– ಸುಷ್ಮಾ ಮೂಡುಬಿದರೆ, ಕಿರುತೆರೆ ಬರಹಗಾರರು
ಕರಾವಳಿಯ ಕಾಡು ಮತ್ತು ಅಲ್ಲಿ ವಾಸಿಸುವ ಮಣ್ಣಿನ ಮಕ್ಕಳ ಕಥೆ ಈ ಕಾಂತಾರ. ಕರಾವಳಿಯ ಆಚರಣೆ, ದೈವಗಳು, ಕಂಬಳ, ನೇಮ, ಕೋಳಿ ಅಂಕ, ಗದ್ದೆ, ಕಾಡು, ಬೇಟೆ ಇತ್ಯಾದಿ ಬಹಳಷ್ಟು ವಿಚಾರಗಳ ಬಗ್ಗೆ ಕಾಂತಾರ ಬೆಳಕು ಚೆಲ್ಲಿದೆ.
ಚಿತ್ರವು ಒಬ್ಬ ರಾಜ ನೆಮ್ಮದಿಯನ್ನು ಹುಡುಕುತ್ತಾ ತನ್ನ ಜಾಗವನ್ನು ಜನಪದರಿಗೆ ಊರಾಗಿ ಬಿಟ್ಟುಕೊಟ್ಟು, ಅವರ ದೈವ ಪಂಜುರ್ಲಿಯನ್ನು ತನ್ನೊಂದಿಗೆ ತನ್ನ ಅರಮನೆಗೆ ಕರೆದುಕೊಂಡು ಹೋಗುವ ಹೈವೋಲ್ಟೇಜ್ ಸೀನ್‌ನಿಂದ ಆರಂಭವಾಗುತ್ತದೆ. ಮುಂದೆ ಜಾಗದ ಕಾರಣಕ್ಕಾಗಿ ದೈವಕ್ಕೆ ಎದುರಾಗಿ ನಿಲ್ಲುವ ರಾಜನ ಮಗ, ದೈವದ ಕೆಂಗಣ್ಣಿಗೆ ಗುರಿಯಾಗಿ ರಕ್ತಕಾರಿ ಸಾಯೋದು, ಇನ್ನೊಂದು ಕಡೆ ಹೀರೋ ಅವನ ತಂದೆಯನ್ನು ಕಳೆದುಕೊಳ್ಳೋವ ವೈರುಧ್ಯದೊಂದಿಗೆ ಚಿತ್ರಕ್ಕೆ ಮಹತ್ವದ ತಿರುವು ಸಿಗುತ್ತದೆ.
ಕಾಡನ್ನೇ ನಂಬಿಕೊಂಡು ಬದುಕುವ ಜನರ ಬದುಕಿಗೆ ಫಾರೆಸ್ಟ್ ಆಫೀಸರ್‌ನ ಆಗಮನವಾಗುತ್ತದೆ. ಕಾಡಿಗೆ ಬೇಲಿಯಾಗಲು ಹೋಗುವ ಸರಕಾರ ಮತ್ತು ಕಾಡಿನ ಮಕ್ಕಳ ನಡುವಿನ ಸಂಘರ್ಷ ಚಿತ್ರದ ಹೈಲೈಟ್. ನಾಯಕ ಶಿವನ ಪಾತ್ರದಲ್ಲಿ ರಿಷಭ್ ಅಕ್ಷರಷಃ ಮೆರೆದಿದ್ದಾರೆ.
ಶಿವ ಸದಾ ಕಾಡನ್ನು ಊರನ್ನು ಜನರನ್ನು ರಕ್ಷಿಸುವಲ್ಲಿ ಮುಂದೆ ಇರುತ್ತಾನೆ ಮತ್ತು ಅದರಿಂದಾಗಿಯೇ ಅವನು ಬಹಳಷ್ಟು ಕಷ್ಟಗಳಲ್ಲಿ ಸಿಲುಕಬೇಕಾಗುತ್ತದೆ. ಇದರ ಜೊತೆಗೆ ನಾಯಕನಿಗೆ ಲೀಲಾ ಪಾತ್ರದೊಂದಿಗೆ ರುಚಿಗೆ ತಕ್ಕಷ್ಟೇ ಪ್ರೇಮಪ್ರಕರಣ ಇದೆ. ಸ್ನೇಹಿತರೊಂದಿಗೆ ನವಿರು ಹಾಸ್ಯ, ಬೇಟೆಯಂತಹ ಸಾಹಸಗಳಿವೆ. ಇದು ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಕಾಂತಾರದಂತಹ ಗಂಭೀರ ವಿಷಯವನ್ನು ಹೇಳುವಾಗ, ವೀಕ್ಷಕರಿಗೆ ಎದುರಾಗಬಹುದಾಗಿದ್ದ ಏಕಾತನಾತೆಯನ್ನು ಈ ಪ್ರೇಮ, ತಿಳಿಹಾಸ್ಯ ಮತ್ತು ಅದಕ್ಕೆ ಪೂರಕವಾಗಿ ಬಳಸಿಕೊಂಡ ಪ್ರಕೃತಿಯ ಹಿನ್ನಲೆ, ಸಂಭಾಷಣೆಯಲ್ಲಿ ಕಚಗುಳಿ ಇಡುವ ಒನ್‌ಲೈನರ್ಸ್ ಮರೆಸಿದೆ. ಇದು ನಿಜಕ್ಕೂ ನಿರ್ದೇಶನಕರ ಬುದ್ದಿವಂತಿಕೆ.
ಚಿತ್ರದ ಮೊದಲಾರ್ಧದಲ್ಲಿ ಇದು ಒಂದು ಪ್ರದೇಶಕ್ಕೆ ಸೀಮಿತವಾದ ಕತೆ ಎಂದು ಅನಿಸಬಹುದಾದರೂ, ದ್ವಿತೀಯಾರ್ಧದಲ್ಲಿ ಚಿತ್ರ ತೆಗೆದುಕೊಳ್ಳುವ ತಿರುವು, ಆ ಬೌಂಡರಿಯನ್ನು ದಾಟಿಸಿದೆ. ಕಾಂತಾರ ಮಾನವನ ದ್ವೇಷದ, ಕ್ರೌರ್ಯದ, ವಂಚನೆಯ ಕಥೆಯನ್ನು ಹೇಳುತ್ತಾ ಸಾಗುವುದರಿಂದ, ಇದು ಎಲ್ಲಿಯೂ ನಡೆಯಬಹುದಾದ ಒಂದು ಯೂನಿವರ್ಸಲ್ ಕಥೆಯಾಗಿ ಹೊರಹೊಮ್ಮುತ್ತದೆ. ಕೊನೆಯಲ್ಲಿ ನಿರ್ದೇಶಕರು ಪ್ರಕೃತಿ ತಾನೇ ಸಮತೋಲನತೆಯನ್ನು ಕಾಯ್ದುಕೊಳ್ಳುವ ರೀತಿಯನ್ನು ಹೇಳಿದ ಪರಿ ವಿಶಿಷ್ಟ ಮತ್ತು ಅನನ್ಯ.
ಚಿತ್ರದುದ್ದಕ್ಕೂ ಊರು, ಕಾಡಿನ ವಿಚಾರ ಬಂದಾಗ ಆಕ್ರಮಣಕಾರಿಯಾಗುವ ನಾಯಕ, ಮುಂದೆ ತಾನೇ ಕ್ಷೇತ್ರಪಾಲ ಗುಳಿಗನಾಗುವುದು ಚಿತ್ರಕ್ಕೊಂದು ಸಂಪೂರ್ಣತೆ ತಂದುಕೊಟ್ಟಿದೆ. ರಿಷಭ್ ಶೆಟ್ಟಿ ನಿರ್ದೇಶನ ಕಾಂತಾರ ಒಂದು ವಿಶೇಷ ಚಿತ್ರ ಅನ್ನೋದರಲ್ಲಿ ಎರಡು ಮಾತಿಲ್ಲ. ಚಿತ್ರವು ದೈವ, ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಈ ಚಿತ್ರ ಸಮರ್ಪಕವಾಗಿ ತೆರೆ ಮೇಲೆ ತಂದಿದೆ.
ಚಿತ್ರದ ತಾರಾಗಣವೂ ಅಷ್ಟೇ, ಹಿಂದೆಂದೂ ಕಾಣದ ರಿಷಭ್‌ರನ್ನು ನೀವಿಲ್ಲಿ ಕಾಣಬಹುದು, ಕಾಡಿನ ಮುಗ್ದ ಹುಡುಗಿಯಾಗಿ ಸಪ್ತಮಿ ಅವರ ಅಭಿನಯ ಚೆನ್ನಾಗಿದೆ. ಇನ್ನು ಶಿವನ ಗೆಳೆಯರ ಪಾತ್ರದಲ್ಲಿ ದೀಪಕ್ ರೈ, ಗುರು ಸನಿಲ್, ಪ್ರಕಾಶ್ ತುಮಿನಾಡು, ರಂಜನ್ ಮಿಂಚಿದ್ದಾರೆ. ಕಿಶೋರ್ ಚಿತ್ರಕ್ಕೊಂದು ಘನತೆ ತಂದುಕೊಟ್ಟಿದ್ದಾರೆ, ತಾಯಿ ಪಾತ್ರದಲ್ಲಿ ಮಾನಸಿ ಸುಧೀರ್ ಅಭಿನಯ ಮೆಚ್ಚುವಂತದ್ದು, ಧಣಿಗಳ ಪಾತ್ರದಲ್ಲಿ ಅಚ್ಯುತ್ ಇಷ್ಟವಾಗ್ತಾರೆ, ಶಿವನ ತಮ್ಮ ಗುರುವನ ಪಾತ್ರದಲ್ಲಿ ಸ್ವರಾಜ್ ಶೆಟ್ಟಿ ನಟನೆ ಅದ್ಭುತ.
ಒಳ್ಳೆಯ ಕಥೆ, ಬರವಣಿಗೆ, ನಿರ್ದೇಶನ ಇದ್ದರೆ ಗೆಲ್ಲಬಹುದು ಅನ್ನೋದಕ್ಕೆ ಕಾಂತಾರ ಒಂದೊಳ್ಳೆಯ ನಿದರ್ಶನ. ಎಲ್ಲಾ ಹೇಳಿದ ಮೇಲೂ ಇನ್ನೇನೋ ಹೇಳಲಿದೆ ಅನಿಸೋದು ಮತ್ತು ಚಿತ್ರದ ಗುಂಗಿನಿಂದ ಹೊರಬರಲು ಬಿಡದೇ ಯೋಚನೆಗೆ ಹಚ್ಚೋದು ಕಾಂತಾರದ ನಿಜವಾದ ಗೆಲುವು.
ಸುಶ್ಮಾ, ಕಥೆಯನ್ನು ಪೂರ್ತಿ ಬಿಟ್ಟು ಕೊಡದೆ ಕುತೂಹಲಕ್ಕೆ ಎಷ್ಟು ಬೇಕೋ ಅಷ್ಟು ಹಣಕಿ ಹಾಕಿ ಚೆಂದ ಬರೆದಿದ್ದೀರಿ. Its like a mini skirt ಅಂದರೆ ಸರಿಯಾದೀತು. ಅಂಥ ಚಿತ್ರಗಳ ಬಗ್ಗೆ ಬರೆಯಲು ನಿಮ್ಮಂಥ ಬರಹಗಾರರೇ ಸರಿ.
ನಲ್ಮೆ,
ಶಮ ನಂದಿಬೆಟ್ಟ