಗಿ ಆಹ್ವಾನಿಸಿ ಬರುವ ಟೀವಿ ಮತ್ತು ಪತ್ರಿಕಾ ಸಂಪಾದಕರು ನಗದು, ಬೆಳ್ಳಿ, ಬಂಗಾರದ ರಾಶಿ ರಾಶಿ ಉಡುಗೊರೆ ಪಡೆಯುತ್ತಾರೆ… ಒಂದೋ ಎರಡೋ ಲಕ್ಷ ಸಂಬಳ ಪಡೆಯುವ ಈ ಮಹಾನುಭಾವರುನೂರಾರು ಕೋಟಿ ಆಸ್ತಿ ಸಂಪಾದಿಸಿದ್ದು ಬೆವರು ಹರಿಸಿ ಎಂದುಕೊಂಡರೆ ಮೂರ್ಖರು ನಾವು.ರಾಜಕಾರಣ ಎಷ್ಟರ ಮಟ್ಟಿಗೆ ಕೊಳೆತುಹೋಗಿದೆಯೋ  ಮಾಧ್ಯಮ ಪ್ರಪಂಚ ಅದಕ್ಕೂ ಒಂದು ತೂಕ ಜಾಸ್ತಿ ರಾಡಿಯಾಗಿದೆ. ಹಣ, ಹೆಣ್ಣು, ಮದ್ಯ, ಎಲ್ಲವೂ ಉಡುಗೊರೆಯ ರೂಪದಲ್ಲಿ ದೊರಕುವ ಪ್ರಪಂಚ ಅದು…”)
ನನ್ನ ಪತ್ರಕರ್ತ ಮಿತ್ರರು ಬರೆದಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ.ಅವರು ಚಿತ್ರಿಸಿದ್ದಕ್ಕಿಂತಲೂ ಮಾಧ್ಯಮಲೋಕ ಇನ್ನಷ್ಟು ಕೊಳೆತುಹೋಗಿದೆ ಎಂಬುದು ಪ್ರಾಮಾಣಿಕ,ಸಂವೇದನಾಶೀಲ ಪತ್ರಕರ್ತರೆಲ್ಲರ ಅನುಭವ.ಪತ್ರಕರ್ತನೊಬ್ಬ ಎದುರಾದರೆ ಬಹುತೇಕರು ಭಯಭಕ್ತಿಯಿಂದ ನಮಸ್ಕರಿಸುತ್ತಾರೆ. ಆತ ಅಲ್ಲಿಂದ ಮರೆಯಾದೊಡನೆಯೇ ಅವನಿಗೆ ಹಿಡಿಶಾಪ ಹಾಕುತ್ತಾರೆ. ಎದುರಾದರೆ ನಮಸ್ಕಾರ,ಮರೆಯಾದರೆ ಹಿಡಿಶಾಪ, ತಿರಸ್ಕಾರ. ಪತ್ರಕರ್ತರ ಬಗ್ಗೆ ಯಾರಿಗೂ ಈಗ ಗೌರವ, ನಂಬಿಕೆ ಉಳಿದಿಲ್ಲ.

ಆದರೆ ಹಿಂದೆ ಹೀಗಿರಲಿಲ್ಲ.ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಪತ್ರಕರ್ತರ ಬಗ್ಗೆ ಎಲ್ಲರಿಗೂ ಗೌರವ ಕಾಳಜಿ ಅಪಾರವಾಗಿತ್ತು‌.’ನಾನೊಬ್ಬ ಸಂಪಾದಕ’ ಎಂದು ಪತ್ರಕರ್ತನೊಬ್ಬ ಜನರ ನಡುವೆ ಪರಿಚಯ ಹೇಳಿಕೊಂಡರೆ, “ಸಂತೋಷ, ಆದರೆ ಹೊಟ್ಟೆಪಾಡಿಗೆ ಏನು ಮಾಡ್ತೀಯಪ್ಪಾ?” ಎಂದು ಕನಿಕರದಿಂದ ಆತನನ್ನು ವಿಚಾರಿಸುತ್ತಿದ್ದರು. ಏಕೆಂದರೆ ಆಗ ಪತ್ರಿಕೋದ್ಯಮ ಒಂದು ಉದ್ಯಮವಾಗಿರಲಿಲ್ಲ.ಕಾಸು ಮಾಡುವ ದಂಧೆಯಾಗಿರಲಿಲ್ಲ. ರಾಷ್ಟ್ರ ಜಾಗೃತಿ ಹಾಗು ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಸ್ತ್ರವಾಗಿದ್ದುದು ಆಗ ಪತ್ರಿಕೆಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಚಳುವಳಿಗಾರರಲ್ಲಿ ಅದೆಷ್ಟೋ ಮಂದಿ ಪತ್ರಕರ್ತರೇ ಆಗಿದ್ದರು. ಅಂಥವರಿಗೆ ಪತ್ರಿಕೆಯು ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಪ್ರಮುಖ ಅಸ್ತ್ರವೇ ಆಗಿತ್ತು.ಪತ್ರಿಕಾ ವೃತ್ತಿ ನಮ್ಮ ರಾಷ್ಟ್ರೀಯ ಚಳುವಳಿಯ ಒಂದು ಅಂಗವೇ ಆಗಿತ್ತು. ರಾಷ್ಟ್ರೀಯ ಪ್ರಜ್ಞೆ ಹಾಗು ಸ್ವದೇಶಾಭಿಮಾನವನ್ನು ಜಾಗೃತಗೊಳಿಸುವ ಹಾಗೂ ನಿರಂತರವಾಗಿ ಅದನ್ನು ಚಾಲನೆಯಲ್ಲಿಡುವ ಕೆಲಸವನ್ನು ಪತ್ರಿಕೆಗಳು ಅಂದು ನಿರಂತರವಾಗಿ ಕೈಗೊಂಡವು.ಪತ್ರಿಕೆಯ ಉದ್ದೇಶವೆಂದರೆ : ಜನಜಾಗೃತಿ, ಹೋರಾಟ,ಸತ್ಯನಿಷ್ಠ ವರದಿಗಳ ನಿರ್ಭಯ ಪ್ರಕಟಣೆ,ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿಇತರರಿಗೆ ಸ್ಪೂರ್ತಿ ನೀಡುವುದು – ಇದೇ ಆಗಿತ್ತು.


ಲೋಕಮಾನ್ಯ ತಿಲಕರಿಂದ ಹಿಡಿದು ಗಾಂಧೀಜಿಯವರವರೆಗೆ, ಎಂ.ವೆಂಕಟಕೃಷ್ಣಯ್ಯನವರಿಂದ ಹಿಡಿದು ಹರ್ಡೇಕರ ಮಂಜಪ್ಪ, ತಿ.ತಾ ಶರ್ಮ, ಡಿ.ವಿ.ಜಿ, ವೀರಕೇಸರಿ ಸೀತಾರಾಮ ಶಾಸ್ತ್ರಿಗಳವರೆಗೆ ನೂರಾರು ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಪತ್ರಕರ್ತರಾಗಿದ್ದರು ಎಂಬುದು ಇದಕ್ಕೆ ನಿದರ್ಶನ.
(1843ರಲ್ಲಿ ಹರ್ಮನ್ ಮೊಗ್ಲಿಂಗ್ ಎಂಬ ಜರ್ಮನ್ ಫಾದರ್ ಸಂಪಾದಕತ್ವದಲ್ಲಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಆರಂಭವಾಯಿತಾದರೂ ಅದು ತಕ್ಷಣಕ್ಕೆ ಪತ್ರಿಕಾಸಕ್ತರಿಗೆ ಉತ್ತೇಜನ ನೀಡಲಿಲ್ಲವೆಂದೇ ಹೇಳಬೇಕು.ಏಕೆಂದರೆ ಕನ್ನಡದಲ್ಲಿ ನಿಯಮಿತವಾಗಿ ಪತ್ರಿಕೆಗಳು ಪ್ರಕಟಾವಾಗಲು ಆರಂಭಿಸಿದ್ದು 1860ರ ನಂತರವೇ.ಕ್ರೈಸ್ತ ಮತಾಂತರದ ಉದ್ದೇಶಕ್ಕಾಗಿ ‘ಮಂಗಳೂರು  ಸಮಾಚಾರ’ ಆರಂಭವಾಯಿತಾದರೂ ಸ್ವಾತಂತ್ರ್ಯ ಹೋರಾಟ ಹಾಗು ಜನಜಾಗೃತಿಯ ಉದ್ದೇಶಗಳಿಗೂ ಪತ್ರಿಕೆಯನ್ನು ಬಳಸಿಕೊಳ್ಳಬಹುದೆಂಬ ಕಲ್ಪನೆಗೆ ಆ ಪತ್ರಿಕೆ ನೀರೆರೆದಿದ್ದು ನಿಜ.ಹಾಗಾಗಿ ಹರ್ಮನ್ ಮೊಗ್ಲಿಂಗ್‌ಗೆ ಕನ್ನಡಿಗರೆಲ್ಲರೂ ಅದರಲ್ಲೂ ಕನ್ನಡ ಪತ್ರಿಕಾಲೋಕದ ಮಂದಿ ಗೌರವದಿಂದ ಒಂದು ಸೆಲ್ಯೂಟ್ ಹೊಡೆದರೆ ತಪ್ಪೇನಿಲ್ಲ.
‘ ಸಂಯುಕ್ತ ಕರ್ನಾಟಕ’ವನ್ನು ಕಟ್ಟಿ ಬೆಳೆಸಿದ ಪತ್ರಿಕಾ ಭೀಷ್ಮ ಪಿತಾಮಹ ಮೊಹರೆ ಹನುಮಂತರಾವ್ ಪತ್ರಿಕಾವೃತ್ತಿಗೆ ತೆರೆದುಕೊಳ್ಳುವ ಮೊದಲೇ ಸ್ವಾತಂತ್ರ್ಯ ಆಂದೋಲನದಲ್ಲಿ ಸಕ್ರಿಯರಾಗಿದ್ದರು.ಕಟ್ಟಾ ಗಾಂಧಿವಾದಿಯೂ ಲೋಕಮಾನ್ಯ ತಿಲಕರ ಅಭಿಮಾನಿಯೂ ಆಗಿದ್ದ ಮೊಹರೆಯವರು 1928ರಲ್ಲೇ ಬಾಗಲಕೋಟೆಯಲ್ಲಿ ಪತ್ರಕರ್ತರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಿಸಿದವರು‌.ಈ ಪರಿಷತ್ತಿಗೆ ಡಿ.ವಿ.ಜಿಯವರು ಅಧ್ಯಕ್ಷರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ1934ರಲ್ಲಿ ಜೈಲಿನಿಂದ ಹೊರಬಂದ ಬಳಿಕ ಮೊಹರೆಯವರು ತಲುಪಿದ್ದುದು ಆಗ ಸಂಯುಕ್ತ ಕರ್ನಾಟಕವನ್ನು ಕಷ್ಟ ಪಟ್ಟು ನಡೆಸುತ್ತಿದ್ದ ದಾತಾರ ಬಳವಂತರಾಯರ ಬಳಿಗೆ.’ನಿಮಗೆ ದೊಡ್ಡ ಸಂಬಲ ಕೊಡುವ ಶಕ್ತಿಯಿಲ್ಲ.ನಮ್ಮ ಮನೆಯಲ್ಲಿ ನೀವು ಊಟ ಮಾಡಿಕೊಂಡು ಪತ್ರಿಕೆ ನಡೆಸಬೇಕು’ – ಇದು ಬಳವಂತರಾಯರು ಮೊಹರೆಯವರಿಗೆ ಕೊಟ್ಟ ಅಲಿಖಿತ ಆಫರ್ ಲೆಟರ್! ಮೊಹರೆಯವರು ಎರಡು ಮಾತನಾಡಲಿಲ್ಲ.ಊಟವೋ ಉಪವಾಸವೋ ಯಾವುದನ್ನೂ ಚಿಂತಿಸದೆ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಕಟ್ಟಿ ಬೆಳೆಸಿದರು.ಉತ್ತರ ಕರ್ನಾಟಕಕ್ಕೆ ಸೀಮಿತವಾಗಿದ್ದ ಆ ಪತ್ರಿಕೆಯನ್ನು ಇಡೀ ಕರ್ನಾಟಕದ ಹೆಮ್ಮೆಯ ಪತ್ರಿಕೆಯಾಗಿ ರೂಪಿಸಿದರು.

ಸ್ವಾತಂತ್ರ್ಯ ಬಂದ ಮೂರು ವರ್ಷಗಳ ಬಳಿಕ 1950ರಲ್ಲಿ ಮುಂಬಯಿಯಲ್ಲಿ ನಡೆದ ಪತ್ರಕರ್ತರ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನದಿಂದ ಮೊಹರೆಯವರು ಹೇಳಿದ ಮಾತುಗಳು ಈಗಲೂ ಪ್ರಸ್ತುತ. “ಲೇಖನಿಯ ಪ್ರಭಾವವನ್ನು ರಾಷ್ಟ್ರಕ್ಕೆ ಹಾನಿಯಾಗುವ ರೀತಿಯಲ್ಲಿ ಎಂದೂ ಉಪಯೋಗಿಸಕೂಡದು.ರಾಷ್ಟ್ರಕ್ಕಾಗಲಿ, ಜನತೆಗಾಗಲಿ ಸನ್ಮಾರ್ಗ ತೋರಿಸುವ ಹೊಣೆ ಪತ್ರಿಕೆಗಳ ಮೇಲಿದೆ ಎಂಬುದನ್ನು ಮರೆಯಕೂಡದು.ಟೀಕಿಸುವಾಗ ನಾವು ವಿಕಾರವಶರಾಗಿ ತಾಳಮೇಳವಿಲ್ಲದೆ ಸಂಯಮವನ್ನು ಗಾಳಿಗೆ ತೂರಿ ಮನಬಂದಂತೆ ಬರೆದರೆ ಅದು ಬರಹಗಾರಿಕೆಯಲ್ಲ.ಅದು ಕೇವಲ ವ್ಯಕ್ತಿಗಳ ದೂಷಣೆ ಅಥವಾ ಅವಹೇಳನಕ್ಕೆ ಗುರಿ ಮಾಡುವುದಷ್ಟೇ.ಇದು ಪತ್ರಿಕೆಗಳ ನಿಜವಾದ ಕಾರ್ಯವಲ್ಲ.ಅಂಥ ಪತ್ರಕರ್ತರು ಸಮಾಜ ಕಂಟಕರು” ( ಕನ್ನಡ ಪತ್ರಿಕಾಲೋಕದ ಧೀಮಂತರು-3,ಪುಟ-32,ಪತ್ರಿಕಾ ಅಕಾಡೆಮಿ ಪ್ರಕಟಣೆ)

ಸ್ವಾತಂತ್ರ್ಯ ಬಂದ ಬಳಿಕಪತ್ರಿಕಾ ಲೋಕ ನಿಧಾನವಾಗಿ ಅಧಃಪತನದತ್ತ ಜಾರುತ್ತಿರುವುದನ್ನು ಗಮನಿಸಿಯೇ ಮೊಹರೆಯವರು ಈ ಎಚ್ಚರಿಕೆಯನ್ನು ಆ ಸಮ್ಮೇಳನದಲ್ಲಿ ನೀಡಿದ್ದರಬಹುದು.


ಕನ್ನಡ ಪತ್ರಿಕಾಲೋಕದ ಇನ್ನೋರ್ವ ಭೀಷ್ಮ ಪಿತಾಮಹ ತಿ.ತಾ.ಶರ್ಮರು (1897-1973) ತಮ್ಮ ವಿಶ್ವ ಕರ್ನಾಟಕ ಪತ್ರಿಕೆಯನ್ನು 1925ರಲ್ಲಿ ಪ್ರಾರಂಭಿಸಿದ್ದು ಸ್ವಾತಂತ್ರ್ಯ ಹೋರಾಟಕ್ಕೆ ಕಾವು ಕೊಡುವ ಪ್ರಯತ್ನಕ್ಕಾಗಿಯೇ ಎಂಬುದು ಆಗ ಅವರು ಬರೆಯುತ್ತಿದ್ದ ಉಗ್ರ ಸಂಪಾದಕೀಯ ಲೇಖನಗಳಿಂದ ವೇದ್ಯವಾಗುತ್ತದೆ.ಇಂತಹ ಉಗ್ರ ಸಂಪಾದಕೀಯ ಲೇಖನ ಬರೆದಿದ್ದಕ್ಕಾಗಿ ಅವರನ್ನು ಬ್ರಿಡಿಷ್ ಸರಕಾರ ದಸ್ತಗಿರಿ ಮಾಡಿತ್ತು.ಆದರೆ ಶರ್ಮರು ಅದಕ್ಕೆಲ್ಲ ಅಂಜಲೇ ಇಲ್ಲ.ಬಿಡುಗಡೆಯಾದ ಬಳಿಕ ತಮ್ಮ ಲೇಖನಿಗೆ ಮತ್ತಷ್ಟು ಮೊನಚು ತುಂಬಿ, ಅದನ್ನು ಕತ್ತಿಯಲಗನ್ನಾಗಿಸಿ  ಮತ್ತಷ್ಟು ಉಗ್ರ ಲೇಖನಗಳನ್ನು ಬರೆದರು.” ಪತ್ರಕರ್ತರಿಗೆ ಯಾರ ಪ್ರಶಂಸೆ ಅಥವಾ ಅಪ್ರಶಂಸೆ, ಪ್ರಸನ್ನತೆ ಅಥವಾ ಅಪ್ರಸನ್ನತೆ ಬೇಕಿಲ್ಲ.ಅವರು ಮಣಿಯ ಬೇಕಾದುದು ಸಾರ್ವಜನಿಕ ಅಭಿಪ್ರಾಯಕ್ಕೆ ಮತ್ತು ಸತ್ಯಕ್ಕೆ‌.ಸತ್ಯವೇ ಪತ್ರಿಕೆಗಳ ಪರಮ ಧರ್ಮ.ಸತ್ಯದ ಪ್ರಚಾರ ಮತ್ತು ಪ್ರಕಟಣೆ ಮಹಾಪುಣ್ಯದ ಕೆಲಸ.ಪತ್ರಕರ್ತನಿಗೆ ಈ ಭಾಗ್ಯ ವಿಶಿಷ್ಟವೆನಿಸಿದೆ‌.” ತಿ.ತಾ.ಶರ್ಮರ ಈ ಮಾತುಗಳು ಈಗಲೂ ಪತ್ರಕರ್ತರಿಗೆ ದಾರಿದೀಪವಾಗಬಲ್ಲುದು.


ತಿ.ತಾ.ಶರ್ಮ,ಮೊಹರೆ ಹಣಮಂತ ರಾವ್ ಅವರಲ್ಲದೆ ವೆಂಕಟಕೃಷ್ಣಯ್ಯನವರ ‘ವೃತ್ತಾಂತ ಚಿಂತಾಮಣಿ'(1885),’ನಡೆಗನ್ನಡಿ'(1855), ‘ಸಾಧ್ವಿ'(1909),’ಮೈಸೂರ್ ಪೇಟ್ರಿಯಾಟ್'(1913),ಬಿ. ನರಸಿಂಗರಾಯರ ‘ಸೂರ್ಯೋದಯ ಪ್ರಕಾಶಿಕಾ'(1888), ಬಿ.ಶ್ರೀನಿವಾಸ ಅಯ್ಯಂಗಾರರ ‘ದೇಶಾಭಿಮಾನಿ'(1834), ಮಣ್ಣೂರು ಗುಂಡೇರಾಯರ ‘ಕರ್ನಾಟಕ ವೈಭವ'(1895), ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ‘ವಾಗ್ಭೂಷಣ'(1896), ಹರ್ಡೇಕರ್ ಮಂಜಪ್ಪನವರ ‘ಧನುರ್ಧಾರಿ'(1906), ವಿ.ಎಸ್.ಕಾಮತ್‌ಅವರ ‘ಸ್ವದೇಶಾಭಿಮಾನಿ'(1907), ನಾ.ಸು.ಹರ್ಡೀಕರ್ ಅವರ ‘ಕರ್ನಾಟಕ ಕೇಸರಿ'(1909), ಡಿ.ವಿ.ಜಿಯವರ ‘ಸಮಾಚಾರ ಸಂಗ್ರಹ’ (1907),’ ಮೈಸೂರ್ ಟೈಮ್ಸ್'(1906), ‘ಕರ್ನಾಟಕ'(1913),ಬಿ.ಎನ್‌.ಗುಪ್ತರ ‘ಜನವಾಣಿ’,(1937),ಸಿ.ಆರ್.ರಾಮಯ್ಯನವರ ‘ತಾಯಿನಾಡು'(1926),’ಪ್ರಜಾಮತ ‘ (1931), – ಇವೆಲ್ಲ ರಾಷ್ಟ್ರೀಯ ಆಂದೋಲನ ಕಾವೇರುತ್ತಿದ್ದ ಕಾಲದಲ್ಲಿ ಕನ್ನಡಿಗರದಲ್ಲಿ ಸ್ವಾಭಿಮಾನ, ಸ್ವಾತಂತ್ರ್ಯದ ತುಡಿತ,ಸ್ವದೇಶೀ ಪ್ರಜ್ಞೆ ಹಾಗು ದೇಶಾಭಿಮಾನವನ್ನು ಬಡಿದೆಬ್ಬಿಸಿದ ನಿರ್ಭೀತ ಪತ್ರಿಕೆಗಳು.

ಈ ಮಹನೀಯರಷ್ಟೇ ಅಲ್ಲದೆ ಕನ್ನಡ ನಾಡಿನಾದ್ಯಂತ ಅಲ್ಲಲ್ಲಿ ಇನ್ನಷ್ಟು ಮಂದಿ ಸಣ್ಣ ಪುಟ್ಟ ಪತ್ರಿಕೆಗಳನ್ನು ಪ್ರಾರಂಭಿಸಿ, ನಷ್ಟ ಅನುಭವಿಸಿದರೂ ಸ್ವಾತಂತ್ರ್ಯ ಜ್ಯೋತಿಗೆ ತೈಲವೆರೆದು ಸ್ವಾಭಿಮಾನವನ್ನು ಮರೆದಿದ್ದು ಉಲ್ಲೇಖನೀಯ ಬೆಳ್ಳಿಯಪ್ಪನವರ ‘ಕೊಡಗು'(1921),ಆಲೂರು ವೆಂಕಟರಾಯರ ‘ಜಯ ಕರ್ನಾಟಕ'(1922), ಎಚ್‌.ಕೆ.ವೀರಣ್ಣಗೌಡರ ‘ಚಿತ್ರಗುಪ್ತ’, ಆರ್.ಆರ್.ದಿವಾಕರ ತಂಡದವರ ‘ಕರ್ಮವೀರ'(1921), ಕಡೆಂಗೋಡ್ಲು ಕೃಷ್ಣಭಟ್ಟರ ‘ರಾಷ್ಟ್ರಬಂಧು'(1928), ಸೀತಾರಾಮ ಶಾಸ್ತ್ರಿಗಳ ‘ವೀರಕೇಸರಿ'(1928) ಮುಂತಾದ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟದ ದೀಪಾವಳಿಗೆ ಹಚ್ಚಿದ ಹಣತೆಗಳಾಗಿ ಬೆಳಗಿದವು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರ್ನಾಟಕದ ಪತ್ರಿಕೆಗಳಿಗೆ ಪ್ರೇರಣಾಸ್ರೋತವಾಗಿದ್ದವರು ಸ್ವತಃ ಸ್ವಾತಂತ್ರ್ಯ ಹೋರಾಟಗಾರರೂ, ಪತ್ರಕರ್ತರೂ ಆಗಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕ್ ಹಾಗು ಗಾಂಧೀಜಿಯವರು. ತಿಲಕರು ‘ಕೇಸರಿ’ ಹಾಗು ‘ಮರಾಠಾ’ ಪತ್ರಿಕೆಗಳನ್ನು ಪ್ರಾರಂಭಿದ್ದು ನಮ್ಮ ಸ್ವಾತಂತ್ರ್ಯ ಹೋರಾಟದ ಉದ್ದೇಶ ಪೂರ್ತಿಗಾಗಿಯೇ. ಅವೆರಡೂ ಪತ್ರಿಕೆಗಳಲ್ಲಿ ತಿಲಕರು ಬ್ರಿಟೀಷರ ಬರ್ಬರ ಆಡಳಿತದ ವಿರುದ್ಧ ಬರೆಯುತ್ತಿದ್ದ ಉಗ್ರ ಸಂಪಾದಕೀಯ ಲೇಖನಗಳು ದೇಶದ ಇತರ ರಾಜ್ಯಗಳಂತೆ ಕರ್ನಾಟಕದಲ್ಲೂ ಪ್ರೇರಣೆ ನೀಡಿದವು.20ನೆಯ ಶತಮಾನದಲ್ಲಿ ಆರಂಭಗೊಂಡ ಕನ್ನಡ ಪತ್ರಿಕೆಗಳಿಗೆ ತಿಲಕರ ಪತ್ರಿಕೆಗಳೇ ಸ್ಪೂರ್ತಿಯಾಗಿದ್ದವು.ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ಗಂಗಾಧರರಾವ್ ದೇಶಪಾಂಡೆ, ಹರ್ಡೇಕರ ಮಂಜಪ್ಪ, ಮಂಜೇಶ್ವರ ಅನಂತರಾವ್ ಮೊದಲಾದವರು ತಿಲಕರ ಉಗ್ರ ಬರಹಗಳಿಗೆ ಮಾರುಹೋಗಿದ್ದರು.ಅವರ ಅದೇ ಹೆಸರಿನ ಪತ್ರಿಕೆ ಡಿ.ಕೆ.ಭಾರದ್ವಾಜರ ‘ತಿಲಕ ಸಂದೇಶ’, ಸೀತಾರಾಮ ಶಾಸ್ತ್ರಿಗಳ ‘ವೀರ ಕೇಸರಿ’ ಪತ್ರಿಕೆಗಳಿಗೆ ಸ್ಪೂರ್ತಿದಾತನಾಗಿದ್ದು ತಿಲಕರ ‘ಕೇಸರಿ’ಎಂಬುದು ನಿಸ್ಸಂದೇಹ. ಈ ಪತ್ರಿಕೆಗಳಲ್ಲಿ ತಿಲಕರ ಲೇಖನಗಳನ್ನು ಯಥಾವತ್ತಾಗಿ  ಕನ್ನಡದಲ್ಲಿ ಪ್ರಕಟಿಸಿದ ‘ಅಪರಾಧ’ಕ್ಕಾಗಿ ಬ್ರಿಟಿಷ್ ಅಧಿಕಾರಿಗಳ ಕೆಂಗಣ್ಣಿಗೆ ಈ ಪತ್ರಕರ್ತರು ಗುರಿಯಾಗಿದ್ದೂ ಇದೆ.

ಕನ್ನಡಿಗರಲ್ಲಿ ರಾಷ್ಟ್ರೀಯ ಜಾಗೃತಿಯನ್ನು ಪತ್ರಿಕಾವೃತ್ತಿಯ ಮೂಲಕ ಮೂಡಿಸುವಲ್ಲಿ ಅಹರ್ನಿಶಿ ಶ್ರಮಿಸಿದ ತಿ.ತಾ.ಶರ್ಮರ ಕೊಡುಗೆ ಬಲು ದೊಡ್ಡದು.ಭಾರತೀಯ ಪರಂಪರೆಯ ಮಹೋನ್ನತ ಮೌಲ್ಯಗಳಲ್ಲಿ ಪ್ರಾಮುಖ್ಯ ಪಡೆದಿರುವ ‘ಕ್ಷಾತ್ರ’ವು ಕ್ರಾಂತಿಕಾರಿಗಳ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತೋರಿಕೊಂಡ ಪರಿ ಎಂತಹುದು? – ಎಂಬುದನ್ನು ಅತ್ಯಂತ ರೋಮಾಂಚಕಾರಿಯಾಗಿ ಕಟ್ಟಿಕೊಟ್ಟವರು ಶರ್ಮರೇ. ಸ್ವಾತಂತ್ರ್ಯ ಹೋರಾಟಕ್ಕೆ ಅಗತ್ಯ ಭೂಮಿಕೆಯನ್ನು ಸಿದ್ಧಪಡಿಸುವುದಕ್ಕೆಂದೇ ಪತ್ರಿಕೆಯನ್ನು ನಡೆಸಿದ ಶರ್ಮರು, ದೇಶಾದ್ಯಂತ ನಡೆಯುತ್ತಿದ್ದ ಹೋರಾಟದ ವಿವರ ವಿವರಗಳನ್ನೂ ತಮ್ಮ ‘ವಿಶ್ವ ಕರ್ನಾಟಕ’ ಪತ್ರಿಕೆಯ ಮೂಲಕ ಕನ್ನಡಿಗರಿಗೆ ಪರಿಚಯಿಸಿದ ಮಹಾನುಭಾವರು. 1926ರಲ್ಲಿ ವಿಶ್ರಾಂತಿಗಾಗಿ ನಂದಿಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದ ಗಾಂಧೀಜಿ ಪ್ರತಿನಿತ್ಯ ಪ್ರಾರ್ಥನಾ ಸಭೆಯಲ್ಲಿ ನೀಡಿದ ಸಂದೇಶವನ್ನು ಶರ್ಮರು ಪ್ರಕಟಿಸಿದರು.ಗಾಂಧೀಜಿಯವರಿಂದ ಪ್ರಭಾವಿತರಾಗಿ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ನೀಡಿ,ಆನಂತರ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿಯೇ ಪತ್ರಿಕೆ ನಡೆಸಿದ ಧೈರ್ಯಶಾಲಿ ಪತ್ರಕರ್ತ ಅವರಾಗಿದ್ದರು. ಇದೇ ಕಾರಣಕ್ಕಾಗಿ ಅವರ ಮೇಲೆ ದಂಡ ಪ್ರಯೋಗಿಸುವ ಪರೋಕ್ಷ ಬೆದರಿಕೆಯೂ ಎದುರಾಗಿತ್ತು.ಆದರೆ ಶರ್ಮರು ಅದಕ್ಕೆಲ್ಲ ಅಳುಕಲಿಲ್ಲ. ತಮ್ಮ ಎಂದಿನ ಘನತೆ, ಗಾಂಭೀರ್ಯ, ಧೀಮಂತಿಕೆಗಳಿಂದಲೇ ಅದನ್ನೆಲ್ಲ ಎದುರಿಸಿದರು. ಸತ್ಯ ಪ್ರತಿಪಾದನೆಯ ಮಾರ್ಗದಲ್ಲಿ ಎದುರಾಗುವ ಅಡ್ಡಿ ಆತಂಕಗಳಿಗೆ ಅವರು ಕಲ್ಲು ಬಂಡೆಯಾಗಿರುತ್ತಿದ್ದರು.

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಬಲಿದಾನಿಗಳನ್ನು ದೇಶ ಮರೆಯಕೂಡದು ಎಂಬ ನೆಲೆಯಲ್ಲಿ ಶರ್ಮರು ಪ್ರಜಾಮತ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನೇ ಬರೆದಿದ್ದರು. ಆ ಲೇಖನಗಳು ಆನಂತರದಲ್ಲಿ 1965ರಲ್ಲಿ ‘ವಿಕ್ರಾಂತ ಭಾರತ’ ಎಂಬ ಶೀರ್ಷಿಕೆಯನ್ನು ಹೊತ್ತು ಪುಸ್ತಕರೂಪದಲ್ಲಿ ಪ್ರಕಟವಾಯಿತು.ಶರ್ಮರು ಬಳಸಿದ ಭಾಷೆಯ ಓಜಸ್ಸು, ಶೈಲಿಯಲ್ಲಿನ ಸೊಗಸು, ನಿರೂಪಣೆಯಲ್ಲಿದ್ದ ರಭಸ, ಮಾಹಿತಿಗಳಲ್ಲಿದ್ದ ಖಚಿತತೆಗಳಿಂದಾಗಿ ಆ ಪುಸ್ತಕ ಪ್ರಕಟವಾದ ಸಂದರ್ಭದಲ್ಲಿ ಕನ್ನಡನಾಡಿನಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಹಲವು ಲೇಖಕರು,ಬರಹಗಾರರಿಗೆ ಸ್ವಾತಂತ್ರ್ಯ ಹೋರಾಟದ ಕುರಿತು ಬರೆಯಲು ಪ್ರೇರಣೆ ನೀಡಿತು.

ಸಿದ್ಧವನಹಳ್ಳಿ ಕೃಷ್ಣಶರ್ಮರು ‘ವಿಶ್ವ ಕರ್ನಾಟಕ’ದ ಸಂಪಾದಕರಾಗಿದ್ದ ವೇಳೆ  ‘ಭಾರತ ಬಿಟ್ಟು ತೊಲಗಿ’ ಚಳುವಳಿ ದೇಶದೆಲ್ಲೆಡೆ ಹರಡಿತ್ತು.ಕೃಷ್ಣಶರ್ಮರು ಸ್ವಾತಂತ್ರ್ಯ ಸೇನಾನಿಗಳಿಗೆ ಬೆಂಬಲವಾಗಿ  ನಿಂತು ಲೇಖನ, ಸುದ್ದಿಗಳನ್ನು ಪ್ರಕಟಿಸಿದರು.1944ರಲ್ಲಿ ಅವರು ಬರೆದ ಒಂದು ಸಂಪಾದಕೀಯ ಹಾಗು ವೈಸ್ರಾಯ್‌ಗೆ ಬರೆದ ಬಹಿರಂಗ ಪತ್ರ ರಾಜದ್ರೋಹಕರವಾಗಿದೆ ಎಂಬ ಆಪಾದನೆಯನ್ನು ಎದುರಿಸಬೇಕಾಯಿತು. ಬ್ರಿಟಿಷ್ ಸರಕಾರ ಅವರಿಗೆ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಧಾರವಾಡದ ಅರ್.ಎಸ್.ಹುಕ್ಕೇರಿಕರ್ ತಿಲಕರ ಲೇಖನಗಳಿಂದ ಪ್ರಭಾವಿತರಾಗಿ, ‘ಧರ್ಮವೀರ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಕರ್ನಾಟಕದಲ್ಲಿ ಅವರು ಕರ್ನಾಟಕ ಏಕೀಕರಣ ಚಳುವಳಿಯ ಪ್ರವರ್ತಕರೂ ಆಗಿದ್ದರು. ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರ್ಯ ಪ್ರಾಪ್ತಿ- ಇವೆರಡೇ ‘ಧರ್ಮವೀರ’ ಪತ್ರಿಕೆಯ ಮುಖ್ಯಘೋಷಣೆಗಳಾಗಿತ್ತು.

ಉಡುಪಿಯಿಂದ ಪ್ರಕಟವಾಗುತ್ತಿದ್ದ ‘ಸತ್ಯಾಗ್ರಹ’ ಮತ್ತು ‘ನವಯುಗ’, ಮಡಿಕೇರಿಯ ‘ಕೊಡಗು’, ಕುಮಟಾದ ಕಾನಡಾ ವೃತ್ತ’ ಹಾಗು ‘ಕಾನಡಾ ಧುರೀಣ’, ಬಳ್ಳಾರಿಯ ‘ಕರ್ನಾಟಕ ಕೇಸರಿ’,ಹುಬ್ಬಳ್ಳಿಯ’ತರುಣ ಕರ್ನಾಟಕ’,ಬಾಗಲಕೋಟೆಯ ‘ಕನ್ನಡಿಗ’,ಬಿಜಾಪುರದ ‘ಕರ್ನಾಟಕ ವೈಭವ’ ಮುಂತಾದ ಹಲವು ಸಣ್ಣ ಪತ್ರಿಕಗಳು ಅಸಹಕಾರ ಚಳುವಳಿ, ಕರನಿರಾಕರಣೆ,ದಂಡೀ ಯಾತ್ರೆ,ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಮುಂತಾದ ದೇಶದ ಬೇರೆ ಬೇರೆ ಕಡೆಯ ವಿದ್ಯಮಾನಗಳನ್ನು ಕರ್ನಾಟಕದ ಮನೆಮನೆಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.ಇಂತಹ ‘ಸಾಹಸ’ ಎಸಗಿದ್ದಕ್ಕಾಗಿ ಬ್ರಿಟಿಷ್ ಸರಕಾರ ಮುದ್ರಣಾಲಯಗಳಿಗೆ ಬೀಗ ಜಡಿದ, ಕಿರುಕುಳ ನೀಡಿದ, ಬಂಧನಕ್ಕೊಳಪಡಿಸಿದ ವಿದ್ಯಮಾನಗಳೂ ನಡೆದವು.

ಬ್ರಿಟೀಷರು ಹೀಗೆ ನಾನಾ ಬಗೆಯಲ್ಲಿ ಕಿರುಕುಳ ನೀಡಿ ಪತ್ರಿಕೆಗಳ ಬಾಯಿಗೆ ಬೀಗ ಹಾಕಿದಾಗ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸಿದಾಗ ಹಲವು ಭೂಗತ ಪತ್ರಿಕೆಗಳು ಕನ್ನಡದ ನೆಲದಲ್ಲಿ ಜನ್ಮ ತಾಳಿದವು.1929-31ರ ಅವಧಿಯಲ್ಲಿ ‘ಸತ್ಯಾಗ್ರಹ ಕರಪತ್ರ’ ಎಂಬ ಭೂಗತ ಪತ್ರಿಕೆಯು ‘ರಾಜದ್ರೋಹವೇ ನಮ್ಮ ಧರ್ಮ,ಪೂರ್ಣ ಸ್ವಾತಂತ್ರ್ಯವೇ ನಮ್ಮ ಧ್ಯೇಯ’ ಎಂಬ ಘೋಷಣೆಯನ್ನು ಧೈರ್ಯವಾಗಿ ಮುದ್ರಿಸಿಕೊಂಡಿತ್ತು! ‘ಆಜಾದ್’, ‘ತ್ರಿಶೂಲ’,’ಡಮರುಗ’ ‘ಕ್ರಾಂತಿ’,’ಸಮರ’,’ಕಹಳೆ’,’ಫೈರ್’ ಮುಮತಾದ ಇನ್ನೂ ಹಲವು ಭೂಗತ ಪತ್ರಿಕೆಗಳು ಎಲ್ಲೋ ಮುದ್ರಣಗೊಂಡು ರಾಜ್ಯದೆಲ್ಲೆಡೆ ರಹಸ್ಯವಾಗಿ ವಿತರಿಸಲ್ಪಡುತ್ತಿದ್ದವು. ಇಂಟರ್ನೆಟ್, ಮೊಬೈಲ್, ಕಂಪ್ಯೂಟರ್, ವಾಟ್ಸಪ್, ಟಿವಿ ಇತ್ಯಾದಿ ಹೆಸರುಗಳ ಕಲ್ಪನೆಯೇ ಇರದಿದ್ದ ಆ ಕಾಲದಲ್ಲಿ ಸ್ವಾತಂತ್ರ್ಯ ಪ್ರಾಪ್ತಿಯ ಸದುದ್ದೇಶಕ್ಕಾಗಿ ಅದೆಂಥ ಸಾಹಸಮಯ ಕಾರ್ಯದಲ್ಲಿ ಪತ್ರಿಕೆಗಳು ತೊಡಗಿದ್ದವು ಎಂಬುದನ್ನು ಊಹಿಸಿಕೊಂಡರೆ ಎಂಥವರಿಗೂ ಮೈಮನ ರೋಮಾಂಚನಗೊಳ್ಳದೆ ಇರದು.1975ರ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲೂ ಕರ್ನಾಟಕದಲ್ಲಿ ‘ಕಹಳೆ’,’ರಣದುಂಧುಬಿ’,’ಜಾಗೃತಿ’ಯಂತಹ ಪತ್ರಿಕೆಗಳು ಗಣನೀಯ ಪಾತ್ರ ವಹಿಸಿದ್ದವು ಎಂಬುದು ಇಲ್ಲಿ ಉಲ್ಲೇಖನೀಯ.


ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪತ್ರಿಕೆಗಳ ಪಾತ್ರ ಹಾಗು ಕೊಡುಗೆ ಅತ್ಯಂತ ಸ್ಮರಣೀಯ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಪತ್ರಿಕೆಗಳು ಕೂಡ ಹೋರಾಟಗಾರರ ಬತ್ತಳಿಕೆಯಲ್ಲಿದ್ದ ಪ್ರಬಲ ಅಸ್ತ್ರವಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವುದು, ಹರಿದುಹಂಚಿಹೋಗಿದ್ದ ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸುವುದು – ಇವರೆಡೇ ಆಗ ಪತ್ರಿಕೆಗಳ ಮುಖ್ಯ ಧ್ಯೇಯವಾಗಿತ್ತು. ಆ ಧ್ಯೇಯ ಸಾಧನೆಗಾಗಿ ಪತ್ರಕರ್ತರು ಪಡಬಾರದ ಕಷ್ಟ, ಸಂಕಟಗಳನ್ನು ಮೈಮೇಲೆಳೆದುಕೊಳ್ಳಲು ಹೆದರುತ್ತಿರಲಿಲ್ಲ.ಹಾಗಾಗಿಯೇ ಪತ್ರಕರ್ತರ ಬಗ್ಗೆ ಆಗ ಗೌರವಾದರಗಳು ಎಲ್ಲೆಡೆ ಕಂಡುಬರುತ್ತಿತ್ತು.’ ನಾನೊಬ್ಬ ಸಂಪಾದಕ’ ಎಂದು ಯಾರಾದರೂ ಹೆಮ್ಮೆಯಿಂದ ಎದೆಯೆತ್ತಿ ಹೇಳಿದರೆ,’ಅದೇನೋ ಸರಿ, ಊಟಕ್ಕೇನ್ಮಾಡ್ತೀಯಾ?’ ಎಂದು ಕನಿಕರದಿಂದ ಜನರು ವಿಚಾರಿಸುತ್ತಿದ್ದರು.
ಆಗಿನ ಧ್ಯೇಯ ನಿಷ್ಠ,ಮೌಲ್ಯಾಧಾರಿತ ಪತ್ರಿಕಾಲೋಕಕ್ಕೆ ಭಾವಪೂರ್ಣ ಶತಶತನಮನ.ಈಗಿನ ಧ್ಯೇಯ ರಹಿತ,ಮೌಲ್ಯರಹಿತ, ಮಾಧ್ಯಮಲೋಕಕ್ಕೆ ದೂರದಿಂದಲೇ ದೊಡ್ಡದೊಂದು ನಮನ!

Leave a Reply

Your email address will not be published.

This site uses Akismet to reduce spam. Learn how your comment data is processed.