ಇಂದು ಜಯಂತಿ

ಕಯ್ಯಾರ ಕಿಞ್ಞಣ್ಣ ರೈ ಅವರು ಮಹಾನ್‌ ಕನ್ನಡ ಹೋರಾಟಗಾರ, ಕವಿ, ಸಾಹಿತಿ, ಬಹುಭಾಷಾ ವಿದ್ವಾಂಸರು. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕರಾಗಿ, ನಿರಂತರವಾಗಿ ಶ್ರಮವಹಿಸಿದವರು. ಇಂದು ಅವರ ಜಯಂತಿ.


ವೃತ್ತಿ
ಕಯ್ಯಾರ ಕಿಞ್ಞಣ್ಣ ರೈ ಅವರು ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಪತ್ರಿಕೋದ್ಯಮದಲ್ಲೂ ನಿರಂತರವಾಗಿ ತೊಡಗಿಸಿಕೊಂಡವರು. ದಿ ಹಿಂದೂ ಪತ್ರಿಕೆಗೆ ತಮ್ಮ ಬರಹಗಳನ್ನು ಬರೆಯುತ್ತಿದ್ದರು. ಅವರು ರಂಗಭೂಮಿ, ವ್ಯಾಕರಣ ಮತ್ತು ಮಕ್ಕಳ ಪುಸ್ತಕಗಳನ್ನು ಬರೆದಿದ್ದಾರೆ.


ಪರಿಚಯ
ಕಯ್ಯಾರ ಕಿಞ್ಞಣ್ಣ ರೈ ಅವರು ಜೂನ್‌ 8, 1915 ರಂದು ಕೇರಳದ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ದುಗ್ಗಪ್ಪ ರೈ ಮತ್ತು ತಾಯಿ ದೈಯಕ್ಕೆ. ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಓದುತ್ತಿದ್ದರು. ಇದರ ಜೊತೆಗೆ ಬಿ.ಎ. ಮತ್ತು ಎಂ.ಎ ಶಿಕ್ಷಣ ಪಡೆದಿದ್ದು ನಂತರ ಅಧ್ಯಾಪಕ ತರಬೇತಿ ಪಡೆದರು. ಅವರು ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲೂ ಭಾಗವಹಿಸಿದರು.


ಕಯ್ಯಾರ ಕಿಞ್ಞಣ್ಣ ರೈ ಅವರ ಸಾಹಿತ್ಯಿಕ ಸಾಧನೆ ವಿವಿಧ ರೂಪಗಳಲ್ಲಿದ್ದು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಪ್ರಕಟಿಸಿದ್ದರು. ಕಾರ್ನಾಡ ಸದಾಶಿವರಾವ್, ರತ್ನರಾಜಿ, ಎ. ಬಿ. ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನೂ ಹಾಗೂ ಕಥಾಸಂಗ್ರಹಗಳನ್ನೂ ಪ್ರಕಟಿಸಿದ್ದರು.


ರಾಷ್ಟ್ರಕವಿ ಗೋವಿಂದ ಪೈಯವರ ಬಗ್ಗೆ ಮೂರು ಗ್ರಂಥಗಳನ್ನು ಬರೆದಿದ್ದಾರೆ. ಪಂಚಮಿ ಮತ್ತು ಆಶಾನ್‌ ರ ಎಂಬ ಎರಡು ಅನುವಾದಿತ ಖಂಡಕಾವ್ಯಗಳನ್ನು ರಚಿಸಿದ್ದಾರೆ‌. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ ‘ಪರಶುರಾಮ’ ಅವರ ಕುರಿತು ಬರೆದುಕೊಟ್ಟಿದ್ದರು. ನವೋದಯ ವಾಚನಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು, ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದರು. ‘ವಿರಾಗಿಣಿ’ ಎನ್ನುವುದು ರೈ ಅವರು ಬರೆದ ನಾಟಕ. ‘ದುಡಿತವೆ ನನ್ನ ದೇವರು’ ಎನ್ನುವುದು ರೈಯವರ ಆತ್ಮಕಥನ. ಪತ್ರಿಕಾ ಸಂಪಾದನೆಯಲ್ಲೂ ಶ್ರಮದಾನ ನೀಡಿದ್ದ ಕಿಞ್ಞಣ್ಣ ರೈ ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.


ಹೋರಾಟ
ಕಯ್ಯಾರ ಕಿಞ್ಞಣ್ಣ ರೈ ಅವರು ಮಹಾತ್ಮಗಾಂಧಿಯವರಿಂದ ಹೆಚ್ಚು ಪ್ರಭಾವಿತರಾಗಿದ್ದರು. ಹೀಗಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸ್ವಾತಂತ್ರ್ಯದ ನಂತರ ಕನ್ನಡ ಮಾತನಾಡುವ ಪ್ರದೇಶವನ್ನು ಒಂದೇ ರಾಜ್ಯದೊಳಗೆ ತರಬೇಕೆಂದು ಬಯಸಿದ ಕಯ್ಯಾರ ಕಿಞ್ಞಣ್ಣ ರೈ ಅವರು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ್ದರು.


ಕೇರಳವು ಕರ್ನಾಟಕದ ಗಡಿಭಾಗದಲ್ಲಿ ಇದೆ. ಕಾಸರಗೋಡನ್ನು ಚಂದ್ರಗಿರಿ ನದಿಯಿಂದ ಬಹುತೇಕ ಎರಡು ಸಮಾನ ಭಾಗಗಳಾಗಿ ವಿಂಗಡಿಸಲಾಗಿದೆ. ಈ ಭಾಗವನ್ನು ಸಹ ಕರ್ನಾಟಕ ರಾಜ್ಯಕ್ಕೆ ಸೇರಿಸಬೇಕೆಂದು ಕಯ್ಯಾರ ಕಿಞ್ಞಣ್ಣ ರೈ ಅವರು ಯಾವಾಗಲೂ ಬಯಸಿದ್ದರು. ಕಾಸರಗೋಡಿನ ಉತ್ತರಾರ್ಧವನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಲು ಕಾಸರಗೋಡು ವಿಲೀನೀಕರಣ ಕ್ರಿಯಾ ಸಮಿತಿಯನ್ನು 2002ರಲ್ಲಿ ರಚಿಸಿ ಅದರ ಪ್ರಧಾನ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು.


ಪ್ರಶಸ್ತಿ
ಕಯ್ಯಾರ ಕಿಞ್ಞಣ್ಣ ರೈ ಅವರ ಸಾಧನೆಗೆ ಅನೇಕ ಪ್ರಶಸ್ತಿಗಳು ಬಂದಿವೆ. 1969ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ಅದೇ ವರ್ಷ ಅತ್ಯುತ್ತಮ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು. 1970ರಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನಿಂದ ಗೌರವ ಫೆಲೋಶಿಪ್ ಪಡೆದರು. 1998ರಲ್ಲಿ ಮಂಗಳೂರಿನಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಧ್ಯಕ್ಷರಾಗಿದ್ದರು. 2004ರಲ್ಲಿ ಸಾಹಿತ್ಯಕೃಷಿಗಾಗಿ ಪೇಜಾವರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2005ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಲಾಯಿತು. 2006ರಲ್ಲಿ ಆದರ್ಶ ರತ್ನ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಕಯ್ಯಾರ ಕಿಞ್ಞಣ್ಣ ರೈ ಅವರು ಆಗಸ್ಟ್‌ 9, 2015 ರಂದು ತಮ್ಮ 101ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.