ಕ್ರೀಡಾಭಾರತಿ ಪ್ರತಿಭಾ ಪುರಸ್ಕಾರ | ಜೀಜಾಬಾಯಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಬಿ.ಎಂ.ಹೆಗ್ಡೆ
ಬದುಕಿನ ಯಶಸ್ಸಿಗೆ ಆರೋಗ್ಯಕರ ಸ್ಪರ್ಧೆಯಿರಲಿ
ಮಂಗಳೂರು: ಬದುಕಿನಲ್ಲಿ ಯಶಸ್ಸು ಕಾಣಬೇಕಾದರೆ ನಮ್ಮೊಂದಿಗೆ ನಾವೇ ಸ್ಪರ್ಧೆಯೊಡ್ಡಿ ಮುನ್ನಡೆಯಬೇಕು. ಅನ್ಯರನ್ನು ದೂಷಿಸದ ಆರೋಗ್ಯಕರ ಸ್ಪರ್ಧೆ ನಮ್ಮದಾಗಬೇಕು. ಆಗ ಬದುಕು ಹಸನಾಗಲು ಸಾಧ್ಯ ಎಂದು ಮಣಿಪಾಲ ವಿವಿ ಮಾಜಿ ಕುಲಪತಿ ಡಾ.ಬಿ.ಎಂ.ಹೆಗ್ಡೆ ಹೇಳಿದರು.

sanghanikethana (3)

ಆರೆಸ್ಸೆಸ್ ಪ್ರೇರಿತ ಕ್ರೀಡಾ ಸಂಸ್ಥೆ  ಕ್ರೀಡಾಭಾರತಿ ಮಂಗಳೂರು ವಿಭಾಗ ಹಾಗೂ ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ಆಶ್ರಯದಲ್ಲಿ, ಶುಕ್ರವಾರ ನಗರದ ಸಂಘನಿಕೇತನದಲ್ಲಿ ಆಯೋಜಿಸಿದ್ದ ಕ್ರೀಡಾಭಾರತಿ ಪ್ರತಿಭಾ ಪುರಸ್ಕಾರ ಹಾಗೂ ಜೀಜಾಬಾಯಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ದೈಹಿಕ ಶಿಕ್ಷಣ ಎಂಬುದು ಕೂಡ ಮನೋ ವಿಕಾಸದ ಮಾನಸಿಕ ಶಿಕ್ಷಣವೇ ಆಗಿದೆ. ದೇಹವೆಂಬ ಮನಸ್ಸು ಆರೋಗ್ಯಕರವಾಗಿದ್ದರೆ ಲವಲವಿಕೆ ಹೆಚ್ಚುತ್ತದೆ. ಕಾಂಪಿಟಿಶನ್-ಸ್ಫರ್ಧೆ ಎಂಬ ಕಲ್ಪನೆಯನ್ನು ತಂದವರು ವಿದೇಶಿಯರು. ಭಾರತದಲ್ಲಿ ಅಂತಹ ಸಂಸ್ಕೃತಿ ಇರಲಿಲ್ಲ. ಎಲ್ಲರೂ ಸಮಾನವಾಗಿ ಜೊತೆಯಾಗಿ ಸಾಗಬೇಕು. ಜೊತೆಯಾಗಿಯೇ ಗೆಲುವು ಸಾಧಿಸಬೇಕು ಎಂಬ ಪರಿಕಲ್ಪನೆ ಈ ದೇಶದ್ದು ಎಂದರು.
ಒಲಿಂಪಿಕ್ಸ್‌ನಂತಹ ಕ್ರೀಡೆ ಆಯೋಜಿಸಿದರೆ ಅದೊಂದು ಹಣಗಳಿಕೆಯ ವಿಧಾನವೇ ಹೊರತು ಕ್ರೀಡೆಗೆ ಪ್ರೋತ್ಸಾಹ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಇಂದು ವಿಶ್ವದಲ್ಲಿ ಸುಮಾರು ೪೫ ಮಿಲಿಯದಷ್ಟು ಮಕ್ಕಳು ಒಂದು ಹೊತ್ತಿನ ಊಟವಿಲ್ಲದೆ ಬಳಲುತ್ತಿದ್ದಾರೆ. ಲೆಕ್ಕವಿಲ್ಲದ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಆದರೆ ಮಂಗಳನಂತಹ ಗ್ರಹಕ್ಕೆ ತೆರಳಲು ೧ ಲಕ್ಷ ಕೋಟಿಯಷ್ಟು ಹಣವನ್ನು ನಾವು ವ್ಯಯಿಸುತ್ತೇವೆ. ಆ ಹಣ ಇಂತಹ ಮಕ್ಕಳ ಉಳಿವಿಗೆ ಬಳಕೆಯಾಗಿದ್ದರೆ ಅದಕ್ಕೊಂದು ಅರ್ಥವಿತ್ತು ಎಂದು ಬಿ.ಎಂ.ಹೆಗ್ಡೆ ವಿಷಾದಿಸಿದರು.
ಶಾಸಕ ಜೆ. ಆರ್.ಲೋಬೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರಾವಳಿಯು ಹಲವಾರು ಪ್ರತಿಭೆಗಳಿಗೆ ಆಶ್ರಯದಾಣವಾಗಿದೆ. ಆದರೆ ಶೈಕ್ಷಣಿಕ ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಡುವ ಭರಾಟೆಯಲ್ಲಿ ಕ್ರೀಡೆಯನ್ನು ಮರೆಯಬಾರದು. ಮಕ್ಕಳಲ್ಲಿ ಹೆತ್ತವರು ಕ್ರೀಡಾ ಆಸಕ್ತಿಯನ್ನೂ ಬೆಳೆಸಿ ಪ್ರೋತ್ಸಾಹಿಸಬೇಕು ಎಂದರು.
ಕ್ರೀಡೆಯ ವಿವಿಧ ವಿಭಾಗಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರ ತಾಯಂದಿರಿಗೆ ಜೀಜಾಬಾಯಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವಿಶೇಷ ಸಾಮರ್ಥ್ಯ ಮಕ್ಕಳಾದ ಧನಾನ್ ಜೆ. ಸಲ್ಡಾನಾ ಮತ್ತು ಮೊಯ್ದಿನ್ ತಸ್ಮನ್ ಮೊಹಮ್ಮದ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಕರಾದ ಸೇವಂತಿ, ತುಕರಾಮ ಹೊಳ್ಳ, ಚಿದಾನಂದ ರೈ, ಸುಧೀರ್ ಹೆಗ್ಡೆ, ಚಂದ್ರಶೇಖರ್ ರೈ, ಆಗ್ನೆಸ್ ಗೋಮ್ಸ್, ರಾಘವ ವೈದ್ಯ, ಕೆ.ಹರಿಣಾಕ್ಷಿ, ರಮೇಶ್ ಕಾರಂತ್, ಜಯಶ್ರೀ, ಪೃಥ್ವಿರಾಜ್ ಜೈನ್, ಕರುಣಾಕ್ಷಿ ಅವರನ್ನು ಗೌರವಿಸಲಾಯಿತು.
ಖ್ಯಾತ ಕ್ರೀಡಾಪಟುವಾಗಿದ್ದು, ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರಾದ ಪ್ರೇಮನಾಥ ಉಳ್ಳಾಲ್, ಲಕ್ಷ್ಮಣ್ ರೈ, ಮಹೇಶ್, ದೀನಾಮಣಿ, ಸುಮನಾ ಶ್ರೀಕಾಂತ್, ಪ್ರತೀಪ್‌ಕುಮಾರ್, ಡಿ.ಎಂ.ಅಸ್ಲಂ ಇವರಿಗೆ ಕ್ರೀಡಾ ಭಾರತಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಕ್ರೀಡಾ ಭಾರತಿಯ ಸಾಧಕರಾದ ಗೀತಾಬಾಯಿ, ಜಯಪ್ಪ ಲಮಾಣಿ, ಪ್ರಣಾಳಿ ಶೆಟ್ಟಿ, ಆರತಿ ಶೆಟ್ಟಿ, ರಾಜ್ ಕುಮಾರ್ ಕೋಟ್ಯಾನ್ ಇವರನ್ನು ಗೌರವಿಸಲಾಯಿತು.
ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿಶೇಷ ಮಕ್ಕಳು, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ವಿದ್ಯಾರ್ಥಿ ಸಾಧಕರಿಗೆ ಈ ಸಂದರ್ಭ ಗೌರವ ಸಲ್ಲಿಸಲಾಯಿತು.
ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಭಾರತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಹೃದಯರೋಗ ತಜ್ಞ ಡಾ.ಮುಕುಂದ್, ಡಾ.ಸತೀಶ್ ಭಂಡಾರಿ, ಆರೆಸ್ಸೆಸ್‌ಪ್ರಾಂತ ಸಹ ಸಂಘಚಾಲಕ್ ಡಾ.ಪಿ.ವಾಮನ್ ಶೆಣೈ, ಡಿಡಿಪಿಐ ವಾಲ್ಟರ್ ಡಿಮೆಲ್ಲೋ, ಪಾಲಿಕೆ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರ, ರಾಜ್ಯ ಅಲ್ಪಸಂಖ್ಯಾತ ನಿಗಮದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಪ್ರಮುಖರಾದ ದಿವಾಕರ್, ಲೀಲಾಕ್ಷ ಕರ್ಕೇರ, ಕೇಶವ, ಅಲೋಶಿಯಸ್ ಡಿಸೋಜ, ಚಂದ್ರಶೇಖರ ಜಹಗೀರ್‌ದಾರ್, ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ನಾಯಕ್, ಕ್ರೀಡಾಭಾರತಿ ಸಂಯೋಜಕ ಭೋಜರಾಜ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾ ಭಾರತಿ ಅಧ್ಯಕ್ಷ ಚಂದ್ರಶೇಖರ ರೈ ಸ್ವಾಗತಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.