
ಮಕ್ಕಳಿಗೆ ಹಿಂದು ಜೀವನದ ಶ್ರೇಷ್ಠತೆ ಕಲಿಸದಿದ್ದರೆ ನಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ, ಹಿಂದು ಕುಟುಂಬಗಳ ರಕ್ಷಣೆಗೆ ಮುಂದಾಗಬೇಕು. ಕುಟುಂಬಗಳು ಉಳಿದರೆ ಮಾತ್ರ ಭಾರತ ದೇಶ ಉಳಿಯಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥರ ಪಂಚಮ ಆರಾಧನೋತ್ಸವ ಪ್ರಯುಕ್ತ ಗುರುಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರಲ್ಲಿ ಮಾದಕವಸ್ತು ಸೇವಿಸುವ ಹಂಬಲ ಹೆಚ್ಚಾಗಿದೆ. ಕುಟುಂಬಗಳಲ್ಲಿ ಮಕ್ಕಳಿಗೆ ಜೀವನಮೌಲ್ಯ ಕಲಿಸುವುದು ಕಡಿಮೆಯಾಗುತ್ತಿದೆ. ಹಿಂದು ಮಕ್ಕಳಿಗೆ ಜೀವನದ ಶ್ರೇಷ್ಠತೆ ಕಲಿಸದಿದ್ದರೆ ನಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಭಾರತವಾಗಿ ಉಳಿಯ ಬೇಕಾದರೆ ಹಿಂದುಗಳ ಕುಟುಂಬ, ಹಿಂದು ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸಲು ಇಂತಹ ವಿದ್ಯಾಪೀಠದ ಆವಶ್ಯಕತೆ ಇದೆ ಎಂದು ಹೇಳಿದರು.
ಸಂಘದ ಜತೆ ವಿಶೇಷ ಬಂಧ
ಶ್ರೀವಿಶ್ವೇಶತೀರ್ಥ ಶ್ರೀಗಳು ಸಂಘದ ಕಾರ್ಯಕರ್ತರ ಜೊತೆಗೆ ಸೇರಿದ್ದರು. ಹಿಂದು ಸಮಾಜದ ಸಂಘಟನೆ, ದೇಶದ ಪರಂಪರೆ ಉಳಿಸಲು ಶ್ರಮಿಸುತ್ತಿದೆ. ಹಿಂದುತ್ವದ ಕಾರಣಕ್ಕಾಗಿ ಸಂಘದ ಮೇಲೆ ಹಾಗೂ ಕಾರ್ಯಕರ್ತರ ಮೇಲೆ ವಿಶೇಷವಾದ ಪ್ರೀತಿ ಇಟ್ಟುಕೊಂಡಿದ್ದರು. ಸಂಘದ ವಿಷಯಗಳ ಬಗ್ಗೆ ಸದಾ ಮಾರ್ಗದರ್ಶನ ನೀಡುತ್ತಾ ಬೆಂಬಲವಾಗಿ ನಿಂತಿದ್ದರು. ಅಲ್ಲದೇ ಮಾತೃವಾತ್ಸಲ್ಯದಿಂದ ನಮ್ಮನ್ನು ಬೆಳೆಸಿದ್ದಾರೆ ಎಂದು ದತ್ತಾತ್ರೇಯ ಹೊಳಬಾಳೆ ಸ್ಮರಿಸಿದರು.
ಶ್ರೀ ವಿಶ್ವೇಶತೀರ್ಥರ ಆರಾಧನೋತ್ಸವವು ಶ್ರದ್ದೆ ಜೊತೆಗೆ ಧರ್ಮದ ಜಾಗರಣೆ, ಸಾಮಾಜಿಕ ಜಾಗೃತಿ ಮತ್ತು ಜನರ ಬದುಕು ಸಾರ್ಥಕ ಮತ್ತು ಸಫಲತೆ ಪಡೆಯಲು ಒಂದು ಮಾರ್ಗವಾಗಿದೆ. ಭವಿಷ್ಯದಲ್ಲಿ ಮಕ್ಕಳು ಶಾಸ್ತ್ರಗಳಲ್ಲಿ, ವೇದಗಳ ಅಧ್ಯಯನದಲ್ಲಿ ಪಾರಂಗತರಾಗಿ ಭಾರತದ ಸನಾತನ ಪರಂಪರೆಯನ್ನು ಸಮೃದ್ಧವಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಈ ಪರಿಸರದಲ್ಲಿ ವಿದ್ಯಾಪೀಠವನ್ನು ಶ್ರೀಗಳು ಪ್ರಾರಂಭಿಸಿದ್ದಾರೆ. ಇದನ್ನು ಮುನ್ನೆಡೆಸಲು ವಿದ್ವತ್ ಪರೀಕ್ಷೆಗಳು, ಶ್ರೀಮನ್ಯಾಯಸುಧಾ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ, ಜ್ಞಾನ, ಶ್ರದ್ದೆಗೆ ಗೌರವ ನೀಡುವುದರಿಂದ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದರು.

ಭಗವಂತನ ಸ್ಮರಣೆ ಮಾಡುವುದು ಪರಂಪರೆಯಿಂದ ಬಂದಿದೆ. ಧರ್ಮಕ್ಕಾಗಿ ಬುದುಕಬೇಕು. ಜ್ಞಾನದ ಪ್ರಸಾರಕ್ಕಾಗಿ ಜೀವನ ಸ್ಮರಿಸಬೇಕು. ಜ್ಞಾನವನ್ನು ಮುಂದಿನ ತಲೆಮಾರಿಗೆ ಕೊಡಲು ಶ್ರಮಿಸಬೇಕು.
ಜಗತ್ತಿನ ಕಷ್ಟಗಳಲ್ಲಿ ಮನುಷ್ಯರು ಮುಳುಗಿದ್ದಾರೆ. ಎಷ್ಟೋ ಜ್ಞಾನ ಹೊಂದಿರುವವರು ಸರಿಯಾದ ಅವಕಾಶವಿಲ್ಲದೆ ಮುನ್ನೆಲೆಗೆ ಬರುತ್ತಿಲ್ಲ. ಎಲ್ಲವೂ ಒಂದು ಕಡೆ ಸೇರಿದಾಗ ಮಾನವನ ಉದ್ದಾರ ಮತ್ತು ಪ್ರಗತಿಗೆ ಕೊಡುಗೆ ಕೊಡಲು ಈ ಪೀಠದಿಂದ ಸಾಧ್ಯವಾಗುತ್ತದೆ. ಇದು ರಾಷ್ಟ್ರೀಯ ಕಾರ್ಯ ಎಂದು ಬಣ್ಣಿಸಿದರು.
ಭಾರತ ಜಗತ್ತಿಗೆ ಗುರು: ಧಾರ್ಮಿಕ ಶ್ರದ್ಧೆಯ ಆಧ್ಯಾತ್ಮದ ಹೊನಲು ಇಲ್ಲದೆ ಭಾರತದ ನಾಗರಿಕ ಪ್ರವಾಹ ಸಮೃದ್ಧವಾಗಲು ಸಾಧ್ಯವಿಲ್ಲ. ಇದು ದೇಶಕ್ಕೆ ತನ್ನ ತನ, ವ್ಯಕ್ತಿತ್ವ ಹಾಗೂ ಅಸ್ಮಿತೆಯನ್ನು ಕೊಟ್ಟಿದೆ. ಜಗತ್ತಿಗೆ ಭಾರತ ಗುರು ಭಾರತದ ಆತ್ಮ ಅಧ್ಯಾತ್ಮ, ಜಗತ್ತಿಗೆ ಬೆಳಕನ್ನು ಕೊಡುವುದು ಭಾರತ, ಆದರೆ, ಭಾರತಕ್ಕೆ ಬೆಳಕನ್ನು ಕೊಡಬೇಕಾಗಿರುವುದು ಅಧ್ಯಾತ್ಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದುಗಳ ರಕ್ಷಣೆಗೆ ಮುಂದಾಗಬೇಕು
1979-80ರಲ್ಲಿ ಹಿಂದು ಸೇವಾ ಪ್ರತಿಷ್ಠಾನ ಸ್ಥಾಪನೆ ಮಾಡಿದ್ದರು. ಅಜಿತ್ ಕುಮಾರ್ ಸಂಘದ ಪ್ರಚಾರ ಕಾರ್ಯವಹಿಸಿದ್ದರು. ಹಿಂದು ಸಮಾಜದ ಉನ್ನತಿಗೆ, ಪ್ರಗತಿಗೆ ಹಲವು ಕಾರ್ಯಗಳನ್ನು ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷಗಳಿಂದ ಹಿಂದು ಸಮಾಜದ ಸಂಘಟನೆ ಮಾಡುತ್ತಾ ಬಂದಿದೆ. ಅದನ್ನು ನಾವು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು ಎಂದು ದತ್ತಾತ್ರೇಯ ಹೊಸಬಾಳೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಭಂಡಾರಕೇರಿ ಶ್ರೀ ವಿದ್ಯೆ ಶತೀರ್ಥ ಸ್ವಾಮೀಜಿ, ಬನ್ನಂಜೆ ರಾಘವೇಂದ್ರತೀರ್ಥರು ಇದ್ದರು.
