ಬೆಂಗಳೂರು: ಭಾರತದ ಸ್ವಾತಂತ್ರ್ಯ ಹೋರಾಟದ ವಿವಿಧ ಘಟನೆಗಳು ಹಾಗೂ ಹೋರಾಟಗಾರರ ಕುರಿತ ‘ಕ್ರಾಂತಿಯ ಕಿಡಿಗಳು’ ಎಂಬ ನೂತನ ಪುಸ್ತಕ ನಾಳೆ (ಆಗಸ್ಟ್ 11) ಲೋಕಾರ್ಪಣೆಗೊಳ್ಳಲಿದೆ. ದು. ಗು. ಲಕ್ಷ್ಮಣ ಅವರು ರಚಿಸಿರುವ ಈ ಕೃತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ ಶ್ರೀ ಮುಕುಂದ್ ಅವರು ಕೇಶವಕೃಪಾದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಕ್ರಾಂತಿಯ ಕಿಡಿಗಳು
ಭಾರತದ ಸ್ವಾತಂತ್ರ್ಯಕ್ಕಾಗಿ ಹಲವು ಸ್ತರಗಳಲ್ಲಿ, ಹಲವು ಮಜಲುಗಳಲ್ಲಿ ಹೋರಾಟ ನಡೆದಿದೆ. ಅಸಂಖ್ಯ ಜನ ತಮ್ಮ ತಮ್ಮ ಮಿತಿಯಲ್ಲಿ ವ್ಯಾಪ್ತಿಯಲ್ಲಿ ಹೋರಾಡಿದ್ದಾರೆ; ಅತ್ಯಂತಿಕ ತ್ಯಾಗ ಬಲಿದಾನಗಳನ್ನೂ ಮಾಡಿದ್ದಾರೆ. ಅವುಗಳನ್ನೆಲ್ಲ ಒಟ್ಟಾಗಿ ನೋಡುವಾಗ ಅವು ಅಪಾರವಾಗಿ ಎದ್ದು ಕಾಣದಿರಬಹುದು; ಮಹತ್ವದ್ದಾಗಿ ತೋರದಿರಬಹುದು. ಆದರೆ, ಅಂಥ ಸಣ್ಣ ಸಣ್ಣ ಪ್ರತಿರೋಧಗಳೂ ಸಾಮ್ರಾಜ್ಯಶಾಹಿಯನ್ನು ಎದುರಿಸಲು ಅವಶ್ಯವಿದ್ದ ಭೂಮಿಕೆಯನ್ನು ರೂಪಿಸಿದವು ಎಂಬುದು ಗೌಣವಾದ ಸಂಗತಿಯೇನಲ್ಲ. ಹನಿ ಹನಿ ಕೂಡಿಯೇ ಪ್ರವಾಹ ರೂಪುಗೊಳ್ಳುವಂತೆ ವೈಯಕ್ತಿಕ ನೆಲೆಯಲ್ಲಿ ಹಲವರು ನಡೆಸಿದ ಹೋರಾಟವೇ ಕ್ರಮೇಣ ಬ್ರಿಟಿಷರನ್ನು ಹೊಡೆದೋಡಿಸಿದ ಹೆದ್ದರೆಯಾಯಿತು.
ಈ ಹಿನ್ನೆಲೆಯಲ್ಲಿ ನೋಡಿದಾಗ, ಈ ಕೃತಿಯಲ್ಲಿ ಪರಿಚಯಿಸಲ್ಪಟ್ಟಿರುವ ಪ್ರತಿಯೊಬ್ಬ ಸ್ವಾತಂತ್ರ್ಯಯೋಧನೂ ಅಮರಸೇನಾನಿಯಾಗಿ ಕಂಗೊಳಿಸುತ್ತಾನೆ; ನಮ್ಮ ನಮ್ಮ ಮನಗಳಲ್ಲೂ ಸ್ವಾತಂತ್ರ್ಯಕ್ಕಾಗಿ ನಮ್ಮವರು ತೆತ್ತ ಹಾಗೂ ಅದನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ತರಬೇಕಾದ ‘ಬೆಲೆ’ ಏನು? – ಎಂಬುದರ ಅರಿವು ಮೂಡಿಸುತ್ತಾನೆ. (ಬೆನ್ನುಡಿಯಿಂದ)
ಪುಸ್ತಕದ ಹೆಸರು: ಕ್ರಾಂತಿಯ ಕಿಡಿಗಳು
ಲೇಖಕರು: ದು. ಗು. ಲಕ್ಷ್ಮಣ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ, ಕೇಶವಶಿಲ್ಪ, ನಂ. 93/1, ಕೆಂಪೇಗೌಡ ನಗರ, ಬೆಂಗಳೂರು – 560019